ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Monday, October 3, 2011
ದಡವಿರದ ಸಾಗರ ಮೂರನೆಯ ಭಾಗ
"ಈಗ ಹೇಳು ಕಿರಣ್ ನಿಮ್ ಮೇಡಮ್ ಸೈಕೋನಾ ಅಲ್ವಾ?"ಆಗಿಂದ ಕಾಫಿ ಡೇನಲ್ಲಿ ಕುಳಿತು ಕಿರಣನ ತಲೆಯನ್ನ ಬಿಸಿ ಮಾಡಿದ್ದಳು ಸುಪ್ರೀತಾ
"ಸುಪ್ಪಿ ಹಾಗೆಲ್ಲಾ ಮಾತಾಡಬೇಡ , ಪಾಪ ಜೀವನದಲ್ಲಿ ತುಂಬಾ ನೊಂದಿದಾರೆ, ಅಪ್ಪ ಅಮ್ಮ ಇಲ್ಲ ಇಷ್ಟು ದೊಡ್ಡ ಆಸ್ತೀ, ಮೂರು ಕಂಪೆನಿಗೆ ಏಕೈಕ ವಾರಸುದಾರರು, ಹೇಗೆ ನಡೆಸ್ತಿದಾರೆ ಅಂತ ಗೊತ್ತಾ ಎಷ್ಟು ಕಷ್ಟ , ಮತ್ತೆ ಅವರು ಎಲ್ಲಾರ ಜೊತೆನೂ ಕ್ಲೋಸ್ ಆಗಿರ್ತಾರೆ ಅಷ್ಟೆ. ಮತ್ತೆ ಭಾವುಕರು, ಯಾರನ್ನಾದರೂ ಹಚ್ಚಿಕೊಂಡರೆ ತುಂಬಾ ಪ್ರೀತಿ ಮಾಡ್ತಾರೆ"
ಮಾತು ನಿಲ್ಲಿಸಿ ಅವಳನ್ನೇ ನೋಡಿದ
ಆದರೆ ಅವಳು ಮೌನವಾಗಿದ್ದಳು,
"ಓಯೆ ಏನೇ ಅದು?"
ಅವಳ ಮೊಗದ ಮುಂದೆ ಕೈ ಆಡಿಸಿದ
ಬೆಚ್ಚಿ ಬಿದ್ದಳು
"ಕೇಳಿಸ್ಕೊಂಡ್ಯಾ ನಾ ಹೇಳಿದ್ದೆಲ್ಲಾ ಇಲ್ಲಾ ಸ್ವಪ್ನ ಲೋಕದಲ್ಲಿ ವಿಹರಿಸ್ತಾ ಇದೀಯಾ?"
ಇಲ್ಲವೆಂಬಂತೆ ತಲೆ ಆಡಿಸಿ
ಕಿರಣನ ಮೊಗವನ್ನೊಮ್ಮೆ ನೋಡಿ ಮತ್ತೆ ಕಾಫಿ ಹೀರುತ್ತ ನುಡಿದಳು
"ಅದೆಲ್ಲಾ ಸರಿ ಕಿರಣ್ ಆದ್ರೆ ಆ ಔಟ್ ಹೌಸಲ್ಲಿ ಒಬ್ಬಳೇ ಇರೋಕೆ ಭಯ ಆಗುತ್ತೆ ಮೊದಲೇ ನಿಮ್ ಮೇಡಮ್ ಸೈಕೋ ಬೇರೆ............."
"ಹಾಕ್ತೀನಿ ನೋಡು" ಕೈ ಎತ್ತಿ ತಲೆ ಮೇಲೆ ಮೊಟಕಿದ
"ಮತ್ತೆ ಆಫರ್ ಒಪ್ಕೋತಿಯ ಹೇಗೆ?"
" ಮೈಸೂರಿಂದ ಬೆಂಗಳೂರಿಗೆ ಬಂದು ಮೂರು ತಿಂಗಳಾಯ್ತು ಈಗಲೂ ಮೂರ್ತಿ ಹತ್ರಾನೆ ದುಡ್ಡು ತಗೋತಿದ್ದೀನಿ, ಅವನೂ ತಂಗಿ ಅಂತ ಏನೂ ಅನ್ಕೋದಲೆ ಕೊಡ್ತಾನೆ, ಮತ್ತೆ ಮತ್ತೆ ಅವನ ಹತ್ತಿರ ಕೇಳಿದ್ರೆ ಸರಿ ಹೋಗಲ್ಲ ಅಲ್ವಾ? ನನ್ನ್ ಕಾಲ್ ಮೇಲೆ ನಾನು ನಿಂತ್ಕೋತಿನಿ ಅಂತ ಹೇಳಿ ಬಂದೆ, ಹಾಗಾಗಿ ಈ ಆಫರ್ ಬಿಡಲ್ಲ . ಆದರೆ ಒಬ್ಬಳೆ ಇದ್ದು ಅಭ್ಯಾಸ ಇಲ್ಲ, ಒಂದು ಕೆಲಸ ಮಾಡ್ತೀನಿ ಮೂರ್ತಿಗೆ ಜೊತೆಲಿ ಬಂದಿರು ಅಂತ ಹೇಳ್ತೀನಿ, ಅವನೂ ರೂಮ್ ಚೇಂಜ್ ಮಾಡಬೇಕು ಅಂತಿದ್ದ\"
" ಸರಿ ನಾನು ಮೇಡಮ್ ಹತ್ರ ಮಾತಾಡಿ ಮೂರ್ತೀನೂ ಬಂದಿರೋಕೆ ಒಪ್ಪಿಸ್ತೀನಿ,ಒಪ್ಪಿಕೋ ಮಾರಾಯ್ತಿ ನಾಳೆ ಬಂದು ಆಫರ್ ಲೆಟರ್ ಸೈನ್ ಮಾಡು"
"ಮತ್ತೆ ಅಪ್ಪಿ ತಪ್ಪಿನೂ ನೀನು ನಂಗೆ ಗೊತ್ತು ಅಂತ ಮೇಡಮ್ ಹತ್ತಿರ ಹೇಳ್ಬೇಡ .ಆಮೇಲೆ ನಿನ್ ಜೊತೆ ನನ್ ಕೆಲಸಾನೂ ಹೋಗುತ್ತೆ"
"ಯಾಕೆ ಹಾಗೆ ? ನಿಮ್ ಮೇಡಮ್‍ಗೆ ಏನು ತೊಂದರೆ? ರೆಫರೆನ್ಸ್ ಇದ್ರೆ?"
ಹುಬ್ಬೇರಿಸಿ ಕೇಳಿದಳು
"ಗೊತ್ತಿಲ್ಲ ಕಣೆ ಹುಡುಗೀರೆ ವಿಚಿತ್ರ, ಅವರ್ಯಾಕೆ ಹಾಗಾಡ್ತಾರೆ ಅನ್ನೋದೆ ಗೊತ್ತಾಗಲ್ಲ, ಅದರಲ್ಲೂ ಈ ಬೆಂಗಳೂರು ಹುಡುಗೀರು ವಿಚಿತ್ರದಲ್ಲಿ ವಿಚಿತ್ರ , ಅಬ್ಬಾ ಜೊತೆಗೆ ಭಯಂಕರ ಕೂಡ " ಏನನ್ನೋ ನೆನೆಸಿಕೊಂಡವನಂತೆ ಭುಜ ಕುಣಿಸಿದ.
"ಏನೋ ಯಾವುದೋ ಹುಡುಗಿ ಸಕ್ಕ್ತ ತ್ ಕೈ ಕೊಟ್ತಿರೋಹಾಗಿದೆ ಏನೋ ವಿಷ್ಯ?"ಛೇಡಿಕೆಯಲ್ಲಿ ಕೇಳಿದಳು
" ಅಬ್ಬಾ ಅದೊಂದು ದೊಡ್ಡ ಅವಮಾನ .ಯಾವತ್ತ್ತಾದರೂ ಟೈಮ್ ಸಿಕ್ಕಾಗ ಹೇಳ್ತೀನಿ ಏಳು ಹೊತ್ತಾಯ್ತು ಹೋಗೋಣ"
ಹೇಳಿ ಮುನ್ನಡೆದವನನ್ನೇ ಹಿಂಬಾಲಿಸಿದಳು
**********************************************************************
"ವೀಣ ನೋಡಮ್ಮ ನಿನ್ ಮಗಳು ಇನ್ನೂ ಬಂದಿಲ್ಲ ಇಷ್ಟು ಹೊತ್ತಾಯ್ತು ದಿನಾ ಹನ್ನೆರೆಡು ಘಂಟೆ ಆಗುತ್ತೆ ಮನೆಗೆ ಬರೋಕೆ ಅವಳು. ನೀನಾಗಲಿ ಶ್ರೀ ಆಗಲಿ ತಲೆ ಕೆಡಿಸಿಕೊಳ್ತಿಲ್ಲ "ಸದಾ ಶಿವರವರು ಫೋನ್ ಮಾಡಿದರು ರೂಮಿನಲ್ಲಿದ್ದ ಸೊಸೆಗೆ
"ಸರಿ ಇರಿ ಮಾವ ನಾನೆ ಬರ್ತೀನಿ " ಮೊಬೈಲ್ ಆಫ್ ಮಾಡಿ ಮಾವನಿದ್ದ ರೂಮಿನತ್ತ ನಡೆದಳು
"ಬಾ ವೀಣ , ನೋಡು ತೇಜು ಇನ್ನೂ ಬಂದಿಲ್ಲ ಹನ್ನೆರೆಡು ಘಂಟೆ ಆಗ್ತಾ ಇದೆ, ಫೋನ್ ಮಾಡಿದ್ದ್ರೆಪಾರ್ಟಿಲಿ ಇದೀನಿ ಅಂತಾಳೆ ,ತೇಜು ಇಷ್ತು ಹೊತ್ತಾಯ್ತು ಅಂದ್ರೆ ಅಭೀ ಬಂದಿದಾನಾ ಅಂತ ಕೇಳ್ತಾಳೆ ಇಲ್ಲ ಅಂದ್ರೆ ಅವನಿಗೆ ಇಲ್ಲದ ಕಂಟ್ರೋಲ್ ನಂಗೆ ಯಾಕೆ ಅಂತಾಳೆ, ಶ್ರೀಗೆ ಕಾಲ್ ಮಾಡಿದ್ರೆ ಅಪ್ಪಾ ಅವಳೇನು ಚಿಕ್ಕ ಮಗೂ ಅಲ್ಲ ಎಮ್ ಬಿ ಎ ಮಾಡಿರೋ ಮೆಚೂರ್ಡ್ ಹುಡುಗಿ ನೀನು ತಲೆ ಕೆಡಿಸ್ಕೊಳ್ದೆ ಟಿವಿ ನೋಡಿ ಅಂತಾನೆ, ನೀನು ನೋಡಿದ್ರೆ ಕೇರೇ ಮಾಡಲ್ಲ ಕಂಪೆನಿ ಕೆಲಸಾ ಅಂತಾ ಅದರಲ್ಲೆ ಇರ್ತೀಯ . ಹೀಗಾದ್ರೆ ಹೇಗಮ್ಮ"
ಒಂದೇ ಉಸಿರಿಗೆ ಮಾತಾಡಿದ್ದಕ್ಕೋ ಏನೋ ದಣಿವಾರಿಸಿಕೊಳ್ಳಲೆಂಬಂತೆ ಮಂಚಕ್ಕೆ ಒರಗಿದರು
"ಮಾವ ಸುಮ್ಮನೆ ನೀವು ಯಾಕೆ ಮನಸಿಗೆ ಹಚ್ಚಿಕೋತೀರಿ? ಅಪ್ಪ ಅಮ್ಮ ಆಗಿ ನಾವೇ ಯೋಚನೆ ಮಾಡ್ತಾ ಇಲ್ಲ, ತೇಜು ಈಗಿನ ಕಾಲದ ಹುಡುಗಿ ಮಾವ ಅವಳಿಗೆ ಯಾವುದು ಸರಿ ಯಾವುದು ತಪ್ಪು ಅನ್ನೋ ಯೋಚನೆ ಇದೆ , ಲಾಸ್ ಆಲ್ಲಿ ಹೋಗ್ತಿದ್ದ ನಮ್ಮ ವಾಚ್ ಕಂಪೆನೀನಾ ೨ ಇಯರ್ಸ್ನಲ್ಲಿ ಪ್ರಾಫಿಟ್ ಬರೋ ಹಾಗೆ ಮಾಡಿದಾಳೆ, ನಮ್ಮ ಮಕ್ಕಳಿಬ್ಬರೂ ವ್ಯವಹಾರದಲ್ಲಿ ಬಲು ಚುರುಕು , ಆದರೆ ಸ್ವಲ್ಪ ಹುಡುಗು ಬುದ್ದಿ ಇನ್ನೂ ೨೪ ವರ್ಷ ಅಲ್ವಾ ಸರಿ ಹೋಗ್ತಾಳೆ..."
ಸಮಾಧಾನವಾಗದಂತೆ ತಲೆ ಆಡಿಸಿದರು
"ಇಲ್ಲ ವೀಣಾ ನಾನು ಒಪ್ಪಲ್ಲ , ಹೆಣ್ಣು ಯಾವತ್ತಿದ್ದರೂ ಹೆಣ್ನೇ , ಒಮ್ಮೆ ಕೆಳಗೆ ಬಿದ್ದರೆ...................."
"ಮಾವಾ ಸ್ಟಾಪ್ ಮಾಡಿ................ಕೆಳಗೆ ಬೀಳೋದು ಮೇಲೆ ಏಳೋದು ಎಲ್ಲಾ ನಿಮ್ಮ ಕಾಲಕ್ಕೆ ಮುಗಿದು ಹೋಯ್ತು...ನಿಮಗೆ ಗೊತ್ತಿದೆಯಾ ಇಲ್ವೋ ಅತ್ತೆ ನನ್ನ ಹತ್ರಒಂದು ವಿಷಯ ಹೇಳೋರು ಅವರು ಹನ್ನೆರೆಡು ವರ್ಷ ಇದ್ರಂತೆ ಆಗ ಅವರನ್ನ ಯಾರೋ ಒಬ್ಬ ಬಂದು ಎಲ್ಲಿಗೋ ದಾರಿ ಕೇಳಿದನಂತೆ ಅವನಿಗೆ ಉತ್ತರಿಸಿದ್ದನ್ನೆ ದೊಡ್ಡದಾಗಿ ತಗೊಂಡು ಅತ್ತೆ ಅಪ್ಪ ಬಾರು ಕೋಲಿನಿಂದ ಬೆನ್ನು ಮೇಲೆ ಬಾರಿಸಿ ,ಬಾಸುಂಡೆ ಬರೋ ಹಾಗೆ ಹೊಡೆದಿದ್ದರಂತೆ"
"ಹೂ ಹೇಳಿದ್ಳು ನನ್ನ ಹತ್ರಾನೂ"
, ಫೋಟೋದಲ್ಲಿ ಹಾರ ಧರಿಸಿ ನಗುತ್ತಿದ್ದ ಹೆಂಡತಿಯನ್ನೆ ನೋಡುತಾ ನುಡಿದರು,ಭಾವುಕರಾಗಿದ್ದರು
ಅವರ ಮಾತಿನತ್ತ ಗಮನ ಕೊಡದೆ ಮುಂದುವರೆಸಿದಳು ವೀಣಾ
"ಮೊದಲು ಗಂಡಸರ ಜೊತೆ ಮಾತಾಡಿದರೆ ತಪ್ಪು , ಆಮೇಲೆ ಗಂಡಸರ ಜೊತೆ ಓಡಾಡಿದರೆ ತಪ್ಪು, ನಂತರ ಗಂಡಸರ ಜೊತೆ ಮಾತಾಡಲ್ಲಿ ಓಡಾಡಲಿ ಆದರೆ ಕಾಲು ಜಾರದಿದ್ದರೆ ಸಾಕು ಅನ್ನೋ ಮಟ್ಟಕ್ಕೆ ಬಂದಿತ್ತು ನಮ್ಮ ಕಾಲದಲ್ಲಿ , , ಈಗಾ ಏನಾದರಾಗಲಿ ಒಳ್ಳೆಯ ಹುಡುಗಿ ಇದ್ದರೆ ಸಾಕು ಅನ್ನೋ ಲೆವೆಲ್ಗೆ ಬಂದಿದೆ ಸಮಾಜದ ಯೋಚನೆಯ ಹರಿವು,ಇಂತ ಕಾಲದಲ್ಲಿ ಇರೋ ತೇಜುನ ಕಂಟ್ರೋಲ್ ಮಾಡೋದು ಸರಿ ಅಲ್ಲ ಅನ್ಸುತ್ತೆ ಮಾವ."
ಮಾತಾಡುತ್ತಾ ಮಾವನ ಗಮನ ಎಲ್ಲಿದೆ ಎಂಬುದನ್ನ ಗಮನಿಸಿರಲಿಲ್ಲ
" ಸಾರಿ ಮಾವ ಸ್ವಲ್ಪ ಜಾಸ್ತಿ ಮಾತಾಡಿಬಿಟ್ಟೆ....... ಬರ್ತೀನಿ " ತನ್ನ ರೂಮಿನತ್ತ ಸಾಗಿದಳು
ಹೇಳಿ ಹೋದವಳತ್ತ ಆಗಲಿ ಅವಳಾಡಿದ ಮಾತುಗಳತ್ತ ಆಗಲಿ ಅವರ ಗಮನವಿರಲಿಲ್ಲ . ಅಪ್ಪನ ಮನೆಯಲ್ಲಿಯೂ ನೋವು ತಮ್ಮಜೊತೆಯಲ್ಲಿಯೂ ಕಷ್ಟಗಳನ್ನೇ ಅನುಭವಿಸುತ್ತಲೇ ಹೋದ ಮಡದಿಯತ್ತ ಅವರ ಯೋಚನೆ ಸಾಗಿತ್ತು
*******************************************************************************
ರಾತ್ರಿ ಹತ್ತು ಘಂಟೆ ಎಂದಿನಂತೆ ರೇಖಾಗೆ ಮೆಸೇಜ್ ಮಾಡಿದ ರವಿ
"ಊಟ?"
"ಆಯ್ತು ರವಿ, ನಿಂದು?" ಅತ್ತಲಿಂದ ಉತ್ತರಿಸಿದಳು
"ಮತ್ತೆ ಹೇಗಿತ್ತು ದಿನ?"
"ಅದೇ ದಿನ ಅದೇ ಮನ, ಅದೇ ಜನ , ಬದಲಾಗಿದ್ದು ಮಾತ್ರ ನಿರೀಕ್ಷೆ" ರೇಖಾ ಉತ್ತರಿಸಿದಳು
"ಇವತ್ತಿನ ನಿರೀಕ್ಷೆ?" ರವಿಗಿದು ಹೊಸದೇನಲ್ಲ ರೇಖಾ ದಿನಕ್ಕೊಂದು ಕವನದ ಸಾಲನ್ನು ಉದುರಿಸುತ್ತಿದ್ದಳು
"ಇವತ್ತು ಅವರು ಬಂದು ಹಣೆಗೆ ಸಿಹಿ ಮುತ್ತು ಕೊಟ್ತು ರೇಖಾ ನೆನ್ನೆಯವರೆಗಿನದೆಲ್ಲಾ ಕೆಟ್ಟಕನಸುಗಳು, ನಾವಿಂದಿನಿಂದ ಮದುವೆಯಾದವರು ಎಂದೆಂದು ಕೊಳ್ಳೋಣ ಅಂತಾರೆ ಅಂತ"
ಅವಳ ಮನದ ದುಗುಡ ಅವನಿಗೆ ಅರ್ಥವಾಯಿತು
"ಮತ್ತೆ ನಿರೀಕ್ಷೆಯ ಪರೀಕ್ಷೆಯ ಫಲಿತಾಂಶ?"
"ಅದೇ ಮತ್ತೆ ಅನುತ್ತೀರ್ಣ "ಅವಳ ಮೆಸೇಜನಲ್ಲಿದ್ದ ಹತಾಶೆ ಅವನಿಗಷ್ಟೆ ತಿಳಿಯುವಂತದ್ದಾಗಿತ್ತು
"ಆಯ್ತ್ತು ರವಿ ಈಗ ಗುಡ್ ನೈಟ್"
"ಗುಡ್ನೈಟ್" ಮೆಸೇಜ್ ಮಾಡಿದ
ಅವಳು ಹೀಗೆಯೇ , ವಿಚಿತ್ರದ ಹೆಣ್ಣು, ಇದ್ದಕ್ಕಿದ್ದಂತೆ ತೆರೆದುಕೊಳ್ಳುತ್ತಾಳೆ, ಇದ್ದಕ್ಕಿಂದಂತೆ ಚಿಪ್ಪಿನಲ್ಲಿ ಹುದುಗುತ್ತಾಳೆ
ಅವಳ ಪರಿಚಯವಾಗಿದ್ದು ಆಕಸ್ಮಿಕವೇ
ವಾರದ ಹಿಂದೆ
ಟಿವಿಯ ಪ್ರೋಗ್ರಾಮ್ ಒಂದಕ್ಕೆ ಆಕೆ ಜಡ್ಜ್ ಆಗಿ ಕಾಣಿಸಿಕೊಂಡಿದ್ದಳು. ಅದೇ ಪ್ರೋಗ್ರಾಮ್ ನಲ್ಲಿ ವೀಕ್ಷಕನಾಗಿ ರವಿ ಹೋಗಿದ್ದ
ಮಾತು ಪರಿಚಯಕ್ಕೆ ತಿರುಗಿ, ಪರಿಚಯ ಸ್ನೇಹವಾಗಿತ್ತು
ಮೆಸೇಜ್ ವಿನಿಮಯದಿಂದ ಆತ್ಮೀಯತೆ ಇನ್ನೂ ಹೆಚ್ಚಾಗಿತ್ತು
ಆಕೆ ರೇಖಾ ಶರ್ಮ, ಕಾದಂಬರಿಗಾರ್ತಿ
ನೋಡಿದೊಡನೆ ಮನ ಸೆಳೆಯುವ ಅಂದ, ಗಾಂಭೀರ್ಯ, ಜ್ನಾನತೇಜಸಿನಿಂದ ಹೊಳೆಯುವ ಮೊಗ ಹಾಗು ಅದಕ್ಕೆ ಕಳಸವಿಟ್ಟಂತೆ ಆ ಕಣ್ಣುಗಳು
ರವಿಗೆ ಏಕೋ ಮೊದಲ ನೋಟದಲ್ಲಿ ಆತ್ಮೀಯಳೆನಿಸಿದ್ದಳು
ಆದರೆ ಅಂತರಾಳದಲ್ಲಿ ಸಿಡಿಯುವ ಜ್ವಾಲಾಮುಖಿ ಹೊತ್ತವಳೆಂದು ತಿಳಿಯಲು ಹೆಚ್ಚು ದಿನಗಳು ಬೇಕಾಗಲಿಲ್ಲ
ರೇಖಾ ಪತಿ ಶ್ರೀಧರ್ ಶರ್ಮ ಇಂಡಸ್ಟ್ರಿಯಲಿಸ್ಟ್, ಹಣಕೆ ತೊಂದರೆ ಇಲ್ಲದ ಜೀವನ
ಅವರದು ಲವ್ ಮ್ಯಾರೇಜ್
ಆದರೆ ಮದುವೆಯಾದ ವರ್ಷದಲ್ಲಿಯೇ ಒಡಕು ಎಷ್ಟೊ ತೊಡಕು ಗಳು, ಆದರೂ ತಾವಿರುವ ಸಮಾಜದ ಕಣ್ಣಿಗೆ ತಮ್ಮ ಸ್ಟೇಟಸ್
ಕೆಳಗಿಳಿಯಬಾರದೆಂದ ಸಾಮಾಜಿಕ ಪ್ರಜ್ನೆ ಇಂದ ಒಟ್ಟಿಗಿದ್ದರು
ರೇಖಾ ಮೂಲತ: ಭಾವುಕಳು ,ಬಹು ಮುಖ ಪ್ರತಿಭೆಯುಳ್ಳವಳು, ಸೌಂದರ್ಯ ವತಿ, ಸ್ನೇಹಮುಖಿ
ಆದರೆ ಶರ್ಮ ಅವಳ ತದ್ವಿರುದ್ದ ಸ್ವಭಾವದವ
ಇವಳ ಹವ್ಯಾಸ ಅವನಿಗೆ ಮೂರು ಕಾಸಿಗೂ ಬೆಲೆ ಇಲ್ಲದ ತೆವಲುಗಳು
ಅವನ ಹಣ ಆಸ್ತಿ ಇವಳಿಗೆ ಮೂರು ಕಾಸಿಗೂ ಸಮ ವಿರದ ಸವಕಲು ಗಳು
ಹೀಗೆ ಪರಸ್ಪರ ಭಿನ್ನಾಭಿಪ್ರಾಯಗಳೇ ಸಂಸಾರದಲ್ಲಿ ಇವರಿಬ್ಬರ ಜೊತೆ ವಾಸವಾಗಿದ್ದವು , ಜೊತೆಗೆ ಪುಟ್ಟ ಶ್ರೀ
ಅವರಿಬ್ಬರೂ ಒಮ್ಮೆ ಪ್ರೀತಿಸಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿದ್ದಳು .
ತನ್ನ ಮನದ ದುಗುಡಗಳನ್ನು ತೋಡಿಕೊಳ್ಳಲು ಕತೆ ಕವನಗಳ ಮೊರೆ ಹೋಗುತ್ತಿದ್ದ ರೇಖಾಗೆ ರವಿ ಆಪ್ತನೆನಿಸಲು ಕಾರಣ ಅವನು ತೋರುತ್ತಿದ್ದ ಕಾಳಜಿ.
ಹಾಗಾಗಿ ಅತಿಯಲ್ಲದ ಹತ್ತಿರ, ದೂರವಿದ್ದರೂ ದೂರವೆನಿಸದಷ್ಟು ಅಂತರ ಕಾಯ್ದುಕೊಂಡು ಬರುತ್ತಿದ್ದಳು.
ಅವಳನ್ನು ನೆನೆಯುತ್ತಲೇ ರವಿಗೆ ಒಂದು ಬಗೆಯ ಪುಳಕ, ಅವಳನ್ನು ನೆನೆಯುತ್ತಲೇ ಮಲಗಿದ.ಕಂಗಳ ತುಂಬ ಅವಳದೇ ಬಿಂಬ
********************************* **************** ***********************
Subscribe to:
Post Comments (Atom)
ಕಥೆಯನ್ನು ಚೆನ್ನಾಗಿ ಬೆಳೆಸಿಕೊಂಡು ಹೋಗಿದ್ದೀರಿ. ಶಭಾಷ್!
ReplyDeleteನನ್ನ ಬ್ಲಾಗಿಗೆ ಬನ್ನಿ:
www.badari-poems.blogspot.com
ಹೂಂ...ಚನ್ನಾಗಿ ಮುಂದುವರೆದಿದೆ...ಕಥೆ ಮತ್ತು ಕಥೆಯ ದಿಶೆ..ಅದು ಏರಿಸುತ್ತಿರುವ ನಿಶೆ..
ReplyDelete