Tuesday, November 10, 2009

ಗಮ್ಯ ಹುಡುಕುತ್ತಾ ಭಾಗ ೨

"ನಂಗೆ ನನ್ನ ಮಗ ಬೇಕು" ಅಮ್ಮ ಜೋರಾಗಿ ಅಳುತ್ತಿದ್ದುದು ಕೇಳಿಸುತ್ತಿತ್ತು .ಮೂರು ದಿನವಾಗಿತ್ತು ಮರಿಯಮ್ಮನ ಭೇಟಿಯಾಗಿ. ಆಗಲೇ ಎಷ್ಟೊಂದು ಮಾತುಕಥೆಗಳು. ಊರಿನ ಜನಕ್ಕೆಲ್ಲಾ, ನೆಂಟರಿಗೆಲ್ಲಾ ವಿಷಯ ಗೊತ್ತಾಗಿತ್ತು. ಮೂರು ದಿನದಿಂದ ನಿದ್ದೆ ಇಲ್ಲದೆ ಒದ್ದಾಡುತ್ತಿದ್ದಳು . ಜೊತೆಗೆ ತಾನ್ಯಾರು ಎಂಬುದೂ ತಿಳಿಯದ ನತದೃಷ್ಟೆ ತಾನೆಂದು ಅಳುವುದಾಗಿತ್ತು. ಯಾವುದೋ ಯೋಚನೆಯಲ್ಲಿದ್ದ ಸ್ವಾತಿ ದಡಾರನೆ ಎದ್ದಳುತಾಯಿಯ ಮಾತು ಕೇಳಿ
ತಾನೆಲ್ಲಿದ್ದೇನೆ ಸುತ್ತಾ ನೋಡಿದಳು. ಅದು ಅವಳ ರೂಮ್. ಹಾ ತನ್ನ ರೂಮ್? ತನ್ನ ಮನೆ? ತನ್ನ ಅಮ್ಮ? ಯಾರು ಗೋಜಲಾಗತೊಡಗಿತು ಎದ್ದವಳಿಗೆ ಅಪ್ಪನ ದನಿ ಕೇಳಿಸಿ ನಿಧಾನವಾಗಿ ರೂಮಿನ ಬಾಗಿಲ ಬಳಿ ನಿಂತಳು.

"ಏಯ್ ನಿಂಗೇನಾಗಿದೆಯೇ ಬೋ**.ಇಷ್ಟು ದಿನಾ ಸ್ವಾತೀನಾ ನನ್ ಮಗಳೂ ಮಗಳೂ ಅಂತಾ ಮುದ್ದು ಮಾಡ್ತಿದ್ದೆ. ಈವಾಗ ನಿಂಗೆ ನಿನ್ನ ಮಗ ಬೇಕು ಅಂದ್ರೆ ಸಿಗ್ತಾನಾ?ಇಷ್ಟು ದಿನಾ ಸ್ವಾತಿನೆ ಮಗಳು ಅನ್ಕೊಂಡ ಹಾಗೆ ಇದ್ದು ಬಿಡೋಣ" ಅಪ್ಪನ ದನಿ

"ನಿಮ್ಗೊತ್ತಿಲ್ಲ ನಿಮ್ಮ ತಾಯಿ ನಾನು ಮತ್ತೆ ಇನ್ನೊಂದು ಮಗೂಗೆ ತಾಯಿ ಆಗಲ್ಲ ಅಂತ ಗೊತ್ತಾದಾಗ ಗಂಡು ಮಗ ಬೇಕು ಅಂತ ನನ್ನನ್ನ ಎಷ್ಟೊಂದು ಬೈತಾ ಇದ್ರು ಗೊತ್ತಾ. ನನ್ನ ಕಷ್ಟ ನಿಮಗೆ ಹೇಗೆ ಗೊತ್ತಾಗುತ್ತೆ. ನಮಗೆ ಒಬ್ಬ ಗಂಡು ಮಗ ಇದ್ದಾನೆ ಅಂದ್ರೆ ಹೇಗ್ರಿ ಬಿಟ್ಟಿರೋದು" ಪಾರ್ವತಮ್ಮನೂ ದನಿ ಏರಿಸಿದರು

"ಅದೆಂಗೆ ಇನ್ನೊಂದು ಮಗಾನ ನಿನ್ನ ಮಗು ಅನ್ಕೊಂಡು ಬೆಳೆಸ್ದೆ ನೀನು. ನಾವೂ ನಮ್ಮನೆ ಮಗೂನೆ ಅನ್ಕೊಂಡು ನಮ್ಮ ಶಿವೂಗೆ ಮದುವೆ ಮಾಡಿಕೊಡೋಣ ಅನ್ಕೊಂಡಿದ್ವಿ ಸಧ್ಯ ಮುಂಚೇನೆ ಗೊತ್ತಾಯ್ತಲ್ಲ" ಅದು ಶೀಲಾ ಅತ್ತೆ ದನಿ

ಸ್ವಾತಿಯ ಹೃದಯ ಹೊಡೆದುಕೊಳ್ಳಲಾರಂಭಿಸಿತು

"ಅಂದ್ರೆ ನೀನು ಏನುಹೇಳ್ತಾ ಇದ್ದೀಯಾ ಸ್ವಾತಿಗೆ ಶಿವು ಜೊತೆ ಮದುವೆ ಮಾಡಲ್ವಾ?" ಅಪ್ಪನ ಆತಂಕದ ದನಿ

"ಅದೆಂಗಾಯ್ತದೆ . ಹೆಂಗಿದ್ದರೂ ಅವಳು ನಿಮ್ಮಗಳಲ್ಲ.ನಿಮ್ಮಗ ಬಂದ್ಮೇಲೆ ಅವಳಿಗೆ ಯಾವ ಆಸ್ತಿ ಸಿಕ್ತೈತೆ.ಯಾವುದೋ ಅನಾಥ ಹೆಣ್ಣಿಗೆ ಮದುವೆ ಮಾಡಕಾಯ್ತದಾ?"

ಶ್ರೀಧರ್ ಮಾವನ ದನಿ

ಸ್ವಾತಿಯ ಕಣ್ಣಿಂದ ನೀರು ನುಗ್ಗಲಾರಂಭಿಸಿತು

"ಅಪ್ಪಾ ನೀನು ಹೀಗೆಲ್ಲಾ ಮಾತಾಡಬೇಡ . ನಾನು ಸ್ವಾತೀನ ಕ್ರಿಷ್ಣಾರೆಡ್ಡಿ ಮಗಳು ಅಂತ ಮದುವೆ ಆಗ್ತಾ ಇಲ್ಲ . ಅವಳು ನಂಗೆ ಹಿಡಿಸಿದಾಳೆ ಅವಳನ್ನೇ ಮದುವೆ ಆಗೋದು" ಶಿವೂನ ದನಿ ಎತ್ತರಿಸಿ ನುಡಿದ

ಸ್ವಲ್ಪ ಸಮಾಧಾನವಾಯ್ತು ಸ್ವಾತಿಗೆ

"ನಿಂಗೆ ಗೊತ್ತಾಗಲ್ಲ ಸುಮ್ನಿರೋ " ಶೀಲತ್ತೆ ಬೈದರು

ಶಿವು ತೆಪ್ಪಗಾದದ್ದು ತಿಳಿಯಿತು

"ಶೀಲು ನನ್ನ ಮಗ ಸಿಕ್ತಾನೆ ಅಂತಾ ಯಾವ ಗ್ಯಾರೆಂಟಿ . ಯಾವುದೋ ಗಡ್ಡದ ಸ್ವಾಮಿ ದುಡ್ಡು ಕೊಟ್ಟು ಮಗೂನಾ ಎತ್ಕೊಂಡ್ ಹೋದ ಅಂತಾ ಹೇಳಿದಳಲ್ಲಾ ಆ ***. ಅವನೇನು ಮಗೂನ ಬಾಳಿಸಿರ್ತಾನಾ? ಹಾಗೆ ಒಂದ್ ವೇಳೆ ನಮ್ಮಗ ಸಿಕ್ರೂ ಸ್ವಾತಿ ಹೆಸರಲ್ಲಿ ಆಸ್ತಿ ಇದ್ದೇ ಇರುತ್ತೆ. ಇಷ್ಟು ದಿನಾ ಸ್ವಾತಿನಾ ಅಷ್ಟೊಂದು ಮೆರೆಸಿ ಈಗ ಇದ್ದಕ್ಕಿದ್ದಂತೆ ಬೇಡ ಅಂದ್ರೆ ಹೇಗೆ ಒಂದು ಹೆಣ್ಣ್ ಕಣ್ಣಲ್ಲಿ ನೀರು ಹಾಕಿಸ್ಬೇಡ" ಅಪ್ಪನ ದನಿಯಲ್ಲಿ ಬೇಡಿಕೆ ಇತ್ತು

"ಸರಿ ಹಾಗಿದ್ರೆ ನಿನ್ನ ಮಗನ್ನ ಹುಡುಕಿಸಬಾರದು ಇಡೀ ಆಸ್ತಿ ಸ್ವಾತಿ ಹೆಸರಿಗೆ ಬರೀಬೇಕು . ಸ್ವಾತಿನ ದತ್ತು ತಗೋಬೇಕು " ಶ್ರೀಧರ ಮಾವನ ಅಣ್ಣ ಲಾಯರ್ raghu reddi ಹೇಳಿದ

"ಹೌದಣ್ಣಾ ಹಾಗಿದ್ರೆ ಮಾತ್ರ ನಮ್ಮ್ ಶಿವೂಗೆ ಮದುವೆ ಮಾಡಿಕೊಳ್ತೀವಿ. ಇಲ್ಲಾಂದ್ರೆ ಬೇರೆ ಯಾವ ಗಂಡಾದ್ರೂ ನೋಡು. ಗೊತ್ತಿದ್ದು ಗೊತ್ತಿದ್ದು ಹಾಳು ಬಾವಿಗೆ ಬೀಳೋಕೆ ಶಿವು ಏನು ಕುಂಟಾನ ಕುರುಡಾನಾ" ಶೀಲತ್ತೆ ಇಷ್ಟೊಂದು ಮಾತನಾಡಬಲ್ಲರೆಂದು ತಿಳಿದಿರಲಿಲ್ಲ

" ಶೀಲಾ ನಿಂಗ್ಯಾಕೆ ಇಂತಾ ಕೆಟ್ಟ ಬುದ್ದಿ ಬಂತು. ತಂದೆ ತಾಯಿಗೆ ಅವರ ಮಗನ್ನ ಹುಡುಕ ಬೇ ಡಾ ಅಂತ ದೂರ ಮಾಡ್ತೀಯಲ್ಲ ನೀನೂ ತಾಯಲ್ಲ್ವಾ. ಮಗಂಗೋಸ್ಕರ ನನ್ನಕರುಳು ಎಷ್ಟು ನರಳ್ತಿದೆ ಗೊತ್ತಾ. " ಪಾರ್ವತಿ ಅಳುತ್ತಾ ಹೇಳಿದರು

"ಆಯ್ತು ಶೀಲು. ನಮಗೊಬ್ಬಳು ಹೆಂಗಸು ಸಿಕ್ಕಳು ಅನ್ನೋದನ್ನೇ ಮರೆತುಬಿಡ್ತೀವಿ. ಇಲ್ಲಿವರೆಗೆ ಹೆಂಗಿದ್ವೋ ಹಾಗೆ ಇರೋಣ ಸ್ವಾತಿ ನನ್ನ ಮಗಳು ಅವಳ ಜೀವನ ಚೆನ್ನಾಗಿರಬೇಕು ಎಲ್ಲಾ ಆಸ್ತೀನೂ ಅವಳದ್ದೇ" ಕ್ರಿಶ್ಣಾರೆಡ್ಡಿ ದೃಡ ನಿರ್ಧಾರದಲ್ಲಿ ಹೇಳಿದರು

"ರೀ ನಂಗೆ ನನ್ನ ಮಗ ಬೇಕು. ಯಾರದ್ದೋ ಹೆಸರಿಗೆ ಆಸ್ತಿ ಯಾಕೆ ಬರೀಬೇಕು.ನನ್ನ ಮಗ ಬರಬೇಕು. ಸುಮ್ನೆ ಇರಿ " ತಾಯಿ ಪಾರ್ವತಿಯ ದನಿಯಲ್ಲೂ ಹಟದ ಛಾಯೆ

ಅವಕ್ಕಾದಳು ಸ್ವಾತಿ.ನೆನ್ನೆವರೆಗೆ ತಾನು ಈ ಮನೆ ಮಗಳು ಇಂದು ? ಯಾರೋ ಆಗಿಬಿಟ್ಟೆನಲ್ಲಾ.

"ಏಯ ಪಾರ್ವತಿ.ಅವಳು ಯಾರೋ ಹೇಗೆ ಆಗ್ತಾಳೆ ನಮ್ಮನೆ ಮಗಳು ಕಣೇ . ಇದನೆಲ್ಲಾ ಸ್ವಾತಿ ಕೇಳಿಸಿಕೊಂಡರೇ ***********" ಇನ್ನು ಏನು ಹೇಳುತ್ತಿದ್ದರೋ ಸ್ವಾತಿಯನ್ನು ನೋಡಿ ಮಾತು ನಿಂತಿತು

"ಸ್ವಾತಿ" ಅಪ್ಪ ದಂಗಾಗಿ ಕರೆದರು

"ನಿಮ್ಮನ್ನ ಅಪ್ಪ ಅಂತಾ ಕರೀಲಾ " ಸ್ವಾತಿಯ ಮಾತು ನಿಧಾನಕ್ಕೆ ಬಂದಿತು

"ಹೇಯ್ ಸ್ವಾತಿ ಇದೇನು ಹೊಸದು ನೀನ್ಯಾವತ್ತಿದ್ದರೂ ನಮ್ಮ ಮಗಳೇ. ಆ ಮುಂ*** ಹೇಳಿದ್ದೆಲ್ಲಾ ತಲೆಗೆ ಹಚ್ಕೋಬೇಡಾ ಬಾ ಇಲ್ಲಿ" ಕೃಷ್ಣಾರೆಡ್ಡಿಯವರ ಸ್ವರ ಅವರಿಗೆ ತಿಳಿಯದಂತೆ ಗದ್ಗದಿತವಾಗಿತ್ತು.

ಅಪ್ಪನ ಬಳಿ ಬಂದು ನಿಂತು ಅವರ ಎದೆಗೊರಗಿದಳು

ಅವಳ ಕಣ್ಣೀರು ಅವರ ಎದೆಯನ್ನು ತೋಯಿಸಲಾರಂಭಿಸಿತು.

"ಅಳ್ಬೇಡ ಸ್ವಾತಿ . ಛೀ ನೀನತ್ರೆ ನಮ್ಮನೆ ಲಕ್ಷ್ಮಿ ಅತ್ತ ಹಾಗೆ" ಅವಳ ತಲೆ ನೇವರಿಸಿದರು

ಸಮಾಧಾನಗೊಂಡಂತಾಗಿ ಅಲ್ಲಿಂದ ಮುಖವೆತ್ತಿ ತಾಯಿಯನ್ನು ನೋಡಿದಳು.

ಅವರ ಮುಖದಲ್ಲಿ ಅಸಮಾಧಾನದ ಛಾಯೆ ಕಾಣಿಸುತ್ತಿತ್ತು. ಅದರಲ್ಲಿ ಮೊದಲಿನ ಮಮತೆ ಕಾಣಲಿಲ್ಲ

ಅತ್ತೆ ಮಾವ ಭಾವರಹಿತವಾಗಿ ನೋಡುತ್ತಿದ್ದರು

ಶಿವು ಆತಂಕಗೊಂಡು ಸ್ವಾತಿಯತ್ತ ನೋಡುತ್ತಿದ್ದ.

ಸ್ವಾತಿ ಆಗಲೇ ನಿರ್ದಾರಮಾಡಿದ್ದಳು ತಾನು ಯಾರು ಎಂದು ತಿಳಿದುಕೊಳ್ಳಬೇಕು.ಮೂರುದಿನದಿಂದ ಮನೆಯಲ್ಲಿ ಇದೇ ಮಾತು ಕಥೆ. ಸ್ವಾತಿಯಂತೂ ಹೊರಗೇ ಬಂದಿರಲಿಲ್ಲ. ಅಲ್ಲಿನಮಾತು ಕಥೆಗಳನ್ನೆಲ್ಲಾ ಕೇಳಿ ಕೇಳಿ ಅವಳಿಗೆ ತನ್ನ ಬಗ್ಗೆ ತನ್ನ ಆ ಕಾಣದ ತಾಯಿ ತಂದೆಯ ಬಗ್ಗೆ ಜಿಗುಪ್ಸೆ ಹುಟ್ಟಿತ್ತು. ಹೇಗಾದರೂ ಮಾಡಿ ತನ್ನ ಗಮ್ಯ ತಿಳಿಯಬೇಕೆಂಬ ಛಲ ಹುಟ್ಟಿತ್ತು

"ಅಪ್ಪಾ ನಾನು ನನ್ನ ನಿಜವಾದ ಅಪ್ಪ ಅಮ್ಮ ಯಾರು ಅಂತ ತಿಳ್ಕೋಬೇಕು" ಸ್ವಾತಿಯ ದೃಡ ನಿರ್ಧಾರದ ದನಿ ಕೇಳಿ ಎಲ್ಲರೂ ಒಂದು ಕ್ಷಣ ಅಚ್ಚರಿಗೊಂಡರು

"ಸ್ವಾತಿ ಯಾಕಮ್ಮ ನಾವು ನಿಂಗೇನು ಕಡಿಮೆ ಮಾಡಿದ್ದೀವಿ. ನೀನು ಯಾರೇ ಆಗಿರು ಅದು ನಂಗೆ ಬೇಕಿಲ್ಲ. ನೀನು ನಮ್ಮನೆ ಮಗಳು . ಈ ಇಲ್ಲ ಸಲ್ಲದ ಹುಚ್ಚಾಟ ಬೇಡ" ಅಪ್ಪ ಮಾತ್ರ ಉತ್ತರಿಸಿದರು

"ಇಲ್ಲಾ ಅಪ್ಪಾ ನಾನು ಯಾರು ಅಂತ ನಂಗೆ ಗೊತ್ತಾಗಬೇಕಿದೆ. ನನ್ನನ್ನ ಯಾಕೆ ಬಿಟ್ಟು ಹೋದರು ನಾನೇನು ಅಪರಾಧ ಮಾಡಿದ್ದೆ.ನಿಮ್ಮ ಮಗನ್ನ ಯಾಕೆ ಕರೆದುಕೊಂಡು ಹೋದರು . ಹಾಗೆ ನಿಮ್ಮ ಮಗ ಎಲ್ಲಿದ್ದಾನೆ ಅಂತಾನೂ ತಿಳ್ಕೋಬೇಕಿದೆ" ಸ್ವಾತಿ ತನ್ನ ಅಂಗೈ ರೇಖೆ ನೋಡಿಕೊಂಡೇ ಉತ್ತರಿಸಿದಳು

"ಸ್ವಾತಿ ಅದೆಲ್ಲಾ ಬೇಡ . ನಮಗೆ ಅವನ್ನ ಹುಡೋಕೋ ದಾರಿ ಗೊತ್ತಿಲ್ಲ ಇನ್ನು ನೀನೇನು ಮಾಡ್ತೀಯಾ. ಎಲ್ಲಾ ಮರೆತು ನಮ್ಮನೇಲೇ ಇದ್ದುಬಿಡು.ಹೆಣ್ಣು ಹೆಂಗಸು ಎಲ್ಲಿ ಹೋಗ್ತೀಯಾ?"ಅಮ್ಮನ ಮಾತು.ಆದರೆ ಅದು ಮೂರನೇ ವ್ಯಕ್ತಿಗೆ ಹೇಳುತ್ತಿದ್ದ ಹಾಗಿತ್ತು.

"ಏನೆ ಆದರೂ ಇದು ನಿಮ್ಮ ಮನೆ ಅಮ್ಮ ನನ್ನ ಮನೆ ಆಗಲ್ಲ. ನಂಗೆ ನನ್ನದೇ ಆದ ನೆಲೆ ಬೇಕು. ನನ್ನ ಹೆತ್ತ ತಾಯಿ ತಂದೆ ಬೇಕು. ಇಲ್ಲೀವರೆಗೆ ನಾನು ನಿಮ್ಮ ಮಗಳೇ ಅಂತ ತಿಳಿದು ಪ್ರೀತಿಸುತ್ತಿದ್ದಿರಲ್ಲ ಅಂತ ಪ್ರೀತಿ ಬೇಕು . ಅದೇನೆ ಆಗಲಿ ಅದು ನಂಗೆ ಇಲ್ಲಿ ಇನ್ನು ಮುಂದೆ ಸಿಗಲ್ಲ" ಸ್ವಾತಿ ತಾಯಿಯ ಕಣ್ಣನ್ನು ದಿಟ್ಟಿಸುತ್ತಾ ಹೇಳಿದಳು.

ಪಾರ್ವತಮ್ಮ ಬದಲಿ ಹೇಳಲಿಲ್ಲ.

"ಸ್ವಾತಿ ನಿಂಗೆ ನನ್ನ ಮನೆ ಇದೆ ನಿನ್ನ ಗಂಡನಾಗುವವನ ಮನೆ ನಂಗೆ ಈ ಆಸ್ತಿ ಅಂತಸ್ತು ಇದೆಲ್ಲಾ ಬೇಡ. ಬಾ ನಾವೇ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ಇರೋಣ ನಿನ್ನ ಸಾಕೋ ಅಷ್ಟು ಸಂಪಾದನೆ ನಂಗೆ ಇದೆ. "ಶಿವೂನ ದನಿ ಅವನತ್ತ ನೋಡಿ ನಕ್ಕಳು. ಎಷ್ಟು ಪ್ರೀತಿ ಅವನಿಗೆ ತನ್ನ ಮೇಲೆ

"ಏ ಶಿವು ಸುಮ್ನಿರೋ . ನೀನ್ಯಾಕೆ ಅವರ ವಿಷಯದಲ್ಲಿ ತಲೆ ಹಾಕ್ತೀಯಾ." ಶೀಲತ್ತೆ ಗದರಿದರು.

"ಅಮ್ಮಾ ನೀನು ಸುಮ್ನಿರು ಇದು ನನ್ನಜೀವನದಪ್ರಶ್ನೆ" ಶಿವೂ ಸಿಡುಕಿ ನುಡಿದ

"ಇಲ್ಲಾ ಶಿವು ನಿನ್ನ ನಂಟೂ ನನಗೆ ಸಿಕ್ಕಿದ್ದು ಕೃಷ್ಣಾರೆಡ್ಡಿಯವರ ಮಗಳು ಅನ್ನೋ ಕಾರಣಕ್ಕಾಗಿ. ಈಗ ಆ ಐಡೆಂಟಿಟೀನೆ ನಂಗೆ ಇಲ್ಲವಾದಾಗ ನಿನ್ನ ನಂಟಿಗೂ ಮೊದಲಿನ ಅಂಟು ಇರುತ್ತಾ? ಅಲ್ಲದೆ ನಂಗೆ ಮದುವೆಯಾಗೋ ಇರಾದೆ ಹೊರಟುಹೋಗಿದೆ ಮೊದಲು ನನ್ನನ್ನ ಹೀಗೆ ಬೇರೆ ಮನೆಯಲ್ಲಿ ಬಿಟ್ಟ ನನ್ನ ತಂದೆ ತಾಯಿಯನ್ನ ಹುಡುಕಬೇಕು . ದಯವಿಟ್ಟು ನನ್ನನ್ನ ಯಾರೂ ತಡೀಬೇಡಿ "

ಶಿವು ಏನೋ ಹೇಳಲು ಹೋದವನು ರೆಡ್ಡಿಯವರು ಮಾತನಾಡಿದ್ದಕ್ಕೆ ಸುಮ್ಮನಾದ

"ಸ್ವಾತಿ ಹಾಗಿದ್ರೆ ನಿನ್ನ ಮುಂದಿನ ನಡೆ ಏನು ಹೇಳು.ಎಲ್ಲರೂ ಸೇರಿ ನಿನ್ನಪ್ಪ ಅಪ್ಪನ್ನ ಅಮ್ಮನ್ನ ಹುಡುಕೋಣ. ಆದರೆ ಅವರು ಬದುಕಿದ್ದಾರೆ ಅನ್ನೋದಕ್ಕೆ ಏನು ಗ್ಯಾರೆಂಟಿ ಹೇಳು" ರೆಡ್ಡಿಯವರು ಕಣ್ಣೊರೆಸಿಕೊಳ್ಳುತ್ತಲೇ ನುಡಿದರು

"ಇಲ್ಲಾ ಅಪ್ಪ. ಅವರು ಬದುಕಿದಾರೆ ಅನ್ನೋ ಬೇಸ್ ಮೇಲೆ ಹುಡುಕ್ತೀನಿ . ಆದರೆ ಅವರನ್ನು ಹುಡುಕೋ ಕೆಲಸ ನಂಗೆ ಬಿಟ್ಟುಬಿಡಿ ನಂಗೆ ನಿಮ್ಮೆಲ್ಲರ ಹಾರೈಕೆಗಳಿದ್ದರೆ ಸಾಕು"

ಕೈ ಮುಗಿದು ಕುಸಿದು ಕುಳಿತಳು. ಕಣ್ಣಲ್ಲಿದ್ದ ನೀರು ಕಾಣದಿದ್ದರೆ ಸಾಕು ಎಂದು ತಲೆ ತಗ್ಗಿಸಿದ್ದಳು.

ಶಿವೂನ ತಂದೆ ತಾಯಿ ದೊಡ್ಡಪ್ಪ ಹೊರಡುತ್ತಿದ್ದರು. ಅವರನ್ನು ಬಿಟ್ಟು ಓಡಿ ಬಂದ ಶಿವು

"ಆಯ್ತು ಸ್ವಾತಿ ನಿನ್ನ ತಂದೆ ತಾಯಿ ಸಿಕ್ಕ ಮೇಲಾದರೂ ನನ್ನನ್ನ ಮದುವೆಯಾಗ್ತೀಯಲ್ಲಾ? " ಶಿವು ತನ್ನ ತಂದೆ ತಾಯಿಯರನ್ನು ಲೆಕ್ಕಿಸದೇ ಕೇಳಿದ.

ಅವನತ್ತ ನೋಡಿ ನಕ್ಕಳಷ್ಟೇ.

"ಸ್ವಾತಿ ನಿಂಗ್ಯಾವ ಸಹಾಯ ಬೇಕಾದರೂ ಈ ಶಿವು ಸದಾ ಸಿದ್ದ ಇರ್ತಾನೆ. ಅಂದ ಹಾಗೆ ನನ್ನ ನಿನ್ನ ಬಂಧ ಕೇವಲ ನನ್ನ ಮಾವ ನಿನ್ನಪ್ಪ್ಪ ಎಂಬುದರ ಮೇಲೆ ನಿಂತಿಲ್ಲ ಸ್ವಾತಿ. ನನ್ನದು ನಿನ್ನದು ಯಾವುದೋ ಜನ್ಮದ ಅಂಟು ಅದಕ್ಕೆ ನಂಟಿನ ಅವಶ್ಯಕತೆಯಿಲ್ಲ. ಇಂದಿನಿಂದ ನಿನ್ನ ಶೋಧದಲ್ಲಿ ಈ ಶಿವೂನೂ ಜೊತೆಗಾರನಾಗಿರ್ತಾನೆ"ಅವಳ ಕೈಗೆ ತನ್ನ ಕೈ ಕೂಡಿಸಿ ಬಿಗಿ ಮಾಡಿದ.

ಅದನ್ನು ತುಟಿಗೊತ್ತಿಕೊಂಡಳು ಸ್ವಾತಿ . ಶಿವು ನಿಧಾನವಾಗಿ ಕೈ ಬಿಡಿಸಿಕೊಂಡು ಹೊರಟ

ಎಲ್ಲರೂ ಒಬ್ಬೊಬ್ಬರಾಗಿ ಅಲ್ಲಿಂದ ಹೊರಟ ಮೇಲೆ ತಲೆ ಎತ್ತಿದಳು

ಅಪ್ಪ ಇನ್ನೂ ಅಲ್ಲೇ ನಿಂತಿದ್ದಾರೆ

"ಸ್ವಾತಿ ನಿಮ್ಮ ತಂದೆ ಸಿಗೋವರೆಗೆ ನೀನು ನನ್ನ ಮಗಳಾಗಿರ್ತೀಯಾ ತಾಯಿ. "

ಸ್ವಾತಿ ಇಲ್ಲೀವರೆಗೆ ತಂದೆಯ ಈ ಸ್ಥಿತಿ ನೋಡಿರಲಿಲ್ಲ

"ಅಪ್ಪಾ " ಎಂದಷ್ಟೆ ಅಂದಳು

ಅವರ ಹೃದಯ ಮಿಡಿಯುತ್ತಿರುವುದು ತಿಳಿಯುತ್ತಿತ್ತು. ಆದರೆ ಅವರು ಅಸಹಾಯಕರು. ಕೈ ಚೆಲ್ಲಿ ಹೊರಟುಹೋದರು

ಸ್ವಾತಿಯ ಯೋಚನೆ ಶುರುವಾಯ್ತು

ತಾನೇನೋ ಆವೇಶದಲ್ಲಿ ಅಪ್ಪ ಅಮ್ಮನ್ನ ಹುಡುಕುವುದಾಗಿ ಹೇಳಿದೆ ಆದರೆ ಎಲ್ಲಿ ಅಂತ ಹುಡುಕುವುದು? ಕಾಲೇಜು ಬಿಟ್ಟರೆ ಮನೆ ಗೆಳತಿಯರು ಶಿವು ಇದಿಷ್ಟುಬಿಟ್ಟರೆ ತನ್ನ ಪ್ರಪಂಚ ಬೇರೇನಾಗಿತ್ತು ಇಷ್ಟು ದಿನ

ಮರಳುಗಾಡಿನಲ್ಲಿ ಕುರುಡನನ್ನ ಬಿಟ್ಟ ಹಾಗೆ ಆಗಿ ಹೋಗಿತ್ತು ಅವಳ ಸ್ಥಿತಿ. ಆದರೆ ಧೃತಿಗೆಡಬಾರದು . ತನ್ನನ್ನ ಇಂಥ ಸ್ಥಿತಿಗೆ ನೂಕಿದ ಆ ತಂದೆ ತಾಯಿಯನ್ನು ಹುಡುಕಲೇ ಬೇಕು. ರೂಮಿಗೆ ಬಂದಳು.

ಸಿಕ್ಕಪುಸ್ತಕ ಕೈಗೆ ತೆಗೆದುಕೊಂಡು ಏನೇನು ಮಾಡಬೇಕೆಂಬ ಟಿಪ್ಪಣಿ ಬರೆಯತೊಡಗಿದಳು

ಅದರಲ್ಲಿ ಮೊದಲನೆಯ ಹಂತವೇ ಮರಿಯಮ್ಮಳನ್ನು ಭೇಟಿಯಾಗುವುದು.

ಅದನ್ನು ವೃತ್ತಾಕಾರಿಸಿಕೊಂಡಳು

*********************************************************

ಮರಿಯಮ್ಮ್ಮ ಆಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಳು

ಸ್ಟೇಷನ್ನಿಂದ ಅವಳ ವಿಳಾಸವನ್ನು ಶಿವು ತರಿಸಿಕೊಟ್ಟ . ಶಿವಾಜಿನಗರದ ಆಸ್ಟಿನ್ ಟೌನ್‍ನಲ್ಲಿ ಅವಳ ಮನೆ

ಹುಡುಕುತ್ತಾ ಶಿವು ಜೊತೆಗೆ ಮರಿಯಮ್ಮನ ಮನೆಗೆ ಬಂದಳು

ಅವಳ ಮನೆಯೂ ದೊಡ್ಡದೇ. ಚೆನ್ನಾಗಿ ಹಣಮಾಡಿದ್ದಳೆಂಬುದು ಅದರಿಂದಲೇ ತಿಳಿಯುತ್ತಿತ್ತು

ಬೆಲ್ ಮಾಡಿದಾಗ ಬಾಗಿಲು ತೆರೆದವಳು ಮರಿಯಮ್ಮ. ಸ್ಟೇಷನ್ನಿನಲ್ಲಿ ನೋಡಿದ್ದಕ್ಕೂ ಈಗಲೂ ಭಾರಿ ವ್ಯತ್ಯಾಸ ಕಾಣುತ್ತಿತ್ತು.

ತುರುಬು ಎತ್ತಿ ಕಟ್ಟಿದ್ದಳು. ಜರಿ ಸೀರೆ ಉಟ್ತಿದ್ದಳು. ಸ್ಥಿತಿವಂತಳೆಂಬುದು ಗೊತ್ತಾಗುತ್ತಿತ್ತು.

ಇವರನ್ನು ನೋಡಿ ಅಚ್ಚರಿ ಆದಂತೆ ತೋರಲಿಲ್ಲ ಅವಳಿಗೆ

"ನೀನು ಆವತ್ತು ಸ್ಟೇಶನ್‍ಗೆ ಬಂದ್ ಹುಡ್ಗಿ ತಾನೇ " ಹೌದೆಂಬಂತೆ ತಲೆ ಆಡಿಸಿದಳು

"ಇವನು?" ಶಿವು ಕಡೆ ನೋಡುತ್ತಾ ಕೇಳಿದಳು ಒಂದು ಚೂರು ಗೌರವದ ಮಾತು ಇಲ್ಲ ಅವಳಲ್ಲಿ

"ಅವರು ನಮ್ಮ ಸೋದರಮಾವನ ಮಗ" ಸ್ವಾತಿಯೇ ಉತ್ತರಿಸಿದಳು

"ಸರಿ ಬನ್ನಿ ಇಬ್ಬರೂ ಒಳಗೆ"

ಒಳಗೆ ಬಂದವರಿಗೆ ಕೂರಲು ಹೇಳಿದಳು

ಸ್ವಾತಿ ಸುತ್ತಾಮುತ್ತ ನೋಡುತ್ತಿದ್ದಳು ಮನೆ ಒಪ್ಪ ಓರಣವಾಗಿತ್ತು

"ನನ್ನ ಮನೆ ನೋಡೋಕೆ ಬಂದ್ಯಾ ಇಲ್ಲಾ ನಿನ್ನ ಮನೆ ಯಾವುದು ಅಂತ ತಿಳ್ಕೊಳೋದಿಕ್ಕೆ ಬಂದ್ಯಾ"

ಮರಿಯಮ್ಮನ ಗಡಸು ನುಡಿ
ಸ್ವಾತಿ ಪೆಚ್ಚಾದಳು . ಸಹಾಯಕ್ಕಾಗಿ ಶಿವುನನ್ನು ನೋಡಿದಳು



"ಸಾರಿ ಮರಿಯಮ್ಮ . ನಮಗೆ ಸ್ವಾತಿ ಬಗ್ಗೆ ತುಂಬಾ ವಿಷ್ಯ ಬೇಕಾಗಿದೆ" ಶಿವೂನೆ ನುಡಿದ

"ನಂಗೇನು ಸಿಗುತ್ತೆ?" ಮರಿಯಮ್ಮನ ದನಿ ಅಬ್ಬಾ ಅವಳ ದಾಷ್ಟ್ತ್ಗಕ್ಕೆ ಬೆರಗಾದಳು. ಅಥವ ಕಾಲ ಅವಳನ್ನು ಹೀಗೆ ಮಾಡಿದೆಯೇ?

"ನಿಂಗೆ ಎಷ್ಟು ದುಡ್ದು ಬೇಕೋ ಅಷ್ಟು " ಶಿವುನೂ ಗತ್ತಾಗಿ ನುಡಿದ .

"ಸರಿ ನಿಮಗೇನು ವಿಷ್ಯ ಬೇಕಾಗಿದೆ ಕೇಳಿ"

ಸ್ವಾತಿ ನುಡಿದಳು ನಿಧಾನಕ್ಕೆ

"ಮರಿಯಮ್ಮ ನಾನು ಪಾರ್ವತಮ್ಮನ ಮಗಳಲ್ಲ ಅಂದರೆ ನಾನೆಲ್ಲಿಂದ ಬಂದೆ ನನ್ನನ್ನು ನಿಮಗೆ ಯಾರು ಕೊಟ್ಟರು?ನೀವ್ಯಾಕೆ ನನ್ನನ್ನ ಬದಲಾಯಿಸಿದಿರಿ"

ಮರಿಯಮ್ಮನ ಮೊಗದಲ್ಲಿ ನಗೆ


"ನಾನೇನೇ ಮಾಡಿದರೂ ಅದು ದುಡ್ಡಿಗೋಸ್ಕರ. ಇನ್ಮೇಲ್ ನಾನ್ಯಾಕೆ ಹಾಗ್ಮಾಡಿದೆ ಅಂತ ಕೇಳ್ಬೇಡ"

"ಆಯ್ತು ಮರಿಯಮ್ಮ ಅವಳು ಎಲ್ಲಿಂದ ಬಂದಳು ಯಾರು ಕೊಟ್ಟರು ಅದನ್ನು ಮಾತ್ರ ಹೇಳು ಸರೀನಾ" ಶಿವು ಹೇಳಿದ

ಮರಿಯಮ್ಮ ಕಣ್ಣು ಮುಚ್ಚಿದಳು. ಕಣ್ಣ ಮುಂದೆ ಗತ ಜೀವನ ಹಾದು ಹೋಯಿತು
*****************************

ಮರಿಯಮ್ಮ ಮಾಡಿಕೊಂಡಿದ್ದು ನರ್ಸಿಂಗ್ ತರಬೇತಿಯಾದರೂ ಆಸ್ಪತ್ರೆಯಲ್ಲಿ ಕೆಲ್ಸ ಮಾಡುವುದು ಅವಳಿಗೆ ಹಿಡಿಸಿರಲಿಲ್ಲ. ಮೊದಲಿಗೆ ಲಕ್ಶ್ಮಿಆಗಿದ್ದ ಅವಳು ಟೋನಿ ಎಂಬಾತನನ್ನು ಪ್ರೀತಿಸಿ ಮದುವೆಯಾಗಿ ಅವನಿಂದ ಒಂದೇ ವರ್ಷದಲ್ಲಿ ದೂರವಾಗಿದ್ದಳು.ಅವಳ ಐಶಾರಾಮದ ಬಯಕೆಗಳು ಅವಳನ್ನು ಎಂತೆಂತಹದೋ ಕೆಲಸ ಮಾಡಿಸುತಿತ್ತು. ಹಾಗೆ ಅವಳು ಬಂದು ನೆಲೆಸಿದ್ದು ಪಾರ್ವತಿಯ ಊರಲ್ಲಿ. ಆಗ ಆ ಊರು ಕಾಡಿನಂತಿತ್ತು. ಸರಿಯಾದ ಬಸ್ ಸೌಕರ್ಯವಾವುದೂ ಇರಲಿಲ್ಲ. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕಳ್ಳತನ ಆಗಾಗ ಸಿಕ್ಕರೆ ಯಾರದಾರೂ ಗಿರಾಕಿಗಳು ಇವುಗಳಿಂದ ಅವಳ ಜೀವನ ನಡೆಯುತ್ತಿತ್ತು. ಆಗಾಗ ಸೂಲಗಿತ್ತಿಯಾಗಿಯೂ ಮಾಡುತ್ತಿದ್ದುದರಿಂದ ಹಣವೂ ಸಿಗುತ್ತಿತ್ತು .ತನ್ನ ಕೆಲಸಗಳ ಬಗ್ಗೆ ಅವಳಿಗೆ ಕೊಂಚವೂ ಬೇಸರವಿರಲಿಲ್ಲ. ಹಾಗೆಯೇ ಅದೇ ಊರಿನಲ್ಲಿದ್ದ ಪಾರ್ವತಿಯ ಅತ್ತೆ ಪರಿಚಯವಾಗಿತ್ತು.

ಅಂದು ಪಾರ್ವತಿ ಹೆರಿಗೆ ನೋವು ಎಂದು ಬಂದಾಗ ರಾತ್ರಿಯಲ್ಲಿ ಬಂದಳಲ್ಲ ಎಂದು ಬೇಸರಿಸಿಕೊಂಡೇ ಬಾಗಿಲು ತೆರೆದಳು. ಪಾರ್ವತಿಯ ಸ್ಥಿತಿ ನೋಡಿ ಹೆರಿಗೆ ಮಾಡಲು ಒಪ್ಪಿಕೊಂಡಳು.

ಹೆರಿಗೆ ಆದ ಕೂಡಲೇ ಪಾರ್ವತಿ ಅರೆ ಪ್ರಜ್ನಾವಸ್ತೆಗೆ ಜಾರಿದಳು.ಇತ್ತ ಪಾರ್ವತಿಯ ಅತ್ತೆ ಹಾಗೆ ನೆಲದ ಮೇಲೆ ಮಲಗಿದ್ದರು

ಮಗುವನ್ನು ತೊಳೆಯಲೆಂದು ಹಿತ್ತಲಿಗೆ ಬಂದ ಮರಿಯಮ್ಮ ಅಲ್ಲಿ ನಿಂತಿದ್ದ ಆಜಾನು ಬಾಹು ಆಕೃತಿಯನ್ನು ನೋಡಿ ಬೆಚ್ಚಿದಳು.

"ಯಾರು? ಯಾರದು?"

"ನಿನ್ನ ಕೈನಲ್ಲಿ ಇರೋ ಮಗು ಗಂಡಾ ಹೆಣ್ಣಾ?" ಕಂಚಿನ ದನಿಯಲ್ಲಿ ಕೇಳಿ ಬಂತು

"ಗಂಡು ಮಗು . ಯಾಕೆ ನೀವ್ಯಾರು"

" ಯಾಕೆ ಏನು ಎತ್ತ . ನಾನ್ಯಾರು ಅನ್ನೋದೆಲ್ಲಾ ಬೇಡ. ಆ ಮಗೂನ ಕೊಡು" ಆಕಡೆಯಿಂದ ಗಂಭೀರದನಿಯಲ್ಲಿ ಕೇಳಿಬಂತು ಮಾತು

ಮರಿಯಮ್ಮ ಬೆದರಿ ಒಳಗೆ ಓಡಲು ಯತ್ನಿಸಿದಳು


ಅವಳ ಕೈಯನ್ನು ಗಟ್ಟಿಯಾಗಿ ಹಿಡಿದ ಆ ವ್ಯಕ್ತಿ


ಮಂದ ಬೆಳಕಲ್ಲಿ ಆತನ ಮುಖ ನಿಧಾನವಾಗಿ ಕಾಣತೊಡಗಿತು


ಉದ್ದದ ಗಡ್ಡ . ನೋಡಿದರೆ ಯಾವುದೋ ಸ್ವಾಮೀಜಿಯಂತೆ ಕಾಣುತ್ತಿದ್ದ. ಸೊಂಟಕ್ಕೆ ಬಟ್ಟೆಯೊಂದನ್ನು ಸುತ್ತಿದ್ದ . ಒಂದು ಕೈನಲ್ಲಿ ಏನೋ ಹಿಡಿದಿದ್ದ. ಅರೆ ಅದೊಂದು ಮಗು.


ಮರಿಯಮ್ಮ ಕಿಟಾರ್ ಎಂದು ಕಿರುಚುವುದರಲ್ಲಿದ್ದಳು


ಅಷ್ಟರಲ್ಲಿ ಅವಳ ಕಣ್ಣ ಮುಂದೆ ನೋಟಿನ ಕಂತೆ ಕಾಣಿಸಿತು, ಆ ಸ್ವಾಮೀಜಿ ಅದನ್ನು ಅವಳ ಕಣ್ಣ್ ಮುಂದೆ ಆಡಿಸಲಾರಂಭಿಸಿದ


ಮರಿಯಮ್ಮ ನಿಧಾನವಾಗಿ ಸುಮ್ಮನಾದಳು. ಕಣ್ಣ ಮುಂದೆ ನೋಟಿನ ಕಂತು ಕುಣಿಯುತ್ತಿತ್ತು


"ಈ ಮಗು ತಗೊಂಡು ಆ ಮಗು ಕೊಡು" ಆತ ನಿರ್ದೇಶಿಸಿದ


"ಯಾಕೆ " ಮರಿಯಮ್ಮ ಪ್ರಶ್ನಿಸಿದಳು


ಆತ ಮತ್ತೊಂದು ನೋಟಿನ ಕಂತೆ ತೆಗೆದ


ನೂರರ ನೋಟುಗಳು


ಮರಿಯಮ್ಮನ ಕಣ್ಣುಗಳು ಅರಳಿದವು


ಮಗುಅನ್ನು ಮುಂಚಾಚಿದಳು.


ಆತ ತನ್ನ ಬಲಗೈನಲ್ಲಿದ್ದ ಮಗುವನ್ನು ಕೊಟ್ಟ


ಮಕ್ಕಳುಗಳು ಅದಲು ಬದಲಾದವು . ಹಾಗೆ ಅವಳ ಕೈ ತುಂಬಾ ನೋಟುಗಳು .ನೋಡು ನೋಡುತ್ತಿದ್ದಂತೆ ಆತ ಕತ್ತಲಲ್ಲಿ ಕರಗಿದ


ತನ್ನ ಕೈನಲ್ಲಿದ್ದ ಮಗುವನ್ನು ನೋಡಿದಳು.ಬಲು ಮುದ್ದಾಗಿತ್ತು.

ಅದು ಹುಟ್ಟಿ ಒಂದೆರೆಡು ದಿನಗಳಾಗಿದ್ದಿರಬಹುದು. ಅದರಮೈ ಮೇಲಿದ್ದ ಬಟ್ಟೆ ಹಾಗು ಹೊದಿಕೆಗಳನ್ನು ಬಿಚ್ಚಿ ಒಂದು ಬ್ಯಾಗಿಗೆ ಹಾಕಿದಳು

ತೆಗೆದುಕೊಂಡು ಹೋಗಿ ಪಾರ್ವತಿಯ ಪಕ್ಕದಲ್ಲಿ ಮಲಗಿಸಿದಳು ತಾನಿಲ್ಲೇ ಇದ್ದರೆ ಈ ವಿಷ್ಯ ಯಾರಿಗಾದರೆ ಗೊತ್ತಾದರೆ ಅಪಾಯ ಎಂದು ಬಗೆದು ತನ್ನ ಬಟ್ಟೆ ಬರೆಗಳನ್ನು ಬ್ಯಾಗಿಗೆ ತುಂಬಿಕೊಂಡು ಹಣದ ಸಮೇತ ಹಿತ್ತಲ ಬಾಗಿಲಿನಿಂದ ಹೊರ ಬಂದಳ ಬಸ್ ನಿಲ್ದಾಣದ ಕಡೆಗೆ ಕಾಲು ದಾರಿಯಲ್ಲಿ ಹೊರಟಳು.


************************************************


ಮರಿಯಮ್ಮ ಕಣ್ಣು ತೆರೆದಳು


ಸ್ವಾತಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವವಯ್ತು. ರಹಸ್ಯ ಇನ್ನೂ ಕಗ್ಗಂಟಾಯ್ತು.


"ಆ ಸ್ವಾಮಿ ಯಾರು ಅಂತ ಗೊತ್ತಾ ನಿಮಗೆ?" ಕೇಳಿದಳು

"ಇಲ್ಲಾ "ಎನ್ನುವಂತೆ ತಲೆ ಆಡಿಸಿದಳು ಮರಿಯಮ್ಮ.

ತನ್ನ ಗಮ್ಯ ತಾನಂದುಕೊಂಡಷ್ಟು ಸುಲಭಾವಾಗಿ ಸಿಗುವುದಿಲ್ಲ ಎಂದನಿಸಿತು ಸ್ವಾತಿಗೆ

"ಅವನನ್ನ ಎಲ್ಲಾದರೂ ಮತ್ತೆ ನೋಡಿದ್ರಾ?" ಶಿವೂ ಮರಿಯಮ್ಮನನ್ನ ಕೇಳಿದ

"ಇಲ್ಲಾ ನಾನ್ ಮತ್ತೆ ಅವನನ್ನ ಮೀಟ್ ಮಾಡಲಿಲ್ಲ .ಅವನ್ನ ಹಿಂದೆ ಎಲ್ಲೂ ಈ ಪ್ರದೇಶದಲ್ಲಿ ನೋಡಿಲ್ಲಾ . ಅದೆಲ್ಲಿಂದಾ ಬಂದನೋ ಈ ಮಗೂನಾ ಅದೆಲ್ಲಿಂದಾ ತಂದನೋ .ಗೊತ್ತಿಲ್ಲ. ಒಂದಂತೂ ನಿಜ .ಈ ಪಾರ್ವತಮ್ಮ ನೋವು ಅಂತ ನಮ್ಮನೆಗೆ ಬಂದದ್ದನ್ನು ನೋಡಿದಾನೆ. ಅದಕ್ಕೆ ಹಿತ್ತಲ ಬಾಗಿಲಿನಿಂದ ಒಳಗೆ ಬಂದಿದಾನೆ"

ಸ್ವಾತಿಯ ಮನದಲ್ಲಿ ಮತ್ತೆ ಅಂಧಾಕಾರ ಮೂಡಿತು.

ಶಿವು ತನ್ನ ಪ್ಯಾಕೆಟ್ ನಿಂದ ಸಾವಿರದ ಮೂರು ನೋಟುಗಳನ್ನು ಕೊಟ್ಟ

ಮರಿಯಮ್ಮ್ಮ ಕಾಯುತ್ತಿದ್ದವಳಂತೆ ಕಿತ್ತುಕೊಂಡಳು.

"ಆಯ್ತು ಮರಿಯಮ್ಮ. ಮುಂದೇನಾದರೂ ಸಹಾಯ ಬೇಕಿದ್ದಲ್ಲಿ ಮತ್ತೆ ಬರ್ತೀವಿ"

ಅವಳಿಗೆ ಕೈ ಮುಗಿದೆ ಹೊರಬಂದರು

ಮುಂದೇನು ಮಾಡುವುದು?

ಪ್ರಶ್ನೆ ಬೃಹದಾಕಾರವಾಯ್ತು.

5 comments:

  1. ರೂಪಾ ಮುಂದೇನು? ನಮ್ಮ ಮುಂದೆಯೂ ಬೃಹದಾಕಾರದ ಪ್ರಶ್ನೆ ಇಟ್ಟು ನಿಲ್ಲಿಸಿ ಬಿಡ್ತೀರಿ.... ಏನಾಯ್ತೂಂತ ಬೇಗ ಹೇಳಿ.... ಕುತೂಹಲಕರವಾಗಿ ಸಾಗುತ್ತಿದೆ.......
    ಶ್ಯಾಮಲ

    ReplyDelete
  2. ರೂಪಾ,
    suspenseಅನ್ನು ಇನ್ನಿಷ್ಟು ಹೆಚ್ಚಿಸಿದಿರಿ. ಆ ಮಗುವನ್ನು ಆ ಸ್ವಾಮಿ ಎಲ್ಲಿ ತೆಗೆದುಕೊಂಡು ಹೋದ, ಮುಂದೇನಾಯ್ತು? ಎನ್ನುವ ಕುತೂಹಲ ನನ್ನನ್ನೂ ಸಹ ಕುಣಿಸುತ್ತಾ ಇದೆ. ದಯವಿಟ್ಟು ಬೇಗನೇ ನಮಗೆ ಇದೆಲ್ಲದರ ಗುಟ್ಟನ್ನು ಬಿಚ್ಚಿಡಿ.

    ReplyDelete
  3. ರೂಪ, ಸಂಭಾಷಣೆಯಂತೂ ಬಹಳ ಚೆನ್ನಾಗಿ ಬರೆಯುತ್ತೀರಿ, ಖಂಡಿತ ಕಾದಂಬರಿ ಬರೆಯಲು ಪ್ರಯತ್ನಿಸಿ...

    ReplyDelete
  4. ರೂಪ ತುಂಬಾ ಚೆನ್ನಾಗಿದೆ ಕಥೆಯ ಎಳೆ...ಮುಂದಿನ ಭಾಗಕ್ಕೆ ಕಾಯುತ್ತಲಿದ್ದೇವೆ. ಇಷ್ಟವಾಯಿತು, ನೀವು ಕಥೆ ಬರೆಯುವ ಶೈಲಿ ಅತಿ ಇಷ್ಟವಾಯಿತು ಕಣ್ಣಿಗೆ ಕಟ್ಟುವಂತಿತ್ತು.

    ReplyDelete

ರವರು ನುಡಿಯುತ್ತಾರೆ