Wednesday, January 13, 2010

ಗಮ್ಯ ಹುಡುಕುತ್ತಾ ಐದನೆಯ ಕಂತು

ಕಣ್ಣಮ್ಮಾ ಎದ್ದು ಕೂರಲೂ ಕಷ್ಟ ಪಡುತ್ತಿತ್ತು. ಹಾಗೂ ಹೀಗೂ ಎದ್ದು ಕೂತು ತನ್ನ್ ಪ್ರವರ ಹೇಳಲಾರಂಭಿಸಿತು. ಕನ್ನಡದಲ್ಲಿಯೂ ಸ್ವಲ್ಪ ಮಾತಾಡುತ್ತಿತ್ತು .
" ಶಾಲು ನನ್ನದೇ ಇದನ್ನ ಪೊಣ್ಣಿಗೆ ಕೊಟ್ಟಿದ್ದೆ"
"ಯಾರಿಗೆ " ರೆಡ್ಡಿಯವರು ಪ್ರಶ್ನಿಸಿದರು
ಕಣ್ಣಮ್ಮಾ ನೆನಪು ಮಾಡಿಕೊಳ್ಳಲಾರಂಭಿಸಿತು. ವಯಸಿನ ಪ್ರಭಾವದಿಂದ ನೆನಪು ಕೈ ಕೊಡುತ್ತಿತ್ತು ಮಾತುಗಳು ಸರಿಯಾಗಿ ಬರುತ್ತಿರಲಿಲ್ಲ. ಅವಳ ಮಾತುಗಳನ್ನು ಪೋಣಿಸಿ ಹೆಣೆಯಬೇಕಾಯಿತು ರೆಡ್ದಿಯವರಿಗೆ
ಕಣ್ಣಮ್ಮ ಆಗಷ್ಟೇ ಬೆಂಗಳೂರಿಗೆ ಬಂದಿದ್ದಳು. ಅದು ದೇವನ ಹಳ್ಳಿಯ ಬಳಿ ಇರಬೇಕು. ಇನ್ನೂ ಕಾಡಿನಂತಿತ್ತು. ಆಗಾಕೆಗೆ ಐವತ್ತಾರು ವರ್ಷವಿರಬಹುದೇನೋ. ಆಗ ಚೆನ್ನಾಗಿಯೇ ಇದ್ದವರು .ಗಂಡ ಸತ್ತು ಹತ್ತು ವರ್ಷಗಳಾಗಿದವು. ಮಗನಿಗೂ ಮದುವೆಯಾಗಿತ್ತು. ಮಗ ಗಾರೆ ಕೆಲ್ಸದ ಮೇಸ್ತ್ರಿ ಆಗಿದ್ದ . ದೇವನ ಹಳ್ಳಿಯ ಅಪಾರ್ಟ್ಮೆಂಟ್‌ನ ಕಟ್ಟುವುದಕ್ಕೆ ಕೂಲಿ ಸಿಕ್ಕಿದುದರಿಂದ ಇಲ್ಲಿಗೆ ವಲಸೆ ಬಂದಿದ್ದರು. ತಿನ್ನುವುದಕ್ಕೆ ಉಡುವುದಕ್ಕೆ ಅಂತಹ ತೊಂದರೆ ಏನೂ ಇರಲಿಲ್ಲ. ಆ ಅಪಾರ್ಟ್ಮ್ಮೆಂಟ್ ಓನರ್ ತಮ್ಮದೇ ಜಾಗದಲ್ಲಿ ಮೂರ್ನಾಲ್ಕು ಮನೆಗಳನ್ನುಕಟ್ಟಿದ್ದರು. ಬಾಡಿಗೆ ಕಡಿಮೆ ಎಂದು ಇಲ್ಲಿಯೇ ಬಂದು ನೆಲೆಸಿದ್ದರು
ಅವರ ಮನೆಯ ಪಕ್ಕಕ್ಕೆ ಹುಡುಗಿ ಬಂದಿದ್ದಳು. ಚೆಲುವಿನ ಖನಿ. ಅಪ್ಪಟ ಬ್ರಾಹ್ಮಣ ಮನೆತನದ ಹುಡುಗಿ. ಹೆಸರು ವೀಣಾ . ಮಾತು ಮೃದು.ಗಂಡನ ಜೊತೆಯಲ್ಲಿ ಇದ್ದಳು. ಗಂಡನ ಹೆಸರೇನೋ ಸೀತಾರಾಮನೆಂದಿರಬೇಕು. ಹುಡುಗಿ ಹದಿನೆಂಟನ್ನೂ ತಲುಪಿರಲಿಲ್ಲ. ಗಂಡನೋ ಕೋಪಿಷ್ಟ . ಪ್ರತಿಯೊಂದಕ್ಕೂ ಹಾರಾಡುತ್ತಿದ್ದ. ಜೊತೆಗೆ ವೀಣಾಗೆ ಆಗಾಗ ಹೊಡೆಯುತ್ತಿದ್ದ. ಇಷ್ಟ ಬಂದರೆ ಮನೆಗೆ ಬರುತ್ತಿದ್ದ ಇಲ್ಲವಾದಲ್ಲಿ ಅದೆಲ್ಲಿ ಹೋಗುತ್ತಿದ್ದನೋ ಗೊತ್ತಿರಲಿಲ್ಲ. ಹಾಗೆಂದು ಕೆಲಸ ಎಂದೇನೂ ಇರಲಿಲ್ಲ. ವೀಣಾ ಮಾತ್ರ ಹುಳಿ ಪುಡಿ, ಚಕ್ಕುಲಿ ಚಟ್ಣಿ ಪುಡಿ ಮಾಡಿಕೊಂಡು ಜೀವನ ನಡೆಸುತ್ತಿದ್ದಳು .ಇಂತಹ ಗಂಡಿಗೆ ಇಂತಾ ರತ್ನ ಹೇಗೆ ಸಿಕ್ಕಿತು ಎಂಬುದು ಮಾತ್ರ ಕಣ್ಣಮ್ಮನಿಗೆ ತಿಳಿದಿರಲಿಲ್ಲ. ಒಟ್ತಿನಲ್ಲಿ ಪಾಪದ ಹುಡುಗಿಯಾಗಿದ್ದಳು. ಕಣ್ಣಮನಿಗೆ ಭಾಷೆ ಬಾರದ ಕಾರಣ ಹೆಚ್ಚು ವಿಷಯ ತಿಳಿಯಲೂ ಸಾಧ್ಯವಿರಲಿಲ್ಲ
ಒಮ್ಮೆ ಅವರ ಮನೆಯಲ್ಲಿ ಗಲಾಟೆ ಕೇಳಿಸುತ್ತಿತ್ತು. ವೀಣಾಳ ಆಕ್ರಂದನ ಕೇಳಿಸುತ್ತಿದ್ದುದರಿಂದ . ಸುತ್ತ ಮುತ್ತಲಿದ್ದ ಜನರೆಲ್ಲರೂ ಅವಳ ಮನೆಯತ್ತ ಧಾವಿಸಿದರು.
ಸೀತಾರಾಮ ವೀಣಾಗೆ ದನಕ್ಕೆ ಬಡಿದಂತೆ ಬಡೆಯುತ್ತಿದ್ದ ಎಂಬುದು ತೆರೆದ ಕಿಟಕಿಯಿಂದ ಕಾಣಿಸುತ್ತಿತ್ತು. ಸುತ್ತ ನೆರೆದಿದ್ದ ಜನರಲ್ಲಿಯೇ ಒಬ್ಬಳು ಅವನಿಗೆ ಚೆನ್ನಾಗಿ ದಬಾಯಿಸಿದಾಗ ಬಾಗಿಲು ತೆರೆದ.
ವೀಣಾ ಹೆಂಗಸಿನ ಬಳಿ ಏನೋ ಹೇಳಿಕೊಂಡು ಅತ್ತಳು. ಅದರಲ್ಲಿ ಕಣ್ಣಮ್ಮನಿಗೆ ಅರಿವಾಗಿದ್ದು ವೀಣಾ ಬಸುರಿ ಎಂಬುದು ಮಾತ್ರ.
ಏನಾಗಿದೆ ಯಾಕೆ ಎಂದೇನೂ ತಿಳಿಯಲಿಲ್ಲ. ಗಂಡನಿಗೆ ಮಗು ಇಷ್ಟವಿಲ್ಲವೇನೋ ಎಂದನಿಸಿತ್ತು.
ಅದಾದ ಮೇಲೂ ಹುಡುಗಿಯ ಕೋಟಲೆ ತಪ್ಪಿರಲಿಲ್ಲ.
ಗರ್ಭಿಣಿ ಹೆಂಗಸು ಅದೆಷ್ಟೋ ದೂರ ದೂರ ನಡೆದು ಹುಳಿ ಪುಡಿ ಚಟ್ನಿ ಪುಡಿ ಹಪ್ಪಳ ಇವುಗಳನ್ನುಮಾರಿ ಬರುತ್ತಿದ್ದುದನ್ನ ನೋಡಿ ಎಷ್ಟೋ ಬಾರಿ ಕಣ್ಣಮ್ಮ ಬೇಜಾರು ಮಾಡಿಕೊಳ್ಳುತ್ತಿದ್ದಳು. ಆದರೂ ಅವರಿಬ್ಬರ ನಡುವೆ ಯಾವುದೇ ಸಂವಹನ ಸಾಧ್ಯವಾಗಿರಲಿಲ್ಲ. ಭಾಷೆ ಬರುತ್ತಿರರಲಿಲ್ಲವಾದ್ದರಿಂದ ಬರೀ ಪರಿಚಯದ ನಗುವಿನ ವಿನಿಮಯವಾಗುತ್ತಿತ್ತು. ಅವಳ ಹೊಟ್ಟೆ ದಿನೇ ದಿನೇ ಉಬ್ಬುತ್ತಿತ್ತು
ಅದೊಮ್ಮೆ ರಾತ್ರಿ ಎಂಟು ಘಂಟೆಯಾಗಿರಬಹುದು . ಜೋರು ಮಳೆಯಾಗುತ್ತಿತ್ತು. ಕೆಲಸಕ್ಕೆ ಹೋದ ಮಗ ಇನ್ನೂ ಬಂದಿರಲಿಲ್ಲ. ಸೊಸೆ ಹೆರಿಗೆಗೆಂದು ಊರಿಗೆ ಹೋಗಿದ್ದಳು.
ಯಾರೋ ಬಾಗಿಲು ಬಡಿದದ್ದು ಕೇಳಿಸಿತು
ಯಾರೆಂದು ತೆಗೆದರೆ ವೀಣಾ
ನೋವು ಅವಳ ಮುಖದಲ್ಲಿ ಕಾಣುತ್ತಿತ್ತು ಹೆರಿಗೆ ನೋವು ಶುರುವಾಗಿತ್ತು. ನರಳುತ್ತಿದ್ದಳು
ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಕಣ್ಣಮ್ಮ ಅವಳ ಹೆರಿಗೆಗೆ ಸಿದ್ದರಾದರು. ಸುಮಾರು ಹೊತ್ತಿನ ನಂತರ ಅವಳು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಮಗುವನ್ನು ಸ್ವಚ್ಚ ಮಾಡಿದ ನಂತರ . ಮಗುವಿಗೆ ಬಟ್ಟೆಯೂ ಇರಲಿಲ್ಲ.
ಕಣ್ಣಮ್ಮ ಮುಂದಿನದನ್ನು ಯೋಚಿಸಲಿಲ್ಲ. ತನ್ನ ಗಂಡನ ಏಕೈಕ ಕೊಡುಗೆಯಾದ ದುಬಾರಿ ಶಾಲನ್ನೇ ಮಗುವಿಗೆ ಸುತ್ತಿದಳು. ಪ್ರಜ್ನೆ ಬಂದ ನಂತರ ವೀಣ ಕೇವಲ ಕೈ ಮುಗಿದಳು.ಮಗುವನ್ನು ನೋಡುತ್ತಿದ್ದಂತೆ ಅಳಲಾರಂಭಿಸಿದಳು. ಅವ್ಯಕ್ತ ಭಯ ಅವಳ ಮುಖದಲ್ಲಿ ಕಾಣತೊಡಗಿತು. ಕಣ್ಣಮ್ಮನಿಗೆ ಮತ್ತೊಮ್ಮೆ ವಂದಿಸಿ ಹೋಗಲು ಸಿದ್ದಳಾದಳು. ಇನ್ನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೋ ಎಂದು ಹೇಳಿದ ಕಣ್ಣಮ್ಮನಿಗೆ ಇಲ್ಲವೆಂಬಂತೆ ಹೇಳಿ ಮಗುವನ್ನು ಎತ್ತಿಕೊಂಡು ಹೊರಗಡೆ ಬಂದಳು. ಕಣ್ಣಮ್ಮ ನೋಡು ನೋಡುತ್ತಿದ್ದಂತೆ ತನ್ನ ಮನೆಗೆ ಹೋಗದೆ ಮಳೆಯಲ್ಲಿಯೇ ಎಲ್ಲೋ ಮರೆಯಾಗಿ ಹೋದಳು ವೀಣಾ .ಎಲ್ಲಿಗೆ ಹೋದಳೆಂಬುದು ತಿಳಿಯಲಿಲ್ಲ. ಯಾರಿಗಾದರೂ ಹೇಳೋಣವೆಂದರೆ ಮನೆಗಳು ಕೊಂಚ ದೂರದಲ್ಲಿದ್ದವು . ಏನಾಗುತ್ತಿದೆ ಎಂಬುದೂ ತಿಳಿಯಲಿಲ್ಲ.
ಮಾರನೆ ದಿನ ಬಂದ ಅವಳ ಗಂಡ ಸೀತಾರಾಮ ಬಂದವನೇ ಹುಚ್ಚನಂತೆ ಮನೆಯನ್ನೆಲ್ಲಾ ಜಾಲಾಡಿದ.
ಅಲ್ಲಿ ಇಲ್ಲಿ ಹುಡುಕಿಕೊಂಡು ಬಂದವನೇ ಕಣ್ಣಮ್ಮನ ಮನೆ ಬಾಗಿಲು ಬಡಿದ. ಕಣ್ಣಮ್ಮನ ಮಗನನ್ನು ತನ್ನ ಹೆಂಡತಿಯ ಬಗ್ಗೆ ವಿಚಾರಿಸಿದ.
ಕಣ್ಣಮ್ಮ ವೀಣಾಗೆ ಹೆರಿಗೆ ಆದುದನ್ನೂ ಅವಳು ಎಲ್ಲೋ ಹೋದುದನ್ನೂ ಹೇಳಿದಳು.
ಸೀತಾರಾಮ ಯಾವ ಮಗುಎಂದು ಕೇಳಿದ
ಪೊಣ್ಣುಕೊಳಂದು ಎಂದುತ್ತರಿಸಿದಳು
ಅವನ ಮುಖ ಇನ್ನೂ ಉರಿಯಿತು. ಹಾ ಹೂ ಎಂದುಕೊಂಡು ವೀಣ ಹೋದಳೆಂದು ಕಣ್ಣಮ್ಮ ಹೇಳಿದ ದಿಕ್ಕಿಗೆ ಹೊರಟು ಹೋದ.
ಅಷ್ಟೇ ಅವರು ನಂತರ ಬರಲೇ ಇಲ್ಲ ಅವರ ಮನೆ ಹಾಗೆ ಖಾಲಿಯೇ ಬಿದ್ದಿತ್ತು. ಅದಾದ ನಂತರ ಅಪಾರ್ಟ್ಮೆಂಟ್ನಲ್ಲಿ ಗಾರೆ ಕೆಲ್ಸ ಮುಗಿದುದರಿಂದ ಕಣ್ಣಮ್ಮ ಮನೆ ಬಿಟ್ಟು ಬೇರೆಡೆ ಬಂದರು. ಆಮೇಲಾನಾಯ್ತೋ ಗೊತ್ತಿಲ್ಲ.
ಕಣ್ಣಮ್ಮ ನಿಟ್ಟುಸಿರಿಟ್ಟಳು. ಅವಳ ಕಣ್ಣಲ್ಲಿ ನೀರು ತುಂಬಿತ್ತು. ಹೇಳುತ್ತಾ ಹಾಗೆ ಒಮ್ಮೆ ಸ್ವಾತಿಯತ್ತ ತಿರುಗಿದಳು.
"ಆಮ ಇದೇ ಮಾರಿ ಆ ಪೊಣ್ಣು ಇತ್ತು" ಸ್ವಾತಿಯತ್ತ ಕೈ ತೋರಿಸಿ ಹೇಳಿದಳು
ಸ್ವಾತಿ ದಿಗ್ನ್ರಾಂತಳಾಗಿದ್ದಳು. ಪದೇ ಪದೇ ನಿಗೂಡವಾಗುತ್ತಿದೆಯಲ್ಲ ಎಂದು. ಜೊತೆಗೆ ಆ ವೀಣಾ ತನ್ನ ತಾಯಿ ಇರಬಹುದೇ ಎಂದು ಯೋಚಿಸುತ್ತಿದ್ದಂತೆಯೇ ಕಣ್ಣಮ್ಮ ಹೇಳಿದ ಮಾತು ಗಲಿಬಿಲಿಯಾಗುವಂತೆ ಮಾಡಿತು.
"ಏನು" ಹುಬ್ಬುಗಳೆರೆಡನ್ನು ಎತ್ತಿ ಕಣ್ ರೆಪ್ಪೆಗಳನ್ನು ಒಮ್ಮೆ ಬಡಿದು ಕೇಳಿದಳು.
"ಆ ಇದೇ ಪೊಣ್ಣುತ್ತಾ ಆ ಕೊಳಂದು" ಮತ್ತೆ ತಮಿಳಿನಲ್ಲಿ ಹೇಳಿದಳು
ರೆಡ್ಡಿಯವರು ವಿವರಿಸಿದರು
"ಅ ವೀಣಾ ನಿನ್ನ ಹಾಗೆ ಇದ್ದಳಂತೆ. ಹಾಗೆ ನಿನ್ನ ಕಣ್ಣೂ ಸಹಾ ಹಾಗೆಯೇ ವೀಣಾಳ ಕಣ್ಣಿನಂತೆ ಇದೆ . ಅದಕ್ಕೆ ಆ ವೀಣಾ ಮಗು ನೀನೆ ಎನ್ನುತ್ತಿದ್ದಾಳೇ"
ಸ್ವಾತಿಗೆ ಉಸಿರು ಒಮ್ಮೆ ಒಳ ಹೋದಂತಾಗಿ ಮೇಲೆಳೆದು ಕೊಂಡಳು.

ಅವಳು ಹುಡುಕುತ್ತಿದ್ದ ಅವಳ ತಾಯಿಯ ಅಸ್ತಿತ್ವ ಇಂದಿಗೆ ಸಿಕ್ಕಿತ್ತು.

ಆದರೆ ತನ್ನ ತಾಯಿ ಅನುಭವಿಸಿದ ವೇದನೆ ತೊಂದರೆ ಅವಳ ನೋವು ನೆನೆಸಿಕೊಳ್ಳುತ್ತಿದ್ದಂತೆ ಕಣ್ಣಾಲಿ ತುಂಬಿ ಬಂತು . ಅಂತಹ ಕಷ್ಟವೇನಿತ್ತು ಆಕೆಗೆ ಹುಟ್ಟಿದ ಮಗುವನ್ನು ಅದರ ತಂದೆಗೆ ತೋರಿಸಲು ಸಾಧ್ಯವಿಲ್ಲದಿದ್ದ ಕಾರಣ ಏನಿದ್ದೀತು. ಎರೆಡು ವರ್ಷದಲ್ಲಿ ಸ್ವಾತಿಯ ಮನಸು ವಯಸಿಗೆ ಮೀರಿ ಯೋಚನೆ ಮಾಡಲಾರಂಭಿಸಿತ್ತು.


"ಮಾವಾ . ಅವರಿದ್ದುದ್ದು ಎಲ್ಲಿ ಅಂತ ಕೇಳ್ತೀರಾ? ಸರಿಯಾದ ವಿಳಾಸ?" ಶಿವು ರೆಡ್ಡಿಯವರನ್ನು ಕೇಳಿದ.

ಮುದುಕಿ ನೆನಪಿಸಿಕೊಳ್ಳಲಾರಂಭಿಸಿತು. ತಲೆ ಕೆರೆದುಕೊಂಡಿತು . ಉತ್ತರಿಸಲಾಗಲಿಲ್ಲ.
"ಅದು ಎನಕ್ಕೆ ಮರೆತುಹೋಗಿದೆ . "ಎಂದಿತು
"ನಿಮ್ಮ ಮಗನಿಗೆ ಗೊತ್ತಿದೆ ಅಂದ್ಕೋತೀನಿ" ರೆಡ್ಡಿಯವರೇ ಮುಂದುವರೆದರು
ಮುದುಕಿಯ ಕಣ್ಣಲ್ಲಿ ನೀರು ಹರಿಯಿತು.
ಮಗ ಎಲ್ಲಿ ಸೊಸೆ ಎಲ್ಲಿ ಯಾರೂ ಇಲ್ಲ" ಎಂದು ಮೇಲೆ ಕೈ ತೋರಿಸಿ ಚೆಲ್ಲಿತು
ಎಲ್ಲರೂ ಕ್ಷಣಕಾಲ ಮೌನವಾಗಿದ್ದರು.
ಮೌನ ಅಸಹನೀಯವೆನಿಸಿತು ಸ್ವಾತಿಗೆ. ತಡೆಯಲಾಗಲಿಲ್ಲ. ಅವಳಿಗಾದರೂ ಮಗ ಸತ್ತ ಎಂದಾದರೂ ಗೊತ್ತಿದೆ ಆದರೆ ತನ್ನ ತಾಯಿ ತಂದೆ ಇದ್ದಾರೆಯೇ ಇಲ್ಲವೇ ಎಂಬ ತನ್ನ ದುಗುಡ ಕಣ್ಣಮ್ಮನದಕ್ಕಿಂತ ಹೆಚ್ಚು ಎಂದನಿಸಿತು
"ಕಣ್ಣಮ್ಮಾ ಇದು ನನ್ನ ಬದುಕಿನ ಪ್ರಶ್ನೆ . ಆ ಬಿಲ್ಡಿಂಗ್ ಯಾವುದು ಅಂತ ನೆನಪು ಮಾಡಿಕೋ . " ಸ್ವಾತಿ ಹೇಳಿದಳು
ಕಣ್ಣಮ್ಮ ಯೋಚಿಸುತ್ತಲೇ ಇತ್ತು ಕೊನೆಗೊಮ್ಮೆ ತನ್ನ ಹಳೆಯ ಟ್ರಂಕ್‌ನೆಡೆ ಕೈ ತೋರಿತು
ಶಿವು ಅದನ್ನು ಹೊತ್ತುಕೊಂಡು ಬಂದ
ತಾನೆ ಕೈಯ್ಯಾರೆ ಟ್ರಂಕ್ ತೆಗೆಯಿತು. ಒಂದೊಂದಾಗಿ ಬಟ್ಟೇ ತೆಗೆಯಲಾರಂಬಿಸಿತು. ಒಂದೊಂದು ಬಟ್ಟೆಯೂ ಅದಕ್ಕೆ ಯಾವ್ಯಾವುದೋ ಇತಿಹಾಸ ನೆನಪು ಮಾಡಿಕೊಡುತ್ತಿತ್ತು . ತನ್ನ ಗತಕಾಲವನ್ನು ನೆನೆಸಿಕೊಳ್ಳುತ್ತಾ ಅಳುತ್ತಾ ಬಟ್ಟೆಗಳನ್ನು ಎದೆಗೊತ್ತಿಕೊಳ್ಳುತ್ತಿತ್ತು.
ಕೊನೆಗೊಂದು ಫೋಟೊ ತೆಗೆಯಿತು. ಹಳೆಯ ಫೋಟೋ
ಬಹುಷ: ಕಟ್ಟಡದ ಕೆಲಸಗಾರರೆಲ್ಲರನ್ನೂ ಸೇರಿಸಿ ತೆಗೆದ ಫೋಟೋ ಇದ್ದಿರಬೇಕು.
"ಇದು ತಾ ಎನ್ನ್ ಪಯ್ಯಾ" ಫೋಟೋದಲ್ಲಿದ್ದ ಯುವಕನನ್ನು ತೋರಿಸಿ ಅತ್ತಿತ್ತು.
ಯಾವುದೋ ಕಟ್ಟಡದ ಕೆಲಸದಲ್ಲಿ ಆದ ಆಕಸ್ಮಿಕಕ್ಕೆ ಮಗ ಬಲಿಯಾಗಿ ಹೋಗಿದ್ದ .ಜೊತೆಗೆ ಸೊಸೆಯೋ ಅವನ ಚಿಂತೆಯಲ್ಲಿಯೇ ಕೊರಗಿ ಉಸಿರು ಬಿಟ್ಟಿದ್ದಳು ಇದ್ದ ಒಬ್ಬನೇ ಮೊಮ್ಮಗ ಪೋಲಿ ಬಿದ್ದು ಹೋಗಿ ರೌಡಿಜಂ ಮಾಡಿಕೊಂಡಿದ್ದಾನೆ ಎಂದು ತಿಳಿಯಿತು. ಈ ಇಳಿಗಾಲದಲ್ಲಿ ಕಣ್ಣಮ್ಮ ಒಬ್ಬಂಟಿಯಾಗಿ ಹೋಗಿದ್ದಳು. ಅಲ್ಲಿ ಇಲ್ಲಿ ಬಿಕ್ಷೆ ಬೇಡಿ ತಿನ್ನುವಂತಹ ಗತಿ ಬಂದಿತ್ತು ಅವಳಿಗೆ. ಸ್ವಾತಿಯ ಕಣ್ಣಲ್ಲಿ ನೀರು . ತನ್ನಮ್ಮನ ಕಷ್ಟದಲ್ಲಿ ನೆರವಾದ ಕಣ್ಣಮ್ಮನ ಈಗಿನ ಸ್ಥಿತಿ ನೋಡಿ ಮನಸು ಮರುಗಿತು. ರೆಡ್ದಿಯವರ ಕಡೆಗೆ ನೋಡಿದಳು . ಹುಟ್ಟಿಸ್ದ ಅಪ್ಪ ಅಲ್ಲವಾದರೂ ಅವಳನ್ಮು ಬೆಳೆಸಿದ ಅಪ್ಪ ಅಲ್ಲವೇ? ಮಗಳ ಮನಸನ್ನು ಅರ್ಥ್ ಮಾಡಿಕೊಂಡರು.
"ಕಣ್ಣಮ್ಮ ನೀನು ಬೇಜಾರು ಮಾಡಿಕೋಬೇಡ . ನಿನ್ನನ್ನು ನಾವೆಲ್ಲಾ ಸೇರಿ ನೋಡಿಕೊಳ್ಳುತ್ತೇವೆ" ಎಂದು ಮೂಳೆ ಎದ್ದು ಕಾಣುತ್ತಿದ್ದ ಕಣ್ಣಮ್ಮನ ಅಂಗೈಗೆ ಭರವಸೆ ಎಂಬಂತೆ ಇಟ್ಟರು.
ಸ್ವಾತಿಯ ಮುಖದಲ್ಲಿ ಮಿಂಚು ಕಂಡು ತುಟಿ ಬಿರಿಯಿತು ಸಂತಸದಿಂದ.
ಆ ಫೋಟೋವನ್ನೇ ತೆಗೆದು ನೋಡುತ್ತಿದ್ದ ಶಿವು.
"ಮಾವ ಇದು ಶುಭೋದಯ ಲೇಔಟ್‌ನಲ್ಲಿರೋ ಮಂದಾರ ಅಪಾರ್ಟ್ಮೆಂಟ್ ಥರ ಇದೆ" ಹೊಳೆದವನಂತೆ ಹೇಳಿದ
"ಮಂದಾರ ಅಪಾರ್ಟ್ ಮೆಂಟ್ ಯಾರದ್ದು?" ರೆಡ್ಡಿಯವರು ನೆನಪಿಸಿಕೊಳ್ಳುತ್ತಿದ್ದರು
"ಮಾವ ಅದು ಎಸ್ ಕೆ ಡೆವಲಪರ್ಸ್‌ ಅವರದ್ದು" ಇತ್ತೀಚಿಗಷ್ಟೇ ನನ್ನ ಸ್ನೇಹಿತ ಅಲ್ಲಿ ಒಂದು ಫ್ಲಾಟ್ ಕೊಂಡುಕೊಂಡಿದಾನೆ."
"ಎಸ್ ಕೆ‍ನಾ ? ನನಗೆ ಚೆನ್ನಾಗಿ ಗೊತ್ತು . ಅದಿರಲಿ ಶಿವು ಆ ಅಪಾರ್ಟ್ಮೆಂಟ್‌ಗೆ ಹೋಗಿ ಏನುಮಾಡ್ತೀಯಾ? ಯಾವ ವಿವರ ಸಿಗುತ್ತೆ?"
"ಮಾವಾ ಆ ಡೆವಲಪರ್ರೇ ಇವರಿದ್ದ ಮನೆ ಓನರ್ ಅಂತ ಹೇಳಿದಾರಲ್ಲಾ . ಒಮ್ಮೆ ಚಾನ್ಸ್ ನೋಡೋಣ . ಏನಂತೀಯಾ ಸ್ವಾತಿ"
ಸ್ವಾತಿ ತಲೆ ಆಡಿಸಿದಳು.
"ಸರಿ ಅವನ ಫೋನ್ ನಂ ಮನೇಲಿ ಇದೆ ಅನ್ನಿಸುತ್ತೆ ಈಗಮನೆಗೆ ಹೋಗೋಣ ಕಣ್ಣಮ್ಮನ್ನ ನಮ್ಮನೆ ಔಟ್ ಹೌಸಲ್ಲಿ ಇರಿಸೋಣ. ಏನೇನು ಮೆಡಿಕಲ್ ಚೆಕ್ ಅಪ್ ಇದೆಎಲ್ಲ ಮಾಡಿಸೋಣಾ ಸರೀನಾ ಸ್ವಾತಿ?"
. ಮರೆಯಾದ ಗತಕಾಲಕ್ಕೆ ಆಸರೆಯಾಗಿ ಬಂದವಳು ಈ ಕಣ್ಣಮ್ಮ . ಅವಳಿಗೆ ಆಸರೆಯಾಗಿ ತನ್ನಪ್ಪ ನಿಂತಾಗ ಸ್ವಾತಿಯ ಕಣ್ಣಲ್ಲಿ ಮಿಂಚು.
ಕಣ್ಣಮ್ಮನನ್ನು ಔಟ್ ಹೌಸಿನಲ್ಲಿ ಇರಿಸಿ ಕೆಲ್ಸದವರಿಗೆ ಹೇಳಿ ರೂಮಿಗೆಬಂದವಳೇ ಕಂಪ್ಯೂಟರ್ ಮೇಲ್ ಚೆಕ್ ಮಾಡಿದಳು. ಅವಳು ಬಹಳ ದಿನದಿಂದ ಕಾಯುತ್ತಿದ್ದ ಮೇಲ್ ಬಂದಿತ್ತು ಪ್ರೊ ಗೌರವ್ ರವರಿಂದ
ಗೌರವ್ ಹೆಸರಿಗೆ ತಕ್ಕಂತೆ ಗೌರವ ಕೊಡುವಂತಿದ್ದವರು. ಯುಎಸ್ ನಲ್ಲಿ ನೆಲೆಸಿದ್ದರು ಮಾನವರ ನಡುವಿನ ಸೂಕ್ಷ್ಮ ಸಂಬಂಧಗಳ ಸಂಶೋದನೆಯಲ್ಲಿ ಡಾಕ್ಟರೇಟ್ ಪಡೆದಿದ್ದರು . ಹಾಗೆಯೇ ಲೇಖಕರೂ ಕೂಡ . ಸ್ವಾತಿ ಅವರ ಅಭಿಮಾನಿಯಾಗಿದ್ದಳು. ಅವರ ಎಲ್ಲಾ ಪುಸ್ತಕಗಳನ್ನು ಓದಿದ್ದಳು . ಫೇಸ್ ಬುಕ್‌ನಲ್ಲಿ ಅವರಿಗೆ ಸ್ವಾತಿಯ ಪರಿಚಯವಾಗಿತ್ತು. ಆಗಿನಿಂದಲೂ ಅವರಿಬ್ಬರ ಮಾತುಕಥೆಗಳು ನಡೆಯುತ್ತಲೇ ಇದ್ದವು.
ಇಂದಿನ ಮೇಲ್‌ನಲ್ಲಿ ಭಾರತಕ್ಕೆ ಬರುವುದಾಗಿ ತಿಳಿಸಿದ್ದರು. ಸ್ವಾತಿಯ ಸಂತೋಷ ಹೆಚ್ಚಿತು. ನಾಳೆ ಗೌರವ್ ಬರುವ ಸಂತಸ ಜೊತೆಗೆ ಕಣ್ಣಮ್ಮ ಸಿಕ್ಕ ಸಂತೋಷ ,ಜೊತೆಗೆ ತಾನು ಹುಟ್ಟಿದ ಸ್ಥಳಕ್ಕೆ ಭೇಟಿ ನೀಡಲಿರುವ ಸಂತೋಷ. ಮೊದಲ ಬಾರಿಗೆ ನಿರುಮ್ಮಳಾಗಿ ನಿದ್ರಿಸಿದಳು