Tuesday, November 27, 2018

ಎಂಟನೇ ಆಯಾಮ ಅಧ್ಯಾಯ ಮೂರು .ಮುತ್ತಿಗೆ ಹಾಕಿದ ಮುತ್ತಿನ ಕನಸು

"ಅಮ್ಮಾ..."
"ಏನೇ...ರಚನಾ "
"ನಿನ್ನ  ಏನೋ ಕೇಳಬೇಕಿತ್ತು"
"ಕೇಳು"
"ಅದು... ನಂಗೆ ಕೆಲವೊಂದು ದಿನದಿಂದ ಒಂದೇ ಥರ ಕನಸು ಬರ್ತಿದೆ"
"ಏನು ಕನಸು?"
"ಅದು... ನಮ್ಮ ಮನೆ ಮೇಲಿರೋ ಹುಡುಗ ಒಬ್ಬ ನಿಮ್ಮ ತಂದೆ ಬಗ್ಗೆ ಏನೋ ಸತ್ಯ ಹೇಳ್ತೀನಿ ಅನ್ನೋ ಥರ .. ಆದರೆ ... ಏನು ಅಂತ ಕೇಳೋ ಅಷ್ಟ್ರಲ್ಲಿ ಕನಸಿಂದ ಎದ್ದಿರ್ತೇನೆ. ಸುಮಾರು ತಿಂಗಳಿಂದ ಹೀಗೇ ಕನಸು ಬೀಳ್ತಿದೆ"
"ರಾತ್ರಿ ಬೇಗ ಮಲಗು ಅಂತ ಹೇಳಿದ್ರೆ ನೀನು ಕೇಳಲ್ಲ. ಹಾಳು ಮೊಬೈಲ್ ನೋಡ್ತಾ ಇರ್ತೀಯ . ಬೇಗ ಮಲಗಿದ್ರೆ ಎಲ್ಲಾ ಸರಿ ಹೋಗುತ್ತೆ. ಕಣ್ತುಂಬ ನಿದ್ರೆ ಬರುತ್ತೆ . ಈ ಅರೆ ಬರೆ ನಿದ್ದೇನಲ್ಲೇ ಹೀಗೆಲ್ಲಾ ಆಗೋದು.." 
ಅಮ್ಮ ಅಡಿಗೆ ಮನೆಗೆ ಹೋದ ತಕ್ಷಣವೇ ಸುನಯನ ಎಂಬ ಅಕ್ಷರಗಳು ಆಕೆಯನ್ನ ಹಿಂಬಾಲಿಸಿದವು.
ರಚನಾ ಳ ಕಣ್ಣುಗಳು ದೊಡ್ಡದಾದವು... ಮೂಲೆಯಲ್ಲಿ ಎಲ್ಲವನ್ನೂ ಗಮನಿಸುತ್ತಿದ್ದ ಇವನತ್ತ ನಡೆದಳು
ಅವನನ್ನ ತಬ್ಬಿಕೊಳ್ಳುತ್ತಾ
"ಇನ್ನೂ ಎಷ್ಟು ದಿನ ಬೇಕು ನೀನು ಬರೋಕೆ? ಬೇಗ ಬಾ ಸಮಯ ಕಳೆದುಹೋಗಿ ಕತ್ತಲು ಮುಸುಕುವ ಮುಂಚೆ"
ಹಿತವಾದ ಮುತ್ತನ್ನ ಅವನ ಕೆನ್ನೆಗೆ ಕೊಡುತ್ತಿದ್ದಂತೆ....
ರಾಮ್ ತುಟಿ ಅರಳಿ ಅವಳನ್ನ ಮತ್ತಷ್ಟು ಬಾಚಿ ತಬ್ಬಿ ಪಿಸುಗಟ್ಟಿದ
"ಆದಷ್ಟು ಬೇಗ"
........
ರಾಮ್ ದಿಢೀರ್ ಎಂದು ಎದ್ದು ಕೂತ..

ಏನಿದು ಕನಸು...
ಮುತ್ತು ಕನಸಲ್ಲಿ ಕೊಟ್ಟದ್ದಾದರೂ ಯಾಕೆ ಇಷ್ಟು ಖುಷಿ ಆಗುತ್ತಿದೆ..
ಯಾರಾಕೆ?
ಮೊಬೈಲ್  ಆನ್ ಮಾಡಿ ತನ್ನ ನೋಟ್ಸ್ ನತ್ತ ಕಣ್ಣು ಹಾಯಿಸಿದ..
ದಿನಾ ಬೀಳುವ ಕನಸುಗಳನ್ನ ದಾಖಲಿಸಲಾರಂಭಿಸಿ  ಎರೆಡು ತಿಂಗಳುಗಳಾಗಿದ್ದವು.
ಇಲ್ಲಿಯವರೆಗೆ ಇಪ್ಪತ್ತಕ್ಕಿಂತ ಹೆಚ್ಚು ಬಾರಿ ಬಿದ್ದ ಕನಸುಗಳಲ್ಲಿ ರಚನಾ ಎನ್ನುವ ಹುಡುಗಿ , ಆಕೆಯ ತಂದೆಯ ಬಗ್ಗೆ ಯಾವದೋ ಸತ್ಯವನ್ನ ಹುಡುಕುವದಷ್ಟೇ ಆಗಿತ್ತು.
ಇಂದು ಮೊದಲ ಬಾರಿ ಆ ಕನಸಲ್ಲಿ ರಾಮ್ ಸಹಾ ಪಾತ್ರಧಾರಿಯಾಗಿದ್ದ... ಅಷ್ಟೇ ಅಲ್ಲ ಇನ್ನೂ ಇಪ್ಪತ್ತೂ ತುಂಬದ  ಅವನಿಗೆ ಪ್ರೇಮದ ಅಪ್ಪುಗೆ ಮತ್ತು ಮುತ್ತಿನ  ಮೊದಲ ಅನುಭವ ಕೂಡ...

ಕನಸಲ್ಲಿ ಬಂದು ಆಹ್ವಾನ ಕೊಡುತ್ತಿರುವ ಈ ರಚನಾ ಯಾರು ? ಎಲ್ಲಿದ್ದಾಳೆ? ತನಗೂ ಅವಳಿಗೂ ಏನ ಸಂಬಂಧ ? ಬೇಗ ಬಾ ಎಂದೇಕೆ ಕರೆಯುತ್ತಿದ್ದಾಳೆ . ಕತ್ತಲು ಮುಸುಕುವ ಮುಂಚೆ ಅಂದರೆ? ಈ ದಿನವೇಕೆ?  ಅಥವ ಮತ್ತು ಯಾವಾಗ?...
ಎಫ್ ಬಿ  ಓಪನ್ ಮಾಡಿ ರಚನಾ ಎನ್ನುವ ಹೆಸರುಗಳನ್ನ ಹುಡುಕಲಾರಂಭಿಸಿದ..
ಆಕೆ ಕನ್ನಡದವಳು ಮತ್ತು ಬೆಂಗಳೂರಿನವಳು    ಅನ್ನುವಷ್ಷು ಮಾತ್ರ ಕನಸಲ್ಲಿ ತೋಚಿದ್ದು...

ಆದರೆ ಕನಸಿನ ಮುಖ್ಯ ಅಂಶವನ್ನೇ ಮರೆತಿದ್ದ
..................

"ಲೋ ಹುಚ್ಚ ಕನಸಲ್ಲಿ ಕಂಡವಳನ್ನ ಫೇಸ್ಬುಕ್ ಇಂಟರ್ನೆಟ್ ನಲ್ಲಿ ಹುಡಕ್ತಾರಾ.. ಸೈಕಾಲಜಿ ತಗೊಂಡು ಓದ್ತಾ ಇದೀಯ, ಕನಸಿನ ಬಗ್ಗೆ ಇಷ್ಟೆಲ್ಲಾ ಗೊತ್ತಿದ್ದೂ ಹಿಂಗೆಲ್ಲಾ  ಮೂಢನ ಥರಹ  "
 ಕಾಲೇಜಿನಲ್ಲಿ ರಾಮ್ ಹೇಳಿದ್ದು ಕೇಳಿ ಚರಣ್ ನಗಲಾರಂಭಿಸಿದ್ದ
"ನಮ್ಮ ಸುಪ್ತ ಮನಸು ನಾವು ನೋಡಿರೋ ಕೇಳಿರೋ ಓದಿರೋ ಎಲ್ಲಾ ವಿಷಯಗಳನ್ನ ತನ್ನದೇ ಆದ ರೀತಿಲಿ ಅರ್ಥೈಸಿಕೊಂಡು ಅರೆ ನಿದ್ರಾವಸ್ತೆ ಅಂದರೆ ತೀಟಾ ಹಂತದಲ್ಲಿ ಕನಸುಗಳನ್ನ ಚಿತ್ರಿಸತೊಡಗತ್ತೆ.ಕಥೆಗೂ ನಿನಗೂ ಯಾವುದೇ ಸಂಬಂಧ ಇಲ್ಲದೇ ಇರಬಹುದು ಆದರೆ ಆ ಕನಸು ನಿನ್ನ ಮನಸಿಂದಾನೇ ಬಂದಿರುತ್ತೆ  . ಆ ಹುಡುಗೀನ ನೀನು ಎಲ್ಲೋ ನೋಡಿರ್ತಿಯ.. ಅಷ್ಟೆ ಆಕಾಶದ ಅಪ್ಸರೆ ಅಂತೂ ಖಂಡಿತಾ ಇರ್ಲಿಕ್ಕಿಲ್ಲ...'
ತನಗಿಂತ ಕಡಿಮೆ ಮಾರ್ಕ್ಸ್ ತಗೊಂಡು ತನಗೇ ಕನಸಿನ ಬಗ್ಗೆ ಉಪದೇಶ ಕೊಡುತ್ತಿದ್ದ ಚರಣ್ಗೆ  ಬಾರಿಸಿದ

"ಲೋ ಅಣ್ಣಾ ನಿಂಗೆ ಲೆಕ್ಚರಿಂಗ್ ಕೊಡೋಕೆ ಬರುತ್ತೆ ಅಂತ ಗೊತ್ತು. ಆದರೆ ನಂಗಿವಾಗ ಅದು ಯೂಸ್ ಆಗಲ್ಲ. ನೀನು ಹೇಳಿದ ಎಲ್ಲಾ ವಿಷಯಾನೂ ರಾತ್ರಿ ಇಂದ ಯೋಚಿಸ್ತಾ ಇದೀನಿ.... ಆದರೆ ಆ ಹುಡುಗಿನ ಐ ಮೀನ್  ರಚನಾನ ಇಲ್ಲೀವರೆಗೆ ಎಲ್ಲೂ ನೋಡೇ ಇಲ್ಲಾ.. ಆಕಾಶದ ಅಪ್ಸರೆನೋ ಅಲ್ವೋ ಗೊತ್ತಿಲ್ಲ ಆದರೆ
ಶಿ ಹ್ಯಾಸ್ ಬೀನ್ ಮೈ ಡ್ರೀಮ್ ಗರ್ಲ್ ನೌ...ಅವಳನ್ನ ಹುಡುಕಲೇಬೇಕು."

ರಾಮ್ ನ ಕಂಗಳಲ್ಲಿ ಕನಸಿನ ಬೆಟ್ಟವೇ ಇತ್ತು.
............
" ರಾಮ್ ಕನಸನ್ನ ಸೀರಿಯಸ್ ಆಗಿ ತಗೋಬೇಡ.  ರಾಜೇಶ್ ಅಂಕಲ್ ಹತ್ರ ಮಾತಾಡಿದೀನಿ
ಸಾಯಂಕಾಲ ಅವರನ್ನ ಮೀಟ್ ಮಾಡಿ ಬಾ". 

ಕಾಲೇಜಿಂದ ಮನೆಗೆ ಬಂದವನೇ ತಂದೆಯ ಬಳಿ ಕನಸಿನ ಹುಡುಗಿಯ ಬಗ್ಗೆ ಮಾತಾಡಿದ್ದಲ್ಲದೆ  ಎಮ್ ಎ ಸೈಕಾಲಜಿಯನ್ನ ಬೆಂಗಳೂರಲ್ಲಿ ಮಾಡುವುದಾಗಿ ತಿಳಿಸಿದ್ದ.. ಜೊತೆಗೆ ರಚನಾಳನ್ನು ಹುಡುಕುವುದನ್ನೂ ಕೂಡ

ಅವನ ತಂದೆ ತಾಯಿ ಇಬ್ಬರೂ ಕಂಗಾಲಾಗಿದ್ದರು.
ಅದರ ಪರಿಣಾಮವೇ ಹಿಪ್ನಾಸಿಸ್.
ರಾಜೇಶ್   ಸಮ್ಮೋಹಿನಿ ವಿಧಿ ವೈದ್ಯರು.

 ಅಂದೇ ಸಂಜೆ ಅವರ ಮುಂದೆ ಕೂತಿದ್ದ ರಾಮ್