Tuesday, April 29, 2008

ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?

ಬಸ್ ಸ್ಟಾಪ್‌ನಲ್ಲಿ ನೆಪ ಮಾತ್ರಕ್ಕೆ ಕುಳಿತಿದ್ದರು ಆ ಇಬ್ಬರು ಸ್ನೇಹಿತೆಯರು ಬರೀ ಸ್ನೇಹಿತೆಯರೆಂದರೆ ಸಾಲದು ದೇಹ ಪ್ರಾಣ ಎಂಬತಿದ್ದರು. ಕಾಲೇಜ್ ಬಿಟ್ಟೊಡನೆ ಸೀದ ಮನೆಗೆ ಹೋಗುವ ಮಾತೆ ಅವರಲ್ಲಿರಲಿಲ್ಲ. ಬಸ್ ಸ್ಟಾಪ್‍ನಲ್ಲಿ ಕೂರುವುದು ಪಾರ್ಕ್ಗೆ ಹೋಗುವುದು . ದುಡ್ಡಿದ್ದರೆ ಬೇಕರಿಗೆ ಹೋಗಿ ತಿಂದುಕೊಂಡು ಮಾತಾಡುವುದು. ಮಾತಿಗೆ ಬರವೇ ಇರಲಿಲ್ಲ
ಮೂರು ಜನ್ಮಕ್ಕೆ ಸಾಲುವಷ್ಟು ಮಾತಿತ್ತೇನೊ ಅವರಲ್ಲಿ. ಇಂದೂ ಹಾಗೆ ಮಾತು ನಡೆಯುತ್ತಿತ್ತು
"ಏ ಪ್ರಿಯ ಯಾಕೆ ಸ್ವಲ್ಪ ದಿನದಿಂದ ಏನೊ ಒಂಥರ ಇದೀಯ ಏನೊ ಕಳ್ಕೊಂಡವಳ ಹಾಗೆ . ಸುಮ್ಮ್ನೆ ಕೂತ್ಕೊಂಡೀರ್ತೀಯ . ಏನು ವಿಷಯ ? ಲವ್ವಾ?"
ಪ್ರಿಯ ನಾಚಿಕೆಯಿಂದ ತಲೆಯಾಡಿಸಿದಳು
" ಏ ಕಳ್ಳಿ ಯಾರೆ ಅದು .ದಿನದಲ್ಲಿ ಮುಕ್ಕಾಲು ಪಾಲು ನಂಜತೆನೇ ಇರ್ತೀಯ . ಇದು ಹ್ಯಾಗೆ ಸಾಧ್ಯ.
ಹೋಗಲಿ ಯಾರೆ ಅವನು ನನ್ನ ಗೆಳತೀ ಮನಸನ್ನ ಹಾರಿಸಿಕೊಂಡವನು?" ಸ್ನೇಹಾಳ ಪ್ರಶ್ನೆಗೆ ಉತ್ತರಿಸಲಾರೆ ಎಂಬಂತೆ ತಲೆ ಆಡಿಸಿದಳು ಪ್ರಿಯ.
"ನನ್ನ ಹತ್ತಿರ ಮುಚ್ಚಿಡಬೇಡ . ನಂಗೆ ಹೇಳೆ ಪ್ಲೀಸ್"
ಪ್ರಿಯ ತನ್ನಲ್ಲಿದ್ದ ರೆಕಾರ್ಡ್ ಬುಕ್ ತೆಗೆದು ಅದರಲ್ಲಿದ್ದ ಲೇಬಲ್‍ನ ಮೇಲಿದ್ದ ಹೆಸರನ್ನು ತೋರಿದಳು.
ಹೆಸರು ನೋಡುತಿದ್ದಂತೆ ನಂಬಲಾಗದವಳಂತೆ ಅಚ್ಚರಿಯಿಂದ ಪ್ರಿಯಳನ್ನು ನೋಡಿದಳು.
ಅದು ಅವರಿಬ್ಬರ ಕ್ಲೋಸ್ ಫ್ರೆಂಡ್ ರವಿಯ ಬುಕ್ .
ಈ ಮೂವರು ಭೂಮಿಯ ಮೇಲೆ ಹುಟ್ಟಿದ್ದೇ ಈ ಸ್ನೇಹಕ್ಕಾಗಿ ಎಂಬಂತಿದ್ದರು.
ಕಾಲೇಜಿನ ಯಾವ ಮೂಲೆಯಲ್ಲಾದರೂ ಒಬ್ಬರಿದ್ದರೆ ಇನ್ನಿಬ್ಬರು ಇರುತ್ತಾರೆ ಎನ್ನುವಂತಿತ್ತು.
ಯಾರಾದರೂ ಒಬ್ಬರಿಗೆ ಯಾರಿಂದಲೋ ನೋವಾಗಿದೆ ಎಂದರೆ ಮೂರು ಜನ ಜಗಳಕ್ಕೆ ರೆಡಿ.
ಯಾರೋ ಒಬ್ಬರು ರಜಾ ಹಾಕಿದರೆ ಇನ್ನಿಬ್ಬರಿಗೆ ಕ್ಲಾಸ್ ಬೋರು ಕೂಡಲೆ ಕ್ಲಾಸ್‌ನಿಂದ ಮಾಯವಾಗುತ್ತಿದ್ದರು.
ಎಲ್ಲರೂ ರವಿಗೆ ರೇಗಿಸುತ್ತಿದ್ದರು. ಇಬ್ಬರು ಹುಡುಗಿಯರನ್ನು ಪಟಾಯಿಸಿಬಿಟ್ಟಿದ್ದೀಯಾ ಅಂತ.
ಆದರೆ ರವಿ ಇವರಿಬ್ಬರ ಬಗ್ಗೆ ಎಂದೂ ಅಂತಹ ಭಾವನೆಯನ್ನ ವ್ಯಕ್ತ ಪಡಿಸಿರಲಿಲ್ಲ.
" ಹೆಯ್ ಪ್ರಿಯ ಆರ್ ಯು ಶ್ಯೂರ್ ? ಇದು ರವಿಗೆ ಗೊತ್ತಾ?"
"ಇಲ್ಲಾ ಕಣೆ ಅವನಿಗೆ ಹೇಗೆ ಹೇಳಲಿ ಅಂತ ತಿಳೀತಿಲ್ಲ. ಅವನು ಯಾವತ್ತು ನನ್ನ ಜೊತೆ ಆ ಥರ ಬಿಹೇವ್ ಮಾಡಿಲ್ಲ . ಅವನಿಗೆ ಈ ವಿಷಯ ಹೇಳೊ ಕೆಲಸಾನ್ ನೀನೆ ಮಾಡಬೇಕು. ಪ್ಲೀಸ್ ಕಣೇ"
"ಸರಿ ಕಣೆ ಲೆಟ್ ಮಿ ಟ್ರೈ."
" ಪ್ಲೀಸ ಸ್ನೇಹ ನಂಗೆ ಅವನಲ್ಲದೆ ಬೇರೆ ಯಾರು ಹಿಡಿಸ್ತಾ ಇಲ್ಲ. ಊಟ ತಿಂಡಿ ಸಹಾ ಬೇಡ ಅನ್ನಿಸ್ತಿದೆ. ನೀನವನ್ನ ಒಪ್ಪಿಸಲೇ ಬೇಕು"
"ಆಯ್ತು " ಜೋರಾಗಿಯೆ ಕಿರುಚಿದಳು
ಅಷ್ಟ್ರಲ್ಲಿ ಗಾಡಿ ಬಂದು ನಿಂತ ಶಬ್ಧವಾಯಿತು . ರವಿ ಬಂದು ನಿಂತಿದ್ದ.
"ಏನ್ರೇ ಇನ್ನೂ ಮೀಟಿಂಗ್ ಮುಗ್ದಿಲ್ಲವಾ, ನಡೀರಿ ಟಿಕೆಟ್ ತಂದಿದೀನಿ ಹೋಗೋಣಾ"
"ರವಿ ಇವತ್ತು ರಾಗಿಗುಡ್ಡ ದೇವಸ್ಥಾನಕ್ಕೆ ಹೋಗೋಣ. ಫಿಲ್ಮ್ ಬೇಡ " ಸ್ನೇಹ ನುಡಿದಳು.
" ಯಾಕೆ ನೆನ್ನೆ ತಾನೆ ಹೇಳ್ತಿದ್ರಿ . ಹೋಗೋಣ ಅಂತ ಇದೇನು ಹೊಸಾ ಆಟ?"
"ಪ್ಲೀಸ್ ಕಣೋ . ಟಿಕೆಟ್ನ ಮಹೇಶಗೆ ಕೊಟ್ಬಿಡು ಅವನು ಅವನ ಫ್ರೆಂಡ್ ನೋಡ್ಕೋತಾರೆ."
"ಆಯ್ತು ಅದಿರ್ಲಿ ಯಾಕೆ ಪ್ರಿಯಂಗೆ ಏನಾಯಿತು ಒಂಚೂರು ಬಾಯೆ ಬಿಡ್ತಿಲ್ಲ"
"ಅದನ್ನೆ ಮಾತಾಡ್ಬೇಕು . ನೀನು ಹಿಂದೆ ಬಾ ನಾವು ಆಟೋನಲ್ಲಿ ಹೋಗ್ತೀವಿ"
"ಸರಿ"
ದೇವಸ್ಥಾನದ ಹತ್ತಿರ
ಪ್ರಿಯ ಒಂದೆಡೆ ಕುಳಿತಿದ್ದಳು. ಸ್ವಲ್ಪ ದೂರದಲ್ಲಿ ಸ್ನೇಹ ಹಾಗು ರವಿಯ ಮಾತು ಕತೆ ನಡೆಯುತ್ತಿತು
ರವಿ " ಸ್ನೇಹ ಇದೇನಿದು ಹೊಸ ನಾಟಕ ನಿಮ್ಮಿಬ್ಬರದು. ನಾನು ಯಾವತ್ತು ಪ್ರಿಯನ್ನಾಗಲಿ ನಿನ್ನಾಗಲಿ ಆ ದೃಷ್ಟಿನಲ್ಲಿ ನೋಡಿಲ್ಲ. ತಮಾಷೆ ಮಾಡಬೇಡ"
"ಇಲ್ಲ ನಾನು ತಮಾಷೆ ಮಾಡ್ತಿಲ್ಲ . ನೋಡು ಈ ಮಾತನ್ನು ಅವಳ ಮುಂದೆ ಆಡಬೇಡ. ಏನಾಗಿದೆಯೋ ಪ್ರಿಯಾಗೆ ಒಳ್ಳೆ ಗೊಂಬೆ ಥರಾ ಇದ್ದಾಳೆ . ಬೇರೆ ಹುಡುಗರೆಲ್ಲಾ ಅವಳ ಹಿಂದೆ ಬೀಳ್ತಾರೆ . ಅಂತಹದ್ರಲ್ಲಿ ನೀನು. ಹ್ಯಾಗೂ ನಾವೆಲ್ಲಾ ಒಂದೆ ಕ್ಯಾಸ್ಟ್. ಇನ್ನೇನಪ್ಪ ಯೋಚನೆ."
" ಸ್ನೇಹಾ ಅದು................"
"ಅದೂ ಇಲ್ಲ ಇದೂ ಇಲ್ಲಾ. ನೀನೀಗ ಪ್ರಿಯ ಹತ್ರ ಹೋಗಿ ಐ.ಲೌ. ಯು ಅಂತ ಹೇಳ್ತೀಯ ಸರೀನಾ . ಹೋಗೊ"
ಸ್ನೇಹ ಅಲ್ಲಿಯೇ ನಿಂತಳು. ರವಿ ಪ್ರಿಯಾಳ ಬಳಿ ಹೋಗಿ ಹೇಳಿದ . ಪ್ರಿಯಾಳ ಮುಖ ಅರಳಿತು.
ಸ್ನೇಹಾಳ ಮನಸಲ್ಲಿ ಏನೂ ಒಂಥರ ಹೇಳಲಾರದ ನೋವು. ಯಾಕೆ ಅಂತ ತಿಳಿಯಲಿಲ್ಲ.
----------------------------------------------------
ಮಾರನೆಯ ದಿನ

" ಅಯ್ಯೊ ಪಾಪ ಜೀವ ಹೊರಟು ಹೋಗಿದೆ ನೋಡಪ್ಪ ಪಾಪ ಬರಿ ದೇಹ ಮಾತ್ರ ಕ್ಲಾಸ್‌ನ್ನಲ್ಲಿ ಕೂತಿದೆ." ಕವಿತಾ ರೇಗಿಸುತ್ತಿದ್ದಳು .
ಅವತ್ತು ಕಾಲೇಜಿಗೆ ಬಂದಾಗಿನಿಂದ ಮೊದಲ ದಿನ ಸ್ನೇಹ ಒಂಟಿಯಾಗಿ ಕುಳಿತಿದ್ದಳು. ರವಿ ಪ್ರಿಯ ಅಂದು ಕ್ಲಾಸ್‌ಗೆ ಚಕ್ಕರ್ ಹಾಕಿ ಎಲ್ಲೊ ಹೋಗಿದ್ದರು.
"ಏನೆ ಸ್ನೇಹ ನೀನೇನೊ ಬ್ರೋಕರ್ ಕೆಲಸ ಬೇರೆ ಮಾಡಿದಿಯಂತೆ. ಇವಾಗ ಎಲ್ಲಿ ನಿನ್ನ ಪ್ರಾಣ ಸ್ನೇಹಿತರುಗಳು ಪ್ರಾಣ ತೆಕ್ಕೊಂಡು ಹೋಗಿಬಿಟ್ಟರಾ."ಕವಿತಾಳ ವ್ಯಂಗ್ಯ ಮುಂದುವರಿಯುತಿತ್ತು
" ಕವಿತಾ ಪ್ಲೀಸ್ ಶಟ್ ಅಪ್ "
ಕ್ಲಾಸ್ ನಲ್ಲಿ ಕೂರಲಾರದೆ ಹೊರಗೆ ಬಂದಳು ಜೀವನದಲ್ಲಿ ಮೊದಲಬಾರಿಗೆ ಒಂಟಿ ಎಂಬ ಭಾವನೆ ಬಂದಿತು.

ಅಂದಿನಿಂದ ರವಿ ಪ್ರಿಯ ಹೊರಗಡೆ ಹೋಗುವುದು . ಸ್ನೇಹಳನ್ನು ಅವಾಯ್ಡ್ ಮಾಡುವುದು ನಡೆಯಿತು.

ಸ್ನೇಹಾ ಈಗ ಇದಕ್ಕೆ ಅಭ್ಯಾಸವಾಗಿ ಹೋದಳು.
ಆದರೆ ಅವಳ ಮನಸಲ್ಲಿ ಮೂಡಿದ ಪ್ರಶ್ನೆಯೊಂದಕ್ಕೆ ಉತ್ತರ ಸಿಗಲ್ಲಿಲ್ಲ.
ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?
ಆ ಪ್ರಶ್ನೆಗೆ ಉತ್ತರ ಹೇಳಲಾಗುವುದಾ

Saturday, April 26, 2008

ಗೆಳೆಯನಲ್ಲದ ಗೆಳೆಯನಿಗೆ

ಗೆಳೆಯನಲ್ಲದ ಗೆಳೆಯನಿಗೆ

ಬಾಳಿನುದ್ದಕ್ಕೂ ನಿನ್ನ ಜೊತೆಗಿರುವೆ
ಎಂದ ನೀ ಈಗ ಎಲ್ಲಿರುವೆ
ಬಾಳ ಎಲ್ಲೆಯಲಿ ನನ್ನ ಕಾವಲಾಗಿ
ಜೀವನದ ಆಸರೆಯಾಗಿ
ಹೃದಯದ ಮಾತಾಗಿ
ಜೊತೆ ಹೆಜ್ಜೆ ಹಾಕುವೆ ಎಂದ ನೀ
ಹೇಗಿರುವೆ ಈಗ ಬೇರಾಗಿ

ಪ್ರತಿ ಹೆಜ್ಜೆಗೂ ನಿನ್ನ ಹಿತ ನುಡಿ
ಕಾವಲಾಗಿತ್ತು ನನ್ನ ದಿನವಿಡೀ

ಹೊರಟೆ ನೀ ಹೇಳದೆ
ಭವಬಂಧನ ಬೇಡೆಂದೆ
ನನ್ನೊಂದು ಮಾತು ಕೇಳದೆ

Friday, April 25, 2008

ಸಾಯಬೇಕು ಅನ್ನಿಸಿದ ಆ ಕ್ಶಣ

ಇದು ಏಳು ವರ್ಷದ ಹಿಂದಿನ ಮಾತು ಆಗ ತಾನೆ ಡಿಪ್ಲಮೋ ಮುಗಿಸಿದ್ದೆ. ನನ್ನ ಸಹಪಾಠಿಗಳಿಗಿಂತ ಮುಂಚೆ ಸಾಫ್ಟ್ವೇರ್ ಕಂಪೆನಿಯ ಡಾಟ್ ಕಾಂ ಶಾಖೆಯಲ್ಲಿ ಸಿಕ್ಕಿತು. 2000 ದಲ್ಲಿ ನನ್ನ ಅದೃಷ್ಟವೋ ಏನೊ ಐದಂಕಿಯ ಸಂಬಳ ಅದೂ ಬರೀ ಡಿಪ್ಲೊಮಾಗೆ . ಹದಿ ವಯಸು ನನ್ನ ಅಹಂ ಮೇರೆ ಮೀರಿತ್ತು. ಅದೃಷ್ಟ, ವಿಧಿ, ದೇವರಿಗಿಂತ ನನ್ನ ಸ್ವಯಂ ಶಕ್ತಿಯ ಮೇಲೆ ಅತಿಯಾದ ಆತ್ಮ ವಿಶ್ವಾಸ. ಹೀಗೆ ಸಾಗಿತ್ತು ಬದುಕು. ಸಾಫ್ಟ್ವೇರ್ ಉದ್ಯೋಗ ಅಂದ ಮೇಲ್ ಅದಕ್ಕೆ ತಕ್ಕ ಹಾಗೆ ಮನೆ ಬದಲಾಯಿಸಿದ್ದೆ. ಅಮ್ಮನ್ನ ಟ್ಯೂಶನ್ ಮಾಡಬೇಡ ಇಲ್ಲಿಯವರೆಗೆ ಪಟ್ಟ ಕಷ್ಟಾ ಸಾಕು ಅಂಟ ಹೇಳಿ ನಿಲ್ಲಿಸಿದ್ದೆ.ಕೆಲಸ ಸಿಕ್ಕಿ 8 ತಿಂಗಳ ಮೇಲೆ ಅಕ್ಕನಿಗ್ಗೊಂದು ಗಂಡೂ ಸಿಕ್ಕಿ ಅವಳ ಮದುವೆಗೆ ದುಡ್ಡು ಹೊಂಚುವ ಜವಾಬ್ದಾರಿ . ಮದುವೆ 2001 ಆಗಸ್ಟ ಅಂತ ನಿಷ್ಕ್ಲರ್ಶೆ ಯಾಯಿತು. ಜೋರಾಗೇ ನಡೆಯುತ್ತಿತು ನನ್ನ ದರ್ಬಾರು.
ಜನವರಿ 2001ಅದ್ಯಾರ ಕಣ್ಣು ಬಿತ್ತೋ . ನಮ್ಮ ಕಂಪೆನಿಯೂ (ಅದೀಗ ಕಾಲ್ ಸೆಂಟರ್ ಬಿಪಿಒ ಅಗಿ ಬದಲಾಗಿದೆ) ರೆಸೆಶನ್ ಪಿರಿಯಡ್ಗೆ ಈಡಾಯಿತು. ಹಾಗಾಗಿ ಸುಮಾರು ೪ ಬ್ಯಾಚ್ ನ ಜನರನ್ನು ಲೇ ಆಫ್ ಮಾಡುತ್ತಾರೆ ಎಂಬ ಮಾಹಿತಿ ಸಿಕ್ಕಿತು . ಹೆಚ್ಚು ಪ್ರಾಜೆಕ್ಟ್ ಸಿಗುತ್ತೆ ಎಂದು ಜಾಸ್ತಿ ಜನರನ್ನು ತೆಗೆದುಕೊಂಡ ಪರಿಣಾಮ ಕಂಪೆನಿಗೆ ಅಲ್ಲಿಂದ ಪ್ರಾಜೆಕ್ಟ್ ಕಡಿಮೆಯಾದಾಗ ನಾವೆಲ್ಲ ಹೊರೆ ಎನಿಸಿದೆವು.ಆ ಬ್ಯಾಚ್ ನಲ್ಲಿ ನನ್ನ್ ಬ್ಯಾಚ್ ಒಂದು . ಆದರೂ ನನಗೆ ನನ್ನ ಸಾಮರ್ಥ್ಯದ ಮೇಲೆ ಅತಿಯಾದ ನಂಬಿಕೆ . ಹಾಗಾಗಿ ನಾನು ಆ ಲಿಸ್ಟನಲ್ಲಿ ಸೇರುವುದಿಲ್ಲ ಎಂಬುದೇ ನನ್ನ ನಂಬಿಕೆ ಯಾಗಿತ್ತು. ಕೊನೆ ಕ್ಷಣ್ದದವರೆಗೂ ನನಗೆ ಮೈಲ್ ಬರುವವರೆಗೂ . " you are requested to attend a meeting at the down stair assemble hall " ಅಂತ .
ಮನೆಯ ಸ್ಠಿತಿ , ಸಾಲ , ಕೆಲಸ ಹುಡುಕುವ ಕಷ್ಟ, ಅಕ್ಕನ ಮದುವೆ ಗೆ ಇನೂ ೮ ತಿಂಗಳು. ದುಡ್ಡು ಹೊಂಚುವ ಬಗೆ ನೆನೆಸಿಕೊಂದರೆ ಕಣ್ಣು ಕತ್ತಲೆಯಾಗುತಿತ್ತು. ಹಾಗೂ ಹೀಗೂ ಮೀಟೀಂಗ್ಗೆ ಹೋದೆ. ಒಂದಷ್ಟು ಜನ ಮ್ಯಾನೇಜಮೆಂಟ್ನ ಜೊತೆ ಜಗಳ ವಾಡುತ್ತ್ತಿದ್ದರು. ಏನೋ ಮಾತು ಕತೆ. ಕೊನೆಗೆ ಏನೋ ಉಪಕಾರ ಮಾಡುವಂತೆ ಎರೆಡು ತಿಂಗಳ ಸಂಬಳವನ್ನು ಪರಿಹಾರವಾಗಿ ಕೊಡುವ ಮತು ನಡೆಯುತ್ತಿತು.ಮಾತು ಮುಗಿಯುತ್ತಿದ್ದಂತೆ ನಾನು ಅಲ್ಲಿಂದ ಸೀದ ೫ ನೇ ಅಂತಸ್ತಿಗೆ ಬಂದೆ. ಹ್ಯಾಗೆ ಮುಂದೆ ಏನು ಮಾಡಬೇಕು ಎಂದು ತೋಚಲಿಲ್ಲ. ಅಕ್ಕನ ಮದುವೆಗೆ ಸಾಲ ಈಗ ಯಾರು ಕೊಡುತ್ತಾರೆ . ಅಮ್ಮನಿಗೆ ಹೇಗೆ ಮುಖ ತೋರಿಸುವುದು. ಬರೀ ಪ್ರಶ್ನೆಗಳೆ ಕಣ್ಣ ಮುಂದೆ . ಮೊದಲ ಬಾರಿ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಹೊರಟು ಹೋಗಿತ್ತು. ನಾನು ಅಪ್ರಯೋಜಕಳು . ಹಾಗಿಲ್ಲದಿದ್ದಲ್ಲಿ ನನ್ನನ್ನು ಕೆಲಸದಲ್ಲಿ ಮುಂದುವರೆಸುತಿದ್ದರುನನ್ನಂಥವಳು ಭೂಮಿಯ ಮೇಲೆ ಯಾಕಿರಬೇಕು ಎಂಬ ಅನಿಸಿಕೆ ಬಂದ ಕೂಡಲೆ ನನಗೆ ಹೊಳೆದಿದ್ದು ಇಲ್ಲಿಂದ ಜಿಗಿದು ಪ್ರಾಣ ಬಿಡುವ ಯೋಚನೆ.ಅದನ್ನು ಕಾರ್ಯರೂಪಕ್ಕೆ ಇಳಿಸಲು ಕಟ್ಟೆಯ ಹತ್ತಿರ ಬಂದೆ ಸುತ್ತ ಯಾರೂ ಇರಲಿಲ್ಲ . ಸಾವಿನ ಭಯ ಆ ಕ್ಷಣ ಕಾಡಲೇ ಇಲ್ಲ. ಇನ್ನೆನು ಜಿಗಿಯಬೇಕು ಎಂದು ಗಟ್ಟ್ ಮನಸ್ಸು ಮಾಡಿಕೊಂಡೆ ಎನ್ನುವಾಗ .................ಹೆಗಲ ಮೇಲೆ ಕೈ ಒಂದು ಬಿತ್ತು . ಅದು ನನ್ನ ಸಹೋದ್ಯೋಗಿ ಅನೂ ಳದ್ದು."hey roopa what ru doing here. . come let us go down" ಎಂದಳು" ನೊ ಅನು ನಂಗೆ ಬದುಕಿರೋಕೆ ಇಷ್ಟ ಇಲ್ಲ . ಇವರು ಇದ್ದಕಿದ್ದಂತೆ ಹೀಗೆ ಮಾಡಿದರೆ ಹ್ಯಾಗೆ. ಒಂದೆ ಸಲ ಅಕಾಶಕ್ಕೇರಿಸಿ ಅಲ್ಲಿಂದ ಕೆಳಗೆ ತಳ್ಲಿಬಿಬಟ್ಟರಲ್ಲ ಪಾತಾಳಕ್ಕೆ" ಎಂದೆ"ಏ ರೂಪ ನಿಂಗೆ ಹುಚ್ಚು ಹಿಡಿದಿದೆಯಾ . ನಾನು ಒಂದು ಮಾತು ಕೇಳ್ತೀನಿ ಅದಕ್ಕೆ ಉತ್ತರ ಹೇಳಿ ನೀನು ಸಾಯಿ ಅಥವ ಬದುಕು ನಿನ್ನಿಷ್ಟ "ಎಂದಳು" ನೀನು ಅಮ್ಮನ ಹೊಟ್ಟೇಲಿ ಇದ್ದಾಗ ನಿಂಗೆ ಗೊತ್ತಿತ್ತ *** ಕಂಪೆನಿ ಇದೆ ಅಂತ? ನೀನು ಇದನ್ನೆ ನಂಬಿಕೊಂಡು ಹುಟ್ಟಿದ್ಯಾ? ಕಷ್ಟ ಎಲ್ಲರಿಗೂ ಇದ್ದದ್ದೇ .ಆದರೆ ಅದಕ್ಕೆ ಈ ರೀತಿಯ ಕೊನೆ ಬೇಕಾಗಿಲ್ಲ . ನನ್ನನ್ನೇ ನೋಡು ೩೦ ವರ್ಷ ಆಯ್ತು ಮದುವೆ ಇಲ್ಲ ಬಂದೋರೆಲ್ಲಾ ನಾನು ಚೆನಾಗಿಲ್ಲ ಅಂತ ಹೇಳಿ ದೂರ ಹೋಗ್ತಿದ್ದಾರೆ. ಹಾಗಂತ ನಾನು ಸಾಯೋದಿಲ್ಲ ಅಲ್ಲವಾ? ನಿಂಗೆ ಇನೂ ಚಿಕ್ಕ ವಯಸ್ಸು ನಿಮ್ಮ ಅಮ್ಮ ನಿನ್ನ ಮೇಲೆ ಏನೇನೂ ಆಸೆ ಇಟಿದ್ದಾರೆ ಅವ್ರೆಲ್ಲಾ ಏನು ಮಾಡಬೇಕು ಹೇಳು ?
ಅಷ್ಟು ಹೊತ್ತಿಗೆ ನನ್ನ ಆವೇಶ ಕುಗ್ಗಿತು ಏನಾದರೂ ಆಗಲಿ ಎಂದು ಕೆಳಗೆ ಬಂದೆ. ಅವಳ ಆ ಹೊತ್ತಿಗೆ ಬರದಿದ್ದರೆ ಇದನ್ನು ಹೇಳಲು ನಾನು ಬದುಕಿಯೇ ಇರುತ್ತಿರಲಿಲ್ಲ. ಅವಳು ಈಗ ಹೇಗಿದ್ದಾಳೋ ಎಲ್ಲಿದ್ದಾಳೋ ಗೊತ್ತಿಲ್ಲ .ಆದರೆ ಅವಳನ್ನಂತೂ ಮರೆಯಲಾಗುವುದಿಲ್ಲಹಾಗೂ ಹೀಗೂ ನಮ್ಮಕ್ಕನ ಮದುವೆಗೂ ಸುಸ್ಸೊತ್ರವಾಗಿ ನಡೆಯಿತು ಅದೇ ಆಗಸ್ಟನಲ್ಲಿ .
ಆದರೆ ಅಲ್ಲಿಂದ ಹೊರಗೆ ಬಂದ ಮೇಲೆ ನಾನನುಭವಿಸಿದ ಕಷ್ಟ ವಿದೆಯಲ್ಲ ಅದೇ ಇನ್ನೊಂದು ಕತೆ. ಅದನ್ನು ಇನ್ನೊಮ್ಮೆ ಬರೆಯುತ್ತೇನೆ
ನೆನ್ನೆ ಡೈರಿ ತೆಗೆದು ಓದಿದಾಗ ನಾನು ಅಟೆಂಡ್ ಮಾಡಿದ ಇಂಟರ್ ವ್ಯೂ ಗಳು ಅವಗಳ ಅಡ್ರೆಸ್ ನೋಡಿದಾಗ ಎಲ್ಲಾ ನೆನಪಾಯಿತು.