ಅಮ್ಮಾ ಬಾಯ್ ಹೆಗಲ ಮೇಲೆ ಬ್ಯಾಗ್ ತಗುಲಿಸಿಕೊಂಡು ಸ್ಕೂಲಿಗೆ ಹೊರಟಳು ಮಗಳು. ನೋಡಿದರೆ ದೃಷ್ಟಿಯಾಗುವ ಹಾಗೆ ಇದ್ದಾಳೆ.ಇಷ್ಟೊಂದು ಅಲಂಕಾರ ಬೇಡ ಕಣೆ ಎಂದರೆ ಕೇಳೋದಿಲ್ಲ. ಇನ್ನೂ ಎಂಟನೆ ತರಗತಿಯ ಮೆಟ್ಟಿಲು ಹತ್ತುತ್ತಿರುವ ಮಗಳು ನನ್ನ ಎತ್ತರಕ್ಕೂ ಬೆಳೆದಿದ್ದಾಳೆ ಅವರಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರೋ. ಮಹಿಯ ನೆನಪಾಗಿ ಕಣ್ಣಾಲಿಯಲ್ಲಿ ನೀರು ತುಂಬಿತು. ಸೆರಗಲ್ಲಿ ಕಣ್ಣೊರೆಸಿಕೊಂಡು ಮೆಟ್ಟಿಲು ಏರುತ್ತಿದ್ದಂತೆ"ಶ್ವೇತಾ ಇವತ್ತು ಏಕಾದಶಿ. ನಂಗೇಂತ ಏನೂ ಮಾಡಬೇಡ" ಎಂದರು ಅತ್ತೆ. ಆಯ್ತು ಅತ್ತೆ . ಹೆಸರಿಗೆ ಅತ್ತೆ ಎಂದು ಕರೆದರೂ ತಾಯಿಯ ವಾತ್ಸಲ್ಯದ ಧಾರೆ ಎರೆಯುತ್ತಿದ್ದಾರೆ. ಸ್ವಲ್ಪ ಹಳೇ ಕಾಲದವರಾದ್ದರಿಂದ ಮಡಿ ಮೈಲಿಗೆ ಅಂತ ನೋಡ್ತಾರೆ ಆಗಾಗ ಸಿಡುಕು ಇದ್ದುದ್ದೇ.ತವರಲ್ಲಿ ಅಮ್ಮ ಇಲ್ಲ ಕಣ್ಮುಚ್ಚಿಕೊಂಡು ಈಗಾಗಾಲೆ ಹತ್ತು ವರ್ಷಗಳಾಗಿವೆ. ಆಗಿನ್ನೂ ಸ್ಮಿತ ಕೇವಲ ಐದುವರ್ಷಗಳಾಗಿತ್ತು. ಅದಾಗಿ ಮೂರು ತಿಂಗಳೂ ಆಗಿರಲಿಲಲ್ಆಗಲೆ ಮಹಿ ರಸ್ತೆ ಅಪಘಾತದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಾಗ ದಿಕ್ಕು ತೋಚದಂತಾಗಿತ್ತುತನ್ನಂತೆ ಅತ್ತೆಯೂ ಚಿಕ್ಕ ವಯಸ್ಸಿನಲ್ಲಿ ವಿಧವೆಯಾಗಿದ್ದರೂ ಧೈರ್ಯ ತುಂಬಿದರು. ಎಂತಹ ಹಳೇ ಕಾಲದವರಾಗಿದ್ದರೂ ಮತ್ತೊಂದು ಮದುವೆಗೆ ಒತ್ತಾಯಿಸಿದರು. ಆದರೆ ಮಹಿಯ ನನಪು, ಸ್ಮಿತಾಳ ಬಾಳಿನ ಪ್ರಶ್ನೆಗೆ ಹೆದರಿ ಮರು ಮದುವೆಗೆ ಧೈರ್ಯ ತೋರಲಿಲ್ಲಅಂದಿನಿಂದ ಮನೆ ಮಹಿಳಾ ಸಾಮ್ರಾಜ್ಯವಾಗಿದೆ. ಬದುಕಲು ಮಹಿಯ ತಂದೆ ಮಾಡಿಟ್ಟ ಆಸ್ತಿ ಬಹಳವಿದೆಸ್ವಂತ ಮನೆ, ಜೊತೆಗೆ ಹತ್ತು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದುದ್ದರಿಂದ ಬಾಳೊಂದು ಕಷ್ಟ ಅನ್ನಿಸಲಿಲ್ಲ. ಸ್ಮಿತಾಗೆ ತಂದೆಯ ಕೊರತೆ ಕಾಣಬಾರದು ಎಂದು ಅತಿಮುದ್ದಿನಿಂದಲೇ ಬೆಳೆಸಿದ್ದೆ. ಜನರೇಶನ್ ಗ್ಯಾಪ್ ಎನ್ನುವುದು ಇಲ್ಲಿ ಮನೆ ಮಾಡುತ್ತಿತ್ತು ಅವಳಿಗೂ ಅವಳ ಅಜ್ಜಿಗೂ ಎಲ್ಲಕ್ಕೂ ಜಗಳ
ಅತ್ತೆಗೆ ಒಂದಷ್ಟು ಹಣ್ಣು ಬಿಡಿಸಿಕೊಟ್ಟೆ. ಹಣ್ಣು ಮೆಲ್ಲುತ್ತಾ ಹೇಳಿದರು"ಶ್ವೇತಾ ಏನೆ ಹೇಳು ಸ್ಮಿತಾಗೆ ಸ್ವಲ್ಪ ಬುದ್ದಿ ಹೇಳು. ನಂಜೊತೆ ಜಗಳ ತುಂಬಾ ಆಡ್ತಾಳೆ. ಇಲ್ಲೀವರೆಗೆ ಚಿಕ್ಕೋಳು ಅನ್ಕೊಂಡು ಸುಮ್ಮನಿದ್ದೆ ಈಗಾ ಇನ್ನೇನುಒಂದೆರೆಡು ದಿನದಲ್ಲಿ ಮೈನೆರೀತಾಳೆ. ಕಾಲ ಬಹಳ ಕೆಟ್ಟದು . ತುಂಬಾ ಚೆಲ್ ಚೆಲ್ಲಾಗಿ ಆಡ್ಬೇಡಾ ಅನ್ನು. ಸ್ವಲ್ಪಾನೂ ಶಿಸ್ತಿಲ್ಲ ಮನೆಗೆ ಒಂದು ಗಂಡು ದಿಕ್ಕಿಲ್ಲ ಅಂದ್ರೆ ಹೀಗೆ ಆಗೋದು""ಹೋಗ್ಲಿ ಬಿಡಿ ಅತ್ತೆ ಇನ್ನೂ ಚಿಕ್ಕ ವಯಸ್ಸು" ಹಾಗಂತ ಹೇಳಿದರೂ ಮನಸ್ಸು ಅತ್ತೆ ಹೇಳಿದ್ದು ನಿಜ ಎನ್ನುವಂತಿತ್ತು"ಏನ್ ಚಿಕ್ಕವಯಸ್ಸು. ಈ ವಯಸ್ಸಿಗೆ ನಂಗೆ ಮದುವೆ ಆಗಿ ನಿನ್ನ ಗಂಡ ಹುಟ್ಟಿದ್ದ." ನಗು ಬಂದಿತು. ಸ್ಮಿತಾಗೆ ಮದುವೆ ಎನ್ನೋ ಕಲ್ಪನೆ ಮೂಡಿಯೇ
"ಸರಿ ಅತ್ತೆ ನಾನವಳಿಗೆ ಬುದ್ದಿ ಹೇಳ್ತೀನಿ . ನೀವು ಆರಾಮಾವಾಗಿ ಮಲಗಿ" ಅವರು ಚಾಪೆಯಮೇಲೆ ಮಲಗಿದರು. ಅವರು ಯಾವಾಗಲೂ ಹಾಗೆಯೇ ಹಾಸಿಗೆ, ಮಂಚದ ಮೇಲೆ ಮಲಗಿದವರೇ ಅಲ್ಲ . ಮೊದಲು ಹೇಗಿದ್ದರೋ ಗೊತ್ತಿಲ್ಲ. ನಾನು ಈ ಮನೆಗೆ ಬಂದ ಮೇಲೆ ಅವರು ಮಂಚ ಮುಟ್ಟಿದ್ದು ಕಂಡಿಲ್ಲ.
ಇವತ್ತು ಕೆಲಸದ ನಿಂಗಿ ಬಂದಿರಲಿಲ್ಲ. ನಾನೆ ಕಸ ಗುಡಿಸಿಕೊಂಡು ಸ್ಮಿತಾ ರೂಮಿಗೆ ಬಂದೆ. ಅಬ್ಬಾಬ್ಬ ಎಷ್ಟೊಂದು ಹರಡಿದ್ದಾಳೆ
ರೂಮಿನ ತುಂಬಾ ಹೀರೋಗಳ ಪೋಸ್ಟರ್‌ಗಳು ಕಂಪ್ಯೂಟರ್ ಆನಲ್ಲಿಯೇ ಇದೆ. ಆಫ ಸಹಾ ಮಾಡಿಲ್ಲ. ನೆಟ್ ಕನೆಕ್ಟ್ ಮಾಡಿಯೇ ಇದೆ. ಸುಮ್ನೆ ಬಿಲ್ ಜಾಸ್ತಿ ಆಗುತ್ತೆ.
ಸಿಸ್ಟಮ್ ಆಫ್ ಮಾಡಿದೆ, ಪೋಸ್ಟರ್ ಗಳನ್ನು ಎತ್ತಿಟ್ಟೆ . ನೆನ್ನೆ ಒಗೆದ ಬಟ್ಟೆಗಳನ್ನು ಮಡಚಿ ತಂದಿಟ್ಟಿದ್ದೆ. ಇನ್ನೂ ಅಲ್ಮಾರದಲ್ಲಿ ಇಟ್ಟುಕೊಂಡೂ ಇಲ್ಲ.
ಏನ್ ಹುಡ್ಗೀನೋ ಯಾವಾಗ ಜವಾಬ್ದಾರಿ ಕಲಿತುಕೊಳ್ಳುತ್ತೋ.
ಬೈದುಕೊಂಡು ಬಟ್ಟೇನ ಅವಳ ಅಲ್ಮಾರಾದಲ್ಲಿ ಇಡುತ್ತಿದ್ದಂತೆ
ಅದು ಕಣ್ನಿಗೆ ಕಂಡಿತು.
ದಿಗ್ಭ್ರಮೆಯಾಯ್ತು
ವಿಸ್ಪರ್ ಇಲ್ಲಿಗೆ ಹೇಗೆ ಬಂತು
ಅಂದರೆ ಇದನ್ನುಉಪಯೋಗಿಸ್ತಾ ಇದಾಳಾ .
ಅವಳು ಯಾವಾಗಿಂದ
ತಲೆ ಧಿಮ್ಮೆಂದಿತು
ತಾಯಿಯಾಗಿ ನನಗೆ ತಿಳಿಯಬೇಕಿದ್ದ ವಿಷಯ ಹೇಗೆ ಮುಚ್ಚಿಟ್ಟಿದ್ದಾಳೆ
ಅತ್ತೆಗೆ ಹೇಳಿದರೆ ಸುಮ್ಮ್ನನಿರ್ತಾರಾ? ಮಡಿ ಮಡಿ ಎಂದು ಅಡಿಗಡಿಗೆ ಹಾರಾಡುವ ಅತ್ತೆಗೆ ಆಘಾತವಾಗುವುದಿಲ್ಲವೇ
ನನ್ನ ಕಂದ ದೊಡ್ಡವಳಾಗಿದ್ದಾಳೆ ಅದು ನನಗೆ ಗೊತ್ತಿಲ್ಲ. ಅರಿವಿಲ್ಲದೆ ಕಣ್ಣಲ್ಲಿ ನೀರು ತುಂಬಿತು
ಹಾಗೆ ಮಂಚದ ಮೇಲೆ ಕುಕ್ಕರಿಸಿದೆ.
"ಆಂಟಿ ಶ್ವೇತಾಗೆ ಏನೋ ಆಯ್ತಂತೆ. " ಪಕ್ಕದ ಮನೆ ಪ್ರಗತಿ ತನ್ನ ತಾಯಿಯ ಬಳಿ ಹೇಳುತ್ತಿದ್ದಳು. ಅಮ್ಮನ ಬಳಿ ಹೇಳಲಾರದೆ ಪ್ರಗತಿಯ ಬಳಿ ಹೇಳಿದೆ.
ಬೆಳಗಿನಿಂದಲೇ ಏನೋ ಹೊಟ್ಟೆ ನೋವು ಕಸಿವಿಸಿ, ತಲೆ ಸುತ್ತಿದಂತಾಗುತ್ತಿತ್ತು.
ನಂತರ ತನಗೇನೋ ಆಗಿದೆ ಎಂಬ ಭಾವನೆ ಬಲಿಯತೊಡಗಿತು.
"ಏ ಶ್ವೇತಾ ನಿನ್ನ ಬಟ್ಟೆ ಮೇಲೆ ಏನೆ ಅದು ಕಲೆ" ಪ್ರಗತಿ ಹೇಳಿದಾಗಲೆ ಅದು ಗೊತ್ತಾದುದು
ಕೂಡಲೆ ಪ್ರಗತಿಯ ಕಿವಿಯಲ್ಲಿ ಹೇಳಿದೆ
ಅದನ್ನೇ ಪ್ರಗತಿ ಶ್ವೇತಾಳ ತಾಯಿಯ ಹತ್ತಿರ ಹೇಳಿದಳು
"ಹೌದೇನೆ? " ಸಂಭ್ರಮದಿಂದ ಕೇಳಿದರು ತಾಯಿ
ನಂಗೇನೋ ಆಗಿ ಹೋಗಿದೆ ಎಂಬ ಆತಂಕದಿಂದಲೆ ತಲೆ ಆಡಿಸಿದೆ
ಅಮ್ಮ ಸ್ನಾನ ಮಾಡಲು ಹೇಳಿದರು
ನಂತರ ಮೂರು ದಿನ ಅಮ್ಮನ ರೂಮಿನಲ್ಲಿ ಒಂದು ಕಡೆ ಕೂರಲು ಹೇಳಿದರು. ಅಪ್ಪನ ಕಣ್ಣಲ್ಲೂ ನನ್ನ ಬಗ್ಗೆ ಏನೋ ಒಲವು.
ತಿನ್ನಲು ಎಳ್ಲಿನ ಉಂಡೆ, ಕೊಬ್ಬರಿ , ತುಪ್ಪ ಹೀಗೆ ಚೆನ್ನಾಗಿ ತಿಂದಿದ್ದಾಯಿತು
ಅಮ್ಮ ನನಗೆ ಮೊದಲ ಬಾರಿ ಲಂಗ ದಾವಣಿ ಕೊಡಿಸಿದಳು. ಅಪ್ಪ ಹೊಸ ಬಟ್ಟೆ ಕೊಡಿಸಿದ. ಇದೆಲ್ಲಾ ತಿಳಿಯದ ತಮ್ಮ ತಂಗಿಯರಿಗೆ ಮಾತ್ರ ಕುತೂಹಲ
"ಏ ಯಾಕೆ ನಿಂಗೆ ಮಾತ ಎಲ್ಲಾ ಕೊಡಿಸ್ತಿದಾರೆ"
ಆವತ್ತು ಸಂಜೆ
ಅಮ್ಮ ನನ್ನನ್ನು ಲಂಗ ದಾವಣಿ ಉಡಲು ಹೇಳಿ, ಅಲಂಕಾರ ಮಾಡಿ ಕಣ್ತುಂಬಾ ನೋಡಿ ನಲಿದಳು ಆರತಿ ಎತ್ತಿದಳು
"ಶ್ವೇತಾ ಇವತ್ತಿನಿಂದ ನಿನ್ನಲ್ಲಿ ಹೆಣ್ತನ ಬಂದಿದೆ, ಮುಂದೆ ಜಾಗೃತಿಯಾಗಿರು. ಎಲೆ ಮುಳ್ಳಿನ ಮೇಲೆ ಬಿದ್ರೂ ಮುಳ್ಳು ಎಲೆ ಮೇಲೆ ಬಿದ್ರೂ ನಾಶ ಎಲೆಯದೇ ಆಗುತ್ತದೆ. ಅದನ್ನ ನೆನಪಿಟ್ಕೋ"
ಅಮ್ಮನ ಆ ಮಾತು ಮನಸಿಗೆ ಚೆನ್ನಾಗಿ ನಾಟಿತ್ತು
ಹಾಗೆ ಮಗಳನ್ನು ಅಲಂಕಾರ ಮಾಡಿ ಅವಳಿಗೆ ಬುದ್ದಿ ಮಾತನ್ನು ಹೇಳೋಣ ಎನ್ನುವ ಆಸೆಯೂ ಇತ್ತು.
ಆದರೆ ಇವಳು ?
ಹೀಗ್ಯಾಕೆ ಮಾಡಿದಳು
ಅತ್ತೆಗೆ ಹೇಳಿ ಮನಸನ್ನು ಕದಡಲು ಮನಸ್ಸು ಬರಲಿಲ್ಲ
ಸಂಜೆಯಾಯಿತು
ಸ್ಮಿತಾ ಎಂದಿನಂತೆ ಮನೆಗೆ ಬಂದಳು
ಅವಳ ಮುಖದಲ್ಲಿ ಹೆಣ್ತನವನ್ನು ಹುಡುಕತೊಡಗಿದೆ. ಕಾಣಲಿಲ್ಲ
"ಅಮ್ಮಾ ಏನು ಹಾಗೆ ನೋಡ್ತಿದೀಯಾ. ಕಾಫಿ ಕೊಡು, ಸಮೀರ್ ಬರ್ತ್ ಡೇ ಇದೆ ಗಿಫ್ಟ್ ತಗೋಬೇಕು, ದುಡ್ಡು ಕೊಡು" ಸ್ಮಿತಾ ಹೇಳುತ್ತಿದ್ದಳು
"ಯಾರೆ ಅದು ಸಮೀರ ನಿಂಗ್ಯಾಕೆ ಅವನ ಉಸಾಬರಿ ಈ ಸಂಜೇ ಮೇಲೆ ಎಲ್ಲಿಗೆ ಹೋಗ್ತೀಯಾ" ಅತ್ತೆ ಅವರ ರೂಮಿನಿಂದ ಕಿರುಚುತ್ತಿದ್ದರು
"ಅಜ್ಜಿ ನೀನು ಸುಮ್ನೆ ಇರು ನಾನೇನು ರಾತ್ರಿ ಅಲ್ಲೇ ಇರ್ತೇನೆ ಅಂದ್ನಾ ಫಂಕ್ಷನ್ ಅಟೆಂಡ್ ಮಾಡಿ ಬರ್ತೀನಿ ಅದ್ಯಾಕೆ ಅಷ್ಟೊಂದು ಕಿರುಚ್ತೀಯಾ" ಅಜ್ಜಿಗಿಂತ ಜಾಸ್ತಿ ಬಾಯಿ ಮಾಡಿದಳು
"ಏ ಸ್ಮಿತಾ ಒಳಗೆ ಬಾರೆ" ಅವಳ ರೂಮಿಗೆ ಕರೆದುಕೊಂಡು ಹೋದೆ
"ಏನೆ ಇದು" ವಿಸ್ಪರ್ ಪ್ಯಾಕೆಟ್ ಅವಳ ಮುಂದೆ ಹಿಡಿದೆ
"ಅಮ್ಮ ಅಷ್ಟೂ ಗೊತ್ತಿಲ್ವಾ. ನಿಂಗೆ ಅದು ವಿಸ್ಪರ್"
"ಅದು ಸರಿ ಯಾವಾಗಿಂದ . ನಂಗ್ಯಾಕೆ ಹೇಳಿಲ್ಲಾ" ಪಿಸುದನಿಯಲ್ಲಿಯೇ ಮಾತಾಡಿದೆ
"ಯಾವಾಗಿಂದ ಮೋಸ್ಟ್ಲಿ ಎರೆಡು ತಿಂಗಳಿಂಗ ಇರ್ಬೇಕು. ನಿಂಗ್ಯಾಕೆ ಹೇಳ್ಬೇಕು? ಇದೇನು ಪಿ ಎಚ್ ಡಿ ಅವಾರ್ಡಾ ಹೇಳೋಕೆ. ಇದು ತೀರಾ ಪರ್ಸನಲ್ ಅಮ್ಮ"
" ನೋಡು ಸ್ಮಿತಾ ಇದರಲ್ಲಿ ನಿಂಗೆ ಗೊತ್ತಿಲ್ಲದೆ ಇರೋ ಕೆಲವೊಂದು ವಿಷಯ ಇರುತ್ತೆ . ಅದನ್ನೆಲ್ಲಾ ನಾನು ನಿಂಗೆ ಹೇಳಿಕೊಡ್ವೇಕು"
"ಅಯ್ಯೋ ಅಮ್ಮಾ ಯಾವ ಕಾಲದಲ್ಲಿ ಇದ್ದೀಯಾ. ಇದೆಲ್ಲಾ ಇಂಟರ್ನೆಟ್ ನಲ್ಲಿ ನೋಡಿದ್ರೆ ಸಿಗುತ್ತೆ. ಸಿನಿಮಾದಲ್ಲಿ ತಿಳಿಯುತ್ತೆ. ನಿಮಗೂ ಎಷ್ಟೊಂದು ವಿಷ್ಯ ಗೊತ್ತ್ತಿರಲ್ಲ ಅದೆಲ್ಲಾ ನಮಗೆ ಗೊತ್ತಿರುತ್ತೆ ಗೊತ್ತಾ" ಸರಳವಾಗಿ ನುಡಿದು ಕಂಪ್ಯೂಟರ್ ಆನ್ ಮಾಡಿದಳು.
ನಾನು ಮುದ್ದು ಮಾಡಿದ್ದರ ಪರಿಣಾಮವೋ ಅಥವ ಆಧುನಿಕ ತಂತ್ರಜ್ನಾನದ ಫಲವೋ ಅಂತೂ ನನಗೇನೂ ಗೊತ್ತಿಲ್ಲ ಎಂದು ಸರಾಗವಾಗಿ ಹೇಳುವಷ್ಟರ ಮಟ್ಟಿಗೆ ಬಂದಿದೆ
ಇನ್ನು ಸೋತೆ ಅನ್ನಿಸಿತು ಆದರು ತಾಯಿ ಎಂಬ ಕರ್ತವ್ಯಕ್ಕೆ ಅಮ್ಮ ಹೇಳಿದ ಮಾತುಗಳನ್ನು ಹೇಳಲಾರಂಭಿಸಿದೆ
"ಅಮ್ಮಾ ನಂಗೇನು ಹೇಳ್ಬೇಡಾ ಅಮ್ಮ ಬಿದ್ರೂ ಎಲೆಗೆ ಏನೂ ಆಗದೆ ಇರೋ ಹಾಗೆ ಸೇಫ್ ಗಾರ್ಡ್ ಮಾಡ್ಕೊಂಡ್ರಾಯ್ತು ,ಈಗ ದಯವಿಟ್ಟು ಬಿಟ್ಟು ಬಿಡು ನಂಗೆ ಅಸೈನ್ ಮೆಂಟ್ ಇದೆ" ಕೈ ಮುಗಿದಳು
ಅವಳ ಮಾತಿನ ಅರ್ಥ ತಿಳಿಯಲು ಕೆಲವು ನಿಮಿಷಗಳು ಬೇಕಾಯ್ತು, ದಂಗಾದೆ. ಕೈ ಮಾಡಬಹುದು ಆದರೆ ಮಾಡಲಿಲ್ಲ.
"ಸ್ಮಿತಾ ನೋಡು ಅಪ್ಪ ಇಲ್ಲ ಅಂತ ಮುದ್ದಾಗಿ ಸಾಕೀದೀನಿ ಅದನ್ನ ದುರುಪಯೋಗಿಸ್ಕೋಬೇಡ. ನಿನ್ನ ಹೆಜ್ಜೆ ನೀನೇ ಇಡು ಆದ್ರೆ ಬಿದ್ರೆ ನಾನು ಹೊಣೆ ಅಲ್ಲ, ಹೆಜ್ಜೆ ಇಡ್ವಾಗ ಹಳ್ಳ ಕೊಳ್ಳ ನೋಡಿಕೊಂಡು ಇಡು"
"ಆಯ್ತಮ್ಮ ಈಗ ದುಡ್ಡು ಕೊಡ್ತೀಯಾ ಇಲ್ವಾ ಸಮೀರ್‌ಗೆ ಗಿಫ್ಟ್ ತಗೋಬೇಕು" ಗೋಗರೆದಳು
ಇಲ್ಲ ಸ್ಮಿತಾ ಇನ್ನೊಂದೆರೆಡು ದಿನ ಎಲ್ಲಿಯೂ ಹೋಗ್ಬೇಡಾ ನೀನು
"ಅಮ್ಮ ಈಗ ನಾನು ಪಿರಿಯಡ್ಸ್‌ನಲ್ಲಿ ಇಲ್ಲ , ನಾನು ಮೆಚ್ಯೂರ್ ಆಗೇ ಎರೆಡು ತಿಂಗಳಾಗಿವೆ . ಇವಾಗ ರಿಸ್ಟಿಕ್ಷನ್ ಮಾಡಿದರೆ ಏನು ಉಪಯೋಗ. ಸುಮ್ನೆ ಸಂಪ್ರದಾಯಾಂತ ಮೂಲೇಲಿಕೂತ್ಕೊಳೋದು ಆರತಿ ಎತ್ತೋದು. ಸೀರೆ ಉಟ್ಕೋಳೋದು ಯಾಕೆ ಅಂತ ನಾನೆ ಹೇಳಲಿಲ್ಲ ಅಮ್ಮ ಅದು ಬಿಟ್ರೆ ನಿಂಗೆ ಹೇಳ್ಬಾರದು ಅನ್ನೋ ಉದ್ದೇಶ್ ಇರಲಿಲ್ಲಾಮ್ಮ"
ಬಂದು ನನ್ನ ತಬ್ಬಿಕೊಂಡಳು
ಅವಳ ಹಣೆಗೆ ಮುತ್ತಿಟ್ಟು ತಲೆ ನೇವರಿಸಿದೆ.
"ಆದ್ರೆ ಅಜ್ಜಿಗೆ ಹೇಗೆ ಹೇಳೋದು?"
"ಯಾಕೆ ಹೇಳ್ಬೇಕು. ಸುಮ್ನಿದ್ದುಬಿಡೋಣ"
"ಅದು ಸರಿ ಅಲ್ಲ ನಾನೆ ಸಮಯ ನೋಡಿ ಹೇಳಿಬಿಡ್ತೀನಿ"
"ನಾನಿಲ್ಲದಾಗ ಹೇಳಮ್ಮ . ಈಗ ನಂಗೆ ಹೊರಗಡೆ ಹೋಗೋಕೆ ಪರ್ಮಿಷನ್ ಮತ್ತೆ ಕಾಸು ಎರೆಡೂ ಕೊಡು" ಅವಳ ಗೋಗರೆತ ನೋಡಲಾರದೆ ಹಣ ಕೊಟ್ಟೆ
"ಬೇಗ ಬಾ ಸ್ಮಿತಾ"
"ಆಯ್ತಮ್ಮ" ಅಲಂಕರಿಸಿಕೊಂಡು ಹೊರಟಳು
ಅವಳು ಹೋದತ್ತಲೇ ನೋಡುತ್ತಿದ್ದೆ
"ಶ್ವೇತಾ " ದೇವರ ಮನೆಯ ಹತ್ತಿರದಿಂದ ಕೂಗಿದರು ಅತ್ತೆ
"ಹೇಳಿ ಅತ್ತೆ"
"ನಂಗೆಲ್ಲಾ ವಿಷಯ ಗೊತ್ತಾಯ್ತು, ಎಲ್ಲಾನೂ ಕೇಳಿಸ್ಕಿಕೊಂಡೆ"
ನಾನು ಅಪರಾಧಿಯಂತೆ ಕೆಳಗೆ ನೋಡಿದೆ
"ಅತ್ತೆ ಅದೂ ಅವಳಿಗೆ ತಿಳಿದಿಲ್ಲ" ಸಮರ್ಥಿಸಲು ನೋಡಿದೆ
"ಅವಳನ್ನು ವಹಿಸ್ಕೊಂಡು ಮಾತಾಡ್ವೇಡ ನೀನು" ಅವರ ಕಣ್ಣಲ್ಲಿ ಹೆಪ್ಪುಗಟ್ಟಿದ್ದ ನೋವನ್ನು ಗ್ರಹಿಸಬಲ್ಲೆನಾಗಿದ್ದೆ. ಅವರ ಆಚಾರ ವಿಚಾರಗಳನ್ನೆಲ್ಲ ಒಮ್ಮೆಗೆ ಗಾಳಿಗೆ ತೂರಿದ್ದಳು ಮೊಮ್ಮಗಳು
"ಸರಿ ಆಗಿದ್ದು ಆಗಿ ಹೋಯ್ತು ಮನೆಲಿ ಒಂದು ಪುಣ್ಯಾವರ್ತನೆ ಮಾಡೋಣ, ಅವಳಿಗೆ ಹೊಸ ಬಟ್ಟೆ ಹೊಲಿಸು, ಮುಂದಿನವಾರ ಆರತಿ ಎತ್ತೋಣ" ಅತ್ತೆ ಒಪ್ಪಿಕೊಂಡಿದ್ದರು ಆದರೂ ತಮ್ಮ ಆದರ್ಶಗಳನ್ನು ಬಿಡಲಾರದಾಗಿದ್ದರು
ಅವರ ಮಾತಿಗೆ ಒಪ್ಪಿದೆ
ಮಗಳ ಬಳಿಯಲ್ಲಿ ಈ ವಿಷಯ ಹೇಳುವ ಬಗೆಯನ್ನು ಲೆಕ್ಕಾಚಾರ ಹಾಕಲಾರಂಬಿಸಿದೆ
(ಮುಂದುವರಿಯುತ್ತದೆ)
No comments:
Post a Comment
ರವರು ನುಡಿಯುತ್ತಾರೆ