Tuesday, September 22, 2009

ಎರೆಡು ದಡಗಳ ನಡುವೆ ಭಾಗ ಐದು

ವಿಕಾಸನಿಗೆ ಸಿಡಿಲು ಬಡಿದಂತಾಯ್ತು. . ಮನುವಿನಿಂದ ದೂರವಾಗಿ ಕೇವಲ ಎಂಟು ತಿಂಗಳಾಗಿರಬಹುದು. ಇದು ಐದನೇ ಸಾರಿ ಹೀಗೆ ಶೈಲಾ ಪ್ರಜ್ನೆ ತಪ್ಪುತ್ತಿರುವುದು. ನಂತರ ಜ್ವರ ಹತ್ತು ದಿನ ಹಾಸ್ಪಿಟಲ್ ವಾಸ
ಒಳಗಡೆ ಶೈಲಾ ಕನವರಿಸುತ್ತಿದ್ದಳು
"ಮನು ನನ್ನ ಕ್ಷಮಿಸಿಬಿಡಿ. ನಾನು ನಿಮಗೆ ಮೋಸ ಮಾಡಿಬಿಟ್ಟೆ. ಅತ್ತೆ ನಂಗೂತ್ತು ನಿಮಗೆ ನನ್ನ ಮೇಲೆ ಕೋಪ ಬಂದಿದೆ ಅಂತ" ಮತ್ತೆ ಮತ್ತೆ ಅದೇ ಮಾತುಗಳನ್ನು ಉಚ್ಚರಿಸುತ್ತಿದ್ದಳು
ವಿಕಾಸ ತಲೆ ಚಿಟ್ಟು ಹಿಡಿದಂತಾಯಿತು
ಅಪ್ಪಯ್ಯನ ಮಾತುಗಳು ಕಿವಿಯಲ್ಲಿ ಪ್ರತಿಧ್ಚನಿಸಿತು
"ವಿಕಾಸ್ ನೀನು ಹೋಗುತ್ತಿರುವುದು ಮಾಯ ಜಿಂಕೆಯ ಹಿಂದೆ . ಹೆಣ್ಣು ಮಾಯೆ ಅದರಲ್ಲೂ ಕಟ್ಟಿಕೊಂಡ ಗಂಡನ್ನ ಬಿಟ್ಟು ನಿನ್ನ ಹಿಂದೆ ಬರುತ್ತೇನೆ ಅಂತಿರೋ ಆ ಹೆಂಗಸಿನ ಮನೋಭಾವ ಸರಿ ಇಲ್ಲ ಮುಂದೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತೆ ಕಣೊ ಅವಳ ಬಾಳು ಚೆನ್ನಾಗಿರಲ್ಲ ಹಾಗೇನೆ ನಿನ್ನ ಬಾಳೂ ಅಷ್ಟೆ ನರಕ ನರಕ ಆಗುತ್ತೆ .ಅವಳಿಗಿಂತ ನೂರು ಪಟ್ಟು ಚೆನ್ನಾಗಿರೋ ಹುಡುಗೀನ ನಾನು ಹುಡುಕಿ ಮದುವೆ ಮಾಡ್ತೀನೆ ಅವಳನ್ನ ಬಿಟ್ಟು ಬಿಡು " ಅಪ್ಪ ಕೈ ಮುಗಿದ್ದಿದ್ದರು
ಅಮ್ಮ ಮಾತೇ ಆಡಲಿಲ್ಲ.
ಅಡುಗೆ ಮನೆ ಸೇರಿ ಮುಸು ಮುಸು ಅಳುತ್ತಿದ್ದರು
"ಇಲ್ಲ ಅಪ್ಪಯ್ಯಬರೀ ಹಣ , ರೂಪದಿಂದ ಅರಳಿದ ಪ್ರೀತಿ ಅಲ್ಲ. ನಾನು ಯೋಚಿಸಿ ಯೋಚಿಸಿ ತೆಗೆದುಕೊಂಡ ನಿರ್ಧಾರ. ಅದರಿಂದ ಹಿಂದೆ ಬರೋ ಯೋಚನೇನೆ ಇಲ್ಲ. ಸಾರಿ ಅವಳನ್ನ ನಿಮ್ಮ ಸೊಸೆ ಎಂದು ಸ್ವೀಕರಿಸುವುದಾದರೆ ಸ್ವೀಕರಿಸಿ ಇಲ್ಲವಾದರೆ ನಿಮಗೊಬ್ಬ ಮಗನಿದ್ದ ಎಂಬುದನ್ನ ಮರೆತು ಬಿಡಿ"
ಕಡ್ಡಿ ಎರೆಡು ಮಾಡಿದಂತೆ ಉತ್ತರಿಸಿ ತನ್ನ ಸೂಟ್‌ಕೇಸ್ ಹಿಡಿದು ಹೊರಬಂದವ ತಾನು
ಆದರೆ ಅಪ್ಪ ಹೇಳಿದ್ದೇ ನಿಜವೆನಿಸುತ್ತಿದೆ ಅಲ್ಲವಾ? ಶೈಲಾ ತನಗಾಗಿ ಮನುವನ್ನು ಬಿಟ್ಟುಬಂದಳು . ಆದರೆ ನಿಜಕ್ಕೂ ನಮ್ಮಲ್ಲಿ ಯಾರು ಸುಖವಾಗಿದ್ದಾರೆ? ನಾನಾ,ಶೈಲಾನಾ? ಇಲ್ಲಾ ಮನುವಾ? ಯಾರೂ ಇಲ್ಲ ಯಾರಿಗಾಗಿ ಈ ಬಾಳು ಯಾವ ಸಂತೋಷಕ್ಕಾಗಿ? ಮತ್ತೊಬ್ಬರ ಸಂತಸದ ಸಮಾಧಿಯ ಮೇಲೆ ಬಾಳು ಕಟ್ಟಿಕೊಂಡಂತಾಗಿ ಭೂತಕಾಲವೇ ಭೂತದಂತೆ ಕಾಡುತ್ತಿದೆಯಲ್ಲ.

ಹೀಗೇ ಮುಂದುವರೆದರೆ ಬದುಕು ನಿಜಕ್ಕೂ ನರಕವಾಗುತ್ತದೆ.
ಮಾಡುವುದೇನು?

??
ಪ್ರಶ್ನಾರ್ಥಕ ಚಿಹ್ನೆಗಳೇ ಅವನ ತಲೆಯಲ್ಲಿ ತುಂಬಿತು. ತಲೆ ಹಿಡಿದು ನಿಂತ

********************************************************

ವಾರವೆರೆಡು ಕಳೆಯಿತು . ಶೈಲಾ ಗುಣ ಮುಖಳಾದಳು ಆದರೆ ಮಾನಸಿಕವಾಗಿ ಮತ್ತಷ್ಟು ಮುದುಡುತ್ತಿದ್ದಳು . ತಾನು ಅಪರಾಧಿ
ಮನುವಿಗೆ ಮೋಸ ಮಾಡಿದೆ.ಅವನ ಮನಸನ್ನು ನೋಯಿಸಿದೆ ಎಂಬ ಭಾವನೆ ಮೂಡಿದಾಗಲೆಲ್ಲಾ ಅವಳು ಹುಚ್ಚು ಹಿಡಿದಂತಾಡುತ್ತಿದ್ದಳು. ವಿಕಾಸನ ಮೇಲೆ ವಿನಾಕಾರಣ ಕೋಪಿಸಿಕೊಳ್ಳುತ್ತಿದ್ದಳು. ವಿಕಾಸನಂತೂ ಸೋತು ಹೋಗಿದ್ದ. ಇತ್ತ ಕೆಲಸದಲ್ಲಿ ಒತ್ತಡ ಮನೆಯಲ್ಲಿ ಜಗಳ ತಪ್ಪಿದರೆ ಶೈಲಾಳ ಅಳು ಅವಳಿಗೆ ಸಾಂತ್ವಾನ ಹೇಳಿ ಹೇಳಿ ಸುಸ್ತಾಗಿದ್ದ. ಶೈಲಾ ಕೆಲಸವನ್ನು ಬಿಟ್ಟು ಮನೆಯಲ್ಲಿ ಕೂತಿದ್ದಳು. ಈ ಎಂಟು ತಿಂಗಳಲ್ಲಿ ಇದು ಎಂಟನೇ ಕೆಲಸ ಬಿಡುತ್ತಿರುವುದು. ಮಹಾರಾಣಿಯಂತಿದ್ದವಳಿಗೆ ಮತ್ತೊಬ್ಬರ ಆಳಾಗಿ ದುಡಿಯಲು ಕಷ್ಟವಾಗುತಿತ್ತು. ವಿಕಾಸನೇ ಕೆಲ್ಸ ಬಿಡಲು ಹೇಳಿದ್ದ


ಅಂದು ವಿಕಾಸನ ಮೊಬೈಲ್‌ ರಿಂಗಣಿಸಿತು
"ಹಲ್ಲೋ"
"ವಿಕಾಸ್ ಮನ್ವಂತರ್ ಹಿಯರ್. ಗೊತ್ತಾಯ್ತಾ?" ಅತ್ತಲಿಂದ ಮನುವಿನ ದ್ವನಿ ಕೇಳಿಸಿತು
ವಿಕಾಸ್ ಬಾಯಿ ತೆರೆದ ಆದರೆ ಶಬ್ಧ ಹೊರಡಲಿಲ್ಲ. ಗಲಿಬಿಲಿಯಾಗಿತ್ತು. ಏನು ಮಾತಾಡಬೇಕೆಂದು ಹೊಳೆಯಲಿಲ್ಲ. ಸುಮ್ಮನೇ ಇದ್ದ
"ವಿಕಾಸ್ . ನಾನು ನಿಮ್ಮ ಜೊತೆ ಮಾತಾಡಬೇಕು. "
"ಎಲ್ಲಿ ......................ಬರಬೇಕು... ಅಂತ ಹೇಳಿದರೆ ............" ವಿಕಾಸ್ ಒಂದೊಂದೇ ಪದಗಳನ್ನು ಉರುಳಿಸಿದ
ಮನು ಅತ್ತಲಿಂದ ಹೇಳಿದ
ಯಾಕಿರಬಹುದು? ಫೋನಿಟ್ಟ ಮೇಲೆ ತನ್ನಂತಾನೆ ಪ್ರಶ್ನಿಸಿಕೊಂಡ.
ಪ್ರಶ್ನೆಗೆ ನೂರಾರು ಉತ್ತರಗಳು ಧುಮ್ಮಿಕಿದವು
ಊಹೆಗಳ ಸರಮಾಲೆ ಅನಂತ ದೂರದವರೆಗೆ ಎಳೆಯಲಾರಂಭ್ಸಿಸಿತು
ಇನ್ನೂ ಯೋಚಿಸುವುದರಲ್ಲಿ ಅರ್ಥವಿಲ್ಲ ಎಂದನಿಸಿ ಆ ಯೋಚನೆಗಳ ಪರಿಧಿಯಿಂದ ಹೊರಬಂದ . ಹೇಗಿದ್ದರೂ ಇಂದು ಸಂಜೆ ಗೊತ್ತಾಗುತ್ತದೆಯಲ್ಲ ಎಂದು ನಿರಾಳನಾದ

**************************************************
ಮನೆಯಲ್ಲಿ ಕೂತು ನೆಟ್‌ನಲ್ಲಿ ನೋಟ ಹರಿಸುತ್ತಿದ್ದಳು ಶೈಲಾ. ಮನಸೆಲ್ಲಾ ಬರೀ ಯೋಚನೆಗಳೇ
ಅಲ್ಲ ತನ್ನ ಮನದಾಸೆಯನ್ನ ಹೇಳದೆ ಅವನೇ ತಿಳಿದುಕೊಂಡನಲ್ಲ ಮನು. ಅವನು ಅಷ್ಟು ಒಳ್ಳೆಯವನಾಗಿರಬಾರದಿತ್ತು ಅವನ ಒಳ್ಳೇಯತನ ತನ್ನನ್ನು ಬೆಂಕಿಯಂತೆ ಸುಡುತ್ತಿದೆಯಲ್ಲಾ. ಅತ್ತೆಯೂ ಅಷ್ಟೆ ಒಂದೂ ಕೆಟ್ಟ ಮಾತು ಆಡಲಿಲ್ಲ
ಆ ದಿನ ಇನ್ನೂ ನೆನಪಿದೆ.
ಮನು ಅಂದು ಪಕ್ಕದಲ್ಲಿ ಬಂದು ಕೂತು ಕೈ ಹಿಡಿದ
ಹಾವು ಮುಟ್ಟಿದಂತೆ ದೂರ ಸರಿದಳು ಶೈಲಾ. ಏನೋ ಕೆಲಸವಿರುವಂತೆ ರೂಮಿನಿಂದ ಹೊರ ನಡೆಯುತ್ತಿದ್ದವಳನ್ನ ಮನುವಿನ ಮಾತು ತಡೆಯಿತು

"ಶೈಲೂ ನಂಗೆಲ್ಲಾ ಗೊತ್ತಾಯ್ತು"
ಶೈಲಾ ಹೆಜ್ಜೆ ಕದಲಿಸಲಿಲ್ಲ . ಹಿಂದೆ ತಿರುಗಲಿಲ್ಲ . ಮುಂದೇನು ಹೇಳುತ್ತಾನೋ ಎಂಬ ಭಯ ಹುಟ್ಟಲಾರಂಭಿಸಿತು.
" ಶೈಲಾ ನಿಂಗೇನು ಇಷ್ಗ್ಟಾನೋ ಅದನ್ನ್ಲೆಲ್ಲಾ ನಾನು ನಿಂಗೆ ಕೊಟ್ಟಿದ್ದೇನೆ. ನಿನ್ನಾವ ಆಸೇನೂ ಬೇಡ ಅಂತ ಹೇಳಿಲ್ಲ. ಆದರೆ ಈ ಒಂದು ಆಸೆ ಈಡೇರಿಸೋದು ಕಷ್ಟ . ಯಾಕೆಂದರೆ ಇದು ಕೇವಲ ನಿನ್ನೊಬ್ಬಳ ಬಾಳಿನ ಪ್ರಶ್ನೆ ಅಲ್ಲ. ನಮ್ಮೆಲಾರ ಸಂತೋಷಾನೂ ಇದರಲ್ಲಿ ಅಡಗಿದೆ. ವಿಕಾಸ್‌ ನಿನಗೆ ಏಕಿಷ್ಟ ಆದ ಹೇಗೆ ಇಶ್ಟ ಆದ ಅನ್ನೋದನ್ನ ನಾನು ಕೇಳೋದಿಲ್ಲ ನಾನು ಹೇಳಿದ್ದನೆಲ್ಲಾ ನೆನೆಸಿಕೊಂಡು ಒಂದ್ಸಲ ಯೋಚನೆ ಮಾಡು. ಆಮೇಲೂನಿನಗೆ ನೀನು ಮಾಡುತ್ತಿರೋದೇ ಸರಿ ಎಂದನಿಸಿದರೆ ನಿನ್ನಾಸೆ ಪ್ರಕಾರಾನೇ ಮಾಡು"

ಸಿಡಿ ಮಿಡಿಗೊಳ್ಳುವಂತಾಯಿತು. ಮಾತಾಡದೆ ಹೊರಗಡೆ ಬಂದಳು.

ಎಲ್ಲರ ಸಂತೋಷಕ್ಕಾಗಿ ತಾನೇಕೆ ತ್ಯಾಗ ಮಾಡಬೇಕು. ತಾನಿದ್ದರೇ ತಾನೆ ಎಲ್ಲರೂ?
ತನಗೆ ಇಷ್ಟವಿರುವವರನ್ನು ಆರಿಸಿಕೊಳ್ಳುವ ಹಕ್ಕು ತನಗೂ ಇದೆ.
ವಿಕಾಸ್‌ ಜೊತೆ ಬಾಳು ಉಲ್ಲಾಸದಾಯಕವಾಗಿರುತ್ತದೆ
ಹೀಗೆ ಅವಳ ಹೆಜ್ಜೆಯನ್ನು ಸಮರ್ಥಿಸಿಕೊಳ್ಳಲು ಸಾವಿರಾರು ಕಾರಣಗಳು ಅವಳ ಮುಂದೆ ಸುಳಿದವು
ಕೂಡಲೆ ವಿಕಾಸನಿಗೆ ಫೋನ್ ಮಾಡಿದಳು. ಮನುವಿಗೆ ಗೊತ್ತಾಗಿದೆ ಎಂದೂ ಅವನು ಹೇಳಿದ್ದನ್ನೂ ತಿಳಿಸಿದಳು
ಕೂಡಲೆ ಹೊರಟು ಬರುವಂತೆ ಹೇಳಿದ. ಉಟ್ಟಬಟ್ಟೆಯಲ್ಲಿ ಬರುವಂತೆ ಹೇಳಿದ
ಇನ್ನೇನು ಹೊರಡಬೇಕು ಅಷ್ಟ್ರಲ್ಲಿ ಸಿರಿ ಬಂದು ಕೈ ಎಳೆದಳು.
ಅವಳನ್ನು ಕರೆದುಕೊಂಡು ಹೋಗಬೇಕು ಅನ್ನಿಸಿತಾದರೂ ತನ್ನ ಬದುಕೇ ಇನ್ನೂ ಅಸ್ಥಿರವಾಗಿರುವಾಗ ಅವಳೂ ಒಂದು ಪ್ರಶ್ನಾರ್ಥಕ ಚಿನ್ಹೆಯಾಗಬಹುದೆನಿಸಿತು.
ರೂಮಿನಲ್ಲಿ ಸಿರಿಯನ್ನು ಮಲಗಿಸಿ ಕೊಂಚಹೊತ್ತಾದ ಮೇಲೆ ಮಹಡಿಯಿಂದ ಕೆಳಗಿಳಿದು ಬಾಗಿಲ ಬಳಿ ಹೋಗುತ್ತಿದ್ದಂತೆ ಎದುರು ಬಂದ ಮನುವನ್ನು ಕಂಡು ಬೆಚ್ಚಿದಳು. ಮನು ತುಟಿಯಲ್ಲಿ ವಿಷಾದದ ನಗು. ತಪ್ಪಿತಸ್ತಳಂತೆ ನೆಲ ನೋಡುತ್ತಾ ನಿಂತಳು
"ಶೈಲಾ ಕೊನೆಗೂ ನಮ್ಮನ್ನೆಲ್ಲಾ ಬಿಟ್ಟು ಹೋಗಬೇಕೆಂದು ನಿರ್ಧರಿಸಿದೆಯಾ?"
ಶೈಲಾ ಮಾತಾಡಲಿಲ್ಲ. ತಲೆಯನ್ನೂ ಮೇಲೆತ್ತಲಿಲ್ಲ . ಕೊಂಚ ಹೊತ್ತಿನ ನಂತರ ನಿಟ್ಟುಸಿರಿನ ಸದ್ದು ಕೇಳಿತು
"ಸರಿ ಶೈಲಾ ಯು ಮೇ ಗೋ." ತಾನೆ ಮುಂದಾಗಿ ಬಾಗಿಲು ತೆರೆದ
ಶೈಲಾ ಮೊಗದಲ್ಲಿ ಆಶ್ಚರ್ಯ ಗೊಂದಲಗಳು ಒಮ್ಮೆಗೇ ಮೇಳೈಸಿದವು.
ಕಾಲುಗಳು ಮುಂದೆ ಹೊರಡಲು ಮುಷ್ಕರ ಹೂಡಿದವು.
ಭಾರವಾದ ಹೆಜ್ಜೆಗಳನ್ನು ನೆಲದಿಂದ ಬೇರೆ ಮಾಡುತ್ತಿದ್ದಂತೆ ಅವಳ ಮನಸಿನಿಂದ ಮನುವಿನ ಚಿತ್ರ ದೂರವಾಗತೊಡಗಿತು.
ಗೇಟಿನ ಬಳಿಯಲ್ಲೇ ನಿಂತಿದ್ದ ವಿಕಾಸ್ ಮುಂದೆ ಮನು ಹಾಗು ಹಿಂದೆ ಶೈಲಾನ ನೋಡಿ ಅವಕ್ಕಾದ . ಇನ್ನೇನು ಕಾದಿದೆಯೋ ಎಂಬ ಯೋಚನೆಯೊಂದಿಗೆ ಮುಂದಾಗುವುದಕ್ಕೆ ಸಿದ್ದನಾದ.
ಕೊನೆಗೂ ಮನು ಹೊರಗೆ ಬಂದ ಶೈಲಾ ಜೊತೆಗೆ.
ವಿಕಾಸ್‍ನ ಉಸಿರು ನಿಂತೇ ಹೋಯಿತೇನೋ ಎನ್ನುವಷ್ಟು ನಿಧಾನವಾಯ್ತು.ವಿಕಾಸನನ್ನು ನೋಡಿ ಒಮ್ಮೆ ನಕ್ಕ ಮನು. ಆ ನಗುವಿನ ಭಾವವಾವುದೋ ತಿಳಿಯಲಿಲ್ಲ ವಿಕಾಸ್‌ಗೆ. ನಗುವ ಪ್ರಯತ್ನ ಮಾಡಿದ . ಆದರೆ ಮುಖ ನಗಲಾರೆ ಎಂದು ನಕಾರ ಮಾಡಿತು. ಇದೇನು ಈ ಮನುಷ್ಯ . ಹೆಂಡತಿಯನ್ನು ಮತ್ತೊಬ್ಬನಿಗೆ ಒಪ್ಪಿಸುವಾಗಲೂ ನಗುವೇ? ಶೈಲಾಗಾಗಲಿ ವಿಕಾಸನಿಗಾಗಲಿ ಅರ್ಥವೇ ಆಗಲಿಲ್ಲ
ಯಾವ ಮಾತನ್ನೂ ಆಡದೆ ವಿಕಾಸನ ಬಳಿ ಶೈಲಾಳನ್ನು ಬಿಟ್ಟು ಮತ್ತೆ ಗೇಟಿನ ಒಳಗೆ ನಿಂತ
ವಿಕಾಸ್‌ನ ಬೈಕ್ ಏರಿದಳು ಶೈಲಾ
ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಮನು ಕೈ ಬೀಸಿದ ಅವನ ಕಣ್ಣಲ್ಲಿದ್ದ ನೀರು ಬೇಡವೆಂದರು ಹೊರಗೆ ಬರುವುದನ್ನು ಅವನಿಂದ ಬಚ್ಚಿಡಲಾಗಲಿಲ್ಲ.
ಆ ದೃಶ್ಯ ನೂತನ ಜೋಡಿಗಳ ಮನಸಲ್ಲಿ ಅಚ್ಚಳಿಯದೇ ನಿಂತು ಬಿಟ್ಟಿತು.
****
ಮತ್ತದೇ ದೃಶ್ಯ ಮನಸಲ್ಲಿ ಪುನಾರವರ್ತನೆಯಂತಾಗಿ ಶೈಲಾ ಮಂಚಕ್ಕೆ ಒರಗಿದಳು
--------------------------------------------------------------------
ಅಂದು ಸಂಜೆ ಮನುವನ್ನು ಭೇಟಿಯಾಗಿ ಬರುತ್ತಿದ್ದಂತೆ ವಿಕಾಸ್ ಕುದಿಯುತ್ತಿದ್ದ. ಅಬ್ಬಾ ಈ ಮನುಷ್ಯ ಇಂತಹವನೇ? ಅವನ ಮಾತುಗಳು ಮತ್ತೆ ಮತ್ತೆ ಕಿವಿಯನ್ನು ತೂತು ಮಾಡುತ್ತಿತ್ತು
"ವಿಕಾಸ್ ಪರವಾಗಿಲ್ಲ ಹಳಸಲಾದರೂ ಪಕ್ವಾನ್ನದಂತೆ ನೋಡ್ಕೋತಿದ್ದೀಯಂತೆ. ನೋಡ್ಕೋ ನೋಡ್ಕೋ ನೀನುಂಟು ನಿನ್ನ ಹೊಸ ಹೆಂಡತಿ ಅಂದ್ರೆ ನನ್ನ ಹಳೇ ಹೆಂಡತೀ ಉಂಟು . ನಂಗೂ ಅವಳ ಜೊತೆ ಇದ್ದು ಅದೇ ಹಳೇದನ್ನ ತಿಂದೂ ತಿಂದೂ ಬೇಜಾರಾಗಿ ಹೋಗಿತ್ತು. ಅದಕ್ಕೆ ಅವಳು ಹೋಗ್ತೀನಿ ಅಂದ ಕೂಡಲೇ ಅವಳನ್ನ ಓಡಿಸಿ ಬಿಟ್ಟೆ" ಒಳ್ಳೇ ಖಳನಾಯಕನಂತೆ ನಕ್ಕ
ವಿಕಾಸನ ತಲೆ ಗಿರ್ರೆ ಂ ದಿತು
ಇದೇನು ಇಂತಹ ಮಾತು
" ಅಂದಹಾಗೆ ನಾನಿಲ್ಲಿ ನಿನ್ನ ಕರೆದದ್ದು ನಿನ್ನ ಲವರ್‌ಗೆ ಹೇಳಿ ನಂಗೆ ಡೈವೋರ್ಸ್ ಕೊಡೋದಿಕ್ಕೆ ಹೇಳು ಅಂತ ಹೇಳೋಕೆ ನಂದೂ ಉಪ್ಪು ಹುಳಿ ತಿಂದ ದೇಹ ನಾನೂ ಬೇರೆ ಮದುವೆ ಮಾಡ್ಕೋಬೇಕು. ಈಗಾಗಲೆ ಹೆಣ್ಣು ಗೊತ್ತಾಗಿದೆ . ಮದುವೆ ಮಾತ್ರ ಬಾಕಿ. ಆಮೇಲೆ ಆ ಸಿರೀನ ಕರೆದುಕೊಂಡು ಹೋಗೋಕೆ ಹೇಳು. ನಂಗೂ ಒಳ್ಳೆಯವನ ಥರಾ ನಟಿಸಿ ನಟಿಸೀ ಬೇಜಾರಾಗಿ ಹೋಗಿದೆ. " ತನ್ನ ಜೋಕಿಗೆ ತಾನೆ ನಕ್ಕು ಎದ್ದು ತನ್ನ ಕಾರಿನಲ್ಲಿ ಕೂತ ಮನು ವಿಕಾಸನ ಮರು ಮಾತಿಗೆ ಕಾಯಲೂ ಇಲ್ಲ
ವಿಕಾಸನಿಗೆ ದಿಗ್ಬ್ರಮೆಯಾಗಿತ್ತು ಇದನ್ನೆಲಾ ಹೇಳಿದರೆ ನಂಬುತ್ತಾಳೇಯೇ ಶೈಲಾ.
ತಲೆ ಚಿಟ್ಟು ಹಿಡಿದಂತಾಗಿ ಮನೆಗೆ ಬಂದು ಕೂತವನಿಗೆ ಮುಸಿ ಮುಸಿ ಅಳುತ್ತಿದ್ದ ಶೈಲಾ ಕಂಡಳು.
"ಯಾಕೆ ಶೈಲಾ ಏನಾಯ್ತು ? "ಗಾಭರಿಯಾಗಿ ಕೇಳಿದವನಿಗೆ
ತನ್ನ ಮುಂದೆ ಇದ್ದ ಕಂಪ್ಯೂಟರ್ ಪರದೆಯ ಕಡೆಗೆ ಕೈ ತೋರಿದಳು
ಅವಳು ತೋರಿದತ್ತ ನೋಡಿದ
ಅದು ಸಂಗೀತಾ ಮೇಲ್.
"ಶೈಲಾ ಒಮ್ಮೊಮ್ಮೆ ನಮಗೆ ಗೊತ್ತಿಲ್ಲದ ಹಾಗೆ ವಿಧಿ ನಮ್ಮನ್ನ ಸರಿಯಾದ ದಿಕ್ಕಿಗೆ ಕರೆದುಕೊಂಡು ಹೋಗಿರುತ್ತೆ. ನಿನ್ನ ವಿಷಯದಲ್ಲೂ ಹಾಗೇನೆ ಆಗಿದೆ. ಆವತ್ತು ನೀನು ಮನುವನ್ನು ಬಿಟ್ಟು ಬಿಡ್ತೀನಿ ಅಂತಂದಾಗ ನಾನು ಚೆನ್ನಾಗಿ ಬೈದಿದ್ದೆ. ಆದರೆ ನೀನು ಮಾಡಿದ್ದೇ ಸರಿ . ಮನು ನಿಜವಾದ ಬಣ್ಣ ನನಗೆ ನೆನ್ನೆ ಗೊತ್ತಾಯ್ತು . ಮನು ನಿನ್ನ ತಂದೆ ಫ್ಯಾಕ್ಟರಿನ ನಿನ್ನ ಹೆಸರಿಂದ ತನ್ನ ಹೆಸರಿಗೆ ಮಾಡಿಕೊಂಡಿದ್ದಾನಂತೆ. ಅದಕ್ಕಾಗೇ ಅವನಿಗೆ ನಿನ್ನ ಅವಶ್ಯಕತೆ ಇರಲಿಲ್ಲ ಹೇಗೋ ಮಾಡಿ ನಿನ್ನನ್ನ ಸಾಗ ಹಾಕಿದರೆ ಸಾಕು ಅನ್ನೋ ಯೋಚನೆ ಇತ್ತಂತೆ . ಅವನಿಗೆ ಈಗಾಗಲೇ ಶ್ಯಾಮಲಾ ಗ್ರೂಪ್ ಆಫ್ ಕಂಪನಿಯ ಚೇರ್ಮನ್ ಮಗಳು ರಮ್ಯಾ ಜೊತೆ ಮದುವೆ ಗೊತ್ತಾಗಿದೆ. ಇದು ಎಂಟು ತಿಂಗಳ ಹಿಂದಿನ ವಿಷ್ಯ . ನಮ್ಮಫ್ರೆಂಡ್ ಅಣ್ಣ ಲಾಯರ್ ಅವರ ಕಡೆಯಿಂದ ಈ ವಿಷಯ ಗೊತ್ತಾಯ್ತು. ಈಗೇನೋ ನೀನು ಡೈವೋರ್ಸ್ ಕೊಡಬೇಕಂತೆ . ಹಾಗೆ ಸಿರೀನ ಹಾಸ್ಟೆಲ್‌ಗೆ ಸೇರಿಸೋ ಪ್ಲಾನ್ ಇದೆ ಅಂತಾನೂ ಹೇಳ್ತಿದ್ದರು. ರಮ್ಯಾ ಫೋಟೋ ನಾನೂ ನೋಡಿದ್ದೀನಿ ಅವಳು ಸುರ ಸುಂದರಿ ಅವಳ ಬಲೆಗೆ ಮನು ಬಿದ್ದು ಬಿಟ್ಟಿದ್ದಾರೆ . ಸಿರೀನ ನಿನ್ನ ಬಳಿ ಕರೆಸಿಕೋ ಡೈವೋರ್ಸ್ ಕೊಟ್ಟುಬಿಡು ಕೊಚ್ಚೆಯ ಜೊತೆ ಸರಸ ಬೇಡ"
ಶೈಲಾಳ ಕಣ್ಣಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ವಿಕಾಸ್ ಅವಳನ್ನು ಎದೆಗೊರಗಿಸಿಕೊಂಡ .
" ವಿಕಿ ನಾನಿದನ್ನ ನಂಬಲ್ಲ ಮನು ಅಂತಹವರಲ್ಲ. ಅವರು ಆವತ್ತು ನನ್ನ ಕೈನಿಂದ ಸೈನ್ ಮಾಡಿಸಿಕೊಂಡಿದ್ದೇನೋ ನಿಜ ಆದರೆ ನನ್ನಾಸ್ತಿಗೋಸ್ಕರ ನಂಗೆ ಮೋಸ ಮಾಡೋರಲ್ಲ ಅವರು . ಅಂತೋರಲ್ಲ. " ಬಡಬಡಿಸುತ್ತಿದ್ದಳು
ಸಂಗೀತ ಹೇಳಿದ್ದು ನಿಜ ಎಂದು ಹೇಳುವ ಧೈರ್ಯವಾಗಲಿಲ್ಲ ವಿಕಾಸ್‌ಗೆ .
ಅವಳ ತಲೆ ನೇವರಿಸುತ್ತಲೇ
"ಏನಾದರಾಗಲಿ ಒಂದ್ಸಲ ಸಿರೀನ ನೋಡಿ ಬರೋಣ ಶೈಲಾ?" ನಿಧಾನಕ್ಕೆ ನುಡಿದ
ಬಿಕ್ಕಳಿಸುತ್ತಲೇ ಆಯಿತೆನ್ನುವಂತೆ ತಲೆ ಆಡಿಸಿದಳು
*******************ಮುಂದಿನ ಕಂತಿಗೆ ಮುಕ್ತಾಯ**************************************