Wednesday, November 18, 2009

ಗಮ್ಯ ಹುಡುಕುತ್ತಾ ಮೂರನೆ ಕಂತು

"ಶಿವು ಏನ್ಮಾಡೋದು ಈಗಾ?" ಗೊಂದಲದ ಕಣ್ಣುಗಳಲ್ಲಿ ಮುಂದೇನು ಎಂಬ ಆತಂಕ ಮನೆ ಮಾಡಿತ್ತು


"ಸ್ವಾತಿ ಆ ಸ್ವಾಮಿ ಯಾರು ಎಲ್ಲಿಯವನು ಏನು ಗೊತ್ತಿಲ್ಲ . ಐ ಥಿಂಕ್ ಇಟ್ ಈಸ್ ಡಿಫಿಕಲ್ಟ್ ಟು ಟ್ರೇಸ್" ಕಾರ್ ಕೀ ಹಾಕುತ್ತಾ ನುಡಿದ ಮತ್ತೆಮುಂದುವರೆಸಿದ


" ಆದರೂ ಕೆಲವೊಂದು ಸಾಧ್ಯತೆಗಳನ್ನು ಊಹಿಸಬಹುದು"


ಅವನತ್ತ ಏನು ಎಂಬಂತೆ ನೋಡಿದಳು


"ಸಾಧ್ಯತೆ ಒಂದು . ನೀನು ಆ ಸ್ವಾಮಿಯ ಮಗಳಾಗಿರಬಹುದು" ಸ್ವಾತಿಯ ಮುಖ ಬಿಳುಚಿತು ಅದನ್ನು ಗಮನಿಸದವನಂತೆ ಮುಂದುವರೆಸಿದ


"ಗಂಡು ಮಗು ಬೇಕು ಅನ್ನೊ ಕಾರಣಕ್ಕೆ ಬದಲಾಯಿಸಿರಬಹುದು . ಹಾಗಿದ್ದಲ್ಲಿ ಆ ಸ್ವಾಮೀನ ಹುಡುಕಬೇಕು"


"ಸಾಧ್ಯತೆ ಎರೆಡು ಆ ಸ್ವಾಮಿ ಯಾವುದೋ ಮಾಟ ಮಂತ್ರ ಮಾಡುವವನಾಗಿದ್ದು ಗಂಡುಮಗುವನ್ನು ಬಲಿಕೊಡಬೇಕಿದ್ದುದರಿಂದ ಗಂಡು ಮಗುವನ್ನು ಕೊಂಡೊಯ್ದಿದ್ದಾನೆ. ಹಾಗಿದ್ದಲ್ಲಿ ಅವನು ನಿನ್ನನ್ನ ಎಲ್ಲಿಂದಕರೆತಂದ ಎಂಬುದನ್ನು ಪತ್ತೆ ಹಚ್ಚಬೇಕು ಅದು ಹೇಗೆ?" ಶಿವು ಕನ್ನಡಿಯಲ್ಲಿ ತನ್ನ ಮುಖವನ್ನೆ ನೋಡುತ್ತಿದ್ದ




ಸ್ವಾತಿಯ ಮೈ ಕಂಪಿಸಿತು



"ಶಿವು ನೀನುಮೊಬೈಲ್ ನಲ್ಲಿ ಮರಿಯಮ್ಮನ ಮಾತನ್ನೆಲ್ಲಾ ರೆಕಾರ್ಡ್ ಮಾಡಿಕೊಂಡಿದ್ದೀಯಲ್ಲಾ ಅದನ್ನ ಹಾಕು ಒಂದ್ಸಲ ಕೇಳೋಣ" ಮರಿಯಮ್ಮನಿಗೆ ಗೊತ್ತಾಗದ ಹಾಗೆ ಅವಳ ಮಾತನ್ನೆಲ್ಲಾ ರೆಕಾರ್ಡ್ ಮಾಡಿಕೊಳ್ಳುವ ಉಪಾಯ ಸ್ವಾತಿಯೇ ಕೊಟ್ಟಿದ್ದು




ಶಿವು ಆನ್ ಮಾಡಿದ




ಮಾತುಮುಂದುವರೆಯುತ್ತಿತ್ತು




"ಅವನು ಕೊಟ್ಟ ಹಣ ತಗೊಂಡು ಮಗೂನ ಅವನಿಗೆ ಕೊಟ್ಟು ನಿನ್ನನ್ನ ಕೈಗೆತ್ತಿಕೊಂಡೆ. ತುಂಬಾ ಚೆನ್ನಾಗಿದ್ದೆ ನೀನು. ನಿನ್ನ ಬಟ್ಟೆ ಬರೆ ಹೊದ್ಕೊಂಡಿದ್ದು ಎಲ್ಲಾನೂ ಬಿಚ್ಚಿ ಒಂದು ಬ್ಯಾಗಲ್ಲಿ ಹಾಕಿ ನಿನ್ನನ್ನ ಪಾರ್ವತಮ್ಮನ ಪಕ್ಕದಲ್ಲಿ ಮಲಗಿಸಿದೆ"




"ಶಿವು ಸ್ಟಾಪ್ ಮಾಡು" ಸ್ವಾತಿ ಏನೋ ಹೊಳೆದವಳಂತೆ ನುಡಿದಳು




"ಮರಿಯಮ್ಮ ನನ್ನ ಬಟ್ಟೇನ್ಲೆಲ್ಲಾ ಯಾವುದೋ ಬ್ಯಾಗ್‌ಲ್ಲಿ ಹಾಕಿದೆ ಅಂದಳಲ್ಲ ಅದು ಸಿಗಬಹುದಾ"


"ಹೌದಲ್ವಾ . ಆದರೂ ಆ ಬಟ್ಟೇನೆಲ್ಲಾ ಅವಳು ತಂದಿರ್ತಾಳೆ ಅಂತ ಹೇಗೆ ಹೇಳೋದು"ಶಿವೂನ ದನಿಯಲ್ಲಿ ನಿರಾಸೆ ತುಂಬಿತ್ತು

"ಆದರೂ ಒಂದು ಸಲ ಕೇಳೋಣಾ ಶಿವು"

ಕಾರಿನಿಂದ ಇಳಿದು ಮರಿಯಮ್ಮನ ಮನೆಯತ್ತ ನಡೆದರು


ಮರಿಯಮ್ಮನ ಮುಖದಲ್ಲಿ ಅಸಂತೋಷ ಎದ್ದು ಕಾಣುತ್ತಿತ್ತು

"ಅಲ್ಲಾ ಆ ಬಟ್ಟೇನಲ್ಲಾ ನಾನ್ಯಾಕೆ ತರಲಿ . ಅದನ್ನಾ ಆ ಮನೇಲೇ ಬಿಟ್ಟು ಬಂದೆ ನಂದು ಒಂದಷ್ಟು ಸಾಮಾನು ಇತ್ತು ಅಲ್ಲಿ. ಮತ್ತೆ ಮತ್ತೆ ಬಂದು ತೊಂದರೆ ಕೊಡ್ಬೇಡಿ "



ಶಿವು ಹೇಳಿದ


"ಮರಿಯಮ್ಮ ನಾವೆಷ್ಟು ಸಲ ಬರ್ತೀವೋ ಆಗೆಲ್ಲಾ ನಿಂಗೆ ಮೂರು ಮೂರು ಸಾವಿರ ರೂಪಾಯಿ ಸಿಗುತ್ತೆ . ಈಗೇನ್ ಹೇಳ್ತೀಯಾ" ಅವಳನ್ನೆ ಅವಲೋಕಿಸಿದ


ಅವಳಿಗಾದ ಸಂತೋಷ ಗೊತ್ತಾಗುತ್ತಿತ್ತು



"ಹಂಗಿದ್ರೆ ಸರಿ. ಸ್ವಾತಿ ನಿಮ್ಮ ಊರಲ್ಲಿ ಒಂದು ಹುಣಿಸೇ ಹಣ್ಣಿನ ಮರ ಇತ್ತಲ್ಲಾ ಅದು ಈಗಿದೆಯಾ?"

ಸ್ವಾತಿಗೆ ತಲೆ ಕೆಟ್ಟಿತು


"ಮರಿಯಮ್ಮ ನಂಗೆ ಬೇಕಾಗಿರೋದೇನು , ನೀನೇನು ಹೇಳ್ತಾ ಇದ್ದೀಯಾ?"


"ಹಂಗಲ್ಲಾ ಆ ಹುಣಿಸೇ ಹಣ್ಣಿನ ಮರದ ಪಕ್ಕ ಒಂದು ಸಣ್ಣ ಮನೆ ಇತ್ತು. ಅದು ಯಾರೋ ಶಿವರಾಜ್ ಗೌಡ ಅನ್ನೋರ ಮನೆ . ನಾನು ಬಾಡಿಗೆಗೆ ತಗೊಂಡಿದ್ದು ಅವರನ್ನಕೇಳಿದರೆ ಆ ಬಟ್ಟೆ ವಿಷಯ ಗೊತ್ತಾಗುತ್ತೆ ಹಾಗೆ ನನ್ನ ಪಾತ್ರೆಗಳು ಸಿಗುತ್ತೇ"


ಸ್ವಾತಿ ನೆನಪಿಸಿಕೊಳ್ಳತೊಡಗಿದಳು.


ಅವಳಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು. ಅಪ್ಪ ಶಿವರಾಜ್ ಗೌಡ ಎಂಬಾತನ ಜಮೀನನ್ನು ಕೊಂಡುಕೊಂಡಿದ್ದೇನೆ ಎಂದು ಹೇಳುತ್ತಿದ್ದರು.


" ಹೌದು ಈಗ ಅಲ್ಲಿ ಹುಣಿಸೇ ಮರ ಇಲ್ಲ ಅದನ್ನ ಕೆಡವಿ ಅಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಬಂದಿದೆ ಅದು ಅಪ್ಪಂದೇ "ಎಂದಂದವಳ ಮುಖವನ್ನು ನೋಡಿ ನಕ್ಕಳು ಮರಿಯಮ್ಮ


ಆ ನಗುವಿನ ಅರ್ಥ ಆಗಿ ಪೆಚ್ಚಾದಳು ಸ್ವಾತಿ. ಈಗ ರೆಡ್ಡಿಗಳು ಅವಳಪ್ಪ ಅಲ್ಲ ಎಂಬ ಗೂಢಾರ್ಥ ಅದು

"ಅದು ಇವರ ಮಾವಂದೇ" ಎಂದು ತಿದ್ದಿದಳು.


"ಹಾಗಿದ್ರೆ ಮಾವನ್ನೇ ಕೇಳೋಣ ನಡೀ" ಎಂದು ಹೇಳಿ ನಿಂತ ಶಿವು


ಮರಿಯಮ್ಮ ಅವನನ್ನೇ ನೋಡಿದಳು. ಹಣದ ಹಸಿವಿನವಳು

ಐನೂರರ ಆರು ನೋಟು ಕೊಟ್ಟ.


"ಆಗಾಗ ಬರ್ತಾ ಇರಿ" ಮರಿಯಮ್ಮ ಇಲ್ಲದ ಆತ್ಮೀಯತೆ ತೋರಿದಳು.


ಶಿವು ಸ್ವಾತಿ ಮನೆ ದಾರಿ ಹಿಡಿದರು


**********************


ರೆಡ್ಡಿಯವರು ತಲೆ ಕೆಡಿಸಿಕೊಂಡಿದ್ದರು. ಅಲ್ಲಾ ಸ್ವಾತಿ ತಲೆ ಕೆಡಿಸಿದ್ದಳು

"ಆ ಜಮೀನಿನಲ್ಲಿ ಒಂದು ಮನೆ ಇತ್ತಲ್ಲಾ ಆ ಮನೆ ಕೆಡವಿದಾಗ ಏನೇನು ಸಿಕ್ಕವು ಅಪ್ಪ ಅದೆಲ್ಲಾ ಎಲ್ಲಿವೆ" ಅವಳ ಪ್ರಶ್ನೆಗೆ ತಿಣುಕಾಡುತ್ತಿದ್ದರು


"ಸ್ವಾತಿ ಆ ಮನೆ ಹುಣಿಸೇ ಮರದ ಹತ್ರ ಇತ್ತು ಅಂತಾ ಎಲ್ಲಾ ದೆವ್ವದ ಮನೆ ಅಂತಿದ್ದರು. ಶಿವ್ರಾಜ್ ಗೌಡನೇ ಅದನ್ನ್ ಕೆಡವಿಸಿದ್ದ ನಾನು ಬರೀ ಹುಣಿಸೇಮರಾನ ಮಾತ್ರ ಕೆಡವಿಸಿದ್ದೆ" ರೆಡ್ಡಿಯವರು ತಮ್ಮ ತಲೆಯಲ್ಲಿದ್ದ ನೆನಪಿನ ಭಂಡಾರದಲ್ಲಿ ಆಯ್ದು ಕೊಟ್ಟರು.

"ಅಪ್ಪಾ ಆ ಶಿವ್ರಾಜ ಅಂಕಲ್ ಎಲ್ಲಿ ಸಿಗ್ತಾರೆ?"


"ಅವನು ಈಗ ...................."


"ಕೋರಮಂಗಲದಲ್ಲಿ ಮನೆ ಕೊಂಡ್ಕೊಂಡಿದಾನೆ ಅಂತ ಯಾರೋ ಹೇಳ್ತಿದ್ದ ಹಾಗಿತ್ತು"


"ಅಪ್ಪಾ ಪ್ಲೀಸ್ ನಂಗೆ ಅವರ ಅಡ್ರೆಸ್ ಬೇಕು "


"ಆಯ್ತಮ್ಮ ಸ್ವಾತಿ ಅಪ್ಪಾಂತ ಕರೀತಿಯ ಅಪ್ಪ ಅಮ್ಮನ್ನ ಹುಡುಕ್ತೀಯಾ . ಏನೋ ಮಾಡ್ಕೋ ಹೋಗು" ರೆಡ್ಡಿಯವರ ಕಣ್ಣಾಲಿಗಳು ತುಂಬಿದ್ದವು. ಮಗನ್ನ ಹುಡುಕಿಸುವ ಪ್ರಯತ್ನ ಅವರು ಮಾಡಿರಲಿಲ್ಲ . ಕಾಣದ ಮಗನಿಗಾಗಿ ಹಂಬಲಿಸುವುದಕ್ಕಿಂತ ಕಣ್ಮುಂದೆ ಇರುವ ಸ್ವಾತಿಯ ಸಂತೋಷವೇ ಅವರಿಗೆ ಸಾಕಾಗಿತ್ತು


"ಸ್ವಾತಿ " ಅಮ್ಮನ ದನಿ ಕೇಳಿತು ಮಮತೆ ತುಂಬಿತ್ತು ದನಿಯಲ್ಲಿ


ಐದು ದಿನಗಳಾಗಿದ್ದವು ಅಮ್ಮನ ಈ ದನಿ ಕೇಳಿ ಅವರತ್ತ ನೋಡಿದಳು

"ಸ್ವಾತಿ ಆವತ್ತು ಹೆತ್ತ ಕರುಳ ಸಂಕಟದಲ್ಲಿ ಏನೇನೋ ಅಂದುಬಿಟ್ಟೆ. ನೀನೆ ನನ್ಮಗಳು ಸ್ವಾತಿ. ಆ ಕಾಣದಿರೋ ಮಗಂಗೋಸ್ಕರ ನಾನು ನಿನ್ನ ಮನಸನ್ನ ತುಂಬಾ ನೋಯ್ಸಿಬಿಟ್ಟೆ. ನೀನ್ಯಾರನ್ನೂ ಹುಡುಕಬೇಡಾ ಕಣೆ. ನಾನೆ ನಿನ್ನಮ್ಮ ಸ್ವಾತಿ"

ಅವರ ಅಪ್ಪುಗೆಯಲ್ಲಿ ಕರಗಿದಳು. ಪಾರ್ವತಮ್ಮ ಅಂದು ಸಂಕಟದಲ್ಲಿ ಹಾಗೆಲ್ಲಾ ಮಾತಾಡಿದರೂ ಅವರ ಮನಸು ಸ್ವಾತಿಯನ್ನು ನೆನೆದು ಚುರುಕೆಂದ್ದಿತ್ತು. ಹೆತ್ತ ಮಗನೋ ಸಾಕಿದ ಮಗಳೋ ಎಂಬ ತಾಕಲಾಟದಲ್ಲಿ ಒಂಬತ್ತು ತಿಂಗಳ ನಂಟಿಗಿಂತ ಹತ್ತೊಂಬತ್ತು ವರ್ಷ್ದದ ಒಡನಾಟವೇ ಗೆದ್ದಿತ್ತು


"ಅಮ್ಮಾ ನಾನು ಯಾವತ್ತಿದ್ದರೂ ನಿಮ್ಮಿಬ್ಬರ ಮಗಳೇ ಆದರೆ ನಂಗೆ ನನ್ನ ನೆಲೇನ ಹುಡುಕಲೇಬೇಕು ಅಂತ ಮನಸಿಗೆ ಬಂದಿದೆ ಪ್ಲೀಸ್ ತಡೀಬೇಡಾಮ"

ಪಾರ್ವತಿ ಅವಳ ಕಣ್ಣೊರೆಸಿದರು.



ಅಂದು ತಾಯಿ ಮಗಳು ಜೊತೆಯಲ್ಲೇ ಮಲಗಿದರು. ರಾತ್ರಿ ಎಲ್ಲಾ ತನ್ನ ಅನ್ವೇಷಣೆ ಅದರ ಗುರಿಯ ಬಗ್ಗೆ ಮಾತಾಡುತ್ತಿದಳು ಸ್ವಾತಿ.


ಆ ದಿನ ಕಳೆಯಿತು. ಎರೆಡು ದಿನಗಳಾದವು



"ಸ್ವಾತಿ ಶಿವ್ರಾಜ್ ಗೌಡರ ಅಡ್ರೆಸ್ ಸಿಕ್ತು" ರೆಡ್ಡಿಯವರು ಕೂಗಿದರು ಲಾನ್‍ನಿಂದ

ಸ್ವಾತಿ ಒಂದೇ ಹೆಜ್ಜೆಗೆ ನುಗ್ಗಿ ಬಂದಳು.


ಅವರ ಅಡ್ರೆಸ್ ತೆಗೆದುಕೊಂಡು ಸ್ವಾತಿ ಹೊರಟಳು ಕೋರಮಂಗಲಕ್ಕೆ. ಜೊತೆಗೆ ಶಿವು .
ಡ್ರೈವ್ ಮಾಡುತ್ತಿದ್ದ ಶಿವುವನ್ನೆ ದಿಟ್ಟಿಸಿದಳು . ಏಳೆಂಟು ದಿನಗಳಾಗಿತ್ತು ಶಿವು ಕೆಲಸಕ್ಕೆ ಹೋಗಿ

"ಶಿವು ನಿಂಗೆ ರಜಾ ಸಿಕ್ತಾ ಇದ್ಯಾ?"

"ಇಲ್ಲಾ ಸ್ವಾತಿ ನಮ್ ಎಚ್ ಆರ್ ಮೂರ್ನಾಲ್ಕು ಮೇಲ್ ಹಾಕ್ತಿದ್ದಾನೆ ಬಡಕೋಳ್ಳಿ ಅಂತಾ ನಾನು ಸುಮ್ನಿದೀನಿ" ಡ್ರೈವ್ ಮಾಡುತ್ತಾ ರಸ್ತೆಯನ್ನೇ ನೋಡುತ್ತಿದ್ದ


"ನಾಳೆ ಕೆಲ್ಸದಿಂದ ತೆಗೆದು ಹಾಕಿದ್ರೆ?" ಆತಂಕದಿಂದ ಪ್ರಶ್ನಿದಳು

"ತೆಗೆದು ಹಾಕಲಿ ಕೆಲ್ಸ ನಂಗೆ ಇನ್ನೊಂದು ಸಿಗುತ್ತೆ . ಆದರೆ ನನ್ನ ಸ್ವಾತಿಗೆ ಸಂತೋಷ ಆದರೆ ಸಾಕು"

ಕಿರುನಗೆ ಮಿಂಚಿತು ಅವನ ಮುಖದಲ್ಲಿ

ತನಗಾಗಿ ಎಲ್ಲರೂ ಎಷ್ಟೊಂದು ಶ್ರಮ ವಹಿಸುತ್ತಾರೆ. ಶಿವೂ ಮೇಲೆ ಪ್ರೀತಿ ಮೂಡಿತು . ಅ

ಶಿವ್‌ರಾಜರ ಬಂಗಲೆ ದೊಡ್ಡದೇ ಆದರೂ ರೆಡ್ಡಿಯವರ ಬಂಗಲೇಯಷ್ಟೇನೂ ಇರಲಿಲ್ಲ

ಆಗಲೇ ಶಿವರಾಜರಿಗೆ ರೆಡ್ಡಿಯವರು ಫೋನ್ ಮಾಡಿ ಮಗಳು ಬರುವ ವಿಷಯ ತಿಳಿಸಿದ್ದರು. ಬಾಗಿಲು ತೆರೆದವರು ಗೌಡರ ಹೆಂಡತಿಯೇ. ಸ್ವಾಗತಿಸಿದರು


ರೆಡ್ಡಿಯವರ ಮಗಳಿಗೆ ಈ ಸ್ವಾಗತ. ಗೌಡರೂ ಬಂದರು


ಕಾಫಿ ಕುಡಿಯುತ್ತಾ ಮಾತಿಗೆ ಶುರು ಮಾಡಿದಳು


"ಅಂಕಲ್ ನಾನು ಹುಟ್ಟಿದ್ದು ನಿಮ್ಮ ಮನೇಲೇ ಅಂತೆ . ಆಗ ನಮ್ಮಜ್ಜಿ ಒಂದು ಬ್ಯಾಗ್ ಇಟ್ಟಿದ್ದರು ನನಗೆ ಅಂತ ಬಟ್ಟೆ ಜೊತೆ ಒಂದು ಇಂಪಾರ್ಟೆಂಟ್ ಡಾಕ್ಯುಮೆಂಟ್ಸ್ ಇಟ್ಟಿದ್ದರಂತೆ. ಆ ಬ್ಯಾಗ್ ನಿಮಗೇನಾದರೂ ಸಿಕ್ಕಿತ್ತಾ ತುಂಬಾ ಮುಖ್ಯಾ ಒಬ್ಬರ ಜೀವನಾನೆ ಅದರಲ್ಲಿದೆ" ಅಪ್ಪ ಹೇಳಿದ್ದರು ನಿಜ ವಿಷಯ ತಿಳಿಸಬೇಡ ಎಂದು


"ಅದೆಂಗೆ ಗೆಪ್ತಿ ಇಟ್ಟಿರಕಾಯ್ತದೆ. ಈಗಾಗ್ಲೆ ಈಟೋಂದು ವರ್ಸಾ ಆದ ಮ್ಯಾಕೆ"

ಗೌಡರು ಪೇಚಾಡಿದರು. ರೆಡ್ದಿಯವರ ಮಗಳು ಬಂದಿರೋದು ಅವರು ಕೇಳಿದ್ದನ್ನ ಕೊಟ್ಟರೆ ನಾಳೆಗೆ ತನಗೆ ಪ್ರಯೋಜನ ಅಲ್ಲವೇ? ಅವರ ಮನಸಲ್ಲಿ ಎಣಿಕೆ ಮಾಡುತ್ತಾ ಹೆಂಡತಿಯ ಕಡೆ ನೋಡಿದರು

ಅವರ ಹೆಂಡತಿ ಹೇಳಿದರು

" ಆಗಲೆ ಆ ನರ್ಸಮ್ಮ ಓಡೋದ್ ಮ್ಯಾಕೆ ಆ ಮನೆಗೆ ಯಾರೂ ಬರ್ಲಿಲ್ಲ. ಆ ಮನೆ ಹಾಳಿ ಬಾಡ್ಗೇನೋ ಕೊಟ್ಟಿರಲಿಲ್ಲ. ಹಂಗಾಗಿ ಒಂದಿಸಾ ನಾನೇ ಮನೆಗೆ ಓಗಿ ಅಲ್ಲಿಂದೆಲಾ ಬಾಚ್ಕೊಂಡು ಬಂದಿದ್ದೆ ಪಾತ್ರೇ ಸಾಮಾನು ಅಂತ ಒಂದಷ್ಟು ಇತ್ತು. ಹಂಗೆ ಬ್ಯಾಗೇನೂ ಇದ್ದಿದಂಗೆ ಗೆಪ್ತಿ ಇಲ್ಲ"

ಅವರು ನೆನಪು ಮಾಡಿಕೊಳ್ಳುತ್ತಿದ್ದರು

ಸ್ವಾತಿಯ ಮುಖ ನಿರಾಸೆ ಯಿಂದ ಬಾಡಿತ್ತು.

ಶಿವೂಗೆ ಹೋಗೋಣ ಎಂಬಂತೆ ಸನ್ನೆಮಾಡಿದಳು

"ಸರಿ ಅಂಕಲ್ ನಿಮ್ಗೇನಾದರೂ ಗೊತ್ತಾದರೆ ಹೇಳಿ " ಅವರಿಗೆ ಕೈ ಮುಗಿದು ಹೊರಬರಲಾರಂಭಿಸಿದರು

"ಇರವ್ವ ಸ್ವಾತಿ ಅದ್ರಾಗೆ ಒಂದು ಚೆಂದದ ಶಾಲು ಮತ್ತೆ ಮಗು ಬಟ್ಟೇ ಇತ್ತಾ " ಗೌಡತಿ ಕರೆದಾಗ ಸ್ವಾತಿಯ ಮುಖ ಸಂತಸದಿಂದ ಅರಳಿತು. ಹಿಂದೆ ತಿರುಗಿದಳು

"ಹಾ ಹೌದು ಆಂಟಿ . ನಿಮಗೆ ಸಿಕ್ಕಿತ್ತಾ?"



"ಔದವ್ವಾ ಈಗ ಗ್ನಾಪ್ನ ಬರ್ತಿದೆ, ಒಂದು ಬಿಳಿ ಬ್ಯಾಗಂತದ್ದು ಸಿಕ್ತು . ಪುಟ್ಟ ಮಗೂದು. ಅದನ್ನೇನು ಮಾಡೋದು ಅಂತ ನಮ್ಮ ಕೆಲ್ಸದಾಕೆಗೆ ಕೊಟ್ಟುಬಿಟ್ಟೆ.ಅವ್ಳೆಲ್ಲಿದಾಳೋ ಗೊತ್ತಿಲ್ಲ. "

ಸ್ವಾತಿಗೆ ನಿರಾಸೆಯಾಯ್ತು

"ಆದರೆ ಆ ಶಾಲು ಮಾತ್ರ ನನ್ನತ್ರಾನೆ ಇದೆ ಅನ್ಸುತ್ತೆ . ತುಂಬಾ ವೈನಾಗಿತ್ತು. ಮೆತ್ ಮೆತ್ತಗೆ ಅಂತಾದ್ದು ಈಗೆಲ್ಲೂ ಸಿಕ್ಕಲ್ಲ. ಅಂತೇಳಿ ನಾನೇ ಮಡಿಕೊಂಡಿದ್ದೆ "

"ಆಂಟಿ ಹುಡುಕುತ್ತೀರಾ ಪ್ಲೀಸ್"

" ಅಯ್ಯೋ ಬಿಡವ್ವಾ ಅಂತಾದಲ್ಲ ಅಂದ್ರೆ ಅದಕ್ಕಿಂತ ನೂರು ಪಟ್ಟು ಚೆನ್ನಾಗಿರೋದನ್ನ ಆರ್ಡ್ರ್ ಮಾಡಿ ಕೊಡಿಸ್ತಿನಿ. "

"ಇಲ್ಲಾ ಅಂಕಲ್ ನಂಗೆ ಅದೇ ಬೇಕು"

ಸ್ವಾತಿ ಮತ್ತೆ ಗೌಡತಿಯನ್ನೇ ನೋಡಿದಳು

ಏನನ್ನಿಸಿತೋ ಶಿವ್ರಾಜ್ ಗೌಡರು ಕೊಡು ಎಂದು ಸನ್ನೆ ಮಾಡಿದರು

ಗೌಡತಿ

ಆಳನ್ನ ಕರೆದು ಅಟ್ಟದ ಮೇಲಿನಿಂದ ದೊಡ್ಡ ಟ್ರಂಕನ್ನ ತೆಗೆಯಲು ಹೇಳಿದರು

ದೊಡ್ಡ ಟ್ರಂಕ್ ಅದು

ಎಲ್ಲಾ ಹಳೆಯದನ್ನೂ ತನ್ನ ಹೊಟ್ಟೆಯಲ್ಲಿಟ್ಟುಕೊಂಡಿತ್ತು


ಗೌಡತಿ ಒಂದೊಂದು ಸಾಮಾನನ್ನೂ ತೆಗೆದು ಏನನ್ನೋ ನೆನಪಿಸಿಕೊಳ್ಳುತ್ತಿದ್ದರು. ಅವರಿಗೆ ಅವರ ಗತ ಜೀವನದ ನೆನಪು .ಆದರೆ ಸ್ವಾತಿಗೆ ಅವಳ ಭೂತಕಾಲವೇ ಅವಳ ಭವಿಷ್ಯ್ದದ ನಿರ್ಣಾಯಕ ಕಾಲ.


ಕೊನೆಗೂ ಆ ಶಾಲ್ ತೆಗೆದರು

ಗುಲಾಬಿ ಬಣ್ಣದ ಶಾಲ್ ಮಗುವಿಗೆಂದೇ ಮಾಡಿಸಿದ್ದ ಹಾಗಿತ್ತು.

ನೋಡಿದೊಡನೆ ಎಂತಹವರಿಗೂ ಹಿಡಿಸುವಂತಹದ್ದು . ಮುದ್ದಾದದ್ದು

ಅದನ್ನು ಮುಟ್ಟಿದಳು ಅಪ್ಯಾಯ ಮಾನವಾಗಿ.

ಎಂತಹದ್ದೋ ಭಾವನೆ. ತನ್ನದೆನ್ನುವ ಭಾವನೆ. ತನ್ನವರು ಸಿಕ್ಕಿಯೇ ಬಿಟ್ಟರೆನ್ನುವಷ್ಟು ಸಂಭ್ರಮ

ಭಾವನೆಗಳ ಕಟ್ಟೆಯೊಡೆಯಿತು

ಅದನ್ನು ಕೈಗೆತ್ತಿಕೊಂಡು ಅಳಲಾರಂಭಿಸಿದಳು

"ಯಾಕವ್ವ ಏನಾಯ್ತು? " ಗೌಡರು ಗಾಬರಿಯಾದರು.

"ಏನಿಲ್ಲ ಅಂಕಲ್ " ಅವರಿಗೆ ಬದಲಿ ಹೇಳಿದ.

"ಈ ಶಾಲ್ ನಾವು ತಗೊಂಡು ಹೋಗ್ತೀವಿ ಅಂಕಲ್" ಶಿವೂನೆ ಮಾತಾಡಿದ.

"ಆಯ್ತಪ್ಪ ಧಾರಳವಾಗಿ. ಆದ್ರೆ ಆ ಹೆಣ್ಮಗ ಯಾಕಿಂಗೆ ಅಳ್ತಾ ಇದೆ"ಗೌಡರ ಕಾಳಜಿಗೆ ವಂದಿಸಿದ ಶಿವು ಸ್ವಾತಿಯನ್ನು ಸಮಾಧಾನ ಮಾಡುತ್ತಾ ಹೊರಗೆ ಕರೆದುಕೊಂಡು ಬಂದ.

ಕಾರಲ್ಲಿ ಕುಳಿತು ಆ ಶಾಲನ್ನೆ ದಿಟ್ಟಿಸುತ್ತಿದ್ದಳು ಸ್ವಾತಿ.

"ಶಿವು ನನ್ನ ನಿಜವಾದ ನೆಂಟ ಅಂದ್ರೆ ಇದೇ ಅಲ್ವಾ?"

"ಸ್ವಾತಿ ಇದು ಭಾವುಕತೆಗೆ ಸಮಯ ಅಲ್ಲಾ. ಆ ಶಾಲನ್ನ ಪೂರ್ತಿಯಾಗಿ ಬಿಚ್ಚು ನೋಡೋಣ" ಕಾರನ್ನು ನಿಲ್ಲಿಸಿ ನುಡಿದ
ಸ್ವಾತಿ ಶಾಲನ್ನು ಬಿಚ್ಚಿದಳು ದೊಡ್ಡದೇ .
ಎರಡನೇ ಮಡಿಕೆ ಬಿಚ್ಚಿದಳು.
ಯಾರೋ ನವಿಲಿನ ಚಿತ್ರ ಬಿಡಿಸಿದ್ದರು ಮುದ್ದು ಮುದ್ದಾಗಿತ್ತು. ಉಲ್ಲನ್ ನಿಂದ ಕುಸುರಿ ಮಾಡಿದ್ದಾಗಿದ್ದಿತ್ತು.
ಕೆಳಗೆ ಎಂತಹದ್ದೋ ಡಿಸೈನ್.
"ಇದೇನು ಡಿಸೈನ್ ಹೀಗಿದೆ ಸ್ವಾತಿ" ಶಿವು ಆ ಡಿಸೈನ್ ಮುಟ್ಟುತ್ತಾ ಕೇಳಿದ
"ಶಿವು ಇರು ಇರು ಇದು ಅಕ್ಷರ . ಹಾ ತಮಿಳು ಅಕ್ಷರ ಇದು " ಅವನ ಮಾತನ್ನು ತಡೆಯುತ್ತಾ ಕೂಗಿದಳು
"ತಮಿಳಾ ?" ಆಶ್ಚರ್ಯದಿಂದ ಅದನ್ನೇ ನೋಡುತ್ತಾ ಉದ್ಗರಿಸಿದವನ ಮನದಲ್ಲಿ ನೂರೆಂಟು ಪ್ರಶ್ನೆಗಳು .
ಸ್ವಾತಿಯ ಮನದಲ್ಲೂ ಆನಂದದ ಬುಗ್ಗೆಯ ಜೊತೆಗೆ ಎದೆಯಲ್ಲಿ ಕಂಪನವಾಯ್ತು
ಶಿವೂ ಪ್ರಶ್ನೆಗಳ ಬೊಕ್ಕೆಯಿಂದ ಒಂದನ್ನು ಆರಿಸಿ ಅವಳೆಡೆ ಎಸೆದ
"ಸ್ವಾತಿ ತಮಿಳಿನಲ್ಲಿ ಬರೆದಿರೋದು ಏನು ?"
ಸ್ವಾತಿ ತನ್ನನ್ನು ತಾನು ಪ್ರಶ್ನಿಸಿಕೊಂಡಳು
"ಹೌದು ಏನು?"
(ಮುಂದುವರೆಯುವುದು)

4 comments:

  1. ರೂಪಾ, ಚನ್ನಾಗಿದೆ ಕಲ್ಪನೆಗಳ ಲಹರಿ ಒಮ್ಮೆ ಒಪ್ಪಿಕೊಂಡ ಸ್ವತ್ತಿನ ಬಗ್ಗೆಯೇ ನಮಗೆ ಅಷ್ಟೊಮ್ದು ಮಮತೆ ಇರುತ್ತೆ ಇನ್ನು ಮಗಳು...?? ಹೇಗಿರಬೇಡ....
    ಇನ್ನೊಮ್ಮೆ ಕಂತುಗಳನ್ನ ಒಟ್ಟಿಗೆ ಓದಿ ಪ್ರತಿಕ್ರಿಯಿಸುತ್ತೇನೆ..

    ReplyDelete
  2. ವಾಹ್!! ಒಳ್ಳೆಯ ತಿರುವು... ಕಥೆ ತುಂಬಾ ಚೆನ್ನಾಗಿ ಬರುತ್ತಿದೆ ಮುಂದುವರಿಸಿ

    ReplyDelete
  3. ಕಥೆ ಓದ್ತಾ ಇದ್ರೆ ಎಲ್ಲೋ ಕಳೆದುಹೊಗ್ತಿವಿ
    ತುಂಬಾ ಚೆನ್ನಾಗಿ ಬರಿತಿದಿರ
    ಮುಂದುವರೆಯಲಿ

    ReplyDelete
  4. ರೂಪಾ ನಿಜಕ್ಕೂ ಅತ್ಯಂತ ಕುತೂಹಲಕರವಾಗಿದೆ.... ಏನೇನೋ ತಿರುವು ಕೊಡುತ್ತೀರಿ ನೀವು ಕಥೆಗೆ...

    ಶ್ಯಾಮಲ

    ReplyDelete

ರವರು ನುಡಿಯುತ್ತಾರೆ