Wednesday, December 19, 2018

ಎಂಟನೆ ಆಯಾಮ ಅಧ್ಯಾಯ ಮೂರು - ಸಮ್ಮೊಹಿನಿ ಮನಮೊಹಿನಿ

"ಅಂಕಲ್  ಹಿಪ್ನಾಟೈಸ್ ಮಾಡಿದಾಗ ಎಲ್ಲಾ ಹೇಳಿಬಿಡ್ತೀನಾ. ಮತ್ತೆ ಏನಾದರೂ ತೊಂದರೆ ಆಗುತ್ತಾ ನಂಗೆ. ನಾನು ನಿಜಕ್ಕೂ ಅನ್ ಕಾನ್ಶಿಯಸ್ ಆಗ್ತೀನಾ? ಅಕಸ್ಮಾತ್ ನಂಗೆ ಎಚ್ಚರ ಆಗದಿದ್ರೆ? "
ರಾಮ್ ರಾಜೇಶ್ ಅವರ ಮುಂದೆ ಕೂತು ಪ್ರಶ್ನೆಗಳ ಮೂಲಕ ಆತಂಕ ವ್ಯಕ್ತ ಪಡಿಸಿದನು
ರಾಜೇಶ್ ನಿಧಾನವಾಗಿ ಮುಂದೆ ಬಾಗಿ ಅವನ ಭುಜವನ್ನು ತಟ್ಟಿದರು. ಕಣ್ಣುಗಳು ರಾಮ್ ನ ಕಣ್ಣುಗಳನ್ನೇ ನೋಡುತ್ತಿದ್ದವು , ಮಂದಹಾಸ ಬೀರುತ್ತಾ
" ರಾಮ್ ಇವೆಲ್ಲಾ ಏನೂ ಆಗಲ್ಲ.ನೀನು ಸೈಕಾಲಜಿ ಸ್ಟೂಡೆಂಟ್ ಅಲ್ವಾ?"
" ಹೌದು ಅಂಕಲ್ ಆದರೆ ನಮ್ಮಲ್ಲಿ  ಸೈಕಾಲಜಿಲಿ ಹಿಪ್ನಾಸಿಸ್ ಅನ್ನೋದು ಅಷ್ಟೊಂದು ಮೇಲ್ ಸ್ತರದ ಟ್ರೀಟ್ ಮೆಂಟ್ ಅಂತ ಕನ್ಸಿಡರ್ ಮಾಡಿಲ್ಲ.  ಹಾಗಾಗಿ ನಾನದರ ಬಗ್ಗೆ ಹೆಚ್ಚು ಓದಿಲ್ಲ .. ಅದಕ್ಕೆ ಕೇಳತಿದೀನಿ."
" ಸರಿ  ನಾನು ನಿಂಗೆ ಒಂದು ಪ್ರಶ್ನೆ ಕೇಳಲಾ? ಸೈಕಾಲಜಿ ಯಾವ ವಿಷಯದ ಬಗೆಗಿನ ಅಧ್ಯಯನ ಹೇಳು"
" ಅಂಕಲ್...    ಮನಸಿನ ಬಗ್ಗೆ ಅಷ್ಟೇ"
"  ಸರಿ. ಮನಸು ಅಂದರೆ ಏನು ಅದು ಎಲ್ಲಿದೆ"?
" ಮನಸು ಅಂದರೆ". ಕೈಯ್ಯನ್ನ ಎದೆಯ ಬಳಿ ತೆಗೆದುಕೊಂಡು ಹೋದವ " ಅಲ್ಲಲ್ಲ ಇಲ್ಲಿದೆ" ಎಂದು ತಲೆಯತ್ತ ತೋರಿದ.
"ಮನಸು ಮನುಷ್ಯನ ಮೆದುಳು"
" ಆರ್ ಯು ಶ್ಯೂರ್? "ನಗುತ್ತಾ ಮತ್ತೇ ಕೇಳಿದರು
" ಇಲ್ಲ ಬಟ್ ..." ಗೊಂದಲವಾಗಿತ್ತು ರಾಮಗೆ
"ಮನಸನ್ನ ನೋಡಿರೋರು ಇದಾರ ? ಭೌತಿಕವಾಗಿ? "
" ಇಲ್ಲ ಅಂಕಲ್.. ಆದರೇ ಹೃದಯಾನೆ ಮನಸು ಅಂತಂದ್ಕೊಂಡು ಕವನ ಕಾವ್ಯ ಚಿತ್ರಗಳನ್ನ ಬರೆದಿರೋರು ಇದಾರೆ."
" ರಾಮ್ " ... ಮನಸು ಅನ್ನೋದು ಒಂದು ರೀತಿ ಸಿಗ್ನಲ್ ಥರ , ನೋಟಕ್ಕೆ ಸಿಗೋದಲ್ಲ, ಸ್ಪರ್ಶಕ್ಕೆ ಎಟುಕೋದಲ್ಲ  ಆದರೆ ಅಸ್ತಿತ್ವ ಇದೆ. ಅರ್ಥವಾಗೋ ಹಾಗೆ ಹೇಳಬೇಕಾದ್ರೆ ಉದಾಹರಣೆಗೆ, ಕೋಪ ಬಂದಾಗ ಒಂದಷ್ಟು ಹಾರ್ಮೋನಗಳು ಬಿಡಗಡೆಯಾಗ್ತವೆ. ಅದರಿಂದ ಒಂದಷ್ಟು ಶಾರೀರಿಕ ಬದಲಾವಣೆಯಾಗ್ತವೇ ಲೈಕ್ ಎದೆ ಬಡಿತ ಜಾಸ್ತಿಯಾಗೋದು, ಮುಖ ಕೆಂಪೇರೋದು. ಎಟ್ಸೆಟ್ರಾ.. ನಿಂಗೊತ್ತಿದೆ ಕೋಪನೂ ಭಯದ ಇನ್ನೊಂದು ರೂಪ.. ಹಾಗೆ ಸಂತಸ ಆದಾಗ ಕೆಲವೊಂದು ಹಾರ್ಮೋನ್ಸ್ ಬಿಡುಗಡೆಯಾಗುತ್ತೆ. ಹಾಗೆಯೇ ಎದೆ ಬಡಿತ ನಿಧಾನವಾಗುತ್ತೆ.  ಇವೆಲ್ಲಾ ಒಂದು ಗುಂಪಿನ ಹಂತಗಳು ಸೆಟ್ ಅಫ್ ಪ್ರೊಸೆಸ್. ಇದನ್ನೇ ನಾವು ಮನಸು ಅಂತ ಕರೀತೀವಿ. ಮನಸು ವಸ್ತುವಲ್ಲ ಇದು ಹಲವು ವಿಧಿಗಳ ವಿಧಾನ"

"ಓಹ್... ಅಂಕಲ್ ಈಗ ನಂಗೆ ಬೀಳತಿರೋ ಕನಸುಗಳು  ನನ್ನೊಳಗಿನ ಯಾವದೋ ಒಂದಷ್ಟು ಪ್ರೋಸೆಸ್ ನಿಂದಾನೇ ಬೀಳತಿದೆ ಅಂತೀರಾ?"

"ಇರಬಹುದು ಇಲ್ಲದೇನೂ ಇರಬಹುದು. ನಿಂಗೀಗಾಗಲೆ ಸುಪ್ತ ಮನಸು ಅಂದ್ರೆ ಅನ್ ಕಾನ್ಶಿಯಸ್ ಮೈಂಡ್ ಮತ್ತು ಜಾಗೃತ ಮನಸೀನ ಬಗ್ಗೆ ಗೊತ್ತಿದೆ .. ಅಲ್ವಾ?" 
" ಹಾ ಗೊತ್ತಿದೆ . ನಾನೂ ಆ ಆಂಗಲ್ ನಲ್ಲೂ ಆ ಕನಸಿನ ಬಗ್ಗೆ ಡಿಗ್ ಮಾಡಿದೆ. ಆದರೆ ಆ ಹುಡುಗಿನ ನಾನೆಲ್ಲೂ ನಿಜವಾಗಿ    ನೋಡಿಲ್ಲ.  ಆ ಥರ ಕನಸು ಬಂದ ತಕ್ಷಣ  ಹೃದಯ  ಹೊಡೆದಕೊಳ್ಳುತ್ತೆ..
ನಮ್ಮನೆಯವರೀಗೇನಾದ್ರೂ ಆದರೆ ಹೇಗೆ ಬೇಜಾರಾಗುತ್ತೋ ಹಾಗೆ...  ಈಗಲೂ ಸ್ವಲ್ಪ ಕಣ್ಣುಮುಚ್ಚಿದರೂ ಸಾಕು ಅವಳೇ ಕಾಣಿಸ್ತಾಳೆ" ತಲೆ ಒತ್ತಿ ಹಿಡಿದ

" ಹಾ ಇಲ್ಲೇ ಹಿಪ್ನಾಸಿಸ್ ವರ್ಕ್ ಮಾಡುತ್ತೆ. ಕೆಲವು ಸಲ ನಮ್ ಜಾಗೃತ ಮನಸು  ಬೇರೆ ಕೆಲಸ ಮಾಡ್ತಿದ್ದಾಗ  ಸುಪ್ತ ಮನಸು  ಸುತ್ತ ಮುತ್ತ ಎಲ್ಲಾವನ್ನೂ ಗಮನಿಸುತ್ತೆ.  ನಮ್ಮ ಈ ಒಳ ಮನಸಲ್ಲಿ ಏನು ನಡೆದಿದೆ ಏನು ತುಂಬಿದೆ ಇದೆಲ್ಲಾವನ್ನ ಜಾಗೃತಾವಸ್ತೆಯಲ್ಲಿದ್ದಾಗ  ಅರಿವಿಗೆ ಬರದೇ ಇರೋ ಸಾಧ್ಯತೆಗಳು ಇರುತ್ತವೆ. ನಿನ್ನ ಜಾಗೃತ ಮನಸನ್ನ ಪರದೆ ಅಂತನ್ಕೊಂಡರೆ ನಿನ್ನ ಸುಪ್ತ ಮನಸು ಪರದೆಯ ಹಿಂದಿನ ಬ್ರಹ್ಮಾಂಡ. ಆದರೆ ಆ ಬ್ರಹ್ಮಾಂಡ ನೋಡೋದಿಕ್ಕೆ  ಪರದೆಯನ್ನ ಸರಿಸಲೇ ಬೇಕು
 ಆ ಕೆಲಸವನ್ನೇ ಹಿಪ್ನಾಸಿಸ್ ಮಾಡುತ್ತೆ.ಹಾಗೆ ನೋಡೋಕೆ ಹೋದರೆ ನಾವೆಲ್ಲಾ ಒಂದಲ್ಲ ಒಂದು ರೀತಿಲಿ ಹಿಪ್ನಾಟೈಸ್ ಆಗಿರ್ತೀವಿ. ಸಿನಿಮಾ ನೋಡುವಾಗ ಆ ಕಾನ್ಸಂಟ್ರೇಶನ್. , ವಾಟ್ಸಾಪಿನಲ್ಲಿ ಚಾಟ್ ಮಾಡ್ತಾ ಅಕ್ಕ ಪಕ್ಕದವರನ್ನ ಮರೆಯೋದು ಇವೆಲ್ಲಾ ಹಿಪ್ನಾಟೈಸ್ ಆಗಿರೋದಿಕ್ಕೆ ಉದಾ ಹರಣೆಗಳು. ಇನ್ನು ನಿಂಗೇನಾದರೂ ಅಪಾಯ ಇದ್ಯಾ ? ಸಿಂಪಲ್ ಆನ್ಸರ್. ಇಲ್ಲ. ಕೆಲವು ಸಲ ನೀನು ಸುಪ್ತಾವಸ್ತೆಯಲ್ಲಿ ಹೇಳೋದು ನೀನು ಜಾಗೃತಾವಸ್ತೆಗೆ ಬಂದಾಗಲೂ ನೆನಪಿರಬಹುದು ಅಥವ ಇಲ್ಲದೇ ಇರಬಹುದು. ನಿಂಗೆ ಹಿಪ್ನಾಟೈಸ್ ಗೆ ಒಳಗಾಗುವ ಇಷ್ಟ ಇಲ್ಲದಿದ್ದರೆ ಯಾರೂ ನಿನ್ನ ಹಿಪ್ನಾಸಿಸ್ ಮಾಡಲಾಗೋದಿಲ್ಲ. ನೀನು ಓಕೆ ಅಂದರೆ ನಾವು ಪ್ರೊಸೆಸ್ ಶುರು ಮಾಡಬಹುದು."
ಸುದೀರ್ಘ ಮಾತಿನಿಂದ ದಣಿದವರಂತೆ ಕುರ್ಚಿಯಲ್ಲಿ ಕೂತು ಎದುರಿಗಿದ್ದ ಬಾಟಲಿಯಿಂದ ನೀರು ಕುಡಿದರು.

"ನಂಗೆ ಇದರಿಂದ ರಚನಾ ಸಿಕ್ತಾಳೆ ಅನ್ನೋದಾದರೆ ನಾನು ಯಾವ ರಿಸ್ಕಿಗಾಗಿಯೂ ರೆಡಿ ಅಂಕಲ್" ದೃಢವಾಗಿ ಹೇಳಿದ.
" ನಿನಗೆ ಅಷ್ಟೊಂದು ಇಷ್ಟಾನಾ? ಎಷ್ಟು ವರ್ಷದಿಂದ ನಿನಗೆ ಗೊತ್ತು  ಅವಳು"
" ಅಂಕಲ್ ಅವಳು ಯಾರು ಅಂತ ಗೊತ್ತಿಲ್ಲ. ಮೊದ ಮೊದಲು ಆರು ತಿಂಗಳ ಹಿಂದೆ ಅಪರೂಪಕ್ಕೆ ಕನಸುಗಳು ಬರ್ತಿದ್ದವು. ಅದರಲ್ಲಿ ಮಸುಕು ಮಸುಕಾಗಿ ಈ ಹುಡುಗಿ ಕಾಣ್ತಿದ್ದಳು. ಆದರೆ ಆಮೇಲಾಮೇಲೆ ಆಗಾಗ ಕನಸುಗಳಲ್ಲಿ ಬರ್ತಿದ್ಧಳು ಸ್ಪಷ್ಟವಾಗಿ. ಇದು ಯಾಕೋ ಜಾಸ್ತಿ ಆಯತ ಅಂತ ಕನಸುಗಳನ್ನ ಮೊಬೈಲ್ ನಲ್ಲಿ ರೆಕಾರ್ಡ ಮಾಡತೊಡಗಿದೆ. ಆ ಕನಸುಗಳ ಡೀಟೇಲ್ಸ್ ಲಿಂಕ್  ನಿಮಗೆ ಕಳಿಸಿದೀನಿ.  ಇಷ್ಟು ದಿನ ಆ ಕನಸಲ್ಲಿ ನಾನು ಇರ್ತಾನೆ ಇರಲಿಲ್ಲ. ನೆನ್ನೆ ರಾತ್ರಿ ಮಾತ್ರ ನಾನೂ ಇದ್ದೆ ಬೇಗ ಬಾ ಇನ್ನೆಷ್ಟು ದಿನ, ಅಂತ ಪ್ರೇಯಸಿ ಹಾಗೆ ಕರೆದುಳು. ಯಾಕೋ  ಗೊತ್ತಿಲ್ಲ ಅವಳನ್ನ ಹೇಗಾದರೂ ಮಾಡಿ ಭೇಟಿ ಮಾಡಲೇಬೇಕು ಅಂತ ಉತ್ಕಟವಾಗಿ ಅನಿಸ್ತಿದೆ. ಈ ಸೆಶನ್ಗೆ ಬಂದಿರೋದೇ ಅವಳನ್ನ ಗುರುತಿಸೋಕೆ , ಹುಡುಕೋಕೆ  ಹೆಲ್ಪ್ ಆಗಬಹುದು ಅನ್ನೋ ನಿರೀಕ್ಷೆ ಇಟ್ಟುಕೊಂಡು."  ರಾಮ್ ನ ಕಂಗಳು ಮಾಯಾಲೋಕಕೆ ಹೋದೆವೇನೋ ಎಂಬಂತೆ ಕಣ್ಣು ಮುಚ್ಚಿದವು. ಕೂತಿದ್ದ ಆರಾಮ ಕುರ್ಚಿಯಲ್ಲಿ ಕಾಲು ಚಾಚಿ ನಿರಾಳವಾಗಿ ಮಲಗಿದ ಭಂಗಿ ಅದು.