Saturday, April 30, 2011

ಕನಸು- ನೆನಕೆಗಳು -------ನನಸುಗಳು- ವಾಸ್ತವ

ಆ ಕ್ಷಣದ ಕಾಯುವಿಕೆಯಲ್ಲೂ ಎಷ್ಟೊಂದು ಸಂತಸವಿದೆ ಅನ್ನಿಸಿತು.
ಹೌದು , ಆವತ್ತು ಅಮ್ಮನ ಬಳಿಯಲ್ಲಿ ತನ್ನ ಅವನ ಪ್ರೀತಿಯ ಬಗ್ಗೆ ಹೇಳಿದ್ದೇ ಬಂತು, ಸಿಡುಕು ಮೋರೆ ಹೊತ್ತು ಅಮ್ಮ ಅಪ್ಪನ ಕಿವಿ ಕಚ್ಚಿ ಅಪ್ಪ ತನ್ನನ್ನ ದುರುದುರು ನೋಡಿ, ಸ್ವಲ್ಪ ಹೊತ್ತಿನಲ್ಲಿಯೇ ಕಿರುನಗೆ ನಕ್ಕು
"ಹೋಗಲಿ ಬಿಡು ಅವಳೇನು ಬೇರೆಯವರನ್ನ ಪ್ರೀತಿಸಲಿಲ್ಲವಲ್ಲ. ಅವನೂ ನಮ್ಮ ಜಾತೀನೆ, ಜೊತೆಗೆ ಒಳ್ಳೆ ಕೆಲಸದಲ್ಲಿ ಇದ್ದಾನೆ, ನಮ್ಮಕೆಲಸ ಹಗುರ ಮಾಡಿದಳು ಬಿಡು "ಎಂದು ನುಡಿದಾಗ ಸ್ವರ್ಗಕ್ಕೆ ಮೂರೇ ಗೇಣು
ಅತ್ತ ಅವನೂ ಫೋನ್ ಮಾಡಿದ್ದ
"ಶೀತಲ್ ನಮ್ಮ ಮನೆಯಲ್ಲೂ ಒಪ್ಪಿದರು ಕಣೇ, ಇನ್ನು ಮುಂದೇ ಬರೀ ಕನಸುಗಳ ಜಾತ್ರೇ, ಆ ಜಾತ್ರೆಯ ದೇವಿ ನೀನೆ, ನಿನ್ನ ಹೊತ್ತ ಪೂಜಾರಿ ನಾನೇ ಅಲ್ಲ್ವವೇನೇ?"
ಅಲ್ಲಿಯವರೆಗೆ ಇರದ ನಾಚಿಕೆ ದ್ವನಿಯಲ್ಲಿ ಬಂದುಬಿಟ್ಟಿತ್ತು
"ಹೂ " ಎಂದಷ್ಟೇ ಉತ್ತರಿಸಿದ್ದೆ
"ಆಹಾಹ ಎಷ್ಟೊಂದು ನಾಚಿಕೆ ಬಂದು ಬಿಟ್ಟಿದೆ ನನ್ನರಗಿಳಿಗೆ"ಛೇಡಿಸಿದ್ದ

ಮಾತಾಡಿರಲಿಲ್ಲ.
ಕನಸಿನ ಕೋಟೆಯ ಬಾಗಿಲ ಕೀಲಿ ಕೊಟ್ಟಂತಾಗಿತ್ತು,
ಆ ಕೋಟೆಯಲ್ಲಿ ನಾನು ಅವನು , ಅವನು ಮತ್ತೆ ನಾನು , ಕೇವಲ ನಾವಿಬ್ಬರೇ ಮತ್ತಾರಿಗೂ ಪ್ರವೇಶವಿಲ್ಲ.
ಅಂದಿನಿಂದ ಇಬ್ಬರ ಫೋನುಗಳಿಗೂ ಬಿಡುವಿರಲಿಲ್ಲ
ಘಂಟಾನುಗಟ್ಟಲೆ ಮಾತನಾಡುತ್ತಾ ಹರಟುತಿದ್ದರೆ
ಹೊತ್ತು ಹೋಗಿದ್ದೆ ತಿಳಿಯುತ್ತಿರಲಿಲ್ಲ

ಕಣ್ಣುಗಳ ತುಂಬ ಅವನದೇ ಬಿಂಬ , ಹೊಂಗನಸುಗಳು, ಅಮಲಿನಲ್ಲಿದ್ದಂತೆ ಭಾಸವಾಗುತ್ತಿತ್ತು. ಸವಿ ಸವಿ ಕ್ಷಣಗಳು ಸವಿ ಸವಿ ಕನವರಿಕೆಗಳು , ಮನಸು ಅವನ ಸ್ಪರ್ಷಕ್ಕೆ ಹಾತೊರೆಯತೊಡಗಿತ್ತು. ಮೈ ಮನಗಳಲ್ಲಿ ನವ ಚೇತನ ತುಂಬಿದಂತಾಗುತ್ತಿತ್ತು.
ಎಷ್ಟೋ ರಾತ್ರಿ ಕನಸುಗಳಲ್ಲಿ ಏನೇನೋ ಆಗತೊಡಗಿ ಒಂದು ಕ್ಷಣ ಕಂಪನ, ಜೊತೆಗೇ ಆ ಸಂತಸವನ್ನು ಮನಸಾರೆ ಸವಿಯುತ್ತಿದ್ದೆ
ಯಾವಾಗಲಾದರೂ ಅವನು "ಸೌಮ್ಯ ಏನೇ ನಾನು ನಿನ್ನಕನಸಲ್ಲಿ ಬರ್ತೀನೇನೆ,"ಎಂದಾಗ " ಹೂ" ಎನ್ನುತ್ತಿದ್ದೆನಾದರೂ "ಬಂದು ಏನು ಮಾಡ್ತೀನಿ " ಎಂದು ನಗುತ್ತಾ ಕೇಳುತ್ತಿದ್ದಾಗ ಒಮ್ಮೆಲೇ ಗಾಭರಿಯಾಗಿ
"ಏನಿಲ್ಲ ಹೀಗೆ ಬಂದು ಹೋಗ್ತೀರಾ " ಎಂದಂದು ಮುಖ ಮುಚ್ಚಿಕೊಳ್ಳುತ್ತಿದ್ದೆ ಎಲ್ಲಿ ತನ್ನ ಭಾವನೆಗಳು ಅವನಿಗೆ ಗೊತ್ತಾಗುತ್ತದೆ ಎಂದು......
"ಏಯ್ ಕಳ್ಳಿ............" ಎಂದಾಗಂತೂ ಆಗಸವನ್ನೇ ಸೆರಗಾಗಿ ಮಾಡಿಕೊಂಡು ಓಡುವಂತೆ ಆಗುತ್ತಿತ್ತು
ಒಟ್ಟಿನಲ್ಲಿ ಅವನೇ ಮನದ ತುಂಬಾ, ಕಣ್ನ ತುಂಬಾ , ಸಿಂಗಾರಗೊಳ್ಳುವುದೂ ಅವನಿಗಾಗಿಯೇ ಅಂತನಿಸುತ್ತಿತ್ತು.

ನನ್ನೀ ರೂಪ ಅವನ ಕಣ್ಣಿಗ್ ಬಿದ್ದರೇ ಸಾಕು ಎಂದನಿಸುತ್ತಿತ್ತು.

" ಸೌಮ್ಯ ನಾಳೇ ಸಿನಿಮಾಗೆ ಹೋಗೋಣ ಬರ್ತೀಯಾ" ಎಂದು ಕೇಳಿದ್ದ ಆತ ಆವತ್ತು . ಹೂ ಎನ್ನಬೇಕನ್ನಿಸಿದರೂ ಹೇಳಲಾಗಲಿಲ್ಲ
"ಊ ಹೂ " ಎಂದಂದು ನೆಲ ನೋಡಿದ್ದೆ..............
"ಸರಿ ಬಿಡು ಇನ್ನೇನು ಒಂದು ತಿಂಗಳು ಅಷ್ಟೇ ತಾನೆ. ಆಮೇಲೆ ಊಹೂ ಅನ್ನು ನೋಡೋಣ " ಎಂದಾಗ ಮತ್ತೊಮ್ಮೆ ಬಲವಂತ ಮಾಡಬಾರದೇ ಅನ್ನಿಸಿತು. ಆತ ಮಾಡಲಿಲ್ಲ......... ಮನಸಿನ ಮಾತು ಅರಿವಾಗುತ್ತದೆಯೇ ಅವನಿಗೆ ಇಲ್ಲಾ
ಆಗೊಮ್ಮೆ ಫೋನ್ ಮಾಡಿದಾಗ
"ಏನ್ಮಾಡ್ತಾ ಇದ್ದೀರಾ ಎಂದು ಕೇಳಿದ್ದೇ
ಅವನು " ನಮ್ಮ ಮಗನಿಗೆ ಮೆಡಿಕಲ್ ಸೀಟ್ ಸಿಗುತಾ ಇಲ್ಲವಾ ಅಂತ ಯೋಚಿಸುತ್ತಿದ್ದೆ" ಎಂದಾಗಂತೂ ಮನ ತುಂಬಿಬಂದಿತ್ತು
ಎಷ್ಟೊಂದು ಯೋಚನೆ ಮಾಡಿದಾನೆ ............ ಬಹಳ ಫ಼ಾರ್‌ವಾರ್ಡ್ ... ...........ಕಿರುನಗೆ ತಂತಾನೆ ಮೂಡಿ ಬಂದಿತ್ತು
ಮತ್ತೊಮ್ಮೆ ಫೋನ್ ಮಾಡಿದಾಗ

"ಡೋಂಟ್ ಡಿಸ್ಟರ್ಬ್ ಮಿ . ನಾನು ಮೂನಾರ್ನಲ್ಲಿ ಹನಿಮೂನ್ ಮೂಡ್ ನಲ್ಲಿದ್ದೇನೆ . ಬೇಕಿದ್ದರೆ ನೀನೂ ಬಾ " ಎಂದಿದ್ದ

ಅಂದೆಲ್ಲಾ ಎದೆ ಬಡಿತ ಜೋರಾಗಿತ್ತು. ಹನಿಮೂನಿನ ಚಿತ್ರಣ ಕಣ್ಣಲ್ಲಿ ಮೂಡುತ್ತಿತ್ತು......
ಚಿತ್ರಗಳಲ್ಲಿನ ಮೊದಲ ರಾತ್ರಿಗಳ ಸೀನನ್ನು ನೆನಪಿಸಿಕೊಳ್ಳುತ್ತಿದ್ದೆ.........
ಹಾಲು ತೆಗೆದುಕೊಂಡು ಹೋಗೋ ಪದ್ದತಿ ನಮ್ಮಲ್ಲು ಇದೆಯೇ ಅಂತ ಯೋಚಿಸುತ್ತಿದ್ದೆ.
ಅವನಿಗೆ ಏನೇನು ಇಷ್ಟ ಅದನ್ನೆಲ್ಲಾ ಪಟ್ಟಿ ಮಾಡಿಟ್ಟುಕೊಳ್ಳ್ತತೊಡಗಿದೆ, ಅಡುಗೆ ಮನೆಗೆ ಕಾಲಿಟ್ಟಿರದಿದ್ದ ನಾನು ಇತ್ತೀಚಿಗೆ ಅಡುಗೆ ಮನೆಯನ್ನೆ ಖಾಯಂ ಮಾಡಿಕೊಂಡು ಕೂರುತ್ತಿದ್ದೆ. ಹಾಗೂ ಹೀಗೂ ಒಂದಷ್ಟು ಅಡುಗೆಗಳನ್ನೂ ಕಲಿಯುತ್ತಿದ್ದೆ
ಎಂದೋ ಸಿನಿಮಾದಲ್ಲಿ ನೋಡಿದ್ದ ದೃಶ್ಯಗಳು ಮನಸಿಗೆ ಬಂದು ತೊಂದರೆ ಕೊಡಲಾರಂಭಿಸಿದ್ದವು
ಅಡುಗೆ ಮನೆಯಲ್ಲಿದ್ದಂತೆಯೇ ಹಿಂದಿನಿಂದ ಬಂದು ತಬ್ಬಿಕೊಳ್ಳುವ ಚಿತ್ರಗಳು ಮೂಡಿ ಮೈ ಬೆವೆತು ಹೋಗುತ್ತಿತ್ತು.ಕನಸಿನಲ್ಲಿಯೇ ತೇಲಿ ಹೋದಂತೆಯೇ,ನಗು ತಂತಾನೆ ಮೂಡುತ್ತಿತ್ತು. ಇಹದ ನೆನಪು ಮರೆಯಾಗುತ್ತಿತ್ತು,
ಅಮ್ಮ ಬೈಯ್ಯುತ್ತಿದ್ದರು
" ಏ ಮದುವೆ ಆದ ಮೇಲೆ ಇದ್ದೇ ಇದೆ. ನೆಟ್ಟಗೆ ಕೂತ್ಕೋಳ್ಳೇ"
ಗಡಿಬಿಡಿ ಇಂದ ಎದ್ದು ಕೂರುತ್ತಿದ್ದೆ
ಅಪ್ಪಿ ತಪ್ಪಿ ಅವನೇನಾದರೂ ಎದುರು ಬಂದರಂತೂ ಮುಗಿಯಿತು.
ಅತ್ತಲ್ಲಿಂದ ಮರೆಯಾಗಿ ಹೋಗುವಂತೆ ನಿಲ್ಲುತ್ತಿದ್ದರು ಅವನನ್ನೇ ನೋಡುತ್ತಿದ್ದೆ, ಅವನಿಗೆ ನಾನು ಕಾಣುತ್ತಿರಲಿಲ್ಲ, ಆದರೆ ಆತ ನನಗೆ ಕಾಣಿಸುತ್ತಿದ್ದ
ಆತನ ಕಣ್ಣೂ ನನ್ನನ್ನೇ ಹುಡುಕುತಿರುವುದು ಎಂದು ತಿಳಿಯುತ್ತಿದ್ದರೂ ಅವನ ಆ ಪಜೀತಿಯನ್ನ ನೋಡಿ ಮನಸಾರೆ ಆನಂದಿಸುತ್ತಿದ್ದೆ. ಆಮೇಲೆ ಅಯ್ಯೋ ಪಾಪ ಎಂದನಿಸಿ ಏನೋ ಹುಡುಕುವಂತೆ ಅವನಮುಂದೆ ನಿಲ್ಲುತ್ತಿದ್ದೆ.
ಕಣ್ಣಲ್ಲೇ ಮಾತನಾಡುತ್ತಿದ್ದ, ಸೂಪರ್ ಎನ್ನುತ್ತಿದ್ದ, ಆಕಣ್ಣುಗಳಲ್ಲಿನ ಸನ್ನೆಯ ಮುಂದೆ ಸೋತು ಹೋಗಿ....................
ಮತ್ತೆ ಎದೆ ಬಡಿತ ಹೆಚ್ಚಾಗಿ ಒಳಗೆ ಓಡಿಹೋಗುತ್ತಿದ್ದೆ
ಅಂದೊಮ್ಮೆ ಆತ ಮನೆಗೆ ಬಂದಿದ್ದಾಗ , ಮನೆಯಲ್ಲಿ ಯಾರೂ ಇರಲಿಲ್ಲ. ಗಬಕ್ಕನ್ನೇ ಬಳಿಗೆಳೆದುಕೊಂಡು ಚುಂಬಿಸಿದ್ದ . ಛೀ ಎಂಜಲು ಎಂದಾಗ ....ಮತ್ತೆ ಬಳಿಗೆಳೆದುಕೊಂಡಾಗ ಹೆದರಿ ಕೈ ಕೊಸರಿಕೊಂಡು ಹೊರಗೋಡಿಬಂದಿದ್ದೆ. ಎರೆಡು ಕ್ಷಣಗಳಾದ ಮೇಲೂ ಆತ ಹೊರಗಡೆ ಬರದಿದ್ದಾಗ ಮತ್ತೆ ಒಳಗೆ ಹೋದಾಗ..........
"ಸಾರಿ ಶೀತಲ್" ಎಂದಿದ್ದ ಆತನ ಕಣ್ಣುಗಳು ಆತನ ಕೆಳಗೆ ಬಾಗಿದ್ದವು. ಆ ಕಣ್ಣುಗಳನ್ನು ಚುಂಬಿಸುವ ಮನಸಾಗಿದ್ದರೂ ಸಹಾ ತೋರಗೊಡಲಿಲ್ಲ,........ಮತ್ತೊಮ್ಮೆ ಆ ಚುಂಬನದ ಸುಖಕ್ಕೆ ಮನಸ್ಸು ಹಾತೊರೆದರೂ ಮನಸು ಗಟ್ಟಿ ಮಾಡಿಕೊಂಡಿದ್ದೆ....
ಅಂದು ರಾತ್ರಿ ಎಲ್ಲಾ ಹೇಳಲಾಗದ ಸಂತೋಷದ ಕನಸುಗಳು, ರಂಗು ರಂಗಾದ ಕನಸಿಗೆ ಅವನೇ ರಾಜ ನಾನೇ ರಾಣಿ ಮತ್ತಾರೂ ಇಲ್ಲ ........................"""""""""""".ಏನೇನೋ ಆಸೆ ನೀತಂದ ಭಾಷೆ""""""""""""ಹಾಡುಗಳು ಒಂದೊಂದಾಗಿ ಕಾಡತೊಡಗಿದ್ದವು


ಈ ಎಲ್ಲಾ ಕನಸುಗಳ ಮಧ್ಯೆಯೇ ಎಂದೋ ಕೇಳುತ್ತಿದ್ದ ಅತ್ತೆ ಕಾಟ,ನಾದಿನಿಯರ ಜಗಳ ಎಲ್ಲವೂ ಕಣ್ಣ ಮುಂದೆ ಬಂದು ಭಯವೂ ಆಗುತ್ತಿತ್ತು
ಅಲ್ಲಿ ಹೋಗಿ ಅಲ್ಲಿನ ಆಚಾರ, ವಿಚಾರ ಕಲಿಯಲಾಗುತ್ತದೆಯೇ ?
ಮೊದಲೇ ಒಬ್ಬಳೇ ಮಗಳೆಂದು ಪ್ರೀತಿಯಿಂದ ಬೆಳೆಸಿದ್ದ ಅಮ್ಮ ತನಗೆ ಏನನ್ನೂಹೇಳಿಕೊಟ್ಟಿರಲಿಲ್ಲ
ಅಥವ ಅವನಿಗೆ ಹೇಳಿಬಿಡಲೇ ಬೇರೆ ಮನೆ ಮಾಡಿಕೊಂಡುಬಿಡೋಣ ಅಂತಾ ಎಂಬ ಯೋಚನೆಗಳೂ ಬರುತ್ತಿದ್ದವು
ಆದರೆ ಈಗಲೆ ಹೇಳಿಬಿಟ್ಟರೆ ಅವನಿಗೆ ತನ್ನ ಮೇಲೆ ಯಾವ ಭಾವನೆ ಬರುತ್ಟೋ ಬೇಡ ...........

ಮತ್ತೆ ಅವರ ಅಮ್ಮನಿಗೆ ನಾನು ಹಿಡಿಸಿದ್ದೀನೋ ಏನೋ...................ಮೊದಲೆ ಮಗ ಮೆಚ್ಚಿದವಳು..........ಏನಾದರೂ ಬ್ದೈದರೇ.......... ಏನಾದರೂ ಅನ್ನಲಿ ಇವನಿಗಾಗಿಹೊಂದಿಕೊಂಡು ಹೋಗಿಬಿಡುವುದು ಅಷ್ಟೇ..............

ಆಗಾಗ ಅಮ್ಮ ಅಪ್ಪನನ್ನ ಬಿಟ್ಟಿರಬೇಕಾದ ಸಂಕಟ ನೆನಪಿಗೆ ಬಂದುಕಣ್ನ್ಲಲ್ಲಿ ನೀರು ಬರುತ್ತಿತ್ತು
ಅಪ್ಪ ಅಮ್ಮನ್ನ ಇಲ್ಲಿಯವರೆಗೆ ಬಿಟ್ಟಿದ್ದೇ ಇಲ್ಲ.
ಹೇಗೆ ಬಿಟ್ಟಿರಲಿ ಇವರನ್ನ , ಇರಲಾಗುತ್ತದೆಯೇ ನನಗೆ, ಒಮ್ಮೊಮ್ಮೆ ಅಳುತ್ತಿದ್ದೆ ಒಬ್ಬಳೇ ಕೂತಾಗ. ಆಗೇನಾದರೂ ಅಮ್ಮ ನೋಡಿದಾಗ ಅಮ್ಮನೂ ಕಣ್ಣೊರೆಸಿಕೊಳ್ಳುತ್ತಿದ್ದರು.

ಅವನಾದರೂ ಒಮ್ಮೆಯೂ ನಿಂಗೆ ಬೇಜಾರಾಗ್ತಾ ಇದ್ದೀಯಾ ಎಂದು ಕೇಳಿರಲಿಲ್ಲ
ಅವನ ಬಳಿ ನಾನು ನಿರೀಕ್ಶಿಸಿದ್ದ ಒಂದು ಮಾತು ಅವನಿಗೆ ತಿಳಿಯಲಿಲ್ಲ
"...............ನಾನು ನಿನಗೆ ತಂದೆ ತಾಯಿ ಆಗಿ ಕಾಯುತ್ತೇನೆ" ಎಂಬ ಮಾತದು
ಬರಲೇ ಇಲ್ಲ ಅವನಿಂದ
ಅಥವ ಅವನಿಗೆ ಹೇಗೆ ತಿಳಿಯುತ್ತದೆ
ಹೆಣ್ಣಿನ ಮನಸಿನಮಾತು ಎಂದಂದುಕೊಂಡು ಸಮಾಧಾನಗೊಳ್ಳುತ್ತಿದ್ದೆ

ಅಂತೂ ಇಂತೂ ಆ ಕನಸಿನ ದಿನ ಬಂದೇ ಬಿಟ್ಟಿತ್ತು

ಮದುವೆಯಾಯ್ತು
ಮತ್ತೆಲ್ಲಾ ಬೇರಾವುದೋ ಕನಸಿನಂತೆ . ನಡೆಯತೊಡಗಿತು
....................
"ಏ ಹುಳಿಗೆ ಉಪ್ಪು ಸರಿಯಾಗಿ ಹಾಕು ಅಂತ ಎಷ್ಟು ಸಲಾ ಹೇಳಿಲ್ಲಾ . ಮದುವೆಯಾಗಿ ಒಂದು ಮಗುವಿನ ತಾಯಾದರೂ ಬುದ್ದಿ ಬಂದಿಲ್ಲ " ಎಂದು ಬೈಯ್ಯುತ್ತಿದ್ದ ಆ ನನ್ನ ರಾಜ
ನೆನಪಿನ ಅರಮನೆಯಿಂದ ವಾಸ್ತವಕ್ಕೆ ಬಂದೆ
"ಹೌದೌದು ಒಲ್ಲದ ಗಂಡನಿಗೆ ಮೊಸರಲ್ಲೂಕಲ್ಲು ಅಂತ ನಿಮಗೆ :" ನಾನೂ ಕಿರುಚಿದೆ..... ನನ್ನೆಲ್ಲಾ ಕನಸೂಗಳೂ ಬೇರಾವುದೋ ರೂಪ ಧರಿಸಿ ಒಮ್ಮೆ ದಹಿಸಿ, ಒಮ್ಮೆ ಪ್ರೀತಿಸಿ. ಒಮ್ಮೆ ಅಪ್ಯಾಯ ಮಾನವಾಗಿ, ಮತ್ತೊಮ್ಮೆ ಬೇಸರವಾಗುವಂತೆ ನನಸಾಗಿ ಮೈದಾಳಿ ನನ್ನ ಮುಂದಿತ್ತು
ವಾಸ್ತವ ಬೇರೆಯೇ ಅಲ್ಲವೇ? ಎಂದಂದು ಕೊಂಡು ಮುಂದಿನ ಕೆಲಸಕ್ಕೆ ತಯಾರಾದೆ.Thursday, April 14, 2011

ಪ್ರೀತಿ ತ್ಯಾಗ ಗೆಳೆತನ

ಬೆಳಗ್ಗೆ ಬಂದಾಗಿನಿಂದ ಪ್ರಸನ್ನ ಕಾಣಿಸಿರಲಿಲ್ಲ .

ಆಫೀಸಿನ ಎಲ್ಲಾ ಕಡೆಯಲ್ಲೂ ಹುಡುಕಿದಾಗ ಆಫೀಸಿನ ಹಿಂದಿನ ಪಾರ್ಕನಲ್ಲಿ ನಿಂತಿದ್ದು ಕಾಣಿಸಿತು. ಮಾತಾಡಿಸೋಣ ಎಂದುಕೊಂಡು ಹೊರಟೇ ಬಿಟ್ಟೆ

ಎಲ್ಲೋ ನೋಡುತ್ತಿದ್ದರು . ನಾನು ಬಂದು ನಿಂತದ್ದೂ ಕಂಡಿರಲಿಲ್ಲ

"ಏನ್ರಿ ಪ್ರಸನ್ನ ಏನೋ ಬಹಳ ಗಹನವಾಗಿ ಯೋಚಿಸ್ತಾ ಇದ್ದೀರಲ್ಲಾ ಏನು ವಿಷ್ಯ?" ಮೆಲ್ಲಗೆ ಕೇಳಿದೆ

ಬೆಚ್ಚಿದರೆನಿಸುತ್ತದೆ. ಒಮ್ಮೆ ದಂಗಾಗಿ ಮತ್ತೆ ಉಸ್ಸೆಂದು ಉಸಿರೆಳೆದುಕೊಂಡರು.

"ಏನಿಲ್ಲಾ ಹೀಗೆ ಕತೆಗೆ ಮುಕ್ತಾಯ ಹೇಗೆ ಮಾಡೋಣ ಅಂತ ಯೋಚನೆ ಮಾಡ್ತಾಇದ್ದೇನೆ"

ಪ್ರಸನ್ನ ನಿಮ್ಮ ಕತೆಯ ನಾಯಕನಿಗೆ ನಾಯಕಿಯನ್ನೇನೋ ತೋರಿಸಿದಿರಿ . ಆದರೆ ಆ ನಾಯಕಿ ಈಗಾಗಲೇ ಮತ್ತೊಬ್ಬನ ಮಡದಿಯಾಗಿದ್ದಾಳೆ . ಆದರೆ ಆಕೆಯೇ ಈ ಕಥಾನಾಯಕ ಕಾಲೇಜಿನಲ್ಲಿದ್ದಾಗಿನಿಂದ ಪ್ರೀತಿಸುತ್ತಿದ್ದ ಹುಡುಗಿ. ಆದರೆ ಹುಡುಗ ಸಿರಿವಂತನಲ್ಲ ಅನ್ನುವ ಕಾರಣಕ್ಕೆ ಆತನನ್ನ ತಿರಸ್ಕರಿಸಿದ್ದಳು. ಈಗ ಆ ಕಥಾನಾಯಕ ಸಮಾಜದ ಗಣ್ಯ ವ್ಯಕ್ತಿ ಯಾಗಿದ್ದಾನೆ ಜೊತೆಗೆ ಹುಡುಗಿಯೂ ಇವನ ಜೊತೆ ಬರಲು ಒಪ್ಪಿದ್ದಾಳೆ . ಮತ್ತೇಕೆ ತಡ ಪ್ರೀತಿಯನ್ನು ಒಂದು ಮಾಡಿ.

"ಅಲ್ಲೇ ತೊಡಕಾಗಿರೋದು ಸುಂದರ್ .ನಾಯಕಿಯ ಗಂಡ ನಾಯಕನಿಗೆ ಗೆಳೆಯ . ಗೆಳೆಯನಿಗೆ ಮೋಸಮಾಡುವುದು ತಪ್ಪು ತಾನೇ?"

"ಪ್ರಸನ್ನ . ಎಲ್ಲಾ ಕತೆಗಳಲ್ಲೂ ಸಿನಿಮಾಗಳಲ್ಲೂ ನಾಯಕ ಗೆಳೆಯನಿಗೋಸ್ಕರ ಪ್ರೀತಿನ ತ್ಯಾಗ ಮಾಡ್ತಾನೆ . ಆದರೆ ಇಲ್ಲಿ ಕತೆಗೆ ಅದೇ ಟ್ವಿಸ್ಟ್ ಆಗಿರಲಿ. ಸಾಧ್ಯವಾದಲ್ಲಿ ಈ ನಾಯಕ ಗೆಳಯನಿಗೆ ಹೀಗೆ ಪತ್ರ ಬರೆದಿಟ್ಟು ಹೋಗಲಿ. "ಡಿಯರ್ ಗೆಳೆಯ

ಪ್ರೀತಿ ತ್ಯಾಗದ ಸ್ವರೂಪ ಅಂತಾರೆ ಹಾಗೆಯೇ ನನ್ನ ಪ್ರೀತಿಯಿಂದಲೂ ಒಂದು ತ್ಯಾಗವಾಯಿತು. ಅದು ನಿನ್ನ ಮಡದಿಯ ತ್ಯಾಗ ಆಕೆ ನನಗಾಗಿ ತನ್ನ ಗಂಡನನ್ನು ತ್ಯಾಗ ಮಾಡಿದ್ದಾಳೆ. ಗೆಳೆತನ ಪ್ರೀತಿ ಇವೆರೆಡರ ನಡುವಲ್ಲಿ ಯಾವುದನ್ನು ತ್ಯಾಗ ಮಾಡಲಿ ಎಂದು ಯೋಚಿಸಿದೆ ಬಹಳವೇ ಯೋಚಿಸಿದೆ ಕೊನೆಗೆ ಗೆಳೆತನವನ್ನ ತ್ಯಾಗ ಮಾಡಬಹುದು ಎಂದೆನಿಸಿತು. ಹಾಗಾಗಿ ಇನ್ನು ನನ್ನ ನಿನ್ನ ಭೇಟಿ ಸಾಧ್ಯವಿಲ್ಲ. ಹಾಗೆಯೇ ನಿನ್ನ ಮಡದಿಯ ಭೇಟಿಯೂ . ಬಹುಷ: ಕೋರ್ಟ್ನಲ್ಲಿ ಮಾತ್ರ ಅನ್ನಿಸುತ್ತದೆ ಬಾಯ್ ಬಾಯ್ ಗೆಳೆಯ"

"ಆದರೆ ಜನ ಒಪ್ತಾರ? . ಆ ಗೆಳೆಯನಿಗೆ ಆಘಾತವಾಗಲ್ವಾ? ಗೆಳೆತನಕ್ಕೆ ಯಾವ ಬೆಲೆಯೂ ಇಲ್ವಾ"

"ಪ್ರೀತಿ ಕುರುಡು . ಅದು ಯಾವುದನ್ನೂ ನೋಡೋದಿಲ್ಲ . ನೋಡಿದರೂ ಬೆಲೆ ಕೊಡೋದಿಲ್ಲ." ನಕ್ಕೆ

"ಆಯ್ತು ಸುಂದರ್ ಕತೆಗೆ ಒಂದು ವಿಭಿನ್ನ ಅಂತ್ಯ ಹೇಳಿದ್ದಕ್ಕಾಗಿ ಧನ್ಯವಾದ" ಪ್ರಸನ್ನ ನಕ್ಕರು. ಅವರ ಕಣ್ಣಲ್ಲಿ ಮಿಂಚು ಕಾಣಿಸುತ್ತಿದೆಯೇ?


ಎಲ್ಲೋ ಕತೆ ನಿಜವಾಗುತ್ತಿದೆಯೇ ಎಂದನಿಸುತ್ತಿತ್ತು. ಪ್ರಸನ್ನ ಅವರ ಕತೆಯ ಮುಂದಿನ ಭಾಗ ಪ್ರಿಂಟ್‌ಗೆ ಹೋಗಿತ್ತು.

ಮರುದಿನ


ಎಲ್ಲವನ್ನೂ ಜೊತೆಗೆ ಗಂಡನನ್ನೂ ತೊರೆದು ಬರಲು ಸಿದ್ದವಾಗಿದ್ದ ಮಂದಾಕಿನಿ ನನ್ನ ಪ್ರೇಯಸಿ ಪ್ರಸನ್ನರವರ ಮಡದಿಯಾಗಿದ್ದಾಕೆ ಏರ್ ಪೋರ್ಟಿನಲ್ಲಿ ನನಗಾಗಿ ಕಾದು ನಿಂತಿದ್ದಳು . ಅವಳನ್ನು ನೋಡಿದ ಕೂಡಲೆ ಪ್ರಸನ್ನರಿಗೆ ಆಗಲೇ ಸಿದ್ದ ಪಡಿಸಿಕೊಂಡಿದ್ದ ಮೆಸೇಜ್ ಕಳಿಸಿದೆ

"

ಡಿಯರ್ ಗೆಳೆಯ

ಪ್ರೀತಿ ತ್ಯಾಗದ ಸ್ವರೂಪ ಅಂತಾರೆ ಹಾಗೆಯೇ ನನ್ನ ಪ್ರೀತಿಯಿಂದಲೂ ಒಂದು ತ್ಯಾಗವಾಯಿತು. ಅದು ನಿನ್ನ ಮಡದಿಯ ತ್ಯಾಗ ಆಕೆ ನನಗಾಗಿ ತನ್ನ ಗಂಡನನ್ನು ತ್ಯಾಗ ಮಾಡಿದ್ದಾಳೆ. ಗೆಳೆತನ ಪ್ರೀತಿ ಇವೆರೆಡರ ನಡುವಲ್ಲಿ ಯಾವುದನ್ನು ತ್ಯಾಗ ಮಾಡಲಿ ಎಂದು ಯೋಚಿಸಿದೆ ಬಹಳವೇ ಯೋಚಿಸಿದೆ ಕೊನೆಗೆ ಗೆಳೆತನವನ್ನ ತ್ಯಾಗ ಮಾಡಬಹುದು ಎಂದೆನಿಸಿತು. ಹಾಗಾಗಿ ಇನ್ನು ನನ್ನ ನಿನ್ನ ಭೇಟಿ ಸಾಧ್ಯವಿಲ್ಲ. ಹಾಗೆಯೇ ನಿನ್ನ ಮಡದಿಯ ಭೇಟಿಯೂ . ಬಹುಷ: ಕೋರ್ಟ್ನಲ್ಲಿ ಮಾತ್ರ ಅನ್ನಿಸುತ್ತದೆ ಬಾಯ್ ಬಾಯ್ ಗೆಳೆಯ"

ಪ್ರಸನ್ನರಿಗಾಗಿರಬಹುದಾದ ಆಘಾತವನ್ನ ಊಹಿಸಿಕೊಳ್ಳಲಿಲ್ಲ . ಊಹಿಸಿಕೊಂಡರೂ ಪ್ರೀತಿ ಕುರುಡಲ್ಲವೇ? ಬೆಲೆಕೊಡಲಿಲ್ಲ. ಮಂದಾಕಿನಿಯ ಹೆಗಲಮೇಲೆ ಕೈಹಾಕಿ ಕರೆದೊಯ್ದೆ.


Tuesday, April 12, 2011

ನಟ್ಟಿರುಳೊಂದು ಅವಲೋಕನ

ನಡುರಾತ್ರಿಯಲ್ಲಿ ಎದ್ದು ಕೂತಿದ್ದೇನೆ. ಸುತ್ತಲೂ ನಿಶಬ್ದ ,. ಭಯವನ್ನ ಆ ಪಕ್ಕಕ್ಕಿಟ್ಟು ಒಬ್ಬಳೆ ಕೂತಿದ್ದೇನೆ.
ಹುಳವೊಂದು ಗೀ ಗೀ ಎಂದು ನೀನೊಬ್ಬಳೆ ಎಚ್ಚರವಾಗಿಲ್ಲ ನಾನೂ ನಿನ್ನೊಟ್ಟಿಗೆ ಇದ್ದೇನೆ ಕಿರುಚುತ್ತಿತ್ತು ನನ್ನ ಮೌನಕ್ಕೆ ತಡ ಮಾಡುತ್ತಿದ್ದ ಅದನ್ನು ಹೊಡೆದೋಡಿಸುವ ವ್ಯರ್ಥ ಪ್ರಯತ್ನ ನಡೆಯಿತು.

ಸ್ವಲ್ಪ ಸಮಯ ಅದನ್ನು ಹುಡುಕುವುದರಲ್ಲಿ ಕಳೆಯಿತು. ನನ್ನ ನೀನು ಗೆಲ್ಲಲಾರೆ ಎಂಬಂತೆ ಅದು ಕಿರುಚುತ್ತಲೇ ಇದೆ. ಇನ್ನೂ ಸಿಕ್ಕಿಲ್ಲ. ಮಂಚದಕೆಳಗೋ ಇಲ್ಲ ಎಲ್ಲೋ ಬೇರೆಡೆ ಸೇರಿಕೊಂಡು ನನ್ನನ್ನು ಆಟವಾಡಿಸುತ್ತಿದೆ.
ಸರಿ ಅದರ ಪಾಡಿಗೆ ಅದನ್ನು ಬಿಟ್ಟು ಮತ್ತೇನಾದರೂ ಮಾಡೋಣ ಎಂದು ಫೇಸ್‍ಬುಕ್‌ಗೆ ಬಂದೆ.ವಿಚಾರ ವಿನಿಮಯಿಸಿಕೊಳ್ಳಲು ಯಾವ ಫೆಂಡ್ಸ್ ಆನ್ಲೈನ್ ಇರಲಿಲ್ಲ.
ಸರಿ ಅಲ್ಲಿ ಒಂದು ಲೈನ್ ಬರೆದು ಕೊನೆಗೆ ಮೊರೆ ಹೊಕ್ಕಿದ್ದು ಬ್ಲಾಗ್ ಸ್ಪಾಟ್‍ಗೆ.
ಗಾಢ ಮೌನ, ಆಗಾಗ ಫ್ಯಾನ್ ತಿರುಗುತ್ತಿರುವ ಶಬ್ಚ, ಜ್ತೊತೆಗೆ ಹುಳದ ಹಾರಾಟ ಅದು ಬಿಟ್ಟರ ನನ್ನಮಗಳು ಆಗಾಗ ಅಮ್ಮ ಎಂದದ್ದು ಅಷ್ತೇ
ರಾತ್ರಿ ಎನ್ನುವುದು ಎಷ್ಟು ಅದ್ಭುತ ಅಲ್ಲವೇ . ಜಗತ್ತಿನ ಬಹಳಷ್ಟು ಸೃಷ್ಟಿಗಳು( ಜೀವ ಸೃಷ್ಟಿಯಿಂದ ಹಿಡಿದು ಕಾವ್ಯ ಕಥೆ, ಇನ್ನೂ ಏನೇನು ಇವೆಯೋ) ಆಗುವುದು ಈ ಹೊತ್ತಿನಲ್ಲಿಯೇ.ರಾತ್ರಿಗೆ ಮಾತ್ರ ಆ ಶಕ್ತಿ ಕೊಟ್ಟ್ಟವರಾರು
ಅಥವ ರಾತ್ರಿಯ ನೀರವತೆಗೆ ಈ ಶಕ್ತಿ ಇದೆಯೇ. ಒಂದು ವೇಳೆ ರಾತ್ರಿ ಹಗಲಾಗಿ ಹಗಲು ರಾತ್ರಿಯಾದರೆ ? ಹಗಲಿಗೆ ಇರುಳಿನ ಗರಿಗಳೆಲ್ಲಾ ಬರುತ್ತಿದ್ದವಲ್ಲವೇ.
ಹೇಗಿದ್ದರೂ ರಾತ್ರಿ ಎಂದೊಡನೆ ಒಂದು ರೀತಿಯ ಭಯ ನನಗೆ. ರೂಮಿನಿಂದ ಹಾಲಿಗೆ ಹೋಗುವಾಗಲೂ ಯಾರನ್ನಾದರೂ ಕರೆದುಕೊಂಡು ಹೋಗುವವಳು ನಾನು . ಆದರೂ ರಾತ್ರಿಯ ಈ ನಿಶ್ಯಬ್ದ ನನಗೆ ಇಷ್ಟ . ಒಂದು ರೀತಿಯಲ್ಲಿ ಎಷ್ಟೇ ಕಷ್ತವಾದರೂ ಇಷ್ತವಾಗುವ ನಲ್ಲನ ತರಹ
ಗಡಿಯಾರ ಸರಿಯಾಗಿ ಮೂರು ಘಂಟೆ ತೋರಿಸುತ್ತಿದೆ.
ಈಗಲಾದರೂ ಸ್ವಲ್ಪ ನನ್ನನ್ನ ನಾನು ಅರ್ಥ ಮಾಡಿಕೊಳ್ಳೋಣ ಎಂದುಕೊಂಡೆ;ಇದಕ್ಕಿಂತ ಬೇರೆ ಸಮಯ ಸಿಗುವುದಿಲ್ಲ. ಎಲ್ಲಾ ಮುಖವಾಡಗಳನ್ನು ಕಳಚಿಟ್ಟು ಒರಿಜಿನಲ್ ಮುಖ ನೋಡಿಕೊಳ್ಳೋಣ ಎಂದುಕೊಂಡೆ
ಊಹೂ ಆಗುತ್ತಾ ಇಲ್ಲ. ಮನಸು ಕಳಚಿಡಲು ಒಪ್ಪುತ್ತಿಲ್ಲ
ನಮಗೆ ನಾವು ಅರ್ಥವಾಗದ ಹೊರತು, ಬೇರೆಯವರು ನಮ್ಮನ್ನ ಹೇಗೆ ಅರ್ಥ ಮಾಡಿಕೊಂಡಾರು, ಹಾಗೆ ಬಯಸುವುದೂ ತಪ್ಪಲ್ಲವೆ?
ಆದರೆ ಈ ನಾನು ಎಂಬ ಪದ ಯಾವಾಗ ಹುಟ್ಟಿತೋ ಗೊತ್ತಿಲ್ಲ,
ಎಷ್ಟೆಷ್ಟು ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುತ್ತದೆ,
ಎಂತೆಂಥ ಜಗಳಗಳನ್ನು ತರುತ್ತದೆ
ನಲ್ಮೆಯ ನಲ್ಲ ನಲ್ಲೆಯರನ್ನ ’ನಾನು ’ ಬೇರೆ ಮಾಡುತ್ತದೆ
ಹೆತ್ತ ಕರುಳುಗಳು ಮರುಗುತ್ತವೆ.
ಕರುಳ ಸಂಬಂಧಗಳು ನಲುಗುತ್ತವೆ.
ಆತ್ಮೀಯ ಸ್ನೇಹ ಬಾಡುತ್ತದೆ
ಆದರೂ ಈ ’ನಾನು’ ಎಂಬುದನ್ನು ಯಾರೂ ದೂರ ಮಾಡುತ್ತಿಲ್ಲ
ಒಂದು ರೀತಿಯ ಸ್ಮೋಕಿಂಗ್ ಆಡಿಕ್ಷನ್ ಇದ್ದಹಾಗೆ, ಕೆಟ್ಟದು ಅಂತ ಗೊತ್ತಿದ್ದರೂ ಅದನ್ನೇ ನೆಚ್ಚಿಕೊಳ್ಳುವ ಸ್ಮೋಕರ್ ಥರ
ಅದಕ್ಕೆ ಇರಬೇಕು ಕನಕದಾಸರು "ನಾನು ಹೋದರೆ ಹೋಗಬಹುದು( ದೇವರ ಬಳಿ ಅನ್ಸುತ್ತೆ)"ಎಂದು ಹೇಳಿದ್ದರು.
ಆದರೂ ’ನಾನು’ ಹೋಗುತ್ತಿಲ್ಲವಲ್ಲ.
ಚಿಕ್ಕಂದಿನಲ್ಲಿ ಹರಿಕಥೆಯೊಂದನ್ನು ಕೇಳಿದ್ದ ನೆನಪು .
ಪ್ರಪಂಚದಲ್ಲಿ ಈ ನಾನು ಅನ್ನೋದು ಹೇಗೆ ಆಗಿದೆ ಅಂದ್ರೆ
ಆ ಕೆಲಸ ಮಾಡಿದವರಾರು: ನಾನು
ಲಾಭ ತಂದುಕೊಟ್ಟವರಾರು : ನಾನು
ಹೀಗೆ ಇನ್ನೂ ಅನೇಕ ಉದಾಹರಣೆಗಳನ್ನು ಕೊಡುತ್ತಾರೆ
ಆದರೆ ಮನುಷ್ಯ ನಾನಲ್ಲ ಎನ್ನುವುದು ಈ ಕಾರಣಗಳಿಗಾಗಿ
ಈ ದುಡ್ಡು ಕದ್ದವರಾರು ನಾನಲ್ಲ
ನಷ್ಗ್ತಾ ಮಾಡಿದವಾರ್ರಾರು :ನಾನಲ್ಲ
ಹೀಗೆ ಗೆಲುವಿಗೆ ನೂರಾರು ಅಪ್ಪಂದಿರು
ಸೋಲಿಗೆ ಒಬ್ಬಾನೊಬ್ಬನೂ ಇಲ್ಲ

ಇದಕ್ಕೆ ಕಾರಣ ಈ ನಾನು ’ಅಹಂ’
ಹಾಗಾಗಿಯೇ ನಮ್ಮ ಮನಸು ನಮ್ಮಲ್ಲಿನ ಹುಳುಕುಗಳನ್ನು ತೋರಿಸಲು ಹಿಂದೇಟು ಹಾಕುತ್ತದೆ . ಏಕೆಂದರೆ ಮನಸೇ ಈ ’ನಾನು’ ಗೆ ಕಾರಣ ಅಲ್ಲವೇ?
ಹಾಗಾಗಿ "ನಾನು" ನಿಜವಾಗಿ ಏನು ಎಂಬುದನ್ನು ತಿಳಿದರೂ ತಿಳಿಯದಂತೆ ನಟಿಸುತ್ತೇವೆ. ನಾನು ಹೋದಾಗಲೇ ನಮ್ಮನ್ನ ನಾವು ಅರ್ಥ ಮಾಡಿಕೊಳ್ಳಬಹುದು. ಆದರೆ ’ನಾನು’ ಹೋಗುವುದು ನಾವು ಹೋದಾಗಲೇ ಅದೇ ವಿಪರ್ಯಾಸ.
ಬದುಕೆಲ್ಲಾ ಸ್ವಾರ್ಥ, ಕೀರ್‍ತಿ ಅಹಂಕಾರ,ಜಂಬ್ಗ ಪ್ರತಿಷ್ಟೇ. ಲಾಭ ನಷ್ಟ ಲೆಕ್ಕಾಚಾರ ಇವೆಲ್ಲಾವುದರಲ್ಲಿಯೇ ಕಳೆದುಬಿಡುವ ನಾವು , ಏನು ಗಳಿಸಿದ್ದೇನು, ಕಳೆದುಕೊಂಡದ್ದೇನು ಎಂಬುದನ್ನು ಅವಲೋಕನ ಮಾಡುವ ಗೋಜಿಗೆ ಹೋಗುವುದಿಲ್ಲ
ಏಕೆಂದರೆ ಮನಸಿನ ಕನ್ನಡಿಗೆ ಹೆದರುವವರು ನಾವು.
ಅಯ್ಯೋ ಇದೇನು ಉಪದೇಶ ಮಾಡುತ್ತಿದ್ದಿನಲ್ಲ ನಾನು.
ಮೊದಲು ನಾನು ’ನಾನು’ ಬಿಟ್ಟೇನೆ?
ಛೆ ಇಲ್ಲ ಅದು ಹೇಗೆ ಸಾಧ್ಯ , ನನ್ನ ಅಸ್ಥಿತ್ವಾನೆ ’ನಾನು’. ಅದನ್ನು ಕಳೆದುಕೊಂಡು ಬದುಕಿದರೇನು ಫಲ.

ನಾನು "ನಾನು" ಅನ್ನು ಕಳೆದುಕೊಳ್ಳಲಾರೆ
ಏಕೆಂದರೆ ನಾನೂ ಒಬ್ಬ ಹುಲು ಮಾನವಳೇ ಅಲ್ಲವೇ?
ಸಾಕು ನಿದ್ದೆಗಣ್ಣಲ್ಲಿ ಬರೆದದ್ದಲ್ಲ. ಆದರೂ ನಿದ್ದೆ ಗಣ್ಣಾಗುವ ಮುನ್ನ ಮುಗಿಸಿಬಿಡೋಣ ಅಂತ
Friday, April 1, 2011

ಅಷ್ಟಕ್ಕೂ ಈ ಹಿರಿಯ ಜೀವಗಳು ನಮ್ಮನ್ನು ಕೇಳುವುದಾದರೂ ಏನು

ನೆನ್ನೆ ಬೆಳಗ್ಗೆ ಬನ್ನೇರುಘಟ್ಟದ ರಸ್ತೆಯಲ್ಲಿರುವ ಜ್ನಾನಾಶ್ರಮಕ್ಕೆ ಭೇಟಿ ನೀಡಿದ್ದೆ. ನಮ್ಮ ದೂರದ ನೆಂಟರೊಬ್ಬರು(ದೊಡ್ಡತ್ತೆ ಆಗಬೇಕು ವರಸೆಯಲ್ಲಿ) ಅಲ್ಲಿನ ವೃದ್ದಾಶ್ರಮದಲ್ಲಿ ಇದ್ದಾರೆ.
ಮಕ್ಕಳಿಲ್ಲದ ಅವರು ಜೀವನದ ಈ ಸಂಧ್ಯಾ ಕಾಲದಲ್ಲಿ ಒಡಹುಟ್ಟಿದ ಯಾರೊಡನೆಯೂ ಇರಲಾಗದೆ ಇಲ್ಲಿ ಬಂದು ಸೇರಿದ್ದಾರೆ. ಸುಮಾರು ಎಂಬತ್ತು ಜನ ವೃದ್ದರಿದ್ದಾರೆ ಅಲ್ಲಿ
ಅಲ್ಲಿ ಇಳಿಯುತ್ತಿದ್ದಂತೆ ಮೊತ್ತ ಮೊದಲು ನಾನು ಗಮನಿಸಿದ್ದು ಯಾರೋ ಬಂದರೆಂಬ ಸಂಬ್ರಮ ಅಲ್ಲಿನ ಎಲ್ಲಾ ಹಿರಿಯ ಜೀವಿಗಳ ಮೊಗದಲ್ಲಿ ಎದ್ದು ಕಾಣುತ್ತಿತ್ತು
ತಮ್ಮವರ್ಯಾರಾದರೂ ಬಂದರೇನೋ ಎಂದೂ ಇಣುಕಿ ನೋಡಿದವರೂ ಸಹಾ.
ಹಾಗೆಯೇ ನಮ್ಮ ದೂಡ್ಡತ್ತೆ ಇರುವ ರೂಮಿಗೆ ಬಂದೊಡನೆ ಸುತ್ತ ಮುತ್ತಲ್ಲಿದ್ದ ವೃದ್ದರೆಲ್ಲರೂ ಬಂದು ಸುತ್ತುವರೆದರು
ಯಾರು, ಏನು , ಎತ್ತ ಹೀಗೆ ಅನೇಕ ಪ್ರಶ್ನೆಗಳಿಗೆ ನಮ್ಮ ದೊಡ್ಡತ್ತೆ ಉತ್ತರಿಸುತ್ತಿದ್ದರು
ಎಲ್ಲಾ ಸೌಕರ್ಯಗಳಿದ್ದೂ ಆ ಹಿರಿಯ ಜೀವಿಗಳ ಮುಖದಲ್ಲಿದ್ದ ಏನೋ ಕೊರತೆ ನನ್ನನ್ನು ಕಾಡಿತು.
ಹಾಗೆ ಪಕ್ಕದ ರೂಮಿನ ವೃದ್ದ ದಂಪತಿಗಳನ್ನು ಮಾತನಾಡಿಸಿದೆ

ಇಂದಿನ ದಾವಂತ ಯುಗದಲ್ಲಿ ತಾವಿದ್ದರೆಮಕ್ಕಳಿಗೆ ತೊಂದರೆಯಾಗಬಹುದೆಂಬ ಯೋಚನೆಯಲ್ಲಿ ಈ ದಂಪತಿಗಳು ಇಲ್ಲಿ ಬಂದು ವಾಸವಾಗಿದ್ದಾರೆ. ಬಂದು ಮೂರು ವರ್ಷವಾಯಿತಂತೆ
ಸೇರಿಸಲೆಂದು ಬಂದು ಹೋದ ಮಗ ಇತ್ತ ಕಡೆ ತಲೆ ಹಾಕಿಲ್ಲವಂತೆ. ಇವರಿಗೆ ಪೆನ್ಶನ್ ಬರುವುದರಿಂದ ಹಣಕ್ಕೆ ಯಾವ ತೊಂದರೆಯೂಇಲ್ಲ
ಆದ್ರೆ ಅಷ್ಟು ಕಷ್ಟ ಪಟ್ಟು ಬೆಳಿಸಿದ ಮಗ ಬರಲಿಲ್ಲವಲ್ಲ ಎಂಬುದು ದೊಡ್ಡ ಕೊರತೆ.ಫೋನ್ ಮಾಡಿದರೆ ಬಿಸಿ ಇದ್ದೇನೆ ಆಮೇಲೆ ಮಾಡು ಅನ್ನುತ್ತಾನಂತೆ. ನಿಮಗೆ ಹಣ ಬೇಕಾದರೆ ಕಳಿಸುತ್ತೇನೆ ಎನ್ನುತ್ತಾನೆ.ನಮಗೆ ಬೇಕಿರುವುದು ಹಣವಲ್ಲ ಅವನ ಕಾಳಜಿ ಎಂದು ಅತ್ತುಕೊಂಡರು.
ಅವರ ರೂಮಿನಪಕ್ಕದಲ್ಲಿಯೇ ಮತ್ತೊಂದು ರೂಮಿನಲ್ಲಿನ ವೃದ್ದೆ ಯಾರೊಂದಿಗೂ ಮಾತನಾಡುವುದಿಲ್ಲ.ಇವರೇ ಹೇಳಿದರು.
ಗಂಡ ಸತ್ತು ಹೋದನಂತರ ಮಗಳನ್ನು ತುಂಬಾ ಕಕ್ಕುಲಾತಿಯಿಂದ ಬೆಳೆಸಿದರಂತೆ. ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದ್ದಾರಂತೆ. ಕೊನೆಗೆ ಮಗಳು ಇಲ್ಲಿ ಬಿಟ್ಟು ಹೋದಳಂತೆ.ಹಣಕ್ಕೆ ತೊಂದರೆ ಆದರೂ ಹೇಗೋ ನಡೆಸುತ್ತಿದ್ದಾರೆ
ಮೂರು ಜನ ಗಂಡು ಮಕ್ಕಳಿದ್ದೂ ವಿಧುರ ತಂದೆಯನ್ನು ನೋಡಿಕೊಳ್ಳಲಾಗದೆ ಇಲ್ಲಿ ಬಿಟ್ಟು ಹೋದವರು.
ಅಪ್ಪನನ್ನು ಹೊರೆ ಎಂದು ಜರೆದವರು.ಒಂದೇ ಎರೇಡೆ ಎಷ್ಟೊಂದು ಕಥೆಗಳು


ಜೀವಕ್ಕೆ ಜೀವ ಕೊಟ್ಟು ಬೆಳೆಸುತ್ತೇವೆ. ಆದರೆ ಕೊನೆಗೆ ಸಾಯುವಾಗ ಜೀವಕ್ಕೆ ಒಂದು ತೊಟ್ಟೂ ನೀರು ಕೊಡುವುದಿಲ್ಲ ಎಂದ ಆ ಹಿರಿಯ ತಾಯಿಯ ನುಡಿ ಇನ್ನೂ ಕಿವಿಯಲ್ಲಿಯೇ ಹಾಗೆಯೇ ಇದೆ

ನಮ್ಮ ಕೈ ಕಾಲು ಚೆನ್ನಾಗಿ ಆಡುವ ತನಕ ಮಕ್ಕಳು , ನಂತರ ಯಾರೋ ಬೇರೆಯವರು ಎಂದರು ಮತ್ತೊಬ್ಬರು


ಎಲ್ಲಕ್ಕೂ ಆಘಾತವಾದ ವಿಷಯಗಳೆಂದರೆ ಮೇಲೆ ನೋಡಿದವರ ಮಕ್ಕಳೆಲ್ಲರೂ ಒಳ್ಳೆಯ ಹುದ್ದೆಯಲ್ಲಿರುವವರು, ಮಗ ಸೊಸೆ, ಮಗಳು ಅಳಿಯ
ಎಲ್ಲರೂ ದುಡಿಯುವವರೇ.
ಹಾಗೂ ಮತ್ತೊಂದು ಅರಿವಾದುದು ಈ ತಂದೆತಾಯಿಗಳು ಅವರ ಮೊಮ್ಮಕ್ಕಳನು ನೋಡಿಕೊಂಡು ಮನೆ ವಾರ್ತೆ ಗಮನಿಸಿಕೊಂಡು ಇದ್ದಷ್ಟೂ ದಿನವೂ ಅವರಿಗೆ ಅವರವರ ಮಕ್ಕಳ ಮನೆಯಲ್ಲಿ ಸ್ಥಾನ ಸಿಕ್ಕಿದೆ. ಯಾವುದೋ ಅಪಘಾತಕ್ಕೆ ಸಿಲುಕಿ, ಅಥವ ಅನಾರೋಗ್ಯಕ್ಕೆ ಸಿಲುಕಿ ಹಾಸಿಗೆ ಹಿಡಿದ ಮೇಲೆ ಹೆತ್ತವರೇ ಹೊರೆಯಾಗಿದ್ದಾರೆ. ನಂತರ ಅವರ ಸ್ಥಾನ ಇಲ್ಲಿಗೆ ಬಂದಿದೆ.


ಏಕೆ ಹೀಗೆ ಈ ಓಲ್ಡ್ ಏಜ್ ಹೋಮ್‍ಗಳು ಬಂದು ಯಾರಿಗೆ ಅನುಕೂಲ ಮಾಡಿಕೊಟ್ಟಿದೆ. ವೃದ್ದಾಶ್ರಮದಲ್ಲಿ ನೆಮ್ಮಧಿಯಾಗಿರುತ್ತೇವೆ ಎಂದುಕೊಳ್ಳುವ ಮಾತು ನಿಜಕ್ಕೂ ಸುಳ್ಳು . ಹೆತ್ತ ಮಕ್ಕಳನ್ನು ಜವಾಬ್ದಾರಿ ಮುಕ್ತರನ್ನಾಗಿ ಮಾಡುತ್ತದೆ ನಿಜ ಆದರೆ ಆ ಮಕ್ಕಳ ಪ್ರೀತಿ ಕೊಡಲಾಗುತ್ತದೆಯೇ ಇವುಗಳಿಂದ?
ಅಲ್ಲಿ ಇರುವವರಾದರೂ ನೆಮ್ಮದಿ ಇಂದ ಇದ್ದಾರೆಯೇ?

ಸದಾ ತಮ್ಮವರ್ಯಾರಾದರೋ ಬರುತ್ತಾರೇನೋ ಎಂಬ ನಿರೀಕ್ಶೆ. ಹೆತ್ತ ಮಗ ಮಗಳನ್ನು ಬಿಟ್ಟಿರಬೇಕಾದ ಪರಿಸ್ಥಿತಿ
ನಿಮಿಷ ನಿಮಿಷಕ್ಕೂ ಕಾಡುವ ನೆನಪುಗಳು, , ತಮ್ಮವರಿಂದಲೇ ದೂರಿಕರಿಸಿಕೊಂಡ ನೋವು ಸದಾ ಹಿಂಸಿಸುತ್ತವೆ.

ಅಷ್ಟಕ್ಕೂ ಈ ಹಿರಿಯ ಜೀವಗಳು ನಮ್ಮನ್ನು ಕೇಳುವುದಾದರೂ ಏನು
ಒಂದೆರೆಡು ಹೊತ್ತು ಊಟ, ಪ್ರೀತಿ, ಕೊಂಚ ಕಾಳಜಿ, ವಯೋ ಸಹಜ ಸಿಟ್ಟಿನ ಮಾತುಗಳಿಗೆ ಸಮಾಧಾನದ ಉತ್ತರ
ಇಷ್ಟನ್ನೂ ಕೊಡಲಾರದಷ್ಟೂ ಜಿಪುಣರಾಗುತ್ತಿದ್ದಾರೆಯೇ ಇಂದಿನ ಮಕ್ಕಳುಗಳು.

ನಾನು ಅಲ್ಲಿಗೆ ಭೇಟಿ ಕೊಟ್ಟ ಸಮಯದಲ್ಲಿ ಗಮನಿಸಿದ ಮತ್ತೊಂದು ಅಂಶವೆಂದರೆ ನನ್ನನ್ನು ಪ್ರೀತಿಯಿಂದ ಮಾತನಾಡಿಸಿದ್ದು. ಯಾವುದೋ ಕಾಲದಿಂದ ಪರಿಚಯವಿರುವಂತೆ ಮಾತನಾಡಿದರು. ಅವರುಗಳ ಕಣ್ಣಲ್ಲಿ ಏನೋ ಸಮಾಧಾನ. ಒಂದು ರೀತಿಯ ಆನಂದ. ಕೆಲವೆರೆಡು ಹಿರಿಯರು ನನಗೆ ಅರಿಶಿನ ಕುಂಕುಮವನ್ನೂ ಕೊಟ್ಟರು.
ನನಗಂತೂ ಕಣ್ಣಲ್ಲಿ ನೀರು ಬಂತು

ಇಂತಹ ಸಮಯದಲ್ಲಿ ಅವರಿಗೆ ನಮ್ಮಿಂದ ಏನಾದರೂ ಸಂತೋಷ ಕೊಡಲಿಕ್ಕಾಗುತ್ತದೆಯೇ ಎಂದು ಯೋಚಿಸಿದೆ
ಆಗಲೇ ನಮ್ಮ ಮಗಳ ಹುಟ್ಟು ಹಬ್ಬ ಹಾಗು ಮತ್ತೊಂದು ಯಾವುದಾದರೂ ಹಬ್ಬವನ್ನು ಅವರೊಂದಿಗೆ ಆಚರಿಸಿದರೆ ಆ ಹಿರಿಯಮನಸುಗಳಿಗೆ ಆನಂದವಾದರೂ ಆದೀತು ಎಂದನಿಸಿತು. ಅದನ್ನು ಕಾರ್ಯಗತಗೊಳಿಸಬೇಕಷ್ಟೆ.ಇಂತಹ ಪರಿಸ್ಥಿತಿ ನಮಗೆ ಬರಬಾರದೆಂದರೆ, ನಮ್ಮ ಹಿರಿಯರನ್ನು ನಮ್ಮ ಮಕ್ಕಳ ಮುಂದೆ ಹೀಗಳೆಯಬಾರದು, ಸಾಧ್ಯವಿದ್ದಷ್ಟೂ ಸಂತೋಷವನ್ನು ಕೊಡಬೇಕೆ ಹೊರತು ನೋವನ್ನು ಹಂಚಬಾರದು.
ಹೌದು ಕೆಲಸದ ಒತ್ತಡವಂತೂ ಇದ್ದೇ ಇರುತ್ತದೆ. ಆದರೆ ಅದನ್ನು ಮೀರಿದ ಒತ್ತಡವಿದ್ದಾಗಲೂ ನಮ್ಮನ್ನು ಪ್ರೀತಿಯಿಂದ ನೋಡಿಕೊಂಡವರಲ್ಲವೇ ಅವರು. ಅವರು ನಮಗೆ ಕೊಟ್ಟ ಪ್ರೀತಿಯ ಒಂದಂಶವನ್ನಾದರೂನಾವು ಕೊಡಬೇಕು.ನಾವು ಬಿತ್ತಿದಂತೆ ಬೆಳೆ ಎಂಬುದನ್ನುನೆನಪಿಟ್ಟು ಕೊಂಡರೆ ಓಲ್ಡ್ ಏಜ್ ಹೋಮ್‌ಗಳ ಸಂಖ್ಸ್ಯೆ ಕಡಿಮೆ ಆಗಬಹುದು
ಏನಿದ್ದರೂ ಅವರ ವರ್ತಮಾನ ನಮ್ಮಭವಿಷ್ಯವಾಗಬಾರದಷ್ಟೇ?