Wednesday, December 19, 2018

ಎಂಟನೆ ಆಯಾಮ ಅಧ್ಯಾಯ ಮೂರು - ಸಮ್ಮೊಹಿನಿ ಮನಮೊಹಿನಿ

"ಅಂಕಲ್  ಹಿಪ್ನಾಟೈಸ್ ಮಾಡಿದಾಗ ಎಲ್ಲಾ ಹೇಳಿಬಿಡ್ತೀನಾ. ಮತ್ತೆ ಏನಾದರೂ ತೊಂದರೆ ಆಗುತ್ತಾ ನಂಗೆ. ನಾನು ನಿಜಕ್ಕೂ ಅನ್ ಕಾನ್ಶಿಯಸ್ ಆಗ್ತೀನಾ? ಅಕಸ್ಮಾತ್ ನಂಗೆ ಎಚ್ಚರ ಆಗದಿದ್ರೆ? "
ರಾಮ್ ರಾಜೇಶ್ ಅವರ ಮುಂದೆ ಕೂತು ಪ್ರಶ್ನೆಗಳ ಮೂಲಕ ಆತಂಕ ವ್ಯಕ್ತ ಪಡಿಸಿದನು
ರಾಜೇಶ್ ನಿಧಾನವಾಗಿ ಮುಂದೆ ಬಾಗಿ ಅವನ ಭುಜವನ್ನು ತಟ್ಟಿದರು. ಕಣ್ಣುಗಳು ರಾಮ್ ನ ಕಣ್ಣುಗಳನ್ನೇ ನೋಡುತ್ತಿದ್ದವು , ಮಂದಹಾಸ ಬೀರುತ್ತಾ
" ರಾಮ್ ಇವೆಲ್ಲಾ ಏನೂ ಆಗಲ್ಲ.ನೀನು ಸೈಕಾಲಜಿ ಸ್ಟೂಡೆಂಟ್ ಅಲ್ವಾ?"
" ಹೌದು ಅಂಕಲ್ ಆದರೆ ನಮ್ಮಲ್ಲಿ  ಸೈಕಾಲಜಿಲಿ ಹಿಪ್ನಾಸಿಸ್ ಅನ್ನೋದು ಅಷ್ಟೊಂದು ಮೇಲ್ ಸ್ತರದ ಟ್ರೀಟ್ ಮೆಂಟ್ ಅಂತ ಕನ್ಸಿಡರ್ ಮಾಡಿಲ್ಲ.  ಹಾಗಾಗಿ ನಾನದರ ಬಗ್ಗೆ ಹೆಚ್ಚು ಓದಿಲ್ಲ .. ಅದಕ್ಕೆ ಕೇಳತಿದೀನಿ."
" ಸರಿ  ನಾನು ನಿಂಗೆ ಒಂದು ಪ್ರಶ್ನೆ ಕೇಳಲಾ? ಸೈಕಾಲಜಿ ಯಾವ ವಿಷಯದ ಬಗೆಗಿನ ಅಧ್ಯಯನ ಹೇಳು"
" ಅಂಕಲ್...    ಮನಸಿನ ಬಗ್ಗೆ ಅಷ್ಟೇ"
"  ಸರಿ. ಮನಸು ಅಂದರೆ ಏನು ಅದು ಎಲ್ಲಿದೆ"?
" ಮನಸು ಅಂದರೆ". ಕೈಯ್ಯನ್ನ ಎದೆಯ ಬಳಿ ತೆಗೆದುಕೊಂಡು ಹೋದವ " ಅಲ್ಲಲ್ಲ ಇಲ್ಲಿದೆ" ಎಂದು ತಲೆಯತ್ತ ತೋರಿದ.
"ಮನಸು ಮನುಷ್ಯನ ಮೆದುಳು"
" ಆರ್ ಯು ಶ್ಯೂರ್? "ನಗುತ್ತಾ ಮತ್ತೇ ಕೇಳಿದರು
" ಇಲ್ಲ ಬಟ್ ..." ಗೊಂದಲವಾಗಿತ್ತು ರಾಮಗೆ
"ಮನಸನ್ನ ನೋಡಿರೋರು ಇದಾರ ? ಭೌತಿಕವಾಗಿ? "
" ಇಲ್ಲ ಅಂಕಲ್.. ಆದರೇ ಹೃದಯಾನೆ ಮನಸು ಅಂತಂದ್ಕೊಂಡು ಕವನ ಕಾವ್ಯ ಚಿತ್ರಗಳನ್ನ ಬರೆದಿರೋರು ಇದಾರೆ."
" ರಾಮ್ " ... ಮನಸು ಅನ್ನೋದು ಒಂದು ರೀತಿ ಸಿಗ್ನಲ್ ಥರ , ನೋಟಕ್ಕೆ ಸಿಗೋದಲ್ಲ, ಸ್ಪರ್ಶಕ್ಕೆ ಎಟುಕೋದಲ್ಲ  ಆದರೆ ಅಸ್ತಿತ್ವ ಇದೆ. ಅರ್ಥವಾಗೋ ಹಾಗೆ ಹೇಳಬೇಕಾದ್ರೆ ಉದಾಹರಣೆಗೆ, ಕೋಪ ಬಂದಾಗ ಒಂದಷ್ಟು ಹಾರ್ಮೋನಗಳು ಬಿಡಗಡೆಯಾಗ್ತವೆ. ಅದರಿಂದ ಒಂದಷ್ಟು ಶಾರೀರಿಕ ಬದಲಾವಣೆಯಾಗ್ತವೇ ಲೈಕ್ ಎದೆ ಬಡಿತ ಜಾಸ್ತಿಯಾಗೋದು, ಮುಖ ಕೆಂಪೇರೋದು. ಎಟ್ಸೆಟ್ರಾ.. ನಿಂಗೊತ್ತಿದೆ ಕೋಪನೂ ಭಯದ ಇನ್ನೊಂದು ರೂಪ.. ಹಾಗೆ ಸಂತಸ ಆದಾಗ ಕೆಲವೊಂದು ಹಾರ್ಮೋನ್ಸ್ ಬಿಡುಗಡೆಯಾಗುತ್ತೆ. ಹಾಗೆಯೇ ಎದೆ ಬಡಿತ ನಿಧಾನವಾಗುತ್ತೆ.  ಇವೆಲ್ಲಾ ಒಂದು ಗುಂಪಿನ ಹಂತಗಳು ಸೆಟ್ ಅಫ್ ಪ್ರೊಸೆಸ್. ಇದನ್ನೇ ನಾವು ಮನಸು ಅಂತ ಕರೀತೀವಿ. ಮನಸು ವಸ್ತುವಲ್ಲ ಇದು ಹಲವು ವಿಧಿಗಳ ವಿಧಾನ"

"ಓಹ್... ಅಂಕಲ್ ಈಗ ನಂಗೆ ಬೀಳತಿರೋ ಕನಸುಗಳು  ನನ್ನೊಳಗಿನ ಯಾವದೋ ಒಂದಷ್ಟು ಪ್ರೋಸೆಸ್ ನಿಂದಾನೇ ಬೀಳತಿದೆ ಅಂತೀರಾ?"

"ಇರಬಹುದು ಇಲ್ಲದೇನೂ ಇರಬಹುದು. ನಿಂಗೀಗಾಗಲೆ ಸುಪ್ತ ಮನಸು ಅಂದ್ರೆ ಅನ್ ಕಾನ್ಶಿಯಸ್ ಮೈಂಡ್ ಮತ್ತು ಜಾಗೃತ ಮನಸೀನ ಬಗ್ಗೆ ಗೊತ್ತಿದೆ .. ಅಲ್ವಾ?" 
" ಹಾ ಗೊತ್ತಿದೆ . ನಾನೂ ಆ ಆಂಗಲ್ ನಲ್ಲೂ ಆ ಕನಸಿನ ಬಗ್ಗೆ ಡಿಗ್ ಮಾಡಿದೆ. ಆದರೆ ಆ ಹುಡುಗಿನ ನಾನೆಲ್ಲೂ ನಿಜವಾಗಿ    ನೋಡಿಲ್ಲ.  ಆ ಥರ ಕನಸು ಬಂದ ತಕ್ಷಣ  ಹೃದಯ  ಹೊಡೆದಕೊಳ್ಳುತ್ತೆ..
ನಮ್ಮನೆಯವರೀಗೇನಾದ್ರೂ ಆದರೆ ಹೇಗೆ ಬೇಜಾರಾಗುತ್ತೋ ಹಾಗೆ...  ಈಗಲೂ ಸ್ವಲ್ಪ ಕಣ್ಣುಮುಚ್ಚಿದರೂ ಸಾಕು ಅವಳೇ ಕಾಣಿಸ್ತಾಳೆ" ತಲೆ ಒತ್ತಿ ಹಿಡಿದ

" ಹಾ ಇಲ್ಲೇ ಹಿಪ್ನಾಸಿಸ್ ವರ್ಕ್ ಮಾಡುತ್ತೆ. ಕೆಲವು ಸಲ ನಮ್ ಜಾಗೃತ ಮನಸು  ಬೇರೆ ಕೆಲಸ ಮಾಡ್ತಿದ್ದಾಗ  ಸುಪ್ತ ಮನಸು  ಸುತ್ತ ಮುತ್ತ ಎಲ್ಲಾವನ್ನೂ ಗಮನಿಸುತ್ತೆ.  ನಮ್ಮ ಈ ಒಳ ಮನಸಲ್ಲಿ ಏನು ನಡೆದಿದೆ ಏನು ತುಂಬಿದೆ ಇದೆಲ್ಲಾವನ್ನ ಜಾಗೃತಾವಸ್ತೆಯಲ್ಲಿದ್ದಾಗ  ಅರಿವಿಗೆ ಬರದೇ ಇರೋ ಸಾಧ್ಯತೆಗಳು ಇರುತ್ತವೆ. ನಿನ್ನ ಜಾಗೃತ ಮನಸನ್ನ ಪರದೆ ಅಂತನ್ಕೊಂಡರೆ ನಿನ್ನ ಸುಪ್ತ ಮನಸು ಪರದೆಯ ಹಿಂದಿನ ಬ್ರಹ್ಮಾಂಡ. ಆದರೆ ಆ ಬ್ರಹ್ಮಾಂಡ ನೋಡೋದಿಕ್ಕೆ  ಪರದೆಯನ್ನ ಸರಿಸಲೇ ಬೇಕು
 ಆ ಕೆಲಸವನ್ನೇ ಹಿಪ್ನಾಸಿಸ್ ಮಾಡುತ್ತೆ.ಹಾಗೆ ನೋಡೋಕೆ ಹೋದರೆ ನಾವೆಲ್ಲಾ ಒಂದಲ್ಲ ಒಂದು ರೀತಿಲಿ ಹಿಪ್ನಾಟೈಸ್ ಆಗಿರ್ತೀವಿ. ಸಿನಿಮಾ ನೋಡುವಾಗ ಆ ಕಾನ್ಸಂಟ್ರೇಶನ್. , ವಾಟ್ಸಾಪಿನಲ್ಲಿ ಚಾಟ್ ಮಾಡ್ತಾ ಅಕ್ಕ ಪಕ್ಕದವರನ್ನ ಮರೆಯೋದು ಇವೆಲ್ಲಾ ಹಿಪ್ನಾಟೈಸ್ ಆಗಿರೋದಿಕ್ಕೆ ಉದಾ ಹರಣೆಗಳು. ಇನ್ನು ನಿಂಗೇನಾದರೂ ಅಪಾಯ ಇದ್ಯಾ ? ಸಿಂಪಲ್ ಆನ್ಸರ್. ಇಲ್ಲ. ಕೆಲವು ಸಲ ನೀನು ಸುಪ್ತಾವಸ್ತೆಯಲ್ಲಿ ಹೇಳೋದು ನೀನು ಜಾಗೃತಾವಸ್ತೆಗೆ ಬಂದಾಗಲೂ ನೆನಪಿರಬಹುದು ಅಥವ ಇಲ್ಲದೇ ಇರಬಹುದು. ನಿಂಗೆ ಹಿಪ್ನಾಟೈಸ್ ಗೆ ಒಳಗಾಗುವ ಇಷ್ಟ ಇಲ್ಲದಿದ್ದರೆ ಯಾರೂ ನಿನ್ನ ಹಿಪ್ನಾಸಿಸ್ ಮಾಡಲಾಗೋದಿಲ್ಲ. ನೀನು ಓಕೆ ಅಂದರೆ ನಾವು ಪ್ರೊಸೆಸ್ ಶುರು ಮಾಡಬಹುದು."
ಸುದೀರ್ಘ ಮಾತಿನಿಂದ ದಣಿದವರಂತೆ ಕುರ್ಚಿಯಲ್ಲಿ ಕೂತು ಎದುರಿಗಿದ್ದ ಬಾಟಲಿಯಿಂದ ನೀರು ಕುಡಿದರು.

"ನಂಗೆ ಇದರಿಂದ ರಚನಾ ಸಿಕ್ತಾಳೆ ಅನ್ನೋದಾದರೆ ನಾನು ಯಾವ ರಿಸ್ಕಿಗಾಗಿಯೂ ರೆಡಿ ಅಂಕಲ್" ದೃಢವಾಗಿ ಹೇಳಿದ.
" ನಿನಗೆ ಅಷ್ಟೊಂದು ಇಷ್ಟಾನಾ? ಎಷ್ಟು ವರ್ಷದಿಂದ ನಿನಗೆ ಗೊತ್ತು  ಅವಳು"
" ಅಂಕಲ್ ಅವಳು ಯಾರು ಅಂತ ಗೊತ್ತಿಲ್ಲ. ಮೊದ ಮೊದಲು ಆರು ತಿಂಗಳ ಹಿಂದೆ ಅಪರೂಪಕ್ಕೆ ಕನಸುಗಳು ಬರ್ತಿದ್ದವು. ಅದರಲ್ಲಿ ಮಸುಕು ಮಸುಕಾಗಿ ಈ ಹುಡುಗಿ ಕಾಣ್ತಿದ್ದಳು. ಆದರೆ ಆಮೇಲಾಮೇಲೆ ಆಗಾಗ ಕನಸುಗಳಲ್ಲಿ ಬರ್ತಿದ್ಧಳು ಸ್ಪಷ್ಟವಾಗಿ. ಇದು ಯಾಕೋ ಜಾಸ್ತಿ ಆಯತ ಅಂತ ಕನಸುಗಳನ್ನ ಮೊಬೈಲ್ ನಲ್ಲಿ ರೆಕಾರ್ಡ ಮಾಡತೊಡಗಿದೆ. ಆ ಕನಸುಗಳ ಡೀಟೇಲ್ಸ್ ಲಿಂಕ್  ನಿಮಗೆ ಕಳಿಸಿದೀನಿ.  ಇಷ್ಟು ದಿನ ಆ ಕನಸಲ್ಲಿ ನಾನು ಇರ್ತಾನೆ ಇರಲಿಲ್ಲ. ನೆನ್ನೆ ರಾತ್ರಿ ಮಾತ್ರ ನಾನೂ ಇದ್ದೆ ಬೇಗ ಬಾ ಇನ್ನೆಷ್ಟು ದಿನ, ಅಂತ ಪ್ರೇಯಸಿ ಹಾಗೆ ಕರೆದುಳು. ಯಾಕೋ  ಗೊತ್ತಿಲ್ಲ ಅವಳನ್ನ ಹೇಗಾದರೂ ಮಾಡಿ ಭೇಟಿ ಮಾಡಲೇಬೇಕು ಅಂತ ಉತ್ಕಟವಾಗಿ ಅನಿಸ್ತಿದೆ. ಈ ಸೆಶನ್ಗೆ ಬಂದಿರೋದೇ ಅವಳನ್ನ ಗುರುತಿಸೋಕೆ , ಹುಡುಕೋಕೆ  ಹೆಲ್ಪ್ ಆಗಬಹುದು ಅನ್ನೋ ನಿರೀಕ್ಷೆ ಇಟ್ಟುಕೊಂಡು."  ರಾಮ್ ನ ಕಂಗಳು ಮಾಯಾಲೋಕಕೆ ಹೋದೆವೇನೋ ಎಂಬಂತೆ ಕಣ್ಣು ಮುಚ್ಚಿದವು. ಕೂತಿದ್ದ ಆರಾಮ ಕುರ್ಚಿಯಲ್ಲಿ ಕಾಲು ಚಾಚಿ ನಿರಾಳವಾಗಿ ಮಲಗಿದ ಭಂಗಿ ಅದು.




Tuesday, November 27, 2018

ಎಂಟನೇ ಆಯಾಮ ಅಧ್ಯಾಯ ಮೂರು .ಮುತ್ತಿಗೆ ಹಾಕಿದ ಮುತ್ತಿನ ಕನಸು

"ಅಮ್ಮಾ..."
"ಏನೇ...ರಚನಾ "
"ನಿನ್ನ  ಏನೋ ಕೇಳಬೇಕಿತ್ತು"
"ಕೇಳು"
"ಅದು... ನಂಗೆ ಕೆಲವೊಂದು ದಿನದಿಂದ ಒಂದೇ ಥರ ಕನಸು ಬರ್ತಿದೆ"
"ಏನು ಕನಸು?"
"ಅದು... ನಮ್ಮ ಮನೆ ಮೇಲಿರೋ ಹುಡುಗ ಒಬ್ಬ ನಿಮ್ಮ ತಂದೆ ಬಗ್ಗೆ ಏನೋ ಸತ್ಯ ಹೇಳ್ತೀನಿ ಅನ್ನೋ ಥರ .. ಆದರೆ ... ಏನು ಅಂತ ಕೇಳೋ ಅಷ್ಟ್ರಲ್ಲಿ ಕನಸಿಂದ ಎದ್ದಿರ್ತೇನೆ. ಸುಮಾರು ತಿಂಗಳಿಂದ ಹೀಗೇ ಕನಸು ಬೀಳ್ತಿದೆ"
"ರಾತ್ರಿ ಬೇಗ ಮಲಗು ಅಂತ ಹೇಳಿದ್ರೆ ನೀನು ಕೇಳಲ್ಲ. ಹಾಳು ಮೊಬೈಲ್ ನೋಡ್ತಾ ಇರ್ತೀಯ . ಬೇಗ ಮಲಗಿದ್ರೆ ಎಲ್ಲಾ ಸರಿ ಹೋಗುತ್ತೆ. ಕಣ್ತುಂಬ ನಿದ್ರೆ ಬರುತ್ತೆ . ಈ ಅರೆ ಬರೆ ನಿದ್ದೇನಲ್ಲೇ ಹೀಗೆಲ್ಲಾ ಆಗೋದು.." 
ಅಮ್ಮ ಅಡಿಗೆ ಮನೆಗೆ ಹೋದ ತಕ್ಷಣವೇ ಸುನಯನ ಎಂಬ ಅಕ್ಷರಗಳು ಆಕೆಯನ್ನ ಹಿಂಬಾಲಿಸಿದವು.
ರಚನಾ ಳ ಕಣ್ಣುಗಳು ದೊಡ್ಡದಾದವು... ಮೂಲೆಯಲ್ಲಿ ಎಲ್ಲವನ್ನೂ ಗಮನಿಸುತ್ತಿದ್ದ ಇವನತ್ತ ನಡೆದಳು
ಅವನನ್ನ ತಬ್ಬಿಕೊಳ್ಳುತ್ತಾ
"ಇನ್ನೂ ಎಷ್ಟು ದಿನ ಬೇಕು ನೀನು ಬರೋಕೆ? ಬೇಗ ಬಾ ಸಮಯ ಕಳೆದುಹೋಗಿ ಕತ್ತಲು ಮುಸುಕುವ ಮುಂಚೆ"
ಹಿತವಾದ ಮುತ್ತನ್ನ ಅವನ ಕೆನ್ನೆಗೆ ಕೊಡುತ್ತಿದ್ದಂತೆ....
ರಾಮ್ ತುಟಿ ಅರಳಿ ಅವಳನ್ನ ಮತ್ತಷ್ಟು ಬಾಚಿ ತಬ್ಬಿ ಪಿಸುಗಟ್ಟಿದ
"ಆದಷ್ಟು ಬೇಗ"
........
ರಾಮ್ ದಿಢೀರ್ ಎಂದು ಎದ್ದು ಕೂತ..

ಏನಿದು ಕನಸು...
ಮುತ್ತು ಕನಸಲ್ಲಿ ಕೊಟ್ಟದ್ದಾದರೂ ಯಾಕೆ ಇಷ್ಟು ಖುಷಿ ಆಗುತ್ತಿದೆ..
ಯಾರಾಕೆ?
ಮೊಬೈಲ್  ಆನ್ ಮಾಡಿ ತನ್ನ ನೋಟ್ಸ್ ನತ್ತ ಕಣ್ಣು ಹಾಯಿಸಿದ..
ದಿನಾ ಬೀಳುವ ಕನಸುಗಳನ್ನ ದಾಖಲಿಸಲಾರಂಭಿಸಿ  ಎರೆಡು ತಿಂಗಳುಗಳಾಗಿದ್ದವು.
ಇಲ್ಲಿಯವರೆಗೆ ಇಪ್ಪತ್ತಕ್ಕಿಂತ ಹೆಚ್ಚು ಬಾರಿ ಬಿದ್ದ ಕನಸುಗಳಲ್ಲಿ ರಚನಾ ಎನ್ನುವ ಹುಡುಗಿ , ಆಕೆಯ ತಂದೆಯ ಬಗ್ಗೆ ಯಾವದೋ ಸತ್ಯವನ್ನ ಹುಡುಕುವದಷ್ಟೇ ಆಗಿತ್ತು.
ಇಂದು ಮೊದಲ ಬಾರಿ ಆ ಕನಸಲ್ಲಿ ರಾಮ್ ಸಹಾ ಪಾತ್ರಧಾರಿಯಾಗಿದ್ದ... ಅಷ್ಟೇ ಅಲ್ಲ ಇನ್ನೂ ಇಪ್ಪತ್ತೂ ತುಂಬದ  ಅವನಿಗೆ ಪ್ರೇಮದ ಅಪ್ಪುಗೆ ಮತ್ತು ಮುತ್ತಿನ  ಮೊದಲ ಅನುಭವ ಕೂಡ...

ಕನಸಲ್ಲಿ ಬಂದು ಆಹ್ವಾನ ಕೊಡುತ್ತಿರುವ ಈ ರಚನಾ ಯಾರು ? ಎಲ್ಲಿದ್ದಾಳೆ? ತನಗೂ ಅವಳಿಗೂ ಏನ ಸಂಬಂಧ ? ಬೇಗ ಬಾ ಎಂದೇಕೆ ಕರೆಯುತ್ತಿದ್ದಾಳೆ . ಕತ್ತಲು ಮುಸುಕುವ ಮುಂಚೆ ಅಂದರೆ? ಈ ದಿನವೇಕೆ?  ಅಥವ ಮತ್ತು ಯಾವಾಗ?...
ಎಫ್ ಬಿ  ಓಪನ್ ಮಾಡಿ ರಚನಾ ಎನ್ನುವ ಹೆಸರುಗಳನ್ನ ಹುಡುಕಲಾರಂಭಿಸಿದ..
ಆಕೆ ಕನ್ನಡದವಳು ಮತ್ತು ಬೆಂಗಳೂರಿನವಳು    ಅನ್ನುವಷ್ಷು ಮಾತ್ರ ಕನಸಲ್ಲಿ ತೋಚಿದ್ದು...

ಆದರೆ ಕನಸಿನ ಮುಖ್ಯ ಅಂಶವನ್ನೇ ಮರೆತಿದ್ದ
..................

"ಲೋ ಹುಚ್ಚ ಕನಸಲ್ಲಿ ಕಂಡವಳನ್ನ ಫೇಸ್ಬುಕ್ ಇಂಟರ್ನೆಟ್ ನಲ್ಲಿ ಹುಡಕ್ತಾರಾ.. ಸೈಕಾಲಜಿ ತಗೊಂಡು ಓದ್ತಾ ಇದೀಯ, ಕನಸಿನ ಬಗ್ಗೆ ಇಷ್ಟೆಲ್ಲಾ ಗೊತ್ತಿದ್ದೂ ಹಿಂಗೆಲ್ಲಾ  ಮೂಢನ ಥರಹ  "
 ಕಾಲೇಜಿನಲ್ಲಿ ರಾಮ್ ಹೇಳಿದ್ದು ಕೇಳಿ ಚರಣ್ ನಗಲಾರಂಭಿಸಿದ್ದ
"ನಮ್ಮ ಸುಪ್ತ ಮನಸು ನಾವು ನೋಡಿರೋ ಕೇಳಿರೋ ಓದಿರೋ ಎಲ್ಲಾ ವಿಷಯಗಳನ್ನ ತನ್ನದೇ ಆದ ರೀತಿಲಿ ಅರ್ಥೈಸಿಕೊಂಡು ಅರೆ ನಿದ್ರಾವಸ್ತೆ ಅಂದರೆ ತೀಟಾ ಹಂತದಲ್ಲಿ ಕನಸುಗಳನ್ನ ಚಿತ್ರಿಸತೊಡಗತ್ತೆ.ಕಥೆಗೂ ನಿನಗೂ ಯಾವುದೇ ಸಂಬಂಧ ಇಲ್ಲದೇ ಇರಬಹುದು ಆದರೆ ಆ ಕನಸು ನಿನ್ನ ಮನಸಿಂದಾನೇ ಬಂದಿರುತ್ತೆ  . ಆ ಹುಡುಗೀನ ನೀನು ಎಲ್ಲೋ ನೋಡಿರ್ತಿಯ.. ಅಷ್ಟೆ ಆಕಾಶದ ಅಪ್ಸರೆ ಅಂತೂ ಖಂಡಿತಾ ಇರ್ಲಿಕ್ಕಿಲ್ಲ...'
ತನಗಿಂತ ಕಡಿಮೆ ಮಾರ್ಕ್ಸ್ ತಗೊಂಡು ತನಗೇ ಕನಸಿನ ಬಗ್ಗೆ ಉಪದೇಶ ಕೊಡುತ್ತಿದ್ದ ಚರಣ್ಗೆ  ಬಾರಿಸಿದ

"ಲೋ ಅಣ್ಣಾ ನಿಂಗೆ ಲೆಕ್ಚರಿಂಗ್ ಕೊಡೋಕೆ ಬರುತ್ತೆ ಅಂತ ಗೊತ್ತು. ಆದರೆ ನಂಗಿವಾಗ ಅದು ಯೂಸ್ ಆಗಲ್ಲ. ನೀನು ಹೇಳಿದ ಎಲ್ಲಾ ವಿಷಯಾನೂ ರಾತ್ರಿ ಇಂದ ಯೋಚಿಸ್ತಾ ಇದೀನಿ.... ಆದರೆ ಆ ಹುಡುಗಿನ ಐ ಮೀನ್  ರಚನಾನ ಇಲ್ಲೀವರೆಗೆ ಎಲ್ಲೂ ನೋಡೇ ಇಲ್ಲಾ.. ಆಕಾಶದ ಅಪ್ಸರೆನೋ ಅಲ್ವೋ ಗೊತ್ತಿಲ್ಲ ಆದರೆ
ಶಿ ಹ್ಯಾಸ್ ಬೀನ್ ಮೈ ಡ್ರೀಮ್ ಗರ್ಲ್ ನೌ...ಅವಳನ್ನ ಹುಡುಕಲೇಬೇಕು."

ರಾಮ್ ನ ಕಂಗಳಲ್ಲಿ ಕನಸಿನ ಬೆಟ್ಟವೇ ಇತ್ತು.
............
" ರಾಮ್ ಕನಸನ್ನ ಸೀರಿಯಸ್ ಆಗಿ ತಗೋಬೇಡ.  ರಾಜೇಶ್ ಅಂಕಲ್ ಹತ್ರ ಮಾತಾಡಿದೀನಿ
ಸಾಯಂಕಾಲ ಅವರನ್ನ ಮೀಟ್ ಮಾಡಿ ಬಾ". 

ಕಾಲೇಜಿಂದ ಮನೆಗೆ ಬಂದವನೇ ತಂದೆಯ ಬಳಿ ಕನಸಿನ ಹುಡುಗಿಯ ಬಗ್ಗೆ ಮಾತಾಡಿದ್ದಲ್ಲದೆ  ಎಮ್ ಎ ಸೈಕಾಲಜಿಯನ್ನ ಬೆಂಗಳೂರಲ್ಲಿ ಮಾಡುವುದಾಗಿ ತಿಳಿಸಿದ್ದ.. ಜೊತೆಗೆ ರಚನಾಳನ್ನು ಹುಡುಕುವುದನ್ನೂ ಕೂಡ

ಅವನ ತಂದೆ ತಾಯಿ ಇಬ್ಬರೂ ಕಂಗಾಲಾಗಿದ್ದರು.
ಅದರ ಪರಿಣಾಮವೇ ಹಿಪ್ನಾಸಿಸ್.
ರಾಜೇಶ್   ಸಮ್ಮೋಹಿನಿ ವಿಧಿ ವೈದ್ಯರು.

 ಅಂದೇ ಸಂಜೆ ಅವರ ಮುಂದೆ ಕೂತಿದ್ದ ರಾಮ್









Sunday, November 11, 2018

ಎಂಟನೇ ಆಯಾಮ.. ಯಾರವಳು ... ಎರಡನೇ ಅಧ್ಯಾಯ .

"ರಾಮ್ ಎದ್ದೇಳೋ ಏನಿದು  . ಕ್ಲಾಸ್ನಲ್ಲೇ ನಿದ್ದೆ ಮಾಡ್ತಿದೀಯ ?"
ಚರಣ್ ಬಡಿದೆಬ್ಬಿಸಿದಾಗಲಲೇ ರಾಮ್ ಗೆ ಎಚ್ಚರ.
"ರಾತ್ರಿ ಮನೇಲಿ ನಿದ್ಧೆ ಮಾಡಲ್ವೇನೋ... ಯಾವಾಗ ನೋಡಿದ್ರೂ ನಿದ್ದೆ ನಿದ್ದೆ"
"ದರಿದ್ರ ಕನಸುಗಳು. ಯಾರೋ ಹುಡುಗ ಇನ್ಯಾರೋ ಆಂಟಿ ಒಬ್ಬರ ಮುಖಾನೂ ಸರಿಯಾಗಿ ಕಾಣಲ್ಲ.. "
ರಾಮ್ ಪಿಸುಗುಟ್ಟಿದ.
"ನಿಂದೇ ಲಕ್ ಮಗ ಆಂಟಿ,  ಹುಡುಗಿ ಎಲ್ಲಾ ಕಾಣಿಸ್ತಾರೆ. ಏನ್ಮಾಡ್ತಾರೆ ನಿನ್ ಕನಸಲ್ಲಿ ಬಂದು."
"ಅದಾ...." ಅನ್ನುತ್ತಿದ್ದವ ಮೇಡಂ
" ವಾಟ್ಸ್ ಗೋಯಿಂಗ್ ಆನ್ ದೆರ್.."
ಅಂದಾಗ ಮಾತನಾಡದೆ ಸುಮ್ಮನಿರುವಂತೆ ಫ್ರೆಂಡ್ಗೆ ಸೂಚಿಸಿ ಕ್ಲಾಸ್ ಕೇಳಲಾರಂಭಿಸಿದ.
............
"
ಸುನಯನ, ಇವತ್ತಾದರೂ ನಾ ಹೇಳೋದು ನಂಬೇ. ನನಗೆ ವಿಚಿತ್ರ ಕನಸುಗಳು ಬೀಳ್ತಿವೆ." 
"ರಚ್ಚು ... ರಾತ್ರಿ ಹೊತ್ತು ಹಾರರ್ ಮೂವಿಸ್ ನೋಡ್ಬೇಡ ಅಂತ ಹೇಳಿದ್ರೆ ಕೇಳಲ್ಲ ನೀನು. ಈಗ ಅನುಭವಿಸು.."
" ಹಾರರ್ ಕನಸಲ್ಲ ಕಣೇ  ಒಬ್ಬ ಹುಡುಗ  ನನ್ ಹತ್ತಿರ ಬಂದು  ಯಾವಾಗಲೂ ನಿಮ್ಮಪ್ಪನ ಬಗ್ಗೆ ಮಾತಾಡಬೇಕು ಅಂತಾನೆ...  .. ಅಮ್ಮನ ಹತ್ರ ಹೇಗೆ ಹೇಳೋದು ಗೊತ್ತಾಗ್ತಿಲ್ಲ. ಜೊತೆಗೆ .....
ಮುತ್ತು ಕೊಡ್ತಾನೆ . ಕಣ್ಣು ಮುಚ್ಚಿದರೇ ಸಾಕು ಇದೇ ಥರ ಕನಸುಗಳು.. "
" ಸೂಪರ್ ಕಣೆ ಹುಡುಗ ಹೇಗಿದಾನೆ ? ಸ್ಮಾರ್ಟಾಗಿದಾನ? ಎಂಜಾಯ್ ಮಾಡೋದಲ್ವೇ?"
"ಜೋಕ್ ಮಾಡ್ಬೇಡ ಸುನಿ.. ಆ ಹುಡುಗ ಎಲ್ಲೋ ನೋಡಿರೋ ಹಾಗಿದೆ ಆದರೆ ನೆನಪಿಗೆ ಬರ್ತಿಲ್ಲ..."
"ಎಷ್ಟು ಸಲ ಈ ಥರ ಕನಸು ಬೀಳ್ತಿದೆ "

 "ಒಂದೊಂದು ಸಲ ಒಂದೊಂದು ಥರ ಕೋರ್ ಮಾತ್ರ ಇಷ್ಟೇ"
"ಹೋದವಾರ ನಾವು ಕೇರಳಕ್ಕೆ ಹೋಗಿದ್ವಲ್ಲ ಅಲ್ಲಿ ಕೂಡ..."
"ಹೇ ಸ್ಟಾಪ್ ಯಾವಾಗ ಯಾರ ಜೊತೆ ಹೋಗಿದ್ದೆ?"
" ನಾನು ನೀನು ಮತ್ತೆ .. ಉಷಾ ಮರೆತುಹೋಯ್ತಾ?"
" ಹಲೋ ಲೂಸಾ? ಹೋದವಾರ ಇಂಟರ್ನಲ್ ಇತ್ತು . ನೀನು ಎಲ್ಲಾ ದಿನಾನೂ ಇಲ್ಲೇ ಇದ್ದೆ ನಾವು ಕೂಡ.. ಸುಳ್ಳು ಹೇಳಬೇಕು ಆದರೆ ಇಷ್ಟೊಂದು ಅಲ್ಲ. ಕೇರಳಕ್ಕಿರಲಿ ಪಕ್ಕದ ಮೈಸೂರಿಗೇ ಮೂರೇ ಜನ ಹೋಗಿದ್ದಿಲ್ಲ ನಾವು..  "
" ಸುಳ್ಳು ಹೇಳತಿರೋದು ನೀನು ..... ನಾವು ಹೋಗಿದ್ವಿ .. ಬಸ್ ಸಿಗಲಿಲ್ಲ ಅಂತ ಕಾರ್ ಮಾಡಿಕೊಂಡು ಹೋಗಿದ್ದು... ದಾರೀಲಿ ಉಷಾಗೆ ಸುಸ್ತಾಗಿ ವಾಂತೀ ಮಾಡ್ಕೊಂಡಿದ್ದು.."
" ಅಮ್ಮ ತಾಯೀ ಊಹಾಲೋಕದ ರಾಣಿ.. ಬೊಗಳೆ ದಾಸಿ ..  ಲಾಸ್ಟ್ ವೀಕ್ ನಿನ್ ಅಟೆಂಡೆನ್ಸ್ ನೋಡ್ಕೊಂಡು ಬಾ .. ಈಗ ರೈಟ್ ಹೇಳು.."
ರಚಿತಾ ಪೂರ್ತಿ ದಿಗ್ಭ್ರಾಂತಳಾದಳು
.......
 " ಲೋ ರಾಮ್ ಏಳೋ ನಿನ್ನ ಮೊಬೈಲ್ ಅಲಾರಾಮ್ ಆಗಿನಿಂದ  ಕಿರಿಚ್ಕೋತಿದೆ.."
ಅಪ್ಪನ ದನಿಯಿಂದ ದಡಬಡಿಸಿ ಎದ್ದ
ಮತ್ತೆ ಕನಸುಗಳು...
ಸ್ನಾನ ಮಾಡುತ್ತಾ  ರಾತ್ರಿ  ಕಂಡ ಕನಸನ್ನ ನೆನೆಸಿಕೊಳ್ಳಲೆತ್ನಿಸಿದ..
ಇಬ್ಬರು ಹುಡುಗಿಯರು...
ಇಬ್ಬರ ಮುಖವೂ ಪರಿಚಿತ ಅನಿಸ್ತಿದೆ.
ಆದರೆ..
ಮತ್ತೆ ಏನೂ ನೆನಪಿಗೆ  ಬರುತಿಲ್ಲ.
ಹೋದರೆ  ಹೋಗಲಿ ಎಂದು ಶವರ್ ನತ್ತ ತಲೆ ಚಾಚಿದ...
ಹಿತವಾಗಿತ್ತು. ಹಾಗಿ ಕಣ್ಮುಚ್ಚಿದ.
ಏನೋ ಸದ್ದಾದಂತಾಗಿ ಕಣ್ತೆರೆದವನಿಗೆ 
ಬಿಸಿ ಹಬೆಗೆ  ಎದುರಿದ್ದ ಗಾಜಿನ ಬಾಗಿಲಲ್ಲಿ ಅಸ್ಪಷ್ಟ ಮುಖ ಅದೇ ಮುಖ ಕನಸಲ್ಲಿ ಕಂಡ ಮುಖ
ಅಮ್ಮಾ ಎಂದು ಕಿರುಚಿದ..
ಡಬಡಬ ಬಾಗಿಲ ಬಡಿತದ ಸದ್ದು.
ರಾಮ್ ಏನಾಯಿತು?  ಬಾಗಿಲು ತೆಗಿ.
ರಾಮ್ ಕಣ್ಣುಬಿಟ್ಟ ಶವರ್ ನೀರು ತಲೆ ಮೇಲೆ ಬೀಳುತ್ತಲೇ ಇದೆ...
ಅಂದರೆ ನಾನೀಗ ನೋಡಿದ್ದು ಭ್ರಮೆಯಾ? ಕನಸಾ?
ಗೊಂದಲದೊಡನೆಯೇ ಶವರ್ ಆಫ್ ಮಾಡಿ
"ಏನಿಲ್ಲಾಮ ಬಿಸಿನೀರು ಹಾಕೊಂಡೆ ಅಷ್ಟೇ"
ಎಂದು ನುಡಿದು ಟವಲ್ ಕೈಗಿತ್ತುಕೊಂಡ
ಆದರೂ 
ಮನದಲ್ಲಿ ಪ್ರಶ್ನೆಯೊಂದು ಮೂಡಿತು.
ಯಾರವಳು?


.....










Sunday, October 28, 2018

ಎಂಟನೇ ಆಯಾಮ. ಅಧ್ಯಾಯ ಒಂದು.. ಕನಸೊ ಕನವರಿಕೆಯೋ

ಕಿಟಕಿಯಾಚೆ ಆಕಾಶವನ್ನೇ ನೋಡುತ್ತಿದ್ದೆ. ಆಕಾಶ ಸಮುದ್ರ,  ಈ ಪ್ರಕೃತಿ ಎಲ್ಲಾ ನನಗೆ ಒಂದು ಕೌತುಕವೇ... ಕನಸೋ ನನಸೋ ಗೊತ್ತಿಲ್ಲದ ಅನುಭವ ಆಕಾಶದಲ್ಲಿ ಪಕ್ಷಿಯೊಂದು ಹಾರುತ್ತಾ ಬರುತಿತ್ತು... ಅದೂ ನನ್ನತ್ತಲೇ...ಅರೆ ಹಕ್ಕಿಗೆ ಕೊಕ್ಕಿರಬೇಕಲ್ಲವೇ ? ಆದರೆ ಅದರ ಬದಲಾಗಿ ಒಂದು ಮುಖ... ನಂಬಲ್ಲ ಅಲ್ವಾ?
ನಿಜ ನೀವು ನಂಬಲ್ಲ ಆದರೆ ಆಗಿದ್ದು ಹೇಳತಿದ್ದೇನೆ.
 ಆ ಹಕ್ಕಿ ನನ್ನ ಕಿಟಕಿ ಹತ್ರ ಬಂತು ... ಅಯ್ಯೋ ಅದು ಒಂದು ಗಂಡು ಮುಖದ ಹಕ್ಕಿ. 
ಆ ಮುಖ ನಂಗೆ ಗೊತ್ತು..
ನಮ್ಮ ಫ್ಲಾಟ್ ಮೇಲಿರುವ ಫ್ಲಾಟ್ ನಲ್ಲಿರುವವ..
ಹಕ್ಕಿ ಈಗ ಹಾರುತಿಲ್ಲ.. ನಾನಿಂತ ಕಿಟಕಿ ಮೂಲಕ ಒಳಗೆ ಬಂತು..
ಏನಾಶ್ಚರ್ಯ
ಈಗ ಅದು ಹಕ್ಕಿಯಾಗಿ ಉಳಿದಿಲ್ಲ
ಸಂಪೂರ್ಣವಾದ ಮನುಷ್ಯ ಅದೇ ಮನೆಯ ಮೇಲಿನ ಹುಡುಗ..
ಕಣ್ಣಲ್ಲಿ ಎಷ್ಟೊಂದು ಪ್ರೀತಿ
ನಿಧಾನವಾಗಿ ಬಳಿ ಬಂದು ಬಳಸಿ ಹಿಡಿದು ...
ಕೆನ್ನೆಯನ್ನೆಲ್ಲಾ ಅವನ ಮುಖದಿಂದ ಉಜ್ಜಲಾರಂಭಿಸಿದ.
ಬೇಡ ಅನ್ನಬೇಕು. ದೂರ ತಳ್ಳಿ ಓಡಬೇಕು ಅಲ್ಲವೇ  ನಾನು .. ಆದರೆ ನಾನು ಆ ಘಳಿಗೆಯಲ್ಲಿ ಸಂಪೂರ್ಣವಾಗಿ ಇನ್ವಾಲ್ವ್ ಆಗಿ ಆನಂದ ಪಡೀತಿದೀನಿ.
ಹಾಗೆ ಅವನ ತುಟಿ ನನ್ನ ಕಿವಿಯತ್ತ ಬಂತು..
ಏನೋ ಉಸುರಿದ..
"Do you know who is your real father?"
ಕೋಪ ಉಕ್ಕಿ ಬಂತು..

ದಡಕ್ಕನೇ ಅವನ್ನ ದೂರ ತಳ್ಳಿದೆ.
ಬೀಳಬೇಕಿದ್ದು ಅವನಲ್ಲವೇ?
ಆದರೆ ಬಿದ್ದಿದ್ದು ನಾನು..
ಅಯ್ಯೋ ಅಂತ ಕಣ್ಣುಬಿಟ್ಟವಳಿಗೆ ಗೊತ್ತಾಗಿದ್ದು ಅದು ಕನಸು ಅಂತ.. ಆದರೆ ಬಿದ್ದಿದ್ದು ಕಿಟಕಿಯ ಬಳಿಯೇ.  ಅಲ್ಲಿಗೆ ಯಾವಾಗ ಹೋಗಿದ್ದೆ ಅಂತಲೂ ನೆನಪಿಗೆ ಬರಲಿಲ್ಲ 
ಮೇಡಂ ನೀವೇ ಹೇಳಿ ಇದೂ ಒಂದು ಕನಸಾ?
ಆ ಹುಡುಗ ಯಾಕೆ ಕನಸಲ್ಲಿ  ಬಂದ ಅಂತ ನಂಗೆ ಗೊತ್ತಾಗಿಲ್ಲ.
ಆಲ್ ರೆಡಿ ಲವ್ ಮಾಡಿರೋ ಪ್ರಸಾದ್ ಜೊತೇನೆ ನನ್ನ ಮದುವೆ ನಿಶ್ಚಯ ಆಗಿದೆ
ಇದು ತಪ್ಪಲ್ವಾ ?
ಆ ಹುಡುಗೀ ರಚಿತಾ ಕೇಳುತ್ತಿದ್ದಂತೇ 
"ರಚಿತ ನಂತರ  ಆ ಥರ ಕನಸು ಮತ್ತೆ ?" ಡಾ ಸುನಯನ ಕೇಳಿದರು
" ಓ ಮೈ ಗಾಡ್.. ಒಂದ್ಸಲ ಆದ್ರೆ ನಾನೂ ನಿಮ್ ಹತ್ರ ಬರ್ತಿರಲಿಲ್ಲ ಮೇಡಂ . ಇನ್ನೊಂದು ದಿನ

. ನಾವೆಲ್ಲಾ ಫ್ರೆಂಡ್ಸ್ ಕೇರಳಕ್ಕೆ ಹೋಗಿದ್ದೆವು. ನಾವಿದ್ದ ರೆಸಾರ್ಟ್ ಕಾಡಿನ ಮಧ್ಯೆ ಇತ್ತು. ಒಂದು ಮದ್ಯಾಹ್ನ ಹಾಗೆ ಮಲಗಿದ್ದವಳಿಗೆ ಯಾರೋ ರಚಿತ  ರಚಿತಾ ಅಂತ ಕರೆದಂತಾಯ್ತ ಕಣ್ಣ ಬಿಟ್ಟರೆ ನಾನು ಮಲಗಿರೋದು ಹುಲ್ಲಿನ ಮೇಲೆ ಪಕ್ಕದಲ್ಲಿ ಅದೇ ಹುಡುಗ.. ನನ್ನ ಕೂದಲಲ್ಲಿ ಬೆರಳಾಡಿಸುತ್ತಾ ...
ಹತ್ತಿರ ಬಂದ ಆ ಬಿಸಿ ಉಸಿರು ತುಂಬಾ ತುಂಬಾ ಚೆನ್ನಾಗಿದೆ ಅನಿಸುತಿತ್ತು
"still did yoy not believe me? He is not your real father"

"get lost" 
ಅಂತ ಕಿರುಚಿದ್ದಷ್ಟೇ
"ರಚಿತಾ ಯಾಕೆ  ಕಿರುಚುತಿದೀಯ. ಇಲ್ಲಿ ಯಾಕೆ ಮಲಗಿದೀಯ "
ಅಂತ ನನ್ನ ಫ್ರೆಂಡ್ಸ್ ನನ್ನ ಎಬ್ಬಿಸ್ತಿದಾರೆ.
ಆದರೆ ನಾನು ಮಲಗಿದ್ದು ರೂಮ್ ನಲ್ಲಿ
ಬಟ್ ಈಗ ಇದ್ದಿದ್ದು ರೂಮಿನ ಮುಂದಿನ ಲಾನ್ ನಲ್ಲಿ. ಬೆಡ್ ಮೇಲಿಂದ ಅಲ್ಲಿಗೆ ಹೇಗೆ ಹೋದೆ ಯಾಕೆ ಹೋದೆ ಏನೂ ಗೊತ್ತಾಗ್ತಿಲ್ಲ.
ಬರ್ತ ಬರ್ತಾ ಹುಡುಗ ಐ ಸ್ವೇರ್ ಐ ಡೋಂಟ್ ಈವನ್ ನೋ ಹಿಸ್ ನೇಮ್ ಟೂ.. ತುಂಬಾ ಹತ್ತಿರ ಆಗ್ತಾ ಇದ್ದಾನೆ  ಕನಸಲ್ಲಿ.. ನಾವಿಬ್ಬರೂ ಎಲ್ಲ ಮಾಡಿ ಮುಗಿಸಿದ್ದೇವೆ.. ಆದರೆ ಕನಸಲ್ಲಿ..
 ತುಂಬಾ ಗಿಲ್ಟ್ ಫೀಲ್ ಆಗ್ತಿದೆ..  ಪ್ರಸಾದ್ ಗೆ ಚೀಟ್ ಮಾಡ್ತಿದಿನೇನೋ ಅನಿಸ್ತಿದೆ.

ರಚಿತಾ ಅಳಲಾರಂಭಿಸಿದಳು.
"ಇದೆಲ್ಲಾ ಎಷ್ಟು ದಿನದಿಂದ ಆಗ್ತಿದೆ."

"ಒಂದು ವಾರ ಇರಬಹುದು ಅಷ್ಟೇ"

"ನಾನು ಹೋಗಿ ಆ ಹುಡುಗನ್ನ ಕೇಳೋಕೆ ಆಗುತ್ತಾ? ಅಥವ ಅಪ್ಪನ್ನ ಈ ಬಗ್ಗೆ ಕೇಳೋಕೂ ಆಗ್ತಿಲ್ಲ. ಇನ್ನು ಅಮ್ಮ ಕೇಳಿದ್ರೆ ಕೊಂದೇ ಬಿಡ್ತಾಳೆ"
ಈ ಕನಸಿಗೆ ಏನು ಅರ್ಥ ಅಂತ ಯೋಚಿಸಿ ಸಾಕಾಗಿದೆ..  Iam stressed.."

"ಡೋಂಟ್ ವರಿ ಕೆಲವೊಂದು ಸಲ ಮನಸಿಗೆ ಜಾಸ್ತಿ ಒತ್ತಡ ಆದಾಗ ಹೀಗೆ ಏನೇನೋ ಕನಸುಗಳು ಬರಬಹುದು.
ಸ್ಟ್ರೆಸ್ ರಿಲೀವ್ ಟ್ಯಾಬ್ಲೆಟ್ಸ್ ಕೊಡ್ತೇನೆ ..  it will help you to come out. "
ರಚಿತಾಳನ್ನ ಸಮಾಧಾನ ಮಾಡಿ ಕಳುಹಿಸಿದರೂ ಅವಳ ಕನಸಿನ ಬಗ್ಗೆಯೇ ಸುನಯನಳ
 ಯೋಚಿಸುತಿದ್ದರು...


ರಚಿತಾ ಹೋಗಿ ಒಂದು ಘಂಟೆಯಾಗಿದ್ದಿರಬಹುದಷ್ಟೇ...
ಮೊಬೈಲ್  ರಿಂಗ್ ಆಯಿತು.
ಅದು ರಚಿತಾ ಕಾಲ್.
" ಮೇಡಮ್ .. I have still become panic. "  ನನ್ನ ಫ್ರೆಂಡ್ಸ್ ಹೇಳತಿದಾರೆ ನಾವ್ಯಾವತ್ತೂ ಕೇರಳ ಟ್ರಿಪ್ಗೆ ಹೋಗಿಲ್ಲ ಅಂತ ಹಾಗಿದ್ರೇ ನಂಗೇನಾಗಿದೆ ಆಗ್ತೀದೆ?  ಈಗ ಕಾರಿಂದ ಮನೆಯ ಮುಂದೆ ಇಳಿದಾಗಲೂ ಆ ಹುಡುಗ ಬಂದು ಸೊಂಟ ಹಿಡಿದು "ಡಾರ್ಲಿಂಗ್ ಬಿಲೀವ್ ಮಿ" ಅಂದ ಆದರೆ... ಕಣ್ಣು ಬಿಟ್ಟರೆ
ನಾನೀಗ ನನ್ ಫ್ರೆಂಡ್ಸ್ ಜೊತೆ ಹೋಟೆಲ್ನಲ್ಲಿ ಕೂತಿದ್ದೇನೆ. Iam panic ..please help me.."
ಶಾಕ್   ಆದವರಂತೆ ಮೊಬೈಲ್ ಆಫ್ ಮಾಡಿ ಕೂತರು ಸುನಯನ...

ಮುಂದುವರೆಯುತ್ತದೆ..









Wednesday, December 4, 2013

ಕಣ್ಣು ಮುಚ್ಹೆಂದೆ ನೀ,

ಕಣ್ಣು ಮುಚ್ಹೆಂದೆ ನೀ, 
ನಾ ಮುಚ್ಚಿದ ಕಣ್ಣಿನಿಂದಲೂ 
ಜಗವ ನೋಡಬಹುದೆಂದು ತಿಳಿಯದೆ 
******************************************
ಲೇಖನಿ ಕಿತ್ತರೇನು ಹಾಳೆ ಹರಿದರೇನು 
ಮನದ ಪುಸ್ತಕದಲ್ಲಿ , ಕಣ್ ಪೆನ್ನಿನಲ್ಲಿ 
ನನ್ನದೇ ಜಗದಲ್ಲಿ ಬರೆಯಬಹುದು 
ನಾ ನಿನ್ನ ಹಂಗಿಲ್ಲದೆ
*************************************

ಸೋಲಿಲ್ಲದ ಸರದಾರ

ಸೋಲು ಗೆಲುವಿನ ಹುಡುಕಾಟವಲ್ಲ 
ಮೇಲು ಕೆಳಗೆಂಬ ಪ್ರಶ್ನೆಯೇ ಇಲ್ಲ 
ನಲಿವು, ನರಳಿಕೆಯೂ ನೋವೇ ಇಲ್ಲ 

ಸೂರೆಗೊಂಡ ಸುಖಕೆ ವಾರಸುದಾರರಾರಿಲ್ಲಿ 
ನೀನೋ?, ನಾನೋ? ,ನಾ ನೀ ಬೇರೆಯಾದದ್ದೆಲ್ಲಿ 
ನಾ ನೀ ,ನೀ ನಾ ಆಗಿ ಹೋದ ಶುಭ ಘಳಿಗೆಯಲ್ಲಿ 

ಸೋತರೂ ,ಮೀಸೆಯಡಿ 
ಗೆಲುವಿನ ನಸುನಗೆ 
ನಿಜ ಗೆದ್ದವನು ನೀ,
ಸೋತವಳು ನಾ ನಿನಗೆ

ಗೆಲುವು ಸೋಲತ್ತಟ್ಟಿಗಿರಲಿ ,
ಮತ್ತೆಂದು ಈ ಆಟ
ಸೋಲಿಲ್ಲದ ಸರದಾರ
ಸೋತ ಈ ನೋಟ

ಅಂದು ಇಂದು

ಅಂದು 
ತಣ್ಣನೆ ಗಾಳಿ ಸರ್ರೆಂದು ನೇವರಿಸಿದಂತೆ 
ಆವರಿಸಿದ ದಟ್ಟ ಪರಿಮಳದ ಸೆಳೆತಕೆ 
ಮನ ಮರಳಾಗಿದ್ದು ನಿಜ 

ಎತ್ತಿಟ್ಟ ಹಂಬಲಗಳ ಮೂಟೆಯೊಂದರಲ್ಲಿ 
ಕಾದು ಕಾದು ಸೊರಗಿದ ಆಸೆಯೊಂದು 
ಚಿಗುರಿ ಹಣ್ಣಾಗಿದ್ದೂ ನಿಜ 

ಪೋಣಿಸಿಟ್ಟ ಮುತ್ತುಗಳು ಸಾಲು 
ಸಾಲಾಗಿ ಕೆನ್ನೆಯ ನೇವರಿಸಿ ಆವರಿಸಿ
ಮತ್ತೇರಿಸಿದ್ದೂ ನಿಜ

ಗುಪ್ತ ಗಾಮಿನಿಯ ಗಮನದ ಗಮ್ಯ
ಬದಲಾಗಿ ದಿಕ್ಕಾಪಾಲಾಗಿ ಸುತ್ತಿ
ಸಂತಸದಿ ಬೆವರಾದದ್ದೂ ನಿಜ

ಇಂದು
ಗಾಳಿ ಸುಂಟರಗಾಳಿಯಾಗಿ
ಮೂಟೆ ಮೊಟ್ಟೆಯಾಗಿ
ಮುತ್ತುಗಳು ಕುತ್ತಾಗಿ ದಾರಿ
ಕತ್ತಲಾಗಿದ್ದೂ ನಿಜ

ಮದ್ಯದಂಗಡಿಯ ಹಾದಿಯಲ್ಲಿ ನಡೆದ ತಪ್ಪಿಗೆ ಮದಿರಾ ಮೋಹಿಯ

ದೀಪದಂತಿದ್ದ ಕಂಗಳಿಂದು 
ಜ್ವಾಲೆಯಾಗಿ ಉರಿದುರಿದು 
ಬೀಳುತಿವೆ ಕಣ್ಣೀರ ಜಲಪಾತಕೂ 
ಸೊಪ್ಪು ಹಾಕದೆ ಆರದೆ 
ಮತ್ತೆ ಅಳಿಸುತಲಿದೆ ಗಾಳಿಯಂತೆ 
************
ಅಂದೊಮ್ಮೆ ಸ್ವೀಕಾರ 
ಎಲ್ಲಿಲ್ಲದ ಮಮಕಾರ 
ಪ್ರೀತಿಯ ಮದರಂಗಿಯಲ್ಲ್ಲಿ 
ಹುದುಗಿತ್ತೇ ಅಪಚಾರ 
************
ಹಚ್ಚಿದ ಬೆಣ್ಣೆಯಲಿ
ಸುಣ್ಣವ ಬೆರೆಸಿದ್ದು
ಕಂಡರೂ ಕಾಣದಂತಿದ್ದಿದ್ದು
ಕಂಗಳ ದೋಷವೋ,
ಮನ ಮುಸುಕಿದ್ದ ಮೋಹವೋ
************
ಉರಿತವೋ ಉಳಿದವನ್ನೂ
ಕಳೆವ ಚೂರಿಯಲುಗಿನ ಇರಿತವೋ
ಸಂಭ್ರಮದ ಮಂಟಪದಲ್ಲಿ ಮಸಣದ
ಜಾತ್ರೆ ಬೇಕೆ ?
************
ಮದ್ಯದಂಗಡಿಯ ಹಾದಿಯಲ್ಲಿ
ನಡೆದ ತಪ್ಪಿಗೆ ಮದಿರಾ ಮೋಹಿಯ
ಪಟ್ಟ ಸರಿಯೇ?

ಇತ್ತಿದ್ದ ದರವ ಅತ್ತೇರಿಸಿ

ಇತ್ತಿದ್ದ  ದರವ ಅತ್ತೇರಿಸಿ
ಅತ್ತಿದ್ದ ಬೆಲೆಯ ಇತ್ತಿಳಿಸಿ
ಕಡಲೆ ಕೆಲಸವ ಗುಡ್ಡ ಮಾಡಿ
ಗುಡ್ಡವ  ಬೆಟ್ಟ ಮಾಡಿ
ಬೆಟ್ಟವ  ಏರಲಾರದೆ
ಉಸಿರೆಳೆದೆಳೆದು
ಉಸ್ಸೆನ್ನುವಷ್ಟ್ರರಲ್ಲಿ ರಾತ್ರಿ
ಅಣಕಿಸುತ್ತಿತ್ತು
ನಿನ್ನ ದಿನ ಮುಗಿಯಿತೆಂದು

ಬೆಂಗಳೂರು ಬೆಚ್ಚೆದ್ದು ಹುಚ್ಚೆದ್ದು ಬೀಳುತಿದೆ

ಬೆಂಗಳೂರು ಬೆಚ್ಚೆದ್ದು
ಹುಚ್ಚೆದ್ದು ಬೀಳುತಿದೆ

ಚಿಗುರು ಮೀಸೆಯ ಪಡ್ಡೆಗಳು
ಗಡಸು ದನಿಯ ಪುಂಡರು
ಒಗರೊಗರು ಮೊಗದೋರು
ಪುಡಿ ಮರಿ ರೌಡಿಗಳು
 ಧಾವಿಸಿ ಬರುತಿರಲು ತನ್ನತ್ತ
ಬೆಂಗಳೂರು ಬೆಚ್ಚೆದ್ದು
ಬೀಳುತಿದೆ

ಉದ್ದ ಜಡೆಯ  ಲಲನೆಯರು
ಸುಂದರ ಸಖಿಯರು
ಸುಮಧುರ ವಾಣಿಯರು
ಶಾಂತ ಕನ್ಯೆಯರು
ತನ್ನೊಡಲಿಗೆ ಬಂದಿಳಿವುದ ನೋಡಿ
ಹುಚ್ಚೆದ್ದು  ಕುಣಿಯುತಿದೆ  

ಜಗದೆಲ್ಲಾ  ಮೋಟಾರು ಕಾರುಗಳು
ಮನೆಗೆರೆಡು  ಬೋರುವೆಲ್ಲುಗಳು
ದಾರಿಗತ್ತು ಬಾರುಗಳು
ಅಲ್ಲಲ್ಲಿ ಮಚ್ಚ ಮಾಮಗಳು
ತನ್ನಲ್ಲಿ ನೆಲೆಸಿರುವುದ ನೋಡಿ
ಗಾಬರಿಯಾಗುತಿದೆ

ಅಮ್ಮ ಅಕ್ಕ ಆಂಟಿ ಎಂಬೆಲ್ಲ
ಬೈಗುಳಗಳು
ಅಂಟಿ  ಕೂತ ಹೆಣ್ಣು
ಗಂಡುಗಳು
ಟಿವಿ ಬಿಟ್ಟಿರದ ಮುದ್ದು
ಕಂದಮ್ಮಗಳು
ಪಾರ್ಲರ್ ದಾರಿ ಹಿಡಿದ
ಎಲ್ಲ್ಲಾ ಲಿಂಗಗಳು
,ತನ್ನೊಳಗೊಂದಾದ ಪರಿಗೆ
ಅಚ್ಚರಿ ಪಡುತಲಿದೆ

ಹುಚ್ಚರಾದ ಮೊಬೈಲ್ ಮಂದಿಗಳು
ಇನ್ನೂ ಸರಿಯಾಗದ ರಸ್ತೆ ಬಿರುಕುಗಳು
ಗಗನ ಚುಂಬಿಸೊ  ಕಟ್ಟಡಗಳು.
ಕಟ್ಟಡದೊಳಗಿನ ಬಿಳಿ ಅಂಗಿಗಳು
ಅಂಗಿಯೊಳಗಿನ ಕರಿಮನಸುಗಳು
ತಾನೇ ಆಗಿ ಹೋದ ಪರಿಗೆ
ನಜ್ಜು ಗೊಜ್ಜಾಗಿದೆ ಬೆಂಗಳೂರು

ಸಾಲ  ಕೊಡುವ ಬ್ಯಾಂಕ್ಗಳು
ಹಣ ಕೊಡುವ ಎಟಿಎಂಗಳು
ಅಲ್ಲಿಂದಲೆ ದೋಚುವ ಕರಗಳು
ಸಾಲ ವಸೂಲಾತಿಯ ಗೂಂಡಾಗಳು
ಕಿರಿಕಿರಿ  ಟೆಲಿಕಾಲರ್ಗಳು
ದಾರಿಯಲಿ  ತಡೆವ  'ಹೊಯ್ಸಳ'ರು
ಹಣ ಕೀಳುವ ಮಂಗಳೆಯರು
ತನ್ನಲ್ಲಿ ನೆಲೆಸಿರುವುದ ನೋಡಿ
ಗಾಬರಿಯಾಗುತಿದೆ

ಅಪರಿಚಿತ ದನಿಗೆ ಬೆರಗಾಗಿ
ಕರಗುವ ಹದಿಹರೆಯದವರು
ಪರಿಚಿತರನ್ನೂ ಅಪರಿಚಿತರಾಗಿಸೊ
ಫೇಸ್ ಬುಕ್ ಇ ಮೇಲ್ ಕಮಾಲುಗಳು
ಎಫ್ ಬಿ ಚಾಟುಗಳು ಕಾಫಿ ಡೇ
ಮೀಟುಗಳು, ಡೇಟಿಂಗ್ಗಳು ,
ಕೊನೆಗೆ ಬ್ರೇಕ್ ಆಗುವ
ಹಾರ್ಟುಗಳು
ಹೆಚಾಗಿ ,ಹಾರ್ಟು
 ಕಳೆದುಕೊಳ್ಳುತ್ತಿದೆ ಬೆಂಗಳೂರು

Wednesday, October 23, 2013

ಸವಕಲಾದವು

ಏನೆನ್ನಲಿ ಗೆಳೆಯ ...
ನಿನ್ನೊಂದಿಗಾಡಿದ ಮಾತುಗಳು
ಮರೆತು ಹೋದವು
ನನ್ನೊಳಗಿದ್ದ ಮುನಿಸು,ಬೇಸರ
ಕರಗಿಹೋದವು

ಇತ್ತ ಆಣೆಗಳು ಕೊಟ್ಟ ಭಾಷೆಗಳು
ಕೂಡಿಟ್ಟ ಸಿಟ್ಟಿನ ಸನ್ನಿವೇಶಗಳು
ಅಬ್ಬರಿಸಿ ದಡಕೊರಗಿ ನೀರಾದ
ಅಲೆಗಳಾದವು  

ಅವನ ಮರೆಯಬೇಕೆಂದುಕೊಂಡ
ಮಾತುಗಳೇ ಸವಕಲಾದವು
ನಾ ನಾನಾಗಬೇಕೆಂಬ ಕನಸುಗಳು
ಗಾಳಿಗೆ ಜಾರಿಬಿದ್ದ ಎಲೆಗಳಾದವು

ಕಂಡ ಚಣ ಅವನ ಮನಸು
ಸಿಹಿ ಕಂಡ ಮಗುವಂತಾಯ್ತು
ಕಹಿಎಲ್ಲ  ಮರೆತು ಕುದಿವ ಒಡಲು
ಶಾಂತ ಕಡಲಾಯ್ತು

Wednesday, September 18, 2013

ನಿದಿರೆಗೆ ರಜವನೀ

********************************
ನಿದಿರೆಗೆ ರಜವನೀ ಎಂದನಾತ ಕೇಳೇ
ಮದಿರೆಯ ನಿಶೆಯ ಸುರಿದನಾತ ಕಣೆ
[ಕುದಿವ ಕಡಲ ಕಲುಕಿದವನಾತ  ಗೆಳತಿ
 
ಆಧರವ ತೋರ್ಬೆರಳಲಿ ಮೀಟಿದನೇ
ನಾಸಿಕದ  ನಾಚಿಕೆಯಾ ತೊಲಗಿಸಿದನೇ
ಕಂಗಳಂಚಿಗೆ ತುಟಿಯ ಸಂಗವನೀಯ್ದ ಕಣೇ  

ಕರಕೆ ಸಲ್ಲದ ಸಲುಗೆಯನಿತ್ತನವ
ನೆಲಕೆ ಮೆಲ್ಲಗೆ  ಸೆರಗ ದೂಡಿದನವ
ಬಾಹುವಿಗೆ ನನ್ನ ಒಡ್ಡಿಕೊಂಡವ

ಆ  ಕರಗದ ಆಸೆಗೆ ಸೋತೆನೇ ನಾ ಗೆಳತಿ
 ಈ ಇಂಗದ ದಾಹಕೆ ನೀರಾದನೇ ಆವ ಗೆಳತಿ


Friday, September 6, 2013

ಭಾನುಮತಿ

"ಅರಮನೆ  ಇನ್ನು ನಮ್ಮದಲ್ಲ ತಾಯಿ ಹೊರಡಬೇಕು  ಎಂದ ಸೋಮಿಕನ ಮೊಗ ನೋಡಿದೆ . ಕರುಣೆಯೋ ಆತಂಕವೋ ದುಗುಡವೋ ,ಅಥವಾ ನೆಲೆ ಇಲ್ಲದ ನನ್ನನ್ನೂ ನೋಡಿಕೊಳ್ಳಬೇಕೆ ಎಂಬ  ಪ್ರಶ್ನೆಯೋ ಕಾಣುತಿತ್ತು . "
"ಮಹಾರಾಜರು  ಕೊನೆಯ ಘಳಿಗೆಯವರೆಗೂ ಹೋರಾಡಿದರು ಮಹಾರಾಣಿ . ಆದರೆ ಯುದ್ದಕ್ಕೆ ವಿರುದ್ದ  ನೀತಿಯನ್ನ  ಬಳಸಿ  ಅವರನ್ನ ಮೋಸದಿಂದ ಕೊಂದರಂತೆ " ಹೇಳುವಾಗ, ದನಿ ಮೆತ್ತಗಾಗಿತ್ತು .
"ಮಹಾಭಾರತದ  ಈ ಹದಿನೆಂಟು ದಿನಗಳಲ್ಲಿ ಮೋಸವಿಲ್ಲದೆ ನಡೆದ ಯುದ್ದದ ದಿನ ನೆನಪಿದೆಯೇ ಸೋಮಿಕ?" ಅವನನ್ನ ಪ್ರಶ್ನಿಸಿದೆ . ಆತ  ಉತ್ತರಿಸಲಿಲ್ಲ .
ಮೋಸದಿಂದ ಶುರುವಾದ ದಳ್ಳುರಿ ಮೋಸದೊಡನೆಯೇ ಅಂತ್ಯವಾಗಿತ್ತು . ಪತಿ ಸತ್ತನೆಂಬ ನೋವು ನನ್ನನ್ನು ಸುಡುತ್ತಿರಲಿಲ್ಲ . ಮಗನನ್ನು ಕಳೆದುಕೊಂಡೆ ನೋವೆ ಆಗುತ್ತಿಲ್ಲ  . ಮೈದುನ , ಅಳಿಯ  ಎಲ್ಲರೂ  ಇಡೀ ಕುರುವಂಶವೇ ನಾಮಾವಷೇಶವಾಗಿತ್ತು . ಆದರೂ ಕಣ್ಣಲ್ಲಿ ನೀರು ಬರುತ್ತಿಲ್ಲ . ಬರುವುದಾದರೂ ಹೇಗೆ . ಇಡೀ ನಾಟಕದ ಉದ್ದಕ್ಕೂ ಬೇಡವೆಂದು ಎಷ್ಟು ಹೇಳಿದರೂ  ಸ್ವಪ್ರತಿಷ್ಠೆಗಳೇ ಪ್ರಾಮುಖ್ಯತೆ ಪಡೆದು. ಹೆಂಗಳೆಯರ ಕಣ್ಣೀರಿಗೆ ಬೆಲೆಯೇ ಇಲ್ಲದಂತಾಗಿ .....................  ಅಷ್ಟಕ್ಕೂ ಹೆಣ್ಣಿನ ಮಾತಿಗೆ ಬೆಲೆ ಎಲ್ಲಿದೆ ಮದುವೆಯಿಂದ ಹಿಡಿದು ಆವಳ  ಸಾವಿನವರೆಗೂ ಅವಳ ನಿರ್ಧಾರ  ಆವಳದೆಲ್ಲಿ  ಆಗಿರುತ್ತದೆ?
ಅಷ್ಟಕ್ಕೂ  ಅಂದು ಸ್ವಯಂವರಕ್ಕೆ ಬಂದವರಲ್ಲಿ ಮನಸನ್ನ ಗೆದ್ದಿದ್ದು ಅವನು.. ಕರ್ಣ . ಸ್ವಾಮಿನಿಷ್ಟೆಗೆ ಮತ್ತೊಂದು ಹೆಸರು  ಕರ್ಣ ...  ಅವನಿಗೂ ನನ್ನ ಮೇಲೆ ಮನಸಿದ್ದಿದ್ದು ಸ್ಪಷ್ಟವಾಗಿತ್ತು. ಆದರೂ  ಪ್ರಾಣ ಮಿತ್ರ ಅದಾಗಲೇ  ದ್ರೌಪದಿಯನ್ನು ಗೆಲ್ಲಲಾಗದ ಅಪಮಾನದಿಂದ ಕುದಿಯುತ್ತಿದ್ದನಾದ್ದರಿಂದ  ನನ್ನನ್ನು ಗೆದ್ದು  ಸ್ವಾಮಿಗೆ ಅರ್ಪಿಸಿದ. ಅಂದೆ ನನ್ನ ಮಿತಿ ಅರ್ಥವಾಗಿತ್ತು
ದುರ್ಯೋದನ ನ ಪಟ್ಟ ಮಹಿಷಿ ಯಾಗಿ ಕಾಲಿಟ್ಟ ದಿನವೇ ನೂರಾರು ವಿಷಯಗಳು . ಕುರುಡು ಮಾವ , ಕಣ್ಣಿದ್ದೂ ಗಂಡನಿಗೆ ಕಣ್ಣಾಗದೇ ಬಟ್ಟೆ ಕಟ್ಟಿಕೊಂಡ ಗಾಂಧಾರಿ.
ಮೊದಲಿನಿಂದಲೂ ದ್ವೇಷದ ಭಾವನೇಯೇ ..ಎಷ್ಟು ಸಲ  ಹೇಳಿದ್ದೆ . ಬೇಡ ಅಸೂಯೆ, ದ್ವೇಷ ಸ್ವ ಪ್ರತಿಷ್ಟೆ ಇವುಗಳ ಅಂತ್ಯ ಅವಸಾನದಲ್ಲೇ ಎಂದು
ಕೇಳಲಿಲ್ಲ
ಕರ್ಣನಿಗೂ ಸೆರಗೊಡ್ಡಿ ಬೇಡಿದ್ದೆ. ನಿನ್ನ ಮಿತ್ರನಿಗೆ ಬುದ್ದಿ ಹೇಳೆಂದು
ಆತನೊಬ್ಬ ಕೆಲಸಕ್ಕೆ ಬಾರದ ಒಳ್ಳೇತನದ ಮಿತ್ರ.
ಒಂದೊಳ್ಳೇ ಕೆಲಸಕ್ಕೆ ಒಬ್ಬರೂ  ಕೈ ಚಾಚುವುದಿಲ್ಲ. ಆದರೆ ಕೆಟ್ಟ ಕೆಲಸಕ್ಕೆ ಹಲವಾರು ಮನಸುಗಳು ಜೊತೆಗೂಡುತ್ತವೆ
ಹಾಗೆಯೇ ಆಯ್ತು. ಕೋತಿ ಹೆಂಡ ಕುಡಿದಂತೆ ಆಡತೊಡಗಿದರು ಇವರು.
ಇವರ ತಾಳಕ್ಕೆ ತಕ್ಕಂತೆ ಜೊತೆಗಾರರು
ಅಂದು ದ್ಯೂತದ ದಿನ ಬೇಡಿದ್ದೆ. "ಬೇಡ ದಯವಿಟ್ಟು ನಿಲ್ಲಿಸಿ
ನಿಮ್ಮ ಕಿಚ್ಚು ಪಾಂಡವರ ಮೇಲಿರಲಿ . ಆ ಸಾಧ್ವಿ ದ್ರೌಪದಿಯ  ಮೇಲೇಕೆ" ಎಂದು .  ಕೇಳಲಿಲ್ಲ. ಸೀರೆ ಕಿತ್ತೆಸೆದರು... ಕಿತ್ತೆಸೆದದ್ದು ಬರೀ ಸೀರೆಯನ್ನಲ್ಲ ಹೆಣ್ತನದ  ತಾಳ್ಮೆಯ ಸೆರಗನ್ನು.

ತುಂಬಿದ ಸಭೆಯಲ್ಲಿ  ಆದ ಅವಮಾನವನ್ನು ಹೇಗೆ ತಾನೇ ಮರೆತಾಳು . ಮೊದಲೇ ಅಗ್ನಿ ಶಿಖೆ ...  ಬಂದವಳು ಇಡೀ ಕುರುವಂಶವನ್ನೇ ನಿರ್ನಾಮ ಮಾಡಿದಳು . ಮೊತ್ತ ಮೊದಲಿಗೆ ಹೆಣ್ಣೊಬ್ಬಳು ಸೊಲ್ಲೆತ್ತಬಹುದೆಂದು  ಲೋಕಕ್ಕ್ಕೆ  ತಿಳಿಸಿಕೊಟ್ಟವಳು .

ಎಲ್ಲಾ ಮುಗಿಯಿತು ಅವಳ ಐವರೂ ಪತಿಯಂದಿರು ಉಳಿದರು ಆದರೆ ಮಕ್ಕಳನ್ನೂ ಕಳೆದುಕೊಂಡಳು ನನ್ನಂತೆಯೇ . ಕೊನೆಗೆ ಏನು ಸಾಧಿಸಿದಂತಾಯ್ತು . ರಕ್ತದ ಹೊಳೆಯಲ್ಲಿ ಮತ್ತೆ  ಇರಬೇಕೇ?
ಕುಂತಿ ಹೇಳಿದಳು " ಭಾನುಮತಿ ನೀನು ನನ್ನ ಸೊಸೆಯೇ ಇಲ್ಲೇ ಇರು " ಎಂದು.  ಹಂಗಿನರಮನೆ ಬೇಕೆ ?
ಲಕ್ಷ್ಮಣ ನ ಮಡದಿ ಇನ್ನೂ ಚಿಕ್ಕ ವಯಸ್ಸು ಪಾಪ " ಅತ್ತೆ ನಮ್ಮ ಊರಿಗೆ ಬಂದು ಬಿಡಿ " ಎಂದಳು.
ಅದೂ ಹಂಗಿನರಮನೆಯೇ . ಇನ್ನೂ ತವರು ಯಾರಿದ್ದಾರೆ ಅಲ್ಲಿ ತನ್ನವರೆನ್ನುವವವರು.  ಯಾರೂ ಇಲ್ಲದೆಡೆ ಹೋಗಿಬಿಡೋಣವೆನಿಸುತ್ತಿದೆ . ವಾನ ಪ್ರಸ್ತ್ಯ ವೇ ಪ್ರಾಶಸ್ತ್ಯ .
ಎದ್ದೆ . ಸೋಮಿಕನಿಗೆ ಕೊರಳಲಿ ಉದ್ದ ಹಾರವೊಂದನ್ನು ಕೊಟ್ಟು ನಡೆದೆ .. ಕಾಡಿನತ್ತ  ....
(ಭಾನುಮತಿ ಆಗಾಗ ಕಾಡುತ್ತಾಳೆ ನನ್ನ್ನ ಅವಳ ಅಂತರಂಗ ನಿರೂಪಿಸುವ  ಸಣ್ಣ ಪ್ರಯತ್ನ

Monday, July 1, 2013

ಲೋಪ ಮುದ್ರೆ ..........................ಕಾವೇರಿಯಾಗಿ


"ಲೋಪ ಮುದ್ರೆ ಬಂದೆಯಾ ?"
ಅಗಸ್ತ್ಯನ ದನಿಗೆ ಎಚ್ಚೆತ್ತೆ.. ಈಗಷ್ಟೇ ಊಟ ಬಡಿಸಿ , ಆತ ಊಟ ಮುಗಿಸಿ ಹೊರಗೆ ಹೋದ .. ವಿಶ್ರಮಿಸಲೆಂದು  ಚಾಪೆಯ ಮೇಲೆ ಪವಡಿಸಿದವಳಿಗೆ  ಅಸಾಧ್ಯ ನಿದ್ದೆ .ಕೊಂಚ ಕ್ಷಣಗಳಾಗಿರಬೇಕು . ಆಗಲೇ ಮತ್ತೆ ಬಂದನಲ್ಲ
ಒಂದರೆ ಘಳಿಗೆ ನನ್ನ ಬಿಟ್ಟಿರಲಾರ ಈತ. ಎಲ್ಲಿ ಹೋದರಲ್ಲಿ ಆತನ ಜೊತೆ ನಾನಿರಲೇಬೇಕು ಅದೇನು ಪ್ರೀತಿಯೋ, ಮೋಹವೋ, ಮತ್ತಾರೂ ಮೋಹಿಸಬಾರದೆಂಬ ಜಾಗರೂಕತೆಯೋ ಗೊತ್ತಿಲ್ಲ
ಜನರೆಲ್ಲಾ ನನ್ನನ್ನು ಅಗಸ್ತ್ಯನ ಕಮಂಡಲದಲ್ಲಿ ಬಂಧಿಯಾದವಳೆಂದು ತಮಾಷೆ ಮಾಡುತ್ತಾರೆ. ಹಾಗೆಯೇ ನೀರಾಗಿಯೇ ಬಿಡುತ್ತೆನೋ ಏನೋ. ನನ್ನದೆಂಬ ಆಸೆ ಇಲ್ಲ. ಆತ ಕೂರೆಂದರೆ ಕೂರುವುದು, ನಿಲ್ಲೆಂದ ಕಡೆ ನಿಲ್ಲುವುದು. ಒಟ್ಟಿನಲ್ಲಿ ಸೇರಿದ ಪಾತ್ರೆಯ ರೂಪಕ್ಕೆ ತಕ್ಕಂತೆ ಬದಲಾಗುವ ನೀರಿಗೂ ನನಗೂ ವ್ಯತ್ಯಾಸವಿಲ್ಲದಂತಾಗಿದೆ ...

ಈ ದಕ್ಷಿಣ ಭಾಗಕ್ಕೆ ನಾನು ಬಂದು ಸೇರಿದುದು ಒಂದು ನಿಗೂಢ ರಹಸ್ಯವೇ ಸರಿ

ಸ್ವಯಂ ಈಶ್ವರ ಮತ್ತ್ ಗಂಗಾಮಾತೆ ನನ್ನ ತಂದೆ ತಾಯಿ . ಅವರಿಂದ ನನ್ನ ದತ್ತು ಪಡೆದು ಬಂದವ ಈ ಅಗಸ್ತ್ಯ. ಈ ದಕ್ಷಿಣ ಭಾಗದಲ್ಲಿ ನೀರು ಇಲ್ಲದೆ ನದಿಯೂ ಇಲ್ಲದೆ ವ್ಯವಸಾಯವಿಲ್ಲದೆ ದನಕರುಗಳು, ಜನರು ಸಾಯುತ್ತಿದ್ದರಂತೆ . ಉತ್ತರದಲ್ಲಿ ಯಥೇಚ್ಚವಾಗಿ ನೀರಿದ್ದುದರಿಂದ ಅಲ್ಲಿಂದ ಬಂದ ಹೆಣ್ಣೊಬ್ಬಳು ಇಲ್ಲಿನ ನೀರಿಗೆ ಹಾರವಾದರೆ ನದಿ ನೀರು ಉಕ್ಕಿ ಹರಿಯುತ್ತದೆ ಎಂಬ ಕಾರಣಕ್ಕಾಗಿ ಈ ಅಗಸ್ಯ್ತ ತನ್ನನ್ನು ಅಲ್ಲಿಂದ ದತ್ತು ಪಡೆದದ್ದು. ಆಗಿನ್ನೂ ಪುಟ್ಟ ಕಂದಮ್ಮಳಾಗಿದ್ದ ನನ್ನನ್ನು ತಂದೆಯಂತೆ ಬೆಳೆಸುತ್ತಿದ್ದವನು ಯಾವಾಗ ಯೌವ್ವನ ಕಾಲಿಟ್ಟಿತೋ ಅಂದಿನಿಂದ ಪ್ರೇಮಿಸತೊಡಗಿದ. ಅದೂ ಹುಚ್ಚು ಪ್ರೀತಿ. ನನ್ನನ್ನ ಇಲ್ಲಿ ಕರೆತಂದ ಕಾರಣವನ್ನೆ ಮರೆತುಬಿಟ್ಟ.  ಸದಾ ನನ್ನನ್ನ ಜೊತೆಯೇ ಕರೆದುಕೊಂಡು ಹೋಗುತ್ತಿದ್ದ.. ಕೆಲವೊಮ್ಮೆ ಅವನ ಉತ್ತರೀಯಕ್ಕೆ ನನ್ನ ಸೆರಗನ್ನ ಗಂಟು ಹಾಕಿ ಕಾಯುತ್ತಿದ್ದ. ಮದುವೆಯ ದಿನವಿನ್ನೂ  ಕೂಡಿ ಬಂದಿರಲಿಲ್ಲವಂತೆ. ಆದ್ದರಿಂದ ನನ್ನ ಕೌಮಾರ್ಯ ಹಾಗೆಯೇ ಇತ್ತು. ಅದು ಈ ಮುಪ್ಪಡರಿದ ಮುನಿವರ್ಯನಿಗೇ ಮುಡಿಪು ಎಂದಾಗಿತ್ತು

"ಮುದ್ರಾ  ವನವಿಹಾರಕ್ಕೆ ಹೋಗೋಣಾ ಬಾ" ಕಟ್ಟಿದ ಹಸುವಂತೆ ಅವನ ಹಿಂದೆ ಹೊರಟೆ.. ಗಮಿಸುತಿದ್ದಂತೆ ಮತ್ತೆ ಯೋಚನೆಗಳು ಧಾಳಿ ಇಡಲಾರಂಭಿಸುತ್ತಿದ್ದವು

ನಿಜ ಊಟ ತಿಂಡಿಗೆ ಅಥವ ವಿಹಾರಕ್ಕೆ ಕೊರತೆ ಏನಿಲ್ಲ ಇವನೊಡನೆ . ಆದರೂ ಮನುಷ್ಯನಾದವನಿಗೆ ಬೇಕಾದ ಯಶ್ಚಿಕತ್ ಸ್ವಾತಂತ್ರ್ಯ ಸಿಗದ ಬಾಳೂ ಒಂದು ಬಾಳೇ?

ಒಂದು  ಹೆಜ್ಜೆ ನಡೆಯಬೇಕಾದರೂ ಇವನಾಣತಿ ಬೇಕು, ಇಲ್ಲವಾದಲ್ಲಿ ಮುನಿ ಶಾಪದ ಬೀತಿ

"ಸುತ್ತಲೂ ಅರಳಿದ ಹೂಗಳು, ಹಸಿರು ಕಾಡು, ವನದೇವತೆಯಂತೆ ಜೊತೆಯಲ್ಲಿ ನೀನು.ನನ್ನ ಭಾಗ್ಯವೇ ಭಾಗ್ಯ"

ಮುನಿವರ್ಯ ಗುನುಗುತ್ತಿದ್ದ. ಅದು ಕೇಳಿದರೂ ಕೇಳದಂತೆ ನಡೆಯುತ್ತಿದ್ದೆ..

ನದಿಯೊಂದು ಹರಿಯುತ್ತಿತ್ತು.. ಶಾಂತವಾಗಿ ತನಗಿಷ್ಟ ಬಂದೆಡೆ .. ಯಾರನ್ನೂ ಕೇಳದೆ , ಯಾರನ್ನೂ ಲೆಕ್ಕಿಸದೇ ತನ್ನಷ್ಟಕ್ಕೆ ತಾನು ಹರಿಯುತಿದೆ..

"ಇಲ್ಲೇ ಇರು ಮುದ್ರಾ ಇಲ್ಲಿಂದ ಕದಲಬೇಡ. ನಾನು  ಒಂದಷ್ಟು ಹೂವನ್ನು ಆರಿಸಿ ತರುತ್ತೇನೆ ನಿನ್ನ ಈ ನೀಳ ಕೇಶರಾಶಿಗಾಗಿ, ಈ ಕಮಂಡಲ ನಿನ್ನಬಳಿಯೇ ಇರಲಿ"

ಅಗಸ್ತ್ಯ ಅಲ್ಲಿಂದ ಹೊರಟ.. ಅವನ ಬೆನ್ನನ್ನೆ ದಿಟ್ಟಿಸುತ್ತಾ  ಹಾಗೆ  ನದಿಯದಂಡೆಯಲ್ಲಿ ಕೂತೆ

ಚಿಟ್ಟೆಯೊಂದು ಹಾರುತ್ತಿತ್ತು.. ಹೂವಿಂದ ಹೂವಿಗೆ. ತನಗೆ ಬೇಕಾದಂತೆ ಅತ್ತಿತ್ತ ಆಟವಾಡುತ್ತಾ..

ಜಿಂಕೆ ಮರಿಯೊಂದು ಚಂಗನೆಗರಿ ಓಡಿತ್ತು ತನ್ನವರ ಕೂಡಿಕೊಳ್ಳುವ ಹಂಬಲದಲ್ಲಿ

ನಾ ಮಾತ್ರ ಹೀಗೆಯೇ  ಕಲ್ಲಾಗಿ............

ಮುನಿವರ್ಯನ ಕಮಂಡಲ ಕೈ ತಾಗಿ ಯಾವ ಮಾಯದಲ್ಲೋ ಕೆಳಗೆ ಬಿತ್ತು...

ದುಡದುಡನೆಂದು ಸದ್ದು ಮಾಡುತ್ತಾ ಹೋಗುತ್ತಿದ್ದುದ್ದನ್ನು ಹಿಡಿಯಬೇಕು . ಇಲ್ಲವಾದಲ್ಲಿ ಮುನಿಗೆ ಕೋಪ ಬಂದು ಬೈದಾನು ಎಂದುಕೊಳ್ಳುತ್ತಲೇ ಓಡಿದೆ. ಅದೂ ಓಡುತ್ತಿತ್ತು ನನ್ನೊಡನೆ ಹಮ್ಮಿಗೆ ಬೀಳುವಂತೆ. ಥೇಟ್ ಮುನಿವರ್ಯನಂತೆಯೇ ಜಂಭದಿಂದ.

ಹಾಗೆ ಓಡುತ್ತಿದ್ದವಳ ತಡೆದು ನಿಲ್ಲಿಸಿದ್ದು ಆಜಾನುಬಾಹು ಆ ತರುಣನ ನೆರಳು.

ತೀರ ಸನಿಹದಲ್ಲಿ ನಿಂತವನ ಬಿಸಿಯುಸಿರು ನನ್ನ ತಾಗುತ್ತಿದ್ದಂತೆಯೇ ಮೈ ಮರೆಯುವಂತಾಯ್ತು.
ಮೊಗ ಬಿಸಿಯಾಯ್ತು ಹಾಗೆ ಒಮ್ಮೆ ಉಸಿರೆಳೆದುಕೊಂಡೆ. ಆತನ ಕಂಗಳನ್ನು ಎದುರಿಸದಾದೆ. ಸುಮ್ಮನೆ ತಲೆ ತಗ್ಗಿಸಿನಿಂತವಳ ಕೈ ಹಿಡಿದಾಗ ಮೈ ಜುಮ್ಮೆಂದು ಮತ್ತೂ ಭೂ ಮುಖಿಯಾದೆ. ಕೊಂಚ ಕಾಲವಾಯ್ತೇನೋ
ಅಷ್ಗ್ತೆ

"ಜಾರಿಣಿ" ಅಬ್ಬರದ ದನಿಗೆ ಬೆಚ್ಚಿಬಿದ್ದೆ

ಆ ಯುವಕನೂ ಬೆದರಿದನೆಂದೆನಿಸುತ್ತದೆ. ಮುನಿವರ್ಯರೆಂದರೆ ಸಾಮಾನ್ಯವೇ?

ಶಾಪಕ್ಕೆ ಬೆದರಿ ಆತ ಅಲ್ಲಿಂದ ಕಾಲು ಕಿತ್ತ.

ಉಳಿದವಳು ನಾನು ಮತ್ತು ಅಗಸ್ತ್ಯ

"ಚಂಚಲತೆಗೆ ಮತ್ತೊಂದು ಹೆಸರೇ ಹೆಣ್ಣೆಂದು ನೀನು ಇಂದು ನಿರೂಪಿಸಿದೆ. ಮೊದಲೇ  ನಿರ್ಧರಿಸಿದಂತೆ ನಿನ್ನನ್ನ ಕೆರೆಗೆ ಹಾರವಾಗಿ ಮಾಡಿರಬೇಕಿತ್ತು.. ಇನ್ನೊಬ್ಬನಲ್ಲಿ ಅನುರಕ್ತೆಯಾದ ನೀನು ನನಗೆ ಬೇಡ ಈಗಲೇ ಇದೇ ನದಿಗೆ ಬಿದ್ದು ಸಾಯಿ"

ನನಗೂ ಅದೇ ಬೇಕಿತ್ತು
ಬೇಸತ್ತಿದ್ದೆ.
ಸಾಯುವುದಕ್ಕೂ ಸ್ವಾತಂತ್ರ್ಯವಿಲ್ಲ
ಬದುಕಿಗೂ
ಈ ಬದುಕಿಗೆ ವಿದಾಯ

ಮತ್ತುಚ್ಚರಿಸಲಿಲ್ಲ
ಸುಮ್ಮನೇ ನೀರಿನತ್ತ ನಡೆದೆ... ನೀರಲಿ ಲೀನವಾಗಲಾರಂಭಿಸಿದೆ

ಅಗಸ್ತ್ಯ ಅಬ್ಬರಿಸಿ ನುಡಿಯುತ್ತಿದ್ದ
"ಈ ನದಿ ಕಾವೇರಿ ಎಂದು ಹೆಸರು ಪಡೆಯಲಿ, ನಿನ್ನ ಹೆಸರೂ ಕೂಡ ಇದಕ್ಕೆ ಬೇಡ ... ಕಾವೇರಿ....................................."

ಕಾವೇರಿ ಎಂದುಚ್ಚರಿಸುತ್ತಾ  ನಾ ಮುಂದೆ ನಡೆಯತೊಡಗಿದೆ

ಆಬ್ಬರಿಸಿ ಬರುತ್ತಿತ್ತು ನದಿಯ ನೀರು ಮುಂದೆ ಮುಂದೆ

ಕಾಲು, ಹೊಟ್ಟೆ, ಎದೆಯನ್ನೆಲ್ಲಾ ತಡವಿ ಮುದ್ದಿಸುತ್ತಾ ನನ್ನ ಸೆಳೆದುಕೊಳ್ಳಲಾರಂಭಿಸಿತು

ಕಾವೇರಿಯಾಗತೊಡಗಿದೆ ನಾನೂ
ಅದೇ ನೀರಿನಂತೆ ನಾನೂ
 ಹರಿಯಬೇಕು... ಹರಿಯುತ್ತಲೇ ಇರಬೇಕು

ಶ್ವಾಸ ಕಟ್ಟತೊಡಗಿತು ಕಣ್ ಮುಚ್ಚಲಾರಂಭಿಸಿದೆ
ಲೋಪಮುದ್ರೆ ಕಾವೇರಿಯಾಗಿ ಪರಿವರ್ತಿತಳಾಗತೊಡಗಿದಳು ...ಬಯಸಿದ ಸ್ವಾತಂತ್ರದೊಂದಿಗೆ
ನೀರಿನಲ್ಲಿ ವಿಲೀನವಾದಳು






Sunday, May 5, 2013

ನಾ ಮಾತುಗಾತಿಯಲ್ಲ ನೀ ಮಾತು ಕಲಿಸಲಿಲ್ಲ


ನಾ ಮಾತುಗಾತಿಯಲ್ಲ ನೀ ಮಾತು ಕಲಿಸಲಿಲ್ಲ 
ಆದರೂ ನಿನ್ನೊಡನೆ ನನ್ನ ಮಾತು ನಿಲ್ಲುವುದೇ ಇಲ್ಲ  

ನಾ ಕನಸುಗಾತಿಯಲ್ಲ , ನೀ ಕನಸಲ್ಲಿ ಬರುವುದಿಲ್ಲ 
ಆದರೂ ನನ್ನ ಕನಸು ನಿನ್ನ ಬಿಟ್ಟು ಮುಂದೆ  ಸಾಗುವುದೇ ಇಲ್ಲ 

ನಾ ಪ್ರೀತಿಗಾಗಿ ಅಲ್ಲ, ನೀ ನನ್ನ ಪ್ರೀತಿಸಲೇ ಇಲ್ಲ 
ಆದರೂ ಈ ಮನ ನಿನಪ್ರೀತಿಗಾಗಿ ಮಿಡಿಯುತಿದೆಯಲ್ಲ  

ನಾ ಅಳುವವಳಲ್ಲ , ನೀ ನನ್ನ  ಅಳಿಸಲೇ ಇಲ್ಲ 
ಆದರೂ ನಿನಗಾಗಿ ನಾನತ್ತ ಇರುಳಿಗೆ ಲೆಕ್ಕವೇ ಇಲ್ಲ  

ನಾ ನಿನಗೇನೂ  ಅಲ್ಲ , ನೀ ನನಗಾಗಿ ಅಲ್ಲ 
ಆದರೂ ಜೀವವಿದು ನಿನಗಾಗಿ ಕಾದಿದೆಯಲ್ಲ 

Tuesday, April 30, 2013

ದಾರೀಲಿ ಒಬ್ಬಳೇ ಹೋಗ್ತಿದೀನಿ ಕೊಂಚ ದೂರ ಕಂಪೆನಿ ಕೊಡ್ತೀರಾ?


"ದಾರೀಲಿ ಒಬ್ಬಳೇ ಹೋಗ್ತಿದೀನಿ ಕೊಂಚ ದೂರ ಕಂಪೆನಿ ಕೊಡ್ತೀರಾ?"
ಅವಳ ಮಾತಿಗೆ ಬೆಕ್ಕಸ ಬೆರಗಾಗಿದ್ದೆ
ಹೀಗೂ ಉಂಟೆ.
"ನಾನಾಆಆಆಅ?"
"ಹೌದು ನೀವೆ .ತುಂಬಾ ದೂರ ಒಬ್ಬಳೆ ನಡೆದೂ ನಡೆದೂ ಬೇಸರ ಬಂದಿದೆ.. ಆದರೆ ಸೇರಬೇಕಿರೋ ಕಡೆ ಒಬ್ಬಳೇ ಹೋಗೋದು ಅಂತ ನಿರ್ಧರಿಸಿದ್ದೇನೆ.. ಆದ್ದರಿಂದ ನೀವು ಜೊತೆಗೆ ನಡೀಬೇಕು.. ಅದೋ ಅಲ್ಲಿ ಕಾಣುತ್ತಲ್ಲ ಆ ಪರ್ವತದ ತುದಿಯಾಚೆ ಇರೋ ಒಂದು ಸಣ್ಣ ಹೂವು ನನ್ನ ಗಮ್ಯ"
"ರೀ ನೀವ್ಯಾರು ಅಂತ ಗೊತ್ತಿಲ್ಲ ಹೇಗೆ ಬರೋದು.. ನಾನ್ಯಾರು ಅಂತ ಗೊತ್ತಿಲ್ಲ ಹೇಗೆ ನಂಬ್ತೀರಾ?"
"ಪರಿಚಯವಾಗೋ ಮೊದಲು ಯಾರೂ ಪರಿಚಿತರಾಗಿರಲ್ಲ, ನಿಮ್ಮನ್ನ ನೋಡಿ ನೀವು ನನ್ ಜೊತೆ ಬರಬಹುದು ಅನ್ನಿಸ್ತು. ಕೇಳಿದೆ. ಆಗತ್ತಾ ಇಲ್ವಾ ಹೇಳಿ"..
ಅಬ್ಬಾ ಎಂಥಾ ಖಡಕ್ ಮಾತು ನೋಡಿದರೆ ಒಳ್ಳೆಯವಳ ಹಾಗೆ ಕಾಣ್ತಾಳೆ, ಜೊತೆಗೆ ಚೆನ್ನಾಗೂ ಇದ್ದಾಳೆ. ಒಂದು ಕೈ ನೋಡೆ ಬಿಡೋಣ ಅಂತ ನನ್ನೆಲ್ಲಾ ಕೆಲಸಗಳನ್ನ ಬದಿಗಿಟ್ಟು ಅವಳೊಂದಿಗೆ ಹೊರಡಲನುವಾದೆ
"ಆಯ್ತು ಬರ್ತೀನೆ. ನಡೀರಿ"
"ಸೋ ನೈಸ್ ಆಫ್ ಯು... "
"ಎಲ್ಲಿಂದ ಬರ್ತೀದೀರಿ ಏನ್ ಕತೆ... ಹಿಂಗೆ ಚೆಂದ ಇರೋ ಹುಡುಗೀರು ಒಬ್ಬೊಬ್ಬರೇ  ಓಡಾಡ್ಬೇಡಿ,,ಕಾಲ ಕೆಟ್ಟು ಹೋಗಿದೆ."
ಮಾತಿಗೇಳೀಲೇಬೇಕಿತ್ತು
"ನಾನು ಬರ್ತಿರೋದು ಎಲ್ಲಿಂದ ಅನ್ನೋದು ನಂಗೇ ಗೊತ್ತಿರದ ವಿಷಯ. ಯಾಕೆಂದರೆ ನನಗೆ ನೆನಪಿದ್ದಾಗಿಂದಾನೂ ಜೀವನ ಅಲೆದಾಟದಲ್ಲೆ ಸಾಗಿದೆ.. ಅಪ್ಪ ಅಮ್ಮ ಊಹೂ ನೆನಪಿಲ್ಲ... ಕತೆ ಇನ್ನೂ ಶುರೂನೆ ಆಗಿಲ್ಲ... "
ತಲೆ ಕೆಡ್ತಿತ್ತು. ಇವಳ ಜೊತೆ ಬಂದು ತಪ್ಪು ಮಾಡಿದೆ ಅನ್ನಿಸ್ತಿತ್ತು
"ಅಲ್ಲ ಹುಚ್ಚರ ಥರ ಮಾತಾಡ್ತಿದೀರ ಅಂತ ಅನ್ನಿಸ್ತಿಲ್ವಾ?"
"ಹೌದು ಕೆಲವರಿಗೆ ನಾನು ಹುಚ್ಚಿ ಅಂತಾನೆ ಅನ್ನಿಸುತ್ತೆ..ಆದರೆ ನಾನು ಹುಚ್ಚಿ ಅಲ್ಲ "
"ಮತ್ತೆ ಯಾಕೆ ಈ ಥರ ಒಗಟಿನ ಜೀವನ?ಮಾತು"
"ನಿಮಗೆ ಒಗಟು ಅನ್ಸುತ್ತೆ. ಆದರೆ ನನಗೆ ಅದು ನನ್ನ ಮಾತು...  ನನ್ನ ಜೀವನದಲ್ಲಿ ಏನು ನಡೆದಿದೆ ಅಂತ ನಿಮಗೆ ಹೇಗೆ ಗೊತ್ತಾಗುತ್ತೆ?"
"ಬಟ್ ನಂಗೆ ಅರ್ಥಾ ಆಗ್ತಿಲ್ಲ ನಿಮ್ಮ ಮಾತು ಎಲ್ಲ"
"ಬೇಡ ಅರ್ಥ ಆಗೋ ಅಷ್ಟು ಸುಲಭವಾಗಿ ನಾನು ಯಾರಿಗೂ ದಕ್ಕೋಳಲ್ಲ. ಹಾಗಾಗಿ ಅರ್ಥ ಮಾಡಿಕೊಂಡರೂ ಉಪಯೋಗ ಇಲ್ಲ"
"ಯಾಕೋ ನಿಮ್ಮ ಜೊತೆ ಬಂದು ತಪ್ಪು ಮಾಡಿದೆ ಅನ್ಸುತ್ತೆ"ಸೋಲೊಪ್ಪಿಕೊಂಡೆ
"ಹಾಗಿದ್ದರೆ ನಿಮ್ಮ ತಪ್ಪನ್ನ ಇಲ್ಲೇ ನಿಲ್ಲಿಸಿ. ನೀವು ವಾಪಾಸ್ ಹೋಗಬಹುದು"
"ಅದೇ ಬೆಟರ್ ಅನ್ಸುತ್ತೆ. ಮತ್ತೆ ಎಂದಾದರೂ ಸಿಗೋಣ ಬರ್ತೀನಿ" ಹಿಂದೆ ತಿರುಗಿ ಹೋಗುತ್ತಿದ್ದಂತೆ ಕೇಳಿಸಿತು ಅದೇ ದನಿ ಮತ್ತಾರದೋ ಬಳಿಯಲ್ಲಿ
"ದಾರೀಲಿ ಒಬ್ಬಳೇ ಹೋಗ್ತಿದೀನಿ ಕೊಂಚ ದೊರ ಕಂಪೆನಿ ಕೊಡ್ತೀರಾ?"

Tuesday, April 2, 2013

ರಾಧೆ ನನ್ನ ಕಣ್ಣಲ್ಲಿ...........


ನೆನ್ನೆ ಒಬ್ಬರು ಕಳಿಸಿದ ರಾಧಾಕೃಷ್ಣರ ಚಿತ್ರವನ್ನ ನೋಡಿ ಅನಿಸಿದ್ದು
ಇಲ್ಲಿಯವರೆಗೂ ನನಗೆ ಕಗ್ಗಂಟಾಗಿರುವುದೇ ಈ ರಾಧಾ ಕೃಷ್ಣರ ಕಲ್ಪನೆ
ಕೇವಲ  ಕ್ರಿಷ್ಣನ ಗೋಕುಲ  ನಿರ್ಗಮನದವರೆಗೆ ಮಾತ್ರ ರಾಧೆ ಇರುತಾಳೆ . ನಂತರ ಆಕೆ ಏನಾದಳು . ಎಲ್ಲಿ ಹೋದಳು?
ಮದುವೆಯಾದ ಹೆಣ್ಣೊಬ್ಬಳು ತನಗಿಂತ ಕಿರಿಯನೊಬ್ಬನನ್ನು ಪ್ರೀತಿಸುತ್ತಾಳೆ ಅವರಿಬ್ಬರ  ನಡುವೆ ಇದ್ದಿದ್ದು ನಿಷ್ಕಾಮ ಪ್ರೀತಿಯೇ ಸ್ನೇಹವೇ? ರಾಧಾಕೃಷ್ಣರ ಪ್ರೇಮವನ್ನ ಅನುಪಮವೆಂದು ಕೊಂಡಾಡುವ ಲೋಕ ಅದೇ ಬಗೆಯ ಸಂಬಂಧಕ್ಕೆ ಅನೈತಿಕತೆ ಎಂಬ ಹೆಸರನ್ನು ಇಡುತ್ತೆ.
ಆತನನ್ನು ನೋಡಲು ಮಗುವನ್ನು ಪತಿಯನ್ನು ಬಿಟ್ಟು ಯಮುನೆಯ ತೀರಕ್ಕೆ ಬರುತ್ತಾಳೆ ಅದು ಕೃಷ್ಣನ ಮೇಲಿರುವ ಭಕ್ತಿ ಎನ್ನುತ್ತದೆ ಪುರಾಣ. ಅದೇ ಬಗೆಯಲ್ಲಿ ಮದುವೆಯಾದ ಹೆಣ್ಣೊಬ್ಬಳು  ತನಗಿಷ್ಟವಾದವರನ್ನ ಹುಡುಕುತ್ತಾ ಹೊರಟರೆ ಲೋಕ ಕಳಂಕಿನಿ ಎಂಬ ಪಟ್ಟ ಕಟ್ಟುತ್ತದೆ
ಒಂದು ಕಡೆ ವೈವಾಹಿಕ ಬಂಧಕ್ಕೆ  ಕಟ್ಟು ಪಾಡು ಎಸೆಯುವ  ಈ ಲೋಕ, ಅದೇ ವಿವಾಹಕ್ಕೆ ಹೊರತಾದ ಕಲ್ಪನೆಗಳಿಗೆ ಮಣೆ ಹಾಕುತ್ತದೆ.
ಆದರೂ ರಾಧೆ ನನಗೆ ಅಂತಲ್ಲ ಎಲ್ಲಾ ಹೆಂಗಸರಿಗೂ ಒಂದು ಬಗೆಯ ಕುತೂಹಲಭರಿತ ರಸಕಾವ್ಯ
ಆಕೆ ಏಕೆ ಮತ್ತು ಹೇಗೆ ಕೃಷ್ಣನಲ್ಲಿ ಅನುರಕ್ತೆಯಾದಳು
ಎಲ್ಲೂ ಆಕೆ ಪತಿಯಿಂದ ಬೇಸತ್ತ ಅಥವ ನೊಂದ ಸನ್ನಿವೇಶಗಳು ಉಲ್ಲೇಖವಾಗಿಲ್ಲ. ಆದರೂ ಆಕೆ ಅನುರಕ್ತೆಯಾದದ್ದು ಕೃಷ್ಣನ ಚೆಲುವಿಗೆ ಆತನ ತುಂಟಾಟಕ್ಕೆ ಮತ್ತು ಮುರಳಿಗಾನಕ್ಕೆ
ಇಂದಿಗೂ ರಾಧೆ ಕೃಷ್ಣರ ಸಂಬಂಧ ಅನುಪಮ  ಪ್ರೇಮಕ್ಕೆ ಸಾಕ್ಷಿಯಾಗಿದೆ ಅಂತಾರೆ
ಹಾಗಾದರೆ ಪರಿಶುದ್ದ ಪ್ರೇಮದ ಪರಿಕಲ್ಪನೆ ಏನು? ಸಂಬಂಧಗಳನ್ನು ಮೀರಿದ ಮೋಹವೇ, ಭಕ್ತಿಯೇ, ಅನುಬಂಧವೇ?
ಗೊತ್ತಿಲ್ಲ
ಆದರೂ ರಾಧೆ ನನ್ನನ್ನ ಸೆಳೆಯುತ್ತಾಳೆ ಕೃಷ್ಣನನ್ನ ಮೀರಿಸಿ
ಎಲ್ಲೋ ರಾಧೆ ಪ್ರತಿ ಮಹಿಳೆಯರ ಪ್ರತಿರೂಪವೇನೋ ಅನ್ನುವಂತೆ



Saturday, March 2, 2013

ಕಣ್ಣ ಹನಿಗಳು ಕೆನ್ನೆಯ ಮೇಲೆ ಜಾರುತಿಲ್ಲ

ಕಣ್ಣ ಹನಿಗಳು ಕೆನ್ನೆಯ ಮೇಲೆ ಜಾರುತಿಲ್ಲ 
ಕಣ್ಣ ಬಿಡಲೊಲ್ಲದ ಆ ಪ್ರೀತಿ ನಿನಗೇಕೆ ಇಲ್ಲ ?

ಕೆನ್ನೆಗಳವು ತೋಯದೇ ಬಾಡುತಿವೆ 
ಬಾಡದ ಪ್ರೀತಿಗೆ ಈ ತಿರಸ್ಕಾರ ತರವೇ

ತುಟಿಯ ಕೊಂಕಲಿ ನೋವು ಮಿಡಿಯುತಿದೆ 
ಕೊಂಕಿರದ ಒಲವಿಗೆ ನೀನೇಕೆ ಬೆನ್ನಾದೆ 

ಮುಂಗುರುಳು ಹಣೆಯ ಮೇಲೆಯೇ ಎಂದೆಂದೂ 
ಪಾಪದ ಈ ಮನಸು ಮುಡಿಪು ನಿನಗೆಂದೂ

ನನಗೂ ಒಂದು ತಪರಾಕಿ ಸಾಂಗ್ ಬರೆಯೋಕೆ ಬರುತ್ತಾ ಅಂತ ಒಂದು ಟೆಸ್ಟ್

ನನಗೂ ಒಂದು ತಪರಾಕಿ ಸಾಂಗ್ ಬರೆಯೋಕೆ ಬರುತ್ತಾ ಅಂತ ಒಂದು ಟೆಸ್ಟ್ 
ಏನೋ ಹುಡುಗ  ಕಣ್ಣಲ್ಲಿ ಗಲಿಬಿಲಿ 
ನಗುವೇ ಏಕೆ ಇಡದೆ  ಕಚಗುಳಿ 
ಥೈ ಥಕ್ ಎನಿಸುತಾ ಆಡಿಸಲೇ ಕಥಕಳಿ

ಇದು ಮೆಂಟಲ್  ಹಾಸ್ಪಿಟಲ್  ಕೇಸಾ 
ನಿನ್ ಬ್ರೈನ್  ಒಳಗೆ ಲೂಸಾ?
ನಡೆಯೋಲ್ಲ ನಿನ್ನ ಆಟ  ಜಾ ಜಾ 

ಕೆದರಿದ ತಲೆಯೋ ಕೆಂಪೋ ಕಣ್ಣೋ 
 ಅಯ್ಯೋ  ರಾಮ ನೋಡೆ ನಾ ಅಣ್ಣೋ 
 ರಾತ್ರಿಯೂ ನಿದಿರೆ ಇಲ್ಲವೇ 
ಹಗಲೂ ಮದಿರೆ ಬೇಕೇ?
ತರಳೆ   ತರಲೆ ಸಾಕಾಯ್ತೇ?

ಪೀಸು ಫಿಗರು  ಅಂದುಕೊಂಡು 
ಅಲೆದಾಡಿ ನೀನಾದೆ ಪುಂಡು 
ನೀ ಮಾಡಿದ್ದು  ಸಾಕು   ಎಂ ಬಿ ಬಿ ಎಸ್ 
ಮನೆ ಬಿಟ್ಟು ಬೀದಿ  ಸುತ್ತಿ ಟೈಮ್ ವೇಸ್ಟ್
ಇನ್ನಾದರೂ ಆಗು ಎಲ್ಲರಿಗೂ  ನೈಸ್  ನೈಸ್  

Thursday, February 28, 2013

ಸಚ್ ಕೆಹ ರಹಾ ಹೈ ದಿವಾನ ಹಾಡಿನ ಭಾವಾನುವಾದ , ಹೆಣ್ಣಿನ ಮನಸಿನಂತೆ)

ಸಚ್ ಕೆಹ ರಹಾ ಹೈ ದಿವಾನ ಹಾಡಿನ ಭಾವಾನುವಾದ , ಹೆಣ್ಣಿನ ಮನಸಿನಂತೆ)

ಸತ್ಯವ ಹೇಳುವೆ ಹುಡುಗಿ
ನೀ ಹೋಗಬೇಡ ಕರಗಿ
ಸತ್ಯವ ಹೇಳುವೆ ಹುಡುಗಿ ಕೇಳು
ನೀ ಹೋಗಬೇಡ ಕರಗಿ

ಸುಳ್ಳದು ಪ್ರೇಮದ ಆಣೆ ಎಲ್ಲ
ಸುಳ್ಳದು ನಂಬಲೇಬೇಡ

ಯಾರ ಪ್ರತಿ ಕ್ಷಣವೂ
ನಂಬಿಕೆ ಇಟ್ಟು ,ಪೂಜಿಸುತ್ತಿದ್ದೆ
ಅವನೇನೆ ನನ್ನ ಹೃದಯ ಒಡೆದ
ಒಂಟಿ ಮಾಡಿ ಹೋದಾಆಆಅ
!ಸತ್ಯವ ಹೇಳುವೆ ಹುಡುಗಿ!

ಸಂಜೆ ಸಂಜೆ ಅಂತಹ ಒಂದು ಸಂಜೆ
ಅಂದೇ ಸಂಜೆ ಅವನಾ ನಾ ಕಂಡೆ ಕಂಡೆ
ಶರಣಾಗೇ ಹೋದೆ ಹುಸಿ ಮಾತಿಗೆ
ಸಂಜೆ ಸಂಜೆ ಅಂತಹ ಒಂದು ಸಂಜೆ
ಅಂದೇ ಸಂಜೆ ಅವನಾ ನಾ ಕಂಡೆ ಕಂಡೆ
ಶರಣಾಗೇ ಹೋದೆ ಹುಸಿ ಮಾತಿಗೆ

ಬಂದೆನ್ನ ಮನವ ಸೇರಿರುವ
ಈಗವನ ಕೊರತೆ ಕಾಡುತಿದೆ
ನನ್ನಿಂದ ದೂರವಾಗಿರುವ
ನಾನವನ ಬಯಸಲೇಕೆ
!ಸತ್ಯವ ಹೇಳುವೆ ಹುಡುಗಿ!

ಅವನು ಅವನೇ ಹುಲಿಯಂಥವನು
ಅವನು ಅವನೇ ಕಲ್ಲಾದವನು
ಅವನ ನಶೆಯಲಿ ಮನ ನೋಯುತಿದೆ
ಅವನು ಅವನೇ ಹುಲಿಯಂಥವನು
ಅವನು ಅವನೇ ಕಲ್ಲಾದವನು
ಅವನ ನೆನಪಲಿ ಮನ ಮರಗುತಿದೆ
ಒಂದಲ್ಲ ಒಂದು ದಿನ ಮರೆಯುವೆ ನಾನವನ
ಅಳಿಸಿಬಿಡುವ ಅವನಾ ನೆನಪನ್ನ
ಆ ಕಲ್ಲ ನಾನು ಬಯಸಲ್ಲ 
ಹೇಳವಗೆ ಈ ಮಾತಾ....

Such Keh Raha Hain Deewana
Dil Dil Na Kisi Se Lagana
Such Keh Raha Hain Deewana
Dil Dil Na Kisi Se Lagana
Jhoothe Hain Yaar Ke Vaade Saare
Jhoothi Hain Pyaar Ki Kasme
Maine Har Lamha Jise Chaaha
Jise Pooja Usi Ne Yaaron Mera Dil Toda 
Toda Tanha Tanha Chhoda
Such Keh Raha Hain Deewana
Dil Dil Na Kisi Se Lagana
Jhoothe Hain Yaar Ke Vaade Saare
Jhoothi Hain Pyaar Ki Kasme
Maine Har Lamha Jise Chaaha
Jise Pooja Usi Ne Yaaron Mera Dil Toda 
Toda Tanha Tanha Chhoda

Mausam Mausam Tha Suhana Bada
Mausam Mausam Maine Dekha Use
Hua Main Paagal Bas Palbhar Mein
Mausam Mausam Tha Suhana Bada
Mausam Mausam Maine Dekha Use
Hua Main Paagal Bas Palbhar Mein
Aake Basi Hain Woh Mere Mann Mein
Uski Kami Hain Ab Jeevan Mein
Woh Door Hain Meri Nazron Se
Kyon Use Main Chaahon
Such Keh Raha Hain Deewana
Dil Dil Na Kisi Se Lagana
Jhoothe Hain Yaar Ke Vaade Saare
Jhoothi Hain Pyaar Ki Kasme
Maine Har Lamha Jise Chaaha
Jise Pooja Usi Ne Yaaron Mera Dil Toda 
Toda Tanha Tanha Chhoda

Sundar Sundar Woh Haseena Badi
Sundar Sundar Main To Khone Laga
Uske Nashe Mein Bin Piye Behka
Sundar Sundar Woh Haseena Badi
Sundar Sundar Main To Khone Laga
Uske Nashe Mein Bin Piye Behka
Ek Din Use Bhoola Doonga Main
Uske Nishaan Mita Doonga Main
Chaahonga Na Main Us Patthar Ko
Jaa Use Bata De
Maine Har Lamha Jise Chaaha
Jise Pooja Usi Ne Yaaron Mera Dil Toda 
Toda Tanha Tanha Chhoda