ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Saturday, October 22, 2011
ಪಾಂಚಾಲಿ ಪ್ರಲಾಪ
ಪಾಂಚಾಲಿ ಪ್ರಲಾಪ
ಈ ವಿಜಯಕ್ಕೆ ನಗಬೇಕೆ? ಇಲ್ಲ ಅಳಬೇಕೆ? ನನ್ನೈವರು ಪತಿ ಉಳಿದರು ಎಂದು ಸಂತಸ ಪಡಲೇ ಇವರಬಿಟ್ಟು ಇನ್ನೆಲ್ಲರನ್ನೂ ಕಳೆದುಕೊಂಡ ದುರದೃಷ್ಟತನಕ್ಕೆ ದು:ಖಿಸಲೇ.
ಭಗವಂತ ಎಂಬುವನು ನಿಜಕ್ಕೂ ಇದ್ದಾನೆಯೇ, ಕಣ್ಣಿಗೇ ಕಾಣೋ ದೇವರಂತೆ ಈ ಕೃಷ್ಣ ಅಣ್ಣ ಕೂಡ, ಇವನೊಬ್ಬನೇ ಈ ಬಾಳಿಗುಳಿದ ಸೌಭಾಗ್ಯವೇ?ಯುದ್ದ ಮುಗಿದ ನಂತರ ಆ ರಕ್ತದ ಹೊಳೆ ನೋಡಿ ಮತ್ತೆ ರಾಣಿಯಂತೆ ಬದುಕಬೇಕೆಂಬ ಆಸೆಯಿರಲಿ ಬದುಕುವಾಸೆಯೇ ಮುರುಟಿ ಹೋಗಿದೆ.....
ಆವತ್ತು ಹಾಳು ಅಶ್ವಥ್ತಾಮ ಒಬ್ಬರಲ್ಲಿ ಒಬ್ಬರನ್ನೂ ಉಳಿಸಬಾರದಿತ್ತೆ , ನನ್ನ ಕರುಳ ಕುಡಿ ಎಂದು. ಹೆಣ್ಣಿನ ಸೌಭಾಗ್ಯ ಪತಿ, ಅವರೆಲ್ಲಾ ಬದುಕಿದ್ದಾರೆ ಎಂದು ಸಂತೈಸುತ್ತಿರುವ ಅತ್ತೆಯ ನೋಡಿ ನಿನ್ನ ಮಕ್ಕಳಲ್ಲಿ ಯಾರದರೂಬ್ಬರನ್ನು ಕಳೆದುಕೊಂಡಿದ್ದರೂ ನಿರ್ಲಿಪ್ತಳಾಗುತ್ತಿದ್ದೆಯಾ ಎಂದು ಕೇಳಿದ್ದಕ್ಕೆ ಕೋಪಿಸಿಕೊಂಡು ದುರು ದುರುಗುಟ್ಟಿ ನೋಡಿ ಎದ್ದು ಹೋಗಿದ್ದಳು. ಸತ್ತ ಅಷ್ಟೂ ಮಕ್ಕಳ ನೋಡಿ ನಾನು ಅಳುತ್ತಿದ್ದರೇ ಆ ಸ್ವಾರ್ಥಿ ಗಂಡಂದಿರು , ಇವರಲ್ಲಿ ಯಾರು ಯಾರ ಮಕ್ಕಳಿದ್ದಿರಬಹುದು? ಅಳಬೇಕೆ ಬೇಡವೇ ಎಂದು ಯೋಚಿಸುತ್ತಿದ್ದಾಗ, ಕಣ್ಣೀರು ಕುದಿ ಕುದಿದು ಮರಗಟ್ಟಿ ಹೋಗಿತ್ತು
ಪಾಪಿಗಳು ಇವರು ಹೆಜ್ಜೆ ಇಟ್ಟಲ್ಲೆಲ್ಲಾ ಹೆಜ್ಜೆ ಇಟ್ಟೆ, ಒಬ್ಬ ಒಳ್ಳೆಯ ಗಂಡ ಸಿಗುವುದು ದುಸ್ತರವಾಗುತ್ತಿರುವ ಈಕಾಲದಲ್ಲಿ ಐವರು ಅತಿರಥ ಮಹಾರಥರೆಂದು ಹೆಸರು ಪಡೆದ ಈ ಐವರೂ ನನ್ನನ್ನ ಮಡದಿ ಎಂದು ಪಾಣಿಗ್ರಹಿಸಿದಾಗ , ನಗಬೇಕೆ, ಅಳಬೇಕೇ ತಿಳಿಯದೇ ಕಕ್ಕಾಬಿಕ್ಕಿಯಾಗಿ ನಿಂತಿದ್ದೆ, , ಇದೇ ಕುಂತಿ --ಯಾಕಾದರೂ ಐದು ಜನರನ್ನು ಹೆತ್ತಳೋ .
(ಐದು ಅದು ನೆನ್ನೆಯವರೆಗೆ, ಇಂದು ಆ ಸತ್ಯ ಕೂಡ ಗೊತ್ತಾಯಿತಲ್ಲ ಆ ಕರ್ಣನೂ ಇವಳ ಮಗನೇ ಅಂತೆ.)
ಆ ಐದೂ ಜನರನ್ನ ಮದುವೆಯಾಗು ನಿನ್ನನ್ನು ಸುಖವಾಗಿ ನೋಡಿಕೊಳ್ಳುತ್ತಾರೆ ಎಂದಾಗ ಹಿರಿ ಹಿರಿ ಹಿಗ್ಗಿದ್ದೆ, ಅಪ್ಪ ಕಣ್ಣನು ತುಂಬಿಕೊಂಡು ನಿನಗೆ ಒಪ್ಪಿಗೆಯೇ ಎಂದಾಗ ಸಮ್ಮತಿಸಿದ್ದು ಕೂಡ ಆ ಕುಂತಿ ಹೇಳಿದ ಮಾತಿಗಾಗಿ.
ಮದುವೆಯಾದ ಕೆಲವು ವರ್ಷದಲ್ಲೇ ಇವರೆಲ್ಲರ ಗೋಳುಗಳು ತಿಳಿದದ್ದು, ಇವರ ದಾಯಾದಿಗಳು ಇವರ ಮೇಲೆ ದ್ವೇಷ ತುಂಬಿಕೊಂಡು ಇವರ ಅವನತಿಗೆ ಹೊಂಚು ಹಾಕುತ್ತಿದ್ದಾರೆಂದು. ಆಗಲೇ ಮತ್ತೊಂದು ಸತ್ಯ ಎದುರಾಗಿತ್ತು . ಅಪ್ಪ ದ್ರೋಣನ ಮೇಲಿನ ಕೋಪಕ್ಕಾಗಿ ತನ್ನನ್ನು ಅರ್ಜುನನಿಗೆ ಕೊಟ್ಟು ಮದುವೆ ಮಾಡುವುದಾಗಿ ಶಪಥ ತೊಟ್ಟಿದ್ದನಂತೆ. ಒಟ್ಟಿನಲ್ಲಿ ಇವರೆಲ್ಲರ ಆಸೆಗೆ, ಶಪಥಕ್ಕೆ ನಾನು ಬಲಿಯಾಗಿದ್ದೆ
ಆವತ್ತು ವೈಭೋವಪೇತ ಅರಮನೆಯಲ್ಲಿ ನನಗೇನು ಕೊರತೆ ಎಂದು ಸ್ವಲ್ಪ ಅಹಂ ಬಂದಿದ್ದೇನೋ ನಿಜ, ಆಗಲೇ ಆ ದುರ್ಯೋದನ ಕಾಲು ಜಾರಿ ಬಿದ್ದದ್ದು ನಾನು ನಕ್ಕಿದ್ದು ,ಅದೇ ನನ್ನ ಕೊನೆಯ ನಗುವಾಗುತ್ತೆಂದು ತಿಳಿದಿತ್ತೇ
ಮತ್ತೆ ಹಸ್ತಿನಾಪುರಕ್ಕೆ ಹೋಗಬಾರದಿತ್ತು ಆದರೂ ಹೋಗಿದ್ದ ಈ ಧರ್ಮ ರಾಜ ಅವರುಗಳ ಹಿಂದೆ ನಡೆದಿದ್ದೆ ನಾನೂ , ಅಂದಿನಿಂದ ಅವರನ್ನ ಹಿಂಬಾಲಿಸುವುದೇ ತನ್ನ ಬಾಳ ಹಣೆಬರಹವಾಗಿತ್ತು
ಅಬ್ಬಾ ಏನೆಲ್ಲಾ ಆಗಿ ಹೋಯಿತು , ತುಂಬಿದ ಸಮಯದಲ್ಲಿ ನನ್ನ ವಸ್ತ್ರಾಪಹರಣವಾಗುತಲ್ಲಿತ್ತು ಈ ಗಂಡಂದಿರೆನಿಸಿಕೊಂಡ ಈ ಐವರೂ ವೀರರೂ ತಲೆ ತಗ್ಗಿಸಿ ಕೂತಿದ್ದರು, ಧರ್ಮನ ಧರ್ಮ ಅಧರ್ಮವ ವೀಕ್ಷಿಸುತ್ತಿತ್ತು ಕೇಕೆ ಹಾಕಿ ನಗುತ್ತಿತ್ತು
ಅಲ್ಲಿದ್ದ ಸಭಿಕರೆಲ್ಲಾ ನನ್ನ ಶರೀರದ ಭಾಗ ಎಲ್ಲಿ ಕಾಣುತ್ತದೆಯೋ ಎಂದು ಕುತೂಹಲಿಗಳಾಗಿ ನೋಡುತ್ತಿದ್ದರು ,
ಹೆಣ್ಣು ಎಷ್ಟರ ಮಟ್ಟಿಗೆ ಅಸಹಾಯಕಳಾಗಬಹುದೋ ಅದಕ್ಕಿಂತ ಅಸಹಾಯಕ ಸ್ಥಿತಿಯನ್ನು ತಲುಪಿದ್ದೆ, ಹಾಳು ದುಶ್ಯಾಸನ ದಾಸಿ ಎಂದು ಜರಿದು ಮೈಮೇಲಿನ್ ಬಟ್ಟೆಯನ್ನು ಎಳೆಯುತ್ತಿದ್ದಾಗ ಈ ಅಣ್ಣನ ಹೆಸರೊಂದೇ ಕಾಪಾಡಿದ್ದು
ಆ ಕೌರವರ ಮೇಲಿನ ಕೋಪಕ್ಕಿಂತ ನನ್ನನ್ನು ಅಸಹಾಯಕ ಸ್ಥಿತಿಯನ್ನು ತಲುಪಿಸಿದ ಆ ಧರ್ಮ ತನಗೆ ಕೊನೆಯವರೆಗೂ ಶತೃವಿನಂತೆಯೇ ಕಂಡಿದ್ದ
ಎಲ್ಲಾ ರೀತಿಯ ಕಷ್ಟ, ಇವರುಗಳ ಮೇಲಿನ ದ್ವೇಷಕ್ಕೆ ಕಾಣುತ್ತಿದ್ದುದು ನಾನೇ . ನನ್ನ ಸೌಂದರ್ಯವೇ ಆ ಮನೆಹಾಳು ಕಾಮುಕರ ಕಣ್ಣಿಗೆ ಕಂಡು ಮಾನ ಬಯಲಾಗುವ ಸಮಯವು ಎಷ್ಟೋ ಬಂದಿತ್ತು. ಆಗೆಲ್ಲಾ ವಿಧಿಯೇ ತನ್ನ ಕಾಪಾಡುತ್ತಿತ್ತೇನೋ
ವನವಾಸದಲ್ಲಿ ಆ ಜಯದೃಥ ಅಜ್ನಾತವಾಸದಲ್ಲಿ ಆ ಕೀಚಕ, ಅಬ್ಬಾ ಎಂತೆಂಥಾ ಕಾಮುಕರು, ಆಗೆಲ್ಲ ಅಲ್ಲಿಯವರೆಗೆ ಪೆದ್ದನಾಗಿ ಕಾಣುತ್ತಿದ್ದ ಭೀಮ ಕಾಪಾಡಿದ್ದ, ಅರ್ಜುನನಾಗಲೇ ಐದಾರು ಜನ ಹೆಂಡತಿಯರ ಸುಖ ಪಡೆದು ಈ ಹೃದಯದಿಂದ ಹೊರ ನಡೆದಿದ್ದ.
ಅಂತೂ ನನ್ನ ಮಾನಕ್ಕೆ ಕೈ ಹಾಕಿದ ದುಷ್ಟರ ಸಂಹಾರವಾಗಿದೆ,
.................
ಮನಸು ಆತ್ಮ ಸಂತೃಪ್ತಿಯಿಂದ ಬೀಗಿದೆ, ಇಷ್ಟಕ್ಕೆಲ್ಲಾ ಕಾರಣರಾದ ಪತಿಯಂದಿರನ್ನು ಅದರಲ್ಲೂ ಭೀಮ ಅರ್ಜುನರನ್ನು ಕಂಡು ಮನಸು ಹೆಮ್ಮೆ ಪಡುತಿದೆ, ಇಬ್ಬರು ಅಣ್ಣಂದಿರು ಹೋದರೇನು ಸಹಸ್ರ ಜನ್ಮದಲ್ಲೂ ಯಾರಿಗೂ ಸಿಗದಂತಹ ಅಣ್ಣ ಕೃಷ್ಣನನ್ನ್ಜು ನೋಡಿ ವಂದಿಸಬೇಕನಿಸುತ್ತದೆ ಅಡಿಗಡಿಗೂ
ಆದರೂ...................... ಎಲ್ಲೋ ಒಂದು ಕಡೆ ನೋವು, ಹೇಳಲಾರದ ನಡುಕ, ಬವಣೆ
ನನ್ನಂತೇ ಸುತರನ್ನು ಕಳೆದುಕೊಂಡ ಇಷ್ಟೊಂದು ತಾಯಿಯರು, ನನಗಿನ್ನೇನು ಶಾಪ ಹಾಕುತ್ತಿದ್ದಾರೋ
ಸೌಭಾಗ್ಯ ಕಳೆದುಕೊಂಡ ಅದೆಷ್ಟೋ ಪುಟ್ಟ ವಿಧವೆಯರು, ಮನೆ ಮಾರು ಕಳೆದುಕೊಂಡ ಜನ ಸಾಮಾನ್ಯರು, ಇವರಿಗೆಲ್ಲಾ ಈ ಯುದ್ದ ಬೇಕಿತ್ತೇ
ನಾನು ನಮ್ಮೈವರ ಸೇಡಿಗಾಗಿ ಇವರೆಲ್ಲರನ್ನೂ ಕೊಂದು ಅವರ ಕನಸುಗಳ ಸಮಾಧಿಯ ಮೇಲೆ ಮಹಾರಾಣಿಯಾಗಿ ಕೇಕೆ ಹಾಕಿ ಸಂತಸದಿಂದಿದ್ದರೆ, ಅಂದು ದುರ್ಯೋದನನ ಜೂಜಿನಲ್ಲಿ ಸೋಲಿಸಿ ನಕ್ಕನಗೆಗೆ ಸಮನಾಗುವುದಿಲ್ಲವೇ?
ಮುಂದೆ ಇತಿಹಾಸದಲ್ಲಿ ಈ ಘೋರಕ್ಕೆ ಕಾರಣ ಎಂದು ನನ್ನನ್ನೇ ದೂರುತ್ತಾರಲ್ಲವೇ?......
(ಮಹಾ ಭಾರತದಲ್ಲಿ ಅಗ್ನಿ ಸುತೆ ಎಂದೇ ಹೆಸರಾಗಿರುವ ಪಾಂಚಾಲಿಯ ಮನದ ದುಗುಡ ಹೇಗಿದ್ದಿರಬಹುದೆಂದು ಚಿಂತಿಸಲು ಯತ್ನಿಸಿದ್ದೇನೆ . ಭೈರಪ್ಪನವರ ಪರ್ವವನ್ನು ಸುಮಾರು ಸಲ ಓದಿದ್ದುದರಿಂದ ಕೆಲವು ಸಾಲುಗಳು ಅದರಿಂದ ಪ್ರಭಾವಿತಗೊಂಡಿದೆ ಎಂಬುದನ್ನು ಒಪ್ಪುತ್ತೇನೆ. :) )
Subscribe to:
Posts (Atom)