Friday, April 13, 2012

ದಡವಿರದ ಸಾಗರ ೪


ಅಂದು ರಾತ್ರಿ ತೇಜು ಮನೆಗೆ ಬಂದಾಗ ಒಂದು ಘಂಟೆಯಾಗಿತ್ತು . ಎಲ್ಲರೂ ಮಲಗಿದರು . ಕೆಲಸದಾಕೆ ಕದ ತೆರೆದಳು. ಗೊತ್ತು ಅಮ್ಮನಾಗಲಿ ಅಪ್ಪನಾಗಲಿ ತನ್ನನ್ನು ಕಾಯುತ್ತಾ ಕೂರುವುದಿಲ್ಲ. ಕೂರುವವರು ಒಬ್ಬರೇ ತಾತ, ಹೋದರೆ ಉಪದೇಶ, ಅಭಿ ಆಗಲೆ ಬಂದಿದ್ದಾನೆ ಎಂದು  ಅಂಗಳದಲ್ಲಿ ನಿಂತಿದ್ದ ಅವನ  ಕಾರ್ ಹೇಳಿತ್ತು.
ಮೊದಲೇ ಮನಸು ರೋಸಿತ್ತು ಬೆಳಗಿನ ಘಟನೆಯಿಂದ ... ರೂಮಿಗೆ ಬಂದವಳೇ  ಹಾಸಿಗೆಯ ಮೇಲುರುಳಿದಳು ತೇಜು.
ಕಣ್ಣ ಮುಂದೆ ಪಿವಿಆರ್ ನ ಬಳಿಯ ಘಟನೆಯೇ .
"ಹಲ್ಲೋ ವಾಟ್ ಡು ಯು ಥಿಂಕ್ ಆಫ್ ಯುವರ್ ಸೆಲ್ಫ್?ಪ್ರಪಂಚದಲ್ಲಿರೋ ಹುಡುಗರೆಲ್ಲಾ ನಿಮ್  ಹಿಂದೆ ಜೊಲ್ಲು ಬಿಟ್ಟುಕೊಂಡು ಬರ್ತಾರೆ ಅಂತ ಅನ್ಕೊಂಡಿದ್ದೀರಾ?ಹೇಗೆ,ನೀವೇನು ಮಿಸ್ ಯೂನಿವರ್ಸ್ ಆ ಅಥವ ಮಿಸ್ ವರ್ಡ್? ಏನು . ಲಾಲ್ ಭಾಗ್ ಚೆನ್ನಾಗಿದೆ ಅಂತ ನೋಡ್ತೀವಿ ಹಾಗಂತ .....ಲಾಲ್ ಬಾಗ್ ನೇ ಕೊಂಡ್ಕೊಳ್ಳೋದಿಲ್ಲಮ್ಮ .ಸಾಕು ಏನೂ ಮಾತಾಡ್ಬೇಡಿ . ಐ ಹೇಟ್ ಯು ಬ್ಲಡಿ  ಮಡ್ದಿ ಗರ್ಲ್ಸ್. "
ಆ ಹುಡುಗ ಬಡಬಡಿಸುತ್ತಲೇ ಇದ್ದ, ತೇಜುವಿನ ಮೊಗ ಕೆಂಪಗಾಗಿತ್ತು. ಮಾತನಾಡಲೂ ಆಗದಷ್ಟು ಶಾಕ್ ಆಗಿದ್ದಳು, ಈಗ ತಾನೆ ಹಾಯ್ ಹೇಳಿದ್ದ, ಎಲ್ಲಾ ಗಂಡು  ಮಿಕಗಳಂತೆ ಇವನೂ ಬಲೆಗೆ ಬಿದ್ದಂತೆಯೇ ಎಂದುಕೊಂಡು ಸ್ನೇಹಿತೆಯರ ಜೊತೆಯಲ್ಲಿ ಅವನೊಡನೆ ಕಾಫೀ ಡೇಗೆ ನುಗ್ಗಿದ್ದಳು.
ಎಂದಿನಂತೆ ಹುಡುಗರನ್ನು ರೇಗಿಸಿಮಜ ತೆಗೆದುಕೊಳ್ಳುವ ಶೈಲಿಯಲ್ಲಿಯೇ ಮಾತು ಶುರುಮಾಡಿದ್ದಳು.
"ನಿಮ್ಮನ್ನ ನೆನ್ನೆ ನಮ್ ಮನೆ ಹತ್ತಿರ ನೋಡಿದ್ದೆ" ಕಾಫಿ ಕಪ್ ಅನ್ನು ತುಟಿಗೆ ಸೋಕಿಸುತ್ತಾ ನುಡಿದಳು.
"ಹೌದಾ ಎಲ್ಲಿದೆ ನಿಮ್ ಮನೆ?"ಆತ ಕೇಳಿದಾಗ ಒಂದು ಕ್ಷಣ ತಬ್ಬಿಬ್ಬಾದಳು
"ನೆನ್ನೆ ಸಾಯಂಕಾಲ ಏಳು ಘಂಟೆಗೆ . ನಾನು ಹೊರಗಡೆ ಹೋಗ್ತಾ ಇದ್ದಾಗ ಯು ಸಾ ಮಿ" ಮೋಹಕ ನಗೆ ನಕ್ಕಳು
"ಮೇ ಬಿ, ದಾರೀಲಿ ಹೋಗ್ತಾ ಇದ್ದಾಗ ಎಷ್ಟೊಂದು ಜನರನ್ನ ನೋಡಿರ್ತೀನಿ ಹೌ ಕ್ಯಾನ್ ಐ ರಿಮೆಂಬರ್ " ಉಡಾಫೆ ಇಂದ ಹೇಳಿದ
ಅವನ ಉಡಾಫೆ ಕೆಣಕಿತು
"ಯಾಕೆ ಸುಳ್ಳು ಹೇಳ್ತಿದೀರಾ? ನೆನ್ನೆ ಮಾತ್ರ ಅಲ್ಲ ಮೂರು ದಿನದಿಂದ ನನ್ನನ್ನೆ ಫಾಲೋ ಮಾಡ್ತಿದೀರ.  ಡು ಯು ಥಿಂಕ್ ಯು ಆರ್ ಟೂ ಸ್ಮಾರ್ಟ್?"

ಆತನಿಗೇನನಿಸಿತು. ಇದಕ್ಕಾಗಿಯೇ ಕಾದವನಂತೆ ಎಲ್ಲರ ಮುಂದೆಯೂ  ಬಡಬಡಿಸಿದ್ದ. ಇದೆಲ್ಲಾ ತನ್ನದೇ  ಮಾತುಗಳು. ಹಿಂದೆ  ಇದೇ ಜಾಗದಲ್ಲಿ   ಹುಡುಗರಿಗೆ  ಬೈಯ್ಯುತಿದ್ದ ಮಾತುಗಳು ನೆನಪಾದವು.

"ಹಲ್ಲೋ ವಾಟ್ ಡು ಯು ಥಿಂಕ್ ಆಫ್ ಯುವರ‍್  ಸೆಲ್ಫ್? ನನ್ ಹಿಂದೆ ಇಡೀ ಪ್ರಪಂಚಾನೆ ಇದೆ, ಅವರನ್ನೆಲ್ಲಾ ಬಿಟ್ಟು ಹೌ ಕ್ಯಾನ್ ಯು ಥಿಂಕ್ ಐ ಕ್ಯಾನ್ ಈವನ್ ಲುಕ್ ಅಟ್ ಯು? ದಾರೀಲಿ ಹೋಗ್ತಾ ತಾಜ್ ಮಹಲ್ ನೋಡಿ ಅದು ನಂಗೆ ಬೇಕು ಅನ್ನೋಹಾಗೆ ಮಾತಾಡಬೇಡ. ನಿನ್ ಪೊಸಿಶನ್  ಏನು ತಿಳ್ಕೋ ಸಾಕು ಈಡಿಯಟ್"

ಅವಮಾನವಾಗಿತ್ತು , ಮೈ ಉರಿಯುತ್ತಿತ್ತು . ಯಾರ ಜೊತೆಯಲ್ಲಿಯೂ ಮಾತನಾಡದೆ ತನ್ನ ಆಫೀಸಿನ ಕ್ಯಾಬಿನ್ ಅಲ್ಲಿ ಕೂತಿದ್ದಳು ಎಷ್ಟು ಹೊತ್ತು ಕೂತಿದ್ದಳೋ. ಗೊತ್ತಿಲ್ಲ ತಾತನ ಕಾಲ್ ಬಂದಾಗ ಎಚ್ಚರವಾಗಿತ್ತು.  ಆಗ ಎದ್ದು ಬಂದದ್ದು.
ಸೇಡು ಅದೇ ಕಾಫಿ ಡೇ ಯಲ್ಲಿ ಅವನನ್ನು ತುಚ್ಚೀಕರಿಸದೆ ಇದ್ದಲ್ಲಿ ತಾನು ತೇಜಸ್ವಿನಿ ಅಲ್ಲ. ಹಲ್ಲು ಕಡಿದಳು. ಕಣ್ಣುಗಳು ನಿದ್ದೆ ಮಾಡದೆ ಮುಷ್ಕರ ಹೂಡಿದವು.

ಅದೇ ಸಮಯಕ್ಕೆ ಅವಳ ರೂಮಿನ ಪಕ್ಕದಲ್ಲಿಯೇ ಮತ್ತೊಂದು ಹೃದಯ  ಯೋಚಿಸುತ್ತಿತ್ತು  ನಿದ್ರಿಸದೆ.
ಅದು ಅಭಿಯದ್ದು
"ಯಾರಿರಬಹುದು ಆ ಅನಾರ್ಕಲಿ? ಚಕೋರಿನಾ ಅಥವ ಫ್ರೆಂಡ್ಸಾ? ಅಥವ ಬೆಳದಿಂಗಳ ಬಾಲೆಯೇ
ಒಟ್ಟಿನಲ್ಲಿ ಅಣ್ಣ ತಂಗಿಯರ ಮನದಲ್ಲಿ ಒಂದೊಂದು ರೀತಿಯ ಕೋಲಾಹಲ .
(ಮುಂದುವರೆಯುವುದು)

Thursday, April 5, 2012

ಬಾನಲ್ಲಿ ರಂಗು ಬಂದಾಗ

ಸುರ್ ಚಿತ್ರದ ಒಂದು ಹಾಡಿನ ಅನುಕರಣೆ

ಬಾನಲ್ಲಿ ರಂಗು ಬಂದಾಗ ನೀ ಬಾರ
ಬಾಳಲ್ಲಿ ಚಂದ್ರ ನೀನಾಗು ನೀ ಬಾರ

ಬಂದವ ನೀ ಮತ್ತೆ ನನ್ನ ಬಿಟ್ಟು ದೂರ ಹೋಗಬೇಡ

ಜೊತೆಯಲ್ಲಿ ಇರದಿರೂ ಜೊತೆಯಲೇ ಇರುವೆ ನೀ
ಆಡುವ ಮಾತದು ನಿನ್ನದೇ ಕಲಿಕೆಯೋ
ನೀನೇ ನನ್ನ ಒಳಗಿರುವೆ ನೀನೆ ನನ್ನ ಹೊರಗಿರುವೆ
ನಿನ್ನ ಕಂಡ ಕ್ಷಣದಿಂದ ನನ್ನ ನಾನೆ ಮರೆತಿರುವೆ

ಬಂದವ ನೀ ಮತ್ತೆ ನನ್ನ ಬಿಟ್ಟು ದೂರ ಸಾಗಬೇಡಾ

ದಿನವಿಡೀ ಹೃದಯದ ಬಡಿತವೂ ನಿನ್ನದೇ
ಜೀವದ ಆಣೆಗೂ ಜೀವವೂ ನಿನ್ನದೇ
ನೀನೆ ನನ್ನ ಕಣ್ಣಾಗಿರುವೆ ಒಂಟಿ ಬಾಳ ಪಯಣದಲಿ
ದೂರ ಏನೇ ಆಗಿರಲಿ ನಿನ್ನ ಜೊತೆಯೇ ನನಗಿರಲಿ

ಬಂದವ ನೀ ಮತ್ತೆ ನನ್ನ ಬಿಟ್ಟು ದೂರ ಸಾಗಬೇಡ

Saturday, October 22, 2011

ಪಾಂಚಾಲಿ ಪ್ರಲಾಪ


ಪಾಂಚಾಲಿ ಪ್ರಲಾಪ
ಈ ವಿಜಯಕ್ಕೆ ನಗಬೇಕೆ? ಇಲ್ಲ ಅಳಬೇಕೆ? ನನ್ನೈವರು ಪತಿ ಉಳಿದರು ಎಂದು ಸಂತಸ ಪಡಲೇ ಇವರಬಿಟ್ಟು ಇನ್ನೆಲ್ಲರನ್ನೂ ಕಳೆದುಕೊಂಡ ದುರದೃಷ್ಟತನಕ್ಕೆ ದು:ಖಿಸಲೇ.
ಭಗವಂತ ಎಂಬುವನು ನಿಜಕ್ಕೂ ಇದ್ದಾನೆಯೇ, ಕಣ್ಣಿಗೇ ಕಾಣೋ ದೇವರಂತೆ  ಈ ಕೃಷ್ಣ   ಅಣ್ಣ  ಕೂಡ, ಇವನೊಬ್ಬನೇ  ಈ ಬಾಳಿಗುಳಿದ ಸೌಭಾಗ್ಯವೇ?ಯುದ್ದ ಮುಗಿದ ನಂತರ ಆ ರಕ್ತದ ಹೊಳೆ ನೋಡಿ ಮತ್ತೆ ರಾಣಿಯಂತೆ ಬದುಕಬೇಕೆಂಬ ಆಸೆಯಿರಲಿ ಬದುಕುವಾಸೆಯೇ ಮುರುಟಿ ಹೋಗಿದೆ.....
ಆವತ್ತು ಹಾಳು ಅಶ್ವಥ್ತಾಮ ಒಬ್ಬರಲ್ಲಿ ಒಬ್ಬರನ್ನೂ ಉಳಿಸಬಾರದಿತ್ತೆ , ನನ್ನ ಕರುಳ ಕುಡಿ ಎಂದು. ಹೆಣ್ಣಿನ ಸೌಭಾಗ್ಯ ಪತಿ, ಅವರೆಲ್ಲಾ ಬದುಕಿದ್ದಾರೆ ಎಂದು ಸಂತೈಸುತ್ತಿರುವ ಅತ್ತೆಯ ನೋಡಿ ನಿನ್ನ ಮಕ್ಕಳಲ್ಲಿ ಯಾರದರೂಬ್ಬರನ್ನು ಕಳೆದುಕೊಂಡಿದ್ದರೂ ನಿರ್ಲಿಪ್ತಳಾಗುತ್ತಿದ್ದೆಯಾ ಎಂದು ಕೇಳಿದ್ದಕ್ಕೆ ಕೋಪಿಸಿಕೊಂಡು ದುರು ದುರುಗುಟ್ಟಿ ನೋಡಿ ಎದ್ದು ಹೋಗಿದ್ದಳು. ಸತ್ತ ಅಷ್ಟೂ ಮಕ್ಕಳ ನೋಡಿ ನಾನು ಅಳುತ್ತಿದ್ದರೇ ಆ ಸ್ವಾರ್ಥಿ ಗಂಡಂದಿರು , ಇವರಲ್ಲಿ ಯಾರು ಯಾರ ಮಕ್ಕಳಿದ್ದಿರಬಹುದು? ಅಳಬೇಕೆ ಬೇಡವೇ ಎಂದು ಯೋಚಿಸುತ್ತಿದ್ದಾಗ, ಕಣ್ಣೀರು ಕುದಿ ಕುದಿದು ಮರಗಟ್ಟಿ ಹೋಗಿತ್ತು

ಪಾಪಿಗಳು ಇವರು ಹೆಜ್ಜೆ ಇಟ್ಟಲ್ಲೆಲ್ಲಾ ಹೆಜ್ಜೆ ಇಟ್ಟೆ, ಒಬ್ಬ ಒಳ್ಳೆಯ ಗಂಡ ಸಿಗುವುದು ದುಸ್ತರವಾಗುತ್ತಿರುವ ಈಕಾಲದಲ್ಲಿ ಐವರು ಅತಿರಥ ಮಹಾರಥರೆಂದು ಹೆಸರು ಪಡೆದ ಈ  ಐವರೂ ನನ್ನನ್ನ ಮಡದಿ ಎಂದು ಪಾಣಿಗ್ರಹಿಸಿದಾಗ , ನಗಬೇಕೆ, ಅಳಬೇಕೇ ತಿಳಿಯದೇ ಕಕ್ಕಾಬಿಕ್ಕಿಯಾಗಿ ನಿಂತಿದ್ದೆ, , ಇದೇ  ಕುಂತಿ --ಯಾಕಾದರೂ ಐದು ಜನರನ್ನು ಹೆತ್ತಳೋ .
(ಐದು ಅದು ನೆನ್ನೆಯವರೆಗೆ, ಇಂದು ಆ ಸತ್ಯ ಕೂಡ ಗೊತ್ತಾಯಿತಲ್ಲ ಆ ಕರ್ಣನೂ ಇವಳ ಮಗನೇ ಅಂತೆ.)

 ಆ ಐದೂ ಜನರನ್ನ ಮದುವೆಯಾಗು ನಿನ್ನನ್ನು ಸುಖವಾಗಿ ನೋಡಿಕೊಳ್ಳುತ್ತಾರೆ ಎಂದಾಗ ಹಿರಿ ಹಿರಿ ಹಿಗ್ಗಿದ್ದೆ, ಅಪ್ಪ ಕಣ್ಣನು ತುಂಬಿಕೊಂಡು ನಿನಗೆ ಒಪ್ಪಿಗೆಯೇ ಎಂದಾಗ ಸಮ್ಮತಿಸಿದ್ದು ಕೂಡ ಆ ಕುಂತಿ ಹೇಳಿದ ಮಾತಿಗಾಗಿ.

ಮದುವೆಯಾದ ಕೆಲವು ವರ್ಷದಲ್ಲೇ ಇವರೆಲ್ಲರ ಗೋಳುಗಳು ತಿಳಿದದ್ದು, ಇವರ ದಾಯಾದಿಗಳು ಇವರ ಮೇಲೆ ದ್ವೇಷ ತುಂಬಿಕೊಂಡು ಇವರ ಅವನತಿಗೆ ಹೊಂಚು ಹಾಕುತ್ತಿದ್ದಾರೆಂದು. ಆಗಲೇ ಮತ್ತೊಂದು ಸತ್ಯ ಎದುರಾಗಿತ್ತು . ಅಪ್ಪ ದ್ರೋಣನ ಮೇಲಿನ ಕೋಪಕ್ಕಾಗಿ ತನ್ನನ್ನು ಅರ್ಜುನನಿಗೆ ಕೊಟ್ಟು ಮದುವೆ ಮಾಡುವುದಾಗಿ ಶಪಥ ತೊಟ್ಟಿದ್ದನಂತೆ. ಒಟ್ಟಿನಲ್ಲಿ ಇವರೆಲ್ಲರ ಆಸೆಗೆ, ಶಪಥಕ್ಕೆ ನಾನು ಬಲಿಯಾಗಿದ್ದೆ

ಆವತ್ತು ವೈಭೋವಪೇತ ಅರಮನೆಯಲ್ಲಿ  ನನಗೇನು ಕೊರತೆ ಎಂದು ಸ್ವಲ್ಪ ಅಹಂ ಬಂದಿದ್ದೇನೋ ನಿಜ, ಆಗಲೇ ಆ ದುರ್ಯೋದನ ಕಾಲು ಜಾರಿ ಬಿದ್ದದ್ದು ನಾನು ನಕ್ಕಿದ್ದು ,ಅದೇ ನನ್ನ ಕೊನೆಯ ನಗುವಾಗುತ್ತೆಂದು ತಿಳಿದಿತ್ತೇ

ಮತ್ತೆ ಹಸ್ತಿನಾಪುರಕ್ಕೆ ಹೋಗಬಾರದಿತ್ತು ಆದರೂ ಹೋಗಿದ್ದ ಈ ಧರ್ಮ ರಾಜ ಅವರುಗಳ ಹಿಂದೆ ನಡೆದಿದ್ದೆ ನಾನೂ , ಅಂದಿನಿಂದ ಅವರನ್ನ ಹಿಂಬಾಲಿಸುವುದೇ ತನ್ನ ಬಾಳ ಹಣೆಬರಹವಾಗಿತ್ತು
ಅಬ್ಬಾ ಏನೆಲ್ಲಾ ಆಗಿ ಹೋಯಿತು , ತುಂಬಿದ ಸಮಯದಲ್ಲಿ ನನ್ನ ವಸ್ತ್ರಾಪಹರಣವಾಗುತಲ್ಲಿತ್ತು ಈ ಗಂಡಂದಿರೆನಿಸಿಕೊಂಡ ಈ ಐವರೂ ವೀರರೂ ತಲೆ ತಗ್ಗಿಸಿ ಕೂತಿದ್ದರು, ಧರ್ಮನ ಧರ್ಮ ಅಧರ್ಮವ ವೀಕ್ಷಿಸುತ್ತಿತ್ತು ಕೇಕೆ ಹಾಕಿ ನಗುತ್ತಿತ್ತು

ಅಲ್ಲಿದ್ದ ಸಭಿಕರೆಲ್ಲಾ ನನ್ನ ಶರೀರದ ಭಾಗ ಎಲ್ಲಿ ಕಾಣುತ್ತದೆಯೋ ಎಂದು ಕುತೂಹಲಿಗಳಾಗಿ ನೋಡುತ್ತಿದ್ದರು ,

 ಹೆಣ್ಣು ಎಷ್ಟರ ಮಟ್ಟಿಗೆ ಅಸಹಾಯಕಳಾಗಬಹುದೋ ಅದಕ್ಕಿಂತ ಅಸಹಾಯಕ ಸ್ಥಿತಿಯನ್ನು ತಲುಪಿದ್ದೆ, ಹಾಳು ದುಶ್ಯಾಸನ ದಾಸಿ ಎಂದು ಜರಿದು  ಮೈಮೇಲಿನ್ ಬಟ್ಟೆಯನ್ನು  ಎಳೆಯುತ್ತಿದ್ದಾಗ  ಈ ಅಣ್ಣನ ಹೆಸರೊಂದೇ ಕಾಪಾಡಿದ್ದು

ಆ ಕೌರವರ ಮೇಲಿನ ಕೋಪಕ್ಕಿಂತ ನನ್ನನ್ನು ಅಸಹಾಯಕ ಸ್ಥಿತಿಯನ್ನು ತಲುಪಿಸಿದ ಆ ಧರ್ಮ ತನಗೆ ಕೊನೆಯವರೆಗೂ ಶತೃವಿನಂತೆಯೇ ಕಂಡಿದ್ದ

ಎಲ್ಲಾ ರೀತಿಯ ಕಷ್ಟ, ಇವರುಗಳ ಮೇಲಿನ ದ್ವೇಷಕ್ಕೆ ಕಾಣುತ್ತಿದ್ದುದು ನಾನೇ . ನನ್ನ ಸೌಂದರ್ಯವೇ ಆ ಮನೆಹಾಳು ಕಾಮುಕರ ಕಣ್ಣಿಗೆ ಕಂಡು  ಮಾನ ಬಯಲಾಗುವ ಸಮಯವು ಎಷ್ಟೋ ಬಂದಿತ್ತು. ಆಗೆಲ್ಲಾ ವಿಧಿಯೇ ತನ್ನ ಕಾಪಾಡುತ್ತಿತ್ತೇನೋ

ವನವಾಸದಲ್ಲಿ ಆ ಜಯದೃಥ  ಅಜ್ನಾತವಾಸದಲ್ಲಿ ಆ ಕೀಚಕ, ಅಬ್ಬಾ ಎಂತೆಂಥಾ ಕಾಮುಕರು, ಆಗೆಲ್ಲ ಅಲ್ಲಿಯವರೆಗೆ ಪೆದ್ದನಾಗಿ ಕಾಣುತ್ತಿದ್ದ ಭೀಮ ಕಾಪಾಡಿದ್ದ, ಅರ್ಜುನನಾಗಲೇ ಐದಾರು ಜನ ಹೆಂಡತಿಯರ ಸುಖ ಪಡೆದು  ಈ ಹೃದಯದಿಂದ ಹೊರ ನಡೆದಿದ್ದ.
ಅಂತೂ ನನ್ನ ಮಾನಕ್ಕೆ ಕೈ ಹಾಕಿದ ದುಷ್ಟರ ಸಂಹಾರವಾಗಿದೆ,
.................
ಮನಸು ಆತ್ಮ ಸಂತೃಪ್ತಿಯಿಂದ ಬೀಗಿದೆ, ಇಷ್ಟಕ್ಕೆಲ್ಲಾ ಕಾರಣರಾದ ಪತಿಯಂದಿರನ್ನು ಅದರಲ್ಲೂ ಭೀಮ ಅರ್ಜುನರನ್ನು ಕಂಡು ಮನಸು ಹೆಮ್ಮೆ ಪಡುತಿದೆ, ಇಬ್ಬರು ಅಣ್ಣಂದಿರು ಹೋದರೇನು ಸಹಸ್ರ ಜನ್ಮದಲ್ಲೂ ಯಾರಿಗೂ ಸಿಗದಂತಹ ಅಣ್ಣ ಕೃಷ್ಣನನ್ನ್ಜು ನೋಡಿ ವಂದಿಸಬೇಕನಿಸುತ್ತದೆ ಅಡಿಗಡಿಗೂ

ಆದರೂ...................... ಎಲ್ಲೋ ಒಂದು ಕಡೆ ನೋವು, ಹೇಳಲಾರದ ನಡುಕ, ಬವಣೆ

ನನ್ನಂತೇ ಸುತರನ್ನು ಕಳೆದುಕೊಂಡ ಇಷ್ಟೊಂದು ತಾಯಿಯರು, ನನಗಿನ್ನೇನು ಶಾಪ ಹಾಕುತ್ತಿದ್ದಾರೋ
ಸೌಭಾಗ್ಯ ಕಳೆದುಕೊಂಡ ಅದೆಷ್ಟೋ ಪುಟ್ಟ ವಿಧವೆಯರು, ಮನೆ ಮಾರು ಕಳೆದುಕೊಂಡ ಜನ ಸಾಮಾನ್ಯರು, ಇವರಿಗೆಲ್ಲಾ ಈ ಯುದ್ದ ಬೇಕಿತ್ತೇ
ನಾನು ನಮ್ಮೈವರ ಸೇಡಿಗಾಗಿ ಇವರೆಲ್ಲರನ್ನೂ ಕೊಂದು ಅವರ ಕನಸುಗಳ ಸಮಾಧಿಯ ಮೇಲೆ  ಮಹಾರಾಣಿಯಾಗಿ ಕೇಕೆ ಹಾಕಿ ಸಂತಸದಿಂದಿದ್ದರೆ, ಅಂದು ದುರ್ಯೋದನನ   ಜೂಜಿನಲ್ಲಿ ಸೋಲಿಸಿ ನಕ್ಕನಗೆಗೆ ಸಮನಾಗುವುದಿಲ್ಲವೇ?
ಮುಂದೆ ಇತಿಹಾಸದಲ್ಲಿ ಈ ಘೋರಕ್ಕೆ ಕಾರಣ ಎಂದು ನನ್ನನ್ನೇ ದೂರುತ್ತಾರಲ್ಲವೇ?......
(ಮಹಾ ಭಾರತದಲ್ಲಿ ಅಗ್ನಿ ಸುತೆ ಎಂದೇ ಹೆಸರಾಗಿರುವ ಪಾಂಚಾಲಿಯ ಮನದ ದುಗುಡ ಹೇಗಿದ್ದಿರಬಹುದೆಂದು ಚಿಂತಿಸಲು ಯತ್ನಿಸಿದ್ದೇನೆ . ಭೈರಪ್ಪನವರ ಪರ್ವವನ್ನು ಸುಮಾರು ಸಲ ಓದಿದ್ದುದರಿಂದ ಕೆಲವು ಸಾಲುಗಳು ಅದರಿಂದ ಪ್ರಭಾವಿತಗೊಂಡಿದೆ ಎಂಬುದನ್ನು ಒಪ್ಪುತ್ತೇನೆ. :) )