ಶೈಲಾ ಸಂತೃಪ್ತ ಗೃಹಿಣಿಯಾಗಿದ್ದಳು. ಭವ್ಯ ಬಂಗಲೆ, ನೆಮ್ಮದಿಯ ತಾಣ . ವಾತ್ಸಲ್ಯದ ಮೂರ್ತಿ ತಾಯಿಯ ಪ್ರತಿರೂಪ ಅತ್ತೆ, ಆಳು ಕಾಳುಗಳು, ಅವಳ ಮನದ ಪ್ರತಿ ಆಸೆಗಳನ್ನು ಈಡೇರಿಸುವ ಗಂಡ . ಈಗಷ್ಟೆ ಹುಟ್ಟಿದ ಮುದ್ದುಮಗು ಸಿರಿ . ಆ ಮಗುವಿನ ಪ್ರತಿಯೊಂದು ಸೇವೆಯನ್ನೂ ಅತ್ತೆಯೇ ಮಾಡುತ್ತಿದ್ದರು. ಸಿರಿಗೀಗ ಒಂದು ವರ್ಷ. ತಾಯಾಗಿ ಶೈಲಾ ಅಂಥಾ ವಾತ್ಸಲ್ಯವನ್ನೇನು ಕೊಟ್ಟಿರಲಿಲ್ಲ . ಅದು ಹೆಚ್ಚಾಗಿ ಅಜ್ಜಿಯ ಬಳಿಯಲ್ಲೇ ಬೆಳೆಯುತ್ತಿತ್ತು.
ಶೈಲಾ ಮಾಡಿದ್ದು BSc Computer science
ಆದ್ದರಿಂದ ಪ್ರೋಗ್ರಾಮಿಂಗ್ ಮೇಲೆ ಅವಳಿಗೆ ಸಹಜವಾಗಿಯೇ ಆಸಕ್ತಿ. ಕಂಪ್ಯೂಟರ್ ಮುಂದೆ ಕುಳಿತು ಅವಳಿಗಿಷ್ಟವಾದ ಪ್ರೋಗ್ರಾಮ್‌ಗಳನ್ನು ಬರೆಯುತ್ತಾ ಕುಳಿತಿರುತ್ತಿದ್ದಳು. ಅದು ಬಿಟ್ಟರೆ ಮತ್ತೆಂಥಾ ಹವ್ಯಾಸಗಳೂ ಇರಲಿಲ್ಲ. ಬೇಕಾಗಿಯೂ ಇರಲಿಲ್ಲ.
ಹೀಗಿದ್ದಾಗ ಒಮ್ಮೆ ಹೊಸದೊಂದು ಪ್ರೋಗ್ರಾಮಿಂಗ್ ಲಾಂಗ್ವೇಜ್ ಕಲಿಯಬೇಕೆಂಬ ಆಸೆ ಬಲಿಯಿತು.
ಮನು ಅವಳಿಗೆ ಬೇಕಾದ ಪುಸ್ತಕಗಳನ್ನೆಲ್ಲಾ ತಂದುಕೊಟ್ಟನು. ಅದನ್ನೆಲ್ಲಾ ಓದಿದರೂ ತಲೆಗೆ ಹತ್ತಲಿಲ್ಲ. ಅದೇ ದೊಡ್ಡ ಕೊರಗಾಗಿ ಹೋಯ್ತು.
ರಾತ್ರಿ ಎಲ್ಲಾ ಮಂಕಾಗಿರುತ್ತಿದ್ದಳು. ಯಾರೊಡನೆಯೂ ಮಾತನ್ನಾಡುತ್ತಿರಲಿಲ್ಲ. ಹೇಗಾದರೂ ಅದನ್ನು ಕಲಿಯಬೇಕೆಂಬ ತೀವ್ರ ಹಂಬಲ ಅವಳಿಗೆ. ಮನುವಿನ ಆತಂಕ ಹೆಚ್ಚಾಯ್ತು.
ಅವಳಿಗೇನು ಬೇಕು ಎಂದು ರಮಿಸಿ ಕೇಳಿದ. ಅವಳ ಆಸೆ ಕೇಳಿ ಮನಸಾರೆ ನಕ್ಕು ಅವಳಿಗೊಬ್ಬ ಟ್ಯೂಟರ್ ನೇಮಿಸಲು ಜಾಹೀರಾತು ನೀಡಿದ . ಸಂಬಳ ಹದಿನೈದು ಸಾವಿರ ತಿಂಗಳಿಗೆ .
ಬಂದ ಸಾವಿರಾರು ಅಪ್ಪ್ಲಿಕೇಷನ್ಸ್‌ನಲ್ಲಿ ಕೊನೆಗೆ ಆಯ್ಕೆಯಾಗಿದ್ದು ಕೇವಲ ನಾಲ್ಕು ಅದರಲ್ಲಿ ಮೂರು ಲೇಡಿ ಟ್ಯೂಟರ್. ಒಂದು ಮೇಲ್ ಟ್ಯೂಟರ್,
ಮನುವಿಗೆ ವಿದ್ಯಾಭ್ಯಾಸ ಹೆಚ್ಚು ಆಗಿರದಿದ್ದರೂ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಎತ್ತಿದ ಕೈ.ಅವರೆಲ್ಲರಲ್ಲಿ ಚಾರ್ಮಿಂಗ್ ಹಾಗು ಹೆಚ್ಚು ತಿಳಿದಿದ್ದಾನೆಂದೆನಿಸಿದ ಹುಡುಗನನ್ನೇ ಆಯ್ಕೆ ಮಾಡಿದ. ವಿಕಾಸ್ ಬಹಳ ಬುದ್ದಿವಂತ ಬಿ. ಇ ಮಾಡಿ ಕೆಲಸಕ್ಕಾಗಿ ಹುಡುಕಾಡುತ್ತಿದ್ದ.
ಮನುವಿನ ತಾಯಿ ಒಮ್ಮೆ " ವಯಸಿನ ಹುಡುಗ ಬಿಟ್ಟು ಬೇರೆಯವರು ಸಿಗಲಿಲ್ಲವಾ? ನಿಂಗೆ" ಎಂದು ಆಕ್ಷೇಪಿಸಿದರು.
ಮನು ನಕ್ಕು ಬಿಟ್ಟ
" ಅಮ್ಮಾ ನಂಗೆ ಶೈಲಾ ಮೇಲೆ ನಂಬಿಕೆ ಇದೆ ಹಾಗೇನಾದರೂ ಆದರೆ ಆಗ ಶೈಲಾಗೆ ನನ್ನಲ್ಲೇನೋ ಕೊರತೆ ಇದೆ ಅಂತ ಕಂಡಿದೆ ಅಂದ್ಕೋತೀನಿ. ಅಷ್ಟಕ್ಕೂ ಹಾಗೇನೂ ಆಗಲ್ಲ ನೀನು ಸುಮ್ಮನಿರು ಅಮ್ಮ"
ಶೈಲಾ ಮರೆಯಲ್ಲಿದ್ದು ಕೇಳಿಸಿಕೊಂಡಿದ್ದಳು ಆ ಕ್ಷಣಕ್ಕೆ ಅವಳಿಗೆ ನಗು ಬಂತು. ಮನುವನ್ನು ಬಿಟ್ಟು ತಾನು ಛೇ ಎಲ್ಲಾದರೂ ಉಂಟೇ?. ಅತ್ತೆಯ ಸಂಕುಚಿತ ಬುದ್ದಿಗೆ ಬೈದುಕೊಂಡಳು
******************************************************************
ದಡಕ್ಕನೆ ಎದ್ದಳು ಶೈಲಾ ಆಗಲೇ ಐದು ವರೆಯಾಗಿತ್ತು. ಮುಖದಲ್ಲಿದ್ದ ಬೆವರನ್ನ ಒರೆಸಿಕೊಂಡಳು . ಅತ್ತೆಯ ಅನುಮಾನವೇ ನಿಜವಾಯ್ತಲ್ಲವೇ ? ಮತ್ತೆ ಯೋಚಿಸಲು ಧೈರ್ಯ ಬರಲಿಲ್ಲ
ಹಾಲು ತರಬೇಕು.ಪಕ್ಕದಲ್ಲಿದ್ದ ವಿಕಾಸ್ ಇನ್ನು ಮಲಗಿಯೇ ಇದ್ದ. ಎಬ್ಬಿಸಿದರೂ ಆತ ಏಳುವವನಲ್ಲ. ಬೆಳಗ್ಗೆ ಏಳುಘಂಟೆಗೆ ಎದ್ದೇ ಅವನಿಗೆ ಅಭ್ಯಾಸ .ಎದ್ದು ಮುಖ ತೊಳೆದುಕೊಂಡು ಹಾಲಿನಂಗಡಿಯ ಕಡೆ ಹೆಜ್ಜೆ ಹಾಕಿದಳು.
****************************************
ಶೈಲಾ ಕೂಡ ಎಂಟು ಘಂಟೆ ಕಡಿಮೆ ಏಳುತ್ತಿರಲಿಲ್ಲ. ಎದ್ದ ಕೂಡಲೆ ಆಗಲೇ ರೆಡಿಯಾಗಿರುತ್ತಿದ್ದ ಮನುವಿನಿಂದ ಹೂಮುತ್ತನೊಂದು ಪಡೆದು , ಸಿರಿಯನ್ನು ಮುದ್ದಿಸಿಯೇ ಅವಳ ಮುಂದಿನ ದಿನಚರಿ.
ಮುಖ ತೊಳೆದುಕೊಂಡು ಕೂತೊಡನೆ ಆಳು ಜಯ ಕಾಫಿ ಕೊಡುತ್ತಿದ್ದಳು . ಪೇಪರ್ ಓದುತ್ತಾ ಕಾಫಿ ಕುಡಿಯುತ್ತಿದ್ದಂತೆ ಮನು ಕಂಪೆನಿಗೆ ಹೊರಡಲು ಸಿದ್ದನಾಗುತ್ತಿದ್ದ. ಅವನಿಗೆ ಬಡಿಸುವುದು ಮಾತ್ರ ಶೈಲಾ ಕೆಲಸವೇ. ಅಷ್ಟೊತ್ತಿಗಾಗಲೇ ಸಿರಿಯ ಸ್ಜ್ನಾನ ಮುಗಿಸಿ ರಂಗಮ್ಮ ಅವಳನ್ನು ಕರೆತರುತ್ತಿದ್ದರು. ಅತ್ತೆ ಸಿರಿಗೆ ತಿಂಡಿ ತಿನ್ನಿಸುತ್ತಿದ್ದರು. ಆ ವೇಳೆಗೆ ಮನು ಕಂಪನಿಗೆ ಹೊರಡುತ್ತಿದ್ದ
ಅವನ್ನನ್ನು ಬಿಳ್ಕೊಟ್ಟು ಸ್ನಾನ ಮುಗಿಸಿ ಅತ್ತೆಯೊಡನೆ ಒಂದಷ್ಟು ಮಾತಾಡಿ ತಿಂಡಿ ಮುಗಿಸಿ ಸಿರಿಯನ್ನು ಅವರ ಬಳಿ ಕೊಟ್ಟು ಕಂಪ್ಯೂಟರ್ ಬಳಿ ಬಂದು ಕೂರುತ್ತಿದ್ದಳು.ಅಷ್ಟೇ ಅವಳ ಕೆಲಸ ನಡುನಡುವಲ್ಲಿ ಟಿವಿ ನೋಡುತ್ತಿದ್ದಳು. ಬೋರಾದಾಗ ಶಾಪಿಂಗ್ ಹೊರಡುತ್ತಿದ್ದಳು . ಆಗಾಗ ಗೆಳೆಯ ಗೆಳತಿಯರ ಜೊತೆ ಚಾಟಿಂಗ್ ಇಷ್ಟು ಅವಳ ಪ್ರಪಂಚವಾಗುತ್ತಿದ್ದವು. ಅದೇ ಸ್ವರ್ಗ ಅವಳಿಗೆ.
********************************************************************
ಹಾಲು ತಂದು ಕಾಯಿಸಲು ಗ್ಯಾಸ್ ಆನ್ ಮಾಡಿದಳು.
ವಿಕಾಸ್ ಹಿಂದಿನಿಂದ ಬಂದು ಅಪ್ಪಿಕೊಂಡ . ಹಾಗೆಯೇ ಅವನ ಎದೆಗೊರಗಿದಳು. "ಹೌ ಆರ್ ಯು ಫೀಲಿಂಗ್? ಶೈಲೂ"
ಅವಳನ್ನು ತನ್ನೆಡೆಗೆ ತಿರುಗಿಸಿಕೊಂಡು ಗಲ್ಲವನ್ನು ಎತ್ತಿದ.
"ಪರವಾಗಿಲ್ಲ ಈಗ"
"ಶೈಲೂ ಸಿರೀನ ಬಿಟ್ಟಿರೋದು ಕಷ್ಟ ಅಂತಾದರೆ ಲೆಟ್ ಅಸ್ ಬ್ರಿಂಗ್ ಹರ್ ಹಿಯರ್ . ಒಬ್ಬ ತಾಯಿಗೆ ಮಗೂನ ಬಿಡೋದು ಎಷ್ಟು ಕಷ್ಟ ಅಂತ ಗೊತ್ತಿದೆ ನಂಗೆ. ನಾನೆ ಅವಳನ್ನ ತುಂಬಾ ಹಚ್ಚಿಕೊಂಡು ಬಿಟ್ಟಿದ್ದೇನೆ"
ಇದು ಅವನು ಕೇಳುತ್ತಿರುವುದು ಅದೆಷ್ಟನೇ ಸಲವೋ ಲೆಕ್ಕವಿಲ್ಲ
ಶೈಲಾ ಬೇಡವೆನ್ನುವಂತೆ ತಲೆ ಆಡಿಸಿದಳು.
"ವಿಕಿ ಅವಳ ಬಾಲ್ಯ ನನ್ನ ಹಾಗೆ ಸುಂದರವಾಗಿರಲಿ ಮನು ಅಪ್ಪ ಅಮ್ಮ ಎರೆಡೂ ಆಗಿ ನೋಡ್ಕೋತಾರೆ ನಂಗೆ ಗೊತ್ತು . ಅವಳಿಗೆ ನನ್ನ ನೆನಪೇ ಬರದ ಹಾಗೆ ಕೇರ್ ತಗೋತಾರೆ . ಸಿರಿ ಅಲ್ಲಿನ ಸಿರಿತನದೊಂದಿಗೇ ಬೆಳೆಯಲಿ."
ಅವಳನ್ನು ಅಪ್ಪಿ ಹಿಡಿದಿದ್ದ ವಿಕಾಸನ ಕೈ ಸಡಿಲಾವದವು.ಅವನ ಎದುರಿಗೆ ಮನುವನ್ನು ಹೊಗಳಬಾರದಿತ್ತೇನೋ ಎಂದನಿಸಿತು.
ಅವನ ಕೈಗಳನ್ನು ತನ್ನ ಸೊಂಟದ ಸುತ್ತ ಬಿಗಿ ಮಾಡುತ್ತಾ "ಸಾರಿ ವಿಕಿ" ಅವನ ಕಣ್ಣನ್ನೇ ನೋಡಿದಳು.
"ಶೈಲಾ ಸಾರಿ ಏಕೆ? ನಾನೆ ನೋಡಿದೀನಿ ಅವರು ನಿನ್ನನ್ನ ಎಷ್ಟು ಪ್ರೀತಿ ಮಾಡ್ತಾ ಇದ್ದರಂತ. ನೆನ್ನೆ ಮನು ನಮ್ಮ ಕಂಪೆನಿ ಮುಂದೇನೆ ಕಾರ್‌ನಲ್ಲಿ ಹೋದರು. ಜೊತೆಗೆ ಸಿರಿ ಸಹಾ. ನಂಗೆ ಯಾಕೋ ಗಿಲ್ಟ್ ಫೀಲಿಂಗ್ ತುಂಬಾ ಬರ್ತಾ ಇದೆ. ಪ್ರೇಮ ಅನ್ಕೊಂಡು ನಾವು ದಾರಿ ತಪ್ಪಿದ್ವಾ ಅಂತ"
ಶೈಲಾಳನ್ನು ಬಿಟ್ಟು ಸೊಫಾಕೊರಗಿದ.
ಶೈಲಾ ಕಣ್ಣಲ್ಲಿ ನೀರು ಚಳಕ್ ಎಂದು ಚಿಮ್ಮಿತು. ಕಣ್ಣಿನ ಹನಿಗಳು ಕಾಣದಂತೆ ಗೋಡೆಯ ಕಡೆ ತಿರುಗಿದಳು
ಮೌನವೇ ರಾಜನಾಗಿತ್ತು. ಕೆಲ ಹೊತ್ತು
*****************************************
ತಾನಂದುಕೊಂಡಿದ್ದ ಸ್ವರ್ಗಕ್ಕಿಂತ ಸುಂದರವಾದುದು ಶೈಲಾಗೆ ವಿಕಾಸ್‌ನ ಮಾತಿನಲ್ಲಿ ಕಾಣಿಸಿತು.ಚುರುಕು ಮಾತಿನ ಸೊಗಸುಗಾರ ವಿಕಾಸ್. ಚಟ ಪಟ ಮಾತು ಪ್ರತಿ ಘಳಿಗೆಗೂ ಹಾಸ್ಯ ತಮಾಷೆ. ಅಂತಹ ಪರಿಸರಕ್ಕೆ ಶೈಲಾ ಒಗ್ಗಿರಲಿಲ್ಲ. ಮನು ಅವಳನ್ನು ಮಗುವಿನಂತೆ ಪ್ರೀತಿಸುತ್ತಿದ್ದ. ಅತ್ತೆ ವಾತ್ಸ್ವಲ್ಯನೀಡುತ್ತಿದ್ದರು. ಆಳು ಕಾಳುಗಳು ಅವಳಿಗೆ ಅಮ್ಮಾವ್ರ ಸ್ಥಾನ ನೀಡಿದ್ದರು. ಆದರೆ ಅವಳೊಬ್ಬ ಮೆಚೂರ್ಡ್ ಹೆಣ್ಣು ಎಂದು ತಿಳಿದು ವರ್ತಿಸುತ್ತಿದ್ದ ವಿಕಾಸ್
ತಾನೊಬ್ಬ ಹೆಣ್ಣು ಎಂಬುದು ವಿಕಾಸನ ಜೊತೆಯಲ್ಲಿ ಪಳಗಿದ ಮೇಲೆ ತಿಳಿಯಿತು. ಕ್ಲಾಸಿನಲ್ಲಿ ತಪ್ಪು ಮಾಡಿದರೆ ದಂಡಿಸುತ್ತಿದ್ದ. ಒಮ್ಮೊಮ್ಮೆ ಜಗಳವನ್ನೂ ಆಡುತ್ತಿದ್ದ. ಆಗಾಗ ಅವಳನ್ನು ಹೊಗಳುತ್ತಿದ್ದ.
ಸರಿಯಾಗಿ ಕಾಣದಿದ್ದರೆ ನೀವು ಚೆನ್ನಾಗಿ ಕಾಣುತ್ತಿಲ್ಲ ಎಂದು ನೇರವಾಗಿ ಹೇಳುತಿದ್ದ. ಇಂಥ ರೀತಿ ಶೈಲಾಗೆ ಹೊಸದು. ಕಾಲೇಜಿನಲ್ಲಿಯೂ ಶೈಲಾಗೆ ಇಂಥ ಅನುಭವಗಳಾಗಿರಲಿಲ್ಲ. ಆಗಾಗ ಸಿನಿಮಾಗಳ ಬಗ್ಗೆ ಚರ್ಚಿಸುತ್ತಿದ್ದ. ಶೈಲಾ ವಿಕಾಸ್‌ಗೆ ಬಹು ಬೇಗ ಮರುಳಾಗಿದ್ದಳು. ತಾನೇನು ಬಯಸುತ್ತಿದ್ದೇನೆ ಎಂಬುದು ಅವಳಿಗೆ ಅರ್ಥವಾಗುತ್ತಿರಲಿಲ್ಲ. ವಿಕಾಸನ ಯೌವ್ವನವನ್ನೇ? ರೂಪವನ್ನೇ? ಮಾತನ್ನೇ? ಎಂಥದೋ ಆಕರ್ಷಣೆ ಅವನಲ್ಲಿ ಕಾಣತೊಡಗಿತು.
ವಯೋ ಸಹಜ ಗಂಭೀರತೆಯನ್ನು ಮೈಗೂಡಿಸಿಕೊಂಡಿದ್ದ ಮನು ಸಪ್ಪೆ ಎನಿಸಲಾರಂಭಿಸಿದ. ವಿಕಾಸನ ತುಂಟತನ ಸಹಜವಾಗಿಯೇ ಸೆಳೆಯಿತು. ಹೊಸ ಲೋಕವನ್ನೇ ಸೃಷ್ಟಿಸುತ್ತಿದ್ದಾನೆ ಎಂದೆನಿಸಿದಾಗಲೆಲ್ಲಾ ಅವನತ್ತ ಕೊಂಚ ಕೊಂಚ ವಾಲತೊಡಗಿದಳು. ಮನುವಿನಿಂದ ದೈಹಿಕವಾಗಿ ಮಾನಸಿಕವಾಗಿ ದೂರವಾಗುತ್ತಿದ್ದಳು.
ವಿಕಾಸ್‍ಗೆ ಇದು ಅರಿವಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. . ಅವರ ಸುಮಧುರ ದಾಂಪತ್ಯಕ್ಕೆ ತಾನೇ ಗೋರಿ ಕಟ್ಟುತ್ತಿದ್ದೇನೆಂದೆನಿಸಿ ಮನುವಿಗೆ ಯಾವುದೋ ಕಾರಣ ಹೇಳಿ ಊರಿಗೆ ಹೊರಟು ಹೋದ. ಅವಳಿಂದ ತಪ್ಪಿಸಿಕೊಂಡೆ ಎಂದುಕೊಂಡ ಆದರೆ ಹಾಗಾಗಲಿಲ್ಲ
*****************************ಇನ್ನೂ ಇದೆ**********************
This is good. ಸ್ತ್ರೀಯ ಮನಸ್ಸಿನ ವಿವಿಧ ಭಾವನೆಗಳ ಬಗೆಗೆ ಈ ಮೊದಲು ತ್ರಿವೇಣಿಯವರು ಮಾತ್ರ ಬರೆದಿದ್ದರು. ಇದೀಗ ನಿಮ್ಮ ಕತೆಯಲ್ಲಿ ಮತ್ತೆ ಓದುತ್ತಿದ್ದೇನೆ.
ReplyDeleteಎಲ್ಲಾ ಇದ್ದರೂ, ಇನ್ನೇನೋ ಬೇಕೆಂದು ಹುಡುಕುವ ಹುಚ್ಚು ಮನಸ್ಸು ಶೈಲಳದ್ದು. ಕಂಡಿರದಿದ್ದ, ಅಹುಭವಿಸಿರದಿದ್ದ ಭಾವನೆಗಳ ಮರೀಚಿಕೆಯನ್ನು ಹತ್ತಿ ಹೊರಟಂತಿದೆ....ಮುಂದೇನಾಗತ್ತೋ?....!!!!!!!
ReplyDeleteಶ್ಯಾಮಲ
ರೂಪ ಮೇಡಮ್,
ReplyDeleteಕತೆ ತಿರುವು ತೆಗೆದುಕೊಳ್ಳುವಂತೆ ಇದೆ. ಹೆಣ್ಣಿನ ಮನಸ್ಸಿನ ವಿಭಿನ್ನ ಮುಖಗಳನ್ನು ಕತೆಗಳಲ್ಲಿ ಬಂದಾಗ ಅದು ಕುತೂಹಲಕ್ಕೆ ದಾರಿಮಾಡಿಕೊಡುತ್ತದೆ. ಇಲ್ಲಿ ಆಗಿರುವುದು ಅದೇ..ಮುಂದುವರಿಸಿ...
Nice, keep writing .....
ReplyDeleteಕಥೆಯ ತಿರುವು ಇಷ್ಟವಾಗುತ್ತಿದೆ...
ReplyDeleteಕುತೂಹಲ ಹುಟ್ಟಿಸಿದೆ..
ಮುಂದುವರೆಸಿರಿ...
ಇಂದಿನ ಕನ್ನಡ ಪ್ರಭದಲ್ಲಿ ನಿಮ್ಮ ಬ್ಲಾಗಿನ ಬಗೆಗೆ ಬಂದಿದೆ...
ಅಭಿನಂದನೆಗಳು..
ಕಥೆಯ ಕುತೂಹಲ ಹುಟ್ಟಿಸಿದೆ..
ReplyDeleteಮುಂದುವರೆಸಿರಿ... Please
ಅಭಿನಂದನೆಗಳು..
Praveen
ಕಥೆಯನ್ನು ಪೂರ್ತಿ ಓದಿದೆ, ಬಹಳ ಆಸಕ್ತಿಕರವಾಗಿದೆ, ಹಾಗೆಯೇ ಹಾಗೆಯೇ ಕನ್ನಡಪ್ರಭದಲ್ಲಿ ನಿಮ್ಮ ಬ್ಲಾಗ್ ಬಗೆಗೆ ತಿಳಿದು ಇಲ್ಲಿ ಬಂದೆ, ಅಭಿನಂದನೆಗಳು
ReplyDeletestory is wonderfull all angles of mind is well defined here...so nice story..real life take true word...here..
ReplyDelete