Friday, August 24, 2012

ಕಾಲದ ಮಹಿಮೆ


ಬದಲಾಗಿ ಹೋಯ್ತೇ ಕಾಲ ,
ಬದಲಾಗಿ ಹೋದೆನೇ ನಾನು
ಅಂದಿನ ಮುಗ್ಧತನ ಕಳೆದುಹೋಯ್ತೇ
ಅರಳು ಕಂಗಳ , ಅಚ್ಚರಿಯ ನೋಟವದು ಎಲ್ಲಿ ಹೋಯಿತು
ವರ್ಷಗಳುರುಳಿದಂತೆ ಮಾಯವಾಯಿತು
ಅದು ನಾನೇನಾ ಅಥವ ಇದು ನಿಜಾವೇ ನಾ?
ಅರಿಯದಾಗದ ಗೊಂದಲ

ಆಧುನಿಕತೆಯಡಿಯಲ್ಲಿ ಸಿಲುಕಿ ಕದಲಿರುವೆನೇ
ಇಲ್ಲ ಸಂಪ್ರದಾಯಕ್ಕೆ ಕನಲಿರುವೆನೇ?
ಹಳೆಯದೆಲ್ಲವೂ ಚಿನ್ನವೆಂದು ಹೇಳಿದರೂ
ಹಳೆಯದ ಹೊಸದಕ್ಕೆ ಬದಲಾಯಿಸಿಕೊಳ್ಳುವ
ಕೊಳ್ಳುವ ದ್ವಂದ್ವ ಮನಸ್ಥಿತಿಯೇ


ದೇವರಿದ್ದಾನೆಂದು ಶರಣಾಗುವ ಕಾಲದಲ್ಲಿ
ದೇವ ನೀನಿರುವೆಯಾ ನಿಜದಲ್ಲಿ?
ಎಂಬ ಭಾವ ಮನದಲ್ಲಿ
ಇದ್ದಾನೋ ಇಲ್ಲವೋ ಆ ದ್ವಂದ್ವದಲ್ಲಿ
ಮನಸದು ಬೀಳುತಿದೆ ಗೋಜಲಲ್ಲಿ

ಪತಿ ಪರದೈವ ಎಂದು ಭೀಮನಮಾವಾಸ್ಯೆಗೆ
ಪೂಜೆ ಗೈಯುವ ಹೊತ್ತಿನಲ್ಲಿಯೇ
ಹೊತ್ತಿಗಾತ ಬಾರದ ಸಿಟ್ಟಿನಲ್ಲಿ ಬೈಯ್ಯುವ ಸತಿಗೆ
ಪರ ಯೋಚನೆ ಕಾಡುದಿರುವುದೇ?

ರಾಮನನ್ನು ಪೂಜಿಸುವ ಪತಿಗೆ ಎದುರಲ್ಲಿ
ಸುಂದರಿಯ ನೋಡಲು
ರಾಧಾಲೋಲ ಮುರಳಿ ನೆನಪಾದಲ್ಲಿ
ಅಚ್ಚರಿಯೇನು

ಅಂದು ತಪ್ಪೆಂದು  ನುಡಿದದ್ದು
ಇಂದು ಸರಿಯಾಗಿ ಕಂಡರೆ
ಕಾಲದ ಮಹಿಮೆಯೆಂದು
ಸುಮ್ಮನಾಗುವುದೇ?



Thursday, August 9, 2012

ದಡವಿರದ ಸಾಗರ ಭಾಗ ಐದು



"ಅಮಿತಾ " ಹೆಸರನ್ನು ನೋಡಿಯೇ ಒಮ್ಮೆ ಗಾಭರಿಯಾದ ಶ್ರೀಕಾಂತ್, ................. ಅಭಿಯ ಮೊಬೈಲ್ ಕೈಗೆ ಸಿಕ್ಕಿತ್ತು . ಕಾರಿನಲ್ಲಿ ಅಪ್ಪನ ಜೊತೆ ಬರುತ್ತಿದ್ದ ಅಭಿ ಫೋನ್ ಮರೆತು ಕೆಳಗೆ ಇಳಿದಿದ್ದ.
ನ್ಯೂ ಮೆಸೇಜ್  ಅಂತಿತ್ತು
ಅ....................ಮಿ..........................ತಾ" ಇಷ್ಟೆ ಇದ್ದ ಆ ಮೆಸೇಜ್. ಆ ಹೆಸರು ಅವನಿಗೆ ಹೊಸದೇನಲ್ಲ.  ಪ್ರಿಂಟರ್ಸ್ ನಿಂದ ಹಿಡಿದು  ರಿಯಲ್ ಎಸ್ಟೇಟ್‍ವರೆಗೂ ಶ್ರೀಕಾಂತನ  ಎಲ್ಲಾ ವ್ಯವಹಾರಗಳಿಗೂ ಏಕೈಕ ಪೈಪೋಟಿ ಅಮಿತಾ ವಯಸು ಇನ್ನೂ ೨೮ ಮೀರಿಲ್ಲ ಆಗಲೇ ಪರ್ವತದಷ್ಟು ಜವಾಬ್ದಾರಿಗಳನ್ನ ನಿರ್ವಹಿಸುತ್ತಿದ್ದಾಳೆ.  ಎಲ್ಲಾ ಟೆಂಡರ್‌ಗಳಲ್ಲೂ ಏಕೈಕ ಎದುರಾಳಿ ಅವಳೇ............ ಅವಳ ಅಪ್ಪ ಅಮ್ಮ ............................. ಯೋಚಿಸುತ್ತಿದ್ದಂತೆ ತಲೆ ಸಿಡಿಯಲಾರಂಭಿಸಿತು . ಮತ್ತೆ ಆ ಯೋಚನೆಯೂ ಬೇಡವೆಂದೆನಿಸಿ.... ತಲೆ ಕೊಡವಿದ. ಅಭಿಗೂ  ಅಮಿತಾಗೂ ಹೇಗೆ ಪರಿಚಯ?
ಯಾವಾಗಿನಿಂದ? ಅಭಿಯ ಸ್ವಭಾವ ಗೊತ್ತಿಲ್ಲದ್ದೇನಲ್ಲ.............  ಆದರೆ ಅವಳ ಬಲೆಗೆ ಇವನು ಬಿದ್ದಿದ್ದರೆ ? ಬಹಳ ಚಾಣಾಕ್ಷ ಹೆಣ್ಣು ಆಕೆ.............ಅಭಿಯನ್ನೇ ಕೇಳಿಬಿಡೋದು ಉತ್ತಮ ಎಂದೆನಿಸಿತಾದರೊ  ಅವನಿಗೆ ತಾನವನ ಪರ್ಸನಲ್ ಮೊಬೈಲ್ ನೋಡಿದ್ದೇನೆ ಎಂದು ಗೊತ್ತಾದರೆ ಇಷ್ಟವಾಗಲ್ಲ ಎಂಬುದು ಗೊತ್ತಿದ್ದರಿಂದ ಸುಮ್ಮನಾದ......... ಅಭಿಯ ಆತ್ಮೀಯ ಗೆಳೆಯ ರವಿಯ ಬಳಿ ಕೇಳುವುದು ಉತ್ತಮ ಎಂದನಿಸಿತು.ಮೊಬೈಲ್ ಮತ್ತೆ ಅದೇ ಸ್ಥಾನದಲ್ಲಿ ಇರಿಸಿದ.
ಅಭಿ ಕಾರ್ ಹತ್ತಿರ ದಾಫುಗಾಲು ಇಡುತ್ತಾ ಬಂದ. "ಶ್ರೀ ನನ್ ಮೊಬೈಲ್ ಕೊಡು" ಇವನು ತನ್ನನ್ನ ಡ್ಯಾಡ್ ಅನ್ನೋದೆ ಇಲ್ಲ . ನಾನು ನಿನ್ ಫ಼್ರೆಂಡ್ ಥರಾ ಅಂದಿದ್ದೇ ತಡ ಡ್ಯಾಡ್ ಹೋಗಿ ಶ್ರೀ ಎನ್ನಲಾರಂಭಿಸಿದ. ಕಿರು ನಗೆ ನಗುತ್ತಾ ಅಭಿಗೆ ಫೋನ್ ಕೊಟ್ಟ ಶ್ರೀ. ಕೇಳಬೇಕೆನಿಸಿದ್ದನೆಲ್ಲಾ ರವಿಯ ಬಳಿ ರಾಶಿ ಹಾಕಲು ಸಿದ್ದ ಮಾಡಿಕೊಳ್ಳುತ್ತಿದ್ದ
"ಥ್ಯಾಂಕ್ ಯು ಶ್ರೀ"
ಅಭಿ ಫೋನ್  ತೆಗೆದುಕೊಂಡು ಬಂದಷ್ಟೆ ವೇಗದಲ್ಲಿ ನಡೆದ  ಆಫೀಸಿನೆಡೆಗೆ.
ಶ್ರೀಗೆ ಮತ್ತೆ ಮತ್ತೆ ಅವಳ ನೆನಪಾಗುತ್ತಿತ್ತು. ಅಮಿತಾಆಆಆಆಅ"
...........................
ಅಭಿ ಮೊಬೈಲ್ ನೋಡಿದ . ಇವಳು  ಮತ್ತೆ ಮತ್ತೆ ಮೆಸೆಜ್ ಕಳಿಸ್ತಾನೆ ಇರ್ತಾಳೆ...... ಇನ್ನೂ ಮರೆತಿಲ್ಲ ಅನ್ಸುತ್ತೆ... ಸಾಕಪ್ಪ ಸಾಕು ಎಂದೆನಿಸಿದಳಲ್ಲ . ಆ ಆರು ತಿಂಗಳು. ಮೋಜಿಗೆಂದು ಶುರು ಮಾಡಿದ್ದು ದೊಡ್ಡ ದೊಡ್ಡ ಮಾತಿನಲ್ಲಿ ಕೊನೆಯಾಯ್ತು. ಕೊನೆಗೂ ಅವಳ ಚಾಪ್ಟರ್ ಮುಗಿಯಿತು ಎಂದುಕೊಂಡರೂ ಅವಳು ಮಾತ್ರ ಆಗಾಗ ತನ್ನ ಹೆಸರನ್ನೇ ಮೆಸೇಜ್ ಮಾಡ್ತಿರ್ತಾಳೆ. ಅವಳು.............. ಅಮಿತಾ.....  ಎಂದಿನಂತೆ ಡಿಲೀಟ್ ಮಾಡಿದ
................ ................ ............. ...............
ಕಿರಣ ಮೇಡ್ಂ ಬಳಿ ಮಾತಾಡಿ ಮೂರ್ತಿಯನ್ನ ಸುಪ್ರೀತಾಳ ಜೊತೆಯಲ್ಲಿಯೇ ಇರಿಸಿಕೊಳ್ಳಲು ಒಪ್ಪಿಸಿದ್ದ. ಮೂರ್ತಿ ಕೆಂಡದ ಕಂಗಳವ....... ಸ್ಮಾರ್ಟ್ ಆದರೂ ಸಿಡುಕು ಸ್ವಭಾವ ಒರಟು  ಮಾತಿನಲ್ಲಿ ಗಡಸು...  .... ಅಮಿತಾ ಮೊದಲ ಬಾರಿ ನೋಡಿದಾಗಲೇ ನಿರ್ಧರಿಸಿಬಿಟ್ಟಿದ್ದಳು.
ಇವನೇ ತನ್ನ ಬಾಣ. ............................... ಅವಳ ಗುರಿ ತೇಜಸ್ವಿನಿ................. ಹಾಗಾಗಿಯೇ ಮೂರ್ತಿ ತೇಜಸ್ವಿನಿಯನ್ನ ಭೇಟಿಯಾಗುವಂತೆ ಮಾಡಿದ್ದಳು. ಅಂದಿನ ಪಿವಿಆರ್ ನಲ್ಲಿ ನಡೆದ ಇಡೀ ನಾಟಕದ ಸೂತ್ರಧಾರಿ ಅಮಿತಾ.......
ಆದರೆ ಅದಕ್ಕಾಗಿ ಅವಳು ಕೊಟ್ಟ ಬೆಲೆ ಮಾತ್ರ ಮೂರ್ತಿಯನ್ನು ಜನ್ಮಜನ್ಮಾಂತರಕ್ಕೂ ಅವಳ ದಾಸನಾಗಿರಿಸುವಂತೆ ಮಾಡಿತು.
ಕಿರಣ ಮತ್ತು ಸುಪ್ರೀತ ಮಾತ್ರ ಮೇಡ್ಂಗೆ ಪಾಲಿಗೆ ಮೂರ್ತಿ ಅಮಿತಾಗೆ ತಮ್ಮಿಂದಲೇ ಪರಿಚಯವಾದವನು ........ಹೀಗಿರಬೇಡ ಹಾಗಿರಬೇಡ ಮೇಡ್ಂಗೆ ಕೋಪ ಬರುತ್ತೆ ಎಂದೆಲ್ಲಾ ಊದುತ್ತಿದ್ದ ಕಿರಣ್ .......... ಮೂರ್ತಿ ನಗುತ್ತಿದ್ದನಷ್ಟೇ
..................................................................
ಹಾಗೆ ನೋಡಿದರೆ ಅಮಿತಾ ಆಗಲಿ  ತೇಜಸ್ವಿನಿ ಯಾಗಲಿ ಎಂದೂ ಮುಖಾ ಮುಖಿಯಾದದ್ದಿಲ್ಲ.. ಅಮಿತಾ ತನ್ನ ಎದುರಾಳಿ ಎಂದು ಅಭಿಗೂ ಗೊತ್ತಿದ್ದಿಲ್ಲ.  ಈ ಆರು ತಿರುವಿನ ರಸ್ತೆಯಲ್ಲಿ ತಾನೊಂದು  ಏಳನೇ  ತಿರುವಾಗಬಹುದೆಂದೂ ಹಾಗೂ ಆ ಆರೂ ಜನರ ಬದುಕಿನ ಅಂತ್ಯದ ದಾರಿ ತನ್ನಿಂದಲೇ   ಎಂಬ  ಅರಿವು ಸುಪ್ರೀತಾಗೆ ಇದ್ದಿದ್ದಲ್ಲಿ ಅವಳು ಮೈಸೂರಿನಿಂದ  ಬೆಂಗಳೂರಿಗೆ ಬರುತ್ತಲೇ ಇರುತ್ತಿರಲಿಲ್ಲ

Friday, August 3, 2012

ಕೈ ಆಡಿಸಿ ಕಣ್ ಮಿಟುಕಿಸಿ

ಹೈದರಾಬಾದ್ ಏರ್ ಪೋರ್ಟ್ನಲ್ಲಿ ಹೊಳೆದ ಸಾಲುಗಳು

ಕೈ ಆಡಿಸಿ ಕಣ್ ಮಿಟುಕಿಸಿ ಹೋದೆ ನೀನೆಲ್ಲಿ
ನನ್ನಾಡಿಸಿ, ಮನಕಾಡಿಸಿ ನಿಂತೆ ಮನದಲ್ಲಿ
ಮೆಲ್ನಗೆಯ ಜಾರಿಸಿ ನೆಲೆಯಾದೆ ನನ್ನಲ್ಲಿ
ಸುಳ್ನುಡಿಯ ಹೇಳೆ, ನಾನಿಲ್ಲ ನನ್ನಲ್ಲಿ 

ಸುತ್ತ ಮುತ್ತ ಜನರ ಕಾಣಲಿಲ್ಲ ನಾ
ಅತ್ತ ಇತ್ತ ನಿಂತವರ ನೋಡಲಿಲ್ಲ ನಾ
ಚಿತ್ತವಂತೂ ಹಾಗೆ ಸೇರಿತೇಕೆ ನಿನ್ನಾ
ಒತ್ತಿ ಮನದಲ್ಲಿ ನಿನ್ನ ಛಾಯೆಯನ್ನ

ಮದನನ ಮಂದಹಾಸ ನಿನ್ನ
ನಗೆಯಲಿ ಕೂಡಿತೋ
ಹೊಸದಿದು ಇತಿಹಾಸ ನನ್ನ
ಮನದಲಿ ಮೂಡಿತೋ

ಕಳ್ಳಮುರಳಿಯ ಕಣ್ ನೋಟಕೆ
ಮರುಳಾಗಿ ಹೋದೆ ಮೀನಾಗಿ
ಎಲ್ಲತಿಳಿದೂ ನಿನ್ ಆಟಕೆ
ಸೋತು ಹೋದೆ ಗೆಲುವಾಗಿ

Thursday, August 2, 2012

ನೀ ಹಿಂಗ ನೋಡಬೇಡ mattu ರವಿ ಬೆಳಗೆರೆ


ನೆನ್ನೆ ರಾತ್ರಿ  ರವಿ ಬೆಳಗೆರೆಯವರ "ನೀ ಹಿಂಗ ನೋಡಬೇಡ " ಕಾದಂಬರಿ ಓದಿ ಮುಗಿಸಿದೆ.
ಕೈಗೆತ್ತುಕೊಂಡದ್ದು ಮೊನ್ನೆ ರಾತ್ರಿ. ಹೇಗೆ ಓದಿಸಿಕೊಂಡು ಹೋಯ್ತೆಂದರೆ ಎಲ್ಲಿ ನಾನು ಪೂರ್ತಿ ಓದಲಿಲ್ಲವಾದಲ್ಲಿ ಶಿಶಿರಚಂದ್ರ ಶ್ರಾವಣೀನ ಕಳ್ಕೊಳ್ತಾನೋ ಅಂತ.
ದೇವರೇ ಗಿರಿಬಾಬು ಕೆಟ್ಟವನಾಗದಿರಲಿ ಅಂತ ಬೇಡ್ಕೊಂಡೆ(ಆ ದೇವರೇ ಮೂಕನಾಗಿ ಹೋಗಿದ್ದ ರವಿ ಬೆಳಗೆರೆಯವರ ನಿರೂಪಣೆಗೆ ಅನ್ಸುತ್ತೆ)
ಪ್ರತಿ ಪುಟ ಪುಟಕೂ ನವಿರು ಭಾವದೊಡನೆಯೇ ಕುತೂಹಲ , ಕುತೂಹಲದ ಅಂತ್ಯದೊಡನೆಯೇ ಯಾರ್ಯಾರ ಮೇಲೋ ಅನುಮಾನ . ಜಗನ್ ಕೆಟ್ಟವನು ಅನ್ನುತ್ತಲೇ ಅವನ ಮೇಲೊಂದು ಅನುಕಂಪದ ಅಂತ:ಕರಣ ಮೂಡಿಸೋದರಲ್ಲಿ ಅವರು ಗೆದ್ದಿದಾರೆ........ ಇದ್ದಕಿದ್ದಂತೆ ಪ್ರತ್ಯಕ್ಷವಾದ ಚಂಗಳರಾಯುಡು ಸಾಯುತ್ತಿದ್ದಂತೆಯೇ ಆ ಚಂದ್ರ ಎಂಬ ಪ್ರೀತಿಸಿದ ಎಂಬ ಕಾರಣಕ್ಕೆ  ಕೊಲೆಯಾದ ಅಮಾಯಕ ಹುಡುಗನ ಮನಸು ಮಿಡಿಯುತ್ತದೆ.... ಅವನಿಗೆ ಅಯ್ಯೋ ಅನ್ನುವುದೇ ಅಥವ ಇಲ್ಲಿಯವರೆಗೆ ಅನುಕಂಪ ಗಿಟ್ಟಿಸಿದ್ದ ಮೃಣಾಲಿನಿಯ ಮೇಲೆ ಕೋಪಗೊಳ್ಳುವುದೇ, ಅಥವ ಕಾರಣವಿಲ್ಲದೆ ಬೆಟ್ ಕಟ್ಟಿ ಇಡೀ ಸಂಸಾರವೊಂದರೊಳಗೆ ತಾನೊಂದು ಪ್ರಮುಖ ಭಾಗವಾಗಿ ಹೋದ ಶಿಶಿರನ ಮೆಚ್ಚುವುದೇ?
ಇಲ್ಲಿ ಶರ್ಮಿಳಾ ಆಂಟಿ ತುಂಬಾ ಇಷ್ಟವಾಗಿಬಿಡುತ್ತಾಳೆ............. ಎಲ್ಲಿಯೋ ಓದುಗರು ಅವಳಲ್ಲಿ ಯಾರನ್ನೋ ಗುರುತಿಸಲು ಪ್ರಯತ್ನಿಸುತ್ತಿದ್ದಂತೆ ಅವಳಿಗಿಂತ ಮೇಲೆಂಬಂತೆ ಪ್ರಶಾಂತಿನಿ ತಲೆ ಎತ್ತುತ್ತಾಳೆ....... ಅವಳು ಯಾರನ್ನ  ಹೋಲುತ್ತಿರಬಹುದು ಎಂದು ಯೋಚಿಸುತ್ತಿರುವಂತೆಯೇ ಇದ್ದಕಿದ್ದಂತೆಯೇ ಚಿರಂತ್ ಮನಸಿಗೆ ಆಪ್ತವಾಗುತ್ತಾನೆ
ಶ್ರಾವಣಿ ನನ್ನಲ್ಲೂ ಇದಾಳಾ ? ಆ ಛಲ , ಆ ಭಾವುಕತೆ ನನ್ನಲ್ಲೂ ಎಲ್ಲೋ ಒಂದಿಷ್ಟಿರಬಹುದೇ ಎಂದು ಮನಸು ಇದ್ದಕಿದ್ದ ಹಾಗೆ ಶ್ರಾವಣಿಯ ಜಾಗದಲ್ಲಿ ತನ್ನನ್ನು ಇರಿಸಲು ಪ್ರಯತ್ನಿಸುತ್ತದೆ. ಪ್ರತಿ ಪಾತ್ರಕ್ಕೂ ಅದರದ್ದೇ ಔನ್ನತೆಯನ್ನ ಅದಕ್ಕೆ ಮೂಡಿಸುತ್ತಲೇ ಅದೇ ಪಾತ್ರದ ಮತ್ತೊಂದು ಮಗ್ಗಲನ್ನೂ ಪರಿಚಯಿಸುತ್ತಾರೆ. ಇದ್ದಕಿದ್ದ ಹಾಗೆ ನೆನ್ನೆ ಶಿಶಿರ್ ಚಂದ್ರ ಎಂಬ ಆ ಟ್ಯಾನರಿ ರೋಡಿನ ಹುಡುಗನ ರೋಷಾವೇಷ ಓದುತ್ತಿದ್ದಂತೆಯೇ ರವಿಬೆಳಗೆರೆಯವರೇ ನೆನಪಾದರು............
ಇದೇ ರೀತಿ "ಹೇಳು ಹೋಗು ಕಾರಣ" ಎಂಬ ಕಾದಂಬರಿ ಓದಿದಾಗಲೂ ಆಗಿತ್ತು
ನಾನು ರವಿಬೆಳಗೆರೆಯವರ ಅಭಿಮಾನಿ ಅಲ್ಲ ಆದರೆ ಅವರ ಪ್ರತಿಯೊಂದು ಕಾದಂಬರಿ ಬರಹಗಳ ವಾಕ್ಯಗಳ ಅಭಿಮಾನಿ. ಕೆಲವೊಂದು ವಾಕ್ಯಗಳನ್ನ ಅವರು ನಮ್ಮಲ್ಲಿ ಎಷ್ಟು ಚೆನ್ನಾಗಿ ಬೇರೂರಿಸುತ್ತಾರೆ ಎಂದರೆ ತುಂಬಾ ಹಿಂದೆ ಅವರು ವಿ ಕೆ ನಲ್ಲಿ ಸೂರ್ಯ ಶಿಕಾರಿ ಎಂಬ ಕಾಲಮ್ ನಲ್ಲಿ ಬರೆಯುತ್ತಿದ್ದ ಒಂದಷ್ಟು ಹೇಳಿಕೆಗಳು ಈಗಲೂ ಮನಸಿಗೆ ತಟ್ಟಿವೆ
೧. ಒಬ್ಬ ತಾನು ಕೆಟ್ಟವನು ನಂಗೆ ಈ ಥರ ಥರ ಬ್ಯಾಡ್ ಹ್ಯಾಬಿಟ್ಸ್ ಇವೆ ಅಂದರೆ ಹುಡುಗಿ ಕರಗಿಬಿಡುತ್ತಾಳೆ . ಅದೇ ಅವಳ ದೌರ್ಬಲ್ಯ
೨.ಹೆಣ್ಣಿಗೆ ಪ್ರೀತಿಗೂ ಮುನ್ನ ಹುಟ್ಟುವುದು ಅನುಕಂಪ...
೩. ಹೊಟ್ಟೆ ಸುತ್ತಾ ಟೈರ್ ಬೆಳೆಸಿಕೊಂಡು ಗೋಣಿ ಚೀಲದಂತ ನೈಟಿ ತೊಟ್ಟು ನಿಂತರೆ ಯಾವ ಗಂಡನಿಗೆ ತಾನೆ ಹೆಂಡತಿ ಇಷ್ಟಾ ಆಗುತ್ತಾಳೆ
೪. ಕೈನಲ್ಲಿ ಬೆಲೆಬಾಳುವ ಮೊಬೈಲ್ ಇಟ್ಟುಕೊಂಡು ಸಾರ್ ನಮಗೆ ಕಷ್ಟಾ ಅಂತ ಪೋಷಕರು ನನ್ನ ಎದುರಿಗೆ ಕೂತರೆ ಸಿಡಿಮಿಡಿಗೊಳ್ಳುತ್ತೇನೆ
ಹೀಗೆ ಇನ್ನೂ ತುಂಬಾ ತುಂಬಾ ವಾಕ್ಯಗಳು

ಆದ್ದರಿಂದಲೆ ರವಿ ಸಾರ್ ಬಗ್ಗೆ ಏನೆ ವದಂತಿಗಳಿರಲಿ ನನಗೆ  ಅವರ ಈ ವಾಕ್ಯಗಳನ್ನಾಗಲಿ, ಅಥವ ಅವರ ಕಾದಂಬರಿಗಳನಾಗಲಿ ಓದುತ್ತಿದ್ದಂತೆಯೇ ಅದೆಲ್ಲಾ ಮರೆತು ಹೋಗಿ ಅವರು ಇಷ್ಟಾವಾಗಿಬಿಡುತ್ತಾರೆ. ಒಬ್ಬ ಲೇಖಕನಾಗಿ ಒಬ್ಬ ಚಿಂತಕನಾಗಿ, ಒಬ್ಬ ಸ್ಪೂರ್ತಿ ಚಿಲುಮೆಯಾಗಿ  Ravi Belagere

Wednesday, August 1, 2012

ಅಂತಿಮ ಚರಣ


ಅವಳ ತೊಡೆಯಲ್ಲಿ ಮಲಗಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಆತ. ಆಕೆ ಏನೂ ಮಾತನಾಡಲಾಗದೆ ನೋಟವನ್ನು ಮತ್ತೆಲ್ಲೋ ತಿರುಗಿಸಿ ಉಕ್ಕಿ ಬರುತ್ತಿದ್ದ ಕಣ್ಣೀರನ್ನು ತಡೆಯುತ್ತಿದ್ದಳು.
............. ." ನೀ ಯಾಕೆ ಹೀಗೆ ಮಗು ಥರಾ ಅಡ್ತೀಯಾ ಕಣೋ ?ನೋಡು ನಿನ್ನ ಹೀಗೆ ನೋಡಿದಾಗೆಲ್ಲಾ ನನ್ನಲ್ಲಿ ತಾಯಿ ಅಲ್ಲದೆ ಮತ್ತಾರು ಎಚ್ಚರ ಆಗಲ್ಲ. ಎದ್ದೇಳು ಸಾಕು ಇನ್ನೇನು ಮದುವೆ ಮಂಟಪಕ್ಕೆ ಹೋಗೋ ಟೈಮ್ ಆಯ್ತು. ಇನ್ನೆಲ್ಲಾ ಬರ್ತಾರೆ ಹುಡುಕ್ಕೊಂಡು. "
ಅವನ ತಲೆಯನ್ನ ಬಲವಂತವಾಗಿ ಮೇಲೆತ್ತಿದಳು. ಆರಡಿ ಎತ್ತರದ ಆಳು ಆತ. ಹಿಡಿಯಷ್ಟಾಗಿ ಹೋಗಿದ್ದ.
"ನಾಳೆ ಇಂದ ನಾನು ಯಾರೋ ನೀನು ಯಾರೋ. ಒಬ್ಬರನೊಬ್ಬರೂ ನೋಡಲೂ ಬಾರದು ಅಂತೆಲ್ಲಾ  ಹೇಳ್ತೀಯಲ್ಲ. ಈ ಶಿಕ್ಷೆ ನಂಗೆ ಮಾತ್ರ ಅಲ್ಲ ನಿಂಗೂ ಕೂಡ ಯಾಕೆ ಯಾಕೆ ಇವೆಲ್ಲಾ? ಎಲ್ಲಾ ಬಿಟ್ಟು ಎಲ್ಲಾದರೂ ದೂರ ಹೊರಟು ಹೋಗೋಣ . ಈ ಸಮಾಜ  ಈ ಅಪ್ಪ ನಿನ್ ಗಂಡ ಈ ಆಫೀಸು ,ಈ ಇಡೀ ಬೆಂಗಳೂರನ್ನೇ ಬಿಟ್ಟು ಬಿಡೋಣ ಅಂತೆಲ್ಲಾ ಕೇಳ್ಕೊಂಡೆ ನೀನು ಯಾಕೆ ಒಪ್ತಿಲ್ಲ ಅಂತ ಕೇಳಲ್ಲ ನಂಗೂ ಗೊತ್ತು ನೀನು ನಿನ್ ಗಂಡನ್ನ ಈ ಸಮಾಜಾನ, ಈ ಆಫೀಸನ್ನ, ಈ ಬೆಂಗಳೂರನ್ನ ನನಗಿಂತ ಹೆಚ್ಚಾಗಿ ಪ್ರೀತಿಸ್ತೀಯಾ ಅಂತ. ಆದರೆ ನಾನು ಎಲ್ಲಾರಿಗಿಂತ ಎಲ್ಲಾವುದಕ್ಕಿಂತ , ನಿನ್ನ ಪ್ರೀತಿಸ್ತಿದೀನಿ  . ಇನ್ನೂ ಟೈಮ್ ಇದೆ. ಒಂದು ಸಲ ಆಯ್ತು ಅನ್ನು..............." ಅವಳತ್ತ ನೋಡಿದ  ಒಂದು ಒಪ್ಪಿಗೆಗಾಗಿ .
ಇಲ್ಲಿಯವರೆಗೆ ಕಾಡಿದ್ದ, ಕೆಣಕಿದ್ದ, ಹಣ್ಣಾಗಿದ್ದ, ಕೆರಳಿಸಿದ್ದ. ಹುಚ್ಚಾಗಿದ್ದ. ಸಾಯಲೂ ಸಿದ್ದವಿದ್ದ ಆತನನ್ನ ಉಳಿಸಲೆಂದೆ ಅವನ ಜೀವನಕ್ಕೆ ಕಾಲಿಟ್ಟಿದ್ದಳು ಆದರೆ ಪ್ರೇಯಸಿಯಾಗಿಯಲ್ಲ. ಒಂದು ಅನಾಥ ಮಗುವನ್ನ ದತ್ತು ತೆಗೆದುಕೊಳ್ಳುವ ತಾಯಿಯಂತೆ  . ಅಲ್ಲಿಂದ ಅವನನ್ನ ಮದುವೆಯವರೆಗೆ ಕರೆತಂದಿದ್ದಳು. ತೀರ ಪ್ರೀತಿ ಎನ್ನಲಾಗದಿದ್ದರೂ ಆತನ ಮೇಲಿನ ಒಂದು ಮಮತೆ ಮಮಕಾರ ಅವಳಿಗರಿವಿಲ್ಲದಂತೆ  ಎದ್ದಿತ್ತು. ಇನ್ನು ಇವನು ತನಗೆ ಸೇರಿದವನಲ್ಲ. ನಾಳೆ ಇಂದ ಈ ಜೀವದ ಕಾಳಜಿಗೆಂದೇ ಹೊಸ ಜೀವ ಕಾದಿರುತ್ತೆ. ಇನ್ನು ತನಗೇನೂ ಕೆಲಸವಿಲ್ಲ. ಇನ್ನಾಯಿತು. ಇನ್ನು ಹೊರಟು ಬಿಡಬೇಕು ಸಾಗರ‍್ ತೆಕ್ಕೆಗೆ. ಕಾದಿದ್ದಾನೆ ಏಳು ಸಾಗರದಾಚೆ, ತನಗಾಗಿಯೇ ಮುಡಿಪಾದ ಆ ಜೀವದ ಬಳಿಗೆ.
" ಚಿರಂತ್ . ಜೀವನ ನಿಂಗೆ ಇನ್ನೂ ಏನೂ ಅಲ್ಲ ಅದು ಕೇವಲ ನಿನ್ನ್ನದು ಮಾತ್ರ. ಆದರೆ ನಂಗೆ ಎರೆಡು ಜೀವನ ಇದೆ. ಒಂದು ನಂದು ಮತ್ತೊಂದು ಸಾಗರ‍್ದು. ನನ್ನ ನಂಬಿದಾನೆ. ಅವನಿಂದ ದೂರ ಹೋಗುವ ಯೋಚನೇನೂ ಸಹ ನಾನು ಮಾಡಲ್ಲ.ನಡೀ ಎದ್ದೇಳು ನಿಮ್ ಅಮ್ಮ ಬರ್ತಾ ಇದಾರೆ ಅವರಿಗೆ ನಿನ್ನ ಒಪ್ಪಿಸಿ ನಾನು ಹೊರಡ್ತೇನೆ. "
ಕಣ್ಣೀರಲ್ಲಿ ತೊಯ್ದಿದ್ದ ಅವನ ಕೂದಲನ್ನು ನೇವರಿಸಿ ಎಬ್ಬಿಸಿದಳು.
ನಿಧಾನಕ್ಕೆ ಎದ್ದ
"ಚಿರಂತ್ ನಾಳೆ ಇಂದ ನಾನು ನಿನ್ನ ಬದುಕಿನ ಕ್ಲೋಸ್ಡ್ ಚಾಪ್ಟರ್. ನನ್ನ ಮರೆತು ಹಾಯಾಗಿ ಚಂದನಾ ಜೊತೆ ಇರು. ಚಂದನಾ ಒಳ್ಳೇ ಹುಡುಗಿ . ಅವಳಿಗೆ ನಿನ್ನ ಬಗ್ಗೆ ಎಲ್ಲಾ ಹೇಳಿದ್ದೇನೆ. ಅವಳು ನಿನ್ನ ನನಗಿಂತ ಚೆನ್ನಾಗಿ ನೋಡ್ಕೋತಾಳೆ. "
"ಬಾಯ್ ಚಿರಂತ್."  ಅವಳತ್ತ ನೋಡಲಿಲ್ಲ. ಚಿರಂತ್
"ಬಾಯ್ "ಎಂದಷ್ಟೆ ನುಡಿದ.