Monday, March 7, 2011

ಅರುಣಾ ಶಾನಬಾಗ್:.

ಕೊನೆಗೂ ಅರುಣಾಗೆ ಅರುಣೋದಯ ಕಾಣಲೇ ಇಲ್ಲ . ಕೊನೆಗೆ ಈ ಜೀವನದಿಂದ ಬಿಡುಗಡೆ ಸಿಕ್ಕೀತೆ ಎಂಬ ನಿರೀಕ್ಷೆಯೂ ಇಲ್ಲವಾಗಿ ಹೋಗಿದೆ. ಜೀವ ಹೋಗುವ ತನಕ ದಿನದಿನವೂ ಸಾಯುತ್ತಲೇ ಜೀವಿಸಿರಲೇಬೇಕಾಗಿದೆ.
ಅಷ್ಟಕ್ಕೂ ಈ ಅರುಣಾ ಶಾನಭಾಗ್ ಎಂಬ ನಮ್ಮ ಕರ್ನಾಟಕದ ಹುಡುಗಿ ಮಾಡಿದ ತಪ್ಪಾದರೂ ಏನು?
ಶಿವಮೊಗ್ಗದ ಹಳದಿಪುರದಲ್ಲಿ ಹುಟ್ಟಿದಾಕೆಗೆ, ಬಾಂಬೆಯ ಕೆಮ್ಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಸಿಕ್ಕಾಗ ರೋಗಿಗಳ ಸೇವೆಯಲ್ಲಿ ಬದುಕುವಾಸೆ ಕಂಡಿದ್ದಳೇನೋ
ಆದರೆ ಅವಳನ್ನು ಜೀವನವಿಡೀ ಜೀವಚ್ಛವವನ್ನಾಗಿ ಮಾಡುವ ಭೀಭತ್ಸ ಘಟನೆಯೊಂದು ಕಾದಿತ್ತು ಎಂದು ಅವಳಿಗಾದರೂ ಎಲ್ಲಿ ಗೊತಿತ್ತು?.
ಅರುಣಾ ಮಹತ್ವಾಕಾಂಕ್ಶೆಯ ಹುಡುಗಿ.ವಿದೇಶದಲ್ಲಿ ತನ್ನ ಓದನ್ನು ಮುಂದುವರೆಸುವ ಆಸಕ್ತಿ ಹೊಂದಿದ್ದಳು . ಇದನ್ನು ತನ್ನ ಕಸಿನ್ ಜೊತೆ ಹೇಳಿಕೊಂಡಿದ್ದಳು
ನೋಡಲೂ ಚೆಂದವಿದ್ದಳು. ನಾಲಿಗೆ ಮಾತ್ರ ಸ್ವಲ್ಪ ಚುರುಕು ಎಂದು ಅವಳ ಸಹೋದ್ಯೋಗಿಗಳು ಹೇಳಿದ್ದಾರೆ.
ಅದೇ ಆಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತಿದ್ದ ಡಾಕ್ಟರ್ ಒಬ್ಬರ ಜೊತೆ ಮದುವೆಯೂ ನಿಶ್ಚಯವಾಗಿ ಸುಂದರ ಜೀವನದ ಕನಸು ಕಾಣುತ್ತಿದ್ದವಳನ್ನು ಸೋಹನ್ ಲಾಲ್ ಭರ್ತ ವಾಲ್ಮೀಕಿ ಎಂಬ ಹೆಸರಿನ ವಾರ್ಡ್‌ ಬಾಯ್ ಮುಂದೆಂದೂ ಕನಸು ಕಾಣುವುದಿರಲಿ ಯೋಚಿಸಲೂ ಸಾಧ್ಯವಾಗದಂತಹ ಸ್ಥಿತಿಗೆ ದೂಡಿದ್ದ

ಅರುಣಾ ಅವನ ಅವ್ಯವಹಾರವನ್ನು ಕಂಡು ಬೈದಿದ್ದನ್ನೇ ನೆಪ ಮಾಡಿಕೊಂಡು ಅವಳ ಮೇಲೆ ಅತ್ಯಾಚಾರವವೆಸಗುವ ಸಂದರ್ಭದಲ್ಲಿ ಅವಳ ಕುತ್ತಿಗೆಗೆ ನಾಯಿಯ ಚೈನ್ ಕಟ್ಟಿ ಪಶುವಿಗಿಂತ ಕೀಳು ಮತ್ತು ಅಸ್ವಾಭಾವಿಕ ರೀತಿಯಲ್ಲಿ ತನ್ನ ತೃಷೆ ತೀರಿಸಿಕೊಂಡ .
ಇತ್ತ ಅರುಣಾಳ ಬಾಳಲ್ಲಿ ಮತ್ತೆ ಅರುಣೋದಯ ನೋಡುವ ಅವಕಾಶ ಬರಲೇ ಇಲ್ಲ . ಕಟ್ಟಿದ್ದ ಚೈನಿನ ಬಿಗಿತದಿಂದ ಮೆದುಳಿಗೆ ಆಮ್ಲಜನಕದ ಕೊರತೆಯುಂಟಾಗಿ , ಮೆದುಳು ನಿಷ್ಕ್ರಿಯವಾಗಿ ಜೀವಂತ ಹೆಣವಾಗಿ ಹೋದಳು ಅರುಣಾ.
ಮನೆಯವರು ನೋಡಿಕೊಳ್ಳಲಾಗದೆ ದೂರ ಹೋದರು
ಮದುವಯಾಗುವ ಹುಡುಗ ಕೆಲವಾರು ವರ್ಷಗಳವರೆಗೆ ಅವಳ ಜೊತೆಗೆ ಇದ್ದು ಕೊನೆಗೆ ಬೇರೊಂದು ಮದುವೆಯಾದರು.
ಇತ್ತ ಅವಳನ್ನು ಇಂತಹ ಸ್ಥಿತಿಗೆ ದೂಡಿದ ಸೋಹನ್ ಲಾಲ್‍ಗೆ ಶಿಕ್ಷೆಯಾಗಿದ್ದು ಕೇವಲ ಏಳೇ ವರ್ಷಗಳು. ಆತನ ಅತ್ಯಾಚಾರದ ಆರೋಪ ಬಯಲಿಗೆ ಬಾರದೆ ಅಸ್ವಾಭಾವಿಕ ಕ್ರಿಯೆ ಎಂದು ಅವನಿಗೆ ಕಡಿಮೆ ಶಿಕ್ಷೆ. ಬಿಡುಗಡೆಯಾಗಿಡೆಲ್ಲಿಯ ಬೇರೊಂದು ಆಸ್ಪತ್ರೆಯಲ್ಲಿ ಆರಾಮಾವಾಗಿದ್ದಾನೆ. ನಮ್ಮ ದೇಶದ ನ್ಯಾಯಾಲಯದ ಸ್ಠಿತಿಗೆ ಇದೊಂದು ಉದಾಹರಣೆಯಷ್ಟೆ.
ಇತ್ತ ತನ್ನ ತಪ್ಪೇ ಇಲ್ಲದೆ ಜೀವನ ಪರ್ಯಂತ ಶಿಕ್ಷೆಗೆ ಒಳಗಾಗಿದ್ದಾಳೆ ನಮ್ಮ ಅರುಣ. ಬೆಳಗಿನ ಸುಂದರ ಕನಸುಗಳು ಕಮರಿ ಅತ್ತ ಅಸ್ತಂಗತಳೂ ಆಗದೇ ಇತ್ತ ಬದುಕಲೂ ಆಗದೇ ಬದುಕಿದ್ದಾಳೇ. ಕೆಮ್ಸ್ ಆಸ್ಪತ್ರೆಯವರೇ ಅರುಣಾಳನ್ನು ನೋಡಿಕೊಳ್ಳುತ್ತಿದ್ದಾರೆ
ಸತತ 37 ವರ್ಷಗಳಿಂದ ಹಾಸಿಗೆಯ ಮೇಲೆ ಮಲಗಿರುವ ಅರುಣಾ ಆಗೀಗ ಚೀರುತ್ತಾಳೆ, ಆದರೆ ಮಾತನಾಡಳು, ಕಣ್ಣುಗಳಿವೆ ಆದರೆ ನೋಡಲಾರಳು. ಹೀಗೆ ಎಲ್ಲಾ ಅಂಗಗಳಿದ್ದೂ ಅವುಗಳನ್ನು ನಿಯಂತ್ರಿಸುವ ಮೆದುಳು ನಿಷ್ಕ್ರಿಯವಾಗಿದೆ. ನೆನಪಿನ ಶಕ್ತಿಯನ್ನೂ ಕಳೆದುಕೊಂಡಿದ್ದಾಳೆ.
ಅರುಣಾಳ ಪರಿಸ್ಥಿತಿ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಪಿಂಕಿ ವಿರಾನಿಯನ್ನು ಬಡಿದೆಬ್ಬಿಸಿತು .
ಅರುಣಾಗೆ ದಯಮರಣ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದಳು.
ಸುಪ್ರೀಮ್ ಕೋರ್ಟ್ ಇಂದು ದಯಾಮರಣದ ಅರ್ಜಿಯನ್ನು ತಿರಸ್ಕರಿಸಿತು. ತಾನ ಸಾಯಬೇಕೆ ಬೇಡವೇ ಎಂಬ ತೀರ್‍ಮಾನವನ್ನು ಅರುಣಾಗೆ ಕೈಗೊಳ್ಳಲು ಸಾಧ್ಯವಿಲ್ಲದಿದ್ದಾಗ, ಅವಳಿಗೆ ಸಾವನ್ನು ನೀಡುವ ಹಕ್ಕು ಬೇರೆಯವರಿಗಿಲ್ಲ ಎಂಬ ನಿರ್ಧಾರವನ್ನು ಹೇಳಿತು.
ಆದರೆ.................
ಇನ್ನೆಷ್ಟು ದಿನ ಅರುಣಾ ಹೀಗೆ ಇರಬೇಕು?
ಅವಳಿಗೆ ದಯಾಮರಣದ ಅವಶ್ಯಕತೆ ಇದೆಯೇ ಇಲ್ಲವೇ?
ಕನಿಷ್ಟ ಅವಳಿಗೆ ಬದುಕುವ ಆಸೆ ಇದೆಯೇ?
ಇದಕ್ಕೆ ಉತ್ತರಿಸಲು ಅವಳಿಂದ ಮಾತ್ರ ಸಾಧ್ಯ .
ಆದರೆ ...................
ಇಂಥ ಸ್ತಿತಿಯಲ್ಲಿರುವ ಆಕೆಗೆ ಜೀವಿಸುವ ಹಕ್ಕು ಬೇಕೆ ಬೇಡವೇ ...............
ಅಷ್ಟಕ್ಕೂ ದಯಮರಣ ನಮ್ಮ ದೇಶದಲ್ಲಿ ಎಷ್ಟು ಪ್ರಸ್ತುತ?

ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು

Sunday, January 16, 2011

ದುರಂತ ನಾಯಕ

ಸ್ಮಶಾನಕ್ಕೆ ಕಾಲಿಟ್ಟಂತಹ ಅನುಭವ.ಒಬ್ಬಂಟಿಯಾಗಿ ನಡೆಯುತ್ತಿದ್ದೆ.

ಎಲ್ಲಿ ನೋಡಿದರೂ ಮುರಿದ ರಥಗಳು, ರಕ್ತದ ಮಡುವು, ಕರುಳು ಆಚೆ ಕಿತ್ತು ಬಂದಿರುವ ಸೈನಿಕರು. ನಿಟ್ಟುಸಿರು ತಂತಾನೆ ಹೊರಹೊಮ್ಮಿತು .

ದೀರ್ಘವಾಗಿ ಉಸಿರೆಳೆದೆ. ನನ್ನ ಸ್ವಾರ್ಥಕ್ಕೆ, ಹಣದಾಹಕ್ಕೆ, ಭೂಮಿಯಾಸೆಗೆ, ಅಭಿಮಾನಕ್ಕೆ ಬಲಿಯಾದ ಮುಗ್ಧರು. ತಾವು ಏತಕ್ಕಾಗಿ ಯಾರಿಗಾಗಿ ಯುದ್ದ್ದ ಮಾಡುತ್ತಿದ್ದೆವೆಂಬ ಅರಿವೂ ಇಲ್ಲದವರು

ಅದೂ ನನ್ನದೇ ಅಪ್ಪಣೆಯಾಗಿತ್ತಲ್ಲವೇ. ಪ್ರತಿಯೊಂದು ಗಂಡಸೂ ಯುದ್ದರಂಗದಲ್ಲಿ ಹೋರಾಡಬೇಕೆಂಬ ನಿಯಮ ತಂದು ಮನೆ ಮನೆಗೆ ನುಗ್ಗಿ ೧೪ ರಿಂದ ೭೦ ರವರೆಗಿನ ಪುರುಷರನ್ನು ಎಳೆತಂದು ಯುದ್ದ ತರಬೇತಿ ಕೊಟ್ಟು..........

ಆಗ ತಾನೆ ಮದುವೆಯಾಗಿತ್ತಲ್ಲವೇ ಲಕ್ಷ್ಮಣನಿಗೆ. ಹಾ ಕಂದ ಲಕ್ಷ್ಮಣನನ್ನು ನೆನೆದು ಕರುಳು ಹರಿದಂತಾಯಿತು. ತನ್ನ ಮುಂದೆಯೇ ಕೊಂದನಲ್ಲಾ ಆ ಎನ್ನ ಅರಿ ಅರ್ಜುನನ ಮಗ ಅಭಿಮನ್ಯು. ತಾನೇನೂ ಮಾಡಲಾಗಲಿಲ್ಲವಲ್ಲಾ . ಇಲ್ಲ ಇಲ್ಲ ಅವನನ್ನೂಕೊಂದು ಬಿಟ್ಟೆವಲ್ಲ್ಲಾ ಅವನೂ ಹೊಸದಾಗಿ ಮದುವೆಯಾದವನೇ ತಾನೆ. ದ್ವೇಷಕ್ಕೆ ದ್ವೇಷ . ಸೇಡಿಗೆ ಸೇಡು . ಅವನನ್ನು ಕೊಂದ ತಪ್ಪಿಗೆ ಸೈಂಧವನ ಬಲಿ. ಪ್ರೀತಿಯ ಸಹೋದರಿ ವಿಧವೆಯಾದಳು.

ಲಕ್ಷ್ಮಣನಾದರೂ ದಾಂಪತ್ಯದ ಸುಖವನ್ನ ನೋಡಿದ್ದ. ಆದರೆ ಮೊದಲರಾತ್ರಿಗೂ ಅವಕಾಶ ನೀಡದೆ ಎಳೆತಂದ ಅದೆಷ್ಟೋ ಅಮಾಯಕ ಹುಡುಗರು. ಊಟ ಮಾಡುತ್ತಿದ್ದವರು , ನಿದ್ರಿಸಿದವರು ಕಂದಮ್ಮನನ್ನ ಆಡಿಸುತ್ತಿದ್ದವರು ಪ್ರತಿಯೊಬ್ಬರೂ ನಿಂತನೆಲೆಯಲ್ಲಿಯೇ ಬರಲು ಆಜ್ನಾಪಿಸಿದ್ದೆ . ತುತ್ತು ಊಟಕ್ಕೂ ತತ್ವಾರ ಬಂದರೂ ಕೊನೆವರೆಗೂ ಹೋರಾಡಿ ಸತ್ತರು ಸೈನಿಕರು.

ಅಷ್ಟಕ್ಕೂ ನನಗೇನಾಗಿತ್ತು? ಈಗಲೂ ತೋಚುತ್ತಿಲ್ಲ. ದಾಯಾದಿ ದ್ವೇಷವೆಂಬುದು ಇಷ್ಟೊಂದು ಪರಿಮಿತಿ ದಾಟಬಲ್ಲುದೇ?

ಕೇವಲ ಈರ್ಷೆ ,ಈರ್ಷೆ , ಅಸೂಯೆ. ಹೊಟ್ಟೆಕಿಚ್ಚು. ಅವರು ಉದ್ದಾರವಾಗಬಾರದೆಂಬ ಮನಸ್ಸು. ಹೌದು ನಾನು ಹುಟ್ಟಿದ್ದು ಅಸೂಯೆಯ ಕಿಚ್ಚಲ್ಲಿ . ತನಗಿಂತ ಮೊದಲು ಧರ್ಮರಾಜ ಹುಟ್ಟಿದಾಗ ಅಪ್ಪ ಅಮ್ಮನ ಮನದಲ್ಲಿದ್ದ ಅಸೂಯೆಯ ಕಿಚ್ಚು ತನ್ನನ್ನೂ ಮೆಟ್ಟಿಕೊಂಡಿತೇ?

ಅಮ್ಮನೇ ಹೇಳಿದಳಲ್ಲ . ಪರಂಪರೆಯ ಪ್ರಕಾರ ಹಿರಿಯನಾಗಿದ್ದರೂ ರಾಜನಾಗದ ಕುರುಡ ಗಂಡ, ಅವನ ಕುರುಡುತನದಿಂದ ತಮ್ಮನಿಗೆ ಪಟ್ಟಾಭಿಶೇಕವಾಯ್ತು, ಕೊನೆಗೇನೋ ದಾನ ಕೊಡುವಂತೆ ಔದಾರ್ಯತೆ ತೋರುವಂತೆ ರಾಜ್ಯಭಾರ ಬಿಟ್ಟು ಹೋದ . ಒಬ್ಬನೇ ಹೋಗಿದ್ದಲ್ಲಿ ಸರಿ ಇತ್ತೇನೋ ಜೊತೆಗೆ ಹೆಂಡತಿಯರನ್ನು ಕರೆದುಕೊಂಡು ಹೋದ. ಆಗ ಅವಳಿಗೆ ತುಂಬಾ ಸಂತೋಷವಾಗಿತ್ತಂತೆ. ಇನ್ನು ತಾನೆ ಪಟ್ಟಮಹಿಷಿ. ಹೇಗಿದ್ದರೂ ಪಾಂಡುವಿಗೆ ಮಕ್ಕಳಾಗುವುದಿಲ್ಲ ಎಂಬ ಆನಂದ ಜೊತೆಗೆ. ತನ್ನ ಸಂತಾನವೇ ಮುಂದಿನ ರಾಜ ಎಂಬ ಕಲ್ಪನೆ. ಅದು ಒಡೆದಿದ್ದು ಅವಳಿಗಿಂತಮೊದಲು ವಾರಗಿತ್ತಿಗೆ ಮಗನಾದಾಗ . ಆಗ ತಾನು ಅವಳ ಹೊಟ್ಟೆಯಲ್ಲಿ ಇದ್ದೆ . ಆ ಕಿಚ್ಚು ತನ್ನನ್ನು ಮುಚ್ಚಿಕೊಂಡಿತೇ?

ತನ್ನಂತೆಯೇ ದುಶ್ಯಾಸನ ಇನ್ನಿತರ ತಮ್ಮಂದಿರು.ಕಿಚ್ಚಿಗೆ ಗಾಳಿಯಂತೆ ಕರ್ಣ ಸೇರಿದ ಅವನ ದ್ವೇಷ ಅರ್ಜುನನ ಮೇಲೆ. ಒಮ್ಮೆಯಾದರೂ ಗೆಳೆಯ ನಿನ್ನ ರೀತಿ ಸರಿ ಇಲ್ಲ ಎಂದು ಹೇಳಲ್ಲಿಲ್ಲ . ಹೇಗಾದರೂ ಹೇಳಿಯಾನು ನಾನವನ ಧಣಿಯಲ್ಲವೇ?

ಶಕುನಿ ಮಾವನಾದರೂ ಬುದ್ದಿ ಹೇಳಬಹುದಿತ್ತು. ಆದರೆ ಅವನದೂ ಒಂದು ಕಥೆ , ಗೊತ್ತಾಗಿದ್ದು ನೆನ್ನೆ, ಯಾವುದೋಕಾಲದ ದ್ವೇಷವನ್ನು ಮನದಲ್ಲಡಗಿಸಿಕೊಂಡು ಕೌರವರ ಸರ್ವ ನಾಶಕ್ಕೆ ಕಾರಣನಾದ.

ಸೆರಗಿನಲ್ಲಿದ್ದ ಕೆಂಡ ಎಂದು ಗೊತ್ತಾಗಿದ್ದಾದರೂ ಯಾವತ್ತು? ಅಮ್ಮನಿಗೂ ಗೊತ್ತಿತ್ತೋ ಇಲ್ಲವೋ?

ಕಾಲಿಗೇನೋ ತಾಕಿದಂತಾಯ್ತು

ಭೀಷ್ನರ ಕಿರೀಟ ಅದು ತಾನೆ ತೊಡಿಸಿದ್ದ ಸೇನಾಧಿಪತ್ಯದ ಕಿರೀಟ. ಅನಾಥವಾಗಿಬಿದ್ದಿತ್ತು ನನ್ನಂತೆಯೇ

ಬಾಣಗಳ ಹಾಸಿಗೆಯನ್ನು ಮಾಡಿಕೊಂದು ಚಿರನಿದ್ರೆಗೆ ಹೋದರಲ್ಲ

ತಾತನಾದರೂ ........... ಏನು ? ಮನಸೆಲ್ಲಾ ಅವರೆಡೆ, ದೇಹ ಮಾತ್ರ ಇಲ್ಲಿ

ತಾತನಿಗೆ ಮಾತ್ರ ಸಾಧ್ಯವಿತ್ತು ಇದನ್ನೆಲ್ಲಾ ತಡೆಯಲು . ಆದರೆ ಅವರೂ......

ನನ್ನನ್ನುಬೇಡಿಕೊಂಡರೇ ವಿನ: , ಅಪ್ಪಣೆ ಮಾಡಲಿಲ್ಲ

ಒಂದೊಮ್ಮೆ ತಾತ ತನ್ನದೆಂದು ಹೇಳಿಕೊಳ್ಳುವಪ್ರಳಯಾಂತಕ ರೂಪವನ್ನು ತೋರಿಸಿದ್ದಲ್ಲಿ ನಾನಾಗಲಿ ಅಪ್ಪನಾಗಲಿ ಏನು ಮಾಡಲು ಸಾಧ್ಯವಿತ್ತು

ಅವರ ಕೋಪವನ್ನು ತಡೆಯುವ ಸಾಮರ್ಥ್ಯ ನಮ್ಮಲ್ಲಾದರೂ ಯಾರಿಗಿತ್ತು

ತಾತ ಬುದ್ದಿಯನ್ನೂ ಆದೇಶಿಸಲಿಲ್ಲ ಇತ್ತ ಜಯವನ್ನೂ ತಂದುಕೊಡಲಿಲ್ಲ. ಇಬ್ಬಂದಿಯ ಪರಿಸ್ಥಿತಿಯಲ್ಲಿ ............. ಯುದ್ದಕ್ಕೆ ಬಂದ ಮೇಲೆ ಶಿಖಂಡಿ ಏನು ಅರ್ಜುನೇನು ..................... ಮನಸು ಮಾಡಿದ್ದಲ್ಲಿ ಶಿಖಂಡಿಯ ಅಡ್ಡಿಯನ್ನು ಉಪಶಮನ ಮಾಡಬಹುದಿತ್ತು ಆದರ್ರೆ ಅವರು ಒಲಿದದ್ದು ಅರ್ಜುನನಿಗೆ ...........ಅದೂ ತನ್ನ ಸಾವನ್ನು ಆಹ್ವಾನಿಸುತ್ತಾ ಅಲ್ಲಲ್ಲ್ ನನ್ನ ಸರ್ವನಾಶವನ್ನ ಕರೆಯುತ್ತಾ.................. ತಾತನಿಗೆ ತಾನು ಮಾಡಿದ್ದ ಪ್ರತಿಜ್ನೆಯೇ ದೊಡ್ಡದಿತ್ತು, ತನ್ನ ಸಿದ್ದಾಂತದ ಮುಂದೆ ಹಸ್ತಿನಾಪುರದ ಅವಸಾನ ಅವರಿಗೆ ದೊಡ್ಡದೆನಿಸಲಿಲ್ಲವೇ?


ನಗು ಬರುತ್ತಿತ್ತು, ವಿಷಾಧವಾಗುತ್ತಿತ್ತು. ಗೊಳೋ ಎಂದು ಬೋರ್ಗರೆದು ಅಳುವ ಮನಸಾಗುತ್ತಿತ್ತು, ಅಹ್ಂ ಎಂಬುದು ಎಂಥಾ ಸ್ಥಿತಿಗೆ ದೂಡಿತ್ತು

ಪುತ್ರರನ್ನ , ಅಳಿಯಂದಿರನ್ನ, ತಮ್ಮಂದಿರನ್ನ ಜೊತೆಗಾರರನ್ನ ಎಲ್ಲರನ್ನೂ ಕಳೆದುಕೊಂಡು ಬಿಟ್ತಿದ್ದೆ .ಈಗಲೂ ಅಹಂಗೆ ವಿಷಾಧವೆಂಬುದಿಲ್ಲವಲ್ಲ

ಇತ್ತ ದ್ರೋಣಾಚಾರ್ಯರಾದರೂ ಏನು.... ಪ್ರೀತಿ ಪಾತ್ರರೆಡೆಗೆ ಮನಸು ಎಳೆಯುತ್ತಿದ್ದರೂ ಇಲ್ಲಿ ಯುದ್ದ ಮಾಡುತ್ತಿದ್ದರು . ಅವರೂ ಕಾಯುತ್ತಿದ್ದರೆಂದೆನಿಸುತ್ತದೆ

ಅಶ್ವತ್ತಾಮ ಸತ್ತ ಎಂದ ಕ್ಷಣ ಮುನ್ನುಗ್ಗಿ ಸೇಡು ತೀರಿಸಿಕೊಳ್ಳುವುದನ್ನು ಬಿಟ್ಟು ಶಸ್ತ್ರ ಸನ್ಯಾಸಿಗಳಾದ ಕಾರಣವೇನು.? ಪುತ್ರ ವ್ಯಾಮೋಹದ ಮುಂದೆ ತಿಂದ ರಾಜ್ಯದ ಉಪ್ಪು ಗೌಣವೆನಿಸಿತೇ?

ಆಗಿನಿಂದ ಹುಡುಕುತ್ತಿದ್ದ ಆಪ್ತ ಮಿತ್ರ ಕರ್ಣನ ಕಳೆಬರ ಕಂಡಿತು

ಕರ್ಣನ ಕಳೇಬರವನ್ನು ನೋಡುತ್ತಿದ್ದಂತೆ ಮೂಡಿದ ಹಲವುಭಾವನೆಗಳು ಜೊತೆಗೇ ಹಲವು ಪ್ರಶ್ನೆಗಳು

ಕರ್ಣ ನೀನು ನನ್ನ ಆತ್ಮ ಸ್ನೇಹಿತ , ನಿನ್ನನ್ನು ನಾನು ಹಚ್ಚಿಕೊಂಡಷ್ಟು ಬೇರಾರನ್ನೂ ಹಚ್ಚಿಕೊಂಡಿರಲಿಲ್ಲ. ನೀನು ಎಲ್ಲಾ ಸರಿ

ಆದರೆ ನೀನೇಕೆ ಸಲ್ಲದ ಮಾತುಗಳಿಗೆ ಕಟ್ಟಿಬಿದ್ದು ದಾನ ಮಾಡಿದೆ?

ಕೊನೆಯ ಕಾಲದಲ್ಲಿ ನೀನೊಬ್ಬನೇ ನನಗೆ ಆಶಾದೀಪಾವಾಗಿದ್ದೆ. ಆದರೆ ಕೊನೆಗೂ ಮಹಾವೀರ ದಾನಿ ಕರ್ಣ ಕೊಡುಗೈ ಕರ್ಣ ಎಂದೆನಿಸಿಕೊಳ್ಳ್ವ ಹಂಬಲದ ಮುಂದೆ ನಿನ್ನೀ ಮಿತ್ರನ ನೆನಪಾಗಲಿಲ್ಲವೇ?

ಅವನ ತೇಜಸಿನ ಮೋರೆ ಕಳೆ ಕಳೆದುಕೊಂಡು ವಿಕಾರವಾಗಿತ್ತು.

ನೋಡಲಾರದೇ ಅವನನ್ನು ಅತ್ತ ಮಲಗಿಸಿ ಎದ್ದೆ

ಬಲವಂತದಿಂದ ಕರೆದುಕೊಂಡು ಬಂದ ಶಲ್ಯರು ಅತ್ತ ಕಡೆಯೇ ಎಂಬುದು ಗೊತ್ತಿದ್ದರೂ ಅವನನ್ನು ತನ್ನ ಕಡೆಗೆ ಕರೆದುಕೊಂಡದ್ದು ತನ್ನದೇ ತಪ್ಪು.

ಸುಲಭವಾಗಿ ಸಾವನ್ನು ಕರೆದುಕೊಂಡರು


ಹಾಗೆ ನೋಡಿದಲ್ಲಿ ತನ್ನದು ಜಯಿಸುವ ಪಕ್ಷವಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತೇ? ಎಲ್ಲರಿಗೇನು ತನಗೇ ಗೊತ್ತಿತ್ತಲ್ಲಾ. ಯಾವಾಗ ಕಪಟಿ ಕ್ರಿಷ್ಣ ಅವರ ಜೊತೆ ಸೇರಿದನೋ ಅಂದೇ ತನಗೆ ಗೊತ್ತಾಗಿತ್ತಲ್ಲವೇ?

ಹಾಗೆ ನೋಡಿದರೆ

ಈ ದುರ್ಯೋದನನ ಕಡೆಗೆ ದುರ್ಯೋದನಿಗಾಗಿಯೇ ದುರ್ಯೋಧನಿಗೋಸ್ಕರ ಹೋರಾಡುವವರು ಯಾರೂ ಇದ್ದಿಲ್ಲ

.

ಎಲ್ಲರಿಗೂ ಅವರವರ ಕೀರ್ತಿ , ಸಂಭಂಧ, ಮಾತು , ನೆಂಟಸ್ತಿಕೆ, ದ್ವೇಷ ಹೀಗೆ ಇವುಗಳೇ ಹೆಚ್ಚಾಗಿದ್ದವು . ಈ ಅತಿರಥ ಮಹಾರಥರಲ್ಲಿ ಕೇವಲ ಒಬ್ಬರಾದರೂ ನನಗೋಸ್ಕರ , ಹೋರಾಡಿದ್ದಲ್ಲಿ ಇಂದು ಜಯಲಕ್ಷ್ಮಿ ನನ್ನವಳಾಗಿರುತ್ತಿದ್ದಳು

ಈ ಮಹಾಭಾರತ ಸಂಗ್ರಾಮದಲ್ಲಿ ದುರಂತ ನಾಯಕನಾದವ ನಾನೊಬ್ಬನೇ


ನಾನೂ ಹೋರಾಡುತ್ತೇನೆ, ಅದು ನನಗೋಸ್ಕರ .

ಅಥವ ಹೋರಾಡಬಲ್ಲೇನೇ? ಅದು ಆಗುವ ಸಾಧ್ಯತೆ ಇದೆಯೇ?

ಯಾರಿಗಾಗಿ ಬದುಕಲಿ? ಅಥವ ಜಯಿಸಲಿ?

ಕಣ್ಣು ಹಾಯಿಸಿದಷ್ಟುದೂರ ಅಥವ ಅದರಿಂದಾಚೆಯೂ ಕಾಣುವ ರಕ್ತದೋಕುಳಿಗೆ ಕಾರಣ ತಾನೇ.

ಹೋರಾಡುವ ನಟನೆ ಮಾಡಿ ಜೀವ ಬಿಡಲೇ?

ಜಯಾಪಜಯಗಳ ಗಡಿ ದಾಟಿ ಎಲ್ಲಾದರೂ ಓಡಿಬಿಡಲೇ

ಓಡಿ ಹೋಗಿ ಸಾಧಿಸುವುದಾದರೂ ಏನು

ಭೀಮಾ ಎಲ್ಲಿದ್ದೀಯಾ ಬೇಗ ಬಾ

ನನ್ನವರೊಡನೆ ನನ್ನನ್ನೂ ಸೇರಿಸು ಬಾ

ಆ ಪುಣ್ಯ ನಿನಗೇ ದಕ್ಕಲಿ..


Friday, December 17, 2010

ಹೀಗೆರೆಡು ಪ(ಪಾ)ತ್ರಗಳು

ಪ್ರೀತಿಯ ಸಂಜನಾಗೆ
ಸಂಜೂ ಇದು ನನ್ನ ಹತ್ತನೇ ಪತ್ರ ಒಂದಕ್ಕೂ ನಿನ್ನಿಂದ ಉತ್ತರ ಬಂದಿಲ್ಲ. ಹಾಗಾಗಿ ಆ ಎಲ್ಲಾ ಒಂಬತ್ತೂ ಪತ್ರಗಳನ್ನೂ ಒಟ್ಟಾಗಿ ಸೇರಿಸಿ ನನ್ನ ಹತ್ತನೇ ಪತ್ರ ಬರೆಯುತ್ತಿದ್ದೇನೆ. ನಿನ್ನಿಂದ ಪಾಸಿಟೀವ್ ಉತ್ತರ ಬರಲಿಲ್ಲವಾದಲ್ಲಿ ಇದು ನನ್ನ ಜೀವಮಾನದ ಕಡೆಯ ಪತ್ರವಾಗಿರುತ್ತದೆ
ದಂಗಾದೆಯಾ? ಹೌದು ಸಂಜೂ ನೀನು ನನ್ನ ಹೃದಯಕ್ಕೆ ಅಂತಹದೊಂದು ನಂಟನ್ನು ಬೆಳೆಸಿದ್ದೀಯ .
ನಾನು ನಿನ್ನನ್ನು ನೋಡಿದ್ದಾದರೂ ಯಾವತ್ತು?
ಇಂದಿಗೆ ಸರಿಯಾಗಿ ತಿಂಗಳ ಮುಂಚೆ.
ಆವತು ಯಾವುದೋ ಸಿನಿಮಾದ ಶೂಟಿಂಗ್ ಅಂತ ನೀನು ಬಂದಿದ್ದೆ . ಅದೇಕೋ ಚಿತ್ರದ ಹೀರೋಯಿನ್ ಸಂಪ್ರೀತಾ ನಂಗೆ ಹಿಡಿಸಲಿಲ್ಲ ಅವಳ ಮನೆ ಕೆಲಸದವಳಾಗಿ ಅವಳಿಂದ ಕೆನ್ನೆಗೆ ಹೊಡೆಸಿಕೊಳ್ಳುತ್ತಿದ್ದ ನೀನು ನಂಗೆ ಹಿಡಿಸಿಯೇಬಿಟ್ಟೆ
ಆಗಲೇ ನನ್ ಮನಸು ಹೇಳಿತು ನಂಗೆ ನೀನೆ ತಕ್ಕ ಜೋಡಿ
ಅಂದಿನಿಂದ ಇಂದಿನವರೆಗೆ ನಾನು ಪತ್ರಗಳನ್ನು, ಮೆಸೇಜುಗಳನ್ನು ಕಳಿಸ್ತಾನೇ ಇದ್ದೇನೆ . ಅಟ್ ಲೀಸ್ಟ್ ನಿಂಗೆ ನಾನು ಇಷ್ಟಾನಾ ಇಲ್ಲವಾ ಎಂಬ ಮಾತೂ ಇಲ್ಲ .
ಅಂದ ಹಾಗೆ ನಾನು ಶೇಖರ್ . ಗಾರ್ಮೆಂಟ್ಸ್‌ನಲ್ಲಿ ಸೂಪರ್ ವೈಸರ್ ಆಗಿದ್ದೀನಿ. ತಿಂಗಳಿಗೆ ಇಪ್ಪತ್ತು ಸಾವಿರದ ತನಕ ಸಂಬಳ . ಹೆಂಡತಿಯನ್ನು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಮಟ್ಟಿಗೆ ಸಂಪಾದನೆ ಇದೆ
ಇನ್ನೂ ನಿನ್ನ ಬಗ್ಗೆ ಏನು ಗೊತ್ತು ಎಂದು ಕೇಳಬೇಡ. ಎಲ್ಲವನ್ನೂ ಅರಿತಿದ್ದೇನೆ
ನೀನು ಮೂರು ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಪಾತ್ರಕ್ಕಾಗಿ ಹೆಣಗಾಡುತ್ತಿದ್ದೀಯಾ
ಆಗೊಮ್ಮೆ ಈಗೊಮ್ಮೆ ನಾಯಕಿಯ ಮನೆ ಕೆಲಸದವಳೋ ಅಥವ ಸ್ನೇಹಿತೆಯೋ ಅಥವ ನಾಯಕಿ ನಾಯಕ ಮರ ಸುತ್ತುತ್ತಾ ಹಾಡುತ್ತಿದ್ದಾಗ ಲಾ ಲಾ ಲಾ ಎಂದು ಕುಣಿಯುವ ಹುಡುಗಿಯರ ಪೈಕಿ ಒಬ್ಬಳಾಗಿ ಪಾತ್ರ ಮಾಡುತ್ತಿದ್ದೀಯಾ
ಈ ಸಿನಿಮಾ ಇಂಡಸ್ಟ್ರಿಯಲ್ಲಿ ಏನೆಲ್ಲಾ ಕೊಳಕುಗಳಿವೆಯೋ ಅವುಗಳಲ್ಲೆಲ್ಲಾ ನೀನು ಮುಳುಗಿದ್ದೀಯಾ
ಆದರೆ ನೀನು ನನ್ನ ಪಾಲಿಗಂತೂ ಗಂಗೆಯ ಥರ . ಗಂಗೆ ಯಾವತ್ತಿದ್ದರೂ ಗಂಗೆಯೇ.
ನೀನು ಹೇಗೆ ಇದ್ದರೂ ನಾನು ನಿನ್ನಪ್ರೀತಿಸುವೆ.
ಇಷ್ಟೆಲ್ಲಾ ಆದಮೇಲೂ ನೀನು ನನ್ನನ್ನ ತಿರಸ್ಕರಿಸಿದರೆ ,
ನಾಳೆಯೇ ನನ್ನ ಹೆಣದ ದರ್ಶನ ಮಾಡಬೇಕಾಗುತ್ತದೆ. ನನ್ನ ಸಾವಿಗೆ ನೀನೆ ಕಾರಣಳಾಗುತ್ತೀಯಾ
ಯೋಚಿಸು.....

ನಿನ್ನವ ಶೇಖರ್

ಶೇಖರನೆಂಬ ಮುಟ್ಟಾಳನಿಗೆ
ಪ್ರೀತಿ ಪ್ರೇಮವೆಂಬ ಭಾವನೆಗಳ ಕಡಲಲ್ಲಿ ಈಜಾಡ್ತಾ ಇದ್ದೀಯಾ ಸರಿ. ಆದರೆ ಆ ಈಜಿಗೆ ಜೊತೆಯಾಗಿ ನನ್ನ ಯಾಕೆ ಕರೀತ್ತಿದ್ದೀಯ

ಸಿನಿಮಾಗಳಲ್ಲಿ ಪ್ರೀತಿ ಪ್ರೇಮವೆಂಬ ಭಾವನೆಗಳನ್ನು ಮಾರ್ತಾ ಮಾರ್ತಾ ನಾವೆಲ್ಲಾ ಆ ಭಾವನೆಗಳನ್ನು ಹತ್ತಿರಕ್ಕೂ ಸೇರಿಸಲ್ಲಾ ಯಾಕೆ ಗೊತ್ತಾ?
ನಾವು ಯಾವತ್ತಿದ್ದರೂ ಭಾವನೆಗಳನ್ನು ಮಾರಿ ಲಾಭಗಳಿಸೋರು ಅದರಿಂದ ಬರೋ ನೋವು ನಮಗೆ ಬೇಡ

ನಿನ್ನ ಒಂಬತ್ತೂ ಪತ್ರಗಳನ್ನ ನಾನು ಓದಿದ್ದೇನೆ . ಇಂತಹ ಸಾವಿರ ಪತ್ರಗಳು ನನ್ನ ಬಳಿ ಇವೆ

ಯಾಕೆಂದರೆ ನಾವು ಸಿನಿಮಾದವರು ಹತ್ತು ಜನಕ್ಕೆ ಗ್ಲಾಮರ್ ಹೆಸರಲ್ಲಿ ಮೈ ಕೈ ತೋರಿಸೋರು

ಸಿನಿಮಾದಲ್ಲಿ ಪ್ರೀತಿಗೋಸ್ಕರ ಸಾವನ್ನೇ ಎದುರಿಸುವವರು....................

ಇಂತಹವಳು ಸಿಕ್ಕರೆ ಯಾರಿಗೆ ಬೇಡ ಹೇಳು..............?

ನೀನು ಸತ್ತು ಹೋಗ್ತೀಯಾ ಅಂತ ನಾನು ನಿನಗೆ ಉತ್ತರ ಕೊಡ್ತಾ ಇಲ್ಲ

ಯಾಕೆಂದರೆ ನೀನು ಸತ್ತರೆ ನನಗೇನು ನಷ್ಟವೂ ಇಲ್ಲ ಬದುಕಿದ್ದರೆ ಲಾಭವೂ ಇಲ್ಲ

ಆದರೆ ನಿನ್ನನ್ನೇ ನಂಬಿಕೊಂಡಿರುವ ನಿನ್ನ ಕುಟುಂಬದ ಶಾಪ ನನ್ನನ್ನ ತಾಕದಿರಲಿ ಅಂತ ಪತ್ರ ಬರೆಯುತ್ತಿದ್ದೇನೆ

ನಿನಗೆ ನನ್ನ ಬಗ್ಗೆ ಗೊತ್ತಿರೋದು ಕೇವಲ ಸ್ವಲ್ಪವೇ ಕೇವಲ ಪುಸ್ತಕದ ಹೊರಕವಚ ನೋಡಿ ಪುಸ್ತಕದ ಕಥೆಯನ್ನೇ ಹೇಳುತ್ತೀನಿ ಎಂಬ ಹುಂಬಮನೋಭಾವದವನು ನೀನು

ಇನ್ನೂ ನನ್ನ ಬಗ್ಗೆ ತಿಳಿಯೋದು ತುಂಬಾ ಇದೆ

ಅದಕ್ಕೂಮೊದಲು ನೀನು ನನ್ನನ್ನೆ ಯಾಕೆ ಬಯಸಿದೆ ಅನ್ನೋದು

ತುಂಬಾ ಹುಡುಗರಿಗೆ ಸಿನಿಮಾದವರು ಎಂದರೆ ಏನೋ ಕುತೂಹಲ. ಸಿನಿಮಾದ ಹುಡುಗಿಯನ್ನು ಮದುವೆಯಾಗುತ್ತಿದ್ದೇವೆ ಎಂಬ ಸ್ವಯ್ಂ ತೃಪ್ತಿ . ನೀನು ನೀನು ಕೂಡ ಹಾಗೆಯೇ

ಆವತ್ತು ಶೂಟಿಂಗ್ ಇದ್ದ ದಿನ ನಿನಗೆ ಸಿನಿಮಾ ಹೀರೋಇನ್ ಸಂಪ್ರೀತಾ ಹಿಡಿಸಲಿಲ್ಲ ಅಂದೆ

ಯಾಕೆ ಹಿಡಿಸಲಿಲ್ಲ ? ಹಾಗಿಲ್ಲವಾದಲ್ಲಿ ಅವಳ ಹತ್ತಿರ ಆಟೋಗ್ರಾಫ್ ತೆಗೆದುಕೊಳ್ಳುವಾಗ ಮೇಡಮ್ ನಾನು ನಿಮ್ಮ ಅಭಿಮಾನಿ ಅನ್ನುತ್ತಿದ್ದಾಗ, ಅವಳ ಬಳಿಯೇ ಆಗಷ್ಟೇ ಅವಳಿಂದ ಕೆನ್ನೆಗೆ ಹೊಡೆಸಿಕೊಂಡ ಕೆಲಸದವಳ ಪಾತ್ರ ಮಾಡಿದ್ದ ನಾನು ಅಲ್ಲೇ ನಿಂತಿದ್ದಾಗ ನನ್ನತ್ತ ನಿನ್ನ ಕಣ್ಣೂ ಹಾಯಲಿಲ್ಲವೇಕೇ?

ನಿನ್ನ ಮಟ್ಟಕ್ಕೆ ಅವಳು ನಿಲುಕದ ನಕ್ಷತ್ರ. ಸಿನಿಮಾದವಳನ್ನೇ ಮದುವೆಯಾಗುತ್ತೇನೆ ಎಂಬ ನಿನ್ನ ಹಟಕ್ಕೆ ಕಂಡಿದ್ದು
ನಾನು, ಅಷ್ಟೇ .
ಅದನ್ನೇ ಪ್ರೀತಿ ಎಂದುಕೊಂಡಿದ್ದೀಯ ಸುಳ್ಳು ಕಣೋ ಬೆಪ್ಪ.
ನಾಳೇ ನಾನೇನಾದರೂ ದೊಡ್ಡ ಹೀರೋಯಿನ್ ಆದಲ್ಲಿ ...................................?
ಇದಕ್ಕೆ ಉತ್ತರ ಹೇಳು.
ಅಂದ ಹಾಗೆ ನನ್ನ ಬಗ್ಗೆ ಏನೇನೋ ಗೊತ್ತಿದೆ ಎಂದೆ
ಮಲಿನವಾಗದ ಗಂಗೆ ಎಂದೆ
ಇಲ್ಲ ಕಣೋ ನಾವುಗಳು ಸೈಡ್ ಆಕ್ಟ್ರೆಸ್ಗಳು ಗಂಗೆಯೂ ಅಲ್ಲ ಗೌರಿಯೂ ಅಲ್ಲ . ಆ ಪದಗಳೆಲ್ಲಾ ಏನಿದ್ದರೂ ಸಿನಿಮಾಪರದೆಯ ಮೇಲೆ
ಹಿಂದೆ ನಾವುಗಳು ಬ್ರಾಂದಿ ವಿಸ್ಕಿಗಳು.
ಮತ್ತೇರುವ ತನಕ ಕುಡಿಯುತ್ತಾರೆ
ನಂತರ ಕುಸಿಯುತ್ತಾರೆ ಮತ್ತೆ ಹೊಸ ವಿಸ್ಕಿಗಳಿಗೆ ಕಣ್ಣ್ ಹಾಕ್ತಾರೆ ಅಷ್ಟೇ
ನಾನು ಸಿನಿಮಾರಂಗಕ್ಕೆ ಬಂದಿದ್ದು ದೊಡ್ಡ ಹೀರೋಯಿನ್ ಆಗೋಕೇನೆ
ಆದರೆ ಆಗಿದ್ದು ಮಾತ್ರ ಸೈಡ್ ಆಕ್ಟ್ರೆಸ್
ನಿಂಗೆ ಗೊತ್ತಾ?
ನಾನು ಮೊನ್ನೆ ಮಾಡಿದ್ದ " ಅಮರ್" ಫಿಲಂ ನಲ್ಲಿ ಹೀರೋ ಜೊತೆ ಮರ ಸುತ್ತಿದಂತೆ ಅವನ ಮೇಲೆ ಬೀಳುವ ಕನಸು ಕಾಣುವ ಒಂದು ಪಾತ್ರದಲ್ಲಿ ನಟಿಸಿದ್ದೆನಲ್ಲಾ. ಆ ಫಿಲ್ಂ ಹೀರೋ ರಜತ್ ಕೇವಲ ಹತ್ತು ವರ್ಷದ ಹಿಂದೆ ನನ್ನ ತಂದೆಯ ಪಾತ್ರ ಮಾಡಿದ್ದ ನಾನು ಬೇಬಿ ಸಂಜನಾ ಆಗಿದ್ದೆ
ಈಗ ಅದೇ ಅವನ ಜೊತೆ ಮರ ಸುತ್ತುವ ಪಾತ್ರ.
ನಾಳೆ ಅವನಿಗೇನೇ ಅಕ್ಕನೋ, ಇಲ್ಲ ಅತ್ತಿಗೆಯೋ ನಾಡಿದ್ದು ಅಮ್ಮನಾಗಿ ಪಾತ್ರ ನಿರ್ವಹಿಸಬೇಕಾಗುತ್ತದೆ .
ಏಕೆಂದರೆ ನಮಗೆ ವಯಸಾಗಿರುತ್ತದಲ್ಲಾ?
ಅದಕ್ಕೆ ಹೇಳಿದ್ದು ನಾವು ಬ್ರಾಂದಿಗಳು ವಿಸ್ಕಿಗಳು ಅಂತ.
ನಾನು ಮಲಿನವಾಗಿದ್ದೇನೆ ಅಂತ ನಂಗೆ ಯಾವತ್ತೂ ಅನ್ನಿಸಿಯೇ ಇಲ್ಲ
ಯಾಕೆ ಹೇಳು?
ನೀರಲ್ಲಿಯೇ ಇರುವ ಮೀನಿಗೆ ನೀರು ಯಾವತ್ತೂ ಬೋರೆನಿಸೋದಿಲ್ಲ . ಆದರೆ ಒಂದು ನಿಮಿಷ ನೀರಿಲ್ಲದೇ ಇದ್ದಲ್ಲಿ ಉಸಿರಾಡಲಾಗುವುದಿಲ್ಲ.


ಮತ್ತೆ ಇದನ್ನೆಲ್ಲಾ ಬಿಟ್ಟು ನಾನು ನಿನ್ನ ಜೊತೆ ಬಂದುಬಿಟ್ಟೆ ಅಂತಂದುಕೋ

ಸ್ವಲ್ಪ ದಿನ ಚೆನ್ನಾಗಿರುತ್ತೆ ನಂತರ?
ನಂಗೆ ನೀನು ಬೋರಾಗಲಾರಂಭಿಸುತ್ತೀಯಾ. ಏಕೆಂದರೆ ನಿನ್ನ ಸಂಪಾದನೆ ನನಗೆ ಏನನ್ನೂ ಕೊಡಿಸುವುದಿಲ್ಲ.
ನೀನೋ ನನ್ನ ಹಿಂದಿನ ಕಥೆಗಳನ್ನೆಲ್ಲಾ ಎಳೆದುಕೊಂಡ ಬೈಯ್ಯಲಾರಂಭಿಸುತ್ತೀಯ, ಅನುಮಾನ ಪಡ್ತೀಯಾ
ನನಗೂ ನಿನ್ನ ಬಗ್ಗೆ ಅಸಹನೇ ನಿನಗೂ ನನ್ನ ಬಗ್ಗೆ ಬೇಜಾರು
ಕೊನೆಗೆ ಎರೆಡೇ ವರ್ಷದಲ್ಲಿ ನನ್ನ ದಾರಿ ನನದು ಅಂತ ಇಲ್ಲಿಗೆ ಮತ್ತೆ ಹಾರಿ ಬರುತ್ತೇನೆ
ಇಲ್ಲಿ ಪರಿಸ್ಥಿತಿ ಟೋಟಲಾಗಿ ಬದಲಾಗಿರುತ್ತದೆ
ಹೊಸ ಹೊಸ ಹುಡುಗಿಯರು ಬಂದು
ನನ್ನ ಫ್ರೆಶ್‌ನೆಸ್ ಹೋಗಿರುತ್ತದೆ ನನ್ನ ತಾಯಿ ಪಾತ್ರಕ್ಕೋ ಇಲ್ಲ ಅತ್ತೆಯ ಪಾತ್ರಕ್ಕೋ ಹಾಕುತ್ತಾರೆ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಇಷ್ತೇಲ್ಲಾ ಯಾಕೆ.
ಇನ್ನೂ ಯೌವ್ವನ ಇದೆ . ಅದರಿಂದಲೇ ಕೈ ತುಂಬಾಹಣವೂ ಬರ್ತಿದೆ. ಇದನ್ನೆಲ್ಲಾ ಬಿಟ್ಟು ನನಗಂತೂ ಬರಲು ಮನಸಿಲ್ಲ.

ಮದುವೆಯಾಗುವ ಕನಸಿದ್ದರೂ ಆ ಕನಸಿನಲ್ಲಿ ಬರುತ್ತಿರುವ ಮುಖವೇ ಬೇರೆ ಅದು ನೀನಲ್ಲ

ನಿನಗೆ ಸಂಪ್ರೀತಾ ಹೇಗೆ ನಿಲುಕದ ನಕ್ಷತ್ರವೋ ಹಾಗೆಯೇ ನನಗೆ ಮತ್ತೊಬ್ಬ ಹೀರೋ

ಈ ಹುಚ್ಚಾಟವನ್ನೆಲ್ಲಾ ಬಿಟ್ಟುಬಿಡು ಅಂತ ನಾನು ಕೇಳೋದಿಲ್ಲ ಯಾಕೆಂದರೆ ಯು ಆರ್ ನಥಿಂಗ್ ಟು ಮಿ

ಮತ್ತೆ ನನಗೆ ಲೆಟರ್ ಬರೆಯಬೇಡ . ನಾನು ಓದೋದಿಲ್ಲ
ಇದೇ ನನ್ನ ಮೊದಲ ಮತ್ತು ಕಡೆಯ ಪತ್ರ

ನಿನಗೆ ಯಾರೂ ಅಲ್ಲದ
ಸಂಜನಾ