Saturday, April 30, 2011

ಕನಸು- ನೆನಕೆಗಳು -------ನನಸುಗಳು- ವಾಸ್ತವ

ಆ ಕ್ಷಣದ ಕಾಯುವಿಕೆಯಲ್ಲೂ ಎಷ್ಟೊಂದು ಸಂತಸವಿದೆ ಅನ್ನಿಸಿತು.
ಹೌದು , ಆವತ್ತು ಅಮ್ಮನ ಬಳಿಯಲ್ಲಿ ತನ್ನ ಅವನ ಪ್ರೀತಿಯ ಬಗ್ಗೆ ಹೇಳಿದ್ದೇ ಬಂತು, ಸಿಡುಕು ಮೋರೆ ಹೊತ್ತು ಅಮ್ಮ ಅಪ್ಪನ ಕಿವಿ ಕಚ್ಚಿ ಅಪ್ಪ ತನ್ನನ್ನ ದುರುದುರು ನೋಡಿ, ಸ್ವಲ್ಪ ಹೊತ್ತಿನಲ್ಲಿಯೇ ಕಿರುನಗೆ ನಕ್ಕು
"ಹೋಗಲಿ ಬಿಡು ಅವಳೇನು ಬೇರೆಯವರನ್ನ ಪ್ರೀತಿಸಲಿಲ್ಲವಲ್ಲ. ಅವನೂ ನಮ್ಮ ಜಾತೀನೆ, ಜೊತೆಗೆ ಒಳ್ಳೆ ಕೆಲಸದಲ್ಲಿ ಇದ್ದಾನೆ, ನಮ್ಮಕೆಲಸ ಹಗುರ ಮಾಡಿದಳು ಬಿಡು "ಎಂದು ನುಡಿದಾಗ ಸ್ವರ್ಗಕ್ಕೆ ಮೂರೇ ಗೇಣು
ಅತ್ತ ಅವನೂ ಫೋನ್ ಮಾಡಿದ್ದ
"ಶೀತಲ್ ನಮ್ಮ ಮನೆಯಲ್ಲೂ ಒಪ್ಪಿದರು ಕಣೇ, ಇನ್ನು ಮುಂದೇ ಬರೀ ಕನಸುಗಳ ಜಾತ್ರೇ, ಆ ಜಾತ್ರೆಯ ದೇವಿ ನೀನೆ, ನಿನ್ನ ಹೊತ್ತ ಪೂಜಾರಿ ನಾನೇ ಅಲ್ಲ್ವವೇನೇ?"
ಅಲ್ಲಿಯವರೆಗೆ ಇರದ ನಾಚಿಕೆ ದ್ವನಿಯಲ್ಲಿ ಬಂದುಬಿಟ್ಟಿತ್ತು
"ಹೂ " ಎಂದಷ್ಟೇ ಉತ್ತರಿಸಿದ್ದೆ
"ಆಹಾಹ ಎಷ್ಟೊಂದು ನಾಚಿಕೆ ಬಂದು ಬಿಟ್ಟಿದೆ ನನ್ನರಗಿಳಿಗೆ"ಛೇಡಿಸಿದ್ದ

ಮಾತಾಡಿರಲಿಲ್ಲ.
ಕನಸಿನ ಕೋಟೆಯ ಬಾಗಿಲ ಕೀಲಿ ಕೊಟ್ಟಂತಾಗಿತ್ತು,
ಆ ಕೋಟೆಯಲ್ಲಿ ನಾನು ಅವನು , ಅವನು ಮತ್ತೆ ನಾನು , ಕೇವಲ ನಾವಿಬ್ಬರೇ ಮತ್ತಾರಿಗೂ ಪ್ರವೇಶವಿಲ್ಲ.
ಅಂದಿನಿಂದ ಇಬ್ಬರ ಫೋನುಗಳಿಗೂ ಬಿಡುವಿರಲಿಲ್ಲ
ಘಂಟಾನುಗಟ್ಟಲೆ ಮಾತನಾಡುತ್ತಾ ಹರಟುತಿದ್ದರೆ
ಹೊತ್ತು ಹೋಗಿದ್ದೆ ತಿಳಿಯುತ್ತಿರಲಿಲ್ಲ

ಕಣ್ಣುಗಳ ತುಂಬ ಅವನದೇ ಬಿಂಬ , ಹೊಂಗನಸುಗಳು, ಅಮಲಿನಲ್ಲಿದ್ದಂತೆ ಭಾಸವಾಗುತ್ತಿತ್ತು. ಸವಿ ಸವಿ ಕ್ಷಣಗಳು ಸವಿ ಸವಿ ಕನವರಿಕೆಗಳು , ಮನಸು ಅವನ ಸ್ಪರ್ಷಕ್ಕೆ ಹಾತೊರೆಯತೊಡಗಿತ್ತು. ಮೈ ಮನಗಳಲ್ಲಿ ನವ ಚೇತನ ತುಂಬಿದಂತಾಗುತ್ತಿತ್ತು.
ಎಷ್ಟೋ ರಾತ್ರಿ ಕನಸುಗಳಲ್ಲಿ ಏನೇನೋ ಆಗತೊಡಗಿ ಒಂದು ಕ್ಷಣ ಕಂಪನ, ಜೊತೆಗೇ ಆ ಸಂತಸವನ್ನು ಮನಸಾರೆ ಸವಿಯುತ್ತಿದ್ದೆ
ಯಾವಾಗಲಾದರೂ ಅವನು "ಸೌಮ್ಯ ಏನೇ ನಾನು ನಿನ್ನಕನಸಲ್ಲಿ ಬರ್ತೀನೇನೆ,"ಎಂದಾಗ " ಹೂ" ಎನ್ನುತ್ತಿದ್ದೆನಾದರೂ "ಬಂದು ಏನು ಮಾಡ್ತೀನಿ " ಎಂದು ನಗುತ್ತಾ ಕೇಳುತ್ತಿದ್ದಾಗ ಒಮ್ಮೆಲೇ ಗಾಭರಿಯಾಗಿ
"ಏನಿಲ್ಲ ಹೀಗೆ ಬಂದು ಹೋಗ್ತೀರಾ " ಎಂದಂದು ಮುಖ ಮುಚ್ಚಿಕೊಳ್ಳುತ್ತಿದ್ದೆ ಎಲ್ಲಿ ತನ್ನ ಭಾವನೆಗಳು ಅವನಿಗೆ ಗೊತ್ತಾಗುತ್ತದೆ ಎಂದು......
"ಏಯ್ ಕಳ್ಳಿ............" ಎಂದಾಗಂತೂ ಆಗಸವನ್ನೇ ಸೆರಗಾಗಿ ಮಾಡಿಕೊಂಡು ಓಡುವಂತೆ ಆಗುತ್ತಿತ್ತು
ಒಟ್ಟಿನಲ್ಲಿ ಅವನೇ ಮನದ ತುಂಬಾ, ಕಣ್ನ ತುಂಬಾ , ಸಿಂಗಾರಗೊಳ್ಳುವುದೂ ಅವನಿಗಾಗಿಯೇ ಅಂತನಿಸುತ್ತಿತ್ತು.

ನನ್ನೀ ರೂಪ ಅವನ ಕಣ್ಣಿಗ್ ಬಿದ್ದರೇ ಸಾಕು ಎಂದನಿಸುತ್ತಿತ್ತು.

" ಸೌಮ್ಯ ನಾಳೇ ಸಿನಿಮಾಗೆ ಹೋಗೋಣ ಬರ್ತೀಯಾ" ಎಂದು ಕೇಳಿದ್ದ ಆತ ಆವತ್ತು . ಹೂ ಎನ್ನಬೇಕನ್ನಿಸಿದರೂ ಹೇಳಲಾಗಲಿಲ್ಲ
"ಊ ಹೂ " ಎಂದಂದು ನೆಲ ನೋಡಿದ್ದೆ..............
"ಸರಿ ಬಿಡು ಇನ್ನೇನು ಒಂದು ತಿಂಗಳು ಅಷ್ಟೇ ತಾನೆ. ಆಮೇಲೆ ಊಹೂ ಅನ್ನು ನೋಡೋಣ " ಎಂದಾಗ ಮತ್ತೊಮ್ಮೆ ಬಲವಂತ ಮಾಡಬಾರದೇ ಅನ್ನಿಸಿತು. ಆತ ಮಾಡಲಿಲ್ಲ......... ಮನಸಿನ ಮಾತು ಅರಿವಾಗುತ್ತದೆಯೇ ಅವನಿಗೆ ಇಲ್ಲಾ
ಆಗೊಮ್ಮೆ ಫೋನ್ ಮಾಡಿದಾಗ
"ಏನ್ಮಾಡ್ತಾ ಇದ್ದೀರಾ ಎಂದು ಕೇಳಿದ್ದೇ
ಅವನು " ನಮ್ಮ ಮಗನಿಗೆ ಮೆಡಿಕಲ್ ಸೀಟ್ ಸಿಗುತಾ ಇಲ್ಲವಾ ಅಂತ ಯೋಚಿಸುತ್ತಿದ್ದೆ" ಎಂದಾಗಂತೂ ಮನ ತುಂಬಿಬಂದಿತ್ತು
ಎಷ್ಟೊಂದು ಯೋಚನೆ ಮಾಡಿದಾನೆ ............ ಬಹಳ ಫ಼ಾರ್‌ವಾರ್ಡ್ ... ...........ಕಿರುನಗೆ ತಂತಾನೆ ಮೂಡಿ ಬಂದಿತ್ತು
ಮತ್ತೊಮ್ಮೆ ಫೋನ್ ಮಾಡಿದಾಗ

"ಡೋಂಟ್ ಡಿಸ್ಟರ್ಬ್ ಮಿ . ನಾನು ಮೂನಾರ್ನಲ್ಲಿ ಹನಿಮೂನ್ ಮೂಡ್ ನಲ್ಲಿದ್ದೇನೆ . ಬೇಕಿದ್ದರೆ ನೀನೂ ಬಾ " ಎಂದಿದ್ದ

ಅಂದೆಲ್ಲಾ ಎದೆ ಬಡಿತ ಜೋರಾಗಿತ್ತು. ಹನಿಮೂನಿನ ಚಿತ್ರಣ ಕಣ್ಣಲ್ಲಿ ಮೂಡುತ್ತಿತ್ತು......
ಚಿತ್ರಗಳಲ್ಲಿನ ಮೊದಲ ರಾತ್ರಿಗಳ ಸೀನನ್ನು ನೆನಪಿಸಿಕೊಳ್ಳುತ್ತಿದ್ದೆ.........
ಹಾಲು ತೆಗೆದುಕೊಂಡು ಹೋಗೋ ಪದ್ದತಿ ನಮ್ಮಲ್ಲು ಇದೆಯೇ ಅಂತ ಯೋಚಿಸುತ್ತಿದ್ದೆ.
ಅವನಿಗೆ ಏನೇನು ಇಷ್ಟ ಅದನ್ನೆಲ್ಲಾ ಪಟ್ಟಿ ಮಾಡಿಟ್ಟುಕೊಳ್ಳ್ತತೊಡಗಿದೆ, ಅಡುಗೆ ಮನೆಗೆ ಕಾಲಿಟ್ಟಿರದಿದ್ದ ನಾನು ಇತ್ತೀಚಿಗೆ ಅಡುಗೆ ಮನೆಯನ್ನೆ ಖಾಯಂ ಮಾಡಿಕೊಂಡು ಕೂರುತ್ತಿದ್ದೆ. ಹಾಗೂ ಹೀಗೂ ಒಂದಷ್ಟು ಅಡುಗೆಗಳನ್ನೂ ಕಲಿಯುತ್ತಿದ್ದೆ
ಎಂದೋ ಸಿನಿಮಾದಲ್ಲಿ ನೋಡಿದ್ದ ದೃಶ್ಯಗಳು ಮನಸಿಗೆ ಬಂದು ತೊಂದರೆ ಕೊಡಲಾರಂಭಿಸಿದ್ದವು
ಅಡುಗೆ ಮನೆಯಲ್ಲಿದ್ದಂತೆಯೇ ಹಿಂದಿನಿಂದ ಬಂದು ತಬ್ಬಿಕೊಳ್ಳುವ ಚಿತ್ರಗಳು ಮೂಡಿ ಮೈ ಬೆವೆತು ಹೋಗುತ್ತಿತ್ತು.ಕನಸಿನಲ್ಲಿಯೇ ತೇಲಿ ಹೋದಂತೆಯೇ,ನಗು ತಂತಾನೆ ಮೂಡುತ್ತಿತ್ತು. ಇಹದ ನೆನಪು ಮರೆಯಾಗುತ್ತಿತ್ತು,
ಅಮ್ಮ ಬೈಯ್ಯುತ್ತಿದ್ದರು
" ಏ ಮದುವೆ ಆದ ಮೇಲೆ ಇದ್ದೇ ಇದೆ. ನೆಟ್ಟಗೆ ಕೂತ್ಕೋಳ್ಳೇ"
ಗಡಿಬಿಡಿ ಇಂದ ಎದ್ದು ಕೂರುತ್ತಿದ್ದೆ
ಅಪ್ಪಿ ತಪ್ಪಿ ಅವನೇನಾದರೂ ಎದುರು ಬಂದರಂತೂ ಮುಗಿಯಿತು.
ಅತ್ತಲ್ಲಿಂದ ಮರೆಯಾಗಿ ಹೋಗುವಂತೆ ನಿಲ್ಲುತ್ತಿದ್ದರು ಅವನನ್ನೇ ನೋಡುತ್ತಿದ್ದೆ, ಅವನಿಗೆ ನಾನು ಕಾಣುತ್ತಿರಲಿಲ್ಲ, ಆದರೆ ಆತ ನನಗೆ ಕಾಣಿಸುತ್ತಿದ್ದ
ಆತನ ಕಣ್ಣೂ ನನ್ನನ್ನೇ ಹುಡುಕುತಿರುವುದು ಎಂದು ತಿಳಿಯುತ್ತಿದ್ದರೂ ಅವನ ಆ ಪಜೀತಿಯನ್ನ ನೋಡಿ ಮನಸಾರೆ ಆನಂದಿಸುತ್ತಿದ್ದೆ. ಆಮೇಲೆ ಅಯ್ಯೋ ಪಾಪ ಎಂದನಿಸಿ ಏನೋ ಹುಡುಕುವಂತೆ ಅವನಮುಂದೆ ನಿಲ್ಲುತ್ತಿದ್ದೆ.
ಕಣ್ಣಲ್ಲೇ ಮಾತನಾಡುತ್ತಿದ್ದ, ಸೂಪರ್ ಎನ್ನುತ್ತಿದ್ದ, ಆಕಣ್ಣುಗಳಲ್ಲಿನ ಸನ್ನೆಯ ಮುಂದೆ ಸೋತು ಹೋಗಿ....................
ಮತ್ತೆ ಎದೆ ಬಡಿತ ಹೆಚ್ಚಾಗಿ ಒಳಗೆ ಓಡಿಹೋಗುತ್ತಿದ್ದೆ
ಅಂದೊಮ್ಮೆ ಆತ ಮನೆಗೆ ಬಂದಿದ್ದಾಗ , ಮನೆಯಲ್ಲಿ ಯಾರೂ ಇರಲಿಲ್ಲ. ಗಬಕ್ಕನ್ನೇ ಬಳಿಗೆಳೆದುಕೊಂಡು ಚುಂಬಿಸಿದ್ದ . ಛೀ ಎಂಜಲು ಎಂದಾಗ ....ಮತ್ತೆ ಬಳಿಗೆಳೆದುಕೊಂಡಾಗ ಹೆದರಿ ಕೈ ಕೊಸರಿಕೊಂಡು ಹೊರಗೋಡಿಬಂದಿದ್ದೆ. ಎರೆಡು ಕ್ಷಣಗಳಾದ ಮೇಲೂ ಆತ ಹೊರಗಡೆ ಬರದಿದ್ದಾಗ ಮತ್ತೆ ಒಳಗೆ ಹೋದಾಗ..........
"ಸಾರಿ ಶೀತಲ್" ಎಂದಿದ್ದ ಆತನ ಕಣ್ಣುಗಳು ಆತನ ಕೆಳಗೆ ಬಾಗಿದ್ದವು. ಆ ಕಣ್ಣುಗಳನ್ನು ಚುಂಬಿಸುವ ಮನಸಾಗಿದ್ದರೂ ಸಹಾ ತೋರಗೊಡಲಿಲ್ಲ,........ಮತ್ತೊಮ್ಮೆ ಆ ಚುಂಬನದ ಸುಖಕ್ಕೆ ಮನಸ್ಸು ಹಾತೊರೆದರೂ ಮನಸು ಗಟ್ಟಿ ಮಾಡಿಕೊಂಡಿದ್ದೆ....
ಅಂದು ರಾತ್ರಿ ಎಲ್ಲಾ ಹೇಳಲಾಗದ ಸಂತೋಷದ ಕನಸುಗಳು, ರಂಗು ರಂಗಾದ ಕನಸಿಗೆ ಅವನೇ ರಾಜ ನಾನೇ ರಾಣಿ ಮತ್ತಾರೂ ಇಲ್ಲ ........................"""""""""""".ಏನೇನೋ ಆಸೆ ನೀತಂದ ಭಾಷೆ""""""""""""ಹಾಡುಗಳು ಒಂದೊಂದಾಗಿ ಕಾಡತೊಡಗಿದ್ದವು


ಈ ಎಲ್ಲಾ ಕನಸುಗಳ ಮಧ್ಯೆಯೇ ಎಂದೋ ಕೇಳುತ್ತಿದ್ದ ಅತ್ತೆ ಕಾಟ,ನಾದಿನಿಯರ ಜಗಳ ಎಲ್ಲವೂ ಕಣ್ಣ ಮುಂದೆ ಬಂದು ಭಯವೂ ಆಗುತ್ತಿತ್ತು
ಅಲ್ಲಿ ಹೋಗಿ ಅಲ್ಲಿನ ಆಚಾರ, ವಿಚಾರ ಕಲಿಯಲಾಗುತ್ತದೆಯೇ ?
ಮೊದಲೇ ಒಬ್ಬಳೇ ಮಗಳೆಂದು ಪ್ರೀತಿಯಿಂದ ಬೆಳೆಸಿದ್ದ ಅಮ್ಮ ತನಗೆ ಏನನ್ನೂಹೇಳಿಕೊಟ್ಟಿರಲಿಲ್ಲ
ಅಥವ ಅವನಿಗೆ ಹೇಳಿಬಿಡಲೇ ಬೇರೆ ಮನೆ ಮಾಡಿಕೊಂಡುಬಿಡೋಣ ಅಂತಾ ಎಂಬ ಯೋಚನೆಗಳೂ ಬರುತ್ತಿದ್ದವು
ಆದರೆ ಈಗಲೆ ಹೇಳಿಬಿಟ್ಟರೆ ಅವನಿಗೆ ತನ್ನ ಮೇಲೆ ಯಾವ ಭಾವನೆ ಬರುತ್ಟೋ ಬೇಡ ...........

ಮತ್ತೆ ಅವರ ಅಮ್ಮನಿಗೆ ನಾನು ಹಿಡಿಸಿದ್ದೀನೋ ಏನೋ...................ಮೊದಲೆ ಮಗ ಮೆಚ್ಚಿದವಳು..........ಏನಾದರೂ ಬ್ದೈದರೇ.......... ಏನಾದರೂ ಅನ್ನಲಿ ಇವನಿಗಾಗಿಹೊಂದಿಕೊಂಡು ಹೋಗಿಬಿಡುವುದು ಅಷ್ಟೇ..............

ಆಗಾಗ ಅಮ್ಮ ಅಪ್ಪನನ್ನ ಬಿಟ್ಟಿರಬೇಕಾದ ಸಂಕಟ ನೆನಪಿಗೆ ಬಂದುಕಣ್ನ್ಲಲ್ಲಿ ನೀರು ಬರುತ್ತಿತ್ತು
ಅಪ್ಪ ಅಮ್ಮನ್ನ ಇಲ್ಲಿಯವರೆಗೆ ಬಿಟ್ಟಿದ್ದೇ ಇಲ್ಲ.
ಹೇಗೆ ಬಿಟ್ಟಿರಲಿ ಇವರನ್ನ , ಇರಲಾಗುತ್ತದೆಯೇ ನನಗೆ, ಒಮ್ಮೊಮ್ಮೆ ಅಳುತ್ತಿದ್ದೆ ಒಬ್ಬಳೇ ಕೂತಾಗ. ಆಗೇನಾದರೂ ಅಮ್ಮ ನೋಡಿದಾಗ ಅಮ್ಮನೂ ಕಣ್ಣೊರೆಸಿಕೊಳ್ಳುತ್ತಿದ್ದರು.

ಅವನಾದರೂ ಒಮ್ಮೆಯೂ ನಿಂಗೆ ಬೇಜಾರಾಗ್ತಾ ಇದ್ದೀಯಾ ಎಂದು ಕೇಳಿರಲಿಲ್ಲ
ಅವನ ಬಳಿ ನಾನು ನಿರೀಕ್ಶಿಸಿದ್ದ ಒಂದು ಮಾತು ಅವನಿಗೆ ತಿಳಿಯಲಿಲ್ಲ
"...............ನಾನು ನಿನಗೆ ತಂದೆ ತಾಯಿ ಆಗಿ ಕಾಯುತ್ತೇನೆ" ಎಂಬ ಮಾತದು
ಬರಲೇ ಇಲ್ಲ ಅವನಿಂದ
ಅಥವ ಅವನಿಗೆ ಹೇಗೆ ತಿಳಿಯುತ್ತದೆ
ಹೆಣ್ಣಿನ ಮನಸಿನಮಾತು ಎಂದಂದುಕೊಂಡು ಸಮಾಧಾನಗೊಳ್ಳುತ್ತಿದ್ದೆ

ಅಂತೂ ಇಂತೂ ಆ ಕನಸಿನ ದಿನ ಬಂದೇ ಬಿಟ್ಟಿತ್ತು

ಮದುವೆಯಾಯ್ತು
ಮತ್ತೆಲ್ಲಾ ಬೇರಾವುದೋ ಕನಸಿನಂತೆ . ನಡೆಯತೊಡಗಿತು
....................
"ಏ ಹುಳಿಗೆ ಉಪ್ಪು ಸರಿಯಾಗಿ ಹಾಕು ಅಂತ ಎಷ್ಟು ಸಲಾ ಹೇಳಿಲ್ಲಾ . ಮದುವೆಯಾಗಿ ಒಂದು ಮಗುವಿನ ತಾಯಾದರೂ ಬುದ್ದಿ ಬಂದಿಲ್ಲ " ಎಂದು ಬೈಯ್ಯುತ್ತಿದ್ದ ಆ ನನ್ನ ರಾಜ
ನೆನಪಿನ ಅರಮನೆಯಿಂದ ವಾಸ್ತವಕ್ಕೆ ಬಂದೆ
"ಹೌದೌದು ಒಲ್ಲದ ಗಂಡನಿಗೆ ಮೊಸರಲ್ಲೂಕಲ್ಲು ಅಂತ ನಿಮಗೆ :" ನಾನೂ ಕಿರುಚಿದೆ..... ನನ್ನೆಲ್ಲಾ ಕನಸೂಗಳೂ ಬೇರಾವುದೋ ರೂಪ ಧರಿಸಿ ಒಮ್ಮೆ ದಹಿಸಿ, ಒಮ್ಮೆ ಪ್ರೀತಿಸಿ. ಒಮ್ಮೆ ಅಪ್ಯಾಯ ಮಾನವಾಗಿ, ಮತ್ತೊಮ್ಮೆ ಬೇಸರವಾಗುವಂತೆ ನನಸಾಗಿ ಮೈದಾಳಿ ನನ್ನ ಮುಂದಿತ್ತು
ವಾಸ್ತವ ಬೇರೆಯೇ ಅಲ್ಲವೇ? ಎಂದಂದು ಕೊಂಡು ಮುಂದಿನ ಕೆಲಸಕ್ಕೆ ತಯಾರಾದೆ.



2 comments:

  1. ಕನಸು ಮತ್ತು ವಾಸ್ತವ!
    ಚೆನ್ನಾಗಿ ಬರೆದಿದ್ದೀರಿ.

    ReplyDelete
  2. houdu..kanasu nanasaada dinagaliginta kanasu kanuttidda dinagale yavattigoo chenna.. vastva endigoo kahiye....

    ReplyDelete

ರವರು ನುಡಿಯುತ್ತಾರೆ