Tuesday, April 27, 2010

ಫಲಿತಾಂಶ

ಪ್ರಣತಿಯನ್ನು ನೋಡುತ್ತಿರುವಂತೆ ನನ್ನ ಮನದಲ್ಲೇನೋ ಅಪರಾಧಿ ಪ್ರಜ್ನೆ ಹೀಗೇ ಧುಮ್ಮಿಕ್ಕುತ್ತಿದೆ. ಅವಳನ್ನು ಪ್ರೀತಿಸುತ್ತಿದ್ದೇನೆ ನಾನು ಆದರೆ ಅವಳು ನನ್ನನ್ನ ಪ್ರೀತಿಸುತ್ತಿದ್ದಾಳೇಯೇ. ಅವಳು "ಅನಿಲ್ ಐ ರಿಯಲ್ಲಿ ಐ ಲವ್ ಯು "ಅಂದಾಗಲೂ ಹೃದಯ ಹಿಗ್ಗಲಿಲ್ಲ ಬದಲಿಗೆ ಕುಗ್ಗಿತು. ಒಂದು ಹೆಣ್ಣನ್ನು ಪ್ರೀತಿಸಲು ಮುಖವಾಡ ಹಾಕ್ತೀಯಾ ಹೇಡಿ ಎಂದಿತ್ತು. ಆದರೂ ಭಂಡ ನಾನು .ಯಾವುದಕ್ಕೂ ಬಗ್ಗೋದಿಲ್ಲ. ಇನ್ನೂನನ್ನದೇ ಮಾತಿಗೆ ಬಗ್ಗುತ್ತೇನೆಯೇ. ಅದನ್ನ ಗದರಿದ್ದೆ.


ಈ ಪ್ರಣತಿ ನನ್ನನ್ನ ಈ ಒಂದು ಕೀಳು ಮಟ್ಟಕ್ಕೆ ಇಳಿಸಿಬಿಡುತ್ತಾಳೆ ಎಂದು ನಾನಾದರೂ ಯಾವಾಗ ತಿಳಿದಿದ್ದೆ.


ಪ್ರೀತಮ್ ನನ್ನ ಕಂಪೆನಿಯಲ್ಲಿ ಕೇವಲ ಕೆಲಸಗಾರನಾಗಿರಲಿಲ್ಲ ನನ್ನ ಜೀವದ ಗೆಳೆಯನಾಗಿದ್ದ. ಸ್ವಭಾವತ: ಚಿಪ್ಪಿನಲ್ಲಿ ಮುಳುಗಿ ಹೋಗುವ ಹುಡುಗ. ಅದು ಹೇಗೋ ಅವನು ನನ್ನ ಗೆಳೆತನದ ಪರಿಧಿಯಲ್ಲಿ ತೂರಿದ್ದ.


ಅವನಿಗೆ ಹೇಗೋ ಹತ್ತಿತ್ತು ಬ್ಲಾಗ್ ಹುಚ್ಚು. ಸದಾ ಒಂಟಿ ಆತ . ಕಲ್ಪನೆಯ ಸಾಗರದಲ್ಲಿ ಮುಳುಗಿರುತ್ತಿದ್ದ. ತನ್ನ ಮನಸಿನ ಭಾವನೆಗೆ ಮಾತಿನ ರೂಪ ಕೊಡಲಾಗದ ಆತ ಮೊರೆ ಹೊಕ್ಕಿದ್ದು ಈ ಬ್ಲಾಗೆಂಬ ಮಹಾಸಾಗರದಲ್ಲಿ. ಅದು ಗೊತ್ತಿದ್ದುದು ನನಗೆ ಮಾತ್ರ ."ಮಾತಿರದ ಅಕ್ಷರಗಳು" ಇದಲ್ಲವೇ ಆತನ ಬ್ಲಾಗಿನ ಶೀರ್ಷಿಕೆ . ತನ್ನ ಬದುಕಿನ ಕಥೆಯೆಲ್ಲವನ್ನೂ , ಭಾವನೆಯನ್ನೂ ಅಕ್ಶರದ ರೂಪದಲ್ಲಿರಿಸುತ್ತಿದ್ದ. ಎಲ್ಲೂ ತನ್ನ ಪರಿಚಯ ಮಾಡಿಕೊಂಡಿರಲಿಲ್ಲ. ’ಅಕ್ಷರಿಗ’ ಎಂಬ ಹೆಸರನ್ನೇ ತನ್ನ ಮೇಲ್‌ಗೆ ಇಟ್ಟಿದ್ದ . ಒಂದು ಚಿಪ್ಪಿನಲ್ಲಿಯೇ ಉಳಿದಿದ್ದ. ಅವನು ಈ ’ನಿರೀಕ್ಷೆ’ ಎಂಬ ಮುದ್ದು ಹುಡುಗಿಯ ಬಲೆಗೆ ಹೇಗೆ ಬಿದ್ದನೋ ಗೊತ್ತಿಲ್ಲ. ಆದರೆ ಅವಳನ್ನೇ ಆರಾಧಿಸಿದ ಮೊಗವನ್ನೂ ಕೂಡ ನೋಡದೆ. ಅವಳೂ ಅಷ್ಟೇ ಅವನ ಪ್ರೀತಿಗೆ ಬಿದ್ದಿದ್ದಳು. ಆದರೆ ತನ್ನ ಹೆಸರನ್ನೂ ಹೇಳಿರಲಿಲ್ಲ. ಅವಳೂ ಅಷ್ಟೆ ತನ್ನ ನಿಜ ಹೆಸರನ್ನು ತಿಳಿಸಿರಲಿಲ್ಲ. ನಿರೀಕ್ಷೆ ಎಂದು ಹೆಸರನ್ನಿಟ್ಟಿಕ್ಕೊಂಡಿದ್ದಳು.ಅದು ಅವರು ತಮ್ಮಪ್ರೇಮವನ್ನು ಪರೀಕ್ಷೈಸಿಕೊಳ್ಳುವ ಪರಿಯಂತೆ


ಇದೆಲ್ಲಾ ನನಗೆ ಮಾತ್ರ ಗೊತ್ತಿತ್ತು. ಎಷ್ಗ್ಟೊ ಬಾರಿ ನಾನೆ ಅವನಿಗೆ ಬೈದಿದ್ದೆ. ಈ ಥರಾ ಭ್ರಮಾಲೋಕದಲ್ಲಿ ಯಾಕೆ ಬದುಕುತೀಯಾ ಎಂದು. ಜೊತೆಗೆ ಕಂಪೆನೀಲಿ ಕೆಲ್ಸ ಮಾಡೋ ಅಂದ್ರೆ ಬ್ಲಾಗ್ಸ್ ಬರೆದು ಟೈಮ್ ವೇಸ್ಟ್ ಮಾಡ್ತಿಯಾ ಎಂದು ಕೀಟಲೆಮಾಡಿದ್ದೆ. ಆತ ನಗುತ್ತಿದ್ದ


ಆವತ್ತೂ ಅವಳ ಮೇಲ್ ಬಂದ ಖುಶಿಯಲ್ಲಿ ನನಗೆ ತೋರಿಸಿದ. ಇಬ್ಬರೂ ಭಾನುವಾರದ ಸಂಜೆ ಭೇಟಿಯಾಗುವ ಮನಸು ಮಾಡಿದ್ದರು. ಕೇವಲ ಬಟ್ಟೆಯ ಆಧಾರದ ಮೇಲೆ ಗುರುತಿಸುವುದು. ನನಗೋ ನಗು. ಕೊನೆಗೆ ಆಲ್ ದಿ ಬೆಸ್ಟ್ ಹೇಳಿ ಕ್ಯಾಬಿನ್‌ಗೆ ಬಂದು ಪ್ರೀತಿಗೆ ಇಂಥಾ ಶಕ್ತಿ ಇದ್ಯಾ ಎಂದು ಯೋಚಿಸಿದ್ದೇ ಬಂತು. ಏಕೆಂದರೆ ನನಗೇನೂ ಅದರ ಅನುಭವ ಆಗಿರಲಿಲ್ಲವಲ್ಲ.

ಯಾಕೋ ಯಾರೆ ನೀನು ಚೆಲುವೆ ಬೇಡಾವೆಂದರೂ ನೆನಪಾಗುತ್ತಿತ್ತು


ಆದರೆ ಅವರಿಬ್ಬರ ಮಿಲನಕ್ಕೆ ವಿಧಿಯ ಸಮ್ಮತಿ ಇರಲಿಲ್ಲವೇನೋ. ಮದ್ಯಾಹ್ನ ಬೇಗನೆ ಖುಷಿಯಲ್ಲಿ ಹೋಗುತ್ತಿದ್ದವ ಎದುರು ಯಮ ದೂತನಾಗಿದ್ದ ಲಾರಿಯನ್ನು ಗಮನಿಸಲಿಲ್ಲ. ಅವನನ್ನು ಜಜ್ಜ್ಜಿಹಾಕಿತ್ತು. ಇದೊಂದು ರೀತಿಯ ಆಘಾತ ನನಗೆ. ಆತ್ಮೀಯ ಮಿತ್ರನ ಮರಣ ನನ್ನನ್ನು ಮಂಕಾಗಿಸಿದರೂ ಅವನ ಪ್ರೀತಿಯ ಹುಡುಗಿಗೆ ಈ ವಿಷಯ ತಿಳಿಸಲೇಬೇಕಿತ್ತು. ಅಂದು ಭಾನುವಾರ ಪ್ರೀತಮ್‍ನ ಮೇಲ್ನಲ್ಲಿ ಇದ್ದಂತೆ ಹಳದಿ ಹಾಗು ಕೆಂಪು ಚೌಕಳಿ ಇರುವ ಶರ್ಟ್ ಹಾಕಿಕೊಂಡು ಆ ’ನಿರೀಕ್ಷೆ’ಯನ್ನು ಮೀಟ್ ಮಾಡಲೆಂದು ಬಂದೆ.


ಅವಳಿಗೆ ಹೇಗೆ ಸಮಾಧಾನ ಮಾಡಬೇಕೆಂಬ ಯೋಚನೆಯಲ್ಲಿ ನಿಂತವನ ಎದುರಿಗೆ ಬಂದು ನಿಂತ ಆ ಅಪ್ಸರೆ ಮನಸನ್ನು ಸೂರೆ ಮಾಡಿಬಿಟ್ಟಳು. ತಾನೇ ಆ ’ನಿರೀಕ್ಷೆ’ ಎಂದವಳ ಮಾತಿಗೆ ಅವಳ ನಿನಾದಕ್ಕೆ ,ಕೊರಳು ಕೊಂಕಿಸುವ ರೀತಿಗೆ ನಗುವ ಮೋಡಿಗೆ ಬಲಿಯಾಗಿಬಿಟ್ಟೆ. ಅವಳಿಗೆ ನಾನ್ಯಾರು ಎಂದು ಹೇಳಬೇಕೆಂಬ ಯೋಚನೆಯೂ ಬರಲಿಲ್ಲ ನನ್ನನ್ನೆ ಅವಳು ’ಅಕ್ಷರಿಗ’ ಎಂದುಕೊಂಡಳು. ನಾನು ಇಲ್ಲವೆನ್ನಲಿಲ್ಲ. ನನ್ನಹೆಸರನ್ನು ಹೇಳಿಕೊಂಡೆ . ಅನಿಲ್’


ಆಗಲೆ ಆ ಸುಂದರ ಹೆಣ್ಣಿನ ಹೆಸರೂ ಇನ್ನೂ ಸುಂದರ .’ ಪ್ರಣತಿ ’ಎಂದು ತಿಳಿಯಿತು

ಅಂತಹ ಸುಂದರಿ ನನ್ನನ್ನು ಎಷ್ಟೊಂದು ಹಚ್ಚಿಕೊಂಡು ಬಿಟ್ಟಿದ್ದಾಳೆ.

ನಾಳೆ ನಮ್ಮ ಎಂಗೇಜ್ ಮೆಂಟ್ . ನನ್ನ ಅಲ್ಲಲ್ಲ ’ಅಕ್ಷರಿಗ’ ಹಾಗು ’ನಿರೀಕ್ಶೆ’ಯ ಎಂಗೇಜ ಮೆಂಟ್. ನಾನು ’ಅಕ್ಷರಿ’ಗನ ವೇಷದಲ್ಲಿರುವ ವಂಚಕ ಎಂದು ತಿಳಿದರೆ ಅವಳ ಮನಸಿಗೆ ಎಷ್ಟು ನೋವಾದೀತು. ಆದರೆ ನಾನು ಅವಳು ನನ್ನನ್ನು ಪ್ರೀತಿಸಲಿ ಎಂದು ಬಯಸುತ್ತೇನೆ. ಜೀವನವೆಲ್ಲಾ ’ಪ್ರೀತಮ‌’ನ ಹಂಗಲ್ಲಿ ಇರುವುದು ಯಾಕೋ ಬೇಡವೆನ್ನುತ್ತಿದೆ ಮನಸು. ಒಂದೊಮ್ಮೆ ಅವಳು ಒಪ್ಪದೇ ಹೋದರೆ

ಇಲ್ಲಾ ಹೇಳಿಬಿಡುವುದೇ ಒಳ್ಳೇಯದು. ಅವಳ ನಿರ್ಧಾರ ಏನೆ ಆಗಲಿ

ಗಟ್ಟಿ ಮನಸು ಮಾಡಿಕೊಂಡೆ ಪ್ರಣತಿಗೆ ಫೋನ್ ಮಾಡಿದೆ.

ಹೋಟೆಲ್ ವುಡ್‌ಲ್ಯಾಂಡ್ಸ್ನ ಎದುರಲ್ಲಿದ್ದ ಲಾನ್‍ ನಮ್ಮ ಮುಂದಿನ ಮಾತುಕತೆಗೆ ಸಾಕ್ಷಿಯಾಗುವುದರಲ್ಲಿತ್ತು. ಪ್ರಣತಿ ಬಂದಳು. ಮಂಜಿನಲ್ಲಿ ಮುಳುಗೆದ್ದ ಹೂವಿನ ಸೌಂದರ್ಯ ಅವಳದು.

ಈ ಸೌಂದರ್ಯವೇ ತನ್ನನ್ನು ವಂಚಕನನ್ನಾಗಿ ಮಾಡಿದ್ದೆ. ಕಣ್ಣು ಮುಚ್ಚಿದೆ ಮತ್ತೆ ಕರಗಬಾರದೆಂದು

ಬಂದು ಕೂತಳು

ನನ್ನ ಕೈ ಅವಳ ಕೈನಲ್ಲಿ ಬಂಧಿಯಾಯ್ತು.

ನಿಧಾನವಾಗಿ ಕೈ ಬಿಡಿಸಿಕೊಂಡು ಎದ್ದು ನಿಂತೆ ಅವಳತ್ತ ಬೆನ್ನು ಮಾಡಿ

ಎಲ್ಲವನ್ನೂ ಹೇಳಿಬಿಟ್ಟೆ. ಮುಖ ನೋಡಲು ಧೈರ್ಯ ಸಾಲಲಿಲ್ಲ.

ಸ್ವಲ್ಪ ಹೊತ್ತು ಮೌನ

ಇದೇನು ಅವಳಿಂದ ಮಾತಿಲ್ಲ ಎಂದು ಅವಳತ್ತ ತಿರುಗಿದೆ

ಅವಳ ಕಣ್ಣಲ್ಲಿ ನೀರು.

ಕೊಂಚ ಹೊತ್ತು ಹಾಗೆ ನಿಂತವಳು .

"ನೀವು ನನ್ನನ್ನ ಅಂಧಾಕಾರದಲ್ಲಿಟ್ರಿ ಇಷ್ಗ್ಟು ದಿನಾ. ನಾನು ಪ್ರೀತಿಸಿದ್ದು ’ಅಕ್ಷರಿಗ’ನನ್ನ . ಅವರ ಮುಖ ನೋಡದೆ ಅವರ ಹೆಸರು ಕೇಳದೆ ಕೇವಲ ಅವರ ಬರಹವನ್ನೇ ಪ್ರೀತಿಸಿದೆ, ಆದರೆ ನೀವು ಹೀಗೆ ಮಾಡಬಾರದಿತ್ತು . ನಿಮ್ಮ ಪ್ರಾಣ ಸ್ನೇಹಿತನ ಪ್ರಿಯತಮೆಯನ್ನ ಮೋಸ ಮಾಡಿಬಿಟ್ರಿ"

ನಾನು ಸುಮ್ಮನಾಗಿಬಿಟ್ಟೆ. ಇದೆಲ್ಲಾ ಬೇಕಾಗಿತ್ತು ನನಗೆ ಎಂದುಕೊಂಡೆ

"ಆದರೆ ನಿಜ ವಿಷಯ ಹೇಳಿ ನನ್ನನ್ನ ಗೆದ್ದುಬಿಟ್ರಿ " ಆಕೆಯ ಮಾತು ಮುಂದುವರೆಯುತ್ತಿದ್ದಂತೆ

ನಾನು ಚಕಿತನಾದೆ

ನಾನು ನಿಮ್ಮನ್ನ ಮುಟ್ಟಲು ಬಂದಾಗಲೆಲ್ಲಾ ನೀವು ದೂರ ಹೋಗುತ್ತಿದ್ದುದ್ದನ್ನ ಕಂಡು ಸಂಕೋಚವಿರಬಹುದು ಎಂದುಕೊಂಡಿದ್ದೆ ಆದರೆ ನಿಮ್ಮ ಮನಸಲ್ಲಿ ಇಂತಾ ತುಮುಲವಿತ್ತು ಎಂದು ಈಗ ತಿಳಿಯುತ್ತಿದೆ . ನಿಮ್ಮ ಹೃದಯದಲ್ಲಿ ಎಂತಾ ಬಿರುಗಾಳಿ ಎದ್ದಿರಬಹುದು ಎಂದೂ ನಾನು ಊಹಿಸಬಲ್ಲೆ. ನೀವು ಒಳ್ಳೆಯವರೇ ನಿಜ ಆದರೆ ನಾನು ಈಗಲೇ ಯಾವುದನ್ನೂ ನಿರ್ಧರಿಸಲು ಅಶಕ್ಯೆ. ನಮ್ಮ ಎಂಗೇಜ್‌ಮೆಂಟ್ ನಾಳೆ ನಡೆಯಲೂ ಬಹುದು ಅಥವ ಇಲ್ಲದೇ ಇರಬಹುದು ಏನೆ ಆಗಲಿ ನಾನಂತೂ ನಿಮ್ಮ ಗೆಳತಿಯಾಗಿರಲು ಬಯಸುತ್ತೇನೆ "

ಅವಳು ನುಡಿದು ಭಾವನೆಗಳ ತೀವ್ರತೆ ತಾಳಲಾರದವಳಂತೆ ಕಾರಿನತ್ತ ಓಡಿದಳು

ಅವಳ ಮಾತು ಸಂತಸ ತಂದಿತು. ಅವಳು ನನಗೆ ದಕ್ಕುತ್ತಾಳೋ ಇಲ್ಲವೋ ಎಂಬ ಯೋಚನೆಗಿಂತ ಅವಳ ದೃಷ್ಟಿಯಲ್ಲಿ ನಾನು ಬೀಳಲಿಲ್ಲವಲ್ಲ ಎಂಬುದೇ ಹೆಮ್ಮಯ ವಿಷಯವಾಗಿತ್ತು

ನಾಳೆಯ ಫಲಿತಾಂಶ ಏನೆ ಆಗಲಿ ನಾನು ನಾನಾಗಿದ್ದೆ. ಅವಳು ನಿರಾಕರಿಸಲಿ ಅಥವ ಬಯಸಲಿ ಅದು ನಾನೇ, ಅನಿಲ್ ಆಗಿರುತ್ತೇನೆ . ಇದು ಅನಿಲ್‌ನ ಫಲಿತಾಂಶ

ನಾಳೆಗಾಗಿ ಕಾಯತೊಡಗಿದೆ

**************************************

Tuesday, March 30, 2010

ಬಾಗಿಲ ಚಿಲಕ

ಆತನೇನೋ ಆಹ್ವಾನ ನೀಡಿದ್ದ. ಮರುಭೂಮಿಯಾಗಿದ್ದ ದೇಹಕ್ಕೆ ಪ್ರೀತಿ ನೀರಿನ ಸಿಂಚನ ಮಾಡುವುದಾಗಿ ಹೇಳಿದ್ದ . ತೊಳಲಾಟದಲ್ಲಿ ಸಿಕ್ಕಿದ್ದಳು. ಒಪ್ಪುವುದೇ ಬೇಡವೇ? ಗಂಡನಂತೂ ಇನ್ನು ಒಂದು ವರ್ಷ ಬರುವುದಿಲ್ಲ. ಮಾನಸಿಕವಾಗಿ ಗಂಡನನ್ನೇ ಪ್ರೀತಿಸುತ್ತಿದ್ದರೂ ದೈಹಿಕ ಬಯಕೆಗಳನ್ನೆಂತು ಸಮಾಧಾನಗೊಳಿಸುವುದು? ಆಗಲೇ ಸಿಕ್ಕಿದ್ದ ಈ ಪೋರ ಮಾತಿನಲ್ಲಿಯೇ ಅರಮನೆಯನ್ನೇ ತೋರಿದ್ದ. ಮೌನದ ಅವಧಿಯಲ್ಲೂ ಅವಳ ನೆನಪಿನ ಭಾಗವಾಗುತ್ತಿದ್ದ.

ಮಾತು ಮೌನಗಳ ಮೀರಿ ಅವಳು ಬಯಸಿದ ಭಾಗ್ಯ ಅವಳದಾಗುತ್ತಿದ್ದಾಗ ಅಹ್ವಾನ ತಿರಸ್ಕರಿಸಲು ಮನಸು ಬಾರಲಿಲ್ಲ . ರಾತ್ರಿ ಬಾಗಿಲಿಗೆ ಚಿಲಕ ಹಾಕದಂತೆ ಹೇಳಿದ್ದ ಆತ . ಸಾಯಂಕಾಲವಾಗುತ್ತಿದ್ದಂತೆ ಬೆವರು ಹಣೆಯಲ್ಲಿ ಮುತ್ತಾಗುತಿತ್ತು . ಎದೆಯ ಡವಡವ ಅವಳಿಗೇ ಕೇಳುವಂತೆ ಹೊಡೆದುಕೊಳ್ಳುತ್ತಿತ್ತು. ಕಂಪೆನಿಯಿಂದ ಮನೆಗೆ ಬಂದೊಡನೆ ಎಂದಿಗಿಂತ ಹೆಚ್ಚಾಗಿಯೇ ಅಲಂಕರಿಸಿಕೊಂಡಳು. ಕನ್ನಡಿಯಲ್ಲಿ ತನ್ನ ರೂಪು ನೋಡಿ ಅವಳಿಗೇ ಅಸೂಯೆಯಾಯಿತು. ಘಂಟೇ ಏಳಾಯಿತು. ಎಂಟು ಆಯಿತು. ತುಂಬಾ ಹೊತ್ತಿನ ತನಕ ಟೀವಿ ನೋಡುತ್ತಿದ್ದಳು. ಟಿವಿ ಆಫ್ ಮಾಡಿ ಮಂಚದ ಮೇಲೆ ಉರುಳಿದಳು

ಮನಸಲ್ಲಿ ಏನೇನೋ ಯೋಚನೆಗಳು . ಗಂಡನಿಗೆ ಮೋಸ ಮಾಡುತ್ತಿದ್ದೇನೇಯೇ ಎಂದೊಮ್ಮೆ ಅಳುಕಾಯ್ತು. ಇಲ್ಲ ಅವನೂ ಆ ಊರಲ್ಲಿ ಹೀಗೆ ಮತ್ತೊಬ್ಬಳೊಡನೇ .. ಛೆ ಛೆ ಇಲ್ಲ ಅವನು ಅಂತಹವನಲ್ಲ. ಕೇವಲ ದೈಹಿಕ ಬಯಕೆಗೆ ಈಡಾಗುವ ಗಂಡು ಅವನಲ್ಲ.

ಅವನು ಹಾಗಿಲ್ಲ್ದದಿದ್ದಲ್ಲಿ ತಾನೇಕೆ ಹೀಗೆ?

ಪ್ರಶ್ನೆ ಮನಸಲ್ಲಿ ಮೂಡುತ್ತಿತ್ತು. ಉತ್ತರ ಕೊಡಲು ಆಗಲಿಲ್ಲ ಎಂಬುದಕ್ಕಿಂತ ಅವಳೇ ಪ್ರಶ್ನೆಯನ್ನು ಅಳಿಸಿದಳು.

ಹಾಗೆ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದಂತೆ . ಏನೋ ನೆನಪಾದವಳಂತೆ ಬಾಗಿಲ ಬಳಿ ಹೋಗಿ ಬಂದಳು

ಅಂದು ರಾತ್ರಿ ಕಳೆಯಿತು.

ಸಮಾಧಾನದ ನಿದ್ದೆಯಿಂದ ಎಚ್ಚೆತ್ತಳು.



ಬೆಳಗ್ಗೆ ಆತನ ಫೋನ್ ಬಂತು

"ಬಾಗಿಲ ಚಿಲಕ ಏಕೆ ಹಾಕಿದ್ದೆ?"

"ಬಾಗಿಲು ಭದ್ರವಾಗಿರಲಿ ಅಂತ"ಹೇಳಿ ಫೋನ್ ಆಫ್ ಮಾಡಿದಳು, ಎದುರಿದ್ದ ಗಂಡನ ಫೋಟೋ ಸಮಾಧಾನದ ನಗೆ ನಕ್ಕಂತೆ ಕಂಡಿತು

Friday, March 5, 2010

ಸಾಧ್ಯವಾದಾಗಲೆಲ್ಲ ನಿನ್ನನ್ನು ಇರಿಯಲು ಕಾಯುತ್ತಿರುತ್ತದೆ ಈ ಸಮಾಜ

ಅಪ್ಪಾ,
ನನಗೆ ಗೊತ್ತು ನನ್ ಪತ್ರ ನೋಡುತ್ತಿದ್ದಂತೆ ಇವಳೇಕೆ ಪತ್ರ ಬರೆದಳು ಎಂದು ಎಲ್ಲರೆದುರಿಗೆ ಹಾರಾಡಿ ಕೊನೆಗೆ ಪತ್ರವನ್ನ ಚಿಂದಿ ಚಿಂದಿ ಮಾಡಿ ಕಸದ ಬುಟ್ಟಿಗೆ ಎಸೀತೀಯಾ . ಆದರೆ ನಿನ್ನ ಕಣ್ಣೀರು ಮಾತ್ರ ಕಟ್ಟೇಯೊಡೆಯೋಕೆ ಕಾಯ್ತಾ ಇರುತ್ತೆ. ಯಾರು ಇಲ್ಲದ ಸಮಯಾ ನೋಡಿ ಕಸದ ಬುಟ್ಟಿಯಿಂದ ನನ್ನ ಪತ್ರಾನ ಆಯ್ದು ತಂದು ಬಿಕ್ಕಳಿಸಿ ಬಿಕ್ಕಳಿಸಿ ಅಳ್ತೀಯಾ ಅಂತಾ. ಹಾಗೆ ಮಾಡೋಕೆ ಮುಂಚೆ ಇದನ್ನ ಓದು ಪ್ಲೀಸ್ ಇಪ್ಪತ್ತು ವರುಷ ನೀನೆ ಬೆಳೆಸಿದ ನಿನ್ನ ಗೊಂಬೆಗೋಸ್ಕರ .
ಯಾಕಪ್ಪಾ ಈ ನಾಟಕಾ? ಯಾರಿಗಾಗಿ ನಾಟಕಾ? ನಾವು ನಾವಾಗಿ ಇರೋಕೆ ಬಿಡದ ಈ ಸಮಾಜಕ್ಕಾ? ಅಥವಾ ನಮ್ಮನ್ನು ನೆಮ್ಮದಿಯಿಂದ ಇರೋಕೆ ಬಿಡದ ಈ ನೆಂಟರಿಗಾಗಿಯಾ?
ಈ ಇಳಿ ವಯಸಲ್ಲಿ ನಾನು ನಿಂಗೆ ಕೊಡಬಾರದ ನೋವು ಕೊಟ್ಟೇ ಅಂತ ನಿಂಗನ್ನಿಸುತ್ತಿದೆ. ಆದರೆ ನಂಗೆ ಏನನ್ನಿಸುತ್ತಿದೆ ಗೊತ್ತಾ. ಆ ನೋವನ್ನ ನೀನೆ ಮಾಡಿಕೊಂಡಿರೋದು. ನಿನ್ನ ಮಗಳಿಗಿಂತ ಈ ಸಮಾಜಾನೇ ಮುಖ್ಯಾಂತ ನೀನು ತಿಳ್ಕೊಂಡಿರೋದೆ ಇದಕ್ಕೆಲ್ಲಾ ಕಾರಣ.
ಅಪ್ಪಾ ಹೆಣ್ಣು ಅಮ್ಮನ ಹೊಟ್ಟೇಲಿ ಇರೋವರೆಗೂ ಅಮ್ಮಾನೆ ಸರ್ವಸ್ವ ಅಂತ ಅವಳ ಬೆಚ್ಚನೆಯ ಒಡಲಲ್ಲಿ ಹಾಯಾಗಿ ಇರುತ್ತಾಳೆ.ನಂತರ ತಾಯಿ ತನ್ನನ್ನ ಆ ಬೆಚ್ಚಗಿನ ಒಡಲಿಂದ ನೂಕಿಬಿಟ್ಟಳಲ್ಲ ಎಂದು ಅಳುತ್ತಾಳೆ. ನಾನೂ ಅತ್ತಿದ್ದೆ ಆದರೆ ಎತ್ತಿಕೊಳ್ಳಲ್ಲು ನನ್ನ ತಾಯಿ ಇರಲಿಲ್ಲ . ನೀನಿದ್ದೆ . ತಾಯಿಯನ್ನೂ ಮೀರಿಸುವ ಬೆಚ್ಚಗಿನ ಪ್ರೀತಿಯಲ್ಲಿ ನನ್ನನ್ನು ಮುಳುಗಿಸಿದೆ. ದೇವರು ಅಮ್ಮನನ್ನು ಕರೆದುಕೊಂಡೂ ನನಗೆ ಅಮ್ಮನ ಪ್ರೀತಿಯ ನೆನಪೇ ಆಗದಷ್ಟು ಅಗಾಧವಾಗಿ ಮಮತೆ ತೋರಿದ ಅಪ್ಪನನ್ನು ಕೊಟ್ಟ
ಹಾಗೆ ಅಪ್ಪಾ ನಾನೂ ನಿನ್ನ ಬಿಟ್ಟರೆ ಬೇರೆ ಲೋಕವೇ ಇಲ್ಲಾ ಎಂಬಷ್ಟು ನಿನ್ನನ್ನು ಪ್ರೀತಿಸುತ್ತಿದ್ದೆ. ಬದುಕಿನ ಯಾವ ಹಂತದಲ್ಲೂ ಅಮ್ಮನ ಕೊರತೆ ನನ್ನನ್ನು ಕಾಡಲಿಲ್ಲ. ಹುಡುಗಿ ಹೆಣ್ಣಾದ ಘಳಿಗೆಯನ್ನು ಮೊದಲು ಹೇಳುವುದು ಅಮ್ಮನಿಗೆ ಆದರೆ ಆ ವಿಷಯವೂ ಮೊದಲು ನಿನಗೆ ತಿಳಿದಿದ್ದು. ಇಂಟರ್ ನೆಟ್ನಿಂದ ನನಗಾಗಿ ಎಷ್ಟೊಂದು ವಿಷಯಗಳನ್ನು ಸಂಗ್ರಹಿಸಿಕೊಟ್ಟಿದ್ದೆ ನೀನು. ನಾನು ಹೊಟ್ಟೆನೋವು ಎಂದು ಅತ್ತಾಗ ಆ ನೋವು ನಿನ್ನ ಕಣ್ಣಿನಿಂದ ನೀರಾಗಿ ಬರುತ್ತಿತ್ತು. ಅಪ್ಪಾ ಅಪ್ಪಾ ನೀನು ನನಗಾಗಿ ಪಟ್ಟಕಷ್ಟ ನೋವು ನೆನೆಸಿಕೊಂಡರೆ ನಾನು ದೊಡ್ಡ ಅಪರಾಧಿ ಎಂದನಿಸುತ್ತದೆ. ಆದರೆ ಮರುಕ್ಷಣವೇ ನಾನು ಮಾಡಿದ್ದು ತಪ್ಪಲ್ಲ ಎಂದನಿಸಿ ಸಮಾಧಾನ ಮಾಡಿಕೊಳ್ಳುತ್ತೇನೆ
ಅಪ್ಪಾ ನಂಗೆ ನೆನಪಿದೆ ನಾನು ಆವತ್ತು ಹುಡುಗನೊಬ್ಬ ಹಿಂಬಾಲಿಸಿ ಹಾಡು ಹೇಳಿದ ಎಂದಂದ ಮಾತ್ರಕ್ಕೆ ಹುಡುಕಿಕೊಂಡು ಹೋಗಿ ಆತ ಸತ್ತೇ ಎಂದುಕೂಗುವಷ್ಟು ಹೊಡೆದದ್ದು. ಯಾವ ಹುಡುಗರ ನೆರಳೂ ಬೀಳದಂತೆ ನನ್ನನ್ನು ಕಾದಿದ್ದ ನಿನಗೆ ಪಕ್ಕದ ಮನೆಯಲ್ಲಿದ್ದ ಇರ್ಫಾನ್ ಕಾಣಿಸಲಿಲ್ಲ .
ಆದರೆ ಅವ ಕಂಡದ್ದು ನನಗೆ . ನನ್ನನ್ನು ನಿನ್ನಷ್ಟು ಪ್ರೀತಿಸಲೇ ಸಾಧ್ಯವಿಲ್ಲ ಎಂದುಕೊಳ್ಳುತ್ತಿದ್ದ ನನಗೆ ಪ್ರೀತಿ ಬೇರೆ ವಾತ್ಸಲ್ಯ ಬೇರೆ ಎಂದು ಕಲಿಸಿಕೊಟ್ಟ. ಅವನೂ ನನ್ನನ್ನು ಪ್ರಾಣಕ್ಕಿಂತ ಮಿಗಿಲಾಗಿ ಇಷ್ಟ ಪಟ್ಟ .

ಅಪ್ಪಾ ನಾನು ಮಾಡಿದ್ದು ತಪ್ಪಾಗಿರಲಿಲ್ಲ. ನಾನು ಅವನ್ನ ಮದುವೆಯಾಗುತ್ತೇನೆ ಎಂದು ಹೇಳಿದ್ದೇ ನಿನಗೆ ಇನ್ನಿಲ್ಲದ ಕೋಪ ಬಂತು. ಮಗಳು ಮಮಕಾರ ಎಲ್ಲಾ ಮಾಯವಾಯ್ತು. ಥೇಟ್ ಅದೇ ಭೈರಪ್ಪನವರ ಆವರಣದಲ್ಲಿನ ಅಪ್ಪನ ಥರಾ ಕೋಪಿಸಿಕೊಂಡೆ.ಮಗಳು ಸತ್ತೇ ಹೋದಳು ಎಂದು ನನ್ನ ಶ್ರಾದ್ದ ಮಾಡಿದೆ. ಲವ್ ಜಿಹಾದ್ ಎಂದು ನನ್ನನ್ನು ನನ್ನ ಇರ್ಫಾನ್‌ನನ್ನು ಕೋರ್ಟಿಗೆಳೆದೆ . ಕೊನೆಗೆ ನಾನು ನಿನ್ನ ವಿರುದ್ದವಾಗಿ ಮಾತಾಡಲೇ ಬೇಕಿತ್ತು. ಅಪ್ಪಾ ಆಗ ನನಗಾದ ಸಂಕಟ ಈ ಪತ್ರದಲ್ಲಿ ಬರೆಯಲಾಗುವುದಿಲ್ಲ.

ಅಪ್ಪಾ ಲವ್ ಅನ್ನೋದು ಪವಿತ್ರ ಅದನ್ನು ಜಿಹಾದ್ ಜೊತೆ ಒಡಗೂಡಿಸುವ ಕಲ್ಪನೆಯೇ ವಿಚಿತ್ರ ಎಲ್ಲೋ ಯಾರೋ ಒಬ್ಬ ಹಾಗೆ ಮಾಡುತ್ತಾನೆಂದರೆ ಪ್ರತಿಯೊಬ್ಬರೂ ಹಾಗೆಯೇ ಎಂದು ಭಾವಿಸಿ ಅವರನ್ನು ಅಪರಾಧಿಯಂತೆ ಕಾಣುವುದೇಕೆ? ಅಂತಹ ಪ್ರೀತಿ ಪ್ರೀತಿಯೇ ಅಲ್ಲಾ.
ಅಪ್ಪಾ ಇರ್ಫಾನ್ ನಿನ್ನ ಹಾಗು ಸಮಾಜದ ಪಾಲಿಗೆ ಏನೇ ಆಗಿರಬಹುದು. ನನ್ನ ಪಾಲಿಗೆ ಆತ ಕೇವಲ ನನ್ನ ಪ್ರೀತಿಯ ಹುಡುಗ.
ನಿನ್ನನ್ನು ಬಿಟ್ಟು ಬರುವುದು ಬಹಳ ಕಷ್ಟವಾಗಿತ್ತು ಆದರೆ ಇರ್ಫಾನ್‌ನಿಗಾದ ಅವಮಾನ ಅದಕ್ಕಿಂತ ದೊಡ್ಡದಿತ್ತು
ಈಗ ಪತ್ರ ಬರೆದ ಉದ್ದೇಶವೇನೆಂದರೆ

ನಾನೀಗ ಇರ್ಫಾನ್ ಮನೆಯಲ್ಲಿಯೂ ಇಲ್ಲ . ನಮ್ಮನ್ನು ಅಲ್ಲಿ ಸೇರಿಸಲಿಲ್ಲ ಎಂಬುದು ನಿನಗೆ ಚೆನ್ನಾಗಿ ಗೊತ್ತು .

ಸಣ್ಣ ಪುಟ್ಟ ಭಿನ್ನಾಭಿಪ್ರಾಯದ ಹೊರತು ನಾವಿಬ್ಬರೂ ಈಗ ಸುಖವಾಗಿದ್ದೇವೆ ನೀನು ನನ್ನನ್ನು ಪುಟ್ಟ ಗೊಂಬೆ ಎಂದು ಕರೆಯುತ್ತಿದ್ದೆ . ನಿನ್ನ ಪುಟ್ಟ ಗೊಂಬೆ ಮತ್ತೊಂದು ಪುಟ್ಟ ಗೊಂಬೆಯೊಂದಕ್ಕೆ ತಾಯಿಯಾಗಿದ್ದಾಳೆ.
ಈ ನಿನ್ನ ಪುಟ್ಟಗೊಂಬೆಯ ಪುಟ್ಟಿಯನ್ನು ನೋಡುವುದಕ್ಕೆ ಮನಸು ಎಳೆಯುತ್ತಿದ್ದರೂ ನೀನು ಬರುವುದಿಲ್ಲ ಎಂದು ಗೊತ್ತಿದೆ.

ಅಪ್ಪಾ ಒಂದು ತಿಳಿದುಕೋ . ನೀನು ಯಾವ ಸಮಾಜಕ್ಕಾಗಿ ನನ್ನನ್ನು ದೂರ್ ಅಟ್ಟಿದ್ದೀಯೋ ಆ ಸಮಾಜ ನಿನ್ನ ಮಗಳಂತೆ ನಿನಗೆ ಪ್ರೀತಿ ಕೊಡಲು ಸಾಧ್ಯವಿಲ್ಲ . ಪದೇ ಪದೇ ಸಾಧ್ಯವಾದಾಗಲೆಲ್ಲ ನಿನ್ನನ್ನು ಇರಿಯಲು ಕಾಯುತ್ತಿರುತ್ತದೆ. ಆ ಸಮಾಜ ನಿನಗೆ ಬೇಕಾ? ಅಮ್ಮನಂತೂ ಇಂತಹ ಸಮಯದಲ್ಲಿ ಇಲ್ಲಾ ನೀನಾದರೂ ಬರುವೆ ಏನೋ ಎಂದು ನಿನ್ನ ಬರುವಿಕೆಯನ್ನೇ ಕಾಯುತ್ತಿರುವ ಈ ನಿನ್ನಮುದ್ದು ಕಂದಾ ನಿನಗೇ ಬೇಡವಾ?
ನಿನ್ನ ಪುಟ್ಟ ಗೊಂಬೆ
ಶಮಿತಾ