Monday, July 13, 2009

ಮನೆಯಲ್ಲಿ ಮೌನ ಹೆಪ್ಪುಗಟ್ತಿತ್ತು . ಸುಧಾಕರ ಇನ್ನೂ ಯೋಚನೆಗಳಿಂದ ಹೊರ ಬಂದಿರಲಿಲ್ಲ. ಬೆಳಗ್ಗೆವರೆಗೂ ಅವಳು ಕೇವಲ ಅವನವಳಾಗಿದ್ದವಳು ಈಗ ಮಲಿನವಾಗಿದ್ದಳು.
ತಲೆಯಲ್ಲಿ ಸಾವಿರಾರು ವಾಹನಗಳು ಒಮ್ಮೆಲೆ ಓಡಾಡಿದಂತೆ ಗೊಂದಲ ಗೋಜಲಾಗಿತ್ತು. ಒಳಗೆ ಅವಳು ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದ ಸದ್ದು ಕೇಳುತ್ತಿತ್ತು. ಏನು ಮಾಡುವುದು ಈಗ ?

ನಾಯಿ ಮುಟ್ಟಿದ ಮಡಿಕೆಯಾದಳೇ ಪ್ರೀತಿ. ಛೆ ಇದೇನು ಅವಳ ಬಗ್ಗೆ ಇಂತಹ ವಿಚಾರ ಸಲ್ಲದು . ತಲೆ ಕೊಡವಿದ .
ನೆನ್ನೆವರೆಗೂ ತನ್ನದೆಲ್ಲಾವನ್ನೂ ಕೊಟ್ಟು ಸುಖದಲ್ಲಿ ತೇಲಿಸಿದವಳು ಅವಳದಲ್ಲದ ತಪ್ಪಿಗೆ ಶಿಕ್ಷೆ ಪಡೆಯಬೇಕೆ? ಅವಳು ಮಾಡಿದ ತಪ್ಪಾದರೂ ಏನು?
ಅವಳು ಅವೇಳೆಯಲ್ಲಿ ಬಂದಿದ್ದೇ ತಪ್ಪಾಯ್ತೇ? ಸುಂದರವಾಗಿದ್ದಾಳೆ ಎಂಬುದೇ ತಪ್ಪೇ ಅಥವ ಹೆಣ್ಣಾಗಿ ಹುಟ್ಟಿದ್ದೇ ತಪ್ಪೇ?
ಅವಳ ಮೇಲೆ ಕನಿಕರ ಹುಟ್ಟುತ್ತ್ತಿತ್ತಾದರೂ ಮತ್ತೆ ಅವಳನ್ನು ಹೆಂಡತಿಯಾಗಿ ಕಾಣುವ ಕಲ್ಪನೆಯೆ ದೂರವಾಗುತ್ತಿದೆ. ಯಾರೋ ಮುಟ್ಟಿ ಸುಖಿಸಿದವಳ ಜೊತೆ ಮತ್ತೆ ದಾಂಪತ್ಯ ? ಅದು ಹೇಗೆ. ಆಗುತ್ತ್ತಾ ?. ಆಗೋಲ್ಲ. ಇಡೀ ಬೀದಿಗೆಲ್ಲಾ ಸುದ್ದಿ ತಿಳಿದಿದೆ . ಸಾಲದ್ದಕ್ಕೆ ಪೋಲಿಸಿನವರು ಬಂದು ವಿಚಾರಿಸಿದ್ದಾರೆ. ಮರ್ಯಾದೆ ಮೂರುಕಾಸಿಗೆ ಹೋಗಿದೆ.
ಏನು ಮಾಡಲಿ ಡೈವೋರ್ಸ್ ಕೊಡಲೇ? ಅಥವ ತವರಲ್ಲಿ ಬಿಟ್ಟು ಬಂದು ಬಿಡಲೇ? ಅಮ್ಮನಿಗೆ ಹೇಳಿ ಮುಂದುವರೆಯುವುದೇ?. ಅವಳು ಒಪ್ಪುತ್ತಾಳೇಯೇ. ಇಲ್ಲವೇ? ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿ ನಲುಗಿದ್ದ.

ಅತ್ತಿತ್ತ ಶತಪಥ ಹಾಕುತ್ತಿದ್ದ. "ಸುಧಾಕರ್. ಪ್ರೀತೀನ ಸಮಾಧಾನ ಮಾಡೋ ಹೋಗಿ . ತುಂಬಾ ಅಳ್ತಿದಾಳೆ ಒಬ್ಬಳೇ ಇದ್ದರೆ ಏನಾದರೂ ಮಾಡಿಕೋತಾಳೆ" ರಮಾ ಪ್ರೀತಿಯ ರೂಮಿನಿಂದ ಹೊರಗೆ ಬಂದು ಪಿಸು ದನಿಯಲ್ಲಿ ನುಡಿದರು.
ಸೊಸೆಗಾಗಿರುವ ಸ್ಥಿತಿ ಅವರಿಗೂ ಗಾಭರಿ ತಂದಿತ್ತು. ಸುಧಾಕರ್ ಏನೂ ಮಾತಾಡಲಿಲ್ಲ. ಹೆಜ್ಜೆಯನ್ನು ಹಿಂದಿಟ್ಟ
"ಯಾಕೋ ಹೋಗೋ ಒಳಗೆ" ಅಚ್ಚರಿಯಿಂದ ಕೇಳಿದರು
"ಇಲ್ಲಾಮ ಇದು ಇನ್ನು ಮುಂದುವರೆಯೋದಿಲ್ಲ ಅಂತನ್ನಿಸುತ್ತೆ"
"ಶ್ ಹೊರಗಡೆ ಬಾ . " ಹೊರಗಡೆ ಕರೆದೊಯ್ಚರು "ಯಾವುದು? ಹೇಳು"
"ಅಮ್ಮ ಅವಳ ಜೊತೆ ಬಾಳಕ್ಕೆ ಆಗಲ್ಲಾಮ." ಅಳುಕುತ್ತಾ ನುಡಿದ "ಏನೋ ಆಯ್ತು ನಿಂಗೆ" "ಆಗಿದ್ದು ನಂಗಲ್ಲ ಅಮ್ಮ ಅವಳಿಗೆ. ಅವಳು ಈಗ ಈಗ ಕಳಂಕಿತೆ "
"ಏನೋ ಅದು ಕಳಂಕಿತೆ? ಅದು ಹೇಗೆ ಆಗ್ತಾಳೆ ಅವಳು. ತಪ್ಪು ಅವಳದಾ. ಅವಳಿಗೇನೋ ಗೊತ್ತಿತ್ತು ? . ಟ್ಯೂಶನ್ ಮುಗಿಸಿ ಬರೋ ದಾರೀಲಿ ಆ ಖದೀಮರು ಸಂಚು ಹಾಕಿ ಕಾದಿದ್ದರು ಅಂತ? ನೀನೆ ಹೀಗೆ ಹೇಳಿದ್ರೆ ಅವಳೇನ್ ಮಾಡ್ಕೋತಾಳೇ"
"ಅಮ್ಮ ತಪ್ಪ್ಯಾರದ್ದಾದರೂ ಆಗಲಿ . ಅವಳು ಈಗ ನಾಯಿ ಮುಟ್ಟಿದ ಮಡಿಕೆ .ನಾಯಿ ಮಡಕೆ ಮುಟ್ಟಿದ್ರೂ , ಮಡಕೇನ ನಾಯಿ ಮುಟ್ಟಿದ್ರೂ ಮಡಿಕೆಯನ್ನು ಹೊರಗಡೆ ಎಸೆಯೋದೆ ಒಳ್ಳೇಯದು. " "ನಾಯಿ ಮುಟ್ಟಿದ ಮಡಿಕೆ" ರಮಾರ ಕಿವಿಯಲ್ಲಿ ಮತ್ತೆ ಪ್ರತಿಧ್ವನಿಸಿತು .
ಮುವತ್ತು ವರ್ಷದ ಹಿಂದೆಯೂ ಇದೇ ಮಾತುಗಳು ಕೇಳಿಬಂದಿದ್ದವು.
ನೆನಪುಗಳ ಗೂಡಲ್ಲಿ ಸೇರಿ ಹೋಗುವ ಸಮಯವಲ್ಲ ಇದು ಎಂದು ಮನಸು ಎಚ್ಚರಿಸಿತು. " ನಾಯಿ ನಿನ್ನ ಒಂದು ವಜ್ರಾನ ಇಲ್ಲ ಅಮೂಲ್ಯವಾದುದೇನಾದರೂ ಮುಟ್ತಿದ್ರೆ ಎಸೀತಿದ್ಯಾ, ಸುಧಾ ನಿನ್ನ ಹೆಂಡತಿ ಒಂದು ಮಡಿಕೆಗೆ ಸಮಾನವೇನೋ? ಒಂದು ಮಡಿಕೆಯ ಜೊತೆ ಸಂಸಾರ ಮಾಡಿದ್ಯಾ ನೀನು ಇಲ್ಲಿಯವರೆಗೂ ?. " ತೀಕ್ಷ್ಣವಾಗಿ ಬಂದ ಪ್ರಶ್ನೆಯ ಬಾಣಕ್ಕೆ ಉತ್ತರಿಸಲಾಗದೆ ನೆಲ ನೋಡಿದ
"ಅಮ್ಮ ಅದು ಅದು ಗಾದೆ. " ತಡವರಿಸಿದ
"ಗಾದೆ ಗಾದೆ ಸುಳ್ಲಾದರು ವೇದ ಸುಳ್ಲ್ಳಾಗಲ್ಲ ಅನ್ನೋ ಮಾತು ಇರ್ಬೋದು ಆದರೆ ಎಲ್ಲಾ ಸಮಯಕ್ಕೂ ಅವು ಅನ್ವಯ ಆಗೋದಿಲ್ಲ. ಅಕಸ್ಮಾತ್ ನಮ್ಮನೇಲಿ ಒಂದು ಕಾಗೆನೋ ಅಥವ ಗೂಬೇನೋ ಹೊಕ್ಕಿ ಬಿಡುತ್ತೆ. ಅವಾಗ ಮನೆನೆ ಬಿಟ್ಟು ಬಿಡ್ತೀಯಾ ನೀನು? "
"ಅಮ್ಮ ಅದು " "ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡು"
"ಇಲ್ಲ . "
"ಒಂದು ನಿರ್ಜೀವ ವಸ್ತುಗೆ ಕಳಂಕ ಹತ್ತಲ್ಲ ಅಂದರೆ ಜೀವ ಇರೋ ನಿನ್ನ ಮೇಲೆ ಪ್ರಾಣಾನೆ ಇಟ್ಟ್ಘಿರೋ ಆ ನಿನ್ನ ಅರ್ಧಾಂಗಿಗೆ ಹೇಗೋ ಕಳಂಕ ಹತ್ತುತ್ತೆ?"
"ಅಮ್ಮ ಅದು ಅದು.. ನಿನಗೆ ಗೊತ್ತಾಗಲ್ಲಾಮ್ಮ . ಅದು ಗಂಡಂಗೆ ತನ್ನ ಹೆಂಡತೀನ ಮತ್ತೊಬ್ಬರು ಮುಟ್ಟಿದ್ದ್ದಾರೆ ಅಂದಾಗ ತುಂಬಾ ಅಕ್ರೋಶ ಬರುತ್ತೆ" ಮತ್ತೆ ಬಾಯಿಬಿಟ್ಟ
ಇನ್ನೂ ಈತ ದಾರಿಗೆ ಬರೋದಿಲ್ಲವೆಂದೆನಿಸಿತು. ಇಂದಿನ ತನಕ ಕಾಲದಡಿಯಲ್ಲಿ ದಣಿದು ಮತ್ತೆ ಬರುವುದಿಲ್ಲ ಎಂದು ಸೋತು ಹೋಗಿದ್ದ ಆ ಕಹಿ ಸತ್ಯದ ಆಸರೆ ಇಂದು ಹೆಣ್ಣೊಬ್ಬಳ ಜೀವನದ ಸುಗಮಕ್ಕೆ ಬೇಕಾಗಿತ್ತು.
ಆ ರಹಸ್ಯ ರಹಸ್ಯವಾಗಿಯೆ ಇರಬೇಕೆಂದು ಭಾಷೆ ತೆಗೆದುಕೊಂಡಿದ್ದ ರಾಯರು ಇಂದು ಇಲ್ಲ.
ಆದರೆ ಬಾಳ ದಾರಿಯಲ್ಲಿ ಮುಳ್ಳುಗಳ ಹಾದಿಯಲ್ಲಿ ನಡೆಯಬೇಕಿದ್ದ ಅನಾಥ ಹೂವೊಂದನ್ನು ತಮ್ಮ ಎದೆಯ ಎಂದೆಂದಿಗೂ ಬಾಡದ ಪುಷ್ಪವನ್ನಾಗಿ ಪರಿವರ್ತಿಸಿದ್ದವರು ರಾಯರು .ಇಂದು ತಮ್ಮದೇ ಕುಟುಂಬದ ಚಿಗುರೊಂದು ನಲುಗದಿರಲು ಭಾಷೆಯನ್ನು ಮುರಿದರೆ ಸ್ವರ್ಗದಲ್ಲಿ ಬೇಸರಿಸಿಕೊಳ್ಳುವುದಿಲ್ಲ ಎಂದು ರಮಾಗೆ ಗೊತ್ತಿತ್ತು.
ಮಗನ ದೃಷ್ಟಿಯಲ್ಲಿ ತನ್ನ ಸ್ಥಾನ ಏನಾಗಬಹುದು ಎಂಬುದನ್ನೂ ಯೋಚಿಸಲಿಲ್ಲ. ಅದಕ್ಕೆ ಸಿದ್ದರಾಗಿದ್ದರು "ಸುಧಾಕರ್ . ನನ್ನ ಜೊತೆ ಬಾ . "
ಸುಧಾಕರ್ ಅವರನ್ನು ಹಿಂಬಾಲಿಸಿದ ತಂದೆಯ ಫೋಟೋ ಬಳಿ ನಿಂತ ಅಮ್ಮನನ್ನ ನೋಡಿ ಹುಬ್ಬೇರಿಸಿದ . ನೆನಪುಗಳ ಜಾತ್ರೆ ಮೆರವಣಿಗೆ ಹೊರಡಲಾರಂಭಿಸಿತು.
(ಮುಂದುವರೆಯುವುದು)