ಆತನೇನೋ ಆಹ್ವಾನ ನೀಡಿದ್ದ. ಮರುಭೂಮಿಯಾಗಿದ್ದ ದೇಹಕ್ಕೆ ಪ್ರೀತಿ ನೀರಿನ ಸಿಂಚನ ಮಾಡುವುದಾಗಿ ಹೇಳಿದ್ದ . ತೊಳಲಾಟದಲ್ಲಿ ಸಿಕ್ಕಿದ್ದಳು. ಒಪ್ಪುವುದೇ ಬೇಡವೇ? ಗಂಡನಂತೂ ಇನ್ನು ಒಂದು ವರ್ಷ ಬರುವುದಿಲ್ಲ. ಮಾನಸಿಕವಾಗಿ ಗಂಡನನ್ನೇ ಪ್ರೀತಿಸುತ್ತಿದ್ದರೂ ದೈಹಿಕ ಬಯಕೆಗಳನ್ನೆಂತು ಸಮಾಧಾನಗೊಳಿಸುವುದು? ಆಗಲೇ ಸಿಕ್ಕಿದ್ದ ಈ ಪೋರ ಮಾತಿನಲ್ಲಿಯೇ ಅರಮನೆಯನ್ನೇ ತೋರಿದ್ದ. ಮೌನದ ಅವಧಿಯಲ್ಲೂ ಅವಳ ನೆನಪಿನ ಭಾಗವಾಗುತ್ತಿದ್ದ.
ಮಾತು ಮೌನಗಳ ಮೀರಿ ಅವಳು ಬಯಸಿದ ಭಾಗ್ಯ ಅವಳದಾಗುತ್ತಿದ್ದಾಗ ಅಹ್ವಾನ ತಿರಸ್ಕರಿಸಲು ಮನಸು ಬಾರಲಿಲ್ಲ . ರಾತ್ರಿ ಬಾಗಿಲಿಗೆ ಚಿಲಕ ಹಾಕದಂತೆ ಹೇಳಿದ್ದ ಆತ . ಸಾಯಂಕಾಲವಾಗುತ್ತಿದ್ದಂತೆ ಬೆವರು ಹಣೆಯಲ್ಲಿ ಮುತ್ತಾಗುತಿತ್ತು . ಎದೆಯ ಡವಡವ ಅವಳಿಗೇ ಕೇಳುವಂತೆ ಹೊಡೆದುಕೊಳ್ಳುತ್ತಿತ್ತು. ಕಂಪೆನಿಯಿಂದ ಮನೆಗೆ ಬಂದೊಡನೆ ಎಂದಿಗಿಂತ ಹೆಚ್ಚಾಗಿಯೇ ಅಲಂಕರಿಸಿಕೊಂಡಳು. ಕನ್ನಡಿಯಲ್ಲಿ ತನ್ನ ರೂಪು ನೋಡಿ ಅವಳಿಗೇ ಅಸೂಯೆಯಾಯಿತು. ಘಂಟೇ ಏಳಾಯಿತು. ಎಂಟು ಆಯಿತು. ತುಂಬಾ ಹೊತ್ತಿನ ತನಕ ಟೀವಿ ನೋಡುತ್ತಿದ್ದಳು. ಟಿವಿ ಆಫ್ ಮಾಡಿ ಮಂಚದ ಮೇಲೆ ಉರುಳಿದಳು
ಮನಸಲ್ಲಿ ಏನೇನೋ ಯೋಚನೆಗಳು . ಗಂಡನಿಗೆ ಮೋಸ ಮಾಡುತ್ತಿದ್ದೇನೇಯೇ ಎಂದೊಮ್ಮೆ ಅಳುಕಾಯ್ತು. ಇಲ್ಲ ಅವನೂ ಆ ಊರಲ್ಲಿ ಹೀಗೆ ಮತ್ತೊಬ್ಬಳೊಡನೇ .. ಛೆ ಛೆ ಇಲ್ಲ ಅವನು ಅಂತಹವನಲ್ಲ. ಕೇವಲ ದೈಹಿಕ ಬಯಕೆಗೆ ಈಡಾಗುವ ಗಂಡು ಅವನಲ್ಲ.
ಅವನು ಹಾಗಿಲ್ಲ್ದದಿದ್ದಲ್ಲಿ ತಾನೇಕೆ ಹೀಗೆ?
ಪ್ರಶ್ನೆ ಮನಸಲ್ಲಿ ಮೂಡುತ್ತಿತ್ತು. ಉತ್ತರ ಕೊಡಲು ಆಗಲಿಲ್ಲ ಎಂಬುದಕ್ಕಿಂತ ಅವಳೇ ಪ್ರಶ್ನೆಯನ್ನು ಅಳಿಸಿದಳು.
ಹಾಗೆ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದಂತೆ . ಏನೋ ನೆನಪಾದವಳಂತೆ ಬಾಗಿಲ ಬಳಿ ಹೋಗಿ ಬಂದಳು
ಅಂದು ರಾತ್ರಿ ಕಳೆಯಿತು.
ಸಮಾಧಾನದ ನಿದ್ದೆಯಿಂದ ಎಚ್ಚೆತ್ತಳು.
ಬೆಳಗ್ಗೆ ಆತನ ಫೋನ್ ಬಂತು
"ಬಾಗಿಲ ಚಿಲಕ ಏಕೆ ಹಾಕಿದ್ದೆ?"
"ಬಾಗಿಲು ಭದ್ರವಾಗಿರಲಿ ಅಂತ"ಹೇಳಿ ಫೋನ್ ಆಫ್ ಮಾಡಿದಳು, ಎದುರಿದ್ದ ಗಂಡನ ಫೋಟೋ ಸಮಾಧಾನದ ನಗೆ ನಕ್ಕಂತೆ ಕಂಡಿತು