Friday, May 22, 2009

ಅವಳು -------------------------------?

ಇತ್ತೀಚಿಗೆ ಸೌದಾಮಿನಿ ಅಪಾರ್ಟ್ಮೆಂಟ್ ಲಾನ್‍ನಲ್ಲಿ ಅಪಾರ್ಟ್ಮೆಂಟ್ನ ಹಳೆಯ ನಿವಾಸಿಗಳೆಲ್ಲಾ ಗುಂಪು ಗುಂಪಾಗಿ ಗುಸುಗುಸು ಮಾತುಗಳನಾಡುತ್ತಿದ್ದರೆ ಲಾನ್ ಅಯ್ಯೋ ನನ್ನ ಸೌಂದರ್ಯವೆಲ್ಲಾ ಹಾಳಾಗಿ ಹೋಯ್ತೇ ಎಂದು ಹಲುಬುತಿತ್ತು.

ಸಂಜೆಯಾದರೆ ಅವಳದೇ ಮಾತು. ಅವಳದೇ ಧ್ಯಾನವಾಗಿತ್ತು

ಹಾಗಂತ ಅಲ್ಲಿದ್ದವರಲ್ಲ ಯಾವುದೋ ಥರ್ಡ್ ಕ್ಲಾಸ್ ಜನರಲ್ಲ.

ಒಳ್ಳೊಳ್ಳೆ ಕಂಪೆನಿಯಲ್ಲಿ ಸೀನಿಯರ್ ಹುದ್ದೆ, ಕೆಲವರು ಎಮ್ ಡಿ ಹೀಗೆ ಅನೇಕಾನೇಕ ಹೇಮಾಹೇಮಿಗಳು. ಆದರೂ ನಂ ೧೦೩ ಫ್ಲಾಟ್ ಅನ್ನು ಕೊಂಡುಕೊಂಡಿರುವ ಆ ಹೆಣ್ಣಿನ ಬಗ್ಗೆ.

ಹಿಂದಿದ್ದ ಕಾಮತ್ ತಮ್ಮ ಫ್ಲಾಟ್ ಮಾರುತ್ತಿದ್ದೆವೆಂದಾಗ ಸೌದಾಮಿನಿಯ ನಿವಾಸಿಗಳೆಲ್ಲ್ಲರಿಗೂ ಬೇಸರವಾಗಿತ್ತು. ಸ್ವತ: ಕಾಮತರವರಿಗೇ ಇಷ್ಟವಿರಲಿಲ್ಲ . ಆದರೇನು ಮಾಡುವುದು ಬಾಂಬೆಯಲ್ಲಿಯೇ ಸೆಟಲ್ ಆಗಿದ್ದ ಮಗ ಕರೆದಾಗ ಹೋಗಲೇ ಬೇಕಿತ್ತು.

ಯಾರೋ ಒಬ್ಬ ಹೆಂಗಸಿಗೆ ಮಾರುತ್ತಿದ್ದೆವೆಂದು ಹೇಳಿದ್ದರಷ್ಟೆ.. ಅವರಿಗ

ಆಕೆ ಬಂದು ಮೂರು ತಿಂಗಳಾಯ್ತು

ಅವಳು ಯಾರು ಏನು ಎಂದು ತಿಳಿದಿರಲಿಲ್ಲ. ಒಬ್ಬಳೇ ಇದ್ದಾಳೆ ಎಂಬುದು ಮಾತ್ರ ತಿಳಿದಿತ್ತು ಎಲ್ಲರಿಗೂ

ಯಾವಾಗಲೂ ಬಾಲ್ಕನಿಯಲ್ಲಿ ನಿಂತು ಮೊಬೈಲ್ ಹ್ಯಾಂಡ್ಸ್ ಫ್ರೀ ಕಿವಿಗೆ ಸಿಗಿಸಿಕೊಂಡು ನಗು ನಗುತ್ತಾ ಮಾತಾಡುತ್ತಿದ್ದಳು.

ಇನ್ನಾರೊಂದಿಗೂ ಅವಳು ಮಾತಾಡಿದ್ದೇ ಇಲ್ಲ.

ರಾತ್ರಿ ಕಾರ್ ಸ್ಟಾರ್ಟ್ ಮಾಡಿಕೊಂಡು ಒಬ್ಬಳೇ ಹೋಗುತ್ತಿದ್ದಳು ನಂತರ ಬೆಳಗ್ಗೆ ಬರುತ್ತಿದ್ದಳು . ನೋಡಲೂ ಸುಂದರವಾಗಿದ್ದಳು

ಮನುಷ್ಯನ ಜಿಹ್ವಾಚಾಪಲ್ಯಕ್ಕೆ ಅಡೆತಡೆಯುಂಟೆ

ನಾಲಿಗೆಗಳು ಬಾಯಿಗೆ ಬಂದದ್ದನ್ನು ಹೇಳಲಾರಂಭಿಸಿದವು

"ರೀ ಅವಳು ಬಾಂಬೆಯವಳಂತೆ." ೧೦೪ನೇ ಮನೆಯ ಪ್ರೇಮಶಿವರಾಂ ಹೇಳಿದ್ದೇ ತಡ

"ಹೌದಾರೀ ಈಗ ಬಾಂಬೆಯವರನ್ನ ನಂಬಬಾರದಂತೆ . ಅವರು ಟೆರರಿಸ್ಟ್ಸ್ ಆಗಿರಬಹುದು" ಚಂದ್ರಿಕಾ ಹಿರೇಮಠ್ ನುಡಿದರೆ

"ಇಲ್ಲಾರಿ ಆಕೇನಾ ನೋಡಿದ್ರೆ ಮದುವೆಯಾಗಿರೋ ಹಾಗಿದೆ. ಕೊರಳಲ್ಲಿ ತಾಳಿ ಬೇರೆ ಇದೆ ಟೆರರಿಸ್ಟ್ ಆದ್ರೆ ಹಾಗೆಲ್ಲಾ ಇರಲ್ಲ"ಶ್ವೇತ ತಿವಾರಿ ಮೊಬೈಲ್ನಲ್ಲಿ ಮೆಸ್ಸೇಜ್ ಮಾಡುತ್ತಾ ಉಲಿದರು

"ಇರ್ಬೋದು ಅವಳು ಟೆರರಿಸ್ಟ್ ಅಲ್ಲ ಆದರೆ ಬೇರಾವುದೋ ಕೆಲಸ ಮಾಡ್ತಾಳೆ"

"ಏನಿರಬಹುದು?"

ಎಲ್ಲರ ತಲೆಗೂ ಒಂದೆ ಯೋಚನೆ ಬಂದು ಅಷ್ಟರಲ್ಲಾಗಲೇ ಮಕ್ಕಳು ಕರೆದದ್ದರಿಂದ ಮನೆಯೊಳಗೆ ಓಡಿದರು.

ಇದೇ ಥರಹದ ಮಾತುಗಳು ಗಂಡಸರ ಗುಂಪಿನಲ್ಲೂ ಸಂಚರಿಸುತಿತ್ತು
ಆದರೆ ಅದೊಂದು ಭಾನುವಾರ ಸಾಯಂಕಾಲ ಮಕ್ಕಳ ಜೊತೆ ಚಿಲ್ಡ್ರನ್ ಪಾರ್ಕ್‍ನಲ್ಲಿ ನಿಂತಿದ್ದ ನಿವಾಸಿಗಳಿಗೆ ಶಾಕ್ ಕಾದಿತ್ತು.
ಪೋಲಿಸ್ ಜೀಪ್ ಬಂದು ನಿಂತಿತು . ಅದರೊಳಗಿನಿಂದ ಇನ್ಸ್‌ಪೆಕ್ಟರ್ ಒಬ್ಬ ಇಳಿದ
ವಾಚಮನ್ ಬಳಿ ೧೦೩ ನೇ ಫ್ಲ್ಲಾಟ್‌ಗೆ ಹೋಗುವುದಾಗಿ ಹೇಳಿ ರುಜು ಮಾಡಿ ಆತ ಹೊರಟ
ಎಲ್ಲರ ಕಣ್ಣೂ ಆ ಫ್ಲಾಟ್ ಮೇಲೆಯೇ
ಗುಸು ಗುಸು ನಡೆಯಿತು
"ನಾನು ಹೇಳಿಲ್ವಾ ಅವಳು ಬೇರೇನೋ ಮಾಡ್ತಾಳೆ ಅಂತ" ಶ್ವೇತಾ ತಿವಾರಿ ಎಲ್ಲರತ್ತ ನೋಡಿದರು
ಅವಳು ಅಪರಾಧಿಯಂತೆ ಹೊರಬರುವುದನ್ನು ತಮ್ಮ ಕಂಗಳಲ್ಲಿ ತುಂಬಿಕೊಳ್ಳಲು ಕಾದೇ ಕಾದರು ಆದರೂ
ಆತ ಎಷ್ಟು ಹೊತ್ತಾದರೂ ಬರಲೇ ಇಲ್ಲ.
ಕೊನೆಗೊಮ್ಮೆ ದೇಶಪಾಂಡೆಯವರ ಮಾತು ಹೊರ ಬಂತು
"ಅವನೂ ಅವಳ ಗಿರಾಕಿ ಏನೋ" ಎಲ್ಲೋ ನೋಡುತ್ತಾ ನುಡಿದರು
ಯಾವುದೋ ಸತ್ಯ ತಿಳಿದವರಂತೆ ನಿವಾಸಿಗಳ ಬಾಯಿಂದ
"ಏ--------------ನು? " ಎಂಬ ಉದ್ಗಾರ ಹೊರಟಿತು
ಕಾದಿದ್ದು ವ್ಯರ್ಥವಾಯ್ತು ಎಂಬಂತೆ ಆಕಾಶ ದಿಟ್ಟಿಸಿದರು.
"ಆಲ್ಲಾರಿ ನಮ್ಮ ಅಪಾರ್ಟ್ಮೆಂಟ್‍೬ನಲ್ಲಿ ಹೀಗೊಂದು ಕೆಲಸ ನಡಿತಾ ಇದೆ ಅಂದ್ರೆ ಅವಮಾನ ಅವಮಾನ " ಪೂಜಾರಿ ತಲೆ ಕೊಡವಿದರು.
"ಮೊದಲು ಅವಳನ್ನ ಇಲ್ಲಿಂದ ಓಡಿಸಬೇಕು. ಸಂಸಾರಸ್ತರಿರೋ ಜಾಗ ಇದು" ಪ್ರೇಮ ಶಿವರಾಂ ಏದುಸಿರು ಬಿಡುತ್ತಾ ನುಡಿದರು.
"ನಡೀರಿ ನಮ್ಮ ಅಪಾರ್ಟ್ಮೆಂಟ್ ಅಸ್ಸೋಸಿಯೇಶನ್ ನಿರ್ಧಾರ ಇದು ಅಂತ ಹೇಳಿ ವಾರ್ನ್ ಮಾಡೋಣ" ಅಸ್ಸೋಸಿಯೇಶನ್ ಅಧ್ಯಕ್ಷ ಪ್ರೇಂ ಕುಮಾರ್ ನುಡಿದು ೧೦೩ನೇ ಫ್ಲಾಟ್‍ನತ್ತ ನಡೆದರು. ಎಲ್ಲರೂ ಅವರನ್ನು ಹಿಂಬಾಲಿಸತೊಡಗಿದರು.
---------------------*******------
ತಟ ಪಟ ಬಾಗಿಲ ಬಡಿತದ ಸದ್ದು ಜೊತೆಗೆ ಸತತ ಕಾಲಿಂಗ್ ಬೆಲ್ ಸದ್ದಾದಾಗ ಮಂಚದಲ್ಲಿ ಪವಡಿಸಿದ್ದ್ದ ಆ ಜೋಡಿ ಹಕ್ಕಿಗಳೆರೆಡಕ್ಕೂ ರಸಭಂಗವಾಗಿರಬೇಕು.
ಜೋರಾಗಿ ಬಾಗಿಲು ತೆರೆದ ಸದ್ದಾಯಿತು.
ಬಾಗಿಲು ತೆರೆದವನ ಅವತಾರ ನೋಡಿ ನಿವಾಸಿಗಳೆಲ್ಲರಿಗೆ ಕೋಪ ಉಕ್ಕೇರಿ ಬಂತು
ಕೈಗೆ ಸಿಕ್ಕಿದ್ದ ಯಾವುದೋ ಟವೆಲ್ ಸುತ್ತಿ ನಿಂತಿದ್ದ
ಒಳಗೇನಾಯ್ತು ಎಂಬುದು ಅವನ ಮೊಗದಲ್ಲಾಗಿದ್ದ ಆಯಾಸ ವಿವರಿಸುತ್ತಿತ್ತು. ಅಲ್ಲಿದ್ದ ಗಂಡಸರಿಗೋ ಅವನ ಮೇಲೆ ಅಸೂಯೆಯಾಗತೊಡಗಿತು
ಅವನಿಗೂ ಹೀಗೆ ಗುಂಪು ಗುಂಪಾಗಿ ಬಂದ ಜನರನ್ನು ನೋಡಿ ಗಾಭರಿಯಾಯಿತೆನಿಸುತ್ತದೆ
ಅವರೆಲ್ಲರತ್ತ ಪ್ರಶ್ನಾರ್ಥಕವಾಗಿ ನೋಡಿದ
"ನೋಡಿ ಸಾರ್ ಇದೆಲ್ಲಾ ಇಲ್ಲಿ ಸರಿ ಬರೋಲ್ಲ. ಇದು ಮರ್ಯಾದಸ್ತರಿರೊ ಜಾಗ . ಇಂತಾ ಜನ ಇಲ್ಲಿರೋದು ಸರಿ ಅಲ್ಲ" ಪ್ರೇಂ ಕುಮಾರ್ ದನಿಯಲ್ಲಿದ್ದ ಶಕ್ತಿಯನ್ನೆಲ್ಲಾ ಬಿಟ್ಟು ಗುಡುಗಿದ
"ಯಾವ ಜನ ಏನು?" ಆತ ಕೇಳಿದ
"ಅದೇನು ಅಂತ ಬಾಯ್ಬಿಟ್ತು ಹೇಳ್ಬೇಕಾ? ಒಳಗೇನ್ರಿ ನಡೀತಿತ್ತು" ದೇಶಪಾಂಡೆ ಜೋರು ಮಾಡಿದ
ಆತನ ಮುಖದಲ್ಲಿ ಅಸಹನೆ ಕಂಡಿತು
"ನಿಮ್ಮನೇಲಿ ಏನ್ ನಡೆಯುತ್ತೋ ಅದೇ ನಡೀತಾ ಇದೆ" ತೀರಾ ಅಸಭ್ಯವಾಗಿ ಮಾತಾಡಿದ ಅನ್ನಿಸಿತು . ಹೆಂಗಸರೆಲ್ಲಾ ಛೆ ಛೆ ಎಂದರು
"ಏನ್ರಿ ಅದು ಛೆ ಛೆ ........ ಹೀಗೆ ಮತ್ತೊಬ್ಬರ ಮನೆ ಮುಂದೆ ನಿಂತು ಗಂಡ ಹೆಂಡತಿ ಏನ್ಮಾಡ್ತಾ ಇದೀರಾ ಅಂತ ಕೇಳ್ತಿರೋದು ಸಭ್ಯರ ಲಕ್ಷಣಾನ?"
ಕೊನೆಯ ಮಾತು ಕೇಳುತ್ತಿದ್ದಂತೆ ಅವಕ್ಕಾದರು ನಿವಾಸಿಗಳು
"ನೀವು ಅವರ ಗಂಡಾನಾ?" ಪೂಜಾರಿ ಪ್ರಶ್ನಿಸಿದರು
"ಹೌದು ಯಾಕೆ ಅನುಮಾನಾನ ? " ತೀಕ್ಶ್ಣವಾಗಿ ಪ್ರಶ್ನಿಸಿದ.ಮೊದಲೇ ಪೋಲಿಸು
ಪೂಜಾರಿಯ ಎದೆ ನಡುಗಿ ಹೋಯ್ತು
ಅದು ನಂಗಲ್ಲ ಇವರಿಗೆಲ್ಲಾ ಅನುಮಾನ ಇದೆಯಂತೆ ಉಳಿದವರತ್ತ ಕೈ ತೋರಿ ಹಿಂದೆ ನಡೆದುಬಿಟ್ಟ

" ಇವಳಿಗೆ ಇಲ್ಲಿ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ ಕೆಲ್ಸ . ನಾನ್ಯಾರಂತೆ ನಿಮ್ಗೆ ಗೊತ್ತಾಗಿದೆ ಅನ್ಸುತ್ತೆ
ಟ್ರಾನ್ಸಫರ್ ಮಾಡಿಸಿಕೊಂಡು ಇವತ್ತು ಇಲ್ಲಿಗೆ ಬಂದೆ ಅಲ್ಲಾರಿ ಎಂಥಾ ಕಚಡಾ ಜನಾರಿ ನೀವುಗಳು ಒಬ್ಬೊಬ್ಬರನ್ನ ಎತ್ತಾಕೊಂಡು ಒಳಗೆ ಹಾಕಿದ್ರೆ ಇಂತಾ ಕಚಡಾ ಯೋಚನೆಗಳು ಓಡೋಗೊತ್ತೆ" ಆತ ತನ್ನ ಪೋಲಿಸ್ ಭಾಷೆ ಬಳಸತೊಡಗಿದ ಕೂಡಲೆ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡತೊಡಗಿದರು.
ಅಯ್ಯೋ ಇಷ್ಟೇನಾ ಎಂದೊಬ್ಬರಾದ ಮೇಲೆ ಮತ್ತೊಬ್ಬರು ಬೇಸರಿಸಿಕೊಳ್ಳುತಾ ಮನೆಯೊಳಗೆ ನುಸುಳಲಾರಂಭಿಸಿದರು

5 comments:

  1. ರೂಪ ನಿಮ್ಮ ಕಥೆ ಚೆನಾಗಿದೆ!! ಜನರ ಬಾಯಿಗೆ ಬೀಗ ಆಕಲು ಸಾಧ್ಯವೇ.. ಒಂಟಿ ಹೆಣ್ಣು ನೆಲೆಸಿದ್ದಾಳೆಂದರೆ ಬಾಯಿಗೆ ಬಂದಂತೆ ಮಾತಾಡುತ್ತಾರೆ ಏಕೆ.? ಒಳ್ಳೆ ತರದಲ್ಲಿ ಚಿಂತಿಸೋಲ್ಲ ಗೊತ್ತಿಲ್ಲ...
    ಇಂತಹ ವಿಚಾರ ಬ್ಲಾಗ್ ನಲ್ಲಿ ಬಿತ್ತರಿಸಿದ್ದು ಒಳ್ಳೆಯದೇ...
    ಧನ್ಯವಾದಗಳು

    ReplyDelete
  2. ರೂಪ ಮೇಡಮ್,

    ಕಥನ ಶೈಲಿ ತುಂಬಾ ಚೆನ್ನಾಗಿದೆ...ಒಳ್ಳೇ ಸಸ್ಪೆನ್ಸ್ ಇತ್ತು. ಮತ್ತೊಬ್ಬರ ಬಗ್ಗೆ ಕುತೂಹಲ ಉಂಟಾದಾಗ ಹೀಗೆ ಬಾಯಿಗೆ ಬಂದಂತೆ ಮಾತಾಡುತ್ತಾರೆ...ಇವರಿಗೆಲ್ಲಾ ಅವರ ಪಾಡಿಗೆ ಅವರು ಇರಲಿ, ಅಂತ ಅವರ ಬಗ್ಗೆ ಒಳ್ಳೇ ಆಲೋಚನೆಗಳು ಯಾಕೆ ಬರೋಲ್ಲ....

    ಬರವಣೀಗೆ ಇಷ್ಟವಾಯಿತು...

    ಧನ್ಯವಾದಗಳು...

    ReplyDelete
  3. ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯಬಿಡು ನಾಲಗೆ
    ಜನ-ಜನಮನ ವನ್ನು ಹತ್ತಿರದಿಂದ ನೋಡಿ, ವಿಶ್ಲೇಷಿಸಿ ಆಡಿದ ದಾಸರ ಮಾತುಗಳಿವು.
    ಏನಾದರೂ ತಿನ್ನೋಕೆ, ಹಿಡಿತವಿಲ್ಲದೇ ಮಾತನಾಡೋಕೆ ಚಾಚಿರುವ ನಾಲಗೆಯ ವೈಧ್ಯತೆಗೆ ನಿಮ್ಮ ಕಥೆಯೂ ಒಂದು ನಿದರ್ಶನ...
    ರೂಪಾರವರೇ, ವಾಸ್ತವತೆಯನ್ನು ನಗ್ನಗೊಳಿಸಿ ವಿವರಿಸುವ ಧಾಟಿ ಚನ್ನಾಗಿದೆ.

    ReplyDelete
  4. ಮನಸು ಮೇಡಮ್, ಜಲನಯನರೇ, ಶಿವು, ಅಗ್ನಿ
    ಧನ್ಯವಾದಗಳು

    ReplyDelete

ರವರು ನುಡಿಯುತ್ತಾರೆ