ಅಂದು
ತಣ್ಣನೆ ಗಾಳಿ ಸರ್ರೆಂದು ನೇವರಿಸಿದಂತೆ
ಆವರಿಸಿದ ದಟ್ಟ ಪರಿಮಳದ ಸೆಳೆತಕೆ
ಮನ ಮರಳಾಗಿದ್ದು ನಿಜ
ಎತ್ತಿಟ್ಟ ಹಂಬಲಗಳ ಮೂಟೆಯೊಂದರಲ್ಲಿ
ಕಾದು ಕಾದು ಸೊರಗಿದ ಆಸೆಯೊಂದು
ಚಿಗುರಿ ಹಣ್ಣಾಗಿದ್ದೂ ನಿಜ
ಪೋಣಿಸಿಟ್ಟ ಮುತ್ತುಗಳು ಸಾಲು
ಸಾಲಾಗಿ ಕೆನ್ನೆಯ ನೇವರಿಸಿ ಆವರಿಸಿ
ಮತ್ತೇರಿಸಿದ್ದೂ ನಿಜ
ಗುಪ್ತ ಗಾಮಿನಿಯ ಗಮನದ ಗಮ್ಯ
ಬದಲಾಗಿ ದಿಕ್ಕಾಪಾಲಾಗಿ ಸುತ್ತಿ
ಸಂತಸದಿ ಬೆವರಾದದ್ದೂ ನಿಜ
ಇಂದು
ಗಾಳಿ ಸುಂಟರಗಾಳಿಯಾಗಿ
ಮೂಟೆ ಮೊಟ್ಟೆಯಾಗಿ
ಮುತ್ತುಗಳು ಕುತ್ತಾಗಿ ದಾರಿ
ಕತ್ತಲಾಗಿದ್ದೂ ನಿಜ
No comments:
Post a Comment
ರವರು ನುಡಿಯುತ್ತಾರೆ