ಅದು ಮದುವೆಯ ಹಾಲ್. ನಾಳೆ ಮದುವೆ . ವಧು ಗೆಳತಿಯರ ಛೇಡನೆಯಿಂದ ನಾಚಿ ನೀರಾಗಿದ್ದಳು. ಕಣ್ಣ ಮುಂದೆ ಬಣ್ಣದ ಬದುಕಿನ ಚಿತ್ತಾರ. ಮನದಲ್ಲಿ ನಲ್ಲನಾಗುವವನ ಬಗ್ಗೆ ನೂರಾರು ಕಲ್ಪನೆಯ ನವಿಲಿನ ನೃತ್ಯ. ಇವುಗಳ ಜೊತೆಯಲ್ಲಿ ಕೈಗೆ ಮದರಂಗಿ ಹಚ್ಚಿಸಿಕೊಳ್ಳುತ್ತಾ ಕುಳಿತ್ತಿದ್ದಳು ಆ ಹುಡುಗಿ ಇನ್ನೂ ಹದಿನೆಂಟರ ಹಸಿ ಮೈ ಹೊತ್ತು . ಬಟ್ಟಲಕಂಗಳಿಗೆ ಹಚ್ಚಿದ ಕಾಡಿಗೆ ಅವಳ ಕಣ್ಣುಗಳ ಸೌಂದರ್ಯಕ್ಕೆ ಸೋತು ಸೊರಗಿತ್ತು. ಅವಳ ಬಿಳುಪಿಗೆ ತಾನೇನು ಸಮವಲ್ಲ ಎಂದು ಪೌಡರ್ ಸಹ ಮಾಸಲಾಗಿತ್ತು. ಕೋಣೆಯಲ್ಲಿದ್ದ ಬೆಳಕು ತನಗ್ಯಾವ ಪ್ರತಿಸ್ಪರ್ಧಿ ಎಂದು ಇವಳ ಇವಳ ನಗುವನ್ನೇ ನೋಡುತ್ತಾ ಮಂದವಾಗಿತ್ತು.
ಅಂತಹ ಚೆಲುವೆ ಆ ಹುಡುಗಿ ಕೆನ್ನೆಯೆಲ್ಲಾ ಕೆಂಪಾಗಿತ್ತು.ಬೆಳಗಿನಿಂದ ನಡೆಸುತ್ತಿದ್ದ ಪೂಜೆ ಗಳನ್ನೆಲ್ಲಾ ಮುಗಿಸಿ ಈಗ ಗೆಳತಿಯರೊಡನೆ ಮಾತನಾಡುತ್ತಾ ಮೇಲಿನ ಕೋಣೆಗೆ ಬಂದಿದ್ದಳು.
ಬರೀ ಹುಡುಗಿಯರು
ಹಿರಿಯರು ಮಾತುಗಳಲ್ಲಿ ಮುಳುಗಿದ್ದರು. ಹೆಂಗಸರು ನಾಳಿನ ಶಾಸ್ತ್ರಕ್ಕೆ ಬೇಕಾದ ಅಣಿ ತಟ್ಟೆ ಅದು ಇದು ಸಿದ್ದ ಮಾಡುತ್ತಿದ್ದರು. ಕೆಲವರು ತಿರುಗಾಟಕ್ಕೆ ಹೋಗಿದ್ದರು. ಯುವಕರು ಇಸ್ಪೀಟ್ ಆಡಲು ತಾರಸಿಯ ಮೊರೆ ಹೋಗಿದ್ದರು.
ಒಟ್ಟಿನಲ್ಲಿ ನಗುವಿನ ಅಲೆ, ಗದ್ದಲ ಕೇಳುತ್ತಿದ್ದರೂ ಮದುವೆಯ ಹಾಲ್‌ನಲ್ಲಿ ಕಾಣುತ್ತಿದ್ದುದು ಒಂದೋ ಎರೆಡು ತಲೆಗಳು ಮಾತ್ರ.
ಆಗಲೇ ಆ ವ್ಯಕ್ತಿ ಪ್ರವೇಶಿಸಿದ. ದೃಡಕಾಯದ ಆ ವ್ಯಕ್ತಿ ಒರಟ ಎಂದು ನೋಡಿದೊಡನೆಯೇ ಹೇಳಬಹುದಾಗಿತ್ತು . ಎಲ್ಲವೂ ತಿಳಿದವನಂತೆ ಸೀದ ಆ ಹುಡುಗಿಯಿದ್ದ ಕೋಣೆಗೆ ನುಗ್ಗಿದ
ಅಪರಿಚಿತನ ಆಗಮನಕ್ಕೆ ಯುವತಿಯರು ದಂಗಾದರು. ಹುಡುಗಿ ಇವನನ್ನು ನೋಡಿದೊಡನೆಯೇ ಬೆವೆತು ಹೋದಳು ಈತ ಇಲ್ಲಿ ಬರುತ್ತಾನೆಂಬ ಕಲ್ಪನೆಯೂ ಇರಲಿಲ್ಲ.ಆತನಿಗಾಗಿದ್ದ ಅವಮಾನಕ್ಕೆ ಆತ ಮರಳಿ ಬರುತ್ತಾನೆಂಬ ಯೋಚನೆಯೂ ಇರಲಿಲ್ಲ. ಮದುವೆಯಾಗೆಂದು ಪೀಡಿಸಿದವನು ಅವನು . ಅಣ್ಣ(ಅಪ್ಪ)" ಹಾಳು ಬಾವಿಗಾದರೂ ತಳ್ಳುತ್ತೇನೆ ನಿನ್ನ ಕೈಗೆ ಕೊಡುವುದಿಲ್ಲ "ಎಂದು ನಿಷ್ಟುರವಾಗಿ ನುಡಿದ್ದಿದ್ದರು. ಕುತ್ತಿಗೆ ಹಿಡಿದು ತಳ್ಳಿದ್ದರು.ಕೈ ಹಿಡಿದ ಹೆಂಡತಿಯ ಮಾತುಕೇಳದೆ ಇವಳನ್ನು ಹಿಂಸಿಸುತ್ತಿದ್ದ. ಒಟ್ಟಾರೆ ಕ್ರೂರಿ ಆತನೊಂಥರ.
ಅಣ್ಣಾ ಎಂದು ಕಿರುಚಲು ಬಾಯಿ ಅಗಲಿಸಿದಳು ಕೂಡಲೆ ಕಬ್ಬಿಣದಂಥ ಮುಷ್ಟಿಯೊಂದು ಅದನ್ನು ಅದುಮಿತು.ಕೈಲಿದ್ದ ಚೂರಿ ತೋರಿ ಆ ಯುವತಿಯರನ್ನೆಲ್ಲಾ ಹೆದರಿಸಿ ಹೊರಗಡೆ ಕಳಿಸಿದ. ಬಾಗಿಲು ಚಿಲಕ ಹಾಕಿದ್ದು ಕೇಳಿಸಿತು.
ಹುಡುಗಿಯ ಗೆಳತಿಯರು ಚೀರಲಾರಂಭಿಸಿದರು. ಒಳಗಿನಿಂದ ಹುಡುಗಿಯ ಅರಚಾಟ, ವಸ್ತುಗಳು ಬೀಳುತ್ತಿದ್ದ ಶಬ್ಧ ಕೇಳುತ್ತಿತ್ತು.ಕೆಳಗಡೆ ಇದ್ದ ಹಿರಿಯರು ಓಡಿ ಬಂದರು.. ಮೇಲಿದ್ದ ಯುವಕರನ್ನ ಕರೆಯಲು ಒಂದು ಗುಂಪು ತಾರಸಿಯ ಕಡೆ ನುಗ್ಗಿತು.
ಅವರಿಗೆ ವಿವರಿಸಿ ಹೇಳಿ ಮುಚ್ಚಿದ್ದ ಬಾಗಿಲ ಕಡೆ ಕೈ ತೋರಿದರು
ಬಾಗಿಲನ್ನು ದಬ ದಬ ಬಡಿಯಲಾರಂಭಿಸಿದರು
ಅಷ್ಟ್ರಲ್ಲಿ ವರ ಹಾಗು ಅವನ ಗೆಳೆಯರು ಬಂದು ಬಾಗಿಲು ಮುರಿಯಬೇಕೆಂದಾಗಲೇ ಬಾಗಿಲು ತೆರೆಯಿತು.ಎಲ್ಲರೂ ದಂಗಾಗಿ ನಿಂತರು
ಆ ಅಪರಿಚಿತ ನಲುಗಿ ಹೋಗಿದ್ದ ಹೂವೊಂದನ್ನು ಅವರುಗಳ ಮೇಲೆಸೆದ.
ಅವನ ಹಿಂದೆಯೇ ಹುಡುಗಿಯೂ ಬಾಡಿ ಹೋಗಿ ಮಂಚದ ಮೇಲೆ ಬಿದ್ದಿದ್ದು ಕಾಣಿಸಿತು
ಹುಡುಗಿಯ ತಂದೆ ಸ್ಥಂಬೀಭೂತರಾದರು. ಆ ಅಪರಿಚಿತನ ಕಣ್ಣಲ್ಲಿ ಗೆಲುವಿನ ನಗೆ ಅದೆಂಥದ್ದೋ ಪಡೆದ ವಿಕೃತಿಯ ತೃಪ್ತಿ.
"ಏನು ಶಾನುಭೋಗರೆ ನಿಮ್ಮಗಳು ಹಾಳಾಗಿದ್ದಾಳೆ ಅವಳನ್ನು ನಾನು ಕೆಡಿಸಿದ್ದೇನೆ. ಈಗ ಇವಳನ್ನು ಮದುವೆಯಾಗೋಕೆ ನಿಮ್ಮ ಸೋದರಳಿಯ ರೆಡಿ ಇದಾನಾ ಕೇಳಿ?"
ವರ ಹಾಗು ಶಾನುಭೋಗರ ಸೋದರಳಿಯ ನೆಲ ನೋಡಿದ. ಅವನ ತಾಯಿ ಮಾತಾಡಿದಳು
"ಅಣ್ಣ . ಹಿಂಗಾಗಬಾರದಿತ್ತು ಆದರೇನು ಮಾಡೋದು. ನಾವಿನ್ನು ಈ ವಿಷ್ಯದಲ್ಲಿ ಮುಂದುವರೆಯೋಕೆ ಆಗಲ್ಲ . ಇನ್ನೇನು ಮಾಡೋಕಾಗಲ್ಲ. ನಾಯಿ ಮುಟ್ಟಿದ ಮಡಿಕೆ ಅದಕ್ಕೆ ಕಟ್ಟಿ ಕಳಿಸಬೇಕಷ್ಟೆ. "
ಆ ಒರಟನ ಹೆಂಡತಿಯ ಹೃದಯ ವಿಲ ವಿಲ ಒದ್ದಾಡಿತು.ತನ್ನ ಗಂಡ ತಂಗಿಯ ಜೀವನವನ್ನೇ ಹಾಳು ಮಾಡಿದನಲ್ಲ ಎಂಬ ಸಂಕಟದ ಜೊತೆಗೆ ಅವಳು ತನ್ನ ಸವತಿಯಾಗಬೇಕಾಯ್ತಲ್ಲ ಎಂಬುದಕ್ಕೆ.
ಶಾನುಭೋಗರು ತಲೆ ಎತ್ತಿದರು
ಅವರ ಕಣ್ಣಲ್ಲಿ ರೋಷ ಆವೇಶ ಕಂಡಿತು.
"ಮುಂಡೇ ಮಗನೇ ನಾನವತ್ತೇ ಹೇಳಿದನಲ್ಲ ಅವಳನ್ನ ಹಾಳು ಬಾವಿಗಾದ್ರೂ ನೂಕ್ತೀನಿ ಆದರೆ ನಿಂಗೆ ಮದುವೆ ಮಾಡಲ್ಲ ಅಂತ. ಒಬ್ಬ ಮಗಳ ಜೀವನದ ಜೊತೆ ಆಟ ಆಡಿ ಅವಳನ್ನ ಕಣ್ಣೀರ ಕೊಳದಲ್ಲಿ ಮುಳುಗಿಸಿದ್ದೀಯಾ. ಆ ಪಾಪಾನೇ ಇನ್ನೂ ನನ್ನ ಬಿಟ್ಟಿಲ್ಲ ಈಗ ಇವಳನ್ನ ಕೊಟ್ಟು ನಾನ್ಯಾವ ನರಕಕ್ಕೆ ಹೋಗಲಿ?ಇಲ್ಲ ನನ್ಮಗಳು ನಿಂಗೆ ದಕ್ಕಲ್ಲ ಅವಳು ವಿಷ ಕುಡಿದು ಸಾಯ್ತಾಳೆ ಹೊರತು ನಿನ್ಮದುವೆಯಾಗಲ್ಲ"
ಆವೇಗದಿಂದ ಎದೆ ನೋವು ಕಂಡಿತು. ಮೊದಲೆ ಮೊದಲನೆ ಮಗಳ ನರಕದ ಜೀವನದಿಂದ ನೊಂದಂಥ ಜೀವ ಅದು. ಈ ಆಘಾತವನ್ನು ತಾಳಲಾಗಲಿಲ್ಲ.
ಎದೆ ನೋವು ತೀವ್ರವಾಗಿ ಅವರು ಕುಸಿದು ಬಿದ್ದರು.
ಬಿದ್ದವರು ಮತ್ತೆ ಏಳಲಿಲ್ಲ
ಸುಮಾರು ದಿನಗಳಾದವು. ಮೊದಲೇ ತಾಯಿ ಇಲ್ಲದ ಜೀವ ಆ ಹುಡುಗಿ . ಈಗ ತಂದೆಯನ್ನೂ ಕಳೆದುಕೊಂಡಿದ್ದಳು. ಈ ನರಕಕ್ಕೆ ತನ್ನ ಗಂಡನೇ ಕಾರಣನಾದ್ದರಿಂದ ಅವಳನ್ನು ಮನೆಗೆ ಕರೆದುಕೊಂಡು ಇರಲು ಆ ಹುಡುಗಿಯ ಅಕ್ಕ ಹಿಂಜರಿದಳು
ಸೋದರತ್ತೆಯ ಮನೆಯಲ್ಲಿಯೇ ಇದ್ದ ಹುಡುಗಿಗೆ ಮೂದಲಿಕೆಯ ಮಾತುಗಳು ಶುರುವಾದವು. ಮಗನಿಗೆ ಮದುವೆ ಮಾಡಬೇಕಾದ್ದರಿಂದ ಸೋದರ ಸೊಸೆ ತಮ್ಮ ಮನೆಯಲ್ಲಿ ಇರುವುದು ಅವರಿಗೆ ಬೇಡವಾಗಿತ್ತು . ಆದ್ದರಿಂದ ಅಪ್ಪ ಸತ್ತ ಮೂರು ತಿಂಗಳಲ್ಲಿ ಮಗಳ ಮದುವೆ ಮಾಡಬಹುದೆನ್ನುವ ಶಾಸ್ತ್ರದ ಪ್ರಕಾರ ಅವಳ ಮದುವೆಯನ್ನುಅವಳಾ ಭಾವನೊಂದಿಗೇ ಮಾಡಲು ನಿಶ್ಚಯಿಸಿದರು
ಅಪ್ಪ ಯಾರೊಡನೆ ಮದುವೆ ಬೇಡೆಂದು ಕೂಗುತ್ತಾ ಕೊನೆಯುಸಿರೆಳೆದಿದ್ದರೋ ಅವನೊಡನೆಯೇ ಮದುವೆ ಹುಡುಗಿಗೆ ಜೀವನವೇ ಬೇಡೆನಿಸಿತ್ತು.
ಮನಸಿದ್ದರೂ ಸಹಾಯಕ್ಕೆ ಬರದ ಅಕ್ಕ. ಮುಖ ಸಿಂಡರಿಸುವ ಸೋದರತ್ತೆ ಮಾವ. ಕಣ್ಣಲ್ಲಿ ಗೆಲುವಿನ ಅಹಂ ತುಂಬಿರುವ ಭಾವ ಯಾರೂ ಬೇಡೆನಿಸಿತು.
ಒಂದು ತಿಂಗಳಿನಿಂದ ಮುಟ್ಟು ಬೇರೆ ಆಗಿರಲಿಲ್ಲ
ಹೆದರಿಕೆಯಿಂದ ಹೃದಯ ಕಂಪಿಸಿತು.
ತನ್ನವರೆನ್ನುವ ಒಂದು ಜೀವವೂ ಕಾಣದೆ ಹುಡುಗಿ ಕಂಗಾಲಾದಳು. ಎಲ್ಲರೆದುರಿಗೆ ಭಾವನನ್ನು ಮದುವೆಯಾಗಲಾಗುವುದಿಲ್ಲ ಎಂದು ಹೇಳಲು ಧೈರ್ಯ ಸಾಲಲಿಲ್ಲ. ಸಾವೊಂದೇ ಇದೆಲ್ಲಾವುದಕ್ಕೂ ಪರಿಹಾರ ಎಂದೆನಿಸಿತು
ಅಂದು ಹಿತ್ತಲಿನಲ್ಲಿದ್ದ ಬಾವಿಯೊಳಗೆ ಧುಮುಕಿಯೇ ಬಿಟ್ಟಳು. ಆಗಲೇ ಅವಳನ್ನು ಕಾಪಾಡಿದ್ದು ಸೋದರತ್ತೆಯ ಮೈದುನ ಚಂದ್ರ .
ಆಗಷ್ಟೆ ಪಟ್ಟಣದಿಂದ ಬಂದಿಳಿದಿದ್ದ ಚಂದ್ರನಿಗೆ ಅವಳ ವಿಷಯವೆಲ್ಲಾ ಗೊತ್ತಾಗಿದ್ದರೂ ಅವಳ ಮೇಲೇನೋ ಪ್ರೀತಿ .
ಮನೆಯವರೆಲ್ಲರ ವಿರೋಧದೊಂದಿಗೆ ಆ ಹುಡುಗಿಯನ್ನು ಮದುವೆಯಾದ. ಊರಿನ ಜನ ಬಹಿಷ್ಕಾರ ಹಾಕಿದರು. ಚಂದ್ರ ಸೊಪ್ಪು ಹಾಕಲಿಲ್ಲ
ಅದಾಗಿ ಎಂಟು ತಿಂಗಳಿಗೆ ಮಗನೊಬ್ಬ ಹುಟ್ಟಿದ. ಸಂತಸ ತುಂಬಿದ ಜೀವನ ಸಾಗುತ್ತಲೇ ಇತ್ತು . ಆ ಮಗು ಯಾರದ್ದೆಂಬ ಪ್ರಶ್ನೆಯೂ ಮೂಡಲಿಲ್ಲ ಅಲ್ಲಿ
ಆದರೆ ವಿಧಿಯ ಬರಹವೇ ಬೇರಿತ್ತು
-----------------
ಕಥೆ ಹೇಳುತ್ತಿದ್ದ ರಮಾ ಮುಂದೆ ಮಾತಾಡದೆ ಫೋಟೋವನ್ನೇ ದಿಟ್ಟಿಸಿದರು.
"ಅದು ಸರಿ ಅಮ್ಮಾ ಈ ಕಥೆ ನಂಗ್ಯಾಕೆ ಹೇಳ್ತಾ ಇದ್ದೀಯಾ? ಆಮೇಲೆನಾಯ್ತು?"
ಸುಧಾಕರ ಅಚ್ಚರಿಯಿಂದ ಪ್ರಶ್ನಿಸಿದ
ರಮಾರ ಕಂಗಳಿಂದ ನೀರು ಜಾರತೊಡಗಿತು
"ಆ ಹುಡುಗೀನೆ ನಿನ್ನ ಅಮ್ಮ ಕಣೋ". ಬಿಕ್ಕಳಿಸಿದರು
ಸುಧಾಕರ್ ಬೆಕ್ಕಸ ಬೆರಗಾದ
"ಅಮ್ಮ ಆಂದರೆ ನೀನು ?" ತಾಯಿಯನ್ನು ದಿಟ್ಟಿಸಿದ ಆ ನೋಟದಲ್ಲಿ ಸಾವಿರಾರು ಅರ್ಥಗಳು ತುಂಬಿದ್ದವು
"ಕಥೆ ಇನ್ನೂ ಮುಗಿದಿಲ್ಲಾ ಸುಧಾಕರ್"
ರಮಾ ಗಂಭೀರ ದನಿಯಲ್ಲಿ ನುಡಿದರು
ಸುಧಾಕರ ಮತ್ತೆ ಕಿವಿಯರಳಿಸಿದ
ರಮಾರ ಮಾತು ಮುಂದುವರೆಯಿತು