ಯಾಕೇಂತ ಗೊತ್ತಿಲ್ಲಾ ಮನಸು ತುಂಬಾ ನೊಂದುಕೊಳ್ಳುತ್ತೆ. ಅಮ್ಮಾ ನನ್ನ ಕೈ ಹಿಡಿದು ಬೆಳೆಸಿದ ಅಮ್ಮ ನಾನು ಬಿದ್ದರೆ ಅವಳ ಕಣ್ಣಲ್ಲಿ ನೀರು ನಾನು ನಕ್ಕರೆ ಅವಳ ಕಣ್ಣಲ್ಲಿ ಹೊಳಪು ಅಂತಹ ಅಮ್ಮಾ ನನ್ನಿಂದ ದೂರಾ ಆಗ್ತಿದಾಳಾ? ಅಥವಾ ನಾನೇ ದೂರಾ ನೂಕುತ್ತಿದ್ದೀನಾ? ನಾನ್ಯಾವ ರೀತೀಲಿ ಅವಳನ್ನ ನೋಯಿಸುತ್ತಿದ್ದೇನೆ? ಅವಳು ಹೇಳಿದ ಹಾಗೆ ಕೇಳ್ತಾ ಇಲ್ಲವಾ? ಅಥವ ನಾನು ಕೇಳಿದರೂ ಅವಳಿಗೆ ಹಿಡಿಸುತ್ತಿಲ್ಲವಾ? ಸಂಸಾರದ ದೊಂಬಿಯಲ್ಲಿ ನಾನೇ ಮರೆಯುತ್ತಿದ್ದೀನಾ ಅಥವಾ ನಾನು ಮರೆತಿದ್ದೇನೆ ಅಂತ ಅವಳೇ ಅಂದುಕೊಳ್ಳುತ್ತಿದ್ದಾಳಾ?ನಾನು ನಕ್ಕಾಗಲೆಲ್ಲಾ ಅವಳ ಕಣ್ಣಲ್ಲಿ ಕಾಣುತ್ತಿದ್ದ ಹರುಷ ಈಗೆಲ್ಲಿ. ಬಹುಷ ನನ್ನ ನಗೆಯಲ್ಲಿ ಪಾಲುದಾರರು ಹೆಚ್ದ್ಚಾದರೆಂದನಿಸಿತೇ?
ನಾನು ಅತ್ತಾಗಲೆಲ್ಲಾ ಅವಳ ಮೊಗದಲ್ಲಿ ಕಾಣುತ್ತಿದ್ದ ಆತಂಕವೆಲ್ಲಿ?. ಪ್ರಾಯಶ? ಕಣ್ಣೊರೆಸುವ ಕೈ ಹೆಚ್ಚದವೆಂದೆನಿಸಿತೇ?
ನನ್ನ ನೋಡಿದಾಗಲೆಲ್ಲಾ ಅರಳುತ್ತಿದ್ದ ಮೊಗವೆಲ್ಲಿ ? ನನ್ನ ಬರುವನ್ನು ಕಾಯುವ ಜೀವಗಳು ಬೇರಿದ್ದರೆನಿಸಿತೆ?
ಯಾಕೀ ಮ್ಲಾನವದನ ಅವಳಿಗೆ ನಾನ್ಯಾವತ್ತೂ ಅವಳು ಬೇರೊಬ್ಬಳೆಂದಂದುಕೊಳ್ಳಲ್ಲಿಲ್ಲ. ಸಿಡುಕು, ಕೋಪ ತಾಪ , ಹರುಷ ಮದುವೆಗೆ ಮುನ್ನವೂ ಇದ್ದವು ಈಗಲೂ ಇವೆ ಅದೇಕೆ ಅವಳಿಗೆ ಈಗಿನದು ಮಾತ್ರ ಎದ್ದು ಕಾಣುತ್ತಿದೆ. ಜೀವನದಲ್ಲಿ ನಾನು ನನ್ನಕ್ಕ ಪಯಣಿಗರಾಗಿದ್ದಾಗ ಅವಳೇ ನಾವಿಕಳಾಗಿದ್ದಳು ಸಂಸಾರದ ಹರಿಗೋಲನ್ನು ನೂಕಿ ನೂಕಿ ಅವಳಿಗೂ ಆಯಾಸವಾಗಿದೀಯೆಂದೆಣಿಸಿ ನಾನು ಹಿಡಿದದ್ದೇ ಅವಳಿಗೆ ಬೇಸರವಾಗಿದೆಯೇ? ಅಥವ ಅವಳೇ ಬೇರಾದಳೆಂದೆಣಿಸಿ ಮತ್ತೊಂದು ನೌಕೆಯಲ್ಲಿ ಬರುವ ಯೋಜನೆಯೇ?
ಇದೇಕೆ ಹೀಗೆ ಸಿಟ್ಟು ಸೆಡವು, ಸಿಡುಕು, ಅಸಹನೆ ಅಮ್ಮನಿಗೆ. ಮತ್ತೆ ಕೆಲವೊಮ್ಮೆ ಇದ್ದಕಿದ್ದಂತೆ ಅಳು . ಯಾಕೆ ಹೀಗೆ
ಬದುಕೆಲ್ಲಾ ಬರೀ ನೋವಿಂದ ಕೂಡಿದ್ದಾಗಲೂ ನಗುತ್ತಾ ನಮ್ಮನ್ನೂ ನಗಿಸುತ್ತಿದ್ದ ಅಮ್ಮ ಜೀವನದ ಮುಸ್ಸಂಜೆಯಲ್ಲಿ ಸಂತಸದ ಸುಖದ ಸರೋವರದಲ್ಲಿದ್ದಾಗಲೂ ನೋವಿಂದ ನರುಳುವುದೇಕೆ? ಅಥವಾ ಎಲ್ಲರಿಗೂ ಹೀಗೆಯೇ ಆಗುತ್ತದೆಯೇ?
ಜೀವನದ ಮುಸ್ಸಂಜೆಯಲ್ಲಿ ನಾನೂಹೀಗೆಯೇ ಆಡುತ್ತೇನಾ?
ವಯಸ್ಸಾದರೆ ನಾವೂ ಹೀಗೇನಾ...? ಅಂತ ಎಲ್ಲರೂ ಯೋಚಿಸುವಂತೆ ಇದೆ....
ReplyDeleteತುಂಬ ಚೆನ್ನಾಗಿ ಬರೆದಿದ್ದೀರಾ....
ವಯಸ್ಸಿನ ಭೂತ ಯಾರನ್ನೂ ಕಾಡದೇ ಬಿಟ್ಟಿಲ್ಲ,
ReplyDeleteನಮಗೂ ವಯಸ್ಸಾಯಿತೇ ಎಂದು ಯೋಚಿಸುವಂತೆ ಮಾಡಿದೆ ನಿಮ್ಮ ಲೇಖನ
ಹೌದು ಎಲ್ಲರೂ ಹೀಗೇನೆ ಅಂತ ಅನಿಸುತ್ತೆ....
ReplyDeleteರೂಪಾ,
ReplyDeleteಹೌದು, ಈ ಪ್ರಶ್ನೆ ನನ್ನನ್ನೂ ತುಂಬಾ ದಿನಗಳಿಂದ ಕಾಡುತ್ತಿತ್ತು. ಮೊದಲು ಅಪ್ಪ ಅಮ್ಮನ ಮನ ನೋಯುವಂತೆ ವರ್ತಿಸುವ ಮಕ್ಕಳನ್ನು ಕಂಡು ಸಿಟ್ಟು ಬರುತ್ತಿತ್ತು. ಈಗೀಗ ಅಪ್ಪ ಅಮ್ಮ ಏಕೆ ನೊಂದುಕೊಳ್ತಾರೆ ಅಂತಾನೇ ಅರ್ಥ ಆಗದಂತಾಗಿದೆ. ಅವರು ಹೇಳಿದಂತೆ ಕೇಳಿದರೂ, ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದರೂ, ಕೆಲವೊಮ್ಮೆ ಅವರೇಕೆ ಅಷ್ಟೊಂದು ಸಿಡುಕುತ್ತಾರೆ, ಅಷ್ಟೇಕೆ ಬೇಸರ ಪಟ್ಟುಕೊಳ್ತಾರೆ, ನಮ್ಮ ಚಿಕ್ಕದೊಂದು ಮಾತಿನಲ್ಲಿ ಅಷ್ಟೇಕೆ ಅರ್ಥ ಹುಡುಕಲು ಹೊರಡುತ್ತಾರೆ ಅನ್ನೋದೇ ತಿಳಿಯಲ್ಲ. ಮಕ್ಕಳು ದೂರವಾಗ್ತಿದಾವೆ ಅನ್ನೋ ದುಗುಡವೇ? ಅಥವಾ ಮಕ್ಕಳ ಪ್ರೈಯಾರಿಟೀ ಬದಲಾಗಿವೆ ಎಂಬ ಅನುಮಾನವೇ? ಅಥವಾ, ನಾವೇ ನಿಜವಾಗಿಯೂ ಬದಲಾಗಿದ್ದೇವೆಯೇ? ನಿಜಕ್ಕೂ ಅರ್ಥ ಆಗಲ್ಲ.. ಚಿಂತನಾರ್ಹ ವಿಷಯವನ್ನು ಚರ್ಚೆಗೆ ಒದಗಿಸಿದ್ದಕ್ಕೆ ತಮಗೆ ವಂದನೆಗಳು.
- ಉಮೇಶ್
ರೂಪ...
ReplyDeleteನಾವೂ ಹೀಗೇ ಆಗಿಬಿಡುತ್ತೇವಾ ಎಂಬುದೇ ನನ್ನದೂ ಆತಂಕ.... ಸಂಪೂರ್ಣವಾಗಿ ನಮ್ಮದೇ ಆಸ್ತಿ, ನಮ್ಮದೇ ಉಸಿರು ಎಂಬಂತಿದ್ದ ಮಕ್ಕಳು ದೊಡ್ಡವರಾದಾಗ, ಅವರ ಜವಾಬ್ದಾರಿಗಳು ಹೆಚ್ಚಾದಾಗ, ಅವರ ಬದುಕಿನಲ್ಲಿ ಎಲ್ಲಾ ರೀತಿಯಲ್ಲೂ ಬರೀ +ಗಳೇ ಆಗುತ್ತಾ ಹೋಗುತ್ತದೆ.... ಆದರೆ ಜೀವನದ ಮುಸ್ಸಂಜೆಯಲ್ಲಿ ಕುಳಿತಿರುವ ನಾವು ನಮ್ಮ ಬದುಕಿನ ಬಹುತೇಕ ಎಲ್ಲವನ್ನೂ ಅನುಭವಿಸಿ, ಹಣ್ಣಾಗಿ ಕಳೆದುಕೊಳ್ಳುವ (-) ಹಂತದಲ್ಲಿರುತ್ತೇವೆ. ಆಗ ಬೇರೇನನ್ನೂ ಯೋಚಿಸದೆ ನಮ್ಮ ಮಕ್ಕಳ ಎಲ್ಲಾ ನಿಗಾ ನಮಗೇ ಬೇಕೆಂದು ಆಶಿಸುತ್ತೇವೇನೋ.... ಅದಿಕ್ಕೇ ಹೀಗೆ ಕಾರಣವಿಲ್ಲದ ಸಿಟ್ಟು, ಅಳು, ಕೋಪ ಎಲ್ಲಾ ಬರತ್ತೆ. ಜೀವನದ ಕೊನೆಯ ಭಾಗದಲ್ಲಿರುವ ನಮಗೆ "ಭಾವುಕತೆ" ಒಂದೇ + ಆಗುತ್ತಾ ಹೋಗೋದು... ಅಲ್ಲ್ವಾ? ಇದೇ ಕಾಲಚಕ್ರ... ಉರುಳುತ್ತಲೇ ಇರತ್ತೆ....ನಮ್ಮಮ್ಮನ ನಂತರ ನಮ್ಮ ಸರದಿ.. ನಮ್ಮ ನಂತರ ನಮ್ಮ ಮಕ್ಕಳ ಸರದಿ...ಅವರ ನಂತರ ಅವರ ಮಕ್ಕಳ ಸರದಿ.....
ಶ್ಯಾಮಲ
ಎಲ್ಲರ ಆತಂಕ ನಿಮ್ಮಲ್ಲೂ ಇದೆ. ಈ ಪ್ರಶ್ನೆಗೆ ಉತ್ತರ ಹುಡುಕವ ನಿಟ್ಟಿನಲ್ಲಿ ಎಲ್ಲರೂ ಇದ್ದಾರೆ..?
ReplyDeleteಒಳ್ಳೆಯ ವಿಚಾರ. ಒಮ್ಮೊಮ್ಮೆ ನಮ್ಮತ್ತೆಮಾವ ಹಾಗೂ ನನ್ನಮ್ಮನನ್ನು ನೋಡಿದಾಗ ಹಾಗೆ ಅನ್ಸತ್ತೆ. ಉತ್ತರ ಸಿಗದ ಪ್ರಶ್ನೆಗಳ ಸಾಲಿನಲ್ಲಿ ಇದೂ ಕೂಡ ಬರುತ್ತದೆ.
ReplyDeleteವಯಸ್ಸಾದ೦ತೆ ಅನೇಕರಿಗೆ ತನ್ನನ್ನು ಯಾರೂಗಮನಿಸುತ್ತಿಲ್ಲ ಎನ್ನುವ ಅಸ್ಥಿರತೆ ಕಾಡುತ್ತದೆ. ನಮಗೂ ಕಾಡಬಹುದು. ಈಗಲೂ ಅದಕ್ಕೆ ನಿಮ್ಮ ನಗುವೇ ಮದ್ದಾಗಲಿ.
ReplyDelete