ಕಾರು ಮುಂದೆ ಚಲಿಸುತ್ತಿದ್ದರೂ ಮನಸ್ಸು ಮಾತ್ರ ಸ್ಠಿಮಿತದಲ್ಲಿರಲಿಲ್ಲ
ಕಣ್ಣಿನ ಮುಂದೆ ಏನೂ ಅಪರಾಧ ಮಾಡದೆ ಶಿಕ್ಷೆ ಅನುಭವಿಸುತ್ತಿರುವ ಅಪ್ಸರಾಳ ಮೊಗವೇ ಕಾಣ್ಣುತಿತ್ತು.
ಮನಸ್ಸು ಗೊಂದಲದ ಗೂಡಿನಲ್ಲಿ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿತ್ತು.
ಹೌದು ಅಪ್ಸರಾಳ ಆ ಮೊಗ ಮಂಗಳಾ ಎನ್ನುವ ಹದಿನೆಂಟರ ಹರೆಯದ ಆ ಮುಗ್ದ ಹೆಣ್ಣಿನ ಮೊಗವನ್ನೇ ಹೋಲುತ್ತಿತ್ತು.
ಅದಕ್ಕೆ ಸಾಕ್ಷಿಯೂ ಆ ಹಾಸ್ಪಿಟಲ್‌ನಲ್ಲಿ ಹುಡುಕಿದರೆ ಸಿಗುತ್ತಿತ್ತು.
ಆದರೆ ಆ ಧೈರ್ಯ ಬರಲಿಲ್ಲ ಯಾವುದಕ್ಕೂ ಇವರನ್ನು ಕೇಳಿ ಮುಂದುವರಿಯುವ ಎನ್ನುವ ಆಲೋಚನೆ ಬಂದಿತು
ಕೂಡಲೆ ಮೊಬೈಲ್‌ಗೆ ಕಾಲ್ ಮಾಡಿದೆ
"ಆ ನನಗೂತ್ತಿತ್ತು ನೀನೊಪ್ಕೋತೀಯಾ ಅಂತ , ಹೇಳು ಲಕ್ಷ್ಮಿ ಯಾವಾಗ ಇಟ್ಟುಕೊಳ್ಳೋಣ ಮೀಟಿಂಗ್" ಚಂದ್ರು ಸಂತೋಷವಾಗಿದ್ದರು.
"ರೀ ಅದಲ್ಲ ಅದೂ ..... ಇವತ್ತು ಒಂದು ವಿಷ್ಯ ಮಾತಾಡೋದಿದೆ"
" ಯಾವ ವಿಷ್ಯ?" ಗಡುಸಾಯ್ತು ದ್ವನಿ
ಮುಂದೆ ಮಾತಾಡೂವ ಧೈರ್ಯ ಬರಲಿಲ್ಲ
ಫೋನ್ ಆಫ್ ಮಾಡಿದೆ.
ರಾಜು ಗಮನಿಸುತ್ತಲೇ ಇದ್ದ
"ಮೇಡಮ್ ಯಾಕೆ ಏನಾಯ್ತು? ಡಾಕ್ಟರ್‍ನ್ ಕರೀಲಾ"
"ಬೇಡ ರಾಜು" ಸಂಕಟದಿಂದಲೇ ನುಡಿದೆ
ಕೈನಲ್ಲಿದ್ದ ಫೋನ್ ನನ್ನದೇ ಹಾಡ ಹಾಡಿತು
ಅದು ನನ್ನ ಪಿ.ಎ ಕಾಲ್. ಹೆಸರಿಗೆ ನನ್ನ ಪಿ.ಎ ಆದರೆ ಮಾಡುವುದೆಲ್ಲಾ ಇವರ ಕೆಲಸ
ಫೋನ್ ಎತ್ತಲಿಲ್ಲ ನನಗೆ ಗೊತ್ತು, ಇಂದು ಮೂರು ಹಾಡಿನ ರೆಕಾರ್ಡಿಂಗ್ ಇತ್ತು . ನಾನು ಹೋಗಬೇಕಾಗಿದೆ. ಮೆಸೇಜ್ ಮಾಡಿದೆ . "ಡೋಂಟ್ ಡಿಸ್ಟರ್ಬ್ ಮಿ ಟುಡೇ . ಐ ಡೋಟ್ ವಾಂಟ್ ಟು ಅಟೆಂಡ್ ಅನಿ ರೆಕಾರ್ಡಿಂಗ್ ".
ಅದ್ಯಾವ ಸಮಯ್ದಲ್ಲಿ ಮನೆ ಬಂತೋ, ತಿಳಿಯಲೇ ಇಲ್ಲ .
ಹಾಗೆ ಹಾಸಿಗೆಗೊರಗಿ ಕಣ್ಮುಚ್ಚಿದರೆ ಮಂಗಳಾಳ ದೀನ ಮುಖವೇ ಕಾಣಿಸುತ್ತಿದೆ, ಕಣ್ತೆರೆದರೆ, ಮುಗ್ಧ ಹೆಣ್ಣು ಅಪ್ಸರಾಳ ನೆನಪು,
ಆಗಲೆ ಅಪ್ಸರಾ ಇಲ್ಲವಾಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ? ಅವಳ ಈ ಬದುಕಿಗೆ ನೀನೆ ಕಾರಣ ಮಂಗಳಾ ಮಾಡಿ ನನ್ನತ್ತ ತೋರುತ್ತಿದ್ದಂತೆ ಭಾಸವಾಗಿ ಬೆಚ್ಚಿ ಬಿದ್ದೆ.
ಮತ್ತೆ ಮೊಬೈಲ್ ಹಾಡ ಹಾಡಿತು . ಅದು ಚಂದ್ರು ಕಾಲ್
" ಲಕ್ಷ್ಮಿ , ಯಾಕೆ ಏನಾಗಿದೆ ನಿಂಗೆ ಇವತ್ತಿನ ಎಲ್ಲಾ ಪ್ರೊಗ್ರಾಮ್ ಕ್ಯಾನ್ಸೆಲ್ ಮಾಡಿದ್ರೆ ಹೇಗೆ. ನಿನ್ನ ನಂಬಿಕೊಂಡು ಅವರು ಎಲ್ಲಾ ಸಿದ್ದತೆ ಮಾಡಿದಾರೆ. ಇದ್ಯಾಕೋ ಬರ್ತಾ ಬರ್ತಾ ಅತಿಯಾಗ್ತಿದೆ. ನನ್ನ ಕೇಳದೆ ಇಂಥಾ ನಿರ್ಧಾರ ಹೇಗೆ ತಗೊಂಡೆ."
"ರೀ ಮನಸ್ಸು ಯಾಕೋ ಸರಿ ಇಲ್ಲಾ , ದಯವಿಟ್ಟು ಸ್ವಲ್ಪ ನಾನು ಹೇಳೋ ಕೇಳಿ, ಈಗಲೇ ಬನ್ನಿ , ನಾನೊಂದು ವಿಷಯ ಹೇಳಬೇಕು" ಅಷ್ಟು ಹೇಳುವಷ್ಟರಲ್ಲಿ ಜೀವ ಬಾಯಿಗೆ ಬಂದಿತ್ತು
"ಯು ಆರ್ ರಿಯಲ್ಲಿ ಸ್ಪಾಯ್ಲಿಂಗ್ ಮೈ ಮೂಡ್,ಹೇಳೋ ಹಾಗಿದ್ರೆ ಫೋನ್‌ನಲ್ಲೇ ಹೇಳು ಇಲ್ಲಾಂದರೆ ಸಾಯಂಕಾಲ ಬರ್ತೀನಿ . ಆಗ ಮಾತಾಡು." ಉತ್ತರಕ್ಕೂ ಕಾಯದೆ ಕಟ್ ಮಾಡಿದರು.
ಹೊರಗಡೆ ಗಲಾಟೆ ಕೇಳುತ್ತಿತ್ತು.
ಅದು ನವೀನನ ದನಿ
ನನ್ನನ್ನು ಕರೆದುಕೊಂಡು ಹೋಗಿದ್ದಕ್ಕಾಗಿ ರಾಜುವಿಗೆ ಛೀಮಾರಿ ಹಾಕುತ್ತಿದ್ದ. ಆಗಲೇ ಅಪ್ಸರಾಳ ಜೊತೆ ಮಾತಾಡಿದ್ದು ಇವನಿಗೆ ಗೊತ್ತಾಗಿ ಹೋಗಿದೆ, ಮಾಡಲು ಇನ್ನೇನು ಕೆಲಸವಿಲ್ಲ, ಊರಲ್ಲೆಲ್ಲಾ ಸ್ಪೈಸ್ ಇಟ್ಟಿದ್ದಾನೆ.
ಹೋಗಿ ತಡೆಯಬೇಕು ಅನ್ನಿಸಿತು. ಆದರೆ ಆಗಲಿಲ್ಲ. ಮಾತಾಡಿದರೆ ನನ್ನನ್ನ ಪ್ರಶ್ನೆ ಮಾಡುತ್ತಾನೆ. ಅವನಿಗೆ ಏನು ಹೇಳುವುದು?
ನಾನು ಸಾಯಂಕಾಲಕ್ಕೆ ಕಾಯುತ್ತಿದ್ದೆ . ಸಾಯಂಕಾಲವಾಯ್ತು, ರಾತ್ರಿಯಾಯ್ತು . ಕೊನೆಗೂ ಚಂದ್ರು ಬಂದರು.
ಎಂದಿನಂತೆ ಇಂದು ನಶಾ ಏರಿರಲಿಲ್ಲ.
ಬಹುಷ ನನ್ನೊಡನೆ ಮಾತಾಡಲು ಕುಡಿದು ಬರಲಿಲ್ಲವೆನಿಸುತ್ತದೆ. ಊಟ ಮುಗಿಸಿ ಬಂದಾಗ ತಲೆಸಿಡಿಯುತ್ತಿತ್ತು. ಆದರೂ ಅವರನ್ನು ಕೇಳಲೇಬೇಕಿತ್ತು. ಹುಡುಗಿಯೊಬ್ಬಳ ಬಾಳಿನ ಪ್ರಶ್ನೆ ಅದಾಗಿತ್ತು.
ಅವರಿಗೆ ವಿವರಿಸಿದೆ
ಅಪ್ಸರಾಳನ್ನುನೋಡಿದ್ದು , ಅವಳ ಮುಖದ ಹೋಲಿಕೆ, ಅವಳ ಹಿಂದಿನ ಬಾಳು, ನನ್ನ ಅನುಮಾನ ಸತ್ಯವಾಗಿದ್ದು.
ಮೊದಲಿಗೆ ಅವರಿಗೂ ನೆನಪಿಗೆ ಬರಲಿಲ್ಲ
ನಂತರ ನೆನಪಿನ ಮೂಟೆಯಲ್ಲಿ ಸಮಾಧಿ ಮಾಡಿ ಹಾಕಿದ್ದ ಘಟನೆಯೊಂದರ ಮೂಟೆಯಿಂದ ಆ ಸತ್ಯದ ಅಸ್ಥಿ ಪಂಜರದ ದರ್ಶನ ಮಾಡಿಸಿದೆ.
"ವಾಟ್ ದಿ ಹೆಲ್ ಯು ಆರ್ ಟಾಕಿಂಗ್. ? ಈಗಾಗಲೆ ಮುಗಿದು ಹೋಗಿರೋ ಕತೇನ ತೆಗೆದು ಮನೆ ಮರ್ಯಾದೆ ತೆಗೀಬೇಕಂತೀದೀಯಾ?" ಗುಡುಗಿದ ರಭಸಕ್ಕೆ ನನ್ನ ಮೈನಲ್ಲಿದ್ದ ಶಕಿಎಲ್ಲಾ ಉಡುಗಿದಂತಾಯ್ತು
"ರೀ ವಿಷ್ಯ ಯಾರಿಗೂ ಹೇಳೋದು ಬೇಡ, ಆದರೆ ಆ ಹುಡುಗಿಗೊಂದು ಬಾಳು ಕೊಟ್ಟು ನಮ್ಮಿಂದಾಗಿರೋ ಅನ್ಯಾಯಾನಾ ಸರಿಮಾಡೋಣ ಅಂತ, ನಮ್ಮ ಚಿರೂಗೆ ವಿಷಯ ಹೇಳೋಣ" ಹಿಂಜರಿಯುತ್ತಲೆ ಹೇಳಿದೆ
"ಸಾಧ್ಯಾನೆ ಇಲ್ಲ, ಏನಾಟ ಆಡ್ತೀದೀಯಾ ? ಈಗ ಚಿರು ನಿನ್ನ ಅಥವ ನನ್ನ ಚಿರು ಅಲ್ಲ ಎಮ್. ಎಲ್. ಎ ಚಿರಂಜೀವಿ ನಾಳೆ ಮಿನಿಸ್ಟರ್ ಆಗೋ ಲಿಸ್ಟ್ನ್‌ನಲ್ಲಿರೋನು. ಅವನ ಹಿಂದೆ ಈ ಬ್ಲಾಕ್ ಮಾರ್ಕ್ ಇದೆ ಅಂತ ಮೀಡಿಯಾಗೇನಾದ್ರೂ ಒಂಚೂರು ಗೊತ್ತಾದ್ರೆ ಅವನ ಕೆರಿಯರ್ ಏನಾಗಬೇಕು " ಕಡ್ದಿ ತುಂಡು ಮಾಡಿದಂತೆ ನುಡಿದರು.
" ಮತ್ತೆ ನೀನು ಆ ಹುಡುಗಿ ಜೊತೆ ಮಾತಾಡೋದು ಮೀಡಿಯಾ ಕಣ್ಣಿಗೆ ಬೀಳೋದು, ಇಲ್ಲ ಸಲ್ಲದ ಪ್ರಚಾರ ಹುಟ್ಟೋದು, ಅದರಿಂದ ನವ್ಯಾ ಮದುವೆಗೂ ತೊಂದರೆ ಆಗೋದು ನಂಗೆ ಇಷ್ಟ ಇಲ್ಲ . ಹಾಗೇನಾದರೂ ಆದರೆ ನಾಳೆ ನಾನು ಯಾವ ಮಟ್ಟಕ್ಕೂ ಬೇಕಾದರೂ ಹೋಗೋಕೆ ರೆಡಿ ಗೊತ್ತಲ್ಲಾ" ಕಣ್ಣಲ್ಲಿ ಕಣ್ನನಿಟ್ಟು ಪ್ರಶ್ನಿಸಿದರು. ಆ ತೀಕ್ಣ ನೋಟಕ್ಕೆ ಬೆದರಿ ಹಿಂದೆ ಸರಿದೆ.
ಮಾತು ಮತ್ತೆ ಬರಲಿಲ್ಲ. ಈ ನೋಟಕ್ಕೆ ನಾನು ಹೆದರಿ ಬೆಚ್ಚಿ ಬೀಳುವುದು . ಆ ನೋಟದಲ್ಲಿ ನನ್ನನ್ನು ಕೊಲ್ಲುವ ಅಥವ ಹಿಂಸಿಸುವ ಅದಾವ ಭಾವವಿತ್ತೋ ನನಗೆ ಗೊತ್ತಿಲ್ಲ. ಆದರೆ ಅವರ ಆ ಒಂದು ನೋಟದ ಸನ್ನೆಗೆ ಮುದುಡಿ ಕೂರುತ್ತಿದ್ದೆ.
ರಾತ್ರಿ ಮಲಗಿದರೂ ನಿದ್ರೆ ಬರಲಿಲ್ಲ
ಚಿರೂ ನನ್ನವರ ತಮ್ಮ ಎಂಬುದನ್ನು ಬಿಟ್ಟರೆ ರಾಜಕೀಯದಲ್ಲಿ ಅತೀ ವೇಗವಾಗಿ ಬೆಳದವನು . ಆಗಿನ್ನೂ ನೆನಪಿದೆ
ಕಾಲೇಜು ಮುಗಿಸಿದ್ದ ಚಿರು ಊರಿಗೆ ಬಂದಿದ್ದ. ನನ್ನನ್ನು ನೋಡಿದರೆ ಬಡವರ ಮನೆಯಿಂದ ಬಂದಳೆಂಬ ಅಲಕ್ಷ್ಯ, ಆದರೂ ಮಾವನ ಕಣ್ಗಾವಲಿನಿಂದ ಹದ್ದು ಮೀರಿ ಮಾತಾಡಿರಲಿಲ್ಲ. ದೊಡ್ದ ಮನೆಗೆ ಹತ್ತಾರು ಆಳು ಕಾಳುಗಳು. ಅವರಲ್ಲಿ ನೀಲಮ್ಮ ನನಗೆ ತುಂಬಾ ಹೊಂದಿಕೊಂಡಿದ್ದಳು. ಆಗಷ್ತೇ ನವೀನನ ಜನನವಾಗಿತ್ತು. ಆ ವೇಳೆಗಾಗಲೆ ತಾಯಿಯನ್ನು ಕಳೆದು ಕೊಂಡಿದ್ದ ನನಗೆ ನೀಲಮ್ಮನೇ ತಾಯಿಯಾಗಿದ್ದಳು. ನನ್ನ ಬಾಣಂತನವನ್ನ ಅಚ್ಚುಕಟ್ಟಾಗಿ ಮಾಡುತಿದ್ದಳು. ನೀಲಮ್ಮನಿಗಿದ್ದ ಒಬ್ಬಳೆ ಮಗಳು ಮಂಗಳಾ ಕೂಡ ನನ್ನ ಸ್ವಂತ ತಂಗಿಯಂತೆ ಆತ್ಮೀಯವಾಗಿದ್ದಳು.
ಅದ್ಯಾವ ಸಮಯದಲ್ಲಿ ಚಿರೂ ಮತ್ತು ಮಂಗಳಾ ಸ್ನೇಹವಾಯ್ತೋ, ಪ್ರೇಮವಾಯ್ತೋ ಗೊತ್ತಿಲ್ಲ. ಅವರಿಬ್ಬರ ನಡುವೆ ಪ್ರೀತಿ ಚಿಗುರಿ ಹಣ್ಣಾಗುವ ಸಮಯಕ್ಕೆ ಅವಳಿಗೆ ತಾನು ಮಾಡಿಕೊಂಡಿದ್ದ ಅನಾಹುತ ಅರಿವಿಗೆ ಬಂತು. ಆದರೆ ತಡವಾಗಿತ್ತು
"ಅಕ್ಕ ಹೇಗಾದರೂ ಮಾಡಿ ನನ್ನ ಮದುವೆ ಮಾಡಿಸಿ" ದುಂಬಾಲು ಬಿದ್ದಳು
ಚಿರೂ ಸುತಾರಾಂ ಒಪ್ಪಲಿಲ್ಲ "ಆಫ್ಟರ್ ಆಲ್ ಒಬ್ಬ ಕೆಲಸದ ಹೆಂಗಸನ್ನ ಮದುವೆ ಆಗೋದಾ ಸಾಧ್ಯಾನೆ ಇಲ್ಲ. ಇಬ್ಬರ ತಪ್ಪೂ ಇದೆ.
ಒಂದಷ್ಟು ದುಡ್ಡು ಕೊಟ್ಟು ಸಾಗು ಹಾಕೋಣ"
ಚಂದ್ರೂದೂ ಅದೇ ರಾಗ . ಮಾವ ಈ ವಿಷಯದಲ್ಲಿ ಮಾತ್ರ ನನ್ನ ಜೊತೆಯಾಗಲಿಲ್ಲ. ಎಲ್ಲರೂ ನನ್ನ ವಿರೋಧಿಸಿದಾಗ ನಾನು ಮೂಕ ಪ್ರೇಕ್ಷಕಳಾಗಿದ್ದೆ.
ಮಂಗಳಾಗೆ ಬೇರೆ ಯಾರೋಂದಿಗೋ ಸಂಬಂಧವಿರುವುದಾಗಿ ಸುದ್ದಿ ಹಬ್ಬಿಸಿದರು.
ನೀಲಮ್ಮನ ದ್ವನಿ ಅರಣ್ಯರೋಧನವಾಯ್ತು.
ಕೆಲಸದಿಂದ ತೆಗೆಯಲಾಯ್ತು.
ಮನೆ ಕೆಲಸಬಿಟ್ಟು ಮತ್ತೇನು ಗೊತ್ತಿರದ ನೀಲಮ್ಮನಿಗೆ ನಾನೆ ಹಣ ಕೊಟ್ಟು ಮಂಗಳಾ ಚಿಕಿತ್ಸೆ ಮಾಡಿಸಲು ಹೇಳಿದೆ. ಅದನ್ನು ಮಾಡಲೂ ನನಗೆ ಹೆದರಿಕೆ .
ಬೆಂಗಳೂರಿನಲ್ಲಿ ನನಗೆ ಗೊತ್ತಿದ್ದ ಹಾಸ್ಪಿಟಲ್‌ನಲ್ಲಿ ಇರಿಸಿದೆ, ಕೆಲವು ದಿನಗಳ ನಂತರ ಹೆಣ್ಣು ಮಗುವಾಯ್ತೆಂದು ವಿಷಯ ತಿಳಿಯಿತು. ನೋಡಲೂ ಹೋಗಲಿಲ್ಲ
ಎಷ್ಟೋ ದಿನಗಳಾದ ನಂತರ ಯಾರೋ ನೀಲಮ್ಮ ಹಾಗು ಮಂಗಳಾ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರೆಂದು ಹೇಳಿದರು ಮಗುವಿನ ಬಗ್ಗೆ ಕೇಳಲೂ ಇಲ್ಲ ಮನಸ್ಸು ಕದಡಿತಾದರೂ ಮತ್ತೆ ವಿಷಯವನ್ನು ಕಲುಕಿದರೆ ಆಪತ್ತು ಎಂದರಿತು ಸುಮ್ಮನಾದೆ
ಅದಾದ ನಂತರ ಮಂಗಳಾಳ ಪತ್ರ ವೊಂದು ಕೈ ಸೇರಿತು. ಅದರಲ್ಲಿ ಮಗುವನ್ನು ಯಾರೋ ಒಬ್ಬರಿಗೆ ಕೊಟ್ಟಿರುವುದಾಗಿ ಹೇಗಾದರೂ ಮಾಡಿ ಮಗುವನ್ನು ಕರೆದುಕೊಂಡು ಬಂದು ಸಾಕಬೇಕಾಗಿ ಬೇಡಿಕೊಂಡಿದ್ದಳು. ಜೊತೆಗೆ ಆ ಹೆಂಗಸಿನ ವಿಳಾಸವನ್ನು ಬರೆದಿದ್ದಳು. ಸಾಯುವ ಮುನ್ನ ಬರೆದಿದ್ದಾಗಿತ್ತು ಆ ಪತ್ರ
ಆದರೆ ನನಗೆಲ್ಲಿದೆ ಅಷ್ತೊಂದು ಧೈರ್ಯ. ಬೇಡದ ಉಸಾಬರಿ ಏಕೆಂದು ಸುಮ್ಮನಾದೆ. ಆ ಮಗುವೇ ಅಪ್ಸರಾ .
ಅಪ್ಸರಾಳ ಈ ಸ್ಥಿತಿಗೆ ನಾನೇ ಕಾರಣ ಎಂದು ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು.
ಬೆಳಗ್ಗೆ ಎದ್ದಾಗ ತಲೆ ನೋವಿನಿಂದ ನರಳುತ್ತಿದ್ದೆ. ವೆಂಕಟಮ್ಮ ಕಾಫಿ ತಂದುಕೊಟ್ಟಳು. ಕಾಫಿ ಕುಡಿಯುತ್ತಿದ್ದೆ.
"ಅಮ್ಮಾ " ನವ್ಯಾ ಬಂದು ನನ್ನ ಪಕ್ಕ ಕುಳಿತಳು
" ನೀನು ಅ ಹುಡುಗಿ ಜೊತೆ ಅಡಿಗಾಸ್‌ನಲ್ಲಿ ಮಾತಾಡ್ತಿದ್ದಿದ್ದು ಅಜೇಯ್ ನೋಡಿ ಯಾರು ಅಂತ ಕೇಳಿದರು?" ಅಜೇಯ ಅವಳು ಮದುವೆಯಾಗಲಿರುವ ಹುಡುಗ ಈಗಾಗಲೆ ಸಿನಿನಾಯಕನಾಗಿ ಸ್ವಲ್ಪ ಹೆಸರು ಮಾಡಿದ್ದಾನೆ
"ನಾನ್ಯಾರ ಜೊತೆ ಮಾತ್ತಾಡಿದ್ರೆ ನಿಮಗೇನು" ಪ್ರಶ್ನಿಸಿಯೇ ಬಿಟ್ಟಿದ್ದೆ ಗೊತ್ತೇ ಇಲ್ಲ
"ಅಮ್ಮ ಅಪ್ಪ ಬೆಳಗ್ಗೆ ಎಲ್ಲ ವಿಷಯ ಹೇಳಿದರು. ನಮಗ್ಯಾಕೆ ಎಲ್ಲ ಸಲ್ಲದ ಪ್ರಾಬ್ಲಮ್ . ನಾಳೆ ಅಜೇಯ್‌ಗೆ ಈ ವಿಷಯ ಗೊತ್ತಾದ್ರೆ ಮದುವೆ ತುಂಬಾ ಕಾಂಪ್ಲಿಕೇಟೆಡ್ ಆಗುತ್ತೆ"
"ನವ್ಯ ಆ ಹುಡುಗಿ ಹೆಚ್ಚು ಕಡಿಮೆ ನಿನ್ನ ವಯಸ್ಸೇ , ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣಿಗೆ ತೊಂದರೆ ಆಗ್ತಾ ಇದ್ದಾರೂ ಹೀಗೆ ಮಾತಾಡ್ತಿದೀಯಲ್ಲ"
"ನೀನೇನು ಮಾಡಿದ್ದು . ಆವಾಗಾ ನೀನೂ ಆ ಮಂಗಳಾ ಪರ ಮಾತಾಡ್ಬೇಕಿತ್ತು. ನಿಂಗೆ ಹ್ಯಾಗೆ ನಿನ್ನ ಬಾಳು ಇಂಪಾರ್ಟೆಂಟೋ ಆಗಿತ್ತೋ ಹಾಗೆ ನನ್ನ ಬಾಳು ನನಗೆ. ನನ್ನ ಮದುವೆ ಮುಗಿಯೋ ತನಕ ಯಾವ ತಲೆ ಬಿಸೀನೂ ಕೊಡ್ಬೇಡ ಅಮ್ಮ. ಪ್ಲೀಸ್ ಲೆಟ್ ಮಿ ಲೀವ್" ಕಾಲು ಕೊಡವಿಕೊಂಡು ಎದ್ದು ಹೋದಳು.
ಅವಳು ಹೇಳುತ್ತಿರುವುದೂ ಸರಿಯೇ
ನವ್ಯಾಗೆ ಮದುವೆಯಾಗುವ ಕನಸಿದೆ, ಚಂದ್ರೂಗೆ ಹಣ ಮಾಡುವ ಹಂಬಲವಿದೆ , ನವೀನ್‍ಗೆ ಡೈರೆಕ್ಟರ್ ಆಗೋ ಅನಿವಾರ್ಯತೆ ಇದೆ, ಚಿರೂಗೆ ಮಿನಿಸ್ಟರ್ ನಾಳೆ ಸಿ.ಎಮ್ ಇನ್ನೂ ಮುಂದೆ ಬೆಳೆಯುವ ಮಹತ್ವಾಕಾಂಕ್ಷ್ತೆ ಇದೆ.
ಆದರೆ ನನಗೆ ಯಾವ ಗುರಿ ಇದೆ. ಇಷ್ಟವಿಲ್ಲದಿದರೂ ಹಾಡು ಹಾಡಬೇಕಾಯ್ತು, ನನ್ನಿಷ್ಟದಂತೆ ಇರಲಾಗಲಿ, ತಿನ್ನಲಾಗಲಿ, ಕುಡಿಯಲಾಗಲಿ, ಅಥವ ತೊಡಲಾಗಲಿ ಆಗಲೇ ಇಲ್ಲ
ಮದುವೆಗೆ ಮೊದಲು ಅಪ್ಪನ ಕಣ್ಗದುರುವಿಕೆಯಿಂದಲೇ ನಡುಗುತಿದ್ದೆ. ನಂತರ ಮಾವ ಹೇಳಿದ್ದ ಚಾಚೂ ತಪ್ಪದೆ ನಡೆಸುತ್ತಿದ್ದೆ.ಮಾವ ಹೋದ ನಂತರ ಇಲ್ಲಿವರೆಗೆ ಚಂದ್ರುವಿನ ಆಣತಿಯಂತೆ ಬದುಕುತ್ತಿದ್ದೇನೆ . ಮುಂದೆ ಖಂಡಿತವಾಗಿ ನವೀನ ಅಥವ ನವ್ಯಾ ಹೇಳಿದ ಹಾಗೆ ಕೇಳುತ್ತಾ ಬದುಕಬೇಕಾಗುತ್ತದೆ.
ಆರ್ಥಿಕವಾಗಿ ಸಬಲತೆ ಇದ್ದರೂ ಮಾನಸಿಕವಾಗಿ ದುರ್ಬಲಳಾಗಿದ್ದೇನೆ. ಯಾವತ್ತು ಮಾನಸಿಕವಾಗಿ ಗಟ್ಟಿಯಾಗುವುದು ? ಈ ಪ್ರಶ್ನೆ ಅನಂತವಾಗಿ ಕಾಡುತ್ತಲೇ ಇತ್ತು.
ಸ್ವಲ್ಪ ಹೊತ್ತಿನ ನಂತರ ರಾಜುವನ್ನ ಕರೆದೆ. ಆತನನ್ನು ನವೀನ ತನ್ನ ಡ್ರೈವರ್ ಮಾಡಿಕೊಂಡಿದ್ದ , ನನಗೆ ಬೇರೆ ಡ್ರೈವರ್ ಗೊತ್ತು ಮಾಡಿದ್ದರು.
ಖಂಡಿತಾ ಆತ ನಾನು ಹೇಳಿದ ಕಡೆಗೆ ಬರಲಾರ ಎಂಬುದು ತಿಳಿಯಿತು . ಆಗಲೆ ನನ್ನ ಪಿ.ಎ ಇಂದ ಅಂದಿನ ನನ್ನ ಶೆಡ್ಯೂಲ್ ಬರೆದುಕೊಳ್ಳುತ್ತಿದ್ದ ಆತ.
ಗೊಂಬೆಯಂತೆ ಜೀವನ ಸಾಗಿತ್ತು. ಅದಾದ ನಂತರ ಅಪ್ಸರಾ ದಿನಾ ಕಾಣುತ್ತಿದ್ದಳು ಆದರೆ ನನ್ನ ಹೊಸ ಡ್ರೈವರ್ ನಿಲ್ಲಿಸುತ್ತಿರಲಿಲ್ಲ .
ಮೂರು ವಾರಗಳು ಕಳೆದವು.
ಆ ವಾರದಲ್ಲೇ
ಮನೆಯಲ್ಲಿ ಮಗಳ ತಯಾರಿ ಜೋರಾಗಿ ನಡೆಯುತ್ತಿತ್ತು
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಯ ಮಿನಿಸ್ಟರ್ ಪಟ್ಟ ಚಿರಂಜೀವಿಗೆ ಸಿಗುತ್ತಿತ್ತು
ಅದೇ ವೇಳೆಗೆ ನವೀನನ ಹೊಸ ಚಿತ್ರ "ಹೆಣ್ಣೇ ನೀ ಅಬಲೆಯಲ್ಲ" ತೆರೆ ಕಾಣುತ್ತಿತ್ತು.
"ಬಾಲಿವುಡ್ ದಿಗ್ಗಜ ರಾಥೋಡ್‌ರ ಶತ ಕೋಟಿ ಚಿತ್ರಕ್ಕೆ ಕನ್ನಡದ ಕೋಗಿಲೆ ಖ್ಯಾತ ಗಾಯಕಿ ಲಕ್ಷ್ಮಿಯವರಿಂದ ಐಟಮ್ ಸಾಂಗ್ " ಎಂಬ ಬರಹಗಳು ಸಿನಿಪತ್ರಿಕೆಗಳಲ್ಲಿ ಕಾಣತೊಡಗಿದ್ದವು.
ಮುಂದಿನ ವಾರ ಮಗಳ ಮದುವೆಯ ನಂತರ ಹಾಡುವುದಾಗಿ ಒಪ್ಪಿಗೆ ಕೊಟ್ಟಿದ್ದೆ. ಡೇಟ್ಸ್ ಫಿಕ್ಸ್ ಆಗಿತ್ತು.
ಒಂದೆರೆಡು ದಿನದಿಂದ ಅಪ್ಸರ ಕಾಣಿಸಲಿಲ್ಲ.ಏಕೋ ಆ ಮೊದಲಿನ ಆತಂಕ ಕಾಡುತ್ತಿರಲಿಲ್ಲ
ಮನಸ್ಸು ನಿರ್ಲಿಪ್ತವಾಗಿತ್ತು.
ನಾನೇಕೆ ಹೀಗಾದೆ ಎಂದು ಯೋಚಿಸಲೂ ಪುರುಸೊತ್ತು ಇಲ್ಲದಂತಾಗಿತ್ತು.
ಕೊನೆಗೂ ಮಗಳ ಮದುವೆ ಮುಗಿಯಿತು . ಅವಳ ಧಾರೆ ಎರೆದ ನಂತರದ ದಿನದಲ್ಲಿ
----
-----
--
-
-
ಮತ್ತೊಂದು ಮದುವೆ ದೂರದ ದೇವಸ್ಥಾನದಲ್ಲಿ ನಡೆಯುತ್ತಿತು ಅದು ರಾಜು ಮತ್ತು ಅಪ್ಸರಾ ಮದುವೆ. ಅಪ್ಸರಾಳ ಧಾರೆ ಎರೆಯಲು ಅಪ್ಪ ಅಮ್ಮ ನಾನೆ ಆಗಿದ್ದೆ.
ಹೌದು ನಾನು ಮಗಳ ಮದುವೆ ನಡೆದ ನಂತರ ಎಲ್ಲವನ್ನೂ ಎಲ್ಲರನ್ನೂ ತೊರೆದು ನನ್ನಂತೆಯೇ ಬದುಕಬೇಕೆಂದು ಬಂದಿದ್ದೆ ಅದರ ಮೊದಲ ಹೆಜ್ಜೆಯೇ ನನ್ನಿಂದ ತಡೆಯಲಾಗದ ಅನ್ಯಾಯದ ಫಲ ಅನುಭವಿಸುತ್ತಿರುವ ಅಪ್ಸರಾಳ ಬಾಳನ್ನು ಹಸನು ಮಾಡುವುದು.
ಅವರಿಬ್ಬರನ್ನು ಹರಸಿ ಅಪ್ಸರಾಳ ಹೆಸರಿನ ಅಕೌಂಟಿನ ವಿವರವನ್ನು ಕೊಟ್ಟ್ತೆ. ನಾನು ದುಡಿದ ಹಣದಲ್ಲಿ ಕೊಂಚ ಭಾಗವನ್ನು ಅವಳಿಗೂ ಹಾಗು ನನ್ನ ಖರ್ಚಿಗೂ ತೆಗೆದುಕೊಂಡಿದ್ದೆ.
ಅವರಿಬ್ಬರಿಗೂ ವಿದಾಯ ಹೇಳಿ ನನ್ನ ಮುಂದಿನ ಬದುಕಿಗೆ ತೆರಳಲು ಸಿದ್ದವಾದೆ
ಅದು ನನ್ನದೇ ಬದುಕು,. ನಾ ಬಯಸಿದ ಬದುಕು
---------------------------------------------
ಒಂದು ವಿಷಯ ಅರ್ಥ ಆಗ್ಲಿಲ್ಲ.. ಹಿಂದಿನ ಭಾಗದಲ್ಲಿ ಚಂದ್ರು ಒಬ್ಬರೇ ಮಗ ಎಂದಿದ್ದಿರಿ.. ಈಗ ಚಿರಂಜೀವಿ ಅವರ ತಮ್ಮ ಎಂದಿದ್ದೀರಿ!
ReplyDelete