Thursday, May 28, 2009

ಹೆಸರಿನ ಹಂಗಿಲ್ಲದ ಸಂಬಂಧ

ಆಕೆ ಹಾಗೆ ಜೀವನದ ಪ್ರತಿಯೊಂದು ಘಳಿಗೆಯನ್ನ ಇಂಚಿಂಚಾಗಿ ಅನುಭವಿಸಬೇಕೆನ್ನುವಳು. ಪ್ರತಿಯೊಂದು ಘಳಿಗೆಯೂ ಅವಳಿಗೆ ಸ್ಮರಣೀಯವಾಗಬೇಕೆಂಬ ಬಯಕೆ. ಪ್ರತಿ ಕ್ಷಣದಲ್ಲೂ ಯಾವುದಾದರೂ ಘಟನೆ ನಡೆಯುತ್ತದೆ ಎನ್ನುವ ನಿರೀಕ್ಷೆ ಇಟ್ಟವಳು.
ಹಾಗೆ ಆ ಹುಡುಗನೂ ಸುಂದರ ಕನಸುಗಳ ಸುತ್ತಾ ಚಲಿಸುವವ. ಮಾತಿನಲ್ಲಿ ಪ್ರಪಂಚದ ಅಷ್ಟೂ ಸೊಗಸನ್ನು ಕಟ್ಟಿಕೊಡಬಲ್ಲವನು. ವಾಸ್ತವಕ್ಕಿಂತ ಕಲ್ಪ್ನನಾ ಲೋಕದ ಸಂಚಾರಿ
ಇಬ್ಬರೂ ಅಕಾಶ ಇಷ್ಟಿರಬೇಕಿತ್ತು ಭೂಮಿ ಚಪ್ಪಟೆಯಾಗಿರಬೇಕಿತ್ತು ಎಂಬೆಲ್ಲ್ಲಾ ಅಸಾಧ್ಯ ವಿಷಯಗಳನ್ನು ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು. ಪುಸ್ತಕಗಳ ಮುಖ ಪುಟದ ಶೈಲಿಯಿಂದ ಹಿಡಿದು ಅವುಗಳಕೊನೆಯ ಪುಟದ ವರೆಗೆ ಪ್ರತಿಯೊಂದು ಪುಟವನ್ನೂ ಬಿಡದೆ ಚರ್ಚಿಸುತ್ತಿದ್ದರು.

ಅವಳು ಕಾಲೇಜಿನ ಉಪನ್ಯಾಸಕಿ ಈತನೋ ಅದೇ ಕಾಲೇಜಿನ ವಿದ್ಯಾರ್ಥಿ ಇಬ್ಬರ ನಡುವೆಯೂ ಮಾತಿಗೆ ಕೊರತೆ ಇರಲಿಲ್ಲ
ಮಾತು ಮಾತಿಗೆ ನಗು ನಲಿವು . ಪ್ರಪಂಚದ ಸುಂದರ ಕ್ಷಣಗಳನ್ನು ನಿಷ್ಕಪಟ ಮನದಿಂದ ಆಸ್ವಾದಿಸುತ್ತಿದ್ದರು.ಇಬ್ಬರ ಮನದಲ್ಲೂ ಯಾವುದೇ ಅಪನಂಬಿಕೆ ಇರಲಿಲ್ಲ.
ಕಾಲೇಜು ಬಿಡುತ್ತಲೇ ಈತ ಲೈಬ್ರರಿಯಲ್ಲಿ ಹಾಜಾರು .ಈಕೆಯೂ ಹಿಂದೆಯೇ . ಜೊತೆ ಜೊತೆಗೆ ಕೂತು ಪುಸ್ತಕಗಳನ್ನೆಲ್ಲಾ ಶೋಧಿಸಿ ತಮಗೆ ಹಿಡಿಸಿದ ಪುಸ್ತಕಗಳನ್ನು ಓದುತ್ತಿದ್ದರು. ಅವಳು ಓದಿದ್ದನ್ನು ಅವನಿಗೆ ಅವನು ತನಗನಿಸಿದ್ದನ್ನು ಅವಳಿಗೆ ಹೇಳಿ ಖುಷಿ ಪಡುತ್ತಿದ್ದರು.
ಹಿಡಿಸಿದ ನಾಟಕ , ಸಿನಿಮಾ, ಸ್ಥಳಗಳಿಗೆಲ್ಲಾ ಸುತ್ತಾಡತೊಡಗಿದ್ದರು. ಅವರ ಸಂಬಂಧ ಗುರು ಶಿಷ್ಯರನ್ನು ಮೀರಿದ್ದಾಗಿತ್ತು. ಆದರೆ ಅದೇನು ಸ್ನೇಹವೇ ಅಥವ ಪ್ರೀತಿಯೇ ಎಂಬುದು ಕಾಲೇಜಿನ ಎಲ್ಲರಿಗೂ ಎಲೆ ಅಡಿಕೆಯಾಗಿತ್ತು. ಕಾಲೇಜಿನವರ ಗುಸುಗುಸು ಪಿಸುಮಾತು ಅವರನ್ನು ತೊಂದರೆಗೊಳಿಸಲಿಲ್ಲ
ಅವರಿಬ್ಬರಿಗೂ ಗೊತ್ತಿತ್ತು ತಾವು ಪ್ರೇಮಿಗಳಲ್ಲ ಸ್ನೇಹಿತರಲ್ಲ. ಸ್ನೇಹಕ್ಕೂ , ಪ್ರೇಮಕ್ಕೂ ಮೀರಿದ , ಪದಗಳಲ್ಲಿ ಹೇಳಲಾಗದ ಮಾತಿನಲ್ಲಿ ವರ್ಣಿಸಲಾಗದಂತಹ ನಂಟಿದು ಎಂದು.
ಒಮ್ಮೊಮ್ಮೆ ಅವಳೂ ಯೋಚಿಸುತ್ತಿದ್ದಳು .ತಾನೇಕೆ ಅವನ ಬಳಿ ಇಂತಹ ಆತ್ಮೀಯತೆ ಹೊಂದಿದ್ದೇನೆ. ಗಂಡನನ್ನೂ ಅವನನ್ನೂ ಪ್ರೀತಿಯ ತಕ್ಕಡಿಯಲ್ಲಿ ನಿಲ್ಲಿಸಿದರೆ ಆ ಹುಡುಗನೇ ಹೆಚ್ಚು ತೂಕ . ಗಂಡನೂ ಒಳ್ಳೆಯವನೇ ಆದರೆ ಭಾವನೆಗಳ ಮಹಾಪೂರದಲ್ಲಿ ಕೊಚ್ಚುವ ವ್ಯಕ್ತಿಯಲ್ಲ. ಅವಳ ಕಲ್ಪನೆಗೆ ರೆಕ್ಕೆ ಆಗಲೊಲ್ಲ. ಕನಸಿಗೆ ಸಾಗರವಾಗುವಂತಹವನಲ್ಲ. ಎಷ್ಟೋ ಬಾರಿ ಅವಳ ಕಾಲ್ಪನಿಕ ಜಗತ್ತನ್ನು ಕೀಟಲೆ ಮಾಡಿದ್ದಾನೆ ಅವಳ ಓದಿನ ಹುಚ್ಚಿಗೆ ಹಣ ವ್ಯರ್ಥವಾಗುತ್ತಿರುವುದಕ್ಕೆ ಬೈದಿದ್ದಾನೆ, ಅವಳ ಮನದಾಳ ಭಾವನೆಗಳಿಗೆ ಸ್ಪಂದಿಸಿ ಅದಕ್ಕೆ ಪ್ರತ್ಜಿ ಭಾವನೆ ಕೊಡುವ ಹೃದಯಕ್ಕಾಗಿ ಹಾತೊರೆಯುತ್ತಿದ್ದಳು. ಆ ಹೃದಯ ಅವಳದೇ ಪ್ರತಿ
ಮನೆಯಲ್ಲಿ ಗಂಡನಿಗೆ ಈಬಗ್ಗೆ ಬೇಸರ. ಎಷ್ಟೇ ಎಜುಕೇಟೆಡ್ ಆದರೂ ಅವನೂ ಗಂಡನಲ್ಲವೇ.
ಆಗಾಗ ಮನೆಯಲ್ಲಿ ಈಬಗ್ಗೆ ಮಾತಾಗುತ್ತಿತ್ತು. ಆದರೆ ತನ್ನ ಮನದಲ್ಲಿದ್ದ ಭಾವನೆಯನ್ನು ಮಾತಿನಲ್ಲಿ ಹೇಳಲು ಗಂಡನಿಗೆ ಕಷ್ಟ . ತಾನೇನಾದರೂ ಚೀಪ್ ಎಂದುಕೊಂಡರೆ ಎಂದು ಹಾಗಾಗಿಯೇ ಯಾವುದೇ ಅಪಮಾತು ಮನೆಯಲ್ಲಿ ಬರುತ್ತಿರಲಿಲ್ಲ
ಆದರೆ ಇದೊಂದು ಥರ ಶೀತಲ ಸಮರವಾಗಿತ್ತು. ಸಂಸಾರದ ಹಡುಗಿನಲ್ಲಿ ಅಪನಂಬಿಕೆ ಪ್ರಯಾಣಿಕನಾದರೆ ಹಡಗು ಸರಾಗವಾಗಿ ಸಾಗುವುದೆಂತು? ಅವರಿಬ್ಬರ ನಡುವೆ ಮೌನ ತಾಂಡವವಾಡತೊಡಗಿತು. ಇಬ್ಬರಿಗೂ ಅರಿವಿಲ್ಲದೇ ಕಂದರವೊಂದು ಬೆಳೆಯುತ್ತಾ ಬೆಳೆಯುತ್ತಾ ಬೃಹದಾಕಾರವಾಯ್ತು.
ಆದರೆ ಅವಳು ಕೇರ್ ಮಾಡಲಿಲ್ಲ. ಅವಳಿಗೆ ಆ ಹುಡುಗನ ಬಗ್ಗೆ ಎಲ್ಲಿಲ್ಲದ ಮಮತೆ. ಅವನನ್ನು ಒಮ್ಮೆಯಾದರೂ ದಿನದಲ್ಲಿ ನೋಡಲಿಲ್ಲವಾದರೂ ಅವಳಿಗೆ ಏನೋ ಸಂಕಟ. ಅದು ಪ್ರೇಮಿ ತನ್ನ ಪ್ರೇಮಿಯನ್ನು ಕಾಣದೆ ಪಡುವ ಪರಿತಾಪವಲ್ಲ, ಕಾಮಕ್ಕಾಗಿ ಕಾಯುವ ಕಾಮಿನಿಯ ಹಾತೊರೆತವಲ್ಲ. ಅಮ್ಮ ಕಂದನಿಗಾಗಿ ಹಾಡುವ ಹಂಬಲವಲ್ಲ. ಏನೋ ಒಂದು ರೀತಿಯ ಬಂಧ ಅದು ಯಾವುದೆಂದು ಅವಳಿಗೂ ತಿಳಿಯಲಿಲ್ಲ
ಅತ್ತ ಇನ್ನೂ ಡಿಗ್ರೀ ಮಾಡುತ್ತಿದ್ದ ಹುಡುಗ ತನಗಿಂತ ಹಿರಿಯವಳಾದ ಅದೂ ಮದುವೆಯಾದ ಹೆಣ್ಣಿನ ಜೊತೆ ಸುತ್ತಾಡುತ್ತಿದ್ದಾನೆ ಎಂಬ ಮಾತು ಹೆತ್ತವರನ್ನು ಚಿಂತೆಗೀಡು ಮಾಡಿತು. ಮನೆಯಲ್ಲಿ ಈ ಬಗ್ಗೆ ಪ್ರಶ್ನಾವಳಿ ಸುತ್ತತೊಡಗಿತು . ಅವನು ನಕ್ಕು ಕೇಳಿದ
ನಮ್ಮಿಬ್ಬರ ನಡುವಳಿಕೆಯಲ್ಲಿ ಯಾವ ಕಪ್ಪು ಕಲೆ ಕಾಣಿಸಿತು ನಿಮಗೆ . ಹುಡುಗನ ಮನೆಯವರಿಗೆ ಉತ್ತರಿಸಲಾಗಲಿಲ್ಲ
"ನೀವು ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದೀರಾ .ಅವಳೂ ಮದುವೆಯಾದವಳು ಅವಳ ಬಾಳನ್ನು ಹಾಳು ಮಾಡಬೇಡ" ಎಂದೆಲ್ಲಾ ನುಡಿದರು
ಅವರ ಯಾವ ಮಾತಿಗೂ ಸೊಪ್ಪುಹಾಕಲಿಲ್ಲ
ಕೊನೆಗೆ ಅವಳನ್ನು ಕಾಲೇಜಿನಿಂದ ಕಿತ್ತೆಸೆದರು. ಅವಳು ಬೇರೆಡೆ ಕೆಲಸಕ್ಕೆ ಹೋಗಲಾರಂಭಿಸಿದಳು
ಆದರೂ ಅವಳ ಅವನ ಒಡನಾಟ ಮುಂದುವರೆಯುತ್ತಲೇ ಇತ್ತು
ಕಾಲೇಜಿನ ಲೈಬ್ರರಿ ಇಲ್ಲದಿದ್ದರೇನಂತೆ ಸಿಟಿ ಲೈಬ್ರರಿ ಇದೆಯಲ್ಲಾ . ಅಲ್ಲಿ ಕಾಲ ಕಳೆಯಲಾರಂಭಿಸಿದರು.
ಇತ್ತ ಗಂಡನಿಗೆ ತಲೆ ಕೆಟ್ತಿತು
ಅವನ ಒಡನಾಟ ಬಿಡಲು ಹೇಳಿದೆ . ಅವಳು ಕೇಳಲಿಲ್ಲ. ಗಂಡ ಬಿಟ್ಟು ಹೋದ ಎಂಬುದಕ್ಕಿಂತ ಇವಳೇ ಬಿಟ್ಟು ಬಂದಳು. ಇತ್ತ ಹುಡುಗನ ಮನೆಯಲ್ಲೂ ಗಲಾಟೆಯಾಯ್ತು. ಹುಡುಗ ಮನೆ ಬಿಟ್ಟು ಬಂದ
ಯಾರೋ ಹೇಳಿದರು . " ಸುಮ್ಮನೆ ಹೀಗೇಕೆ ಇಬ್ಬರೂ ಮದುವೆಯಾಗಿ ಬಿಡಿ "
ಇಬ್ಬರೂ ನಕ್ಕರು.
ಮದುವೆಯಾಗಲಿಲ್ಲ.
ಅವಳೊಂದು ಮನೆಯಲ್ಲಿ ನೆಲೆಸಿದಳು ಅವನು ಇನ್ನೊಂದು ಮನೆಯಲ್ಲಿ ನೆಲೆಸಿದನು
ಇಬ್ಬರ ನಂಟೂ ಮುಂದುವರೆಯುತ್ತಲೇ ಇದೆ ತಮ್ಮ ತಮ್ಮ ಮಾತಿನಲ್ಲಿ ಓದಿನಲ್ಲಿ . ಪುಸ್ತಕ ವಿಮರ್ಶೆಯಲ್ಲಿ , ಪರಸ್ಪರರ ಗೌರವದಲ್ಲಿ ಆತ್ಮೀಯತೆ ಹೆಚ್ಚಾಗುತ್ತಲೇ ಇದೆ
ಯಾವುದೆ ಹೆಸರಿನ ಹಂಗಿಲ್ಲದ ಸಂಬಂಧ, ಸಮಾಜದ ಕಟ್ಟು ಪಾಡುಗಳನ್ನು ಮೀರಿ ಗಂಡು ಹೆಣ್ಣಿನ ಹೊಸ ನಂಟಿಗೆ ಭಾಷ್ಯ ಬರೆಯುತ್ತಾ , ಹೀಗೂ ಇರಬಹುದೆಂಬ ನೂತನ ಸಂದೇಶದೊಂದಿಗೆ ಅವರ ಜೊತೆಯೇ ಇದೆ.

Friday, May 22, 2009

ಅವಳು -------------------------------?

ಇತ್ತೀಚಿಗೆ ಸೌದಾಮಿನಿ ಅಪಾರ್ಟ್ಮೆಂಟ್ ಲಾನ್‍ನಲ್ಲಿ ಅಪಾರ್ಟ್ಮೆಂಟ್ನ ಹಳೆಯ ನಿವಾಸಿಗಳೆಲ್ಲಾ ಗುಂಪು ಗುಂಪಾಗಿ ಗುಸುಗುಸು ಮಾತುಗಳನಾಡುತ್ತಿದ್ದರೆ ಲಾನ್ ಅಯ್ಯೋ ನನ್ನ ಸೌಂದರ್ಯವೆಲ್ಲಾ ಹಾಳಾಗಿ ಹೋಯ್ತೇ ಎಂದು ಹಲುಬುತಿತ್ತು.

ಸಂಜೆಯಾದರೆ ಅವಳದೇ ಮಾತು. ಅವಳದೇ ಧ್ಯಾನವಾಗಿತ್ತು

ಹಾಗಂತ ಅಲ್ಲಿದ್ದವರಲ್ಲ ಯಾವುದೋ ಥರ್ಡ್ ಕ್ಲಾಸ್ ಜನರಲ್ಲ.

ಒಳ್ಳೊಳ್ಳೆ ಕಂಪೆನಿಯಲ್ಲಿ ಸೀನಿಯರ್ ಹುದ್ದೆ, ಕೆಲವರು ಎಮ್ ಡಿ ಹೀಗೆ ಅನೇಕಾನೇಕ ಹೇಮಾಹೇಮಿಗಳು. ಆದರೂ ನಂ ೧೦೩ ಫ್ಲಾಟ್ ಅನ್ನು ಕೊಂಡುಕೊಂಡಿರುವ ಆ ಹೆಣ್ಣಿನ ಬಗ್ಗೆ.

ಹಿಂದಿದ್ದ ಕಾಮತ್ ತಮ್ಮ ಫ್ಲಾಟ್ ಮಾರುತ್ತಿದ್ದೆವೆಂದಾಗ ಸೌದಾಮಿನಿಯ ನಿವಾಸಿಗಳೆಲ್ಲ್ಲರಿಗೂ ಬೇಸರವಾಗಿತ್ತು. ಸ್ವತ: ಕಾಮತರವರಿಗೇ ಇಷ್ಟವಿರಲಿಲ್ಲ . ಆದರೇನು ಮಾಡುವುದು ಬಾಂಬೆಯಲ್ಲಿಯೇ ಸೆಟಲ್ ಆಗಿದ್ದ ಮಗ ಕರೆದಾಗ ಹೋಗಲೇ ಬೇಕಿತ್ತು.

ಯಾರೋ ಒಬ್ಬ ಹೆಂಗಸಿಗೆ ಮಾರುತ್ತಿದ್ದೆವೆಂದು ಹೇಳಿದ್ದರಷ್ಟೆ.. ಅವರಿಗ

ಆಕೆ ಬಂದು ಮೂರು ತಿಂಗಳಾಯ್ತು

ಅವಳು ಯಾರು ಏನು ಎಂದು ತಿಳಿದಿರಲಿಲ್ಲ. ಒಬ್ಬಳೇ ಇದ್ದಾಳೆ ಎಂಬುದು ಮಾತ್ರ ತಿಳಿದಿತ್ತು ಎಲ್ಲರಿಗೂ

ಯಾವಾಗಲೂ ಬಾಲ್ಕನಿಯಲ್ಲಿ ನಿಂತು ಮೊಬೈಲ್ ಹ್ಯಾಂಡ್ಸ್ ಫ್ರೀ ಕಿವಿಗೆ ಸಿಗಿಸಿಕೊಂಡು ನಗು ನಗುತ್ತಾ ಮಾತಾಡುತ್ತಿದ್ದಳು.

ಇನ್ನಾರೊಂದಿಗೂ ಅವಳು ಮಾತಾಡಿದ್ದೇ ಇಲ್ಲ.

ರಾತ್ರಿ ಕಾರ್ ಸ್ಟಾರ್ಟ್ ಮಾಡಿಕೊಂಡು ಒಬ್ಬಳೇ ಹೋಗುತ್ತಿದ್ದಳು ನಂತರ ಬೆಳಗ್ಗೆ ಬರುತ್ತಿದ್ದಳು . ನೋಡಲೂ ಸುಂದರವಾಗಿದ್ದಳು

ಮನುಷ್ಯನ ಜಿಹ್ವಾಚಾಪಲ್ಯಕ್ಕೆ ಅಡೆತಡೆಯುಂಟೆ

ನಾಲಿಗೆಗಳು ಬಾಯಿಗೆ ಬಂದದ್ದನ್ನು ಹೇಳಲಾರಂಭಿಸಿದವು

"ರೀ ಅವಳು ಬಾಂಬೆಯವಳಂತೆ." ೧೦೪ನೇ ಮನೆಯ ಪ್ರೇಮಶಿವರಾಂ ಹೇಳಿದ್ದೇ ತಡ

"ಹೌದಾರೀ ಈಗ ಬಾಂಬೆಯವರನ್ನ ನಂಬಬಾರದಂತೆ . ಅವರು ಟೆರರಿಸ್ಟ್ಸ್ ಆಗಿರಬಹುದು" ಚಂದ್ರಿಕಾ ಹಿರೇಮಠ್ ನುಡಿದರೆ

"ಇಲ್ಲಾರಿ ಆಕೇನಾ ನೋಡಿದ್ರೆ ಮದುವೆಯಾಗಿರೋ ಹಾಗಿದೆ. ಕೊರಳಲ್ಲಿ ತಾಳಿ ಬೇರೆ ಇದೆ ಟೆರರಿಸ್ಟ್ ಆದ್ರೆ ಹಾಗೆಲ್ಲಾ ಇರಲ್ಲ"ಶ್ವೇತ ತಿವಾರಿ ಮೊಬೈಲ್ನಲ್ಲಿ ಮೆಸ್ಸೇಜ್ ಮಾಡುತ್ತಾ ಉಲಿದರು

"ಇರ್ಬೋದು ಅವಳು ಟೆರರಿಸ್ಟ್ ಅಲ್ಲ ಆದರೆ ಬೇರಾವುದೋ ಕೆಲಸ ಮಾಡ್ತಾಳೆ"

"ಏನಿರಬಹುದು?"

ಎಲ್ಲರ ತಲೆಗೂ ಒಂದೆ ಯೋಚನೆ ಬಂದು ಅಷ್ಟರಲ್ಲಾಗಲೇ ಮಕ್ಕಳು ಕರೆದದ್ದರಿಂದ ಮನೆಯೊಳಗೆ ಓಡಿದರು.

ಇದೇ ಥರಹದ ಮಾತುಗಳು ಗಂಡಸರ ಗುಂಪಿನಲ್ಲೂ ಸಂಚರಿಸುತಿತ್ತು
ಆದರೆ ಅದೊಂದು ಭಾನುವಾರ ಸಾಯಂಕಾಲ ಮಕ್ಕಳ ಜೊತೆ ಚಿಲ್ಡ್ರನ್ ಪಾರ್ಕ್‍ನಲ್ಲಿ ನಿಂತಿದ್ದ ನಿವಾಸಿಗಳಿಗೆ ಶಾಕ್ ಕಾದಿತ್ತು.
ಪೋಲಿಸ್ ಜೀಪ್ ಬಂದು ನಿಂತಿತು . ಅದರೊಳಗಿನಿಂದ ಇನ್ಸ್‌ಪೆಕ್ಟರ್ ಒಬ್ಬ ಇಳಿದ
ವಾಚಮನ್ ಬಳಿ ೧೦೩ ನೇ ಫ್ಲ್ಲಾಟ್‌ಗೆ ಹೋಗುವುದಾಗಿ ಹೇಳಿ ರುಜು ಮಾಡಿ ಆತ ಹೊರಟ
ಎಲ್ಲರ ಕಣ್ಣೂ ಆ ಫ್ಲಾಟ್ ಮೇಲೆಯೇ
ಗುಸು ಗುಸು ನಡೆಯಿತು
"ನಾನು ಹೇಳಿಲ್ವಾ ಅವಳು ಬೇರೇನೋ ಮಾಡ್ತಾಳೆ ಅಂತ" ಶ್ವೇತಾ ತಿವಾರಿ ಎಲ್ಲರತ್ತ ನೋಡಿದರು
ಅವಳು ಅಪರಾಧಿಯಂತೆ ಹೊರಬರುವುದನ್ನು ತಮ್ಮ ಕಂಗಳಲ್ಲಿ ತುಂಬಿಕೊಳ್ಳಲು ಕಾದೇ ಕಾದರು ಆದರೂ
ಆತ ಎಷ್ಟು ಹೊತ್ತಾದರೂ ಬರಲೇ ಇಲ್ಲ.
ಕೊನೆಗೊಮ್ಮೆ ದೇಶಪಾಂಡೆಯವರ ಮಾತು ಹೊರ ಬಂತು
"ಅವನೂ ಅವಳ ಗಿರಾಕಿ ಏನೋ" ಎಲ್ಲೋ ನೋಡುತ್ತಾ ನುಡಿದರು
ಯಾವುದೋ ಸತ್ಯ ತಿಳಿದವರಂತೆ ನಿವಾಸಿಗಳ ಬಾಯಿಂದ
"ಏ--------------ನು? " ಎಂಬ ಉದ್ಗಾರ ಹೊರಟಿತು
ಕಾದಿದ್ದು ವ್ಯರ್ಥವಾಯ್ತು ಎಂಬಂತೆ ಆಕಾಶ ದಿಟ್ಟಿಸಿದರು.
"ಆಲ್ಲಾರಿ ನಮ್ಮ ಅಪಾರ್ಟ್ಮೆಂಟ್‍೬ನಲ್ಲಿ ಹೀಗೊಂದು ಕೆಲಸ ನಡಿತಾ ಇದೆ ಅಂದ್ರೆ ಅವಮಾನ ಅವಮಾನ " ಪೂಜಾರಿ ತಲೆ ಕೊಡವಿದರು.
"ಮೊದಲು ಅವಳನ್ನ ಇಲ್ಲಿಂದ ಓಡಿಸಬೇಕು. ಸಂಸಾರಸ್ತರಿರೋ ಜಾಗ ಇದು" ಪ್ರೇಮ ಶಿವರಾಂ ಏದುಸಿರು ಬಿಡುತ್ತಾ ನುಡಿದರು.
"ನಡೀರಿ ನಮ್ಮ ಅಪಾರ್ಟ್ಮೆಂಟ್ ಅಸ್ಸೋಸಿಯೇಶನ್ ನಿರ್ಧಾರ ಇದು ಅಂತ ಹೇಳಿ ವಾರ್ನ್ ಮಾಡೋಣ" ಅಸ್ಸೋಸಿಯೇಶನ್ ಅಧ್ಯಕ್ಷ ಪ್ರೇಂ ಕುಮಾರ್ ನುಡಿದು ೧೦೩ನೇ ಫ್ಲಾಟ್‍ನತ್ತ ನಡೆದರು. ಎಲ್ಲರೂ ಅವರನ್ನು ಹಿಂಬಾಲಿಸತೊಡಗಿದರು.
---------------------*******------
ತಟ ಪಟ ಬಾಗಿಲ ಬಡಿತದ ಸದ್ದು ಜೊತೆಗೆ ಸತತ ಕಾಲಿಂಗ್ ಬೆಲ್ ಸದ್ದಾದಾಗ ಮಂಚದಲ್ಲಿ ಪವಡಿಸಿದ್ದ್ದ ಆ ಜೋಡಿ ಹಕ್ಕಿಗಳೆರೆಡಕ್ಕೂ ರಸಭಂಗವಾಗಿರಬೇಕು.
ಜೋರಾಗಿ ಬಾಗಿಲು ತೆರೆದ ಸದ್ದಾಯಿತು.
ಬಾಗಿಲು ತೆರೆದವನ ಅವತಾರ ನೋಡಿ ನಿವಾಸಿಗಳೆಲ್ಲರಿಗೆ ಕೋಪ ಉಕ್ಕೇರಿ ಬಂತು
ಕೈಗೆ ಸಿಕ್ಕಿದ್ದ ಯಾವುದೋ ಟವೆಲ್ ಸುತ್ತಿ ನಿಂತಿದ್ದ
ಒಳಗೇನಾಯ್ತು ಎಂಬುದು ಅವನ ಮೊಗದಲ್ಲಾಗಿದ್ದ ಆಯಾಸ ವಿವರಿಸುತ್ತಿತ್ತು. ಅಲ್ಲಿದ್ದ ಗಂಡಸರಿಗೋ ಅವನ ಮೇಲೆ ಅಸೂಯೆಯಾಗತೊಡಗಿತು
ಅವನಿಗೂ ಹೀಗೆ ಗುಂಪು ಗುಂಪಾಗಿ ಬಂದ ಜನರನ್ನು ನೋಡಿ ಗಾಭರಿಯಾಯಿತೆನಿಸುತ್ತದೆ
ಅವರೆಲ್ಲರತ್ತ ಪ್ರಶ್ನಾರ್ಥಕವಾಗಿ ನೋಡಿದ
"ನೋಡಿ ಸಾರ್ ಇದೆಲ್ಲಾ ಇಲ್ಲಿ ಸರಿ ಬರೋಲ್ಲ. ಇದು ಮರ್ಯಾದಸ್ತರಿರೊ ಜಾಗ . ಇಂತಾ ಜನ ಇಲ್ಲಿರೋದು ಸರಿ ಅಲ್ಲ" ಪ್ರೇಂ ಕುಮಾರ್ ದನಿಯಲ್ಲಿದ್ದ ಶಕ್ತಿಯನ್ನೆಲ್ಲಾ ಬಿಟ್ಟು ಗುಡುಗಿದ
"ಯಾವ ಜನ ಏನು?" ಆತ ಕೇಳಿದ
"ಅದೇನು ಅಂತ ಬಾಯ್ಬಿಟ್ತು ಹೇಳ್ಬೇಕಾ? ಒಳಗೇನ್ರಿ ನಡೀತಿತ್ತು" ದೇಶಪಾಂಡೆ ಜೋರು ಮಾಡಿದ
ಆತನ ಮುಖದಲ್ಲಿ ಅಸಹನೆ ಕಂಡಿತು
"ನಿಮ್ಮನೇಲಿ ಏನ್ ನಡೆಯುತ್ತೋ ಅದೇ ನಡೀತಾ ಇದೆ" ತೀರಾ ಅಸಭ್ಯವಾಗಿ ಮಾತಾಡಿದ ಅನ್ನಿಸಿತು . ಹೆಂಗಸರೆಲ್ಲಾ ಛೆ ಛೆ ಎಂದರು
"ಏನ್ರಿ ಅದು ಛೆ ಛೆ ........ ಹೀಗೆ ಮತ್ತೊಬ್ಬರ ಮನೆ ಮುಂದೆ ನಿಂತು ಗಂಡ ಹೆಂಡತಿ ಏನ್ಮಾಡ್ತಾ ಇದೀರಾ ಅಂತ ಕೇಳ್ತಿರೋದು ಸಭ್ಯರ ಲಕ್ಷಣಾನ?"
ಕೊನೆಯ ಮಾತು ಕೇಳುತ್ತಿದ್ದಂತೆ ಅವಕ್ಕಾದರು ನಿವಾಸಿಗಳು
"ನೀವು ಅವರ ಗಂಡಾನಾ?" ಪೂಜಾರಿ ಪ್ರಶ್ನಿಸಿದರು
"ಹೌದು ಯಾಕೆ ಅನುಮಾನಾನ ? " ತೀಕ್ಶ್ಣವಾಗಿ ಪ್ರಶ್ನಿಸಿದ.ಮೊದಲೇ ಪೋಲಿಸು
ಪೂಜಾರಿಯ ಎದೆ ನಡುಗಿ ಹೋಯ್ತು
ಅದು ನಂಗಲ್ಲ ಇವರಿಗೆಲ್ಲಾ ಅನುಮಾನ ಇದೆಯಂತೆ ಉಳಿದವರತ್ತ ಕೈ ತೋರಿ ಹಿಂದೆ ನಡೆದುಬಿಟ್ಟ

" ಇವಳಿಗೆ ಇಲ್ಲಿ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ ಕೆಲ್ಸ . ನಾನ್ಯಾರಂತೆ ನಿಮ್ಗೆ ಗೊತ್ತಾಗಿದೆ ಅನ್ಸುತ್ತೆ
ಟ್ರಾನ್ಸಫರ್ ಮಾಡಿಸಿಕೊಂಡು ಇವತ್ತು ಇಲ್ಲಿಗೆ ಬಂದೆ ಅಲ್ಲಾರಿ ಎಂಥಾ ಕಚಡಾ ಜನಾರಿ ನೀವುಗಳು ಒಬ್ಬೊಬ್ಬರನ್ನ ಎತ್ತಾಕೊಂಡು ಒಳಗೆ ಹಾಕಿದ್ರೆ ಇಂತಾ ಕಚಡಾ ಯೋಚನೆಗಳು ಓಡೋಗೊತ್ತೆ" ಆತ ತನ್ನ ಪೋಲಿಸ್ ಭಾಷೆ ಬಳಸತೊಡಗಿದ ಕೂಡಲೆ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡತೊಡಗಿದರು.
ಅಯ್ಯೋ ಇಷ್ಟೇನಾ ಎಂದೊಬ್ಬರಾದ ಮೇಲೆ ಮತ್ತೊಬ್ಬರು ಬೇಸರಿಸಿಕೊಳ್ಳುತಾ ಮನೆಯೊಳಗೆ ನುಸುಳಲಾರಂಭಿಸಿದರು

Thursday, May 14, 2009

ಹೆಗ್ಗಣಗಳು ಹಾವುಗಳು ಕುರಿಗಳು

ಆತ ಭಾರತದ ಪ್ರಖ್ಯಾತ ಹೆಗ್ಗಣ ಇಲಿ ನಿರ್ಮೂಲನ ಕಂಪನಿಯ ಮೇಲಾಧಿಕಾರಿಯಾಗಿ ನೇಮಕಗೊಂಡ.
ಅದು ಕೇಂದ್ರ ಸರಕಾರದ ಅಧೀನದ ಕಂಪನಿ
ಅವನಿಗೋ ಎಲ್ಲಾ ಹೆಗ್ಗಣ ಇಲಿಗಳನ್ನೂ ಹೇಳ ಹೆಸರಿಲ್ಲದಂತೆ ಮಾಡಿ ತಾನು ಹೆಸರುವಾಸಿಯಾಗುವ ಮಹದಾಸೆ.
ಸರಕಾರದಿಂದ ಸುತ್ತೋಲೆ ಬಂದಿತ್ತು"ಎಲ್ಲಾ ಹೆಗ್ಗಣಗಳನ್ನೂ ಈಗಿಂದೀಗಲೆ ನಿರ್ಮೂಲನ ಮಾಡುವ ಅಧಿಕಾರ ನಿಮಗೆ ವಹಿಸಲಾಗಿದೆ"
ಸರಿ ಆತನ ದಂಡಯಾತ್ರೆ ಶುರುವಾಯ್ತುಮೊದಲು ಚಿಕ್ಕ ಪುಟ್ಟ ಕಛೇರಿಗಳಲ್ಲಿ ಕಾಣಸಿಗುತ್ತಿದ್ದ ಎಲ್ಲಾ ಇಲಿಗಳನ್ನು ಹಿಡಿದು ಹಾಕಿದ.ನಂತರ ದೊಡ್ಡ ಕಚೇರಿಗಳಲ್ಲಿ ಶಿಳ್ಳೇ ಹೊಡೆಯುತ್ತಿದ್ದ ಇಲಿಗಳನ್ನುಬಲೆಗೆ ಹಾಕಿಕೊಂಡ.
ಪೇಪರ್‌ನಲ್ಲಿ ಈತನ ಬಗ್ಗೆ ಬಹು ಮೆಚ್ಚುಗೆಯ ಮಾತುಗಳು ಕಾಣಲಾರಂಭಿಸಿದವು. ಎಲ್ಲೆಲ್ಲೂ ಅವನದೇ ಮಾತು.ಬಹಳ ಬೇಗ ಪ್ರಸಿದ್ದಿಯಾದ ಆತ ಮತ್ತಷ್ಟು ಹುರುಪುಗೊಂಡ.
ಹೆಗ್ಗಣಗಳ ಬೇಟೆಗೆ ಸಂಚು ಹಾಕಲಾರಂಭಿಸಿದ.ಸಾಧ್ಯವಿದ್ದ ಕಡೆ ಎಲ್ಲಾ ಅಡಗು ಕ್ಯಾಮೆರಾ ಅಳವಡಿಸಿದ.ಒಮ್ಮೆ ಒಂದು ಕಛೇರಿಯಲ್ಲಿ ಹೆಗ್ಗಣವೊಂದನ್ನು ಸ್ವತ: ಅಲ್ಲಿನ ಮೇಲಾಧಿಕಾರಿಯೊಬ್ಬರೇ ತಮ್ಮ ಬ್ಯಾಗಿನಿಂದ ತೆಗೆದು ಟೇಬಲ್ ಕೆಳಗೆ ಹಾಕುತ್ತಿದ್ದುದು ಕಂಡು ದಂಗಾದ.
ಮೊದಲು ಆ ಹೆಗ್ಗಣವನ್ನು ಹಿಡಿಯಲು ಯಾತ್ರೆ ಶುರು ಮಾಡಿದ ಜೊತೆಗೆ ಮಾಧ್ಯಮದವರೆಲ್ಲಾ . ಮೇಲಾಧಿಕಾರಿ ಹೆಗ್ಗಣದ ಸಮೇತ ಸಿಕ್ಕಿಹಾಕಿಕೊಂಡ.ಹೀಗೆ ಹಲವರು ಹೆಗ್ಗಣಗಳ ಸಂಸಾರ ಬೆಳೆಯಲೆಂದೇ ತಮ್ಮ ಕಛೇರಿಯ ಎಲ್ಲಾ ಸಮಯವನ್ನು ಬಳಸಿಕೊಳ್ಳುತ್ತಿದ್ದುದ್ದನ್ನು ಗಮನಿಸಿದ
ನಂತರ ಒಂದೊಂದು ಕಛೇರಿಯನ್ನೂ ಜಾಲಾಡಿ ಹೆಗ್ಗಣಗಳನ್ನೂ ಅವುಗಳ ಜೊತೆ ನೌಕರರನ್ನೂ ಪತ್ತೆ ಹಚ್ಚಲಾರಂಭಿಸಿದ. ಇಲಿಗಳು ಹೆಗ್ಗಣಗಳು ಇವನಿಗೆ ಹೆದರತೊಡಗಿದವು ಬಿಲದಿಂದ ಹೊರಗೆ ಬರಲಿಲ್ಲ. ಇಲಿ ಹೆಗ್ಗಣಗಳಿಂದಲೇ ಬದುಕುತ್ತಿದ್ದ ಹಾವುಗಳು ಸೊರಗತೊಡಗಿದವು
ಇಂತಹ ಸಮಯದಲ್ಲೇ ಮಂತ್ರಿಯೊಬ್ಬರಿಂದ ಬುಲಾವ್ ಬಂತು.
"ಬರೀ ಇಲಿಗಳನ್ನು ಹಿಡಿಯಿರಿ ಸಾಕು ..ಹೆಗ್ಗಣಗಳ ತಂಟೆ ನಿಮಗೇಕೆ . "ಎಂದರು
"ತಾನು ಬಂದಿರುವುದೇ ಹೆಗ್ಗಣಗಳ ನಿರ್ಮೂಲನೆಗಾಗಿ " ಎಂದು ಸಮರ್ಥಿಸಿಕೊಂಡ"ಹೆಗ್ಗಣಗಳ ನಿರ್ಮೂಲನೆ ಸಾಧ್ಯಾನೆ ಇಲ್ಲಾರಿ. ಇಲಿಗಳಿರೋವರೆಗೆ ಹೆಗ್ಗಣಗಳಿರುತ್ತವೆ. ಹೆಗ್ಗಣಗಳಿದ್ದರೆ ತಾನೆ ಹಾವುಗಳಿಗೆ ಹಬ್ಬ?" ಮಂತ್ರಿ ತನ್ನ ಕನ್ನಡಕದಿಂದ ಕಣ್ಣರಳಿಸಿದ
"ಸಾರ್ ಆ ಜವಾಬ್ದಾರಿ ನಾನು ತಗೋತೀನಿ" ಆತ್ಮ ವಿಶ್ವಾಸದಿಂದ ನುಡಿದ"ಇಲ್ಲವಯ್ಯ ಆಗೊಲ್ಲ ನಿಂಗೆ ಜವಾಬುದಾರಿ ಕೊಡೋಕೆ ಇಲ್ಲಿ ಯಾರೂ ಕಾದು ನಿಂತಿಲ್ಲ . ಬೇಕಿದ್ದರೆ ನೀವು ಹೆಗ್ಗಣಗಳ ರಾಜನೆನಿಸಿಕೊಳ್ಳಿ. ಈಗಾಗಲೇ ಇಲಿಗಳನ್ನು ಹಿಡಿಗು ಬಹಳಪ್ರಸಿದ್ದರಾಗಿದ್ದೀರಾ" ಎಂದು ಅವನೆಡೆ ಸೂಟ್‌ಕೇಸ್ ಒಂದನ್ನು ಎಸೆದರು.
ಅದಕ್ಕಾಗಿಯೇ ಕಾದುನಿಂತಿದ್ದವನಂತೆ ಅವನು ಸೂಟ್‌ಕೇಸ್ ತೆಗೆದುಕೊಂಡ. ಮಂತ್ರಿಯ ಮನೆಯಲ್ಲಿ ತುಂಬಾ ಹೆಗ್ಗಣಗಳು ಓಡಾಡುತ್ತಿದ್ದವು ಜೊತೆಗೆ ಇಲಿಗಳು ಅವುಗಳನ್ನೆಲ್ಲಾನುಂಗುವ ಹಾವಾಗಿ ಮಂತ್ರಿ ಕಂಡ."
"ನಾನು ಯಾವಾಗ ಹೆಗ್ಗಣಗಳ ರಾಜ ಆಗೋದು ಸಾರ್?" ಸೂಟಕೇಸ್ ತೆಗೆಯುತ್ತಾ ಕೇಳಿದ
"ಈಗಲೇ ......... ಮುಂದಿನ ಹೆಗ್ಗಣಗಳ ಎಲೆಕ್ಷನ್‌ನಲ್ಲಿ ನೀವೂ ನಿಲ್ಲಿ. ಟಿಕೆಟ್ ನಮ್ಮ ಹಾವುಗಳ ಪಾರ್ಟಿಯಿಂದ ಕೊಡಿಸ್ತೇನೆ"
ವಾರವೊಂದು ಕಳೆದಿತ್ತು
ಆ ಹೆಗ್ಗಣ ನಿರ್ಮೂಲನಾಧಿಕಾರಿ ಹೆಗ್ಗಣಗಳ ಜೊತೆ ಮೆರವಣಿಗೆ ಹೊರಟಿದ್ದ ವೋಟು ಕೇಳಲು. ಎಲ್ಲೆಲ್ಲೂ ಹೆಗ್ಗಣಗಳು ಹಾವುಗಳು ಇಲಿಗಳು
ಇಕ್ಕೆಲಗಳಲ್ಲಿ ಆ ಹೆಗ್ಗಣಗಳ ಜಾತ್ರೆಯನ್ನು ಕುರಿಗಳು ಅಚ್ಚರಿಯ ಕಣ್ಣಿಂದ ನೋಡುತ್ತಿದ್ದವು