Friday, April 1, 2011

ಅಷ್ಟಕ್ಕೂ ಈ ಹಿರಿಯ ಜೀವಗಳು ನಮ್ಮನ್ನು ಕೇಳುವುದಾದರೂ ಏನು

ನೆನ್ನೆ ಬೆಳಗ್ಗೆ ಬನ್ನೇರುಘಟ್ಟದ ರಸ್ತೆಯಲ್ಲಿರುವ ಜ್ನಾನಾಶ್ರಮಕ್ಕೆ ಭೇಟಿ ನೀಡಿದ್ದೆ. ನಮ್ಮ ದೂರದ ನೆಂಟರೊಬ್ಬರು(ದೊಡ್ಡತ್ತೆ ಆಗಬೇಕು ವರಸೆಯಲ್ಲಿ) ಅಲ್ಲಿನ ವೃದ್ದಾಶ್ರಮದಲ್ಲಿ ಇದ್ದಾರೆ.
ಮಕ್ಕಳಿಲ್ಲದ ಅವರು ಜೀವನದ ಈ ಸಂಧ್ಯಾ ಕಾಲದಲ್ಲಿ ಒಡಹುಟ್ಟಿದ ಯಾರೊಡನೆಯೂ ಇರಲಾಗದೆ ಇಲ್ಲಿ ಬಂದು ಸೇರಿದ್ದಾರೆ. ಸುಮಾರು ಎಂಬತ್ತು ಜನ ವೃದ್ದರಿದ್ದಾರೆ ಅಲ್ಲಿ
ಅಲ್ಲಿ ಇಳಿಯುತ್ತಿದ್ದಂತೆ ಮೊತ್ತ ಮೊದಲು ನಾನು ಗಮನಿಸಿದ್ದು ಯಾರೋ ಬಂದರೆಂಬ ಸಂಬ್ರಮ ಅಲ್ಲಿನ ಎಲ್ಲಾ ಹಿರಿಯ ಜೀವಿಗಳ ಮೊಗದಲ್ಲಿ ಎದ್ದು ಕಾಣುತ್ತಿತ್ತು
ತಮ್ಮವರ್ಯಾರಾದರೂ ಬಂದರೇನೋ ಎಂದೂ ಇಣುಕಿ ನೋಡಿದವರೂ ಸಹಾ.
ಹಾಗೆಯೇ ನಮ್ಮ ದೂಡ್ಡತ್ತೆ ಇರುವ ರೂಮಿಗೆ ಬಂದೊಡನೆ ಸುತ್ತ ಮುತ್ತಲ್ಲಿದ್ದ ವೃದ್ದರೆಲ್ಲರೂ ಬಂದು ಸುತ್ತುವರೆದರು
ಯಾರು, ಏನು , ಎತ್ತ ಹೀಗೆ ಅನೇಕ ಪ್ರಶ್ನೆಗಳಿಗೆ ನಮ್ಮ ದೊಡ್ಡತ್ತೆ ಉತ್ತರಿಸುತ್ತಿದ್ದರು
ಎಲ್ಲಾ ಸೌಕರ್ಯಗಳಿದ್ದೂ ಆ ಹಿರಿಯ ಜೀವಿಗಳ ಮುಖದಲ್ಲಿದ್ದ ಏನೋ ಕೊರತೆ ನನ್ನನ್ನು ಕಾಡಿತು.
ಹಾಗೆ ಪಕ್ಕದ ರೂಮಿನ ವೃದ್ದ ದಂಪತಿಗಳನ್ನು ಮಾತನಾಡಿಸಿದೆ

ಇಂದಿನ ದಾವಂತ ಯುಗದಲ್ಲಿ ತಾವಿದ್ದರೆಮಕ್ಕಳಿಗೆ ತೊಂದರೆಯಾಗಬಹುದೆಂಬ ಯೋಚನೆಯಲ್ಲಿ ಈ ದಂಪತಿಗಳು ಇಲ್ಲಿ ಬಂದು ವಾಸವಾಗಿದ್ದಾರೆ. ಬಂದು ಮೂರು ವರ್ಷವಾಯಿತಂತೆ
ಸೇರಿಸಲೆಂದು ಬಂದು ಹೋದ ಮಗ ಇತ್ತ ಕಡೆ ತಲೆ ಹಾಕಿಲ್ಲವಂತೆ. ಇವರಿಗೆ ಪೆನ್ಶನ್ ಬರುವುದರಿಂದ ಹಣಕ್ಕೆ ಯಾವ ತೊಂದರೆಯೂಇಲ್ಲ
ಆದ್ರೆ ಅಷ್ಟು ಕಷ್ಟ ಪಟ್ಟು ಬೆಳಿಸಿದ ಮಗ ಬರಲಿಲ್ಲವಲ್ಲ ಎಂಬುದು ದೊಡ್ಡ ಕೊರತೆ.ಫೋನ್ ಮಾಡಿದರೆ ಬಿಸಿ ಇದ್ದೇನೆ ಆಮೇಲೆ ಮಾಡು ಅನ್ನುತ್ತಾನಂತೆ. ನಿಮಗೆ ಹಣ ಬೇಕಾದರೆ ಕಳಿಸುತ್ತೇನೆ ಎನ್ನುತ್ತಾನೆ.ನಮಗೆ ಬೇಕಿರುವುದು ಹಣವಲ್ಲ ಅವನ ಕಾಳಜಿ ಎಂದು ಅತ್ತುಕೊಂಡರು.
ಅವರ ರೂಮಿನಪಕ್ಕದಲ್ಲಿಯೇ ಮತ್ತೊಂದು ರೂಮಿನಲ್ಲಿನ ವೃದ್ದೆ ಯಾರೊಂದಿಗೂ ಮಾತನಾಡುವುದಿಲ್ಲ.ಇವರೇ ಹೇಳಿದರು.
ಗಂಡ ಸತ್ತು ಹೋದನಂತರ ಮಗಳನ್ನು ತುಂಬಾ ಕಕ್ಕುಲಾತಿಯಿಂದ ಬೆಳೆಸಿದರಂತೆ. ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದ್ದಾರಂತೆ. ಕೊನೆಗೆ ಮಗಳು ಇಲ್ಲಿ ಬಿಟ್ಟು ಹೋದಳಂತೆ.ಹಣಕ್ಕೆ ತೊಂದರೆ ಆದರೂ ಹೇಗೋ ನಡೆಸುತ್ತಿದ್ದಾರೆ
ಮೂರು ಜನ ಗಂಡು ಮಕ್ಕಳಿದ್ದೂ ವಿಧುರ ತಂದೆಯನ್ನು ನೋಡಿಕೊಳ್ಳಲಾಗದೆ ಇಲ್ಲಿ ಬಿಟ್ಟು ಹೋದವರು.
ಅಪ್ಪನನ್ನು ಹೊರೆ ಎಂದು ಜರೆದವರು.ಒಂದೇ ಎರೇಡೆ ಎಷ್ಟೊಂದು ಕಥೆಗಳು


ಜೀವಕ್ಕೆ ಜೀವ ಕೊಟ್ಟು ಬೆಳೆಸುತ್ತೇವೆ. ಆದರೆ ಕೊನೆಗೆ ಸಾಯುವಾಗ ಜೀವಕ್ಕೆ ಒಂದು ತೊಟ್ಟೂ ನೀರು ಕೊಡುವುದಿಲ್ಲ ಎಂದ ಆ ಹಿರಿಯ ತಾಯಿಯ ನುಡಿ ಇನ್ನೂ ಕಿವಿಯಲ್ಲಿಯೇ ಹಾಗೆಯೇ ಇದೆ

ನಮ್ಮ ಕೈ ಕಾಲು ಚೆನ್ನಾಗಿ ಆಡುವ ತನಕ ಮಕ್ಕಳು , ನಂತರ ಯಾರೋ ಬೇರೆಯವರು ಎಂದರು ಮತ್ತೊಬ್ಬರು


ಎಲ್ಲಕ್ಕೂ ಆಘಾತವಾದ ವಿಷಯಗಳೆಂದರೆ ಮೇಲೆ ನೋಡಿದವರ ಮಕ್ಕಳೆಲ್ಲರೂ ಒಳ್ಳೆಯ ಹುದ್ದೆಯಲ್ಲಿರುವವರು, ಮಗ ಸೊಸೆ, ಮಗಳು ಅಳಿಯ
ಎಲ್ಲರೂ ದುಡಿಯುವವರೇ.
ಹಾಗೂ ಮತ್ತೊಂದು ಅರಿವಾದುದು ಈ ತಂದೆತಾಯಿಗಳು ಅವರ ಮೊಮ್ಮಕ್ಕಳನು ನೋಡಿಕೊಂಡು ಮನೆ ವಾರ್ತೆ ಗಮನಿಸಿಕೊಂಡು ಇದ್ದಷ್ಟೂ ದಿನವೂ ಅವರಿಗೆ ಅವರವರ ಮಕ್ಕಳ ಮನೆಯಲ್ಲಿ ಸ್ಥಾನ ಸಿಕ್ಕಿದೆ. ಯಾವುದೋ ಅಪಘಾತಕ್ಕೆ ಸಿಲುಕಿ, ಅಥವ ಅನಾರೋಗ್ಯಕ್ಕೆ ಸಿಲುಕಿ ಹಾಸಿಗೆ ಹಿಡಿದ ಮೇಲೆ ಹೆತ್ತವರೇ ಹೊರೆಯಾಗಿದ್ದಾರೆ. ನಂತರ ಅವರ ಸ್ಥಾನ ಇಲ್ಲಿಗೆ ಬಂದಿದೆ.


ಏಕೆ ಹೀಗೆ ಈ ಓಲ್ಡ್ ಏಜ್ ಹೋಮ್‍ಗಳು ಬಂದು ಯಾರಿಗೆ ಅನುಕೂಲ ಮಾಡಿಕೊಟ್ಟಿದೆ. ವೃದ್ದಾಶ್ರಮದಲ್ಲಿ ನೆಮ್ಮಧಿಯಾಗಿರುತ್ತೇವೆ ಎಂದುಕೊಳ್ಳುವ ಮಾತು ನಿಜಕ್ಕೂ ಸುಳ್ಳು . ಹೆತ್ತ ಮಕ್ಕಳನ್ನು ಜವಾಬ್ದಾರಿ ಮುಕ್ತರನ್ನಾಗಿ ಮಾಡುತ್ತದೆ ನಿಜ ಆದರೆ ಆ ಮಕ್ಕಳ ಪ್ರೀತಿ ಕೊಡಲಾಗುತ್ತದೆಯೇ ಇವುಗಳಿಂದ?
ಅಲ್ಲಿ ಇರುವವರಾದರೂ ನೆಮ್ಮದಿ ಇಂದ ಇದ್ದಾರೆಯೇ?

ಸದಾ ತಮ್ಮವರ್ಯಾರಾದರೋ ಬರುತ್ತಾರೇನೋ ಎಂಬ ನಿರೀಕ್ಶೆ. ಹೆತ್ತ ಮಗ ಮಗಳನ್ನು ಬಿಟ್ಟಿರಬೇಕಾದ ಪರಿಸ್ಥಿತಿ
ನಿಮಿಷ ನಿಮಿಷಕ್ಕೂ ಕಾಡುವ ನೆನಪುಗಳು, , ತಮ್ಮವರಿಂದಲೇ ದೂರಿಕರಿಸಿಕೊಂಡ ನೋವು ಸದಾ ಹಿಂಸಿಸುತ್ತವೆ.

ಅಷ್ಟಕ್ಕೂ ಈ ಹಿರಿಯ ಜೀವಗಳು ನಮ್ಮನ್ನು ಕೇಳುವುದಾದರೂ ಏನು
ಒಂದೆರೆಡು ಹೊತ್ತು ಊಟ, ಪ್ರೀತಿ, ಕೊಂಚ ಕಾಳಜಿ, ವಯೋ ಸಹಜ ಸಿಟ್ಟಿನ ಮಾತುಗಳಿಗೆ ಸಮಾಧಾನದ ಉತ್ತರ
ಇಷ್ಟನ್ನೂ ಕೊಡಲಾರದಷ್ಟೂ ಜಿಪುಣರಾಗುತ್ತಿದ್ದಾರೆಯೇ ಇಂದಿನ ಮಕ್ಕಳುಗಳು.

ನಾನು ಅಲ್ಲಿಗೆ ಭೇಟಿ ಕೊಟ್ಟ ಸಮಯದಲ್ಲಿ ಗಮನಿಸಿದ ಮತ್ತೊಂದು ಅಂಶವೆಂದರೆ ನನ್ನನ್ನು ಪ್ರೀತಿಯಿಂದ ಮಾತನಾಡಿಸಿದ್ದು. ಯಾವುದೋ ಕಾಲದಿಂದ ಪರಿಚಯವಿರುವಂತೆ ಮಾತನಾಡಿದರು. ಅವರುಗಳ ಕಣ್ಣಲ್ಲಿ ಏನೋ ಸಮಾಧಾನ. ಒಂದು ರೀತಿಯ ಆನಂದ. ಕೆಲವೆರೆಡು ಹಿರಿಯರು ನನಗೆ ಅರಿಶಿನ ಕುಂಕುಮವನ್ನೂ ಕೊಟ್ಟರು.
ನನಗಂತೂ ಕಣ್ಣಲ್ಲಿ ನೀರು ಬಂತು

ಇಂತಹ ಸಮಯದಲ್ಲಿ ಅವರಿಗೆ ನಮ್ಮಿಂದ ಏನಾದರೂ ಸಂತೋಷ ಕೊಡಲಿಕ್ಕಾಗುತ್ತದೆಯೇ ಎಂದು ಯೋಚಿಸಿದೆ
ಆಗಲೇ ನಮ್ಮ ಮಗಳ ಹುಟ್ಟು ಹಬ್ಬ ಹಾಗು ಮತ್ತೊಂದು ಯಾವುದಾದರೂ ಹಬ್ಬವನ್ನು ಅವರೊಂದಿಗೆ ಆಚರಿಸಿದರೆ ಆ ಹಿರಿಯಮನಸುಗಳಿಗೆ ಆನಂದವಾದರೂ ಆದೀತು ಎಂದನಿಸಿತು. ಅದನ್ನು ಕಾರ್ಯಗತಗೊಳಿಸಬೇಕಷ್ಟೆ.ಇಂತಹ ಪರಿಸ್ಥಿತಿ ನಮಗೆ ಬರಬಾರದೆಂದರೆ, ನಮ್ಮ ಹಿರಿಯರನ್ನು ನಮ್ಮ ಮಕ್ಕಳ ಮುಂದೆ ಹೀಗಳೆಯಬಾರದು, ಸಾಧ್ಯವಿದ್ದಷ್ಟೂ ಸಂತೋಷವನ್ನು ಕೊಡಬೇಕೆ ಹೊರತು ನೋವನ್ನು ಹಂಚಬಾರದು.
ಹೌದು ಕೆಲಸದ ಒತ್ತಡವಂತೂ ಇದ್ದೇ ಇರುತ್ತದೆ. ಆದರೆ ಅದನ್ನು ಮೀರಿದ ಒತ್ತಡವಿದ್ದಾಗಲೂ ನಮ್ಮನ್ನು ಪ್ರೀತಿಯಿಂದ ನೋಡಿಕೊಂಡವರಲ್ಲವೇ ಅವರು. ಅವರು ನಮಗೆ ಕೊಟ್ಟ ಪ್ರೀತಿಯ ಒಂದಂಶವನ್ನಾದರೂನಾವು ಕೊಡಬೇಕು.ನಾವು ಬಿತ್ತಿದಂತೆ ಬೆಳೆ ಎಂಬುದನ್ನುನೆನಪಿಟ್ಟು ಕೊಂಡರೆ ಓಲ್ಡ್ ಏಜ್ ಹೋಮ್‌ಗಳ ಸಂಖ್ಸ್ಯೆ ಕಡಿಮೆ ಆಗಬಹುದು
ಏನಿದ್ದರೂ ಅವರ ವರ್ತಮಾನ ನಮ್ಮಭವಿಷ್ಯವಾಗಬಾರದಷ್ಟೇ?