Friday, January 9, 2009

ಹೀಗೊಂದು ಘಟನೆ

ನಂಗೆ ಆ ದಿನವೇ ಅನ್ನಿಸಿತ್ತು ಈ ಮುದುಕನ ನೋಟದಲ್ಲಿ ಅದೇನೋ ಇದೆ ಅಂತ.
ಇಲ್ಲವಾದರೆ ಅವತ್ತು ಇಂಟರ್‌ವ್ಯೂನಲ್ಲಿ ಯಾವ ಪ್ರಶ್ನೇನು ಕೇಳದೆ "ಯು ಆರ್ ಸೆಲೆಕ್ಟೆಡ್ " ಅಂತ ಕೈಕುಲಕಲು ಬರುತ್ತಿದ್ದನಾ?
ನಾನೇನು ತ್ರಿಪುರ ಸುಂದರಿ ಅಲ್ಲ . ಆದರೂ ನನ್ನನ್ನೇ ಅವನ ಸೆಕ್ರೆಟರಿ ಪೋಸ್ಟ್‌ಗೆ ತಗೊಂಡ, ಇವನ ವಯಸ್ಸಿಗೆ, ದೃಷ್ಟಿಗೆ ಹೇವರಿಕೆ ಅದರೂ ಯಾವುದೋ ಒಂದು ಕೆಲಸ ಸಿಕ್ಕರೆ ಸಾಕು ಅನ್ನೋ ಪರಿಸ್ಥಿತಿ ಇದ್ದಿದ್ದರಿಂದ ಒಪ್ಕೊಂಡೆ
ಏನೇ ತಪ್ಪು ಮಾಡಿದರೂ ಒಂದೂ ಮಾತು ಹೇಳುತ್ತಿರಲಿಲ್ಲ , ಬದಲಿಗೆ ನಗ್ತಾನೇ ಮಾತಾಡ್ತಿದ್ದ. ಅವನು ಹೇಳ್ಕೊಡ್ವೇಕು ಅಂದ್ರೂ ಅದೇನು ಅಷ್ಟೊಂದು ಹತ್ರ ಬರ್ತಾನೆ, ಥೂ ಒಮ್ಮೊಮ್ಮೆ ಈ ಬದುಕೇ ಬೇಡ ಅಂತನ್ನಿಸುತ್ತೆ, ಎಲ್ಲಾ ಹೋಗ್ಲಿ ಇವತ್ತು ಇವನ ಮನೆಗೆ ಬಾ ಅದೇನೋ ಫಂಕ್ಷನ್ ಇದೆ ಅಂತ ಹೇಳಿ ನನ್ನನ್ನ ಮನೆಗೆ ಕರೆದ, ನಾನೂ ಬಂದ್ರೆ ಇಲ್ಲಿ ಯಾರೂ ಇಲ್ಲ , ಇವನಿಗೇನು ಹೆಂಡತಿ ಮಕ್ಳು ಇದಾರ ಅಥವ ಇಲ್ಲವಾ ಅದೂ ಗೊತ್ತಿಲ್ಲ, ಆಫೀಸಿನವರೆಲ್ಲಾ ಅವನು ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿದಾನೆ ಅಂತ ಆಡ್ಕೋತಾರೆ.
ನನ್ಕರ್ಮ ಏನು ಮಾಡೋದು
ಅವನ್ಯಾಕೆ ಹೀಗೆ ನೋಡ್ತಾ ಇದಾನೆ ಯಾವುದಕ್ಕೂ ಕೈನಲ್ಲಿ ಚಾಕು ತಗೋಳೋದು ಒಳ್ಲೆಯದು
ನೋಡೋಣ ಏನಾಗುತ್ತೆ ಅಂತ ಹೇಗಿದ್ದರೂ ಕರಾಟೆ ಕಲ್ತಿದೀನಲ್ಲ

ಓ ಇವನೇ ಊಟ ಬಡಿಸ್ತಾನಂತೆ , ಬಡಿಸಲಿ , ಮೋಸ್ಟ್ ಲಿ ಊಟದಲ್ಲಿ ಏನಾದರೂ ಬೆರೆಸೋ ಐಡಿಯ ಇರ್ಬೇಕು .
ಸುಮ್ಮನೆ ಏನು ಬೇಡ ಅಂತ ಹೇಳಿಬಿಡೋದೆ ವಾಸಿ.
ನೀನು ತಿನ್ನಲೇಬೇಕು ಅಟ್ಲೀಸ್ಟ್ ಈ ಸ್ವೀಟ್ಸ್ ಅಂತಿದಾನೆ
ಏನ್ಮಾಡೋದು ಹೋಗ್ಲಿ ತಿಂದ ಹಾಗೆ ನಟಿಸೋದು
ಅಬ್ಬಾ ಎಷ್ಟು ಚೆನ್ನಾಗಿರೋ ನೆಕ್ಲೇಸ್ ಕೊಡ್ತಿದಾನೆ, ನೆಕ್ಲೇಸ್ ಕೊಟ್ಟು ಬುಟ್ಟಿಗೆ ಹಾಕೊಳ್ಲೋ ಉಪಾಯ ಮಾಡಿದಾನೆ
ಇದನ್ನ ಬೇಡ ಅನ್ನೋಕೆ ಮನಸೇ ಬರ್ತಿಲ್ಲ
ಆದರೂ ಬೇಡ ಬೇಡ ಇದೆಲ್ಲಾ ನನ್ನ ಹೊಡ್ಕೊಳ್ಲೋದಿಕ್ಕೆ ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ ಗೆಜ್ಜೆ ಪೂಜೆಯ ಉರುಳಿಗೆ ಕೊರಳನೆಂದೂ ನೀಡೆನು ಅಂತ ಹಾಡು ಬೇರೆ ಬರ್ತಾ ಇದೆ ಬಾಯಿಗೆ.
ಇನ್ನೆಷ್ಟು ಕೊಬ್ಬು ಇದ್ರೆ ನನ್ನ ಆ ರೂಮಿಗೆ ಕರೀತಾ ಇದಾನೆ ಇವನು ನನಗೋಸ್ಕರ ಅಂತಾನೇ ಆ ರೂಂ ತುಂಬಾ ದಿನದಿಂದ ಕಾಯುತ್ತಿತ್ತಂತೆ. ಅದಕ್ಕೆ ಇಷ್ಟು ದಿನದಿಂದ ಬಾಗಿಲು ತೆಗೀದೆ ಹಾಕಿಬಿಟ್ಟಿದ್ದನಂತೆ
ಇರಲಿ ಇವನ ಹೆಣ ಉರುಳಿಸಿ ಇಲ್ಲಿಂದ ಹೋಗ್ತೀನಿ
ಹಾಗೂ ಹೀಗೂ ರೂಮಿಗೆ ಧೈರ್ಯ ಮಾಡಿ ಬಂದು ಬಿಟ್ಟಿದೀನಿ ಇವನ್ಯಾಕೆ ನನ್ನ ಹೀಗೆ ನೋಡ್ತಾ ಇದಾನೆ ? ಹೆಣ್ಣನ್ನ ಯಾವತ್ತೂ ನೋಡದ ಹಾಗೆ .
ಅಬ್ಬ ದಿವಾನ್ ಮೇಲೆ ಕೂತ್ಕೊಳೋದಿಕ್ಕೆ ಬೇರೆ ಹೇಳ್ತಿದ್ದಾನೆ, ವ್ಯಾನಿಟಿಬ್ಯಾಗ್ನಲ್ಲಿರೋ ಚಾಕು ಯಾವಾಗ ಮೇಲೆ ಬರುತ್ತೋ ಗೊತ್ತಿಲ್ಲ.
ಅಯ್ಯೋ ಕಿಟಕಿ ಬಾಗಿಲು ಹಾಕಿದ, ಟಿವಿ ಬೇರೆ ಆನ್ ಮಾಡ್ತಿದಾನೆ, ಡಿವಿಡಿ ಪ್ಲೇಯರ್ ಸಹಾ ಆನ್ ಮಾಡ್ತಾ ಇದಾನೆ, ಏನು ಪಾರ್ನ್ ಫಿಲಮ್ ಹಾಕ್ತಾನ ?
ಉಸಿರು ಬಿಗಿ ಹಿಡಿದು ಕುಳಿತಿದ್ದೆ, ಇನ್ನೇನು ನೋಡುವುದರಲ್ಲಿದೆಯೋ , ಡವಡವ ಎನ್ನುವ ಎದೆಯೊಂದಿಗೆ ಚಾಕುವನ್ನು ಭದ್ರವಾಗಿ ಹಿಡಿದು ಕುಳಿತಿದ್ದೆ,
ಟಿವಿಯಲ್ಲಿ ಬಟನ್ ಒತ್ತಿದ ತಕ್ಷಣ ಶುರುವಾಯಿತು
ಲೋಡಿಂಗ್
ನಂತರ
ಪ್ಲೇ

ನನ್ನ ಬಾಯಿ ಹಾಗೆ ತೆರೆದು ಕೊಂಡಿತು
ಅಲ್ಲಿ ಒಬ್ಬ ಹದಿನೆಂಟರ ಬಾಲೆಯ ಹುಟ್ಟಿದ ಹಬ್ಬದ ಸಡಗರ
ಆ ಹುಡುಗಿಯ ಪಕ್ಕದಲ್ಲಿ ಈ ಬಾಸ್
ಆ ಹುಡುಗಿಯನ್ನು ಎಲ್ಲೋ ನೋಡಿದಂತಿದೆಯಲ್ಲ.
ಅರೆ ಆ ಹುಡುಗಿ ಥೇಟ್ ನನ್ನ ಪಡಿಯಚ್ಚು, ನನ್ನ ಹಾಗೆ ಇದ್ದಾಳಲ್ಲ
ಹುಟ್ಟಿದ ಹಬ್ಬದ ಸಡಗರದ ಮದ್ಯದಲ್ಲಿಯೇ ಇದೇನಿದುಆ ಬಾಲೆಯ ಲಂಗಕ್ಕೆ ಕ್ಯಾಂಡೆಲ್ ಬಿದ್ದು ಅರೆ ಒಂದರೆಕ್ಷಣದಲ್ಲಿ ಮೈಗೆಲ್ಲಾ ಬೆಂಕಿಹಚ್ಚಿಕೊಂಡಿತು.
ಅಷ್ಟೆ ಅದಾದ ನಂತರ ದೃಶ್ಯಗಳು ಇರಲಿಲ್ಲ
ಪ್ರಶ್ನಾರ್ಥಕವಾಗಿ ಬಾಸ್‍ನ ಮುಖ ನೋಡಿದೆ
ಕಣ್ಣುಗಳ್ಲಲಿ ನೀರು
"ಅವಳೇ ನನ್ನ ಮಗಳು ಆರು ವರ್ಷದ ಹಿಂದೆ ಬೆಂಕಿಗೆ ಸಿಲುಕಿ ಸುಟ್ಟು ಹೋದವಳು
ನಾನು ದಂಗಾದೆ
ಆತ ಹೇಳುತ್ತಾ ಹೋದರು
"ಜೀವನದಲ್ಲಿ ಗುರಿ, ಮೇಲೆ ಬರಬೇಕೆಂಬ ಹಟ, ಹಣದ ಹುಚ್ಚು ಇವುಗಳಿಂದ ನನ್ನ ಹಾಗು ನನ್ನ ಹೆಂಡತಿಯ ನಡುವೆ ಜಗಳ ಶುರುವಾಯಿತು, ನನ್ನ ಸಾಧನೆಗೆ ಅವಳು ಸಾಥ್ ನೀಡುತ್ತಾಳೆಂದು ಭಾವಿಸಿದ್ದೆ, ಆದರೆ ಅವಳು ಮುಳ್ಳ್ಳಾಗತೊಡಗಿದಳು, ನನ್ನಿಂದ ಬಯಸಿದ ಪ್ರೀತಿ ಸಿಗದ ಅವಳು ಬೇರೆ ಕಡೆ ಹುಡುಕತೊಡಗಿದಳು, ಅದರಿಂದ ಕೊನೆಗೆ ನನ್ನಿಂದ ಬೇರೆಯೂ ಆದಳು . ಜೊತೆಗೆ ನನ್ನಮಗಳೂ ನನಗೆ ಅವಳ ಮೇಲೆ ಅಪಾರ ಪ್ರೀತಿ, ಅವಳಿಗೂ ಅಷ್ಟೇ ನಾನೆಂದರೆ ಪ್ರಾಣ,
ಇಬ್ಬರೂ ಎಲ್ಲಿ ಹೋದರೋ ತಿಳಿಯಲಿಲ್ಲ. ನಾನು ನನ್ನ ಗುರಿಯ ಸಾಧನೆಯಲ್ಲಿ, ಹಸಿವು, ಪ್ರೇಮ, ಪ್ರೀತಿ, ಕಾಮ ಇವೆಲ್ಲವನ್ನೂ ಮೀರಿ ಬೆಳೆದೆ
ಸುಮಾರು ಹನ್ನೆರೆಡು ವರ್ಷಗಳಾದ ಮೇಲೆ ನನ್ನ ಮಗಳು ನನಗೆ ಸಿಕ್ಕಳು, ಆದರೆ ನನ್ನ ಹೆಂಡತಿ ಸಿಗಲಿಲ್ಲ, ಅವಳಾಗಲೇ ಬೇರೊಬ್ಬನ ಮಡದಿಯಾಗಿ ಹಾಗು ಮತ್ತೆರೆಡು ಮಕ್ಕಳ ತಾಯಾಗಿ ಹಾಯಾಗಿದ್ದಳು, ಅವಳ ಹೊಸ ಗಂಡನನ್ನು ಮೆಚ್ಚಿಸಲು ಅವಳ ಕುಡಿಯನ್ನು ಹಾಸ್ಟೆಲ್‍ನಲಿ ಬೆಳೆಸಿದ್ದಳು
ಕೊನೆಗೂ ನನ್ನ ಮಗಳು ನನ್ನನ್ನ ಹುಡುಕಿಕೊಂಡು ಬಂದಳು. ನನ್ನ ಮಗಳ ಜೊತೆ ಆರು ದಿನ ಕೇವಲ ಆರೇ ದಿನ ಖುಷಿಯಾಗಿದ್ದೆ
ಇದುವರೆಗೂ ಏನೇನು ಕಳೆದುಕೊಂಡಿದ್ದೆ ಎನ್ನುವುದು ಅರ್ಥವಾಗಿ ಅದನ್ನು ಮತ್ತೆ ಪಡೆಯುವದರ ಒಳಗಾಗಿ ನನ್ನ ಮಗಳ ಜನ್ಮದಿನಾಂಕ ಬಂತು , ಎಂದೂ ಇಲ್ಲದಷ್ಟು ಆದ್ಧೂರಿಯಾಗಿ ಸಮಾರಂಭ ಮಾಡಿದೆ
ನನ್ನ ಮಗಳ ಜನ್ಮ ದಿನವೇ ಅವಳ ಮರಣದಿನವಾಗುತ್ತದೆ ಎಂದು ತಿಳಿದಿದ್ದರೆ ಖಂಡಿತಾ ಅದನ್ನು ಸೆಲೆಬ್ರೇಟ್ ಮಾಡ್ತಿರಲಿಲ್ಲ.
ಅವಳ ಸಾವಿಗೆ ನಾನೆ ಕಾರಣ ಅಂತ ಅನ್ನಿಸಿದಾಗಲೆಲ್ಲಾ ಯಾರೊಂದಿಗೂ ಮಾತಾಗಲಿ ಕತೆಯಾಗಲಿ ಬೇಡ ಅನ್ನಿಸುತ್ತದೆ
ಈಗ ಯಾರಿಗಾಗಿ ಈ ಆಸ್ತಿ , ಹಣ
ಹೀಗೆ ಎಲ್ಲಾ ಕಳೆದುಕೊಂಡಿದ್ದ ನಾನು
ಎರೆಡು ತಿಂಗಳ ಹಿಂದೆ ಕೆಲಸಕ್ಕಾಗಿ ಹುಡುಕುತ್ತಿದ್ದ ನಿನ್ನನ್ನು ನೋಡಿದೆ, ನೀನು ಅವತ್ತು ನನ್ನ ಸ್ನೇಹಿತನೊಬ್ಬನ ಕಂಪೆನಿಯಲ್ಲಿ ಅಳುತ್ತಾ ಹೋಗುತ್ತಿದ್ದೆ, ನಿನ್ನನ್ನು ನೋಡಿದ ಕೂಡಲೆ ದಂಗಾದೆ ನಾನು ಏಕೆಂದರೆ ನೀನು ನನ್ನ ಮಗಳ ಪಡಿಯಚ್ಚು,
ಹಾಗಾಗಿಯೇ ನಿನ್ನ ಕರೆಸಿ ಕೆಲಸಕ್ಕೆ ಕರೆದದ್ದು
ಇವತ್ತು ಅವಳ ಹುಟ್ತಿದ ಹಬ್ಬ , ನನ್ನ ಮಗಳು ನನ್ನಿಂದ ದೂರವಾದ ದಿನ, ಇವತ್ತು ನಿನ್ನ ಹತ್ತಿರ ಒಂದು ಬೇಡಿಕೆ
ನನ್ನ ಮಗಳನ್ನು ನಿನ್ನಲ್ಲಿ ಕಾಣಲು ಅನುಮತಿ ನೀಡುತ್ತೀಯಾ"

ಆತನ ಮಾತು ಕೇಳುತ್ತಿದ್ದಂತೆ ಇಲ್ಲ ಸಲ್ಲದ್ದನ್ನು ಊಹಿಸಿಕೊಂಡ ನನ್ನ ಮೇಲೆ ಜಿಗುಪ್ಸೆ ಹುಟ್ಟಿತು, ಪ್ರಪಂಚದಲ್ಲಿ ಗಂಡಸರೆಂದರೆ ಎಲ್ಲರೂ ಮೋಸಗಾರರೇ ಎಂಬ ನನ್ನ ಅನುಭವವೇ ಇದಕ್ಕೆ ಕಾರಣವಾಗಿರಬಹುದು
ಅಪ್ಪ ಎಂಬ ವ್ಯಕ್ತಿ ಅಮ್ಮನಿಗೆ ನನ್ನ ಕೊಟ್ಟು ಕೈಕೊಟ್ಟ ಹಾಗಾಗಿ ಅಪ್ಪ ಎನ್ನುವ ಪದವೇ ನನಗೆ ಅಸಹ್ಯವಾಗಿತ್ತು, ಅಲ್ಲಿಂದ ಗಂಡಸರನ್ನು ದ್ವೇಷಿಸಿಕೊಂಡೇ ಬೆಳೆದೆ.
ಆದರೆ ಮಗಳ ಮೇಲೆ ಅಪಾರ ಪ್ರೀತಿ ಇಟ್ಟಿದ್ದ ಈ ವ್ಯಕ್ತಿ ಆ ಭಾವನೆಯನ್ನು ದೂರ ಮಾಡಿದ್ದ.
ಏನೂ ಹೇಳಲೂ ತೋಚಲಿಲ್ಲ
ಅಪ್ಪಾ ಎಂದು ಅಪ್ಪುವುದು, ಕಾಲಿಗೆ ಬೀಳುವುದು ಎಲ್ಲವೂ ಸಿನಿಮೀಯಾವಾಗುವುದು ಎನ್ನಿಸಿತು.
"ಸಾರ್ ನೀವು ನನಗೆಂದು ಬಾಸೇ, ಆದರೆ ನಾನು ನಿಮಗೆ ಮಗಳಂತೆ ಕಂಡು ನಿಮ್ಮ ಮನಸಿಗೆ ಕೊಂಚ ನೆಮ್ಮದಿಯಾಗುವುದಾದರೇ ನನ್ನ್ನ ಅಭ್ಯಂತರವೇನಿಲ್ಲ. ಆದರೂ ನಾನು ನಿಮ್ಮನ್ನ ಅಪ್ಪ ಎಂದು ಒಪ್ಪಲು ಸಾಧ್ಯವಿಲ್ಲ , ಏಕೆಂದರೆ ನಾನು ಅಂದುಕೊಂಡ ಅಪ್ಪ ಎನ್ನುವ ಪದಕ್ಕೂ ನಿಮ್ಮ ವ್ಯಕ್ತಿತ್ವಕ್ಕೂ ಬಹಳ ದೂರ, ನನ್ನ ಹೃದಯದಲ್ಲಿ ನಿಮಗಾಗಿ ವಾತ್ಸಲ್ಯ ಗೌರವ ಖಂಡಿತಾ ಇರುತ್ತದೆ ಆದರೆ ಅಪ್ಪನಿಗಾಗಿ ಅಲ್ಲ ನನ್ನ ಭಾವನೆಯನ್ನು ಬದಲಿಸಿದ ನಿಮ್ಮ ಮೇರು ವ್ಯಕ್ತಿತ್ವಕ್ಕಾಗಿ"
ಇನ್ನೇನು ಹೇಳಲು ಮನಸ್ಸು ಬರಲಿಲ್ಲ.
ಆತ ನೋಡುತ್ತಲೇ ನಿಂತರು
ಸುಮ್ಮನೆ ಬಾಗಿಲು ಹಾಕಿಕೊಂಡು ಹೊರಗಡೆ ಬಂದೆ