Monday, December 1, 2008

qan

ನಮ್ಮ ತಾಯಿಯ ಅಜ್ಜಿಯ ಊರು ಈ ಕಣಕಟ್ಟೆ. ಅಲ್ಲಿನ ದೇವಿ ದುಗ್ಗಮ್ಮನನ್ನು ನೋಡಲು ಹೊರಟಿದ್ದಾದರೂ ನಮ್ಮ ಮುತ್ತಜ್ಜಿಯ ಊರು , ಅಲ್ಲಿನ ನಮ್ಮ ಅಜ್ಜಿಯ ಮನೆ, ಎಲ್ಲವನ್ನೂ ನೋಡುವ ಆಸೆಯೇ ನಮ್ಮಲ್ಲಿ ಹೆಚ್ಚಾಗಿದ್ದು ಸುಳ್ಳಲ್ಲ.ನಾವು ಶುಕ್ರವಾರ ಸಂಜೆ ವೇಳೆ ಹೊರಟ್ಟಿದ್ದರಿಂದ ಅರಸೀಕೆರೆ ಸೇರಿದ್ದು ರಾತ್ರಿ ಹನ್ನೆರೆಡು ಘಂಟೆಗೆ . ಹರಿಹರಪುರ ಶ್ರೀಧರ್‌ರವರು ಸಲಹೆಯಂತೆ ಅಲ್ಲಿನ ಮಯೂರ ಲಾಡ್ಜ್‌ನಲ್ಲಿ ಅಂದು ತಂಗಿದೆವು. ಬೆಳಗ್ಗೆ ೮.೩೦ ಗೆ ಹೊಟ್ಟೆ ತುಂಬಿಸಿಕೊಳ್ಳಲು ಅಯೋಧ್ಯ ಹೋಟೆಲ್‌ಗೆ ನುಗ್ಗಿದೆವು. ರುಚಿಯಾದ ತಿಂಡಿಗಳು, ನಿಜಕ್ಕೂ ಹೋಟೆಲ್ ಚಿಕ್ಕದಾದರೂ ತಿಂಡಿ ಬಹಳ ರುಚಿ. ನಿಲ್ಲಲೂ ಜಾಗವಿಲದಂತಹ ಪರಿಸ್ಥಿತಿಯಲ್ಲೂ ತಮ್ಮ ಸರದಿಗಾಗಿ ಜನ ಕಾಯುತ್ತಿರುತ್ತಾರೆ.ಅಲ್ಲಿಂದ ಹೊರಟಿದ್ದು ಸೀದಾ ಕಣಕಟ್ಟೆಗೆ ಬಾಣಾವರದ ದಾಟಿ ಹೋಗುತ್ತಿದಂತೆ ಅಲ್ಲಿನ ಹಸಿರು ಕಣ್ಣು ತುಂಬಿತು . ತೀರ ಬಯಲು ಸೀಮೆಯಲ್ಲಿ ಬೆಳೆದ ನಮಗೆ ನಮ್ಮ ಮಕ್ಕಳಿಗೆ ಅವನ್ನು ನೋಡುವುದೇ ಒಂಥರಾ ಪರಮಾನಂದ. ನಮ್ಮ ತಾಯಿಗಂತೂ ಸಡಗರ . ಎಷ್ಟಾದರೂ ತಮ್ಮ ಅಜ್ಜಿಯ ಊರಲ್ಲವೇ?ಅಂತೂ ಇಂತೂ ನಾವು ಬಯಸುತ್ತಿದ್ದ ಕಣಕಟ್ಟೆ ಬಂದೇ ಬಿಟ್ಟಿತು ಅಮ್ಮ ಅಲ್ಲಿನ ಅಂಗಡಿಯೊಂದರಲ್ಲಿ ಮಾತಾಡಿದರು . ನರಸಕ್ಕ(ನಮ್ಮ ಮುತ್ತಜ್ಜಿಯ ಹೆಸರು) ತುಂಬಾನೆ ಪ್ರಸಿದ್ದವಾದ ಹೆಸರು ಅಲ್ಲಿನ ಊರಿನವರಿಗೆ . ಅವರು ಈಗ ಇಲ್ಲವಾದರೂ ಅವರ ಹೆಸರು ಮಾತ್ರ ಜನರ ನಾಲಿಗೆಯ ಮೇಲೆ ಇನ್ನೂ ಹರಿದಾಡುತ್ತಿದೆ. ನರಸಕ್ಕನ ಮೊಮ್ಮಗಳು ತನ್ನ ಮೊಮ್ಮ್ಮಕ್ಕಳೊಂದಿಗೆ ಊರಿಗೆ ಭೇಟಿ ನೀಡಿದ್ದೇ ಅಲ್ಲಿನ ಜನರ ಕೌತಕಕ್ಕೆ ಕಾರಣವಾಗಿತ್ತು.ಮೊದಲು ದೇವಿಯ ದರ್ಶನ ನಂತರ ಊರನ್ನು ನೋಡುವುದು ಎಂದು ನಿರ್ಧಾರವಾಯ್ತು ದುಗ್ಗಮ್ಮ್ಮ ಅಲ್ಲಿನ ಕಣಕಟ್ಟೆ ಕೆರೆಯ ಏರಿಯ ಮೇಲೆ ಉದ್ಭವಾಗಿರುವಂತಹ ದೇವಿ . ಕಣಕಟ್ಟೆ ಊರಿನ ಜನರ ರಕ್ಷೆಗೆಂದೆ ಉದ್ಭವಿಸಿರುವಂತಹವಳೆಂದು ಪ್ರತೀತಿ. ನಮ್ಮ ತಾಯಿಯ ಮನೆಯವರೆಲ್ಲಾ ಯಾವುದೇ ಶುಭ ಕಾರ್ಯಕ್ಕೆ ಹೋಗುವ ಮುನ್ನ ಆ ದೇವಿಯ ದರ್ಶನ ಪಡೆದೇ ಹೋಗುತ್ತಾರೆ .

ಅಲ್ಲಿ ನಾವುಗಳೇ ದೇವಿಗೆ ಗರ್ಭಗುಡಿಯೊಳಗೆ ಹೋಗಿ ಪೂಜೆ ಮಾಡಬಹುದು. ಜಾತಿಯ ಪ್ರಶ್ನೆ ಅಂತಲ್ಲ ಆದರೆ ಬ್ರಾಹ್ಮಣರಿಗೆ ಮಾತ್ರ ಅಲ್ಲಿನ ಪೂಜಾರಿಗಳು ಕೊಡುವ ಮರ್ಯಾದೆ ಇದು.

ನಾವು ಹೋದಾಗ ದೇವಸ್ಥಾನ ಬಾಗಿಲು ಹಾಕಿತ್ತು. ನಮ್ಮ ಭಾವ ಹಾಗು ಅಮ್ಮ ಪೂಜಾರಿಯನ್ನು ಕರೆದುಕೊಂಡು ಬರಲು ಮತ್ತೆ ಊರಿಗೆ ಹೋದರು.

ಅಷ್ಟು ಹೊತ್ತಿಗಾಗಲೇ ಆ ಪೂಜಾರಿಗೆ ಯಾರು ಬ್ರಾಮ್ರು ಅಮ್ಮಾವರ ದರ್ಶನಕ್ಕೆ ಬಂದವ್ರೆ ಎಂಬ ವಿಶ್ಯ ಗೊತ್ತಾದದ್ದರಿಂದ ಆತ ಕೂಡಲೆ ಬಸ್ ಮಾಡಿಕೊಂಡು ಬಂದಿದ್ದ್ದ . ನಂತರ ನಮ್ಮ ಭಾವನಿಗಾಗಿ ಕಾದು ಕೊನೆಗೆ ಸುಮಾರು ಒಂದು ಘಂಟೆ ಕಾಯುವಂತಾಯ್ತು .

ಕೊನೆಗೂ ಆ ತಾಯಿಯ ದರ್ಶನ ಮಾಡಿಕೊಂಡು , ಪೂಜೆ ಮಾಡಿ ಅಲ್ಲಿನ ದೇವಸ್ಥಾನದ , ಕೆರೆಯ ಒಂದಷ್ಟು ಫೋಟೊ ತೆಗೆದುಕೊಂಡು ನಂತರ ಇನ್ನೇನು ಹೊರಡಬೇಕೆಂದುಕೊಂಡೆವು ಆಗ ನಮ್ಮ ಅತ್ತೆ ಬೆಳಗೂರು ಶ್ರೀ ಆಂಜನೇಯ ಸ್ವಾಮಿಯ ದರ್ಶನ ಮಾಡಿಕೊಂಡು ಹೊರಡೋಣ ಎಂದರು.

ಅಂತೆಯೇ ದರ್ಶನ ಮುಗಿಸಿಕೊಂಡು ಬರುವಷ್ಟರಲ್ಲಿ ಕಣಕಟ್ಟೆಗೆ ಬರುವಷ್ಟರಲ್ಲಿ ಸಂಜೆ ಏಳು ಘಂಟೆಯಾಗಿತ್ತು . ಅಮ್ಮನ ಅಜ್ಜಿಯ ಮನೆ ನೋಡುವ ಕಾತುರ ನಮಗೆ ಇನ್ನೂ ಹೆಚ್ಚಾಗಿತ್ತು.

ಅಂತೂ ಇಂತು ನಮ್ಮ ಮುತ್ತಜ್ಜಿಯ ಮನೆ ಇದ್ದ ಜಾಗಕ್ಕೆ ಬಂದೆವು . ನಮ್ಮ ಆಸೆ ಎಲ್ಲಾ ಟುಸ್ ಆಯಿತು ಏಕೆಂದರೆ ನಮ್ಮ ಮುತ್ತಜ್ಜಿಯ ಮನೆ ಇದ್ದ ಜಾಗ ಏರ್‌ಟೆಲ್ ಟವರ್‌ಗೆ ಆಶ್ರಯವಾಗಿತ್ತು ನಮ್ಮ ಮುತ್ತಜ್ಜಿಯ ಮನೆ ಈಗ ಅಲ್ಲಿತ್ತು ಎಂಬುದಕ್ಕೆ ಕುರುಹೂ ಇರಲಿಲ್ಲ . ಅಲ್ಲಿಗೆ ಹೋಗುವುದಿರಲಿ ನೋಡುವುದಕ್ಕೂ ಬಹಳ ಕಷ್ಟ ಪಡಬೇಕಿತ್ತು. ರಾತ್ರಿ ಯಾದ್ದರಿಂದ ಫೋಟೋಗೂ ಸಿಗಲಿಲ್ಲ . ಆದರೂ ನಮ್ಮ ಯಜಮಾನರು ಬಂದದ್ದು ಬರಲಿ ಎಂದು ಒಂದಷ್ಟು ಕ್ಲಿಕ್ಕಿಸಿದರು.

ಊರು ಬಣ ಬಣ ಅನ್ನುತ್ತಿತ್ತು . ಅಲ್ಲಿ ಮನೆಗಳಿದ್ದರೂ ವಾಸಿಸಲು ಜನರೇ ಇಲ್ಲ ಹಾಗೂ ಹೀಗೂ ನಮ್ಮ ತಾಯಿಯ ಚಿಕ್ಕಮ್ಮನ ವಾರಿಗೆಯವರೊಬ್ಬರು ಸಿಕ್ಕರು. ಅಲ್ಲಿ ಇನ್ನೊಂದೆರೆಡು ನಿಮಿಷ ಇದ್ದರೆ ತಲೆ ಚಿಟ್ಟು ಹಿಡಿಯುತ್ತದೆಯೇನೋ ಎಂಬ ಅನುಮಾನ ಕಾಡತೊಡಗಿತು ಕೇವಲ ಏಳು ಘಂಟೆ ಅಂಥ ನೀರವ ಮೌನ , ಕತ್ತಲು ನಾನೆಂದೂ ಕಂಡಿದ್ದಿಲ್ಲ.

ಅಲ್ಲೆ ಕೊಂಚ ಮೇಲೆ ಶ್ರೀ ಲಕ್ಶ್ಮಿ ನಾರಾಯಣ ಸ್ವಾಮಿಯ ದೇವಸ್ಥಾನವಿತ್ತು . ಅದರ ಅರ್ಚಕರ ಮನೆಯೂ ಹತ್ತಿರವೇ ಇತ್ತು. ಅವರೂ ಕೂಡಲೆ ಬಂದರು . ಆ ದೇವರ ಮಹಾತ್ಮೆಯನ್ನು ಕೇಳಿ ಅಲ್ಲಿನ ಪೂಜೆ ಮುಗಿಸಿಕೊಂಡು ಬಂದು ಅಲ್ಲೇ ಇದ್ದ ಮುಕ್ಕಣ್ಣ ಮಾರಮ್ಮ ಎಂಬ ದೇವಿಯ ದೇವಸ್ಥಾನಕ್ಕೆ ಬಂದೆವು . ಅಂದು ನಮ್ಮ ಅದೃಷ್ಟವೋ ಏನೊ ದೇವಿ ಹೊರಡಿಸುವುದು(ದೇವಿ ಮೈ ಮೇಲೆ ಬರುವ ಸನ್ನಿವೇಶ) ನಡೆಯುತ್ತಿತ್ತು. ಒಂದಷ್ಟು ಜನರು ತಮ್ಮ ತಮ್ಮ ಸಮಸ್ಯೆಗಳನ್ನು ದೇವಿಯ ಮುಂದೆ ಇಡುತ್ತಿದ್ದರು. ದೇವಿಯ ದೊಡ್ಡ ಮುಖವಾಡ ಧರಿಸಿದ ವ್ಯಕ್ತಿಯೂಬ್ಬರ ಮೈ ಮೇಲೆ ದೇವಿ ಬಂದಿತ್ತಂತೆ.
ನಾವು ಹೊರಡಬೇಕು ಎಂದುಕೊಳ್ಳುತ್ತಿದ್ದಂತೆ ದೇವಿಯಿಂದ ನಾವಲ್ಲೇ ಇರಬೇಕೆಂಬ ಅಪ್ಪಣೆಯಾಯಿತು .
ಫೋಟೋ ಕ್ಲಿಕ್ಕಿಸಲು ಭಯ. ಹಾಗಾಗಿ ಫೋಟೊ ತೆಗೆಯಲಿಲ್ಲ
ಅಷ್ಟರಲ್ಲಿ ನನ್ನ ಮಗಳು ಆ ಮಾಮಿಯನ್ನು(ದೇವಿಯನ್ನು) ಮುಟ್ಟಬೇಕು ಎಂದು ಹಟ ಹಿಡಿದಳು.
ಕೊನೆಗೂ ಹೊರಡಬಹುದೆಂದು ನಮಗೆ ಅಪ್ಪಣೆಯಾಯಿತು . ನನ್ನ ಮಗಳು ದೇವಿಯ ಮುಖವಾಡವನ್ನು ಮುಟ್ಟಿ ಬಂದಳು.
ಕೊನೆಗೂ ಕಟ್ಟೆಯಿಂದ ಹೊರಡುತ್ತಿದ್ದಂತೆ ಅಮ್ಮನ ಕಣ್ಣಲ್ಲಿ ನೀರು .

ಯಾವುದೋ ಹಳೆಯ ನೆನಪು .ನಮ್ಮ ಅಜ್ಜಿಯ ಮನೆಗಾಗಿದ್ದ ಗತಿ ಅವಳಿಗೆ ನೋವು ತಂದಿತ್ತು
ಸಾಧ್ಯವಾದರೆ ಆ ಜಾಗವನ್ನು ಕೊಂಡುಕೊಳ್ಳುವುದೆಂದು ನಿರ್ಧರಿಸಿದೆ.
ನಂತರ ಮತ್ತೆ ಅರಸೀಕೆರೆ ಎಡೆಗೆ ಪಯಣ . ಮುತ್ತಜ್ಜಿಯ ಮನೆ ಊರು ಇವುಗಳ ಬಗ್ಗೆ ಅತೀವ ನಿರೀಕ್ಷೆ ಇಟ್ಟುಕೊಂಡಿದ್ದ ನಮಗೆ ಅಲ್ಲಿನ ಪಾಳು ಜಾಗ, ಪಾಳು ಬಿದ್ದ ಓರು ನಿರ್ಜನ ಬೀದಿಗಳ ನೋಡಿದ ಮೇಲೆ ಮನಸ್ಸು ಭಾರವಾಗಿತ್ತು