"ಸೂರ್ಯನ ಸುತ್ತಾ ಭೂಮಿ ಸುತ್ತುವುದು .ಚಂದ್ರ ಭೂಮಿಯ ಸುತ್ತಾ ತಿರುಗುತ್ತದೆ" ಪಕ್ಕದ ಮನೆ ಸುಮಿ ಓದುತ್ತಿದ್ದರೆ ನನ್ನ ಮನದಲ್ಲಿ ಸಿಟ್ಟು . ಹೇಳಲಾಗದ ನೋವು. ಇಲ್ಲಾ ಭೂಮಿ ನನ್ನ ಸುತ್ತಾನೆ ಸುತ್ತೋದು .
ಇವತ್ತು ಒಂದರಲ್ಲಿ ಎರೆಡು ನಿರ್ಧಾರವಾಗಲೇ ಬೇಕು ನಾನೋ ಇಲ್ಲಾ ಭಾಸೀನೋ ಅಂತ ಇವತ್ತು ಹೇಳಲಾಗದಿದ್ದರೆ ಮುಂದೆಂದೂ ಧರಿತ್ರಿ ಸಿಗೋದಿಲ್ಲ. ಇವತ್ತು ಕತ್ತೇ ಬಡವ ಅದು ಹೇಗೆ ಅವಳನ್ನ ಹಾರಿಸಿಕೊಳ್ತಾನೋ ನೋಡೇ ಬಿಡೋಣ. ಎಂದಿಗಿಂತ ಮುಂಚೇಯೇ ಹೊರಟಿದ್ದೆ ನನ್ನ ಹೊಸ ಕಾರಲ್ಲಿ . ನೆನ್ನೆ ತಾನೆ ತಗೊಂಡಿದ್ದೆ.
ಹೌದು ನಾನಾಗ ಹೈಸ್ಕೂಲಿನಲ್ಲಿದ್ದೆ ಆಗಲೇ ಬಂದವಳು ಈ ಧರಿತ್ರಿ . ನೋಡಿದಾಗಲೇ ಏನೋ ಆಕರ್ಷಣೆ . ಅವಳ ಬಂಗಲೆಯೂ ನನ್ನ ಪುಟ್ಟ ಇಟ್ಟಿಗೆ ಮನೆಯೂ ಎದುರು ಬದುರಾಗಿದ್ದುದು ವಿಪರ್ಯಾಸ. ನಮ್ಮಿಬ್ಬರ ಅಂತರಕ್ಕೆ ಮತ್ತಷ್ಟು ದೂರ ಸೇರಿದ್ದು ಅವಳ ಮನೆಯ ಪಕ್ಕಕ್ಕೆ ಇದ್ದ ಭಾಸಿಯ ಮನೆ. ಅವಳೊಂದಿಗೆ ಹೋಗಬೇಕೆಂದುಕೊಂಡಾಗಲೆಲ್ಲಾ ಅವಳು ಭಾಸಿಯೊಟ್ಟಿಗೆ ಹೋಗುತ್ತಿದ್ದಳು. ಹೌದು ನನ್ನಂತಹ ಬಡವನ ಜೊತೆ ಏಕಾದರೂ ಬರುತ್ತಾಳೆ ಎಂದುಕೊಂಡು ನಿಟ್ಟುಸಿರು ಬಿಡುತ್ತಿದ್ದೆ. ಆದರೂ ಹೇಗೋ ನಮ್ಮ ಮೂವರ ಸ್ನೇಹದ ಗಿಡ ಚಿಗುರಿತ್ತು. ಆ ಗಿಡ ನನ್ನ ನಿರಾಸೆಯ ಕಾವಿಗೆ ಆಗಾಗ ಬಾಡುತ್ತಿದ್ದರೂ ಮತ್ತೆ ಧರಿತ್ರಿಯ ನಗು ನೀರೆರೆಯುತ್ತಿತ್ತು. ಮತ್ತೆ ಬೆಳೆಯುತ್ತಿತ್ತು.
ಅಪ್ಪ ಆಗಷ್ಟೇ ಒಂದು ಹೊಸ ಮನೆ ತೆಗೆದುಕೊಂಡಿದ್ದರು. ಎರೆಡು ರೂಮಿರುವ ಮನೆ ಅದು ಏನೋ ಹೊಸ ಆತ್ಮ ವಿಶ್ವಾಸ ನನ್ನಲ್ಲಿ . ನಮ್ಮಿಬ್ಬರ ಅಂತರ ಕಡಿಮೆಯಾಗಿತ್ತು. ಇಂದಿನಿಂದಾದರೂ ಅವಳ ಜೊತೆ ಹೋಗುವ ಕನಸು ನಿಜವಾಗಬಹುದು. ಹಾಗೆಂದುಕೊಂಡೇ ಸ್ಕೂಲಿಗೆ ಹೋಗಿದ್ದು ಆದರೆ ಭಾಸಿ ಅಂದು ಹೊಸ ಸೈಕಲ್ ತಂದಿದ್ದ. ಅಂದು ಧರಿತ್ರಿ ಅವನ ಜೊತೆಯೇ ಹೊರಟು ಹೋಗಿದ್ದಳು. ಕನಸು ಕನಸಾಗಿಯೇ ಉಳಿದಿತ್ತು.
ಹತ್ತನೇ ತರಗತಿಯಲ್ಲಿ ಕ್ಲಾಸಿಗೆ ಮೊದಲಿಗನಾಗಿ ಬಂದಿದ್ದೆ . ಆ ಸಂತೋಷಕ್ಕೆ ಅಪ್ಪ ನನಗೊಂದು ಸೈಕಲ್ ಕೊಡಿಸಿದ್ದರು.
ಸೈಕಲ್ ಕೊಂಡ ಸಂತೋಷದಲ್ಲಿ ಅವಳ ಮನೆಯತ್ತ ಹೋಗುತ್ತಿದ್ದಂತೆ ಶಾಕ್ ಆಗಿತ್ತು ಭಾಸಿ ಹೊಸದೊಂದು ಬೈಕ್ ಕೊಂಡಿದ್ದ . ಅವನು ಪಾಸ್ ಆಗಿದ್ದಕ್ಕೆ ಕೊಡಿಸಿದ್ದಂತೆ.
ನನ್ನ ಅದೃಷ್ಟಕ್ಕೆ ಧರಿತ್ರಿ ನಾನು ಒಂದೇ ಕಾಲೇಜಿನಲ್ಲಿ ಓದಲಾರಂಭಿಸಿದೆವು. ಆದರೆ ದುರಾದೃಷ್ಟವೂ ಬೆಂಬತ್ತಿ ಬಂತು. ಭಾಸಿಯೂ ಅದೇ ಕಾಲೇಜಿಗೆ ಸೇರಿದ್ದ. ಎಂದಿನಂತೆ ನಾನು ಸೈಕಲ್ , ಅವನು ಬೈಕ್‌ನಲ್ಲಿ ಅವಳು ಅವನ ಹಿಂದೆ. ಜೋಲು ಮೋರೆ ಹೊತ್ತು ಹೋಗುತ್ತಿದ್ದೆ.
ಸೆಕಂಡ್ ಇಯರ್ ಪಾಸ್ ಆಯ್ತು ನಂತರ ಇಂಜಿನಿಯರಿಂಗ್ ಸೀಟ್ ಸಿಕ್ಕಿತು ನನಗೆ . ಅವರಿಬ್ಬರೂ ಹಿಂದೆಯೇ ಉಳಿದಿದ್ದರುಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದು ಸೇರಿದ್ದು ಆಯ್ತು. ಮುಂದಿನದೆಲ್ಲಾ ಇತಿಹಾಸ ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ಸೆಲೆಕ್ಟ್ ಆಗಿ ಹೆಸರಾಂತ ಐಟಿ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತ್ತು. ಆಗಾಗ ಅವರಿಬ್ಬರ ನೆನಪು ಬರುತ್ತಿತ್ತು.ಧರಿತ್ರಿ ಬೆಂಗಳೂರಿನಲ್ಲೇ ಇದ್ದಾಳೆ ಎಂದು ತಿಳಿದು ಅವಳ ವಿಳಾಸ ಪಡೆದುಕೊಂಡೆ . ಆಗಷ್ಟೇ ಹೊಸದಾಗಿ ಕೊಂಡಿದ್ದ ಬೈಕ್ ಸವಾರಿ ಮಾಡಿಕೊಂಡು ಅವಳ ಮನೆಯತ್ತ ಹೋಗಿದ್ದೆ .
ಧರಿತ್ರಿ ಸಿಕ್ಕಳು ಮೊದಲಿಗಿಂತ ಚೆಂದವಾಗಿದ್ದಳು. "ಹೇ ಶಶಿ ಹೇಗಿದ್ದೀಯಾ? " ಎಂದೆಲ್ಲಾ ವಿಚಾರಿಸಿದಳು.
"ತುಂಬಾ ಸಂತೋಷವಾಯ್ತು ನೀನು ಸೆಟಲ್ ಆಗಿದ್ದು ನಮ್ಮ ಹಳ್ಳಿಯೇ ಹೆಮ್ಮೆ ಪಡಬೇಕಾದ ಹುಡುಗ" ನೀನು ಎಂದಳು. ಬೈಕ್ ಮುಟ್ಟಿ ಸಂಭ್ರಮಿಸಿದಳು.
" ಶಶಿ ಬೈಕ್ ಚೆನ್ನಾಗಿದೆ. ನೆನ್ನೆ ತಾನೆ ಭಾಸಿ ಬಂದಿದ್ದ ಅವನೂ ಕಾರ್ ತಗೊಂಡಿದ್ದಾನೆ. ನೆನ್ನೆ ಎಲ್ಲಾ ಲಾಂಗ್ ಡ್ರೈವ್ ಹೋಗಿದ್ದೆವು."
ನನ್ನ ಸಂಭ್ರಮದ ಬಲೂನ್ ಒಡೆದು ಹೋಯ್ತು. ಇಲ್ಲಿಯೂ ಭಾಸಿ ನನಗಿಂತ ಮುಂದಿದ್ದ. ಕಸಿವಿಸಿಗೊಂಡು ಬಂದಿದ್ದೆ
ದಿನಾ ನಾನು ಹೋಗುತ್ತಿದ್ದೆ ಅಟ್ಲೀಸ್ಟ್ ಇಲ್ಲಾದರೂ ಅವಳಿಗೆ ಡ್ರಾಪ್ ಮಾಡೋಣ ಎಂದುಕೊಂಡು ಅವಳು ನಿಲ್ಲುತ್ತಿದ್ದ ಬಸ್ ಸ್ಟಾಪಿಗೆ. ಆದರೆ ಅವಳಾಗಲೇ ಭಾಸ್ಕರನ ಕಾರ್ ಹತ್ತಿ ಹೋಗುತ್ತಿದ್ದಳು.ಒಂದು ವರ್ಷವಾಗಿದೆ.
ಈಗ ನಾನು ತೆಗೆದುಕೊಂಡಿರೋದು ಮರ್ಸಿಡೀಸ್ ಬೆಂಜ್. ಸಾಲ ಮಾಡಿಯೇ ಕೊಂಡಿದ್ದು. ಇವತ್ತು ನಾನೇ ಮುಂದೆ. ಇವತ್ತು ಗೆಲ್ಲಲೇ ಬೇಕು.
ಬಸ್ ಸ್ಟಾಪ್ ಬಂದೇ ಬಿಟ್ಟಿತು. ಕಾರ್ ನಿಲ್ಲಿಸಿ ,ಕೆಲಸಕ್ಕೆ ಹೋಗಲು ಬಸ್ಸಿಗೆ ಕಾಯುತ್ತಿದ್ದ ಧರಿತ್ರಿಯತ್ತ ವೇವ್ ಮಾಡಿದೆ.
"ವಾವ್ ಶಶಿ . ನ್ಯೂ ಕಾರಾ? ಸೂಪರ್."
"ಇವತ್ತಾದರೂ ನನ್ನ ಜೊತೆ ಬರ್ತೀಯಾ ಧರಿ?"
"ಖಂಡಿತಾ .ಬರೋದಷ್ಟೇ ಅಲ್ಲ ಲಾಂಗ್ ಡ್ರೈವ್‌ಗೆ ಹೋಗೋಣ" ಅವಳ ಕಣ್ಣುಗಳು ಸಂತಸದಿಂದ ಅರಳಿದವು.
ಕಾರ್ ಚಿಕ್ಕಬಳ್ಳಾಪುರದ ಕಡೆಗೆ ಹೋಗುತ್ತಿತ್ತು.
"ಶಶಿ ಒಂದು ಸ್ವಲ್ಪ ಹೊತ್ತು ನಿಲ್ಲಿಸ್ತೀಯಾ ನಾನು ನಿಂಜೊತೆ ಮಾತಾಡಬೇಕು." ನನ್ನ ಕಡೆಗೆ ನೋಡುತ್ತಾ ನುಡಿದಳು
ಹುಡುಗಿ ಇಷ್ಟೊಂದು ಫಾಸ್ಟ್ ಇದ್ದಾಳೆ ಪರವಾಗಿಲ್ಲ ಎಂದನಿಸಿತು ನಾನಂದುಕೊಂಡದ್ದನ್ನ ಅವಳೇ ಹೇಳಿಬಿಡಲಿ
ಎಂದುಕೊಂಡೆ ಕಾರ್ ನಿಲ್ಲಿಸಿದೆ
ಸ್ವಲ್ಪ ಹೊತ್ತು ಅಂಗೈಯನ್ನೇ ನೋಡುತ್ತಿದ್ದವಳು ಮತ್ತೆ ನನ್ನ ತ್ತ ನೋಡಿದಳು.
"ನಾನು ನಿಂಗೆ ತುಂಬಾ ದಿನದಿಂದ ಹೇಳಬೇಕಂತ ಇದ್ದೆ. ಆದರೆ ಸಮಯಾನೆ ಬಂದಿರಲಿಲ್ಲ. " ರೋಮಾಂಚನಗೊಂಡೆ. ಎದೆಯ ಬಡಿತ ನನಗೇ ಕೇಳಿಸುವಷ್ಟು ಜೋರಾಗಿತ್ತು. ಮೌನಕ್ಕೆ ಶರಣಾಗಿದ್ದೆ
"ನಂಗೆ ನೀನಂದ್ರೆ ತುಂಬಾ ಇಷ್ಟ. ಇಷ್ಟ ಅಂದ್ರೆ ಒಂಥರಾ ಅದಕ್ಕೆ ವಿವರಣೆ ಕೊಡೋಕಾಗಲ್ಲ. ನೀನು ಬುದ್ದಿವಂತ. ಹಿಡಿದ ಛಲ ಬಿಡುವ ಹುಡುಗ ಅಲ್ಲ . ಬಹಳ ಚಟುವಟಿಕೆ ಇರೋ ಅಂತೋನು. ನಿನ್ನ ಬಾಯಿ ಏನೋ ಹೇಳದಿದ್ದರೂ ನಿನ್ನ ಈ ಅರಳು ಕಂಗಳು ಎಲ್ಲಾ ಹೇಳಿಬಿಡುತ್ತೆ. ಅದರಲ್ಲಿ ಪ್ರಾಮಾಣಿಕತೆ ಇದೆ"
ನಾನು ಅವಳತ್ತ ನೋಡುವ ಸಾಹಸಕ್ಕೆ ಕೈ ಹಾಕಲಿಲ್ಲ ಆದರೆ ಎದುರಿದ್ದ ಕನ್ನಡಿಯಲ್ಲಿ ಅವಳ ಮುಖ ಕಾಣಿಸಿತು.
ಅವಳೂ ನೋಡಿದಳು
"ನಂಗೆ ಎಲ್ಲಾ ಅರ್ಥವಾಗುತ್ತೆ. "
ಮತ್ತೆ ಅವಳತ್ತ ನೋಡಿ ಬೇರೆ ಕಡೆ ಮುಖ ತಿರುಗಿಸಿದೆ ಮುಂದಿನ ವಾಕ್ಯಕ್ಕಾಗಿ ಕಾಯುತ್ತಾ
"ಆದರೆ ನಾನು ಅಸಹಾಯಕಳು. ಐ ಆಮ್ ಹೆಲ್ಪ್ ಲೆಸ್"
ಸಿಡಿಲು ಬಡಿದಂತಾಯ್ತು
ಕಣ್ಣು ಮುಚ್ಚಿದೆ
"ನಾನು ಈಗಾಗಲೆ ಭಾಸಿಗೆ ಮನಸು ಕೊಟ್ಟುಬಿಟ್ಟಿದ್ದೀನಿ. ಜೀವನ ಪೂರ್ತಿ ಅವನೊಟ್ಟಿಗೆ ಪ್ರಯಾಣ ಮಾಡೋದು ಅಂತ ನಿರ್ಧಾರ ಮಾಡಿದೀನಿ. ಹಾಗಾಗಿ ಇದು ನನ್ನ ನಿನ್ನ ಕಡೆಯ ಪ್ರಯಾಣ ಇರಬಹುದು. ದಯವಿಟ್ಟು ನನ್ನ ಬಗ್ಗೆ ಇಲ್ಲದ ಆಸೆ ಇಟ್ಟುಕೋಬೇಡ . ಇದನ್ನ ನಿನಗೆ ಬಿಡಿಸಿ ಹೇಳೋದಿಕ್ಕೆ ನಂಗೆ ಸಮಯ ಸಿಗಲಿಲ್ಲ. ನನ್ನ ಆತ್ಮೀಯ ಗೆಳೆಯ ನಮ್ಮ ಕುಟುಂಬಕ್ಕೆ ಆತ್ಮೀಯನಾಗಿರ್ತಾನೆ ಅಂತ ಬಯಸಲೇ?" ಮುಂದೆ ಕೈ ಚಾಚಿದಳು
ನನ್ನತ್ತ ಬಂದ ಕೈಗೆ ಭಾಷೆ ಕೊಡುವಂತೆ ಕೈ ಇಟ್ಟೆ.
**************************************---------
"ಸೂರ್ಯನ ಸುತ್ತಾ ಸುತ್ತುವುದು ಭೂಮಿ." ಮಗಳು ಹಾಡುತ್ತಿದ್ದಳು. ಯಾವುದೋ ಜಾಹಿರಾತಿನ ಹಾಡದು.
ಎಲ್ಲಾ ನೆನಪಾಗಿ ಒಮ್ಮೆ ಮನಸು ಭಾರವಾಯ್ತು. "ರೀ ಕಾಫಿ ತಗೊಳ್ಳಿ " ಪೂರ್ಣಿಮಾ ಕಾಫಿ ಕಪ್ ಹಿಡಿದು ನಿಂತಿದ್ದಳು. ಅವಳ ನಗೆ ನೋಡಿ ಮನಸು ಹಗುರಾಯ್ತು. ಒಮ್ಮೆ ನಕ್ಕೆ
"ರೀ ನಿಮ್ಮಫ್ರೆಂಡ್ ಭಾಸ್ಕರ ಮ್ಯಾರೇಜ್ ಆನಿವರ್ಸರಿ ಇದೆ ಸಂಜೆ ಬೇಗ ಬನ್ನಿ ಹಾಗೆ ನಮ್ಮದೂ ಸಹಾ ನಮ್ಮ ಫಂಕ್ಷನ್ ಮುಗಿಸಿಕೊಂಡು ಅವರ ಪಾರ್ಟಿಗೆ ಹೋಗೋಣ "
ಚಂದ್ರನ ಬೆಂಬಲಕ್ಕೆ ಪೂರ್ಣಿಮಾ ಇದ್ದಳು.
ಮಾತನಾಡದೆ ಅವಳನ್ನು ಬಳಿಗೆಳೆದುಕೊಂಡೆ
ರೂಪಾ...ಎಲ್ಲಾ ನಾವಂದುಕೊಂಡಂತೆ ಆಗದು ಎನ್ನುವುದಕ್ಕೆ ... ವಾಸ್ತವಗಳೇ ಬೇರೆ ಕನಸುಗಳೇ ಬೇರೆ ಎನ್ನುವುದಕ್ಕೆ ...ಮನಸು-ಮನಸಿನ ಮಿಲನಕ್ಕೂ ಜೀವನದ ಮುನ್ನಡೆಗೆ ತೆಗೆದುಕೊಳ್ಳುವ ನಿರ್ಧಾರಕ್ಕೂ ವ್ಯತ್ಯಯಕ್ಕೆ ಮನಸಿಲ್ಲದಿದ್ದರೂ ಒಪ್ಪಿಕೋಬೇಕಾಗುತ್ತೆ ಎನ್ನುವುದಕ್ಕೂ...ಎಲ್ಲದಕ್ಕೆ ಹಿಡಿದ ಕನ್ನಡಿಯ ರೂಪವೇ ನಿಮ್ಮ ಕಥೆ...ಚನ್ನಾಗಿದೆ..
ReplyDeletestory superb..............
ReplyDeletetumbaa chennagide kathe.
ReplyDeletepreethina yavattu bacchidabaradu bacchittare adu sigade kai tappi hogabahudu but neevu kaledukondiddu nimmannu preethisade ero ondu preethina adakyake chinte neevu preethisuva jeeva nimmondige eruvaga all the best for your and your familly
ReplyDelete