Thursday, January 17, 2013

ಮೇನಕಾ.................



ದಟ್ಟ ಕಾಡು.......... ಅದಕಿಂತ ದಟ್ಟ ಈ ಮುನಿವರ್ಯನ ಗಡ್ಡ ಮೀಸೆ, ಇವನಿಗೋ ಕರಗದ ಆಸೆಯಂತೆ ನನ್ನ ಮೇಲೆ .. ಎಂದಿಗೆ ಈ ಮುನಿಯಿಂದ ಬಿಡುಗಡೆ. ಈ ದೇವೇಂದ್ರನಿಗೆ ಸಲ್ಲದ ಭಯ. ಯಾರೋ ತಪಸ್ಸಿಗೆ ಕೂತರೆ ಅವರು ಎಲ್ಲಿ ತನ್ನ ಪಟ್ಟವನ್ನ ಕಿತ್ತುಕೊಳ್ಳುತ್ತಾರೋ ಎಂಬ ಭಯ ... ಅವನು ಸರಿ ಇದ್ದಿದ್ದರೆ ಅವನ ಸಿಂಹಾಸನವೇಕೆ ಹೀಗೆ ಅಲ್ಲಾಡುತ್ತಿತ್ತು. ಸದಾ ಅಪ್ಸರೆಯರ ಜೊತೆ ಸರಸ. ಇಲ್ಲವಾದಲ್ಲಿ  ಸೋಮರಸದ ಸಹವಾಸ, ಅಥವ ಯಾವುದಾದರೂ ರಾಕ್ಷಸನಿಗೆ ಹೆದರಿಕೊಂಡು ಅಡಗಿಕೊಳ್ಲುವುದರಲ್ಲೇ ಕಾಲ ಹರಣ.
"ಮೇನಕಾ  ಎಲ್ಲೇ ಇದ್ದೀಯಾ ಕರೆಯೋದು ಕೇಳಿಸ್ತಿಲ್ವೇ?" ಈ ಮುನಿಗೇಕೆ ಸಂಸಾರದ ಬಂಧ ನನ್ನನ್ನೇನು ಕಟ್ಟಿಕೊಂಡ ಹೆಂಡತಿ ಅಂದುಕೊಂಡಿದ್ದಾನೇಯೇ . ಕರೆದಾಗೆಲ್ಲಾ ಬರಬೇಕಂತೆ....
ಈ ವಿಶ್ವಾಮಿತ್ರ ಎಂಬುವವನು  ರಾಜನಂತೆ... ಕ್ಷತ್ರಿಯರು ಮುನಿಗಳಾದರೆ ಹೆಸರಿಗೆ ತಕ್ಕಂತೆ ಸದಾ ಸಿಟ್ಟು ಸಿಡುಕು, ಹಟ ದೇವರೇ ಬಂದರೂ ಇವನ ಅಹಂಕಾರವನ್ನು ಅಡಗಿಸಲಾಗುವುದಿಲ್ಲ.. ಅಂತಹವನು ಇವನು ತಪಸ್ಸಿಗೆ ಕೂತಿದ್ದನಲ್ಲವೇ
 "ಎದ್ದು ಅವನತ್ತ ನಡೆದೆ... ಎಲ್ಲೋ ಹೋಗುತ್ತಿದ್ದಾನೆ .. "ಮೇನಕೆ ಮೇನಕೆ "ಪ್ರೀತಿಯಿಂದ  ಆಲಂಗಿಸಿದ ಆಲಂಗನವೇ ಅದು, ಕಾಡಿನ ಒರಟನ್ನೆಲ್ಲಾ ತುಂಬಿಕೊಂಡ ಮೈ...ಇವನ ಒರಟಿಗೆ ಕೋಪಕ್ಕೆ ಆಲ್ವವೇ ದೇವೇಂದ್ರನೂ ಹೆದರಿದ್ದು.
ರಾಕ್ಷ್ಗಸ ಅಪ್ಪುಗೆಯಿಂದ ಬಿಡುಗಡೆ ಸಿಕ್ಕಿತು. ಸಂಜೆ ಬರುತ್ತಿದ್ದೇನೆ ಅಂತ ಹೇಳಿ ಹೊರಟ..
ದೇವೇಂದ್ರನಿಗೆ ಮತ್ತೆ ಹೆದರಿಕೆ ಇವನ ತಪಸ್ಸನು ಮುರಿಯಬೇಕು ಅನ್ನೋ ದುರ್ಯೋಚನೆ .ದೂರಾಲೋಚನೆ ಇಲ್ಲದ ದುಡುಕಿನವ. ಮೊದಲು ವರುಣ, ವಾಯು ಮೇಘ ಎಲ್ಲಾರನ್ನು ಕಳಿಸಿದ ಎಲ್ಲರೂ ಈ ಮುನಿಯ ತಪಸನ್ನು  ಎಲ್ಲರೂ ಅವನ ಏಕಾಗ್ರತೆಯನ್ನ ಮುರಿಯಲು ವಿಫಲರಾದರು.ಸೋಲು ಬರೀ ಸೋಲು ದೇವತೆಗಳು ಹೆಸರಿಗಷ್ಟೆ ದೇವತೆಗಳು, ಮಾನವನ   ಶಕ್ತಿ ಮತ್ತೆ ಭಕ್ತಿ ಮುಂದೆ ಇವರೆಲ್ಲಾ ಹುಳಗಳು ಛೆ.
ಆವತ್ತು   ಇಂದ್ರ ತನ್ನನ್ನ ಕರೆದು ಹೇಳಿದ್ದು "ಮೇನಕೆ ನೀನು ಅವನ ತಪಸ್ಸನ್ನ ಮುರಿಯಬೇಕು"
"ನಾನಾ ?" ಅಚ್ಚರಿಯಾಗಿತ್ತು
"ಹೌದು , ಸುಂದರಿಯರಲ್ಲೆಲ್ಲಾ ಸುಂದರಿ , ಅಮೋಘ ಚೆಲುವು, ನಿನ್ನನ್ನ ನೋಡಿದ ಯಾವ ವ್ಯಕ್ತಿಯೂ ಮರುಳಾಗದಿರನು, ದಂಡದಿಂದ ಅವನನ್ನ ತಡೆಯಲು ಸಾಧ್ಯವಾಗುತ್ತಿಲ್ಲ. ಇರೋದೊಂದೇ ದಾರಿ ಮೋಹ... ನೀನು ಅವನಿಗೆ ಮೋಹಗೊಳಿಸಬೇಕು"
"ಆಗೋದಿಲ್ಲ. " ಎಂದು ಹೇಳಬೇಕೆನಿಸಿತು. ಹೇಳಲಾಗಲ್ಲಿಲ್ಲ . ಅಪ್ಸರೆ ಹೆಸರಿಗಷ್ಟೆ , ಇವನ ಸಂಬಳಕ್ಕೆ ಕಾದು ನಿಂತ ವೇಶ್ಯೆ ನಾನು. ನಾನಷ್ಟೇ ಅಲ್ಲ ಊರ್ವಶಿ, ರಂಭೆ. ಎಲ್ಲರೂ. ಚೆಂದದ ಮೋಹದ ಗೊಂಬೆಗಳು ನಿಜ ಗೊಂಬೆಗಳು ಕುಣಿ ಎಂದಾಗ ಕುಣಿಯಬೇಕು , ತಣಿಸೆಂದಾಗ ತಣಿಸಬೇಕು, ಹೋಗೆಂದಾಗ ಹೋಗಬೇಕು. ಮತ್ತಾರನ್ನೋ ಕಾಮಿಸೆಂದಾಗ ಕಾಮಿಸಬೇಕು. ಇಷ್ಟೆ ನಮ್ಮಗಳ ಜೀವನ
ಒಪ್ಪಿಕೊಂಡು ಈ ಕಾಡಿಗೆ ಬಂದು ಏಕಾಗ್ರತೆಯಿಂದ ತಪಸಿಗೆ ಕೂತವನ ಮುಂದೆ ಹಾದು ಹೋದದ್ದೇ ತಡ. ಆತ ಕಾಮಿ ಬೆಕ್ಕಿನಂತೆ ಹಿಂದೆ ಬಂದೇಬಿಟ್ಟ. ಹ್ಮ್ಮ್ ಇಷ್ಟೇ ಈ ಗಂಡಸರ ಹಣೆ ಬರಹ . ಎಂದು ನಕ್ಕಿದ್ದೆ, ಗರ್ವ ಕೂಡ
ಪೂಜೆ ಮರೆತ, ತಪಸ್ಸು ಮರೆತ,. ಸದಾ ನನ್ನಲ್ಲೇ .. ಎಷ್ಟು ವರ್ಷದ ಹಸಿವೋ, ನಾನು ಬಳಲಿ ಹೋಗಿದ್ದೇನೆ. ಸ್ವರ್ಗದಲ್ಲಿ ಸುಖ ಸೋಪಾನ ಇಲ್ಲೋ ಕಲ್ಲುಗಳೇ ಶಯನಾಸನ. ಕಾಮಕ್ಕೆ ಮನಸಾದಾರೂ ಹೇಗೆ ಬಂದೀತು. ಆದರೆ..ಅವನಿಗೆ ಯಾವ ಯೋಚನೆಯೂ ಇಲ್ಲ.  ಗರ್ಭಿಣಿ ತಾನು ಹೇಳಿಲ್ಲ ಇನ್ನೂ ಈ ವಿಷಯ ಅವನಿಗೆ
ಈಗ ಹೊಟ್ಟೆಯಲ್ಲಿ ಇರುವ ಮಗು.. ಏನು ಮಾಡುವುದು . ಹೇಳಿದ ಕೂಡಲೆ ಹೌಹಾರಿ ಹೋಗಿದ್ದು ಇಂದ್ರ, ನಿನ್ನ ಚೆಲುವೆಲ್ಲಾ ಹಾಳಾಗಿ ಹೋಗಿಬಿಡುತ್ತೆ. ಮತ್ತೆ ಮುಂದೆ ನಮ್ಮಗಳ ಗತಿ ಎಂದೆಲ್ಲಾ ಬೈದನು. ನಾನೊಂದು ಕಾಮದ ಯಂತ್ರವಷ್ಟೆ ಅವನ ಪಾಲಿಗೆ. ಇನ್ನು ವಿಶ್ವಾಮಿತ್ರನಿಗೆ ಈ ವಿಷಯ ಹೇಳುವುದು ಇವತ್ತು  .ಸಂಜೆ ಬಂದ ಕೂಡಲೇ ವಿಷಯ ಹೇಳಬೇಕು. ಖುಷಿ ಪಡುತ್ತಾನೆಯೇ ಇಲ್ಲವೇ . ತಂದೆಯಾಗುವ ಸಂತೋಷ ಪ್ರತಿಯೊಬ್ಬರಿಗೂ ಇರುತ್ತೆ . ತಾನು ತಾಯಿಯಾಗಿ ಸಂತೋಷವಾಗಿದ್ದೇನೆಯೇ? ಹೌದು ಮನಸು ಸಂತೋಷವಾಗಿದೆ. ಆ ಕಂದ ಅಮ್ಮ ಅಂತ ಕರೆದರೆ ಎಂತ ಸಂತೋಷ. ಒಂದೊಮ್ಮೆ ಈ ಮುನಿ ಒಪ್ಪಿಕೊಂಡರೆ ಇವನೊಂದಿಗೇ ಬಾಳಿಬಿಡಬೇಕು ಸಂಸಾರಸ್ತೆಯಂತೆ. ಆ ಹಾಳು ದೇವಲೋಕದ ಗೊಡವೆಯೇ ಬೇಡ.
"ಮೇನಕೆ ನಾನು ಸಂಸಾರದ ಬಂಧನಕ್ಕೆ ಸಿಲುಕಲು ಇಷ್ಟ ಪಡೋಲ್ಲ"ತನ್ನ ಉದ್ದ ಗಡ್ಡವನ್ನ್ ನೇವರಿಸಿಕೊಂಡು ಎತ್ತಲೋ ನೋಡುತ್ತಾ ನುಡಿದ... ಸಂಜೆ ಬಂದ ಕೂಡಲೇ ಮೇನಕೆ ಬಾ ನನ್ನ ತಣಿಸು ಎಂದು ಕೂಗಿ ಕರೆದವನಿಗೆ ನಾ ಗರ್ಭಿಣಿ ಅನ್ನೋದನ್ನ  ಹೇಳಿದ್ದೇ ತಡ ಹಾವು ಮೆಟ್ಟಿದವನಂತೆ ಹಿಂದೆ ಸರಿದು ಹೋದ.
ಹೆಣ್ಣು ಬೇಕು. ಆದರೆ ಹೆಣ್ಣಿನ ಜವಾಭ್ದಾರಿ ಬೇಡ ಎನ್ನುವ ಗಂಡಸರು . ತಮ್ಮ ಬೇಜವಾಬ್ದಾರಿತನಕ್ಕೆ ತಪಸಿನ ಹೆಸರು ಕೊಡವವರು.  ಸಂಸಾರದ ನೊಗ ಹೊರಲಾಗದವರು ಕಾಮಕ್ಕೇಕೆ ಅಡಿಯಾಳಾಗಬೇಕು, ಕಾಮ ಬೇಕು ಕೋಪ ಉಂಟು, ಕ್ರೋಧವೂ ಉಂಟು ಇವನಾವ ಸೀಮೆಯ ಮುನಿ.
ಕೋಪ ಬಂದಿತು. ಆದರೂ ಸಮಾಧಾನಿಯಾಗಿಯೇ ನುಡಿದೆ
" ಮುನಿವರ್ಯರೇ ನಾವು ಒಟ್ಟಾಗಿ ಇರೋಣ, ಸಂಸಾರದ ಪ್ರತಿ ಹೆಜ್ಜೆಗೂ ನಾನು ಜೊತೆಜೊತೆಯಾಗಿಯೇ ಇರುತ್ತೇನೆ.   ನಿಮಗೆ ಸಂಸಾರದ ಜವಾಬ್ದಾರಿ ಬೇಡ, ಅದನ್ನ್ ನಾನು ನೋಡಿಕೊಳ್ಳುತ್ತೇನೆ, ನಿಮಗೆ ನಾನು ಭಾರವಗಿರುವುದಿಲ್ಲ"
"ಓಹೋ ಇತ್ತ ನನ್ನ ಪತ್ನಿಯಾಗಿ ಅತ್ತ ವೇಶ್ಯಾವೃತ್ತಿಯನ್ನ್ನೂ ಮಾಡುತ್ತಾ ನನ್ನನ್ನ ಸಾಕ್ತೀನಿ ಅಂತಿದೀಯಾ? ಎಲ್ಲಿ ಹೋಗುತ್ತೆ ವೇಶ್ಯಾ ಬುದ್ದಿ . ವೇಶ್ಯೆಯನ್ನ ಹೆಂಡತಿಯನ್ನಾಗಿ ಮಾಡಿಕೊಂಡರೆ ನನ್ನನ್ನ ಜನ ಹುಚ್ಚ ಅಂತಾರೆ . ಈ ಭ್ರಮೆಯನ್ನೆಲ್ಲಾ ಪಕ್ಕಕ್ಕೆ ಇಟ್ಟು ನಿನ್ನನ್ನ ಕಳಿಸಿದವನ ಬಳಿಗೇ ಹೋಗು. ಇನ್ನೀಗ ನಿನ್ನ ಸಂಗ ಮಾಡಿದ್ದು ಸಾಕು. ನಡೆ ಇಲ್ಲಿಂದ ". ಅಕ್ಷರಷ ಹೊರ ನೂಕಿದ್ದ
ಬೈಯ್ಯಬೇಕನಿಸಿತು. "ನನ್ನ ವೇಶ್ಯೆಯನ್ನಾಗಿ ಮಾಡಿದ್ದು ನೀನು ಮತ್ತು ನಿನ್ನಂತ ಗಂಡಸರು. ನಿಮ್ಮಂತಹ ಗಂಡಸರಿಗೆ ತಣಿಸಲು ನಾವುಗಳು ಬೇಕು, ಆದರೆ ಹೆಂಡತಿಯನ್ನಾಗಿ ನೋಡಲು ನಾವು ಬೇಕಿಲ್ಲ. ಅಲ್ಲವೇ?ಬೆಂಕಿ ಬಿತ್ತು ನಿನ್ನಾ ತಪಸಿಗೆ, ನೀನೇನೆ ಮಾಡಿದರೂ ನಿನ್ನ ಈ ವಕ್ರ ಬುದ್ದಿಯಿಂದ ಇಂದ್ರ ಪದವಿ ದಕ್ಕೋದಿಲ್ಲ ನಿನಗೆ." ಎಂದು ನುಡಿದು ಹೊರಬಂದೆ
ಬಂದವಳು ಹೋಗುವುದಾದರೂ ಎಲ್ಲಿಗೆ . ಗೆಳತಿಯೊಬ್ಬಳ ಮನೆಯಲ್ಲಿ ಉಳಿದ ದಿನಗಳನ್ನು ಕಳೆದೆ. ಮಗುವೂ ಆಯ್ತು .  ಮುದ್ದಾದ ಹೆಣ್ಣು ಮಗು. ಗೆಳತಿ ಮರಳುವಂತೆ ನುಡಿದಳು. ನನ್ನನ್ನ ಇಲ್ಲಿಗೆ  ಕಳಿಸಿದವನ ಬಳಿಗೇ ನಡೆದೆ.
"ಮೇನಕೆ ನೀನು ಹೋಗಿದ್ದು ಒಬ್ಬಳೇ ಬರುವುದೂ ಒಬ್ಬಳೇ . ನಿನ್ನ ಮಗುವಿಗೆ ಇಲ್ಲಿ ಪ್ರವೇಶವಿಲ್ಲ. ಮಗುವನ್ನು ಬಿಟ್ಟು ಬಾ:" ಇಂದ್ರ ನಿಷ್ಟುರನಾಗಿ ನುಡಿದ . ಎಷ್ಟು ಕ್ರೂರಿ ಆತ ಇನ್ನೂ ಹಾಲುಗಲ್ಲದ ಹಸುಳೆ.. ಮಗುವನ್ನೆತ್ತಿಕೊಂಡು ಹೊರಗಡೆ ನಡೆಯಲು  ಹೊರಟೆ.
"ನನ್ನ ಮಗುವಿಗೆ ಇರದ ಜಾಗ ನನಗೂ ಬೇಡ"
"ಹಾಗೆ ನಿರ್ಧರಿಸಲು ನೀನು ಯಾರು? ನೀನು ನನ್ನ ದಾಸಿ, ನೀನು ಯಾರಿಗೂ ಅಮ್ಮನಾಗಲೂ ಸಾಧ್ಯವಿಲ್ಲ ಹೆಂಡತಿಯಾಗಲೂ ಸಾಧ್ಯವಿಲ್ಲ, ತಂಗಿಯಾಗಲೂ ಸಾಧ್ಯವಿಲ್ಲ ನೀನೇನಿದ್ದರೂ ಕಾಮಿನಿ ಅಷ್ಟೆ. ಆ ಮಗುವನ್ನು  ಸೇವಕರು ಕಾಡಿನಲ್ಲಿ ಬಿಟ್ಟು ಬರುತ್ತಾರೆ ನೀನು ನನ್ನ ದಾಸಿ ನಡೆ ಒಳಗೆ.". ಬಲವಂತವಾಗಿ ಮಗುವನ್ನು ಕಿತ್ತು ಕೊಂಡರು
ಮಗು ಅಳುತ್ತಿತ್ತು. ಎದೆ ತುಂಬಿ ಸೋರುತ್ತಿತ್ತು. ಕಣ್ಣ ನೀರು ಬತ್ತಿ ಹೋಗಿತ್ತು. ಯಾರೋ ಒಳಗೆ ನೂಕಿದರು. ಎಂದೂ ಹೊರಬರಲಾಗದ ಕೂಪದೊಳಗೆ. ಮಗುವಿನ ಅಳು ಮಾತ್ರ ಕಿವಿಗೆ ಕೇಳುತ್ತಲೇ ಇತ್ತು...... ಜೊತೆಗೆ   "ನೀನು ನನ್ನ ದಾಸಿ, ನೀನು ಯಾರಿಗೂ ಅಮ್ಮನಾಗಲೂ ಸಾಧ್ಯವಿಲ್ಲ ಹೆಂಡತಿಯಾಗಲೂ ಸಾಧ್ಯವಿಲ್ಲ, ತಂಗಿಯಾಗಲೂ ಸಾಧ್ಯವಿಲ್ಲ ನೀನೇನಿದ್ದರೂ ಕಾಮಿನಿ ಅಷ್ಟೆ." ಎಂಬ ಇಂದ್ರ ಕಟು ಮಾತುಗಳು............

1 comment:

  1. ಮೇನಕೆಯ ಕೋನದಲ್ಲಿ ಒಡಮೂಡಿದ ಈ ಸಣ್ಣ ಕಥೆ ನಿಜವಾಗಲೂ ಮನಮುಟ್ಟಿತು.

    ReplyDelete

ರವರು ನುಡಿಯುತ್ತಾರೆ