ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Wednesday, August 6, 2008
ಮುಪ್ಪಾಗಬಾರದು
ಕೆಲವೇ ತಿಂಗಳ ಹಿಂದೆ ಮದುವೆಯಾಗಿತ್ತು . ಒಮ್ಮೆ ತಮಾಷೆಗೆ ಗಂಡ ಹೇಳಿದ " ಈ ನಿನ್ನ ಸೌಂದರ್ಯ ಎಲ್ಲಾ ನಶ್ವರ ಏನಿದ್ರೂ ಯೌವ್ವನ ಇರುವ ತನಕ . ಆಮೇಲೆ ನಿನ್ನ ಬದಲಿಗೆ ಮತ್ತೊಬ್ಬ ಹೆಣ್ಣು ಸುಂದರಿ ಅಂತ ಅನಿಸ್ಕೋತಾಳೆ"
ಆತ ಮರೆತೂ ಬಿಟ್ಟ ಆದರೆ ಈಕೆ ಮರೆಯಲಿಲ್ಲ. ಅದನ್ನೇ ಯೋಚಿಸುತ್ತಾ ಕೂತವಳಿಗೆ ಒಂದು ಉಪಾಯ ಹೊಳೆಯಿತು. ತನಗೆ ಗೊತ್ತಿದ್ದ ಮಂತ್ರವಾದಿಯೊಬ್ಬರಿಂದ ದೇವರನ್ನು ಒಲಿಸಿಕೊಳ್ಳುವ ಮಂತ್ರ ಪಡೆದು ಗಂಡನಿಗೆ ಯಾವುದೋ ನೆಪ ಹೇಳಿ ಯಾರು ಇಲ್ಲದ ಸ್ಥಳವೊಂದಕ್ಕೆ ಹೋಗಿ ದೇವರನ್ನು ಜಪಿಸಲು ಆರಂಭಿಸಿದಳು
ಸುಮಾರು ದಿನಗಳ ಜಪದಿಂದ ದೇವರು ಸಂತುಷ್ಟನಾದ
ಅವಳ ಮುಂದೆ ಪ್ರತ್ಯಕ್ಶನಾಗಿ ಏನು ಬೇಕೆಂದು ಕೇಳಿದ
ಆಕೆ ಕೇಳಿದಳು
"ನನ್ನ ಈ ಸೌಂದರ್ಯ ಹೀಗೆ ಇರಬೇಕು. ಮುಪ್ಪು ನನ್ನ ನೆರಳನ್ನೂ ಸೋಕಬಾರದು, ಸಾವು ಹತ್ತಿರವೂ ಬರಬಾರದು . ಸದಾ ಚಿರಯೌವ್ವನಿಗಳೆನಿಸಿಕೊಳ್ಳಬೇಕು"
"ಇದರಿಂದ ಉಪಕಾರಕ್ಕಿಂತ ಅಪಾಯವೇ ಹೆಚ್ಚು ಯೋಚಿಸು ಬೇರೇನಾದರೂ ಕೇಳು" ಎಂದ
"ಇಲ್ಲ ಈ ವರ ಕೊಡಲಾಗದಿದ್ದರೆ ನೀನು ದೇವರಲ್ಲ "ಎಂದಳು
"ಸರಿ ನಿನ್ನ ವರ ನಿನಗೆ ಶಾಪವಾದರೆ ನಾನು ಹೊಣೆಯಲ್ಲ . ಆದರೆ ನೀನು ಮತ್ತೆ ಸಾವು ಹಾಗು ಮುಪ್ಪು ಕೇಳಲು ಬಹಳ ಕಠಿಣ ತಪಸ್ಸು ಮಾಡಬೇಕಾಗಬಹುದು" ಎಂದು ಹೇಳಿ ತಥಾಸ್ತು ಎಂದು ಹರಸಿ ಮಾಯವಾದ
ಆಕೆ ಹರ್ಷಚಿತ್ತಳಾಗಿ ಮನೆಗೆ ಬಂದಳು
ವರ್ಷಗಳು ಉರುಳಿದವು.
ಅವಳಿಗೆ ಒಬ್ಬ ಮಗ ಹಾಗು ಮಗಳು ಜನಿಸಿದರು
ಇಬ್ಬರೂ ಬೆಳೆಯುತ್ತಾ ಹೋದರು
ಅವಳ ಗಂಡನಿಗೆ ಅವಳ ಮೇಲೆ ಪ್ರೀತಿ ಜಾಸ್ತಿ ತನ್ನ ಹೆಂಡತಿ ಇಷ್ಟು ವರ್ಷಗಳಾದರೂ ನವಯುವತಿಯಂತಿದ್ದಾಳೆಂದು. ಅವಳಿಗಂತೂ ಸಂಸಾರ ಸ್ವರ್ಗವಾಗಿತ್ತು ತನ್ನ ಓರಗೆಯವರೆಲ್ಲಾ ಆಗಲೆ ದಪ್ಪವಾಗುತಿದ್ದರು ಆದರೆ ಈಕೆ ಮಾತ್ರ ಬಳುಕುವ ಬಳ್ಳಿಯಂತೆ ಇದ್ದಳು.
ಮಕ್ಕಳೂ ಕಾಲೇಜಿಗೆ ಹೋಗಲಾರಂಭಿಸಿದರು
ಗಂಡ ಊದತೊಡಗಿದ ತಲೆಯಲ್ಲಿ ನೆರೆ ಕೂದಲು ಕಾಣತೊಡಗಿದವು . ಈಕೆ ಮಾತ್ರ ಹದಿನೆಂಟರ ಯುವತಿ
ಮಗ ಅಮ್ಮನಿಗೆ ತನ್ನ ಜೊತೆ ಬರಬಾರದಾಗಿ ತಾಕೀತು ಮಾಡಿದ .
ಅವನ ಗೆಳೆಯರೆಲ್ಲಾ ಅವಳು ತನ್ನ ಅಮ್ಮ ಅಂದರೆ ನಂಬುತ್ತಿರಲಿಲ್ಲ .
ಮಗನಿಗೆ ಮದುವೆಯಾಯ್ತು.
ಸೊಸೆ ಬಂದಳು
ಇತ್ತ ಇವಳ ಗಂಡನಿಗೆ ಹೆಂಡತಿಗೇಕೆ ವಯಸ್ಸಾಗುತ್ತಿಲ್ಲ ಎಂಬುದು ಪ್ರಶ್ನೆಯಾಯಿತು.
ಅವಳ ಮೇಲೇ ಅನುಮಾನ ಪಡಲಾರಂಭಿಸಿದ ಅವಳ ಯಾರ ಜೊತೆಯಲ್ಲಾದರೂ ಸಂಭಂಧವಿರಿಸಿಕೊಳ್ಳಬಹುದೆಂದು .
ಕೊನೆಗೂ ಅದೇ ಚಿಂತೆಯಲ್ಲಿ ಸತ್ತ
ಇವಳು ಮಾತ್ರ ನವಯುವತಿಯಂತೆ ಅದೇ ಕಾಯ ಅದೇ ಸೌಂದರ್ಯದಿಂದ ಕಂಗೊಳಿಸುತ್ತಿದ್ದಳು.
ಮಗಳು ಅಮ್ಮನಿಗೆ ಮನೆಗೆ ಬರಬಾರದೆಂದು ಹೇಳಿದಳು. ಅವಳಿಗೆ ಅವಳ ಗಂಡ ಎಲ್ಲಿ ಅಮ್ಮನ ಸೌಂದರ್ಯಕ್ಕೆ ಮರುಳಾಗುತ್ತಾನೋ ಎಂಬ ಭಯ
ಅವಳಿಗೆ 60 ರ ಪ್ರಾಯ .
ಮಗನಿಗೂ ವಯಸ್ಸಾಗತೊಡಗಿತು
ಸೊಸೆಯೂ ಅಷ್ಟೆ ಬೊಜ್ಜಿನಿಂದ ಊದತೊಡಗಿದಳು.
ಮೊಮ್ಮಗ ಕಾಲೇಜಿಗೆ ಹೋಗಲಾರಂಭಿಸಿದ.
ಅವನಿಗೆ ಇವಳನ್ನು ಅಜ್ಜಿ ಎಂದು ಕರೆಯಲೇ ಮುಜುಗರ.
ಹೀಗಿದ್ದಾಗ ಅವಳ ಮಗಳು ಯಾವುದೋ ಒಂದು ಕಾಯಿಲೆ ಬಂದು ಸತ್ತಳು
ಸ್ವಲ್ಪ ದಿನವಾದ ಮೇಲೆ ಮಗನೂ ಹಾಗು ಸೊಸೆಯೂ ತಮ್ಮ ದೇಹ ತ್ಯಜಿಸಿದರು
ತನ್ನ ಕಣ್ಣ ಮುಂದೆ ತನ್ನ ಕುಡಿಗಳು ಕಳಚುತ್ತಿರುವುದ ನೋಡಿ ಮೌನವಾಗಿ ರೋಧಿಸಿದಳು
ಈಗ ಅವಳಿಗೆ ೭೫ ವರ್ಷಗಳಾಗಿದ್ದವು
ಮೊಮ್ಮಗನ ಮದುವೆಯಾಯ್ತು ಅವನ ಮನೆಯಲ್ಲೇ ವಾಸವಿದ್ದಳು.
ಏಕೋ ತನ್ನ ಕಾಲದಲ್ಲಿದ್ದಂತೆ ಈಗ ಯಾವುದೂ ಇಲ್ಲ ಆನಿಸತೊಡಗಿದವು. ಹೊರಗೆ ಹೋಗುವುದಕ್ಕೆ ಒಂದು ರೀತಿಯ ಹಿಂಜರಿಕೆ ತಾನು ಹೇಗೆ ಇರಬೇಕು. ಅಜ್ಜಿಯ ಮನಸ್ಸು, ನವಯುವತಿಯ ದೇಹ ಹೊತ್ತುಕೊಂಡಿತ್ತು.
ಮನಸಿಗೆ ವಯಸ್ಸಾದ ಹಾಗೆ ಅನ್ನಿಸುತಿತ್ತು. ಹುರುಪಿಲ್ಲ. ಅತ್ತ ಹೊರಗಡೆ ಹೊರಟರೆ ಈಗಷ್ಟೆ ಚಿಗುರು ಮೀಸೆ ಬಂಡ ಹುಡುಗರು ಇವಳನ್ನು ತಿಂದೇ ಬಿಡುವ ನೋಟ ಹರಿಸುತ್ತಿದ್ದರು. ಅತ್ತ ಇವಳ ಮೊಮ್ಮಕ್ಕಳ ವಯಸಿನ ಹೆಂಗಸರು ಹಿಡಿ ಹಿಡಿ ಶಾಪ ಹಾಕುತಿದ್ದರು.
ಮನೆಯಲ್ಲಿ ಯಾವುದೇ ಗೌರವ ವಿರಲಿಲ್ಲ
ಸ್ವಂತ ಮೊಮ್ಮಗನ ಹೆಂಡತಿಗೆ ಇವಳ ಮೇಲೆ ಅನುಮಾನ. ತನ್ನ ಗಂಡನನ್ನು ಬಲೆಗೆ ಹಾಕಿಕೊಳ್ಳುತಾಳೇನು ಎಂಬ ಭಯ
ಹಾಗೂ ಹೀಗೂ ದಿನ ತಳ್ಳುತಿದ್ದಳು. ಅವಳ ಬದುಕಿಗೆ ಅಂತ್ಯವೇ ಇರಲಿಲ್ಲವಲ್ಲ
ಇನ್ನೂ ಕೆಲವು ವರ್ಷಗಳು ಕಳೆದವು ಮರಿಮಗ ಕಾಲೇಜಿಗೆ ಹೋಗಲಾರಂಭಿಸಿದ
ಒಮ್ಮೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಅಜ್ಜಿಯ ಬಳಿ ಬಂದ
" ನೋಡು ನೀನು ಹ್ಯಾಗೆ ಹೀಗೆ ಮೈಂಟೇನ್ ಮಾಡ್ತಿದೀಯಾ ಅಂತ ಗೊತ್ತಿಲ್ಲ. ಹ್ಯಾಗಿದ್ದರೂ ನಿಂಗೆ ಗಂಡ ಇಲ್ಲ. ಹಾಗೆ ಇಷ್ಟು ವರ್ಷ ಕಳೆದಿದ್ದೀಯಾ. ನಂಗೂ ಏನೂ ಗೊತ್ತಿಲ್ಲ . ಸ್ವಲ್ಪ ನಂಗೆ ಅದರ ಅನುಭವ ಕೊಡ್ತೀಯಾ ಪ್ಲೀಸ್ ಇಲ್ಲ ಅನ್ಬೇಡ. ಒಳ್ಳೇ ತಾಜಾ ತರಕಾರಿ ಥರ ಇದ್ದೀಯಾ. ಬಾ " ಎಂದು ಅವಳ ಮೇಲೆ ಬೀಳಲು ಹೋದ. ಅವನಿಂದ ತಪ್ಪಿಸಿಕೊಂಡು ಮೊಮ್ಮಗನಿಗೆ ಈ ವಿಷಯ ಹೇಳಿದಳು
" ಹೌದು ಪ್ರತಿ ಮನುಷ್ಯನಿಗೂ ಹುಟ್ಟು ಸಾವು, ಬಾಲ್ಯ ಹರೆಯ, ಮುಪ್ಪು ಅಂತ ಇರುತ್ತೆ. ಆದರೆ ನಿಂಗೆ ಅದು ಯಾವುದೂ ಇಲ್ಲ ಎಷ್ಟು ವರ್ಷ ಹೀಗೆ ಇರ್ತೀಯಾ ಯಾವಾಗ ಸಾಯ್ಟಿಯಾ ಅಂತಾನೂ ಗೊತ್ತಿಲ್ಲ ನಂಗೇನೋ ನೀನು ಅಜ್ಜಿ . ಆದ್ರೆ ಮುಂದೇನು ಹೀಗೆ ಇದ್ರೆ ನನ್ನ ಮಗ ಅವನ ಮಗಾನೋ ಮಗಳೋ ನಿನ್ನ ಖಂಡಿತಾ ನೋಡ್ಕೊಳೋದಿಲ್ಲ .ನೀನು ಎಲ್ಲರ ಹಾಗೆ ಮುದುಕಿಯಾದ್ರೂ ಪರವಾಗಿಲ್ಲ . ನಿಂಗೆ ಪ್ರತ್ಯೇಕ ರಕ್ಷಣೆ ಕೊಡ್ಬೇಕು ಅಂದ್ರೆ ನಂಗೆ ಆಗಲ್ಲ. ಈಗ ಕಾಲ ಬೇರೆ ಕೆಟ್ಟು ಹೋಗಿದೆ . ಮನೇಲಿ ಹೀಗೆ ಹರೆಯದ ಹೆಣ್ಣು ಇದ್ರೆ ಎಂಥ ಹುಡುಗರಿಗೂ ಆಸೆ ಬರೋದು ಸಹಜ ಅವನ ತಪ್ಪಲ್ಲ ನಿಂಗೆ ಮುಪ್ಪಿಲ್ಲವಲ್ಲ ಅದು ನಿನ್ನ ತಪ್ಪು " ಎಂದ
ಮೊದಲ ಬಾರಿಗೆ ತಾನು ಮುದುಕಿಯಾಗಿದ್ದರೆ ಎಷ್ಟು ಚೆಂದ ಅನ್ನಿಸತೊಡಗಿದವು
ಮರಿಮಗನ ಕಾಟ ಅತಿಯಾಗತೊಡಗಿದವು ಮನೆಯಲ್ಲಿ ಇದ್ದ ಆದರವೂ ಈಗ ಇರಲಿಲ್ಲ.
ಸಾಯಬೇಕೆಂದರೆ ಸಾವು ಯಾವ ದಾರಿಯಲ್ಲೊ ಅವಳಿಗೆ ಒದಗಲಿಲ್ಲ.
ಕೊನೆಗೊಮ್ಮೆ ಮತ್ತದೇ ಸ್ಟಳಕ್ಕೆ ಹೋದಳು ದೇವರನ್ನು ಹುಡುಕಿಕೊಂಡು ಆದರೆ ಆ ಸ್ಥಳದಲ್ಲಿ ದೊಡ್ಡದೊಂದು ಕಾಂಪ್ಲೆಕ್ಸ್ ತಲೆ ಎತ್ತಿತು
ಅವಳಿಗೆ ಏಕಾಂತವಿರುವ ಯಾವ ಸ್ಥಳವೂ ತೋರಲಿಲ್ಲ .
ಎಲ್ಲೆಡೆ ಜನಸಾಗರ . ಹುಚ್ಚರಂತೆ ಮೊಬೈಲ್ ನಲ್ಲಿ ಮಾತಾಡುತ್ತಾ ಸುತ್ತಾ ಜನರ ಪರಿವೇ ಇಲ್ಲದಂತೆ ಓಡಾಡುವ ಜನ.
ಅಲ್ಲಲ್ಲಿ ಮೇಲೆ ಬೀಳಲು ಬರುವ ಹುಡುಗರು, ಸಿಕ್ಕ ಸಿಕ್ಕವರನ್ನು ಕೊಚ್ಚುವ ರೌಡಿಗಳು.
ದೇವಸ್ಥಾನಗಳೂ ಹೈಟೆಕ್ ಆಗಿದವು .
ಸುಲಭವಾಗಿ ಅವಳಿಗೆ ಪ್ರವೇಶ ಸಿಗಲಿಲ್ಲ. ಅಲ್ಲೂ ಪುರೋಹಿತರ ಕಾಟ . ಹೆಣ್ಣು ಒಂಟಿಯಾಗಿದ್ದಾಳೆಂದು ಅವರಿಗೂ ಆಸೆ .
ಅಲ್ಲಿಂದ ಕೊನೆಗೆ ತನ್ನ ಹಳೇ ಮನೆಗೆ ಬಂದು ಬಾಗಿಲು ಹಾಕಿಕೊಂಡು ಜಪಿಸತೊಡಗಿದಳು.
ಬಹಳ ಕಠಿಣ ತಪದಿಂದ ದೇವರು ಪ್ರತ್ಯಕ್ಷನಾದ
"ದೇವರೆ ನನಗೆ ಸಾವು ಕೊಡು" ಅರ್ಧಳಾಗಿ ಬೇಡಿಕೊಂಡಳು
ದೇವರು ನಕ್ಕ
"ಅದಕ್ಕೆ ಪ್ರತಿಯೂಬ್ಬರಿಗೂ ಸಾವು, ಮುಪ್ಪು ಇರುವುದು ಅದ ಅರ್ಥ ಮಾಡಿಕೊಳ್ಳದಾಗಲೇ ಈ ರೀತಿ ಆಗುವುದು"
"ದೇವರೆ ನನಗೆ ಒಮ್ಮೆಯಾದರೂ ಮುದುಕಿಯಾಗುವ ಅವಕಾಶ ಕೊಡು"
ಅವಳ ಆಸೆ ಈಡೇರಿತು . ಆ ಅವಸ್ಥೆಯನ್ನು ತುಂಬು ಹೃದಯದಿಂದ ಅನುಭವಿಸಿದಳು
ಹಾಗೆ ಅವಳ ಆತ್ಮ ಪಂಚಭೂತದಲ್ಲಿ ಲೀನವಾಯಿತು
Wednesday, June 11, 2008
ಬಿಡುಗಡೆ
ಗಾರ್ಮೆಂಟ್ಸ್ ನಿಂದ ಆಗ ತಾನೆ ಬಂದು ಉಸ್ ಅಂತ ಕೂತವಳಿಗೆ ಮಗಳ ನೆನಪು ಬಂತು ಕೂಡಲೆ ಪಕ್ಕದ ಮನೆಗೆ ಹೋದಿ ಕರೆ ತಂದಳು.ಗಂಡ ಇನ್ನೂ ಬಂದಿರಲಿಲ್ಲ .ಮಗಳಿಗೆ ಕಾಫಿ ಕೊಟ್ಟು ತಾನುಹಾಲಿಲ್ಲದ ಕಾಫಿ ಹೀರುತ್ತಿದ್ದಂತೆ ಆ ಕಾಫಿಯ ಕಪ್ಪೆಲ್ಲ ತನ್ನ ಬದುಕಲ್ಲೆ ತುಂಬಿದಂತೆ ಭಾಸವಾಗತೊಡಗಿತು.
ಬದುಕಿನ ಅನಿಶ್ಚಿತತೆ ಕಾಡತೊಡಗಿತು
ಅವಳಿಗೆ ಗೊತ್ತಿತು ಹೀಗೆ ಆಗುತ್ತದೆ ಎಂದು
ಅವಳ ಅಮ್ಮ ಮನೆ ಚಾಕರಿ ಮಾಡುತಾ ಇವಳನ್ನೂ ಅದೇ ಚಾಕರಿಗೆ ಹಾಕಿ ಬದುಕಲ್ಲಿ ಓದಿಗೆ ಅವಕಾಶವಿಲ್ಲದಂತೆ ಮಾಡಿದಳು
ಹಾಗೆ ಚಾಕ್ರಿಗೆ ಹೋಗುತ್ತಲೆ ಸಿದ್ದನ ಪರಿಚಯವಾಗಿ ಪ್ರೇಮ ಪ್ರೀತಿ ಶುರುವಾಗಿ
ಊರಿನಿಂದ ಓಡಿ ಬಂದು ಬೆಂಗಳೂರಿಗೆ ನೆಲೆಸಿದರು.
ಮದುವೆ ಎಂಬ ಶಾಸ್ತ್ರವೂ ನಡೆಯಿತು.
ಹೊಟ್ಟೆಯಲ್ಲಿ ಮಗಳು ಇದ್ದಾಗಲೆ ಅವಳಿಗೆ ಬಡತನದ ಬೆಂಕಿ ಮುಂಚಿಗಿಂತಲೂ ತೀಕ್ಷ್ಣವಾಗಿ ಸುಡತೊಡಗಿತು
ಅಲ್ಲಿಯಾದರೆ ಅಮ್ಮ ಇವಳ ಸಮಕೂ ದುಡಿಯುತಿದ್ದಳು
ಆದರೆ ಇಲ್ಲಿ ಸಿದ್ದ ಕೆಲಸಕ್ಕೆ ಹೋಗೊ ಮಾತೆ ಆಡಲಿಲ್ಲ
ಕೆಲಸಕ್ಕೆ ಹೋಗು ಎಂದು ಕೇಳಿದರೆ ಹಿಡಿದು ಹಿಗ್ಗಾ ಮುಗ್ಗ ಹೊಡೆಯುತ್ತಿದ್ದ . ಕುಡಿತ ಇಲ್ಲದಿದ್ದರೆ ಬದುಕೇ ಇಲ್ಲ ಅವನಿಗೆ.
ಹಾಗಾಗಿ ಗಾರ್ಮೆಂಟ್ಸ್ ಒಂದರಲಿ ಕೆಲಸಕ್ಕೆ ಹೆಲ್ಪರ್ ಅಗಿ ಸೇರಿದಳು.
ಇವಳು ದುಡಿದು ತಂದ ಹಣವನ್ನೆಲ್ಲಾ ಕುಡಿತಕ್ಕೆ ಪೋಲು ಮಾಡುತ್ತಿದ್ದ.
ಮಗಳು ಹುಟ್ಟಿದ ನಂತರ ಮತ್ತೆ ಅದೇ ಬದುಕು.
ಪಕ್ಕದ ಮನೆಯಲ್ಲಿ ಮಗಳನ್ನು ಬಿಟ್ಟು ಹೋಗುತ್ತಿದ್ದಳು .
ಬದುಕು ಹೇಗೋ ಸಾಗುತ್ತಿತ್ತು ಆ ಚಂದನ್ ಎಂಬ ವ್ಯಕ್ತಿ ಇವಳ ಮಾಸ್ಟರ್ (ಸೂಪರ್ ವೈಸರ್ )ಆಗಿ ಬರುವವರೆಗೆ. ಗಾರ್ಮೆಂಟ್ಸ್ ಹೆಂಗಳೆಯರಲ್ಲಿ ಯಾರಾದರೂ ಗಮನ ಸೆಳೆಯುವಂತಿದ್ದರೆ ಅವರು ಅವನನ್ನು ಓಲೈಸಿಅಬೇಕಿತ್ತು. ಈ ಸಲ ಈಕೆ ಅವನ ಬಲಿ ಪಶುವಾಗಬೇಕಿತ್ತು ಇಲ್ಲವಾದರೆ ನಾಳೆಯಿಂದ ಅವಳು ಅಲ್ಲಿ ಇರುವಂತಿರಲಿಲ್ಲ .
ಇವತ್ತು ಏನಾದ್ರೂ ಮಾಡಿ ಸಿದ್ದನ ಅತ್ರ ಮಾತಾಡಿ ಏಳ್ಬಿಡಬೇಕು . ತನ್ನಲ್ಲಿ ಯೋಚಿಸಿಕೊಂಡಳು
ರಾತ್ರಿ ಬಂದಾಗ ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡು ಅತ್ತಳು . ನೀನೊಬ್ಬ ಸರಿಯಾಗಿದ್ರೆ ನಮ್ಮ ಬಾಳು ಇಂಗೆ ಇರ್ತಿರ್ಲಿಲ್ಲ ಅಂತ ಅತ್ತುಕೊಂಡಳು.
ಸಿದ್ದ ಕರಗಿ ಹೋದ
ಆಯ್ತು ಕಣೆ ಇನ್ನು ಈ ನನ್ನ ಮಗೀ ಮೇಲೆ ಆಣೆ ಇನ್ ಮ್ಯಾಕೆ ಕುಡಿಯಾಕಿಲ್ಲ. ಅವಂಗೆ ಒಂದು ಗತಿ ಕಾಣಿಸ್ತೀನಿ ನಾಳಿಕಿಂದ ನೀ ಏನ್ ಕೆಲ್ಸಕ್ಕೆ ಓಗ್ಬೇಡ ನಾನೇ ಓಯ್ತೀನಿ.
"ಎಲ್ಲಾ ಸರಿ ಆದ್ರೆ ನಾ ಮುಂಚಿದ್ನಲ್ಲ ಕೆಲ್ಸಕ್ಕೆ ಅವನತ್ರ ಕಾಸು ತಕ್ಕೊಂಡಿದೀನಿ ಅವನು ಕೆಲ್ಸ ಕೇಳೊಕೆ ಓದ್ರೆ ಕಾಸು ಕೇಳ್ತಾನೆ . ಅಲ್ಲಿ ಕೆಲ್ಸ ಬೋ ಆರಾಮಾಗಿರ್ತದೆ."
"ಏಟ್ ಕೊಡ್ವೇಕು ನೀನು ಅವಂಗೆ’ ಕೇಳಿದಳು
" ಒಂದಾರು ಸಾವ್ರ ಕೊಡ್ಬೇಕು"
"ಆಟೊಂದು ದುಡ್ದು ಯಾಕ್ ತಗೋಂಡಿದ್ದಿ ನೀನು"
"ಅದು -----------ಅದು --------- ಏ ಓಗ್ಲಿ ಬಿಡ್ಲೆ ನಾನೆ ಏನಾರ ಮಾಡಿ ಸಾಲ ತೀರ್ಸ್ಕೊಂತೀನಿ"
"ಬೇಡ ಬಿಡು ನೀ ಕೆಲ್ಸಕ್ಕೆ ಓದ್ರೆ ಏಟು ಬೇಕಾದ್ರೆ ಸಂಪಾದ್ನೆ ಮಾಡ್ಬೋದು. ನನ್ತಾವ ಒಂದೀಟು ದುಡ್ಡು ಇಟ್ಕಂಡಿದೀನಿ ಕೊಡ್ತೀನಿ ತಾಳು"
ಅಂದಿನ ಸಂವಾದ ಅವಳ ಹೊಸ ಬದುಕಿಗೆ ನಾಂದಿಯಾಯಿತು
ಮಾರನೆಯ ದಿನ ಅವಳು ಕೆಲಸಕ್ಕೆ ಹೋಗಲಿಲ್ಲ. ಸಿದ್ದ ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ಹೋದ.
ಇವಳು ಮಗಳಿಗೆ ಸ್ನಾನ ಮಾಡಿಸಿ ಅಡಿಗೆ ಮಾಡಿ ಬಡಿಸಿ ಮನೆಯಲ್ಲಿ ನಲಿಯುತಲಿದ್ದಳು. ಸಂಬ್ರಮಿಸಿದಳು. ತನ್ನ ಕಷ್ಟ ಕೊನೆಯಾಗಿಸಿದ ದೇವರಿಗೆ ವಂದಿಸಿದಳು
ಸಂಜೆಯಾಯಿತು ಹೂವಾ ಮುಡಿದುಕೊಂಡು ಗಂಡನಿಗಾಗಿ ಕಾಯುತ್ತಿದ್ದಳು . ರಾತ್ರಿ ಹತ್ತಾದರೂ ಸಿದ್ದ ಕಾಣಲಿಲ್ಲ. ಮಗಳು ಮಲಗಿದ್ದಳು
ಹಾಗೆ ಮಂಪರು ಬಂದಂತಾಯಿತು.
"ಏಯ್ ಏಳೆ ಮ್ಯಾಕೆ ಹಾದ್ರ ಮಾಡಿದ್ದ ಕಾಸು ಕೊಟ್ಟು ನನ್ನ್ ಕೆಲ್ಸಕ್ಕೆ ಕಳ್ಸ್ತೀ ಏನ್ಲೆ? "ಸಿದ್ದನ ಗಡಸು ತುಂಬಿದ ದನಿಗೆ ಬೆಚ್ಚಿ ಎದ್ದಳು
ಸಿದ್ದ ಕಂಠ ಪೂರ್ತಿ ಕುಡಿದು ಜೋಲಿ ಹೊಡೆಯುತಿದ್ದ.
"ನಂಗೇನು ತಿಳ್ಯಾಕಿಲ್ವೇನೆ ನಿನ್ನ ಬುದ್ದಿ . ನಿಂತಾವ ಆಟೋಂದು ದುಡ್ಡು ಎಂಗೆ ಬತ್ತದೆ. ಯಾವ್ಯಾವನತ್ರ ಓಗಿದ್ಯೋ ಯಾರಿಗ್ ಗೊತ್ತು. "
ಅವಳು ಕಷ್ಟ ಪಟ್ಟು ಕೂಡಿಟ್ಟ ಹಣ ಅದು.
ಇನ್ನೂ ಬಯ್ಯುತ್ತಲೇ ಇದ್ದ . ಅಕ್ಕ ಪಕ್ಕದವರೆಲ್ಲಾ ನಿಂತು ತಮಾಷೆ ನೋಡುತ್ತಿದ್ದರು.
ರಾತ್ರಿ ಎಲ್ಲಾ ನಿದ್ರಿಸಲಿಲ್ಲ ಇವನು ಏಳ್ದ ಹಾಗೆ ಹಾದ್ರನಾದರೂ ಮಾಡಿದ್ರೆ ಏಟೊಂದು ದುಡ್ಡು ಸಂಪಾದ್ನೆ ಮಾಡ್ಬೋದಿತ್ತು . ನೀತಿ ನಿಯತ್ತಿಗೆ ಕಾಲವಿದಲ್ಲ ಎನಿಸಿತಾದರೂ ಮನಸ್ಸು ಬರಲಿಲ್ಲ
ಬೆಳಗಿನ ಜಾವ. ಸಿದ್ದ ರಾತ್ರಿಯ ನಶೆ ಇಂದ ಇನ್ನೊ ಎದ್ದಿರಲಿಲ್ಲ
ಇವಳು ಮಗಳನ್ನು ಕರೆದುಕೊಂಡು ಆ ಕೇರಿ ಬಿಟ್ಟು ಊರು ಬಿಟ್ಟು ಅಮ್ಮನ ಊರು ಸೇರಿಕೊಳ್ಳಲು ಮುನ್ನಡೆದಳು.
Monday, June 2, 2008
ಜವರಾಯನಿಗಿಲ್ಲ ಕರುಣೆ
ನೆನ್ನೆವರೆಗೆ ಬಂದ ಹಣವನ್ನೆಲ್ಲಾ ಸಾರಾಯಿ ಅಂಗಡಿಗೆ ಸುರಿದಿದ್ದ ಅವಳನ್ನು ಈ ದಂಧೆ ಇಳಿಸಿದವ---ಬೇರಾರು ಅಲ್ಲ ಅವಳ ಗಂಡನೇ .ಆ ಊರಿನಿಂದ ಈ ಕಾಣದ ಊರಿಗೆ ಕರೆತಂದು ಒಂದು ಲಾಡ್ಜ್ನಲ್ಲಿ ಇಳಿಸಿ ಒಂದಷ್ಟು ಗಿರಾಕಿಗಳನ್ನು ಕರೆತಂದ . ನಂತರ ಅವರಿಂದ ಹಣ ಪಡೆದುಕೊಂಡವ ಪತ್ತೆಯೇ ಇಲ್ಲ ಬೆಳಗಿನಿಂದ.
ಮಗು ಹಸಿವೂ ಎಂದು ಭೋರ್‍ಗರೆದು ಅಳುತ್ತಿತು. ಬೆಳಗ್ಗೆ ಎದ್ದಾಗ ಬಿಸ್ಕೆಟ್ ಕೊಟ್ಟದ್ದಷ್ಟೆ .ಅವಳ ಹೊಟ್ಟೆಗೂ ಏನೂ ಇಲ್ಲ ಮಗುವಿಗೂ ಏನೂ ಇಲ್ಲ. ಏನಾದರಾಗಲಿ ಎಂದು ಮಗುವನ್ನು ಮಲಗಿಸಿ ಬಳಿಯಲ್ಲೇ ಇದ್ದ ಬಸ್ ಸ್ಟಾಪ್‌ಗ್ಗೆ ಬಂದು ನಿಂತಿದ್ದಳು.
ಅವಳನ್ನು ಗಂಡಸರು ನೋಡುತಿದ್ದರೇನೊ ನಿಜ ಆದರೆ ಬಳಿ ಬರುವ ಧೈರ್ಯ ಇರಲಿಲ್ಲವೆನ್ನಿಸುತವಳಿಗೆ
ಹಾಗಾಗಿ ಕಣ್ಣಲ್ಲೆ ಸನ್ನೆ ಮಾಡಿದಳು .
ಅವಳ ವಯಸು 30 ರ ಸಮೀಪ ಇರಬಹುದೇನೊ ಆದರೆ ಸಮಯ ಅದನ್ನು ಇನ್ನೂ ಹೆಚ್ಚಿಸಿತ್ತು. ಗುಳಿ ಬಿದ್ದ ಕಣ್ಣುಗಳಿಗೆ ಹಚ್ಚಿದ ಕಾಡಿಗೆ ಇಂದ ಇನ್ನೂ ಭಯಂಕರವಾಗಿ ಕಾಣುತಿದ್ದಳು.
ಹ್ಯಾಗೊ ಒಬ್ಬ ಬಂದ . ಚೌಕಾಸಿ ಮಾಡಿ 500 ರೂ ಗಳಿಂದ 200 ಕ್ಕೆ ಇಳಿಯಿತು ಅವಳ ರೇಟ್.
ಮಗುವಿಗೆ ಇಡ್ಲಿ ಕೊಡಿಸಿ ಇಲ್ಲೇ ಬರುವುದಾಗಿ ಹೇಳಿ ಬಳಿಯಲ್ಲಿನ ಅಂಗಡಿಯಿಂದ ಇಡ್ಲಿ , ಚಾಕ್ಲೆಟ್ ತೆಗೆದುಕೊಂಡು ಸಂಭ್ರಮದಿಂದ ಲಾಡ್ಜಿನೆಡ್ಗೆ ಧಾವಿಸುತ್ತಿದ್ದಂತೆ......................
ಅದ್ಲ್ಲಿದ್ದನೋ ಜವರಾಯ ಲಾರಿಯೊಂದರ ರೂಪದಲ್ಲಿ ಬಂದವನೇ ಅವಳ ಪ್ರಾಣ ಹೀರಿ ನಡೆದೇ ಬಿಟ್ಟ.
ಲಾರಿ ಹೋದ ನಂತರ ಅಲ್ಲಿದ್ದಿದ್ದು ಅವಳ ಜಜ್ಜಿ ಹೋದ ಶರೀರ ಹಾಗೂ ಚೆಲ್ಲಾಪಿಲ್ಲಿಯಾದ ಇಡ್ಲಿ , ಚಾಕ್ಲೆಟ್......................................................................
ಇತ್ತ ಮಗು ಅಮ್ಮ ಬರುತ್ತಾಳೆ ಎಂದು ಅಳುತ್ತಾ ಕಾಯುತ್ತಲೇ ಇತ್ತು................................................