ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Monday, September 3, 2012
ಕನಸುಗಳ ಹಾವಳಿ
ಆತ ನೆನಪಾಗುತ್ತಿರುತ್ತಾನೆ ಹೋದಲ್ಲಿ ಬಂದಲ್ಲಿ ಕೂತಲ್ಲಿ . ತಿಂಗಳಾಯ್ತಷ್ಟೆ ಅವನಿಂದ ದೂರವಾಗಿ, ಬಂದಷ್ಟೆ ವೇಗವಾಗಿ ಹೊರಟವನ ತಡೆಹಿಡಿದು ನಿಲ್ಲಿಸಲು ಅವಳ ಗತಿ ಸಹಾಯಿಸಲಿಲ್ಲ . ಅವನಿಲ್ಲವಾದರೇನು ಬದುಕಿದೆ. ಸಾವಿರಾರು ಅಡಿಗಳಿರುವ ದಾರಿಯಲ್ಲಿ ಅವನು ಬಂದ ಸಾಗಿದ ಅಳತೆ ಸೆಂ ಮೀಗಳಲ್ಲಿ.. ಅದಕ್ಕೇಕೆ ದುಗುಡ ದುಮ್ಮಾನ ಎಂದುಕೊಂಡು ಲ್ಯಾಪ್‍ಟಾಪ್ ನತ್ತ ಕಣ್ಣು ಹಾಯಿಸಿದಳು.
ಮತ್ತಿವ ಹಾಯ್ ಎನ್ನುತಿದ್ದಾನೆ . ಪರಿಚಿತನಾಗಿ ವರ್ಷವಾಯ್ತು ಕೇವಲ . ಅವ ಪ್ರಿಯನಾಗಿದ್ದ ಈಗ ಸ್ನೇಹಿತನೂ ಅಲ್ಲ. ಈತ ಸ್ನೇಹಿತನಾಗಿರುವಾತ ಪ್ರಿಯನಾಗಲೇ ಎಂದು ಕೇಳುತ್ತಿದ್ದಾನೆ. " ನೆನ್ನೆ ನನ್ನ ಕನಸಲ್ಲಿ ನೀವು ಬಂದಿದ್ದಿರಿ .ನಿಮ್ಮ ಕನಸಲ್ಲಿ ನಾನು ಬರೋ ದಿನ ಯಾವತ್ತು?" ಸ್ಮೈಲ್ ಹಾಕಿ ಕೇಳುತ್ತಿರುವಾತನಿಗೆ ಉತ್ತರಿಸಲೇ ಬೇಕಿತ್ತು.
"ಮೊನ್ನಿನ ಕನಸಲ್ಲಿ ಅವನಿದ್ದ . ಇಂದು ನೀವು ,ನಾಳೆ ಮತ್ತೊಬ್ಬನಿರಬಹುದು . ಬದಲಾವಣೆ ಕೇವಲ ಪಾತ್ರಗಳದ್ದು. ಮತ್ತೇನು ವಿಶೇಷವಿಲ್ಲ . ಹೀಗಾಗಿ ಕನಸುಗಳ ಹಾವಳಿಯೇ ಬೇಡ ಅಂತ ಅವಕ್ಕೆಲ್ಲಾ ಗುಡ್ ಬೈ ಹೇಳಿದ್ದೇನೆ. ನನ್ನ ನನ್ನ ಪಾಡಿಗೆ ಬದುಕಲು ಬಿಟ್ಟು ಬಿಡಿ." ಹೀಗಂತ ಬರೆದು ಕೂತವಳಿಗೆ ಬದುಕು ಎಳೆದತ್ತ ಸಾಗುವುದರಲ್ಲಿ ಅರ್ಥ ಕಂಡುಕೊಳ್ಳಬೇಕಿದೆ ಎಂದನಿಸಿ ಮನಸನ್ನ ಸಿದ್ದಗೊಳಿಸಲಾರಂಭಿಸಿದಳು..
Subscribe to:
Posts (Atom)