Saturday, August 29, 2009

ಎರೆಡು ದಡಗಳ ನಡುವೆ -2

ಘ್ಹಂಟೆ ಏಳಾಗಿತ್ತು
ಶೈಲಾ ಮನೆಗೆ ಬಂದು ಒಂದು ಘಂಟೆ ಯಾಗಿತ್ತು ವಿಕಾಸನ ಸುಳಿವಿರಲಿಲ್ಲ . ಕೋಪವಿದ್ದುದರಿಂದ ಅವನಿಗೆ ಕಾಲ್ ಮಾಡಲು ಹೋಗಲಿಲ್ಲ. ನೋಡೋಣ ಅವನೇ ಕಾಲ್ ಮಾಡಲಿ ಎಂದು ಸುಮ್ಮನಾದಳು
ಫ್ರಿಡ್ಜ್‌ನಲ್ಲಿದ್ದ ಬ್ರೆಡ್ ತಿಂದರಾಯ್ತು ಎಂದುಕೊಂಡು ಯಾವ ಅಡುಗೆಯ ತಂಟೆಗೇ ಹೋಗಲಿಲ್ಲ ಅವಳಿಗೆ ಯಾವ ಅಡುಗೆಯನ್ನೂ ಮಾಡಲು ಬರುವುದಿಲ್ಲ. ಅವಳಾದರೂ ಎಂದು ಅಡುಗೆ ಮಾಡಿದ್ದಾಳೆ?
ಮನುವಿನ ಮನೆಯಲ್ಲಿ ಅತ್ತೆ ಪ್ರೀತಿಯಿಂದ ಮಾಡಿ ಬಡಿಸುತ್ತಿದ್ದರು. ಎಷ್ಟೊಂದು ದಿನಗಳಾಗಿವೆ ಅಂತಹ ರುಚಿ ರುಚಿ ಅಡುಗೆ ತಿಂದು.
ಈ ಒಣಗಿರುವ ಬ್ರೆಡ್ ತಿನ್ನುವಾಗಲೆಲ್ಲಾ ಅತ್ತೆಯ ನೆನಪು ನುಗ್ಗಿ ನುಗ್ಗಿ ಬರುತ್ತಿತ್ತು. ಮತ್ತೆ ಹನಿಗಳು ಕಣ್ಣಂಚಿಗೆ ಬಂದು ನಿಂತವು.
ವಿಕಾಸ್ ನೋಡಿದರೆ ನೊಂದುಕೊಂಡು ಸೀದಾ ಹೋಟೆಲ್‌ಗೆ ಕರೆದೊಯ್ಯುತ್ತಾನೆ ಆದರೆ ತನಗೆ ಹೋಟೆಲ್ ತಿಂಡಿ ಮೊದಲೇ ಇಷ್ಟವಿಲ್ಲ.
ಟಿವಿ ಆನ್ ಮಾಡಿದಳು.

"ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ ಅಮ್ಮನು ತಾನೆ"
ಎಂದು ಪುನೀತ್ ಚಿಕ್ಕ ಹುಡುಗನಾಗಿದ್ದ ಹಾಡೊಂದು ಬರುತ್ತಿತ್ತು.ಯಾರಿವನು ಚಿತ್ರದ್ದಿರಬೇಕು.
ಟಿವಿ ಆಫ್ ಮಾಡಿದಳು.
ಅಮ್ಮ ಎನ್ನುವವಳು ದೇವತೆಯೇ? ತನ್ನಮ್ಮ ಭೂಮಿ ಮೇಲೆ ಇರಲಿಲ್ಲ ಹಾಗಾಗಿ ಅವಳು ತನಗೆ ದೇವತೆಯಾಗಿದ್ದಳೆ ಇಲ್ಲವೇ ಎಂಬುದು ಗೊತ್ತಾಗಲಿಲ್ಲ . ಆದರೆ ಮುಂದೆ ತಾನೆ ಅಮ್ಮ ಆದಾಗ ನನ್ನ ಕರ್ತವ್ಯ ನಿರ್ವಹಿಸಿದೆನೇ? ಪ್ರಶ್ನೆಗಳು ಧಾಳಿ ಇಡಲಾರಂಭಿಸಿದವು. ತನ್ನನ್ನು ಸಮರ್ಥಿಸಿಕೊಳ್ಲುವ ಉತ್ತರಕ್ಕಾಗಿ ತಡಕಾಡಿ ಸೋತಳು
**********************************
ವಯಸು ಜಾಸ್ತಿ ಎನ್ನುವುದನ್ನು ಬಿಟ್ಟರೆ
ಮನು ಅಪ್ಪಟ ಚಿನ್ನ . ಚಿನ್ಮಯಿ ಗ್ರೂಪ್ ಅಫ ಕಂಪೆನಿಯ ಸಮಸ್ತ ಆಸ್ತಿಗೂ ಆತನೇ ಒಡೆಯ. ಮನಸು ಬಂಗಾರ. ಅವನ ತಾಯಿಯಂತೂ ಧರೆಗಿಳಿದ ದೇವರೇ ಇರಬೇಕು ಅಂತಹವರು. ಮೊದಲೇ ಮೆತ್ತಗಿದ್ದ ಅವರು ಗಂಡ ಆತನ ತಂಗಿ ಚಿನ್ಮಯಿ ಅಂದರೆ ಶೈಲಾರ ಅಮ್ಮ ಹಾಗು ಶೈಲಾ ಅಪ್ಪ ಕಾರೊಂದರ ಅಪಘಾತದಲ್ಲಿ ಸಿಲುಕಿ ಸತ್ತಾಗ ಜಗತ್ತನ್ನೇ ಕಳೆದುಕೊಂಡವರಂತಾಗಿದ್ದರು. ಆಗಿನ್ನು ಮನುವಿಗೆ ಕೇವಲ ಹದಿನೆಂಟರ ಹರೆಯ . ಈ ಚಿಕ್ಕ ವಯಸಿನಲ್ಲಿಯೇ ಸಂಸಾರದ ಜವಾಬ್ದಾರಿ ಹೆಗಲ ಮೇಲೆರಿತು .ಅವನ ಕಂಪೆನಿಗಳ ಜೊತೆಗೆ ಆರರ ಹರೆಯದ ಶೈಲಾಳ ಜವಾಬ್ದಾರಿ ಹಾಗು ಅವಳ ತಂದೆಯ ಕಂಪನಿಯನ್ನು ನೋಡಿಕೊಳ್ಳಬೇಕಾಯ್ತು. ಮನು ಕಾಲೇಜು ಬಿಟ್ಟ
ತನಗಿದ್ದ ಚಾಕಚಕ್ಯತೆಯನ್ನು ಉಪಯೋಗಿಸಿಕೊಂಡು ಎಲ್ಲವನ್ನೂ ಸರಿ ದೂಗಿಸಿದ. ಬುದ್ದಿವಂತನಾದ್ದರಿಂದ ಎಲ್ಲವನ್ನು ನಿಭಾಯಿಸಿದ . ವಯಸಿನ , ಹಣದ ಅಮಲು ಅವನ ತಲೆಗೇರಲಿಲ್ಲ.
ಶೈಲಗೆ ತಂದೆ ತಾಯಿ ಕೊರತೆಯೇ ತಿಳಿಯಲಿಲ್ಲ. ಅವರಿಗಿಂತ ಹೆಚ್ಚು ಪ್ರೀತಿ, ಕಾಳಜಿ ಈ ಮನೆಯಲ್ಲಿ ಸಿಕ್ಕಿತು. ಅತಿ ಮುದ್ದಿನಿಂದ ಬೆಳೆದಳು. ಅವಳಿಗೇನು ಬೇಕೋ ಅದು ಅವಳು ಕೇಳುವ ಮುಂಚೆಯೇ ಅವಳ ಮುಂದೆ ಹಾಜಾರಾಗುತ್ತಿತ್ತು. ಮಹಾರಾಣಿಗಿಂತ ಒಂದು ಕೈ ಮೇಲೆ ಅವಳ ವೈಭೋಗವಾಗಿತ್ತು. ನೆಮ್ಮದಿ ಮನ ತುಂಬಿತ್ತು.
ಅವಳು ವಯಸಿಗೆ ಬಂದಾಗ ಹದಿನಾಲ್ಕು ವರ್ಷ . ಆಗಲೇ ಮನುವಿನ ಮೇಲೆ ಪ್ರೀತಿ ಮೊಳೆಯಲಾರಂಭಿಸಿತು. ಮನುವಿಗೂ ಅಷ್ಟೇ. ಇಲ್ಲಿಯವರೆಗೆ ಮಗುವಿನಂತಿದ್ದ ಪುಟ್ಟಿ ಮೊಗ್ಗಾಗಿ ಹೂವಾಗಿದ್ದಳು. ಸೌಂದರ್ಯದ ಖನಿ ಅಷ್ಟೆ ಅಲ್ಲಾ ಅವಳ ಮುದ್ದು ಮಾತು, ಹಠ ಎಲ್ಲವೂ ಅವನನ್ನು ಮೋಡಿ ಮಾಡಿತ್ತು. ಇವಳನ್ನು ಬಿಟ್ಟು ಬೇರೆಯವರನ್ನು ಮದುವೆಯಾದರೆ ಎಲ್ಲಿ ಅವುಗಳನ್ನು ಕಳೆದುಕೊಳ್ಳಬೇಕೋ ಎಂದು ಹೆದರಿದ್ದ. ಆದರೆ ವಯಸಿನಲ್ಲಿ ಜಾಸ್ತಿ ಅಂತರವಿದ್ದುದರಿಂದ ಅದನ್ನು ವ್ಯಕ್ತ ಪಡಿಸಲಿಲ್ಲ.
ಆದರೆ ಮನುವಿನ ತಾಯಿ ಇದನ್ನು ಗಮನಿಸಿದರು. ಅವರಾಗಲೇ ನಿರ್ಧರಿಸಿದರು ಶೈಲಾ ತಮ್ಮ ಸೊಸೆಯಾಗಬೇಕೆಂದು.
ಶೈಲಾ ಕಾಲೇಜು ಪದವಿ ಮುಗಿಸಿದಳು. ಅತ್ತೆ ಮದುವೆಯ ಮಾತು ತೆಗೆದಾಗ ಯಾವುದೇ ಮುಚ್ಚು ಮರೆಯಿಲ್ಲದೆ ಮನುವನ್ನು ಮದುವೆಯಾಗುವ ಇಂಗಿತ ವ್ಯಕ್ತ ಪಡಿಸಿದಳು.
ಮನು ಮೊದಲು ತಮ್ಮ ವಯಸಿನ ಅಂತರದ ಬಗ್ಗೆ ಹೇಳಿದ. ಶೈಲಾ ಅದೊಂದು ವಿಷ್ಯವೇ ಅಲ್ಲ ಎಂದಾಗ ಇಬ್ಬರ ಮದುವೆಗೆ ಯಾವ ಆತಂಕವೂ ಇರಲಿಲ್ಲ.
ಮದುವೆ ವಿಜ್ರಂಭಣೆಯಿಂದ ಆಯ್ತು. ಸಡಗರ ಸಂಭ್ರಮ ತುಂಬಿತು
***************************************************************************
ವಿಕಾಸ್ ಮನೆಗೆ ಬಂದಾಗ ರಾತ್ರಿ ಎಂಟು ಘಂಟೆಯ ಮೇಲಾಗಿತ್ತು. ತನ್ನ ಬಳಿ ಇದ್ದ ಕೀ ಉಪಯೋಗಿಸಿ ಬಾಗಿಲು ತೆರೆದ
ಸೋಫಾ ಮೇಲೆ ಹಾಗೆಯೇ ಬಿದ್ದುಕೊಂಡಿದ್ದ ಶೈಲಾಳ ಮೇಲೆ ಕರುಣೆ ಉಕ್ಕಿತು
ರಾಣಿಯಂತೆ ಇದ್ದವಳು. ತಾನೇ ಅವಳ ನೆಮ್ಮದಿಗೆ ಮುಳ್ಳಾದೆನೇ ಎಂದನಿಸಿತು.
ಹತ್ತಿರ ಹೋಗಿ ಅವಳ ಹಣೆಯ ಮೇಲೆ ಕೈ ಇಟ್ಟ.
ಶೈಲಾ ಎಚ್ಚರವಾದಳು.
ಮಾತಾನಾಡಲಿಲ್ಲ ಮುಖವನ್ನು ಸೋಫಾ ಕಡೆ ತಿರುಗಿಸಿ ಮುಖ ಮರೆಸಿದಳು
"ಸಾರಿ ಶೈಲಾ ನಾನು ಹಾಗೆ ಮಾತಾಡಬಾರದಿತ್ತು. ಏನ್ಮಾಡೋದು ಕೆಲಸದ ಒತ್ತಡ. ದಿನಕ್ಕೊಬ್ಬರನ್ನ ಮನೆಗೆ ಕಳಿಸ್ತಾ ಇದ್ದಾರೆ . ಅದೆಲ್ಲಾ ಸೇರಿ ಹೀಗಾಯ್ತು ತಪ್ಪಾಯ್ತು ಚಿನ್ನ " ಅವಳ ಮುಖವನ್ನು ತನ್ನೆಡೆಗೆ ತಿರುಗಿಸಿಕೊಂಡು ಹಣೆಗೆ ಚುಂಬಿಸಿದ.
ಶೈಲಾಳ ಕಣ್ಣಲ್ಲಿ ನೀರು ಕಂಡು ಗಾಭರಿಯಾದ
"ಚಿನ್ನು ಸಾರಿ ಕೇಳಿದೆನಲ್ಲಾ . ಇನ್ಯಾಕೆ ಅಳು?" ಅವಳ ಕಣ್ಣೊರೆಸಿದ
"ವಿಕಿ ನಂಗ್ಯಾಕೋ ಹೋಮ್ ಸಿಕ್‌ನೆಸ್ ಕಾಡ್ತಾ ಇದೆ. ರಿಯಲಿ ಐ ಫೀಲ್ ಆ ಯಾಮ್ ಮಿಸ್ಸಿಂಗ್ ದೆಮ್"
ಬಿಕ್ಕಳಿಸಿದಳು
ವಿಕಾಸನಿಗೆ ಅರ್ಥವಾಯ್ತು.
ಅವನೂ ಅವಳನ್ನು ಆ ನೆನಪುಗಳಿಂದ ಹೊರತರಲು ತನ್ನೆಲ್ಲಾ ಪ್ರಯತ್ನವನ್ನೂ ಮಾಡುತ್ತಿದ್ದ.
"ಚಿನ್ನೂ ಈಗ ನಾವು ಹೊಸ ಬಾಳು ನಡೆಸ್ತಾ ಇದ್ದೀವಿ ದಯವಿಟ್ಟು ಹಳೆಯ ನೆನಪುಗಳ ಹಿಂದೆ ಹೋಗಬೇಡ . ಅದರ ಹಿಂದೆ ನಡೆದರೆ ಬಾಳು ನರಕ ಆಗುತ್ತೆ. ನನ್ನ ಜೊತೆ ಹೆಜ್ಜೆ ಹಾಕು . ಪ್ರತಿ ಹೆಜ್ಜೆಯಲ್ಲೂ ನಾ ನಿನ್ನ ಜೊತೆಗಿರ್ತೇನೆ ಐ ಲವ್ ಯು ಶೈಲೂ ನೀನು ಹೀಗೆ ಮಂಕಾದರೆ ನಂಗೆ ನೋಡಕಾಗಲ್ಲ"
ಶೈಲಾಳನ್ನು ತನ್ನ ಎದೆಗೆ ಒರಗಿಸಿಕೊಂಡ. ಅಷ್ಟು ಬೇಗ ಅವಳಿಗೆ ಸಮಾಧಾನವಾಗುವುದಿಲ್ಲ ಅದು ಅವನಿಗೆ ಗೊತ್ತು ಶೈಲಾಳನ್ನು ತಾನು ಪ್ರೇಯಸಿಯಂತೆ ಕಂಡರೆ ಮನು ಅವಳನ್ನು ಮಗುವಿನಂತೆ ರಮಿಸುತ್ತಿದ್ದ ಅದು ವಿಕಾಸನಿಂದ ಆಗದ ಕೆಲಸ.
ರಾತ್ರಿ ಹೋಟೆಲಿನಿಂದ ಊಟಕ್ಕೆಂದು ತಂದ ತಿಂಡಿ ಹಾಗೆ ಉಳಿಯಿತು.
ಶೈಲಾ ತನ್ನ ಗುಂಗಿನಿಂದ ಹೊರ ಬರಲಿಲ್ಲ.
ವಿಕಾಸ್ ತನ್ನ ನೆನಪುಗಳಲಿ ಮುಳುಗಿದ.
ಅಂದಿನ ರಾತ್ರಿ ಅವರಿಬ್ಬರ ಮನಗಳಲ್ಲಿನ ಯೋಚನೆ ಮಾತ್ರ ಒಂದೇ ಆಗಿತ್ತು
*************************ಇನ್ನೂ ಇದೆ*********************************************************

4 comments:

  1. ತುಂಬ ಸ್ವಾರಸ್ಯಕರ ಘಟ್ಟ. ಶೈಲಾ ಅಂತು ಮನುವಿನ paternal attitudeಗೆ addict ಆಗಿದ್ದಾಳೆ. ಅದರಿಂದ ಅವಳು ಹೊರಬರುವಳೆ? ಅವಳಲ್ಲಿ healthy adult attitude ಬೆಳೆಯುವದೆ?
    ಇದು ಲೇಖಕಿಯರ ಗುಟ್ಟು!

    ReplyDelete
  2. ರೂಪ ಮೇಡಮ್
    ಮತ್ತೊಮ್ಮೆ ಮೊದಲಿಂದ ಎಲ್ಲಾ ಓದಿದೆ. ಈಗಿನ ಬರಹ ಕುತೂಹಲಕರವಾಗಿದೆ....ಸಸ್ಪೆನ್ಸ್ ಇಟ್ಟುಬಿಟ್ಟಿದ್ದೀರಿ... ಮುಂದುವರಿಸಿ...

    ReplyDelete
  3. ಸಸ್ಪೆನ್ಸ ಇದೆ, ಮನು ಏನಾದ, ಈ ವಿಕಾಸ ಯಾರು ಎಲ್ಲ ಮುಂದಿನ ಪೋಸ್ಟ ಹೇಳಬೇಕು.

    ReplyDelete
  4. ರೂಪಾ ಕಥೆ ಒಳ್ಳ್ ಕುತೂಹಲಕರವಾಗಿದೆ.... ಸರಿಯಾದ ಘಟ್ಟದಲ್ಲಿ ನಿಲ್ಲಿಸಿಬಿಡುತ್ತೀರಿ ! :-) ಪರವಾಗಿಲ್ಲ, ಮುಂದಿನ ಭಾಗಕ್ಕಾಗಿ ಕಾಯುತ್ತೇನೆ.

    ಶ್ಯಾಮಲ

    ReplyDelete

ರವರು ನುಡಿಯುತ್ತಾರೆ