Saturday, November 24, 2012

ಮೀರಾ


ಮದುವೆ ಮೆರವಣಿಗೆ ಜೋರಾಗಿ ನಡೆಯುತ್ತಿತ್ತು.
ಅರಮನೆಯ ಪುಟ್ಟ ಬಾಲೆ ಮೀರಾ ಅಂತ: ಪುರದ ಸಖಿ ವೀಣಾಳನ್ನ ಕೇಳಿದಳು . "ಇದು ಏನು?" " ಅದು ಮದುವೆ"
"ಮದುವೆ ಅಂದ್ರೆ ಏನು?"
"ಒಬ್ಬ ವರನಿಗೆ ಒಬ್ಬ ವಧು ಜೊತೆಯಾಗಿ ಜೀವನ ಪೂರ್ತಿ ಇರೋದು. "
"ಅದು ಎಲ್ಲರೂ ಮಾಡಿಕೊಳ್ಳೋದು. ನೀನು ಸಹಾ" ಅವಳ ಪುಟ್ಟ ಕೆನ್ನೆ ಹಿಂಡಿ ನುಡಿದಳು
" ನನ್ನ ವರ ಯಾರು" ಮುದ್ದು ಮೊಗವನ್ನು ಇನ್ನೂ ಮುದ್ದಾಗಿ ಮಾಡಿಕೊಳ್ಳುತ್ತಾ ಕೇಳಿದಳು
ವೀಣಾಗೆ ಪೇಚಾಟಕಿಟ್ಟುಕೊಂಡಿತು
ತಾನೆ ಉಡುಗೊರೆಯಾಗಿ ನೀಡಿದ್ದ ಕೃಷ್ಣನ ವಿಗ್ರಹವೊಂದನ್ನು  ತೋರಿಸಿ "ಇವನೇ ನಿನ್ನ ಗಂಡ" ಎಂದು ನುಡಿದಳು
ಆ ವಿಗ್ರಹ ಮೀರಾ ಮನಸಲ್ಲಿ ನಿಂತು ಬಿಟ್ಟಿತು. ಯಾವುದೋ ಜನ್ಮ ಜನ್ಮಾಂತರದ ನಂಟಿನಂತೆ ಭಾಸವಾಗಿ. ಆಕೆ ಅವನನ್ನ ಆರಾಧಿಸಲು ಶುರು ಮಾಡಿದಳು
ಮುಂದೆ  ಮೀರಾಳ ತಾಯಿ ಮೃತ್ಯು ಹೊಂದಿದಳು ಮೀರಾಗೆ ಐದಾರು ವರ್ಷವಿರಬೇಕು. ಇತ್ತ ಮೀರಾ ತಂದೆ ರತನ್ ಸಿಂಗ್ ರಾಜಾಸ್ಥಾನದ ಮೇರತ್‍ನ ದೊರೆ , ರಾಜಕಾರ್ಯಗಳಲ್ಲಿ ತೊಡಗಿದ, ಆದರೆ ಕೃಷ್ಣನ ಆರಾದನೆಯಲ್ಲಿ ತೊಡಗಿದ ಮೀರಾಗೆ ತಾನೆಂದೂ ಒಂಟಿ ಎಂದನಿಸಲಿಲ್ಲ.
ಅಲ್ಲಿಂದ  ತಾತನ ಮನೆಯಲ್ಲಿ ಬೆಳೆಯಲಾರಂಭಿಸಿದಳು ಮೀರ, ಕೃಷ್ಣನ ವಿಗ್ರಹಕ್ಕೆ ಸ್ನಾನ , ಅಲಂಕಾರ, ಅದರ ಜೊತೆಯಲ್ಲಿಯೇ ನಿದಿರೆ ಹೀಗೆ ಅವಳ ದಿನಚರಿ ಸಾಗುತ್ತಿತ್ತು.
ಹೀಗೆ ಬೆಳೆದು ವಯಸ್ಕಳಾದ ಮೇಲೆ ಒಮ್ಮೆ ಒಂದು ರಾತ್ರಿ ಕೃಷ್ಣನ ಜೊತೆಯಲ್ಲಿ ಮದುವೆಯಾದಂತೆ ಕನಸು ಕಂಡಳು
(ಇನ್ನೂ ಇದೆ...)

ಲಲಿತಾ-ಮೀರಾ


ಆ ಬಾಲೆ ಚಿಕ್ಕ ವಯಸಿಗೇ ಮದುವೆಯಾಗಿ ಬೃಂದಾವನಕ್ಕೆ ಬಂದಿದ್ದಳು, ಗೆಳತಿಯರೆಲ್ಲಾ ಹೇಳಿದ್ದರು. "
"ಹೇ ಲಲಿತಾ ಅಲ್ಲಿ ಒಬ್ಬ ಮುದ್ದು ಮುದ್ದು ನೀಲಿ ಹುಡುಗ ಇದ್ದಾನೆ. ಅವನಿಗೆ ಮನ ಸೋಲಬಹುದು ಹುಶಾರು"
ಲಲಿತಾ ನಕ್ಕಿದ್ದಳು
’ ಹೇ ಹೋಗ್ರೇ. ನಾನು ಎಲ್ಲರಹಾಗಲ್ಲ"
ಹಾಗೂ ಹೀಗೂ ಆ ದಿನ ಬಂದೇ ಬಿಟ್ಟಿತು. ಗಾಡಿಯಲ್ಲಿ ಹತ್ತಿ ಗಂಡನ ಮನೆಯತ್ತ ಬರುತ್ತಿದ್ದಾಕೆಗೆ ಕಂಡದ್ದು ಬಿದ್ದು ಹೋದ ಮನೆಗಳು. ಜನರಿರದ ಬೀದಿಗಳು.
ಬಿರುಗಾಳಿಯಂತೆ ದೋ ಎಂದು ಸುರಿಯುತ್ತಿದ್ದ ಮಳೆ. ಒಂದು ಸಣ್ಣ ಜೀವಿಯೂ ಕಾಣಲಿಲ್ಲ, ಗಾಡಿ ಬಿಟ್ಟು ಗಾಡಿ ಹೊಡೆಯುವಾತ ಓಡಿ ಹೋದ. ಮಳೆಯಲ್ಲಿಯೇ ನೆನೆದುಕೊಂಡು ಗೊತ್ತಿರದ ಆ ಸ್ಥಳದಲ್ಲಿ ಅಲೆದಾಡುತಿದ್ದ ಆ ಕಿಶೋರಿಯ ಕಂಗಳಿಗೆ ಆ ದೃಶ್ಯ ಬಿತ್ತು.
ಕಡು ನೀಲಿ ಬಣ್ಣದ ಹುಡುಗ, ಕಪ್ಪುಕಂಗಳು, ತಲೆಯಲ್ಲಿ ನವಿಲುಗರಿ, ಹಳದಿ ಬಣ್ಣದ ಉಡುಗೆ ತೊಟ್ಟ, ಚಂದದ ಬಾಲಕ ಒಂದಿಡೀ ಪರ್ವತವನ್ನೇ ತನ್ನ ಕಿರುಬೆರಳಲ್ಲಿ  ಅನಾಯಾಸವಾಗಿ ಎತ್ತಿ  ಹಿಡಿದಿದ್ದಾನೆ.
ಅಷ್ಟೇ ಲಲಿತೆ ಸೋತು ಹೋದಳು..................... ಆ ಹುಡುಗನಿಗೆ, ಪ್ರೀತಿ ಉಕ್ಕಿಹರಿಯಿತು . ಆಗಲೆ ಅವಳ ಅರಿವಿಗೆ ಬಂದಿದ್ದು ಆ ಪರ್ವತದ ಕೆಳಗೆ  ಬೃಂದಾವನದ ಅಷ್ಟೂ ಜನ  ತಂಗಿದ್ದಾರೆ. ಆ ಪರ್ವತದ ಹೆಸರು ಗೋವರ್ಧನ ಗಿರಿ
ಆ ಹುಡುಗ ಗೋವರ್ಧನ ಗಿರಿಧಾರಿ ಎಂದಷ್ಟೇ ಅವಳ ಮನಸಿಗೆ ಬಂತು. ಅವನು ಜನ್ಮ ಜನ್ಮಾಂತರದ ಪ್ರೇಮಿ ಎಂದನಿಸಿಬಿಟ್ಟಿತು ಆಕೆಗೆ
 ಮೂಕಳಾಗಿ ಹೋದ ಲಲಿತೆಯನ್ನ   ಆ ನೀಲಿ ಹುಡುಗ ನೋಡಿ ಒಮ್ಮೆ ನಕ್ಕ, ಕಂಗಳಲ್ಲೇ ಬಾ ಎಂದು ಕರೆದ. ಆ ಕರೆಗೆ ಸ್ಪಂದಿಸುವ ಮುನ್ನವೇ ವಿಧಿ ಅವಳನ್ನ ತನ್ನ ಬಳಿ ಸಿಡಿಲಿನ ರೂಪದಲ್ಲಿ ಬಲಿಯಾಗಿ ಕರೆದುಕೊಂಡಿತು.
ಆದರೆ ಆ ಗೋವರ್ಧನ ಗಿರಿಧಾರಿಯನ್ನ ಮಾತ್ರ ಆಕೆ ಮರೆಯಲಿಲ್ಲ
ಆಕೆಯೇ ಮೀರಾ................... ಮೀರಾ ಬಾಯಿ

Thursday, November 15, 2012

ಮಿಲನ-


ಉಸಿರಿಗೆ ಉಸಿರು ಸೇರಿ
ಉಸಿರಿಗೂ ಉಸಿರು ಬಂತು
ದೇಹಕೆ ದೇಹ ನೇಹವೇ
ಪ್ರೇಮದಾತ್ಮಕೂ ಜೀವ ತಂತು

ತನುವಿನಣು ಅಣುವಿಗೂ ಕಾತುರ
ಅಣು ಅಣುವಿನ ಆಲಿಂಗನಕೆ
ಕಣಕಣದಲಿ ರೋಮಾಂಚನ
ರೋಮ ರೋಮದಾ ಸ್ಪರ್ಷಕೆ

ಅಧರಾಧರದ ಸಮರದಲಿ
ಗೆದ್ದವರಾರೋ ಸೋತವರಾರೋ
ನಯನಾಯನಗಳ ಬಂಧನದಿ
ಸೋಲು ಗೆಲುವುಗಳೇ ಬದಲಾದವೋ

ತೋಳುಗಳ ಬೆಸೆತದಿ ಆದವೆರೆಡೂ
ಎದೆಬಡಿತಗಳು  ಒಂದು
ಭೂ ಮಂಚದಿ ಒರಗಿದ ದೇಹಕೆ
ಬಲಿಷ್ಟ ತೋಳೇ ದಿಂಬು

 ಇಳೆಗೆ ಮಳೆಯಾದಂತಹ ಅನುಭವ
ಪುರುಷ  ಪ್ರಮಿಳಾ ಮಿಲನದಾ ಸಂಭ್ರಮ
ತನು ತನುವಿನ ಬೆಸೆತದಲ್ಲೂ ಅನುರಣ
ಜೀವವೊಂದಾಗುವ ಕ್ಷಣ ಅನುಪಮ

ಸೃಷ್ಟಿಗೋ, ಸುಖಕೋ , ಸವಿಗೋ
ಅನುಭವಕೋ ಇರಲಿ ಏನೆ ಕಾರಣ
ಸೃಷ್ಟಿ, ಸ್ಥಿತಿ ಲಯಗಳ ಕರ್ತರಿಗೊ
ಅನಿವಾರ್ಯದಾನಂದ ಈ ಮಿಲನ
 

ಸ್ವಗತ (ರಾಣಿ ಅಮೃತ ಮತಿ)


ಸಖಿ ಯಾರವನೆ ಈ ಗಂಧರ್ವಗಾನದೊಡೆಯ
ಮೊಗ ನೋಡದೇನೆ  ಮೆಚ್ಚಿದೆ ನಾ ದನಿಯ
ಹೇಗಿದ್ದರೇನು ಕದ್ದವನಾದ ಈ ಮನದಿನಿಯ

ಹೆಸರಿನಂತೆ ಅವನಿದ್ದರೂ ಅಷ್ಟಾವಕ್ರ
ಮಾರನ ಮೀರಿಸುವಾತ ನನಗೆ ಮಾತ್ರ
ಏನಾದರಾಗಲಿ ಈ ರೂಪು ಅವನಿಗೆ ಸ್ವಂತ

ಇದ್ದರೂ  ಸುರಸುಂದರ ಪತಿ ಚಂದ್ರಹಾಸ
ಮೊಗದ ಮೇಲೆ ಮಾಸದ   ಮಂದಹಾಸ
ನನಗೀ ವಕ್ರನೇ ಇಷ್ಟ ನೋಡಿದುವೇ ಪರಿಹಾಸ

ತಡವಾಗುತಿದೆ, ತಾರೆನ್ನ ಪರದೆಯ
ಹೊದ್ದು ಸೇರುವೆ ಬೆಚ್ಚಗೆ ಅವನೆದೆಯ
ಇಲ್ಲವಾದಲ್ಲಿ ಕೇಳಬೇಕಾದೀತು ಬೈಗುಳವ

ಏನು ಮಾಡಲೇ ಸಖಿ ಹೊಡೆದರೂ
ಅವನೆನಗೆ ಬಡಿದು ಬೈದು ಒದ್ದರೂ
ಇರಲಾರೆ ಕಣೆ ನಾ ಅವನ ಬಿಟ್ಟು
 
ಹೆಣ್ಣು ಮನಸಿದು ,  ಬರಿಯ ನದಿಯಿದು
ಮನಸಾದೆಡೆ ದಿಕ್ಕು ನೋಡದೆ ಹರಿವುದು
ಕೊಳಕು ಶುಭ್ರ ಬೇಧ ತೋರದು