Monday, January 19, 2009

ಬಾಳೆಂಬ ಸುಳಿ-೧

ಲಕ್ಷ್ಮಿ
"ಲಕ್ಷ್ಮಿಏನು ಯೋಚನೆ ಮಾಡಿದೀಯಾ ?" ತಿಂಡಿ ತಿನ್ನುತ್ತಾ ಕೇಳಿದರು ಚಂದ್ರು. " ಯಾವುದರ ಬಗ್ಗೆ ?" ತಣ್ಣಗೆ ಪ್ರಶ್ನಿಸಿದೆ ಗೊತ್ತಿತ್ತು ಆದರೂ .

"ಮತ್ತೆ ರೇಗಿಸ್ಬೇಡ .ನೋಡು ಆ ಪ್ರೊಡ್ಯೂಸರ್ ತುಂಬಾ ಗ್ರೇಟ್ . ಯಾರ ಮನೆಗೂ ಹೋಗಿ ಏನೂ ಬೇಡಿಲ್ಲ . ಅಂತಹದರಲ್ಲಿ ನೀನು ಈ ಆಫರ್ ಮಿಸ್ ಮಾಡ್ಕೋಬೇಡ" ಇವರಿಗೆ ಎಲ್ಲರೂ ಗ್ರೇಟ್ ನನ್ನ ಬಿಟ್ಟು, ಎಂದಿಗೂ ನನ್ನ ಮನಸ್ಸನ್ನ ಅರ್ಥ ಮಾಡಿಕೊಳ್ಳಲೇ ಇಲ್ಲ

"ರೀ ನಿಮಗೆ ಗೊತ್ತು ನಾನು ಯಾವ ಥರ ಅಂತ . ಐಟಮ್ ಸಾಂಗ್ ಹಾಡಕ್ಕೆ ಯಾರು ಬೇಕಾದ್ರೂ ಸಿಕ್ತಾರೆ , ನಾನೆ ಯಾಕೆ ಬೇಕು . ಪಾಪ ಎಷ್ಟೋ ಚಿಕ್ಕ ಹುಡುಗ /ಹುಡುಗಿಯರು ಚಾನ್ಸ್ ಕೊಟ್ಟರೆ ಸಾಕು ಅಂತ ಕಾಯ್ತಿದಾರೆ, ಅದರಲ್ಲಿ ನಾನೆ ಬೇಕು ಅನ್ನೋದು ಅವರ ಹಠ ತೋರಿಸುತ್ತೆ ಹೊರತು ನನ್ನ ಮೇಲಿನ ಗೌರವ ಅಲ್ಲ. ನಂಗೆ ಐಟಮ್ ಸಾಂಗ್ ಹಾಡಕ್ಕೆ ಇಷ್ಟ ಇಲ್ಲ"

"ಮಮ್ಮಿ ಇದೇನು ನಿನ್ನ ಹಠ, ಅಮರ್ ರಾಥೋಡ್ ಅಂದ್ರೇನು ಅವರ ಸಿನಿಮಾ ಶೈಲಿ ಏನು ? ಅವರು ಮಾಡಿದ ಎಲ್ಲಾ ಸಿನಿಮಾಗಳು ನೂರು ಕೋಟಿಯ ಮೇಲಿನ ಬಡ್ಜೆಟ್. ಅಂಥವರು ನಿನ್ನನ್ನೇ ಹಾಡಬೇಕು ಅಂತ ಬೇಡ್ಕೊಳ್ತಿದಾರೆ. "

ಮದುವೆಗೆ ಸಿದ್ದಳಾಗಿರುವ ನವ್ಯಾಳ ಮಾತು. ಅವಳಿಗೆ ರಾಥೋಡ್‌ರ ದೊಡ್ಡತನ ಕಾಣುತ್ತದೆ ಹೊರತು ಈ ಅಮ್ಮನ ಮನಸ್ಸು ಅರ್ಥವಾಗುವುದಿಲ್ಲ

"ಅದೂ ಅಲ್ಲದೆ ಅವರ ಆಫರ್ ಏನು ಕಡಿಮೇನಾ, ವನ್ ಕ್ರೋರ್ ಆಫರ್, ಮಮ್ಮಿ ಒಪ್ಕೋ , ಮುಂದೆ ನಾನು ಡೈರೆಕ್ಟ್ ಮಾಡ್ಬೇಕಂತಿರೋ ಫಿಲಮ್‌ಗೆ ನೀನೆ ಪ್ರೊಡ್ಯೂಸರ್ ಆಗು ಈ ದುಡ್ಡೇನು ಕಡಿಮೆ ಅಲ್ಲ" ಈಗ ತಾನೆ ಸಿನಿಮಾ ನಿರ್ದೇಶನದ ತರಬೇತಿ ಪಡೆದು ಬಂದಿರೋ ನವೀನ್ ಬುದ್ದಿ ಹೇಳಿದ. ಅವನಿಗೆ ಹಣದ ಮುಂದೆ ಎಲ್ಲಾ ಗೌಣ

" ನೋಡು ಲಕ್ಷ್ಮಿ ಈಗ ನಿನ್ನ ಒಪ್ಪಿಗೆಗಿಂತ ನಿನ್ನ ಡೇಟ್ಸ್ ಬೇಕು, ಯಾವಾಗ ರೆಕಾರ್ಡಿಂಗ್ ರಿಹರ್ಸಲ್ ಶುರು ಮಾಡೋಣ ಹೇಳು, ರಾಥೋಡ್‌ಗೆ ಕಾಲ್ ಮಾಡ್ತೀನಿ, ಹಾಡೋರಿಗೆ ಲಿಮಿಟ್ಸ್ ಇರಬಾರದು ಇಂಥ ಹಾಡ ಹಾಡಬಾರದು ಅಂತ ನಿಯಮ ಹಾಕ್ಕೋಬಾರದು ಗೊತ್ತಾಯಿತಾ?"

ಹಾಡೋರಿಗಲ್ಲ ನಿಮ್ಮ ಹೆಂಡತಿಗೆ ಎನ್ನಿ ಎನ್ನುವ ಮಾತು ನಾಲಿಗೆಗೆ ಬಂದರೂ ಅದರ ಪರಿಣಾಮ ಗೊತ್ತಿದ್ದುದ್ದರಿಂದ ಮನಸಲ್ಲೇ ಅಡಗಿಸಿದೆ

ಇವರೆಲ್ಲರ ಮುಂದೆ ನನ್ನ ಪ್ರಲಾಪ ವ್ಯರ್ಥವೆನಿಸಿತು.

"ರೀ ನಾನೆ ಹೇಳ್ತೀನಿ . ನಂಗೆ ಒಂದಾರು ದಿನ ಸಮಯ ಕೊಡಿ" ಕಣ್ಣಾಲಿಗಳಲ್ಲಿ ತುಂಬಿದ್ದ ನೀರನ್ನು ಅಡಗಿಸುವ ಪ್ರಯತ್ನ ಮಾಡಿದೆ.

"ಮಮ್ಮಿ ನಿನ್ನನ್ನ ಏನು ಐಟಮ್ ಸಾಂಗ್‌ಗೆ ಕುಣಿ ಅಂದ್ವಾ ಸಮಯ ತಗೋಳೋಕೆ, ಹಾಗೆ ಐಟೆಮ್ ಡ್ಯಾನ್ಸ್ ಮಾಡೋಕೆಜ ನ ತಾ ಮುಂದು ನಾ ಮುಂದು ಅಂತ ಬರ್ತಿದಾರೆ, ನೀನೊಳ್ಳೆ ..." ಮೊನ್ನೆವರೆಗೆ ಅಮ್ಮ ಯಾವ ಬಟ್ಟೆ ಹಾಕಿಕೊಳ್ಳಲಿ ಎಂದು ಕೇಳುತ್ತಿದ್ದ ನವೀನ್‌ಗೆ ನಾನು ಪೆದ್ದಳಂತೆ ಕಂಡೆನೇನೋ

ತಲೆಗೊಬ್ಬರಿಗಂತೆ ಮಾತನಾಡಿ ಎಲ್ಲರೂ ಖಾಲಿಯಾದರೂ ಜೊತೆಗ್ ಮನಸ್ಸೂ ಖಾಲಿ ಖಾಲಿ.

ಇದೇ ನನ್ನ ಬಲಹೀನತೆ, ಯಾರಿಗೂ ಎದುರು ವಾದಿಸಿ ಅನುಭವವಿಲ್ಲ. ಜೊತೆಗೆ ಅಷ್ಟೊಂದು ಧ್ರೈರ್ಯವೂ ಇಲ್ಲ.

ತನ್ನನ್ನು ಮೆಚ್ಚಿದರೆಂದು ಊರಿನ ಅತೀ ಶ್ರೀಮಂತ ಶ್ರೀಪತಿರಾಯರ ಏಕೈಕ ಪುತ್ರ ಚಂದ್ರಶೇಖರ್ ಹೇಳಿಕಳಿಸಿದಾಗ ಮನೆಯಲ್ಲಿ ಸಂತಸದ ಬುಗ್ಗೆ, ಕೂಡಲೆ ಮದುವೆಗೆ ತಯಾರಿ, ನನ್ನ ಇಷ್ಟ ಕಷ್ಟ ಯಾರಿಗೂ ಬೇಕಿರಲಿಲ್ಲ. ತನಗೇನು ಚಂದ್ರು ಬಗ್ಗೆ ಅಂತಹ ಒಲವಿರಲ್ಲಿಲ್ಲ ನನ್ನ ಅಭಿಪ್ರಾಯಕ್ಕೆ ಅಲ್ಲಿಯೂ ಬೆಲೆ ಇರಲಿಲ್ಲ. ಹನ್ನೆರೆಡನೆ ತರಗತಿಯ ನಂತರ ಮುಂದೆ ಓದಬೇಕೆಂಬ ಹಂಬಲವೂ ಈಡೇರಲಿಲ್ಲ

ಮದುವೆಯಾಗಿ ಬಂದ ನಂತರ ಶ್ರೀಮಂತ ಮನೆತನದವರ ಜೊತೆ ಬಾಳುವುದು ಬಹಳ ಕಷ್ಟವಾಗಿತ್ತು, ಇನ್ನು ಚೆಲ್ಲು ಚೆಲ್ಲಾಗಿ ಆಡುತ್ತಿದ್ದ ನಾದಿನಿ, ನಿರ್ಲಕ್ಶ್ಯ ಮಾಡಿ ನೋಡುತ್ತಿದ್ದ ಮೈದುನ , ಇವರೆಲ್ಲರ ನಡುವೆ ಮಾವನ ಶ್ರೀರಕ್ಷೆ ಸಿಕ್ಕಿತ್ತು, ಚಂದ್ರುಗೆ ಸಿನಿ ನಿರ್ದೇಶಕನಾಗುವ ಅದಮ್ಯ ಬಯಕೆ ಹಾಗಾಗಿ . ಒಂದೆರೆಡು ಚಿತ್ರಗಳಿಗೆ ಹಣ ಹಾಕಿ ಮಾಡಿದರೂ ಅವು ಮೂರು ದಿನ ನಿಲ್ಲಲಿಲ್ಲ.ಆದರೂ ಅವರ ಕನಸು ಸತ್ತಿರಲಿಲ್ಲ.

ದೇವರು ನನಗೊಂದು ಅಧ್ಬುತ ಕಂಠ ಕೊಟ್ಟಿದ್ದ, ಮನೆಯಲ್ಲಿ ಕೊಂಚ ಸಂಗೀತ ವಾತಾವರಣವಿದ್ದುದರಿಂದ ನನಗೂ ಹಾಡುವ ಹುಚ್ಚು, ಆಗಾಗ ದೇವರ ನಾಮ ಹಾಡಿಕೊಳ್ಳುತ್ತಿದ್ದೆ, ಇದನ್ನು ಎನ್ಕ್ಯಾಶ್ ಮಾಡಿಕೊಳ್ಳೋದಿಕ್ಕೆ ಮಾವ ಇರುವವರೆಗೂ ಆಗಿರಲಿಲ್ಲ, ಮಾವ ಹೋದ ಬಳಿಕ ಚಂದ್ರುವಿನ ನಿಜರೂಪ ಬಿಚ್ಚಿಕೊಳ್ಳತೊಡಗಿತು. ಸಿನಿಮಾದಲ್ಲಿ ಹಾಡಲು ಒತ್ತಾಯ ಪಡಿಸಿದ, ನಾನೋ ನನ್ನ ಚಿಪ್ಪಿನಲ್ಲೇ ಸಂತೋಷವಾಗಿರುವುದಕ್ಕೆ ಬಯಸುವವಳು . ಕೊನೆಗೆ ನವೀನ್ ಹಾಗು ನವ್ಯ ಸಮೇತ ನನ್ನನ್ನು ಮನೆ ಬಿಟ್ಟುಕಳಿಸುವುದಾಗಿ ಹೆದರಿಸಿದಾಗ ಒಪ್ಪಲೇ ಬೇಕಾಯ್ತು.

ನನ್ನ ಕಂಠ ಸಿನಿ ಪ್ರೇಮಿಗಳಿಗೆ ಹಿಡಿಸಿತು. ನೋಡು ನೋಡುತ್ತಿದ್ದಂತೆ ನಂಗೆ ಗೊತ್ತಿಲ್ಲದೆ ನಾನು ಎತರೆತ್ತರ ಬೆಳೆದಿದ್ದೆ. ನನ್ನ ನೆರಳಿನಿಂದಲೇ ಚಂದ್ರೂಗೆ ಸಿನಿಮಾ ಅವಕಾಶಗಳು ಸಿಕ್ಕಿದವು, ಆತನೂ ಪ್ರಸಿದ್ದಿ ಪಡೆದ. ನಾನುಹಾಡಿದ ಹಾಡುಗಳು ಯಾವತ್ತೂ ಸಭ್ಯತೆಯ ಗಡಿ ದಾಟಿರಲಿಲ್ಲ. ಕನ್ನಡ ಹಿಂದಿ ಎರೆಡರಲ್ಲೂ ಸಮಾನ ಅವಕಾಶಗಳು ದಕ್ಕಿದ್ದವು. ಹಾಡುವುದರಲ್ಲೇನೂ ಸಂತಸವಿಲ್ಲ ನನಗೆ ಆದರೆ ಯಾವುದೂ ನನ್ನ ಇಷ್ಟದಂತೆ ಆಗಿರಲಿಲ್ಲ.ಹೇಗೋ ಕಾಲ ಕಳೆಯುತ್ತಿದ್ದೆ

ಆದರೆ ಈ ರಾಥೋಡ್ ಒಂದು ರೀತಿಯ ವಿಚಿತ್ರ ವ್ಯಕ್ತಿ ಅವನಿಗೆ ಹಣಕಿಂತ ಅವನ ಹಠ ಗೆಲ್ಲುವುದು ಮುಖ್ಯ ಹಿಂದೆ ಒಂದು ಬಾರಿ ಯಾವುದೋ ಐಟಮ್ ಸಾಂಗ್ ಹಾಡಲು ಕರೆದಿದ್ದಾಗ ನಾನು ಒಪ್ಪಿರಲಿಲ್ಲ . ಈ ಬಾರಿ ಎಲ್ಲಾ ತಯಾರಿ ಮಾಡಿಕೊಂಡೆ
ಚಂದ್ರುವನ್ನೇ ನೇರವಾಗಿ ಸಂಪರ್ಕಿಸಿದ್ದ. ಅಪಾರ ಹಣದ ಆಸೆ ತೋರಿದ್ದ.
ಹೇಗಾದರೂ ಆಗಲಿ ಈ ಬಾರಿ ನನ್ನ ಮನಸಿನಂತೆ ಮಾಡಬೇಕು ಎಂದುಕೊಂಡರೂ ನನಗೆ ಅಷ್ಟೊಂದು ಧೈರ್ಯವಿಲ್ಲ ಎಂಬುದು ನನಗೇ ಗೊತ್ತಿತು
ದೇವಸ್ಥಾನಕ್ಕೆ ಹೋಗಬೇಕಿನಿಸಿತು ರಾಜುವನ್ನು ಕರೆದೆ
ರಾಜು ವಿಧೇಯ ವ್ಯಕ್ತಿ. ನಮ್ಮ ಮನೆಯ ಡ್ರೈವರ್ ಆದರೂ ನನ್ನ ಮಕ್ಕಳು ತೋರಿಸದ ಕಾಳಜಿ, ಗೌರವ ತೋರಿಸುತ್ತಾನೆ.
ಕಾರಿನಲ್ಲಿ ಹೋಗುತ್ತಿದ್ದಂತೆ ಕಣ್ಣಿಗೆ ಮತ್ತೆ ಆ ಹುಡುಗಿ ಬಿದ್ದಳು. ಸುಮಾರು ೧೮ ವರ್ಷದ ಹುಡುಗಿ ಇರಬೇಕು.
ಅದೇ ಬಸ್‌ಸ್ಟಾಂಡ್‌ನಲ್ಲಿ ಮತ್ತೆ ಕಂಡಳು.
ಅದೇನೋ ನನಗೆ ಆ ಹುಡುಗಿಯ ಮೇಲೆ ಒಂಥರಾ ಕುತೂಹಲ ಅದಕ್ಕೆ ಕಾರಣವೂ ಇತ್ತು. ಆ ಹುಡುಗಿಯ ಮುಖ
ಚಿರಪರಿಚಿತ ಅನ್ನಿಸುತ್ತಿತ್ತು ಜೊತೆಗೆ ಮಾತಾಡಲು ಅಳುಕು ಸಹಾ.ಮುಖವನ್ನು ಸಿಂಡರಿಸಿಕೊಂಡೆ ಎಲ್ಲರನ್ನೂ ಮಾತಾಡಿಸುತಿದ್ದಳು. ಹುಬ್ಬು ಗಂಟಿಕ್ಕಿಕೊಂಡಿದ್ದರಿಂದ ನೋಡಿದ ಕೂಡಲೆ ದೂರವಾಗುವ ಯೋಚನೆಯೂ ತುಂಬಾ ಜನಕ್ಕೆ ಬಂದಿದ್ದರೂ ಸಾಕು
ಇಂದು ಏನೇ ಆಗಲಿ ಅವಳೊಡನೆ ಮಾತನಾಡಲೇಬೇಕೆಂದು ನಿರ್ಧರಿಸಿದೆ
ಕಾರಿನಿಂದ ಹೊರಗೆ ಬಂದರೆ ಸಾಕು ಜನ ನನ್ನನ್ನು ಮುತ್ತಿಬಿಡುತ್ತಾರೆ ಎಂದು ತಿಳಿದಿತ್ತಾದ್ದರಿಂದ ಡ್ರೈವರ್ ರಾಜುವನ್ನು ಅವಳನ್ನು ಕರೆಯಲು ಕಳಿಸಿದೆ
ರಾಜು ಅವಳತ್ತ ಹೋಗಿ ಮಾತನಾಡಿಸಲು ಹೋದ ತಕ್ಷಣ ಆ ಹುಡುಗಿ ಸಿಡಿಮಿಡಿಗೊಂಡು ಅತ್ತ ಜರುಗಿದಳು.ಅವನು ಇನ್ನೇನೋ ಹೇಳಲು ಹೋದ. ಆ ಹುಡುಗಿ ಚಾಮುಂಡಿಯ ಅವತಾರದಲ್ಲಿ ಅವನನ್ನು ಏನೋ ಬೈಯ್ಯಲು ಆರಂಭಿಸಿದಳು.
ರಾಜು ಪೆಚ್ಚು ಮುಖ ಹೊತ್ತು ಕಾರಿನ ಬಳಿಗೆ ಬಂದ. "ಮೇಡಂ ಅವಳು ಹೆಣ್ಣಲ್ಲ ರಾಕ್ಷಸಿ. ಬಾಯಿಗೆ ಬಂದ ಹಾಗೆ ಹೊಲಸಾಗಿ ಮಾತಾಡ್ತಾಳೆ ಅವಳ ಸಹವಾಸ ನಮಗೆ ಯಾಕೆ ಬೇಕು ಬನ್ನಿ ಮೇಡಮ್"
ಬೇಸರವಾಯಿತಾದರೂ ನನ್ನ ಕುತೂಹಲ ತಣಿಯಲಿಲ್ಲ. ಹೋದರೆ ಹೋಗಲಿ ಎಂದು ಕಾರನ್ನು ಅವಳ ಸಮೀಪ ನಿಲ್ಲಿಸಲು ಹೇಳಿದೆ
ಕಾರ್ ಮುಂದೆ ಹೋಗುತ್ತಿದ್ದಂತೆ ಅವಳು ಎರೆಡು ಹೆಜ್ಜೆ ಹಿಂದಿಟ್ಟು, ಸಿಡುಕು ಮೋರೆ ಮಾಡಿಕೊಂಡು ಕಾರನ್ನೇ ದಿಟ್ಟಿಸುತ್ತಿದ್ದಳು
ಕಾರಿನ ಗ್ಲಾಸ್ ಇಳಿಯುತ್ತಲೆ ಹೊರಗೆ ತಲೆ ಹಾಕಿದೆ. ನನ್ನನ್ನ್ನ ಗುರುತಿಸಬಹುದೆಂಬ ಯೋಚನೆ
"ಏನ್ರಿ ಯಾಕೆ ಹಾಗ್ನೋಡ್ತೀದೀರಾ ನೀವು ಅವನಿಗೆ ನನ್ನ ತಲೆ ಹಿಡಿಯೋಕೆ ಬಂದ್ರಾ?" ಸಿಡಿದಳು , ಅವಳ ಮಾತಿಗೆ ಒಮ್ಮೆಗೆ ಶಾಕ್ ಆಯ್ತು. ಇದೆಂಥಾ ಯೋಚನೆ ಅವಳದು .
"ಏಯ್ ಮೇಡಮ್ ಯಾರು ಅಂತ ಗೊತ್ತಿಲ್ಲದೆ ಬಾಯಿಗೆ ಬಂದ ಹಾಗೆ ಮಾತಾಡಬೇಡ " ರಾಜು ಅವಡುಗಚ್ಚಿ ನುಡಿದ
"ಯಾರಾದರೆ ನಂಗೇನು ಯಾರೂ ನನ್ನನ್ನಮಾತಾಡಿಸೋದು ಬೇಕಿಲ್ಲ ಸುಮ್ಮನೆ ತೊಂದರೆ ಕೊಡಬೇಡಿ" ಎಲ್ಲರಿಗೊ ಕೇಳುವಂತೆ ಜೋರಾಗಿಯೇ ಮಾತಾಡಿದಳು
ಎಲ್ಲರ ಗಮನ ಇತ್ತ ಸರಿಯಿತು .
"ಸಿಂಗರ್ ಲಕ್ಷ್ಮಿ ನೋಡೋ" ಕಾಲೇಜು ಹುಡುಗನೊಬ್ಬ ಅಚ್ಚರಿಯಿಂದ ಉದ್ಗರಿಸಿದ ತಕ್ಷಣವೇ ಎಲ್ಲರೂ ನನ್ನ ಕಾರಿನತ್ತ ಬರತೊಡಗಿದರು ಇಲ್ಲಿದ್ದರೆ ಕಷ್ಟ ಎಂದನಿಸಿದ ತಕ್ಷಣ ರಾಜುಗೆ ಕಾರ್ ಚಲಿಸಲು ಹೇಳಿದೆ
ಕಾರ್ ಚಲಿಸುತ್ತಿತ್ತು
ಏಕೋ ಅವಮಾನವೆನಿಸಲಿಲ್ಲ
ಅವಳ ಆ ನಡೆಗೆ ಯಾವುದೋ ಬಲವಾದ ಕಾರಣವಿರಬೇಕೆಂದು ಅನ್ನಿಸಿತು.
ಆದರೂ ಅವಳು ನನ್ನನ್ನು ಸೆಳೆಯುತ್ತಿದ್ದಳು

ಮತ್ತೊಂದು ದಿನ ಕಳೆಯಿತು, ಅದೇ ರಾಥೋಡ್ ಅದೇ ಸಾಂಗ್, ಇವುಗಳ ನಡುವೆ ನೆನ್ನೆಯ ಘಟನೆ ಬೇರೆ ನವೀನನ ಕಿವಿಗೆ ಬಿದ್ದು
"ಏನಮ್ಮ ಒಂದು ಸ್ಟೇಟಸ್ ಇಲ್ವಾ ನಿನಗೆ . ಆಫ್ಟರ್ ಆಲ್ ಒಂದು ಬೀದಿ ಹುಡುಗಿಯ ಕೈನಲ್ಲಿ ಬೈಸಿಕೊಂಡೆಯಲ್ಲಾ " ಎಂದು ಉಗಿದಿದ್ದ
ಆದರೂ ಆ ಹುಡುಗಿಯ ಚಿತ್ರವೇ ಮನಸ್ಸನ್ನು ಕದಡಿತು.
ಮತ್ತೆ ಇಂದು ರಾಜುಗೆ ಅದೇ ಬಸ್ ಸ್ಟಾಂಡ್‌ಗೆ ಕರೆದುಕೊಂಡು ಹೋಗಲು ಹೇಳಿದೆ. ರಾಜು ಪ್ರಶ್ನಾರ್ಥಕವಾಗಿ ನೋಡಿದರೂ ಮಾತಾಡಲಿಲ್ಲ.
ಮತ್ತದೇ ಜಾಗದಲ್ಲಿ ಆ ಹುಡುಗಿ ಕಂಡಳು. ಕಾರ್ ನೋಡಿದ ತಕ್ಷಣ ಅವಳೇ ಬಂದಳು.
"ತಪ್ಪಾಯ್ತು ಮೇಡಮ್ ನೀವು ಯಾರು ಅಂತ ತಿಳಿದಿರಲಿಲ್ಲ" ಕಾರ್ ಗ್ಲಾಸ್ ಇಳಿದ ತಕ್ಷಣ ಬಗ್ಗಿ ನುಡಿದಳು
ಅರೆ ನೆನ್ನೆ ನೋಡಿದ ಆ ದುರ್ಗಿ ಎಲ್ಲಿ ಇಂದಿನ ಈ ನಮ್ರ ಹುಡುಗಿ ಎಲ್ಲಿ
"ಹೋಗಲಿ ಬಿಡಮ್ಮ , ನಿನ್ನ ನೋಡಿದಾಗಿನಿಂದ ನನಗೆ ಯಾರದೋ ನೆನಪು, ಮುಖ ತುಂಬಾ ಚೆನ್ನಾಗಿ ಗೊತ್ತು ಅನ್ನಿಸ್ತಿದೆ ಅದಕ್ಕೆ ಮಾತಾಡಿಸಿದೆ, ನಿನ್ನ ಜೊತೆ ಮಾತಾಡಬಹುದಾ ಸ್ವಲ್ಪ ಹೊತ್ತು?"
" ಆಯ್ತು ಮೇಡಮ್" ಒಪ್ಪಿದ್ದೇ ಸಂತಸ
" ಸರಿ ಬಾ" ಎಂದು ಕಾರಿನಲ್ಲಿ ಕೂರಲು ಕರೆದೆ
"ಇಲ್ಲ ಮೇಡಮ್ ನೀವೆಲ್ಲಿರ್ತೀರಾ ಅಂತ ಹೇಳಿ ನಾನೆ ಬರ್ತೀನಿ" ಎಂದಳು, ಬಹುಶ ಮನುಷ್ಯರಲ್ಲಿ ನಂಬಿಕೆ ಇಲ್ಲವೇನೋ
"ಸರಿ ಮುಂದಿನ ಅಡಿಗಾಸ್‍ಗೆ ಬಾಮ" ಕರೆದು ಕಾರ್‌ನ್ನು ಅಡಿಗಾಸ್ ಬಳಿ ನಿಲ್ಲಿಸಲು ಹೇಳಿದೆ
"ಮೇಡಮ್ ಇದ್ಯಾಕೋ ಸರಿ ಇಲ್ಲ . ನೀವ್ಯಾಕೆ ಅವಳ ಮೇಲೆ ಇಷ್ತೊಂದು ಆಸಕ್ತಿ ತಗೋತಿದ್ದೀರೋ ಗೊತ್ತಿಲ್ಲ. ಆದರೆ ಅವಳ್ ಬ್ಯಾಕ್‌ಗ್ರೌಂಡ್ ಸರಿ ಇಲ್ಲ ಮೇಡಮ್." ರಾಜು ಅಳುಕುತ್ತಾ ನುಡಿದ
"ಯಾಕೆ ರಾಜು ಏನಾಗಿದೆ ಅವಳ ಬ್ಯಾಕಗ್ರೌಂಡಿಗೆ"
"ಮೇಡಮ್ ನೆನ್ನೆ ನಮ್ಮ ಡ್ರೈವರ್ ಹುಡುಗರು ಹೇಳ್ರಿದ್ದರು . ಅವಳಿ ಮುಂಬೈನಿಂದ ಬಂದಿರೋ ಕಾಲ್‌ಗರ್ಲ್ ಥರ..........."
"ಮುಚ್ಚು ಬಾಯಿ ರಾಜು ನಾಲಿಗೆ ಉದ್ದ ಆಗ್ತಿದೆ. "ಅವನಿಗೊಬ್ಬನಿಗೆ ನಾನು ಬೈಯ್ಯೋದು
ರಾಜು ಸುಮ್ಮನಾದ
ಅಡಿಗಾಸ್‌ನ ಬಳಿ ಕಾರ್ ನಿಲ್ಲಿಸಿದ.
ಅವನನ್ನು ಅಲ್ಲೇ ನಿಲ್ಲಲುಹೇಳಿ ಒಳಗೆ ಹೋದೆ
ಹೋಟೆಲ್‌ನಲ್ಲಿ ಅಷ್ಟೊಂದು ರಷ್ ಇರಲಿಲ್ಲ. ಅದೇನೋ ಜನ ನನ್ನನ್ನು ಗಮನಿಸಲಿಲ್ಲ . ಹೋಟೆಲ್ ಕ್ಯಾಷಿಯರ್‌ಗೆ ನಾನು ದಿನಾ ಇಲ್ಲೇ ಬರುವುದು ಗೊತ್ತಿದ್ದುದರಿಂದ ಅಂಥ ಅಚ್ಚರಿಯೇನು ತೋರಿಸಲಿಲ್ಲ
ಸ್ವಲ್ಪ ಹೊತ್ತ್ತಾದ ನಂತರ ಆ ಹುಡುಗಿ ಬಂದಳು

ಆ ಹುಡುಗಿಯ ಹೆಸರು ಅಪ್ಸರಾ ಎಂದು ತಿಳಿಯಿತು.
ಹೆಸರು ಚೆನ್ನಾಗಿದೆ ಎಂದೆ
ಅವರ ತಾಯಿಯ ಬಗ್ಗೆ ವಿಚಾರಿಸಿದೆ
ಮ್ಲಾನವದನಳಾದಳು
"ಮೇಡಮ್ ನನ್ನ ತಾಯಿ ಯಾರಂತ ನಂಗೆ ತಿಳಿದೇ ಇಲ್ಲ, ಹೆತ್ತ ಮೇಲೆ ಬೇಡ ಅಂತ ಯಾರಿಗೋ ಕೊಟ್ಟರಂತೆ . ಅವರು ನನ್ನನ್ನ ಒಂದು ಹೆಂಗಸಿಗೆ ಮಾರಿದರಂತೆ . ಆ ಹೆಂಗಸೇ ತಾಯಿ ಅನ್ಕೊಂಡು ಇದ್ದೆ . ಆದರೆ ಅವಳು ಮಾಡುತಿದ್ದದ್ದು ವೇಶ್ಯಾವೃತ್ತಿ, ಆದರೂ ನನ್ನನ್ನ ಆ ಕೊಂಪೆಗೆ ಬೀಳದಂತೆ ಜೋಪಾನ ಮಾಡುತಿದ್ದಳು. ಆದರೆ ವರ್‍ಶ್ದ ಹಿಂಡೆ ಆಕೆ ಸತ್ತಮೇಲೆ ನನಗೆ ನನ್ನ ನಿಜವಾದ ಕಷ್ಟ ಗೊತ್ತಾಯ್ತು. ಹುರಿದು ಮುಕ್ಕಲು ಕಾಯುತ್ತಿದ್ದ ಗಂಡಸರು, ತಲೆ ಹಿಡಿಯಲು ಕಾಯುತ್ತಿರುವ ಹೆಂಗಸರು . ನನ್ನನ್ನ ಆ ಶಾಪ ಬಿಡಲೇ ಇಲ್ಲ , ಒಂದು ತಿಂಗಳು ಹೇಗೋ ಸಹಿಸಿಕೊಂಡೆ ಬದುಕಿದೆ. ಆದರೆ ನನ್ನ ಮೈ ನರಿ ನಾಯಿಗಳ ಪಾಲಾಗಿ ಹಾಳಾಗುವುದು ಬೇಕಿರಲಿಲ್ಲ. ಹೇಗೋ ಅಂಟಿರುವ ಮಲಿನವನ್ನಂತೂ ಸ್ವಛ್ಛಗೊಳಿಸಲೂ ಆಗುವುದಿಲ್ಲ . ಇನ್ನೂ ಆಗುವುದು ಬೇಡ ಅಂತ ಬೆಂಗಳೂರಿಗೆ ಬಂದೆ . ಈಗ ಒಬ್ಬಳೇ ಇದ್ದೇನೆ ಆ ಹೆಂಗಸು ನನನ್ನ ಸ್ವಲ್ಪ ಓದಿಸಿದಳು . ಆ ಓದಿನ ಮೇಲೆ ಈಗ ಕೆಲಸಮಾಡುತ್ತಿದ್ದೇನೆ. ಆದರೂ ಈಗಲೂ ಮನುಷ್ಯರನ್ನು ನಂಬಲು ಬಹಳ ಭಯ, ಅದಕ್ಕೆ ನಾನು ಯಾರ ಜೊತೆಯಲ್ಲೂ ಮಾತಾಡಲ್ಲ , ನನ್ನ ಒಳಗಡೆ ಜ್ವಾಲಾಮುಖೀನೆ ಉರಿತಾ ಇರ್ವಾಗ ತಣ್ಣಗೆ ಮಾತಾಡೋದು ಹೇಗೆ. ಜೀವನದ ಹದಿನೆಂಟು ವರ್ಷ ಹೊಲಸು ಪ್ರಪಂಚದಲ್ಲಿ ಕಳೆದು ಒಳ್ಳೆಯವರಾರು , ಕೆಟ್ಟವರಾರು ಅನ್ನೋದು ತಿಳಿಯೋದಿಲ್ಲ"

ಏಕೋ ಅಪ್ಸರಾಳ ಮಾತು ಕೇಳುತ್ತಿದ್ದಂತೆ ನನ್ನೊಳಗಿನ ಪ್ರಜ್ಮೆ ಇದಕ್ಕೆಲ್ಲಾ ಕಾರಣ ನಾನೆ ಎಂದು ಹೇಳುತ್ತಿದ್ದಂತೆ ಅನ್ನಿಸಿತು
ಆ ಹುಡುಗಿಯ ಮುಖ ಪರಿಚಿತವಾಗಿದ್ದು ಅವಳು ಯಾರಿರಬಹುದೆಂಬ ಪ್ರಶ್ನೆಗೆ ಬಹುಪಾಲು ಉತ್ತರ ಹೇಳುತ್ತಿತ್ತು.
"ನಿನ್ನಮ್ಮ ಎಲ್ಲಿಂದ ಕರೆತಂದರು ಅಂತ ಗೊತ್ತಿದ್ಯಾ" ಸುಮ್ಮನೆ ಪ್ರಶ್ನಿಸಿದೆ
"ಬೆಂಗಳೂರಿನಿಂದ , ಹಾಸ್ಲ್ಪಿಟಲೂ ಗೊತ್ತಿದೆ . ಆದರೆ ಅಲ್ಲಿಗೆ ಹೋಗಿ ಪ್ರಶ್ನೆ ಮಾಡೋಕೆ ನಂಗೆ ಇಷ್ಟ ಇಲ್ಲ"
ಎದೆ ಡವಗುಟ್ಟಿತು
ನಾನಂದುಕೊಂಡಂತೆ ಆದರೆ
"ಸರಿ ಯಾವ ಹಾಸ್ಪಿಟಲ್ ಹೇಳಮ್ಮ ಸುಮ್ಮನೆ ನನ್ನ ಕುತ್ತೂಹಲಕ್ಕೆ"
ಆಕೆ ಹೇಳಿದಳು
ಅವಳ ವಯಸ್ಸು , ಆ ಘಟನೆ ನಡೆದ ಸಮಯ ಸ್ಥಳ ಒಂದೇ ಆಗಿತ್ತು
ಅಂದರೆ ಅವಳೇ ಅವಳಾ
ಮನಸಿನ ಮೂಲೆಯಲ್ಲಿದ್ದ ಅನುಮಾನ ನಿಜವಾಗಿತ್ತು

"ಹೇಗಿದ್ದರೂ ಬೆಂಗಳೂರಿಗೆ ಬಂದಿದೀಯಾ. ಇನ್ನು ಮುಂದೆ ಜೀವನ ಚೆನ್ನಾಗಿರುತ್ತೆ " ಎಂದು ಹರಸಿ ಬಂದದಷ್ಟೆ ಗೊತ್ತು
ಅದು ಹೇಗೆ ಕಾರಿನಲ್ಲಿ ಕೂತೆನೋ.
ರಾಜು ಕೂಡಲೆ ಕಾರನ್ನು ಮನೆಯತ್ತ ಚಲಿಸಿದ

(ಮುಂದುವರೆಯುವುದು)

1 comment:

ರವರು ನುಡಿಯುತ್ತಾರೆ